ವಿಷಯಕ್ಕೆ ಹೋಗು

ಏಲಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Green cardamom
True cardamom
True Cardamom
(Elettaria cardamomum)
1896 illustration[]
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
E. cardamomum
Binomial name
Elettaria cardamomum
(Carolus Linnaeus
Synonyms
  • Amomum cardamomum L.
  • Amomum repens Sonn., illegitimate superfluous name
  • Amomum racemosum Lam., illegitimate superfluous name
  • Alpinia cardamomum (L.) Roxb.
  • Cardamomum officinale Salisb.
ಹಸಿರು ಮತ್ತು ಕಪ್ಪು ಏಲಕ್ಕಿ

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ್ನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ಏಷ್ಯ ಖಂಡದ ಉಷ್ಣವಲಯವೇ ಮೂಲಸ್ಥಾನ. ಕೇರಳವನ್ನು ಪೂರ್ವಪ್ರಾಂತ್ಯದ "ಏಲಕ್ಕಿ ನಾಡು" ಎಂದು ಕರೆಯಲಾಗುತ್ತಿತ್ತು.

ಸಸ್ಯ ಪರಿಚಯ

[ಬದಲಾಯಿಸಿ]

ಏಲಕ್ಕಿಯ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ. ಇದು ಝಿಂಜಿಬರೇಸಿ ಕುಟುಂಬಕ್ಕೆ ಸೇರಿದೆ.

ಏಲಕ್ಕಿ ಗಿಡ

"ಇದರ ಸುವಾಸನೆಗೆ ಕಾರಣವಾದ ರಾಸಾಯನಿಕ ಸಿತಿಯೋಲ್"

ಇವು ಬಹುವಾರ್ಷಿಕ ಸಸ್ಯ ಮೂಲಿಕೆಗಳು. ಕಾಂಡವು ಎಲೆಗಳಿಂದ ಕೂಡಿದ್ದು,ಮೃದುವಾಗಿದೆ. ಎಲೆಯು ಮೂಲ ಬೇರಿನ ಬಳಿ ಅಥವಾ ಕಾಂಡದ ಮೇಲೆ ಬೆಳೆಯುತ್ತದೆ. ಇದರ ಹೂವುಗಳು ದ್ವಿಲಿಂಗಿಗಳಾಗಿರುತ್ತವೆ.

ಏಲಕ್ಕಿಯನ್ನು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಡಗು ಮತ್ತು ಸಕಲೇಶಪುರಗಳಲ್ಲಿ ಬೆಳೆಯಲಾಗುತ್ತದೆ.

ಇತರ ಹೆಸರುಗಳು

[ಬದಲಾಯಿಸಿ]

ಬಂಗಾಳಿ- ಚೋಟೀಲಾಯಿಚಿ

ಗುಜರಾತಿ- ಇಲಾಯಿಚಿ

ಹಿಂದಿ- ಚೋಟಿ ಇಲಾಯಿಚಿ

ಕಾಶ್ಮೀರಿ- ಆಲ್‍ಬುದು ಆಲ್

ಮಲಯಾಳಂ- ಏಳತ್ತರಿ

ಮರಾಠಿ- ವೆಲ್‍ಚಿ

ಒಡಿಯಾ- ಅಲಿಯಾಯಿಚಿ

ತಮಿಳು- ಏಳಕ್ಕಾಯ್

ತೆಲುಗು-ಏಳಕ್ಕಯಿಲು[]

ವಿಧಗಳು

[ಬದಲಾಯಿಸಿ]
ಏಲಕ್ಕಿ

ದೊಡ್ಡ ಏಲಕ್ಕಿ

[ಬದಲಾಯಿಸಿ]

ಇದರ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ ಮೇಜರ್.[] ಸಣ್ಣ ಏಲಕ್ಕಿಯ ಮೂಲವು ದೊಡ್ಡ ಏಲಕ್ಕಿ ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ, ಶ್ರೀಲಂಕಾದ ಕಾಡುಗಳಲ್ಲಿ ವನ್ಯ ಸಸ್ಯವಾಗಿ ಬೆಳೆಯುತ್ತದೆ. ಇದರ ಗಿಡವು ೯ ಅಡಿಯಷ್ಟು ಎತ್ತರ ಬೆಳೆಯುತ್ತದೆ. ಇದರ ಸುವಾಸನೆ ಸಣ್ಣ ಏಲಕ್ಕಿಗಿಂತ ಕಡಿಮೆ.

ಸಣ್ಣ ಏಲಕ್ಕಿ

[ಬದಲಾಯಿಸಿ]

ನಾವು ಸಾಮಾನ್ಯವಾಗಿ ಬಳಸುವ ಏಲಕ್ಕಿ ಇದಾಗಿದೆ. ಇದರ ಬೀಜಗಳು ಗಾತ್ರದಲ್ಲಿ ತುಂಬಾ ಸಣ್ಣಗಿರುತ್ತದೆ. ಸಾಂಬಾರ ಪದಾರ್ಥವಾಗಿ ಇದನ್ನು ಉಪಯೋಗಿಸುತ್ತಾರೆ.

ಹವಾಗುಣ ಮತ್ತು ಮಣ್ಣು

[ಬದಲಾಯಿಸಿ]

ಸಮುದ್ರ ಮಟ್ಟದಿಂದ ೬೦೦ ರಿಂದ ಸುಮಾರು ೧೫೦೦ ಮೀಟರ್ ಎತ್ತರದವರೆಗಿನ ಪ್ರದೇಶದಲ್ಲಿ ಏಲಕ್ಕಿ ಬೆಳೆಯನ್ನು ಬೆಳೆಯಬಹುದಾಗಿದೆ. ವಾರ್ಷಿಕ ಮಳೆಯು ೨೫೦ ರಿಂದ ೩೦೦ ಸೆಂ.ಮೀ. ಇರುವ ಪ್ರದೇಶದಲ್ಲಿ ಉತ್ತಮ ಇಳುವರಿ ದೊರೆಯುತ್ತದೆ. ಬಿಸಿಲು ನೇರವಾಗಿ ಗಿಡದ ಮೇಲೆ ಬೀಳದಂತಹ ವಾತಾವರಣದಲ್ಲಿ ಈ ಗಿಡವನ್ನು ಬೆಳೆಸುವುದು ಉತ್ತಮ. ವಾತಾವರಣದ ಉಷ್ಣತೆಯು ೧೨ ರಿಂದ ೩೫ ಡಿಗ್ರಿ ಉಷ್ಣಾಂಶವನ್ನು ಹೊಂದಿರುವುದು ಈ ಬೆಳೆಗೆ ಸೂಕ್ತ.

ನೀರು ಸರಿಯಾಗಿ ಹರಿದುಹೊಗುವಂತಹ ಕೆಂಪು ಮಣ್ಣು, ಮೆಕ್ಕಲುಮಣ್ಣು ಏಲಕ್ಕಿ ಕೃಷಿಗೆ ಒಳ್ಳೆಯದು. ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಏಲಕ್ಕಿಯು ಉತ್ತಮ ಇಳುವರಿಯನ್ನು ನೀಡುತ್ತದೆ. ಇದು ಹೆಚ್ಚಾಗಿ ನೆರಳನ್ನು ಬಯಸುವುದರಿಂದ ಮರದ ಅಡಿಯಲ್ಲಿ ಬೆಳೆಸುವುದು ಸೂಕ್ತ. ಹೆಚ್ಚಾಗಿ ಇದನ್ನು ಉಪಬೆಳೆಯಾಗಿ ಬೆಳೆಯುತ್ತಾರೆ.

ವಿಶ್ವದ ಒಟ್ಟು ಏಲಕ್ಕಿ ಉತ್ಪಾದನೆಯಲ್ಲಿ, ಶೇ.೭೫ ರಷ್ಟು ಭಾರತದಲ್ಲಿ ಆಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಏಲಕ್ಕಿ ಉತ್ಪಾದನೆಯು ಸಾಕಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ, ಮಳೆಯ ಅಭಾವ, ಪ್ರತಿಕೂಲ ಹವಮಾನ ಇಂತಹ ಹಲವಾರು ಪರಿಸ್ಥಿತಿಗಳು. ಏಲಕ್ಕಿ ಬೇಸಾಯ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ. ಈ ರಾಜ್ಯಗಳಲ್ಲಿ ೯೪೦೦ ಹೆಕ್ಟೇರ್ ಪ್ರದೇಶವಿದೆ. ರಾಜ್ಯಾವಾರು ಬೆಳೆ ಪ್ರದೇಶ ಹಾಗೂ ಶೇಕಡಾ ಪ್ರಮಾಣ ಈ ರೀತಿ ಇದೆ.

  • ಕೇರಳ 56,376 ಹೆಕ್ಟೇರ್
  • ಕರ್ನಾಟಕ 28,223 ಹೆಕ್ಟೇರ್
  • ತಮಿಳುನಾಡು 9,348 ಹೆಕ್ಟೇರ್

ಭಾರತದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಏಲಕ್ಕಿ ಬೆಳೆಯುತ್ತದೆ. ಈ ಕಾಡುಗಳ ಹೆಮ್ಮರಗಳ ನೆರಳಡಿಯಲ್ಲಿ ಬೆಚ್ಛಗಿನ ಹವೆಯಿದ್ದು, ತೇವಾಂಶವಿರುವ ವಾತಾವರಣದಲ್ಲಿ 10 ಡಿಗ್ರಿ ಸೆಂಟಿಗ್ರೇಡ್ನಿನಿಂದ 35 ಡಿಗ್ರಿ ಸೆಂಟಿಗ್ರೇಡ್ ಉಷ್ಣವಿರುವ ಹವಾಮಾನದಲ್ಲಿ ಏಲಕ್ಕಿ ಉತ್ತಮವಾಗಿ ಬೆಳೆಯುತ್ತದೆ. ವರ್ಷಕ್ಕೆ ೧೫೦ ಸೆಂ.ಮೀ. ಮಳೆ ಎಲ್ಲ ಕಾಲಕ್ಕೂ ಚೆನ್ನಾಗಿ ವಿಸ್ತರಿಸಿ ಬೀಳುವ ಪ್ರದೇಶದಲ್ಲಿ ಏಲಕ್ಕಿ ಉತ್ತಮವಾಗಿ ಬೆಳೆಯುತ್ತದೆ. ಈ ಬೆಳೆಗೆ ಗಾಳಿ ಹೆಚ್ಚಾಗಿ ಬೇಕಿಲ್ಲ. ಬಿಸಿಲನ್ನು ಸಹಿಸಲಾರದು. ಇಳಿಜಾರು ಪ್ರದೇಶ, ಅಧಿಕ ಪೌಷ್ಟಿಕಾಂಶವಿರುವ ಕಾಡಿನ ಎಲೆ, ತರಗು ಮಿಶ್ರಿತ ಗೊಬ್ಬರ ಮಣ್ಣಿನ ಪ್ರದೇಶ ಸೂಕ್ತ. ಅಂತಹ ಪ್ರದೇಶವು ೬೦೦ ರಿಂದ ೧೫೦೦ ಮೀ. ಎತ್ತರದಲ್ಲಿರಬೇಕು.

  • ಎಲಕ್ಕಿ ಸಸಿಗಳ ಬೆಳವಣಿಗೆ

ಕಂದು ಅಥವ ಬೇರು ಸಸಿಗಳಿಂದ ಎಲಕ್ಕಿ ಸಸಿಗಳನ್ನು ಉತ್ಪತ್ತಿ ಮಾಡುವುದೇ ಸರಳ ಮಾರ್ಗ. ಆದರೆ, ಉತ್ತಮ ಫಲಿತಾಂಶ ಬೀಜ ಮೊಳೆಯಿಸಿ ಸಸಿ ತೆಗೆದಾಗ ಸಿಗುವುದು. ಏಕೆಂದರೆ, ಕಟ್ಟೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು. ಹಾಗಿದ್ದರು ಕೂಡ ಬೀಜಗಳಿಂದ ಮೊಳೆತ ಸಸಿ ಉತ್ಪಾದನೆ ಸ್ವಲ್ಪ ಕಷ್ಟವೇ ಎನ್ನಬಹುದು. ಬೀಜಗಳು ಮೊಳೆಯುವ ಪ್ರಮಾಣ ಕಡಿಮೆ ಮಟ್ಟದಲ್ಲಿರುವುದು, ರೋಗರುಜಿನ, ಕ್ರಿಮಿಕೀಟ ಉಪದ್ರವ ಹೆಚ್ಚಾಗಿರುವುದು ಇದಕ್ಕೆ ಕಾರಣ. ಸರಿಯಾದ ಬೀಜದ ಆಯ್ಕೆ ಹಾಗು ಕಾಲ ಕಾಲಕ್ಕೆ ಸೂಕ್ತ ಕೃಷಿ ಕ್ರಮ ಇವುಗಳಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.

  • ಬೀಜದ ಆಯ್ಕೆ

ಬೀಜ ಸಂಗ್ರಹಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಅವು ರೋಗಗಳಿಗೆ ತುತ್ತಾಗಿಲ್ಲವೆಂಬುದನ್ನು ಖಚಿತಪಡಿಸಿಕೊಂಡು, ಅಂಥ ಹಣ್ಣುಗಳ ಬೀಜ ಸಂಗ್ರಹಿಸಬೇಕು. ಆಯ್ಕೆ ಮಾಡಿದ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ನಯವಾಗಿ ಹಿಚುಕಿ ಬೀಜವನ್ನು ಹೊರ ತೆಗೆಯಬೇಕು. ಆ ಬೀಜಗಳನ್ನು ತಣ್ಣೀರಿನಲ್ಲಿ ನಾಲ್ಕು ಬಾರಿ ತೊಳೆದು ಬೀಜದ ಮೇಲಿನ ತೊಳೆಯನ್ನು ತೆಗೆಯಬೇಕು. ನಂತರ ನೀರನ್ನು ಬಸಿದು ಬೀಜಗಳನ್ನು ಬೂದಿಯೊಡನೆ ಬೆರೆಸಿ, ನೆರಳಿನಲ್ಲಿ ಮೂರು ದಿನಗಳ ಕಾಲ ಒಣಗಲು ಬಿಡಬೇಕು. ಬೀಜಗಳಿಂದ ಮೊಳಕೆ ಚೆನ್ನಾಗಿ ಬರಲು ಮತ್ತು ಏಕಕಾಲದಲ್ಲಿ ಮೊಳಕೆಯಾಗಲು ಬೀಜಗಳನ್ನು ಕೋಶದಿಂದ ತೆಗೆದ ಕೂಡಲೇ ಬಿತ್ತಬೇಕು.

  • ಪ್ರಾಥಮಿಕ ನರ್ಸರಿ

ಆಯ್ಕೆಯಾದ ಸ್ಥಳಗಳಲ್ಲಿ ಬೆಳೆದಿರುವ ಗಿಡಮರಗಳನ್ನು ಬೇರು ಸಮೇತ ಕಿತ್ತು ೩೦ ಸೆಂ. ಮೀ. ಆಳಕ್ಕೆ ಅಗೆತ ಮಾಡಿ , ಮಣ್ಣನ್ನು ಹದಗೊಳಿಸಿ ಅನುಕೂಲಕ್ಕೆ ತಕ್ಕಂತೆ ಪಾತಿಗಳನ್ನು ಏರ್ಪಡಿಸಬೇಕು. ಈ ಪಾತಿಗಳಲ್ಲಿ ಕಾಡು ಮಣ್ಣನ್ನು ಹರಡಬೇಕು. ಬೀಜಗಳನ್ನು ಎರಚಬಹುದು ಇಲ್ಲವೆ ಸಾಲಾಗಿ ಬಿತ್ತಬಹುದು. ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ನೀರನ್ನು ಹಾಕಬೇಕು. ಮೊಳಕೆಯೊಡೆಯಲು ಪ್ರಾರಂಭಿಸಿದಾಗ ತರಗನ್ನು ತೆಗೆಯಬೇಕು. ಬಿಸಿಲು ತಗಲದಂತೆ ಚಪ್ಪರ ಹಾಕಿ ಗಿಡಗಳನ್ನು ರಕ್ಷಿಸಬೇಕು.

  • ಮಾಧ್ಯಮಿಕ ನರ್ಸರಿ

ಮಾಧ್ಯಮಿಕ ನರ್ಸರಿಗಳಲ್ಲೂ ಪ್ರಾಥಮಿಕ ನರ್ಸರಿಯಲ್ಲಿ ತಯಾರಿಸಿದಂತೆ ೬ * ೧ ಮೀಟರ್ ಅಳತೆಯ ಪಾತಿಗಳನ್ನು ತಯಾರಿಸಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಗು ಮರದ ಬೂದಿಯನ್ನು ಮೇಲ್ಭಾಗದ ೫ ಸೆಂ. ಮೀ. ಮಣ್ಣಿನಲ್ಲಿ ಬೆರೆಸಿ ಹರಡಬೇಕು. ಎಲ್ಲ ಪಾತಿಗಳಿಗೆ ಒಂದೇ ಚಪ್ಪರವನ್ನು ಹಾಕಿದ ಪ್ರದೇಶಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ರಾಸಾಯನಿಕ ಗೊಬ್ಬರ ಹಾಕುವುದು ಸೂಕ್ತ. ಪಾತಿಗಳಿಗೆ ಎಲೆಗಳನ್ನು ಹಾಕಬೇಕು. ನಾಟಿ ಮಾಡಿದ ಕೂಡಲೆ ಪ್ರತಿದಿನ ನೀರು ಕೊಡಬೇಕು.ನಂತರ, ಅಗತ್ಯಕ್ಕೆ ತಕ್ಕಂತೆ ಎರಡು ಮೂರು ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕು. ಪಾತಿಗಳಲ್ಲಿ ನಿಯಮಿತವಾಗಿ ಕಳೆ ಕೀಳಬೇಕು. ಬೇಸಾಯಕ್ಕೆ ಅನುಕೂಲವಾಗುವಂತೆ, ಎಪ್ರೀಲ್-ಮೇ ತಿಂಗಳಿನಲ್ಲಿ ಚಪ್ಪರವನ್ನು ಭಾಗಶಃ ತೆಗೆದು ಹಾಕಬೇಕು. ಈ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿ ಗಿಡಗಳ ಬೆಳವಣಿಗೆಯನ್ನು ಕಾಣಬಹುದು.

ಉಪಯೋಗಗಳು

[ಬದಲಾಯಿಸಿ]

ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಹಾಗೂ ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ. ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನು ಮಾಡಬಹುದಾಗಿದೆ. ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ.[]

ಸ್ವಾರಸ್ಯ ಕತೆ

[ಬದಲಾಯಿಸಿ]

ಏಲಕ್ಕಿಯು ದಕ್ಷಿಣ ಭಾರತದ ಸಂಸ್ಕೃತಿಯೊಂದಿಗೆ ಹಾಸು ಹೊಕ್ಕಾಗಿದೆ. ನಮ್ಮ ನಾಡಿನ ಪುರಾತನ ಗ್ರಂಥಗಳಲ್ಲಿ ಅದರ ಉಲ್ಲೇಖವಿದೆ. "ಆಯುರ್ವೆದ" (ಕ್ರಿ.ಪೂ.೧೦೦೦) ಎಂಬ ಸಂಸ್ಕೃತ ಗ್ರಂಥದಲ್ಲಿ ಏಲಕ್ಕಿ ಬಗ್ಗೆ ಪ್ರಥಮವಾಗಿ ಉಲ್ಲೇಖವಿರುವುದು ತಿಳಿದುಬಂದಿದೆ. ಕಾಳಿದಾಸನ ಕೃತಿಗಳಲ್ಲಿ(ಕ್ರಿ.ಪೂ. ೪ನೇ ಶತಮಾನ) ಏಲಕ್ಕಿಯ ಸುಗಂಧಯುಕ್ತ ಸುವಾಸನೆಯ ಬಗ್ಗೆ ಉಲ್ಲೇಖವಿದೆ. ಇತರ ತಮಿಳು ಕೃತಿಗಳಾದ ಚಲಪತಿಕರಂ (ಕ್ರಿ.ಪೂ.೪ನೆ ಶತಮಾನ), ತೆವರಂ(೭ನೆ ಶತಮಾನ) ಮತ್ತು ಚರಿನ್ ಇವುಗಳಲ್ಲಿ ಕೂಡ ಏಲಕ್ಕಿಗಿಡದ ಗುಚ್ಛ ಮತ್ತು ಹಣ್ಣುಗಳ ಬಗ್ಗೆ ವಿವರಗಳಿವೆ. "ಏಲಕ್ಕಿ" ಎಂಬ ಗ್ರಂಥವನ್ನು ೯ನೆ ಶತಮನದಲ್ಲಿ ಬರೆಯಲಾಗಿದ್ದು, ಮಲಯಾಳ ಭಾಷೆಯಲ್ಲಿ ಕರೆಯುವ ಏಲಂ ಅಥವಾ ಕನ್ನಡದಲ್ಲಿ ಏಲಕ್ಕಿ ಎಂಬ ಹೆಸರನ್ನೇ ಸೂಚಿಸುತ್ತದೆ. ೧೧ನೆ ಶತಮಾನದ ನಂತರ ಮಲಯಾಳ ಭಾಷೆ ಬೆಳೆದಂತೆ, ಮಲಯಾಳ ಸಾಹಿತ್ಯದಲ್ಲೂ ಏಲಕ್ಕಿಗೆ ಸ್ಥಾನ ದೊರೆಯಿತು.

ಜನಪದ ಸಹಿತ್ಯದಲ್ಲಿ ಸತಿ-ಪತಿಯರ ಪ್ರೇಮದಲ್ಲಿ ಏಲಕ್ಕಿ ಕಂಪಿನ ಉಲ್ಲೆಖವಿದೆ. ಜನಪದ ಗರತಿ,ಗಂಡನ ಊಟವೆ ತನ್ನ ಊಟವೆಂದು ಭಾವಿಸುವ ಮನೊದರ್ಮವುಳ್ಳವಳು. ಗಂಡನಿಲ್ಲದಾಗ ಬಗೆಬಗೆಯ ಭಕ್ಶ್ಯ ಭೊಜ್ಯಗಳನ್ನು ಮಾಡಿ ಪ್ರಯೊಜನವೇನು? ರಾಯನಿಲ್ಲದ ಊಟ ಆವಳ ಮನಸಿಗೆ ಸಲ್ಲದು. ಅದನ್ನು ಕುರಿತು ಈ ಪದ್ಯದಲ್ಲಿ ವರ್ಣಿಸಲಾಗಿದೆ.

ಯಾಲಕ್ಕಿ ಕಾಯ್ ಸುಲಿದು
ಯಾವಡಿಗೆ ಮಾಡಲಿ
ಊರಿಗೊಗ್ಯರ್ ರಾಯರು
ಯಾವಡಗೆ ಮಾಡಿ ಫಲವನು?

ಉಲ್ಲೇಖ

[ಬದಲಾಯಿಸಿ]

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  1. http://ayurvediccommunity.com
  2. https://npgsweb.ars-grin.gov/gringlobal/taxonomylist.aspx?category=species&type=genus&value=a%20genus&id=4169

Media related to Elettaria cardamomum at Wikimedia Commons

University of Melbourne: Sorting Elettaria names Germplasm Resources Information Network: Elettaria Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಏಲಕ್ಕಿ&oldid=1163095" ಇಂದ ಪಡೆಯಲ್ಪಟ್ಟಿದೆ