ವಿಷಯಕ್ಕೆ ಹೋಗು

ಮಾಳವ ಸಲ್ತನತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಲ್ಜಿ ರಾಜವಂಶದಡಿಯಲ್ಲಿ ತನ್ನ ಉತ್ತುಂಗದಲ್ಲಿ ಮಾಳವ ಸಲ್ತನತ್

ಮಾಳವ ಸಲ್ತನತ್ (1401-1562) ಮಾಳವ ಪ್ರದೇಶದಲ್ಲಿನ ಒಂದು ಅರ್ವಾಚೀನ ಮಧ್ಯಯುಗದ ರಾಜ್ಯವಾಗಿತ್ತು. ಈ ರಾಜ್ಯವನ್ನಾಳಿದ ವಂಶ ಮಾಳವದಲ್ಲಿ ಘೋರಿ ಮನೆತನದ ಅರಸರ ಅನಂತರ ಆಡಳಿತಕ್ಕೆ ಬಂದ ದೊರೆಗಳ ವಂಶ.

ಘೋರಿ ಸಂತತಿ

[ಬದಲಾಯಿಸಿ]

1398ರಲ್ಲಿ ತೈಮೂರ್ ಭಾರತದ ಮೇಲೆ ನಡೆಸಿದ ದಾಳಿಯಿಂದಾಗಿ ದೆಹಲಿಯಲ್ಲಿ ತೊಗಲಕರ ಆಳ್ವಿಕೆ ಮುಕ್ತಾಯಗೊಂಡಿತು. ಅವರ ರಾಜ್ಯ ಛಿಧ್ರವಾಗಿ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಿದುವು. ಇವುಗಳಲ್ಲಿ ಮಾಳವದ ಘೋರಿಗಳ ರಾಜ್ಯವೂ ಒಂದು. ಇದರ ಸ್ಥಾಪಕ (1401) ದಿಲಾವರ್ ಖಾನ್.[] ಇವನ ಮಗ ಆಲ್ಪ್ ಖಾನ್ 1405ರಲ್ಲಿ, ತಂದೆಯ ಮರಣಾನಂತರ, ಹೋಷಂಗ್ ಷಹನೆಂಬ ಹೆಸರಿನಿಂದ ರಾಜ್ಯವಾಳತೊಡಗಿದ. ಈತ 1410ರಲ್ಲಿ ತನ್ನ ರಾಜಧಾನಿಯನ್ನು ಹೊಸದಾಗಿ ಕಟ್ಟಿಸಿದ ಮಾಂಡೂವಿನ ಕೋಟೆಗೆ ಬದಲಾಯಿಸಿ, ಸೋದರ ಸಂಬಂಧಿಯಾದ ಮಲಿಕ್ ಮಘಿಯನ್ನು ಪ್ರಧಾನಿಯಾಗಿ ನೇಮಿಸಿಕೊಂಡ. ಇವನದು ಖಲ್ಜಿ ಸಂತತಿ.

ಖಲ್ಜಿ ಮನೆತನ

[ಬದಲಾಯಿಸಿ]

ಮಘಿಯ ಮಗ ಮಹಮೂದ್ ಷಹ. ಹೋಷಂಗ್ ಷಹನ ಬಳಿಕ ಅವನ ಮಗ ಘಜ್ನಿ ಖಾನ್ ಪಟ್ಟವೇರಿದಾಗ ಮಘಿಯ ಮಗ ಮಹಮೂದ್ ಷಹ ಅವನಿಗೆ ಬೆಂಬಲವಾಗಿ ನಿಂತ. ಆದರೆ ಘಜ್ನಿ ಖಾನ್ ಕ್ರೂರಿಯೂ ವಿಷಯಲಂಪಟನೂ ಆಗಿದ್ದುದರಿಂದ ಕ್ರಮೇಣ ಮಹಮೂದ್ ಬಲಿಷ್ಠನಾಗಿ, ಕೊನೆಗೆ ಘಜ್ನಿ ಖಾನನ್ನು ಕೊಲ್ಲಿಸಿ, ತಾನೇ ಮಾಳವದ ಸುಲ್ತಾನನಾದ. ಮಾಳವದಲ್ಲಿ ಖಲ್ಜಿ ಮನೆತನ ಆಳ್ವಿಕೆಗೆ ಬಂತು (1436).

ಮಹಮೂದ್ ಷಹ

[ಬದಲಾಯಿಸಿ]

ಮಹಮೂದ್ ಷಹ ಖಲ್ಜಿ 36 ವರ್ಷಗಳ ಕಾಲ ಆಳಿದ. ಹೋಷಂಗನ ಮಗನಾದ ಅಹಮದ್ ಖಾನ್ ಇವನ ವಿರುದ್ಧ ದಂಗೆ ಎದ್ದಾಗ ಅವನನ್ನು ಸೋಲಿಸಿ ವಿಷ ಉಣಿಸಿ ಕೊಲ್ಲಿಸಿದ. ಕೆಲವರಿಗೆ ಜಾಗೀರುಗಳನ್ನು ಕೊಟ್ಟು, ಇನ್ನು ಕೆಲವರನ್ನು ಕಠಿಣವಾಗಿ ದಂಡಿಸಿ ದಂಗೆಗಳನ್ನಡಗಿಸಿದ. ಗುಜರಾತಿನ ಸುಲ್ತಾನ್ ಅಹಮದ್ ಇವನ ವಿರುದ್ಧ ಏರಿ ಬಂದಾಗ, ತಂದೆಯ ಸಹಾಯದಿಂದ ಅವನನ್ನು ಹೊರದೂಡಿದ. ಚಂದೇರಿಯಲ್ಲಿಯ ದಂಗೆಕೋರನೊಬ್ಬ ಅಮೀರನ ವಿರುದ್ಧ ಸಾಗಿ, ಚಂದೇರಿ ಕೋಟೆಯನ್ನು ಎಂಟು ತಿಂಗಳುಗಳ ಕಾಲ ಮುತ್ತಿ ಆ ಕೋಟೆಯನ್ನು ವಶಪಡಿಸಿಕೊಂಡ. ಏತನ್ಮಧ್ಯೆ ಗ್ವಾಲಿಯರದ ಡುಂಗರಸಿಂಹ ನರವಾರ ನಗರವನ್ನು ಮುತ್ತಿದನೆಂಬ ಸುದ್ದಿ ತಿಳಿದು ಪ್ರತಿಕ್ರಮವಾಗಿ ತಾನು ಗ್ವಾಲಿಯರನ್ನು ಮುತ್ತಿದ. ಡುಂಗರಸಿಂಹನನ್ನು ಹಿಮ್ಮೆಟ್ಟಿಸಿದ.

ದೆಹಲಿಯಲ್ಲಿ ಆಳುತ್ತಿದ್ದ ಸಯ್ಯದ್ ವಂಶದ ಮುಹಮ್ಮದ್ ಷಹ ಸುಖಲೋಲುಪನೂ ಕಾಮಾಂಧನೂ ಆಗಿದ್ದ ಕಾರಣ ರಾಜ್ಯದಲ್ಲಿ ಅರಾಜಕತೆ ತಲೆದೋರಿತ್ತು. ಇದರಿಂದ ಬೇಸತ್ತು ಜಲಾಲ್ ಖಾನನೂ, ರಾಜಧಾನಿಯ ಇತರ ಪ್ರಮುಖರೂ ಸೇರಿ ಮಾಳವದ ಮಹಮೂದ್ ಖಲ್ಜಿಯನ್ನು ದೆಹಲಿಗೆ ಬಂದು ಅಧಿಕಾರವನ್ನು ಸ್ವೀಕರಿಸುವಂತೆ ಆಹ್ವಾನಿಸಿದರು. ಅದರಂತೆ ಮಹಮೂದ್ ದೆಹಲಿಗೆ ಸೈನ್ಯ ಸಮೇತ ಬಂದು ಹತ್ತು ಮೈಲಿಗಳ ದೂರದಲ್ಲಿದ್ದ ತಲ್ಪತ್ ಎಂಬಲ್ಲಿ ಬೀಡುಬಿಟ್ಟ. ಇದನ್ನರಿತ ದೆಹಲಿಯ ಅರಸ ಸರ್‌ಹಿಂದ್‍ನ ನಾಯಕನಾದ ಬಹಲೂಲ್ ಲೋದಿಯನ್ನು ತನ್ನ ನೆರವಿಗೆ ಕರೆದ. ಎರಡು ಸೈನ್ಯಗಳ ನಡುವಣ ಮೊದಲ ದಿನದ ಯುದ್ಧ ಅನಿಶ್ಚಿತವಾಗಿ ಕೊನೆಗೊಂಡಿತು. ಆದರೂ ಮುಹಮ್ಮದ್ ಷಹ ಖಲ್ಜಿಯೊಡನೆ ಒಪ್ಪಂದ ಮಾಡಿಕೊಳ್ಳಬಯಸಿ ತನ್ನ ಬೇಹುಕಾರರನ್ನು ಕಳಿಸಿದ. ಅಷ್ಟರಲ್ಲಿ ಗುಜರಾತಿನ ಅಹಮದನಿಂದ ತನ್ನ ರಾಜ್ಯಕ್ಕೆ ವಿಪತ್ತು ಒದಗಿದ್ದ ಸಂಗತಿಯನ್ನರಿತ ಮಹಮೂದ ಖಲ್ಜಿ ಮುಹಮ್ಮದ್ ಷಹನ ಒಪ್ಪಂದದ ಸೂಚನೆಗೆ ಸಮ್ಮತಿಸಿ ಕೂಡಲೇ ತನ್ನ ರಾಜಧಾನಿಗೆ ಹಿಂದಿರುಗಿದ (1440). ಆದರೆ ಮುಹಮ್ಮದ್ ಷಹನ ಈ ನಡವಳಿಕೆಯನ್ನು ಲೋದಿ ಅನುಮೋದಿಸಲಿಲ್ಲ. ಹಿಂದಿರುಗುತ್ತಿದ್ದ ಖಲ್ಜಿಯ ಸೈನ್ಯದ ಮೇಲೆ ಆತ ಅನಿರೀಕ್ಷಿತವಾಗಿ ಆಕ್ರಮಣ ಮಾಡಿ ಅವರ ವಸ್ತುವಾಹನಗಳನ್ನು ಸೂರೆ ಮಾಡಿದ. ಮಹಮೂದ್ ಖಲ್ಜಿ ಮಾತ್ರ ಹೆಚ್ಚು ಬಾಧೆಯಿಲ್ಲದೆ ಮಾಂಡುವಿಗೆ ಹಿಂದಿರುಗಿದ.

ಚಿತ್ತೂರಿನ ಮಹಾರಾಣ ಕುಂಭನಿಗೂ ಮಹಮೂದ್ ಷಹ ಖಲ್ಜಿಗೂ ನಡುವೆ ಹಲವಾರು ಬಾರಿ ಘರ್ಷಣೆಗಳಾದುವು. ಮಹಮೂದ್ ದೆಹಲಿಯ ಸಮೀಪದಲ್ಲಿದ್ದಾಗ ಕುಂಭ ಮಾಳವದೇಶವನ್ನು ಮುತ್ತಿ ಮಂಡಸೋರದವರೆಗೂ ಹೋದನೆಂದೂ, ದೆಹಲಿಯಿಂದ ಚಿತ್ತೂರನ್ನು ಮುತ್ತಿ, ಅಲ್ಲಿಯ ದೇವಾಲಯಗಳನ್ನು ಹಾಳುಗೆಡವಿ ಆ ಸ್ಥಳಗಳಲ್ಲಿ ಮಸೀದಿಗಳನ್ನು ಕಟ್ಟಿಸಿದನೆಂದೂ ಇತಿಹಾಸಕಾರರು ಹೇಳಿದ್ದಾರೆ. ಆದರೆ ಈ ಘಟನೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಖಚಿತವಾದ ವಿವರಗಳು ತಿಳಿದಿಲ್ಲ.

1444ರಲ್ಲಿ ಒಮ್ಮೆ ಖಲ್ಜಿ ಮಹಮೂದ್ ಮಂಡಲಗಡವನ್ನು ವಶಪಡಿಸಿಕೊಳ್ಳಲು ಮಹಾರಾಣ ಕುಂಭನ ವಿರುದ್ಧ ದಂಡೆತ್ತಿ ವಿಫಲನಾಗಿ ಹಿಂದಿರುಗಿದ.[] ಇನ್ನೊಮ್ಮೆ ಇವನು ನಡೆಸಿದ ಪ್ರಯತ್ನದಲ್ಲಿ ಮೊದಲು ಅಜ್ಮೇರವನ್ನು ಗೆದ್ದುಕೊಂಡನಾದರೂ ಮಂಡಲಗಡವನ್ನು ಅಕ್ರಮಿಸುವ ಅವನ ಆಸೆ ನೆರವೇರದೆ ತೀವ್ರವಾದ ಸೋಲನ್ನನುಭವಿಸಬೇಕಾಯಿತು.[][] 1456 ಮತ್ತು 1458ರಲ್ಲಿ ಪುನಃ ನಡೆಸಿದ ಪ್ರಯತ್ನಗಳು ಫಲಿಸಲಿಲ್ಲ.

ಗುಜರಾತಿನ ವಿರುದ್ಧವಾಗಿಯೂ ಮಹಮೂದ ಎರಡು ಬಾರಿ ಕದನ ಹೂಡಿದ. ಗುಜರಾತಿನ ಸುಲ್ತಾನ್ ಮಹಮ್ಮದನ ವಿರುದ್ಧ ಹೋರಾಟದಲ್ಲಿ ಸಹಾಯ ನೀಡಬೇಕೆಂದೂ, ಇದಕ್ಕೆ ಪ್ರತಿಯಾಗಿ ಹಣವನ್ನೀಯುವುದಾಗಿಯೂ ಮಹಮೂದ್‍ನನ್ನು 1450ರಲ್ಲಿ ಚಂಪಾನೇರದ ರಾಜ ಗಂಗಾದಾಸ ಕೋರಿದ. ಅಂತೆಯೇ ಖಲ್ಜಿ ಎರಡು ಸಲ (1450 ಮತ್ತು 1451) ಗುಜರಾತಿನ ಮೇಲೆ ದಂಡೆತ್ತಿಹೋದ. ಎರಡನೆಯ ಸಲ ಭರುಕಚ್ಛದವರೆಗೂ ಹೋಗಿದ್ದಾಗ ಶತ್ರುಸೈನ್ಯ ಇವನನ್ನು ತೀವ್ರವಾಗಿ ಎದುರಿಸಿ, ಇವನನ್ನು ಸೋಲಿಸಿ ಇವನ ವಸ್ತು ವಾಹನಗಳನ್ನೂ 82 ಆನೆಗಳನ್ನೂ ಕಸಿದುಕೊಂಡಿತು. ಮಹಮೂದ ಮರುವರ್ಷ ತನ್ನ ಮಗನಾದ ಘಿಯಾಸುದ್ದೀನನನ್ನು ಸೂರತ್ ಕೋಟೆಯನ್ನು ಸೂರೆ ಮಾಡಲು ಕಳುಹಿಸಿದ.

1453ರಲ್ಲಿ ಗುಜರಾತಿನ ಸುಲ್ತಾನ ಕುತುಬ್-ಉದ್-ದೀನನೊಡನೆ ಒಂದು ಒಪ್ಪಂದವಾಯಿತು. ಇದರ ಪ್ರಕಾರ ಮಹಾರಾಣ ಕುಂಭನಿಗೆ ಸೇರಿದ್ದ ಅಜ್ಮೇರ್ ಮೇವಾಡ ಹಾಗೂ ಸುತ್ತಲಿನ ಪ್ರದೇಶಗಳನ್ನು ಖಲ್ಜಿ ಮಹಮೂದ್ ಷಹನೂ, ಗುಜರಾತಿಗೆ ಹೊಂದಿದಂತಿದ್ದ ಪ್ರದೇಶಗಳನ್ನು ಅಲ್ಲಿಯ ಸುಲ್ತಾನನೂ ವಶಪಡಿಸಿಕೊಳ್ಳಬೇಕೆಂದು ಒಡಂಬಡಿಕೆಯಾಗಿತ್ತು. ಅದರಂತೆ ಮಹಮೂದ ದಾರಾವತಿಯನ್ನು (ಈಗಿನ ಬುಂದಿನಗರ) ಮೊದಲು ಮುತ್ತಿದ. ಆದರೆ ಅಷ್ಟರಲ್ಲೇ ದಕ್ಷಿಣದಲ್ಲಿ ಬಹಮನಿ ಸುಲ್ತಾನನ ವಿರುದ್ಧ ಹೋಗಬೇಕಾದ ಪ್ರಸಂಗ ಒದಗಿ, ಸೇನೆಯನ್ನು ಹಿಂದೆಗೆದುಕೊಂಡ.

ಈ ನಡುವೆ ಮಹಮೂದ್ ಖಲ್ಜಿ ಕಾಲ್ಪಿ ಜಿಲ್ಲೆಯ ಕಡೆಗೆ ಗಮನಹರಿಸಿದ. ಹೋಷಂಗ್ ಷಹನ ಕಾಲದಲ್ಲಿ ಈ ಜಿಲ್ಲೆಯ ಅಧಿಕಾರಿಯಾಗಿದ್ದ ಖಾದಿರ್ ಅನಂತರ ಸ್ವತಂತ್ರನಾಗಿದ್ದ. ಅವನ ಮಗ ನಾಜ಼ೀರ್ ಆಮೇಲೆ ಅಧಿಕಾರಕ್ಕೆ ಬಂದ. ಈತ ಕಾಲ್ಪಿಗಿಂತ ಹಿರಿದಾದ, ಹೆಚ್ಚು ಜನಭರಿತವಾದ ಷಾಪುರವೆಂಬ ನಗರವನ್ನು ಧ್ವಂಸಗೊಳಿಸಿ ಅಲ್ಲಿಯ ಮಹಮ್ಮದೀಯರನ್ನು ಹಿಂಸಿಸಿ ಅವರ ಹೆಂಗಸರನ್ನು ಕಾಫಿರರಿಗೆ ಕೊಟ್ಟನೆಂಬ ತೀವ್ರವಾದ ಆಪಾದನೆಗಳನ್ನು ಜೌನ್ಪುರದ ಸುಲ್ತಾನ ಮಹಮೂದ ಹೊರಿಸಿ, ಅವನನ್ನು ದಂಡಿಸಲು ಅನುಮತಿಯನ್ನೀಯಬೇಕೆಂದು ಖಲ್ಜಿ ಮಹಮೂದನನ್ನೇ ಕೇಳಿದ. ಖಲ್ಜಿಯಿಂದ ಅನುಮತಿ ದೊರಕಿದಾಗ ಅವನು ಕಾಲ್ಪಿಯನ್ನು ಮುತ್ತಿದ (1441). ನಾಜ಼ೀರ್ ಪಶ್ಚಾತ್ತಾಪಪಟ್ಟು, ಮಾಳವದ ಸುಲ್ತಾನನ ಕ್ಷಮೆ ಕೋರಿದ. ಆದರೂ ಜೌನ್ಪುರದ ಸುಲ್ತಾನ ಕಾಲ್ಪಿಯಿಂದ ಕಾಲ್ತೆಗೆಯಲಿಲ್ಲ. ಪರಿಣಾಮವಾಗಿ ಖಲ್ಜಿ ಮಹಮೂದ್ ಅವನ ವಿರುದ್ಧ ಯುದ್ಧ ಘೋಷಿಸಿದ. ಆದರೆ ಇದು ಫಲಿಸಲಿಲ್ಲ. ಕೊನೆಗೆ ಮುಸ್ಲಿಂ ಸಂತನೊಬ್ಬನ ಮಧ್ಯಸ್ಥಿಕೆಯ ಫಲವಾಗಿ ಜೌನ್ಪುರದ ಸುಲ್ತಾನ ಕಾಲ್ಪಿಯಿಂದ ಹಿಂದಕ್ಕೆ ಸರಿದ.

ಆಗ ದಕ್ಷಿಣದಲ್ಲಿ ಅಲ್ಲಾವುದ್ದೀನ್ ಅಹಮದ್ ಬಹಮನೀ ರಾಜ್ಯದ ಸುಲ್ತಾನನಾಗಿದ್ದ. ಅವನ ಭಾವ ಜಲಾಲ್ ಖಾನ್ ಅವನ ವಿರುದ್ಧ ದಂಗೆ ಎದ್ದು ನಲ್ಗೊಂಡ ಕೋಟೆಯಲ್ಲಿ ಅಡಗಿ, ಮಾಳವದ ಸುಲ್ತಾನನ ನೆರವು ಬೇಡಿ ತನ್ನ ಮಗ ಸಿಕಂದರನನ್ನು ಕಳುಹಿಸಿದ (1455-56). ಅಲ್ಲಾವುದ್ದೀನ್ ಮರಣ ಹೊಂದಿರುವುದಾಗಿಯೂ ಬಹಮನೀ ರಾಜ್ಯ ಅರಾಜಕವಾಗಿರುವುದೆಂದೂ ಮಹಮೂದನಿಗೆ ಸಿಕಂದರ್ ಸುಳ್ಳು ಹೇಳಿ ಅವನ ಸಹಾಯವನ್ನು ಬೇಡಿದ. ಮಹಮೂದ ಇದನ್ನು ನಂಬಿ ದಕ್ಷಿಣಕ್ಕೆ ಬಂದಾಗ ಸತ್ಯ ಸಂಗತಿಯನ್ನು ತಿಳಿದು ತೆಪ್ಪನೆ ಸ್ವರಾಜ್ಯಕ್ಕೆ ಹಿಂತಿರುಗಿದ. ಇದೊಂದು ವ್ಯರ್ಥ ಪ್ರಯತ್ನವಾಯಿತು.

ಆದರೆ ಐದು ವರ್ಷಗಳ ಅನಂತರ, 1461ರಲ್ಲಿ ಪುನಃ ಬಹಮನೀ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಮಾರ್ಗದಲ್ಲಿ ಅಸೀರ್‌ಗಢವನ್ನು ಮುತ್ತಿದ. ಅದು ಅವನ ವಶವಾಗಲಿಲ್ಲ. ಆದರೆ ಖಾಂದೇಶದ ಸುಲ್ತಾನ ತಾತ್ತ್ವಿಕವಾಗಿ ಇವನ ಪರಮಾಧಿಕಾರವನ್ನು ಒಪ್ಪಿಕೊಂಡ. ಮಹಮೂದ್ ಇಷ್ಟರಿಂದ ತೃಪ್ತನಾಗಿ ಮುನ್ನಡೆದು ಬಹಮನೀ ಸೈನ್ಯವನ್ನೆದುರಿಸಿದ. ಆಗ ನಡೆದ ಘರ್ಷಣೆಯಲ್ಲಿ ಮಹಮೂದ್‍ನದೇ ಮೇಲುಗೈಯಾಗಿ, ಅಲ್ಪವಯಸ್ಕನಾದ ಸುಲ್ತಾನ ನಿಜ಼ಾಂ ಷಹ ಮತ್ತು ಅವನ ತಾಯಿ ಮಲಿಕಾ ಜಹಾನ್ ಇವರು ಬೀದರ್ ಕೋಟೆಯನ್ನು ತೊರೆದು ಫಿರೋಜಾಬಾದಿಗೆ ಹೋಗಬೇಕಾಯಿತು. ಮಹಮೂದ್ ಬೀದರವನ್ನು ಮುತ್ತಿದ. ಬಹಮನಿಯ ಸಹಾಯಕ್ಕೆ ಗುಜರಾತಿನಿಂದ ಬೇಗರ್ಹ ಧಾವಿಸಿ ಬಂದ. ಬಹಮನಿ ರಾಜ್ಯದ ಪ್ರಧಾನಿಯಾಗಿದ್ದ ಮಹಮೂದ್ ಗವಾನ್ ಈ ಸೈನ್ಯದೊಡಗೂಡಿ ಮಾಳವದ ಮಹಮೂದನ ವಿರುದ್ಧ ತೀವ್ರವಾಗಿ ಹೋರಾಡಿದ. ಮಾಳವದ ಸೈನ್ಯ ಹೆದರಿ ದಿಕ್ಕಾಪಾಲಾಗಿ ಓಡಿ ಬಹಳ ತೊಂದರೆಗಳನ್ನನುಭವಿಸಬೇಕಾಯಿತು. ಮಹಮೂದ್ ಹೇಗೋ ಜೀವದೊಡನೆ ಪಾರಾದ.

ಇಷ್ಟಾದರೂ ಮಹಮೂದ್ ತನ್ನ ಯತ್ನವನ್ನು ಬಿಡದೆ, ಪುನಃ ಬಹಮನಿಯರ ವಿರುದ್ಧ, ಆ ಸಲ ಒರಿಸ್ಸದ ಗಜಪತಿಯ ಬೆಂಬಲದೊಡನೆ, ದಂಡೆತ್ತಿ, ದೌಲತಾಬಾದಿನವರೆಗೂ ಹೋದನಾದರೂ ಬಹಮನಿ ರಾಜ್ಯಕ್ಕೆ ಗುಜರಾತಿನ ಸೈನ್ಯ ಇನ್ನೂ ಬೆಂಬಲವಾಗಿ ಇದ್ದುದನ್ನು ಗಮನಿಸಿ ಹಿಂದಕ್ಕೆ ಹೊರಳಬೇಕಾಯಿತು (1462). ಮತ್ತೆ 1466ರಲ್ಲಿ ಇವನು ಎಲಿಚಪುರವನ್ನು ಮುತ್ತಿ ಅಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದಾಗ ಬಹಮನಿಯ ಸುಲ್ತಾನ ಅವನೊಡನೆ ಶಾಂತಿಯ ಒಪ್ಪಂದ ಮಾಡಿಕೊಂಡ. ಅದರಂತೆ ಎಲಿಚಪುರದವರೆಗಿನ ಬೀರಾರ್ ಪ್ರದೇಶ ಮಹಮೂದ್‍ನ ವಶವಾಯಿತು.

ಹೀಗೆ ಸುಮಾರು 33 ವರ್ಷಗಳ ಕಾಲ ಆಳಿ 1469ರಲ್ಲಿ ಮರಣಿಸಿದ ಮಹಮೂದ್ ತನ್ನ ಆಳ್ವಿಕೆಯ ಹೆಚ್ಚಿನ ಭಾಗವನ್ನು ಯುದ್ಧಗಳಲ್ಲಿಯೇ ಕಳೆದ. ಅನೇಕ ಬಾರಿ ಸೋಲಿನ ಸವಿ ಉಂಡರೂ ಧೃತಿಗೆಡದ ಇವನ ಆಕ್ರಮಣಕಾರಿ ನೀತಿಯಿಂದ ಇವನ ರಾಜ್ಯ ವಿಸ್ತಾರಗೊಂಡಿತು. ಇವನು ತನ್ನ ರಾಜ್ಯದಲ್ಲಿ ಸುಭದ್ರವಾದ ಆಡಳಿತವನ್ನು ನೆಲೆಗೊಳಿಸಿದ. ಈತ ಹಿಂದೂ ಮತದ್ವೇಷಿಯಾಗಿದ್ದು, ಹಿಂದೂಗಳ ದೇವಾಲಯಗಳನ್ನೂ, ಇತರ ಕಟ್ಟಡಗಳನ್ನೂ ಭಿನ್ನಗೊಳಿಸುವುದರಲ್ಲಿ ವಿಶೇಷವಾದ ಆಸಕ್ತಿ ತೋರಿಸುತ್ತಿದ್ದ.

ಘಿಯಾಸುದ್ದೀನ್

[ಬದಲಾಯಿಸಿ]

ಅನಂತರ ಇವನ ಹಿರಿಯ ಮಗ ಘಿಯಾಸುದ್ದೀನ್ ಅಧಿಕಾರಕ್ಕೆ ಬಂದ. ಈತ ಶಾಂತಿಪ್ರಿಯ. ಶಾಂತಿಯಲ್ಲಿ ಈತ ಎಷ್ಟು ನಿಷ್ಠೆ ತೋರಿಸಿದನೆಂದರೆ, ದೆಹಲಿಯ ಬಹಲೂಲ್ ಲೋದಿ ಇವನ ರಾಜ್ಯದ ಪಾಲಂಪುರವನ್ನು ಮುತ್ತಿದಾಗಲೂ ತೆಪ್ಪಗಿದ್ದ. ಕೊನೆಗೆ ಮಂತ್ರಿಗಳ ಬಲವಂತಕ್ಕೆ ಇವನು ಒಂದು ಸೈನ್ಯವನ್ನು ಲೋದಿಯ ವಿರುದ್ಧ ಕಳುಹಿಸಲು ಒಪ್ಪಿಕೊಂಡ. ಗುಜರಾತಿನ ಸುಲ್ತಾನ ಚಂಪಾನೇರವನ್ನು ಮುತ್ತಿದಾಗ ಆ ರಾಜ್ಯದ ದೊರೆ ಇವನ ಸಹಾಯ ಕೋರಿದ. ಆದರೆ ಮಹಮ್ಮದೀಯರ ವಿರುದ್ಧವಾಗಿ ಒಬ್ಬ ಹಿಂದುವಿಗೆ ಸಹಾಯ ಮಾಡುವುದು ತನ್ನ ನೀತಿಯಲ್ಲವೆಂದು ಹೇಳಿ ಈತ ಸಹಾಯವನ್ನು ನಿರಾಕರಿಸಿದ. ಇದರಿಂದ ಚಂಪಾನೇರ್ ಗುಜರಾತಿಗೆ ಸೇರಿತು.

ಇಷ್ಟಾದರೂ ಎರಡು ಸಲ ಇವನು ಚಿತ್ತೂರಿನ ವಿರುದ್ಧ ಕದನ ಹೂಡಿದ. ಮೇವಾಡದಲ್ಲಿ ಆಗ ಮಹಾರಾಣ ಕುಂಭನ ಮಗ ರಾಯಮಲ್ ಆಳುತ್ತಿದ್ದ. ಅಲ್ಲಿಯ ಅಂತರಿಕ ಕಲಹಗಳು ತನಗೆ ಸಹಾಯಕವಾಗಬಹುದೆಂದು ಊಹಿಸಿ ಫಿಯಾಸ್ ಅದರ ಮೇಲೆ ಏರಿಹೋದ. ಆದರೆ ಎರಡು ಬಾರಿಯೂ ಸೋತ.[]

ಘಿಯಾಸುದ್ದೀನ್ ವಿಷಯಾಸಕ್ತನಾಗಿದ್ದ. ಈತನ ಅಂತಃಪುರದಲ್ಲಿ 12,000 ಸ್ತ್ರೀಯರಿದ್ದರಂತೆ.[] ಈತ ರಾಜ್ಯದ ಆಡಳಿತದ ಹೊಣೆಯನ್ನು ಮಗನಾದ ನಸೀರುದ್ದೀನನಿಗೆ ವಹಿಸಿ ತಾನು ಅಂತಃಪುರದಲ್ಲೇ ಕಾಲ ಕಳೆಯುತ್ತಿದ್ದ. ಇವನಿಗೆ ತನ್ನ ಧರ್ಮದಲ್ಲಿ ಅಪಾರ ಗೌರವವಿತ್ತು.

ಈತ 31 ವರ್ಷಗಳ ಕಾಲ ಆಳಿದ. ಇವನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಇವನ ಇಬ್ಬರು ಮಕ್ಕಳ ನಡುವೆ ಉತ್ತರಾಧಿಕಾರಕ್ಕಾಗಿ ಜಗಳಗಳು ನಡೆದು, ಕೊನೆಗೆ ಹಿರಿಯನಾದ ನಸೀರುದ್ದೀನ್ ತಮ್ಮನನ್ನು ಸೋಲಿಸಿ, ಕೊಂದು, ಅವನ ತಾಯಿಯಾದ ಖುರ್ಷೀದಳನ್ನು ಸೆರೆಗೆ ನೂಕಿ ಸಿಂಹಾಸನವನ್ನೇರಿದ (1500). ಇವನ ಮುದಿ ತಂದೆ ಈ ಸಂದರ್ಭದಲ್ಲಿ ಅಸಹಾಯ ಪ್ರೇಕ್ಷಕನಾಗಿ ಉಳಿದು, ಮರುವರ್ಷ (1501) ಮರಣ ಹೊಂದಿದ.[]

ನಂತರದ ಅರಸರು

[ಬದಲಾಯಿಸಿ]

ನಸೀರುದ್ದೀನ್ ಕುಡುಕ, ಕ್ರೂರಿ, ಕಾಮಾಂಧ. ರಾಜ್ಯದ ಶ್ರೀಮಂತ ವರ್ಗದವರೆಲ್ಲ ಒಂದುಗೂಡಿ ಇವನ ಮಗ ಷಿಹಾಬುದ್ದೀನನ ಪರವಾಗಿ ದಂಗೆಯೆದ್ದರು. ಸುಲ್ತಾನ ಅದನ್ನಡಗಿಸಿ ತನ್ನ ಕಿರಿಯ ಮಗ ಹುಮಾಯೂನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ. ನಸಿರುದ್ದೀನ್ ಮಡಿದಮೇಲೆ (1511) ಹುಮಾಯೂನ್ ಮತ್ತೊಮ್ಮೆ ಷಿಹಾಬುದ್ದೀನನನ್ನು ಸೋಲಿಸಿ ಇಮ್ಮಡಿ ಮಹಮೂದ್ ಷಹನೆಂಬ ಹೆಸರಿನಲ್ಲಿ ಅಧಿಕಾರಕ್ಕೆ ಬಂದ.

ಇಮ್ಮಡಿ ಮಹಮೂದ್ ಷಹ 20 ವರ್ಷಗಳ ಕಾಲ ಆಳಿದ. ಆಗ ರಾಜ್ಯದ ಹಿಂದೂ ಮುಸ್ಲಿಂ ಶ್ರೀಮಂತವರ್ಗಗಳ ನಡುವೆ ತೀವ್ರವಾದ ಘರ್ಷಣೆಗಳುಂಟಾದುವು. ಇವನು ಬಸಂತ್ ರಾಯ್ ಎಂಬ ಹಿಂದುವನ್ನು ತನ್ನ ಪ್ರಧಾನಿಯಾಗಿ ನೇಮಿಸಿಕೊಂಡಿದ್ದ. ಇದನ್ನು ಸಹಿಸದ ಮಹಮ್ಮದೀಯರು ಅವನನ್ನು ಕೊಂದರು. ಅವನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದುರಹಂಕಾರದಿಂದ ವರ್ತಿಸುತ್ತಿದ್ದನೆಂಬುದು ಅವನ ಮೇಲಿನ ಆಪಾದನೆ. ಅನಂತರ ಅಧಿಕಾರಕ್ಕೆ ಬಂದ ಇಕ್ಬಾಲ್ ಖಾನ್ ಹಾಗೂ ಮುಖ್ತಾಸ್ ಖಾನರು ಅಸೀರ್‌ಗಢದಲ್ಲಿ ವಾಸಿಸುತ್ತಿದ್ದ ಷಿಹಾಬುದ್ದೀನನ ಪಕ್ಷವನ್ನು ಕೂಡಿಕೊಂಡು ಸುಲ್ತಾನನ ಮೇಲೆಯೇ ದಂಗೆ ಎದ್ದರು. ಇವರಿಬ್ಬರ ಸ್ಥಾನಕ್ಕೆ ಬಂದ ಮುಹಾಫಿಜ ಸಹ ಕೃತಘ್ನನಾದ; ಸುಲ್ತಾನನ ಹಿರಿಯ ಸೋದರನಾದ ಸಾಹಿಬ್ ಖಾನನ ಪಕ್ಷವನ್ನು ವಹಿಸಿದ. ಸಾಹಿಬ್ ಖಾನನ ವಿರುದ್ಧ ಹೋರಾಟದಲ್ಲಿ ಮಹಮೂದ್ ತೊಂದರೆಗಳಿಗೊಳಗಾಗಿ, ಉಜ್ಜಯಿನಿಗೆ ಓಡಿಹೋಗಿ, ಅಲ್ಲಿ ಹಿಂದುಗಳ ಸಹಾಯ ಪಡೆದು. ಮೇದಿನೀ ರಾಯ್‍ನ ಸಹಾಯದಿಂದ ಸಾಹಿಬ್ ಖಾನನನ್ನು ಸೋಲಿಸಿ ರಾಜ್ಯವನ್ನು ಹಿಂದಕ್ಕೆ ಪಡೆದುಕೊಂಡ. ಮೇದಿನೀ ರಾಯ್ ಇವನ ಪ್ರಮುಖ ಸಲಹೆಗಾರನಾದ. ಆದರೆ ಕೆಲವು ವರ್ಷಗಳ ಬಳಿಕ ಈ ಹಿಂದೂ ಅಧಿಕಾರಿ ಸಹ ದರ್ಪಿಷ್ಟನಾಗಿ ವರ್ತಿಸಿ ರಾಜ್ಯದಲ್ಲಿ ಮಹಮ್ಮದೀಯರು ದಂಗೆ ಏಳಲು ಕಾರಣನಾದನೆಂದು ಹೇಳಲಾಗಿದೆ. ಇವನನ್ನು ಅಧಿಕಾರದಿಂದ ಕಿತ್ತುಹಾಕಿದಾಗ ಇವನು ಸುಲ್ತಾನನ ವಿರುದ್ಧ ನಿಂತು ಹಿಂದೂಗಳನ್ನು ಪ್ರಚೋದಿಸಿ ರಾಜ್ಯದ ಪರಿಸ್ಥಿತಿ ಉಲ್ಬಣಿಸುವಂತೆ ಮಾಡಿದ. ಹೆದರಿದ ಮಹಮೂದ್, ಗುಜರಾತಿನ ಸುಲ್ತಾನ್ ಮುಜ಼ಫರನ ಆಶ್ರಯ ಪಡೆದು, ಅವನ ಸಹಾಯದಿಂದ ತನ್ನ ರಾಜ್ಯವನ್ನು ಮತ್ತೊಮ್ಮೆ ಪಡೆದುಕೊಂಡ.

ಸೋತ ಮೇದಿನಿ ರಾಯ್ ಚಿತ್ತೂರಿನ ಮಹಾರಾಣ ಸಂಗಾನ ಸಹಾಯದಿಂದ ಪುನಃ ಮಾಳವವನ್ನು ಮುತ್ತಿದ. ಸಂಗಾ ಮಹಮೂದ್‍ನನ್ನು ಸೋಲಿಸಿ ಸೆರೆಹಿಡಿದನಾದರೂ, ಗಾಯಗೊಂಡ ಸುಲ್ತಾನನ ಆರೋಗ್ಯ ಸುಧಾರಿಸಿದ ಕೂಡಲೇ ಅವನನ್ನು ಮಾಂಡೂವಿಗೆ ಕಳಿಸಿಕೊಟ್ಟ. ಆದರೆ ಮಾಳವ ರಾಜ್ಯದ ಬಹಳ ಭಾಗಗಳು ಆ ವೇಳೆಗೆ ಸ್ವತಂತ್ರವಾಗಿದ್ದವು. ಗುಜರಾತಿನಲ್ಲಿ ಮುಜ಼ಫರನ ಬಳಿಕ ಬಹಾದೂರ್ ಷಹ ಪಟ್ಟಕ್ಕೆ ಬಂದಾಗ, ಅವನ ಪ್ರತಿಸ್ಪರ್ಧಿಯಾದ ಚಾಂದ್ ಖಾನನಿಗೆ ಮಾಳವದ ಮಹಮೂದ್ ಆಶ್ರಯ ಕೊಟ್ಟ ಕಾರಣ ಬಹಾದೂರ್ ಇವನ ಮೇಲೆ ಕದನ ಹೂಡಿ,[] ಇವನನ್ನು ಸೋಲಿಸಿ, ಬಂಧಿಸಿ ಚಂಪಾನೇರದ ಸೆರೆಮನೆಯಲ್ಲಿಡಲು ಕರೆದೊಯ್ಯುತ್ತಿದ್ದಾಗ, ತಪ್ಪಿಸಿಕೊಳ್ಳಲು ಯತ್ನಿಸಿದ. ಇವನನ್ನು ಕಾವಲುಗಾರರು ಕೊಂದರು (1531). ಇದರ ಪರಿಣಾಮವಾಗಿ ಮಾಳವ ಬಹಾದೂರ್ ಷಹನ ಪಾಲಾಯಿತು.[] ಮಾಳವದ ಖಲ್ಜಿ ಮನೆತನ ಕೊನೆಗೊಂಡಿತು.

ಉಲ್ಲೇಖಗಳು

[ಬದಲಾಯಿಸಿ]
  1. Haig, T.W. & Islam, Riazul (1991). "Mālwā". In Bosworth, C. E.; van Donzel, E. & Pellat, Ch. (eds.). The Encyclopaedia of Islam, Second Edition. Volume VI: Mahk–Mid. Leiden: E. J. Brill. ISBN 978-90-04-08112-3.
  2. Mankekar, D. r (1976). Mewar Saga.
  3. A Textbook of Medieval Indian History. Primus Books.
  4. Har Bilas Sarda "Maharana Kumbha: sovereign, soldier, scholar" pg 47
  5. Ram Vallabh Somani 1976, pp. 147.
  6. Gupta, Kamala (2003). Women In Hindu Social System (1206-1707 A.D.). New Delhi: Inter India Publications. p. 178. ISBN 978-8121004145.
  7. Allan, John Andrew; Dodwell, Henry Herbert (1936). The Cambridge Shorter History of India. Cambridge: Cambridge University Press. p. 307.
  8. Majumdar, R.C. (ed.) (2007). The Mughul Empire, Mumbai: Bharatiya Vidya Bhavan, ISBN 81-7276-407-1, pp.391-8
  9. One or more of the preceding sentences incorporates text from a publication now in the public domain: James Macnabb Campbell, ed. (1896). "II. ÁHMEDÁBÁD KINGS. (A. D. 1403–1573.)". History of Gujarát. Gazetteer of the Bombay Presidency. Vol. I(II). The Government Central Press. pp. 254–257. Archived from the original on 2018-09-19. Retrieved 2017-06-29.

ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: