ಇಸ್ಲಾಮೀ ಪೂರ್ವ ಅರೇಬಿಯಾ
This article is actively undergoing a major edit for a short while. To help avoid edit conflicts, please do not edit this page while this message is displayed. This page was last revised at ೧೦:೩೩, ೭ ಆಗಸ್ಟ್ ೨೦೨೩ (UTC) (43256792 ಸೆಕೆಂಡು ಗಳ ಹಿಂದೆ). Please remove this template if this page hasn't been edited in several hours. If you are the editor who added this template, please be sure to remove it or replace it with {{Under construction}} between editing sessions. |
ಇಸ್ಲಾಮಿಕ್ ಪೂರ್ವ ಅರೇಬಿಯಾ (ಅರೇಬಿಕ್: شبه الجزيرة العربية قبل الإسلام) — ಕ್ರಿ.ಶ. 610ಕ್ಕೆ ಮೊದಲು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಅಸ್ತಿತ್ವದಲ್ಲಿದ್ದ ಅರಬ್ ನಾಗರಿಕತೆ.
ಅರಬ್ ಇತಿಹಾಸ
[ಬದಲಾಯಿಸಿ]ಅರೇಬಿಕ್ ಭಾಷೆಯಲ್ಲಿ "ಅರಬ್" (ಅರೇಬಿಕ್: العرب) ಎಂಬ ಪದವು ಮರುಭೂಮಿ ಹಾಗೂ ನೀರು ಮತ್ತು ಮರಗಳಿಲ್ಲದ ಬರಡು ಭೂಮಿಯನ್ನು ಸೂಚಿಸುತ್ತದೆಯೇ ವಿನಾ ಯಾವುದೇ ರಾಷ್ಟ್ರೀಯತೆಯನ್ನು ಸೂಚಿಸುವುದಿಲ್ಲ.[೧] ಇತಿಹಾಸದ ಆರಂಭದಿಂದಲೇ ಅರೇಬಿಯನ್ ಪರ್ಯಾಯ ದ್ವೀಪ ಮತ್ತು ಅದರ ನಿವಾಸಿಗಳನ್ನು "ಅರಬ್" ಎಂದು ಕರೆಯಲಾಗಿದೆ ಎಂದು ಹೇಳಲಾಗುತ್ತದೆ.[೧] ಆದರೆ ಅರೇಬಿಯಾ ಮತ್ತು ಅರೇಬಿಯನ್ ಪರ್ಯಾಯ ದ್ವೀಪ ಎಂಬ ಹೆಸರು ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲೇ ಆ ದ್ವೀಪದಲ್ಲಿ ಜನರು ವಾಸಿಸುತ್ತಿದ್ದರು ಎನ್ನಲಾಗುತ್ತದೆ.[೨]
ಭೌಗೋಳಿಕ ವಿಂಗಡಣೆ
[ಬದಲಾಯಿಸಿ]ಅರಬ್ ಜನರನ್ನು ಭೌಗೋಳಿಕವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
- ಉತ್ತರ ಅರಬ್ಬರು (ಅದ್ನಾನಿಗಳು)
- ದಕ್ಷಿಣ ಅರಬ್ಬರು (ಕಹ್ತಾನಿಗಳು)
ಉತ್ತರ ಅರಬ್ಬರು ಹೆಚ್ಚಾಗಿ ಅಲೆಮಾರಿಗಳಾಗಿದ್ದು ಹಿಜಾಝ್ ಮತ್ತು ನಜ್ದ್‌ನಲ್ಲಿ, "ರೋಮದ ಮನೆಗಳಲ್ಲಿ" ವಾಸವಾಗಿದ್ದರು. ದಕ್ಷಿಣ ಅರಬ್ಬರು ಯೆಮನ್, ಹದ್ರಮೌತ್ ಮತ್ತು ಆಸುಪಾಸುಗಳಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿ ವಾಸವಾಗಿದ್ದರು. ಉತ್ತರ ಅರಬ್ಬರು ಕುರ್‌ಆನ್‌ನ ಶುದ್ಧ ಅರೇಬಿಕ್ ಭಾಷೆಯನ್ನು ಮಾತನಾಡುತ್ತಿದ್ದರೆ, ದಕ್ಷಿಣ ಅರಬ್ಬರು ಸ್ವಲ್ಪ ಬದಲಾವಣೆಯಿರುವ ತಮ್ಮದೇ ಆದ ಅರೇಬಿಕ್ ಭಾಷೆ ಮಾತನಾಡುತ್ತಿದ್ದರು. ದಕ್ಷಿಣ ಅರಬ್ಬರು ಪ್ರಾಬಲ್ಯವನ್ನು ಪಡೆಯುವಲ್ಲಿ ಮತ್ತು ನಾಗರಿಕತೆ ಸ್ಥಾಪಿಸುವಲ್ಲಿ ಮೊದಲಿಗರಾಗಿದ್ದರೆ, ಉತ್ತರ ಅರಬ್ಬರು ಇಸ್ಲಾಂ ಧರ್ಮದ ಉದಯದ ತನಕ ಯಾವುದೇ ಅಂತರಾಷ್ಟ್ರೀಯ ವ್ಯವಹಾರಗಳಿಗೆ ಕಾಲಿಟ್ಟಿರಲಿಲ್ಲ.[೩]
ಅನುವಂಶಿಕ ವಿಂಗಡಣೆ
[ಬದಲಾಯಿಸಿ]ಅರಬ್ ಜನರನ್ನು ಅವರ ವಂಶದ ಆಧಾರದಲ್ಲಿ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ:[೩]
- ನಾಶವಾದ ಅರಬ್ಬರು
- ಬದುಕುಳಿದ ಅರಬ್ಬರು
1. ನಾಶವಾದ ಅರಬ್ಬರು (ಅರೇಬಿಕ್ العرب البائدة)
[ಬದಲಾಯಿಸಿ]ಇವರ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದ್, ಸಮೂದ್, ತಸ್ಮ್, ಜದೀಸ್, ಉಮೈಮ್, ಜಾಸಿಂ, ಅಬೀಲ್, ಅಬ್ದ್ ದಖ್ಮ್, ಒಂದನೇ ಜುರ್ಹುಂ, ಇಮ್ಲಾಕ್, ಮುಂತಾದ ಬುಡಕಟ್ಟುಗಳು ಈ ವಿಭಾಗದಲ್ಲಿ ಒಳಪಡುತ್ತದೆ.[೩][೪] ಇವರು ಅತ್ಯಂತ ಪ್ರಾಚೀನ ಅರಬ್ಬರಾಗಿದ್ದು ಸಂಪೂರ್ಣ ನಾಶವಾಗಿ ಹೋಗಿದ್ದಾರೆ. ಇವರ ಕುರುಹುಗಳು ಮತ್ತು ಸ್ಮರಣೆಗಳ ಹೊರತು ಬೇರೇನೂ ಬಾಕಿಯಾಗಿಲ್ಲ.
- ಆದ್ ಬುಡಕಟ್ಟಿನವರು ಆದ್ ಬಿನ್ ಔಸ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ಸಮೂದ್ ಬುಡಕಟ್ಟಿನವರು ಸಮೂದ್ ಬಿನ್ ಗಾಸಿರ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ತಸ್ಮ್ ಬುಡಕಟ್ಟಿನವರು ತಸ್ಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ಜದೀಸ್ ಬುಡಕಟ್ಟಿನವರು ಜದೀಸ್ ಬಿನ್ ಗಾಸಿರ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ಉಮೈಮ್ ಬುಡಕಟ್ಟಿನವರು ಉಮೈಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
2. ಬದುಕುಳಿದ ಅರಬ್ಬರು (ಅರೇಬಿಕ್ العرب الباقية)
[ಬದಲಾಯಿಸಿ]ಬದುಕುಳಿದ ಅರಬ್ಬರನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ:
- ಶುದ್ಧ ಅರಬ್ಬರು
- ಅರಬ್ಬೀಕರಣಗೊಂಡ ಅರಬ್ಬರು
1. ಶುದ್ಧ ಅರಬ್ಬರು (ಅರೇಬಿಕ್ العرب العاربة)
[ಬದಲಾಯಿಸಿ]ಇವರು ಕಹ್ತಾನ್ (ಬೈಬಲ್ ಹಳೆಯ ಒಡಂಬಡಿಕೆಯ ಪ್ರಕಾರ Joktan) ರ ಮಗ ಯಶ್‌ಜುಜ್‌ರ ಮಗ ಯಅ್‌ರುಬ್‌ನ ಸಂತತಿಗಳು.[೫] ಇವರನ್ನು ಕಹ್ತಾನಿಗಳೆಂದು ಕರೆಯಲಾಗುತ್ತದೆ.[೬] ಇವರು ಮುಖ್ಯವಾಗಿ ಯಮನ್‌ನಲ್ಲಿ ಅನೇಕ ಬುಡಕಟ್ಟುಗಳಾಗಿ ವಾಸವಾಗಿದ್ದರು. ಇವರಲ್ಲಿ ಎರಡು ಬುಡಕಟ್ಟುಗಳು ಪ್ರಖ್ಯಾತವಾಗಿದ್ದವು:
1. ಹಿಮ್ಯರ್ ಬುಡಕಟ್ಟು: ಝೈದುಲ್ ಜುಮ್ಹೂರ್, ಕುದಾಅ ಮತ್ತು ಸಕಾಸಿಕ್ ಇವರಲ್ಲಿದ್ದ ಮುಖ್ಯ ಗೋತ್ರಗಳಾಗಿದ್ದವು.
2. ಕಹ್ಲಾನ್ ಬುಡಕಟ್ಟು: ಹಮ್ದಾನ್, ಅನ್ಮಾರ್, ತಯ್, ಮುದ್‌ಹಿಜ್, ಕಿಂದ, ಲಖ್ಮ್, ಜುದಾಂ, ಅಝ್ದ್, ಔಸ್, ಖಝ್ರಜ್, ಮತ್ತು ಸಿರಿಯಾದ ದೊರೆಗಳಾದ ಜಫ್ನ ಸಂತತಿಗಳು ಇವರಲ್ಲಿ ಸೇರಿದ ಮುಖ್ಯ ಗೋತ್ರಗಳಾಗಿದ್ದವು.
ರೋಮನ್ನರು ಈಜಿಪ್ಟ್ ಮತ್ತು ಸಿರಿಯಾವನ್ನು ವಶಪಡಿಸಿದ ನಂತರ ಯಮನ್ ವ್ಯಾಪಾರ ಮಾರ್ಗಗಳು ತಡೆಯಲ್ಪಟ್ಟು ಯಮನ್‌ನಲ್ಲಿ ವ್ಯಾಪಾರ ಕಳೆಗುಂದಿದಾಗ, ಕಹ್ಲಾನ್ ಬುಡಕಟ್ಟಿನ ಗೋತ್ರಗಳು ಅರೇಬಿಯನ್ ಪರ್ಯಾಯ ದ್ವೀಪದ ವಿಭಿನ್ನ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಬಂಧಿತರಾದರು. ಇದು ಸಂಭವಿಸಿದ್ದು ಮಅರಿಬ್ ಅಣೆಕಟ್ಟು ಒಡೆದು ಯಮನ್‌ನಲ್ಲಿ ಪ್ರವಾಹವುಂಟಾಗುವುದಕ್ಕೆ ಮೊದಲು.
ಕಹ್ಲಾನ್ ಮತ್ತು ಹಿಮ್ಯರ್ ಬುಡಕಟ್ಟುಗಳ ನಡುವೆ ಜರುಗಿದ ಸ್ಪರ್ಧೆಗಳ ಕಾರಣದಿಂದಲೂ ಕಹ್ಲಾನ್ ಬುಡಕಟ್ಟು ಯಮನ್ ಬಿಟ್ಟು ಹೋಗಬೇಕಾಗಿ ಬಂತು ಎಂದು ಹೇಳಲಾಗುತ್ತದೆ. ಹಿಮ್ಯರ್ ಬುಡಕಟ್ಟು ಯಮನ್‌ನಲ್ಲಿ ಭದ್ರವಾಗಿ ನೆಲೆಯೂರಿತು.
ವಲಸೆ ಹೋದ ಕಹ್ಲಾನ್ ಗೋತ್ರಗಳನ್ನು ಇತಿಹಾಸಕಾರರು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ:
1. ಅಝ್ದ್ (ಅರೇಬಿಕ್ الأزد)
[ಬದಲಾಯಿಸಿ]ಇವರು ಇಮ್ರಾನ್ ಬಿನ್ ಅಮ್ರ್ ಮುಝೀಕ್‌ಬಾ ರ ಮುಖಂಡತ್ವದಲ್ಲಿ ಯಮನ್‌ನಲ್ಲಿ ಅಲೆದಾಡಿ ನಂತರ ಅಲ್ಲಿಂದ ಉತ್ತರ ದಿಕ್ಕಿಗೆ ವಲಸೆ ಹೋದರು. ಇವರ ವಲಸೆಯ ವಿವರಣೆಯನ್ನು ಹೀಗೆ ಸಂಕ್ಷಿಪ್ತಗೊಳಿಸಬಹುದು:
- ಸಅ್‌ಲಬ ಬಿನ್ ಅಮ್ರ್ ಮತ್ತು ಅವರ ಮಕ್ಕಳು ಅಝ್ದ್ ಗೋತ್ರವನ್ನು ತೊರೆದು ಹಿಜಾಝ್‌ಗೆ ಹೋಗಿ ಸಅ್‌ಲಬಿಯ್ಯ ಮತ್ತು ದೂಕಾರ್ ಪ್ರದೇಶದ ನಡುವೆ ನೆಲೆಸಿದರು. ಅಲ್ಲಿ ಅವರಿಗೆ ಪ್ರಾಬಲ್ಯ ದೊರೆತ ನಂತರ ಯಸ್ರಿಬ್‌ಗೆ (ಮದೀನ) ಹೋಗಿ ನೆಲೆಸಿದರು. ಮದೀನದ ಔಸ್ ಮತ್ತು ಖಝ್ರಜ್ ಗೋತ್ರಗಳು ಸಅ್‌ಲಬ್‌ರ ಮಗ ಹಾರಿಸರ ಇಬ್ಬರು ಮಕ್ಕಳ ಸಂತತಿಗಳು.
- ಹಾರಿಸ ಬಿನ್ ಅಮ್ರ್ (ಇವರನ್ನು ಖುಝಾಅ ಎಂದು ಕೂಡ ಕರೆಯಲಾಗುತ್ತದೆ) ತಮ್ಮ ಮಕ್ಕಳೊಡನೆ ಹಿಜಾಝ್‌ನಲ್ಲಿ ಅಲೆದಾಡಿ ಮರ್‍ರುಝ್ಝಹ್ರಾನ್ ಎಂಬ ಪ್ರದೇಶದಲ್ಲಿ ನೆಲೆಸಿದರು. ನಂತರ ಅವರು ಮಕ್ಕಾ ನಗರವನ್ನು ವಶಪಡಿಸಿ ಅಲ್ಲಿಂದ ಜುರ್ಹುಂ ಗೋತ್ರದವರನ್ನು ಓಡಿಸಿ ಅಲ್ಲಿ ನೆಲೆಸಿದರು.
- ಇಮ್ರಾನ್ ಬಿನ್ ಅಮ್ರ್ ತಮ್ಮ ಜನರೊಡನೆ ಒಮಾನ್‌ಗೆ ಹೋಗಿ ನೆಲೆಸಿದರು.
- ಜಫ್ನ ಬಿನ್ ಅಮ್ರ್ ತಮ್ಮ ಮಕ್ಕಳೊಡನೆ ಸಿರಿಯಾಗೆ ಹೋಗಿ ನೆಲೆಸಿದರು. ಇವರು ಗಸ್ಸಾನ್ ಸಾಮ್ರಾಜ್ಯವನ್ನು ಸ್ಥಾಪಿಸಿದರು.
2. ಲಖ್ಮ್ ಮತ್ತು ಜುದಾಂ (ಅರೇಬಿಕ್ لخم وجذام)
[ಬದಲಾಯಿಸಿ]- ಹೀರದ ಮನಾದಿರ ದೊರೆಗಳ ಪಿತಾಮಹರಾದ ನಸ್ರ್ ಬಿನ್ ರಬೀಅ ಇವರಲ್ಲಿ ಸೇರುತ್ತಾರೆ.
3. ಬನೂ ತಯ್ (ಅರೇಬಿಕ್ بنو طيء)
[ಬದಲಾಯಿಸಿ]- ಇವರು ಹಿಜಾಝ್‌ಗೆ ಹೋಗಿ ಅಜಾ ಮತ್ತು ಸಲ್ಮಾ ಪರ್ವತಗಳ ನಡುವೆ ನೆಲೆಸಿದರು. ಈ ಎರಡು ಪರ್ವತಗಳು ನಂತರ ತಯ್ ಪರ್ವತಗಳೆಂದು ಹೆಸರುವಾಸಿಯಾಯಿತು.
4. ಕಿಂದ (ಅರೇಬಿಕ್ كندة)
[ಬದಲಾಯಿಸಿ]- ಇವರು ಬಹ್ರೈನ್‌ಗೆ ಹೋಗಿ ನೆಲೆಸಿದರು. ಆದರೆ ಇವರನ್ನು ಅಲ್ಲಿಂದ ಹದ್ರಮೌತ್ ಮತ್ತು ನಜ್ದ್‌ಗೆ ಗಡೀಪಾರು ಮಾಡಲಾಯಿತು. ಅಲ್ಲಿ ಅವರು ಪ್ರಬಲ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರೂ ಅದು ಹೆಚ್ಚು ಕಾಲ ನೆಲೆನಿಲ್ಲಲಿಲ್ಲ. ಕಾಲಕ್ರಮೇಣ ಈ ಗೋತ್ರವು ಇತಿಹಾಸದಿಂದ ಮರೆಯಾಯಿತು.
ಹಿಮ್ಯರ್ ಬುಡಕಟ್ಟಿನ ಕುದಾಅ ಗೋತ್ರದವರು ಯಮನ್ ಬಿಟ್ಟು ಇರಾಕಿನ ಸರಹದ್ದುಗಳಲ್ಲಿ ನೆಲೆಸಿದರು.
2. ಅರಬ್ಬೀಕರಣಗೊಂಡ ಅರಬ್ಬರು (ಅರೇಬಿಕ್ العرب المستعربة)
[ಬದಲಾಯಿಸಿ]ಹಿಜಾಝಿಗಳು, ನಜ್ದಿಗಳು, ನಬತಿಗಳು ಮುಂತಾದವರು ಈ ವಿಭಾಗದಲ್ಲಿ ಒಳಪಡುತ್ತಾರೆ. ಇವರು ಅಬ್ರಹಾಂರ ಮಗ ಇಷ್ಮಾಯೇಲ್‌ರ ವಂಶದಲ್ಲಿ ಸೇರಿದ ಅದ್ನಾನ್ ರ ಸಂತತಿಗಳು.[೫] ಇವರನ್ನು ಅದ್ನಾನಿಗಳೆಂದು ಕರೆಯಲಾಗುತ್ತದೆ.[೬]
ಭೌಗೋಳಿಕವಾಗಿ ಕಹ್ತಾನಿಗಳು ದಕ್ಷಿಣ ಅರಬ್ಬರಾಗಿದ್ದರೆ, ಅದ್ನಾನಿಗಳು ಉತ್ತರ ಅರಬ್ಬರಾಗಿದ್ದರು.[೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Hitti, Philip K. (1970). History of the Arabs: From the Earliest Times to the Present (10th ed.). MacMillan Publishers. p. 41.
- ↑ Mackintosh-Smith, Tim (2019). Arabs: A 3,000 Year History of Peoples, Tribes and Empires. Yale University Press. p. 54. ISBN 9780300180282.
- ↑ ೩.೦ ೩.೧ ೩.೨ Philip K Hitti, History of the Arabs: From the Earliest Times to the Present, 10th Edition (1970), MacMillan Publishers, p. 30
- ↑ ಡಾ. ಜವಾದ್ ಅಲಿ, ಇಸ್ಲಾಮಿಕ್ ಪೂರ್ವ ಅರಬ್ ಇತಿಹಾಸ (ಅರೇಬಿಕ್), 1/295
- ↑ ೫.೦ ೫.೧ ೫.೨ Philip K Hitti, History of the Arabs: From the Earliest Times to the Present, 10th Edition (1970), MacMillan Publishers, p. 32
- ↑ ೬.೦ ೬.೧ Safi-ur-Rahman Mubarakpuri (1996). The Sealed Nectar. Darussalam Publications. p. 16