ವಿಷಯಕ್ಕೆ ಹೋಗು

ಅರೆಭಾಷೆಯ ಕೂಡಾವಳಿ ಸಂಪ್ರದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿರುವ ಅರೆಭಾಷೆ ಗೌಡರು ವಿವಾಹ ಪದ್ಧತಿಯಲ್ಲಿ ಕೂಡಾವಳಿ ಸಂಪ್ರದಾಯವನ್ನು ಅನುಸರಿಸುತ್ತಾರೆ. ಕೂಡಾವಳಿ ಎಂದರೆ ಪುನರ್ ವಿವಾಹ ಅಥವಾ ವಿಧವಾ ವಿವಾಹ ಎಂದು ಹೇಳುವ ಕ್ರಮಕ್ಕಿಂತಲೂ ಭಿನ್ನವಾದ ಸಂಪ್ರದಾಯ. ಗಂಡ ಸತ್ತರೆ ಹೆಣ್ಣು ಅಥವಾ ಹೆಂಡತಿ ಸತ್ತರೆ ಗಂಡ ಏಕಾಂಗಿಯಾಗುತ್ತಾರೆ. ಅಂತಹ ಸಂದರ್ಭಗಳು ಗೌಡರ ಕುಟುಂಬದೊಳಗೆ ಎರಡೂ ಕಡೆಯಲ್ಲೂ ನಡೆದಿದ್ದರೆ ಅವರಿಗೆ ಎರಡನೇ ಮದುವೆ ಕ್ರಮ ಇಲ್ಲಿನ ಒಕ್ಕಲಿಗ ಗೌಡರಲ್ಲಿದೆ. ಇದನ್ನು ಕೂಡಾವಳಿ ಮದುವೆಯೆಂದು ಕರೆಯುತ್ತಾರೆ.[]

ಮದುವೆಯ ವಿಧಗಳು

[ಬದಲಾಯಿಸಿ]
  1. ಪುನರ್ ಮದುವೆ : ಯೌವನಾವಸ್ಥೆಯಲ್ಲಿ ಗಂಡು ಹೆಂಡತಿಯನ್ನು ಕಳೆದುಕೊಂಡಿದ್ದರೆ, ಪತ್ನಿ ವಿಯೋಗವನ್ನು ಬಗೆಹರಿಸಲು ಅವಿವಾಹಿತ ಹೆಣ್ಣಿನೊಂದಿಗೆ ಮದುವೆ ಏರ್ಪಡಿಸುತ್ತಾರೆ. ಹಾಗೆ ಆಗುವ ವಿವಾಹಕ್ಕೆ ಪುನರ್ ವಿವಾಹವೆಂದು ಹೆಸರು. ಹೆಣ್ಣಿಗೆ ಇದು ಮೊದಲ ಧಾರೆಯ ವಿವಾಹವಾದ ಕಾರಣ ಇದನ್ನು ವಿವಾಹವೆಂದೇ ಪರಿಗಣಿಸುತ್ತಾರೆ. ಹೆಣ್ಣು ಯೌವನಾವಸ್ಥೆಯಲ್ಲಿ ಗಂಡನನ್ನು ಕಳೆದುಕೊಂಡು ಅವಿವಾಹಿತ ಗಂಡಿನೊಂದಿಗೆ ಎರಡನೆಯ ಮದುವೆಯನ್ನು ಒಪ್ಪುವುದಿಲ್ಲ. ಕಾರಣವೆಂದರೆ ಇಂದಿಗೂ ಹೆಣ್ಣಿಗೆ ಎರಡನೆಯ ಧಾರೆಯೆಂಬುದು ಇಲ್ಲ ಎಂದು ಸಂಪ್ರದಾಯಸ್ಥರು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ ಗಂಡು ಅಥವಾ ಹೆಣ್ಣಿಗೆ ಧಾರಾ ವಿವಾಹವಾಗದೆ ಮೋಕ್ಷವಿಲ್ಲವೆಂದು ಸಂಪ್ರದಾಯ ಒಪ್ಪಿದೆ.
  2. ಕೂಡಾವಳಿ ಮದುವೆ : ಪತಿಯನ್ನು ಕಳೆದುಕೊಂಡು ವಿಧವೆಯಾದ ಹೆಣ್ಣನ್ನು ಅವಿವಾಹಿತ ಗಂಡು ಮದುವೆಯಾದರೆ ಅದು ಕೂಡಾವಳಿ ಮದುವೆಯಾಗುತ್ತದೆ. ಕೂಡಾವಳಿ ಮದುವೆಯಲ್ಲಿ ಯಾವುದೇ ಸಾಂಪ್ರದಾಯಿಕ ಧಾರಾಕಾರ್ಯ ಕ್ರಮವಿಲ್ಲ.
  3. ಧಾರೆಯ ಮದುವೆ : ಧಾರೆಯು ಹೆಣ್ಣಿನ ಜೀವನದಲ್ಲಿ ಒಂದು ಬಾರಿ ಮಾತ್ರ. ಗಂಡು ಒಂದಕ್ಕಿಂತ ಹೆಚ್ಚು ಮದುವೆಯಾದಾಗಲೂ ಧಾರೆ ಏರ್ಪಡುತ್ತದೆ. ಹಾಗಾಗಿ ಮದುವೆ ಪದ್ಧತಿಯಲ್ಲಿ ಧಾರೆಯೆಂಬ ಸಂಪ್ರದಾಯದಲ್ಲಿ ಬರುವ ಶ್ರೇಷ್ಠತೆಯನ್ನು, ಪಾವಿತ್ರ್ಯವನ್ನು ಹೆಣ್ಣು ಕಾಪಾಡಿಕೊಂಡು ಬರುತ್ತಾಳೆ. ಇದೇ ಅರ್ಥದಲ್ಲಿ ಹೆಣ್ಣಿಗೆ ಒಂದೇ ಧಾರೆಯೆಂಬ ಕ್ರಮ ರೂಢಿಗೆ ಬಂದಿರುವುದು. ಹಾಗಾಗಿ ಒಮ್ಮೆ ಧಾರೆಯಾದ ಹೆಣ್ಣನ್ನು ಬೇರೆ ಯಾರೇ ಸಂಗಾತಿಯಾಗಿ ಬಯಸಿದರೂ ಆಕೆ ಕೂಡಾವಳಿ ಸಂಬಂಧಿಯಾಗಿರುತ್ತಾಳೆ. ವಿಧುರ ಅಥವಾ ವಿಧವೆ ತನ್ನ ಜೀವನದ ಸುಗಮತೆಗಾಗಿ ಕೂಡಾವಳಿ ಪದ್ಧತಿಯ ಮೂಲಕ ಬಾಳ ಸಂಗಾತಿಳಾಗಿ ಆರಿಸಿಕೊಳ್ಳುವುದು ಇದೆ ಎಂಬುದನ್ನು ತಿಳಿಯಬೇಕಾಗಿದೆ.

ಕೂಡಾವಳಿ ಮದುವೆಯ ಕ್ರಮ

[ಬದಲಾಯಿಸಿ]
  1. ಸೇಸೆ ಕ್ರಮ : ಕೂಡಾವಳಿ ಮದುವೆಯಲ್ಲಿ ಬಾಳಸಂಗಾತಿಯಾಗುವವರನ್ನು ತಲೆಗೆ ಅಕ್ಕಿ ಸೇಸೆ ಹಾಕಿ ಹಾರೈಸುವುದಿಲ್ಲ.
  2. ಬಣ್ಣಬಂಗಾರ : ವಧುವಿಗೆ ವರನ ಕಡೆಯವರು ಬಣ್ಣ ಬಂಗಾರ ಕೊಡುವುದು ಅರೆಭಾಷೆ ಸಂಸ್ಕೃತಿಯಲ್ಲಿ ಪ್ರಮುಖ ಭಾಗ. ಆದರೆ ಕೂಡಾವಳಿ ಮದುವೆಯಲ್ಲಿ ಗಂಡು ಹೆಣ್ಣಿಗೆ ಬಣ್ಣಬಂಗಾರ ಕೊಡುವ ಕ್ರಮವಿಲ್ಲ. ಕಾಲುಂಗುರ, ಸೀರೆ, ರವಿಕೆ ಮಾತ್ರ ಕೊಡುವುದು ರೂಢಿ.
  3. ನೆಲ್ಲಕ್ಕಿಗೆ ಬರುವುದು : ಹೆಣ್ಣು ಗಂಡು ಕಡೆಯವರು ಪರಸ್ಪರ ಕೊಟ್ಟ ಉಡುಪನ್ನು ಕೂಡಾವಳಿಯಾಗುವವರು ಸ್ನಾನ ಮಾಡಿ ಉಟ್ಟು ಮದುಮಕ್ಕಳಂತೆ ನೆಲ್ಲಕ್ಕಿ ಅಡಿಗೆ ಬರುತ್ತಾರೆ.
  4. ತೆರವಿನ ಹಣ : ಅರೆಭಾಷೆ ಸಂಸ್ಕೃತಿಯಲ್ಲಿ ಗೌಡರ ಮದುವೆಗೆ ಊರಗೌಡರು ಅಥವಾ ಊರಿನ ಮುಖ್ಯಸ್ಥರು ಮಧ್ಯಸ್ಥಿಕೆ ವಹಿಸಿ ಗೋತ್ರದ ಒಕ್ಕಣೆ ಹೇಳಿ ಮದುವೆ ಕ್ರಮ ಏರ್ಪಡಿಸುತ್ತಾರೆ. ಒಕ್ಕಲೆಜಮಾನರಿಗೆ ಗಂಡಿನ ಕಡೆಯಿಂದ ಮೊದಲ ಕೂಡಾವಳಿಯಾದರೆ ರೂಪಾಯಿ ೨.೨೫ಯನ್ನು ತೆರವಿನ ಹಣವೆಂದು ನೀಡುತ್ತಾರೆ. ಎರಡನೆಯ ಕೂಡಾವಳಿ ಸಂಬಂಧವಾದರೆ ರೂಪಾಯಿ ೧.೨೫ಯನ್ನು ತೆರವಿನ ಹಣವಾಗಿ ಕೊಡಿಸುತ್ತಾರೆ. ಮೂರನೆಯ ಕೂಡಾವಳಿಯಾದರೆ ತೆರವಿನ ಹಣವಿಲ್ಲದೆ ಕೇವಲ ಬಿಳಿಸೀರೆಯನ್ನು ಮಾತ್ರ ಕೊಡುತ್ತಾರೆ.
  5. ತಾಳಿ : ಕೂಡಾವಳಿ ಮದುವೆಯಲ್ಲಿ ತಾಳಿ ಕಟ್ಟುವ ಕ್ರಮವಿದೆ. ಹಿರಿಯರ ಒಪ್ಪಿಗೆಯಂತೆ ಗಂಡು ತಾಳಿಕಟ್ಟುತ್ತಾನೆ. ಹೂವಿನ ಹಾರವನ್ನು ಹಾಕುವ ಕ್ರಮವಿಲ್ಲ. ಕುಟುಂಬದ ಗೋತ್ರ ಒಕ್ಕಣೆ ಹೇಳುತ್ತಾರೆ.

ಮದುಮಕ್ಕಳನ್ನು ಮನೆ ತುಂಬಿಸುವುದು

[ಬದಲಾಯಿಸಿ]
  • ಗಂಡು ತನ್ನ ಹೆಣ್ಣನ್ನು ಮನೆಗೆ ಹತ್ತಿಸುವಾಗ ಯಾವುದೇ ಶಾಸ್ತ್ರಗಳಿಲ್ಲ.
  • ತುಪ್ಪ ತೆಗೆದುಕೊಂಡು ಹೋಗುವುದು, ತೌರರು ಮನೆಯಲ್ಲಿ ಹತ್ತು ಉಳಿಯುವುದು, ಆಟಿ ಕುದ್ರುದು(ಆಟಿ ಕುಳಿತುಕೊಳ್ಳುವುದು) ಕೂಡಾವಳಿ ಮದುವಳಿಗರಿಗೆ ಇಲ್ಲ.

ಗೋತ್ರದ ಒಕ್ಕಣೆ

[ಬದಲಾಯಿಸಿ]

ಹತ್ತು ಕುಟುಂಬ ಹದಿನೆಂಟು ಗೋತ್ರ, ಕುಟುಂಬದ ಹಿರಿಯರು, ಬಂಧುಬಾಂದವರು, ಮಾಗಣೆ ಗೌಡರು, ಊರಗೌಡರೊಡಗೂಡಿ ನಂದರ ಬಳಿಯ ಹುಡುಗಿಗೆ ಬಂಗಾರ ಬಳಿಯ ಹುಡುಗನನ್ನು ಗುರುಹಿರಿಯರಿದ್ದು ಮದುವೆಮಂಟಪದಲ್ಲಿ ತಾಳಿಕಟ್ಟುತ್ತೇವೆ ಎಂದು ಕರೆದು ಹೇಳುತ್ತಾರೆ. ಇಲ್ಲಿ ಹತ್ತು ಕುಟುಂಬ ಮತ್ತು ಹದಿನೆಂಟು ಗೊತ್ರವೆಂಬುದು ವಿಶೇಷ ಅರ್ಥವನ್ನು ಪಡೆದುಕೊಂಡಿದೆ.

ಉಲ್ಲೇಖ

[ಬದಲಾಯಿಸಿ]
  1. ಗೌಡ ಸಂಸ್ಕೃತಿ, ೧೯೮೫; ಕೊಡಗು ಗೌಡ ವಿದ್ಯಾಸಂಘ, ಮಡಿಕೇರಿ.