ವಿಷಯಕ್ಕೆ ಹೋಗು

ಜನಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನಾನಾಕ್ಕೆ ಭೇಟಿನೀಡುತ್ತಿರುವ ರಾಜಕುಮಾರ ಅಥವಾ ಕುಲೀನ

ಜನಾನಾ ಶಬ್ದದ ಅರ್ಥ ಅಕ್ಷರಶಃ "ಮಹಿಳೆಯರದ್ದು" ಅಥವಾ "ಮಹಿಳೆಯರಿಗೆ ಸಂಬಂಧಿಸಿದ್ದು" ಎಂದು.[] ಇದು ಸಂದರ್ಭೋಚಿತವಾಗಿ ದಕ್ಷಿಣ ಏಷ್ಯಾದಲ್ಲಿ ಹಿಂದೂ ಅಥವಾ ಮುಸ್ಲಿಮ್ ಕುಟುಂಬಕ್ಕೆ ಸೇರಿದ ಮನೆಯ ಭಾಗವನ್ನು ಸೂಚಿಸುತ್ತದೆ. ಈ ಭಾಗ ಕೇವಲ ಮಹಿಳೆಯರಿಗೆ ಮೀಸಲಾಗಿತ್ತು. ಜನಾನಾದಲ್ಲಿ ಕುಟುಂಬದ ಮಹಿಳೆಯರು ಇರುತ್ತಿದ್ದರು. ಹೊರಗಿನ ಭಾಗಗಳು ಅತಿಥಿಗಳು ಮತ್ತು ಪುರುಷರಿಗಾಗಿ ಇದ್ದವು ಮತ್ತು ಇವನ್ನು ಮರ್ದಾನಾ ಎಂದು ಕರೆಯಲಾಗುತ್ತಿತ್ತು.

ಕ್ರಿಶ್ಚಿಯನ್ ಮತಪ್ರಚಾರಕರು ಜನಾನಾಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಿತ್ತು; ವೈದ್ಯೆ ಮತ್ತು ನರ್ಸುಗಳಾಗಿ ತರಬೇತಿ ಪಡೆದ ಮತಪ್ರಚಾರಕಿಯರು ಈ ಮಹಿಳೆಯರಿಗೆ ಆರೋಗ್ಯ ರಕ್ಷಣೆ ಒದಗಿಸಲು ಮತ್ತು ತಮ್ಮ ಸ್ವಂತ ಮನೆಯಲ್ಲಿ ಅವರಿಗೆ ಧರ್ಮದೀಕ್ಷೆಯನ್ನೂ ಕೊಡುವುದು ಸಾಧ್ಯವಾಗಿತ್ತು.

ಭೌತಿಕವಾಗಿ, ಮುಘಲ್ ಆಸ್ಥಾನದ ಜನಾನಾ ಅಸಾಧಾರಣವಾಗಿ ಐಷಾರಾಮಿ ಪರಿಸ್ಥಿತಿಗಳನ್ನು ಹೊಂದಿತ್ತು, ವಿಶೇಷವಾಗಿ ರಾಜಕುಮಾರಿಯರು ಮತ್ತು ಉನ್ನತ ಸ್ಥಾನಮಾನದ ವ್ಯಕ್ತಿಗಳಿಗೆ ಸಂಬಂಧಿಸಿದ ಮಹಿಳೆಯರಿಗಾಗಿ. ಮಹಿಳೆಯರ ವಸತಿಗೆ ಪ್ರವೇಶವನ್ನು ತೀವ್ರವಾಗಿ ನಿರ್ಬಂಧಿಸಿದ್ದ ಕಾರಣ, ಅವುಗಳ ವಿವರದ ಬಹಳ ಕಡಿಮೆ ವಿಶ್ವಾಸಾರ್ಹ ವರ್ಣನೆಗಳು ಲಭ್ಯವಿವೆ. ಆದರೂ, ಮುಘಲ್ ಕಾಲಕ್ಕೆ ಸಮಕಾಲೀನವಾಗಿದ್ದ ಆಸ್ಥಾನ ದಾಖಲೆಗಳು ಮತ್ತು ಪ್ರವಾಸ ಕಥನಗಳನ್ನು ಮೌಲ್ಯಮಾಪಿಸಿದ ಆಧುನಿಕ ವಿದ್ವಾಂಸರು ಮಹಿಳೆಯರ ವಸತಿಯನ್ನು ವಿವರಿಸುತ್ತಾರೆ. ಇವು ಅಂಗಳಗಳು, ಕೊಳಗಳು, ಕಾರಂಜಿಗಳು ಮತ್ತು ತೋಟಗಳನ್ನು ಹೊಂದಿದ್ದವು. ಅರಮನೆಗಳು ಸ್ವತಃ ಕನ್ನಡಿಗಳು, ವರ್ಣಚಿತ್ರಗಳು ಮತ್ತು ಅಮೃತಶಿಲೆಯಿಂದ ಅಲಂಕೃತಗೊಂಡಿರುತ್ತಿದ್ದವು. ಶಾಹ್ ಜಹಾನ್ ಮತ್ತು ಮುಮ್ತಾಜ಼್ ಮಹಲ್‍ನ ಮಗಳಾದ ಜಹಾನಾರಾ ಅಮೂಲ್ಯ ರತ್ನಗಂಬಳಿಗಳು, ಹಾರುವ ದೇವದೂತರ ಭಿತ್ತಿಚಿತ್ರಗಳಿಂದ ಅಲಂಕೃತಗೊಂಡ ತನ್ನ ಸ್ವಂತ ಕೊಠಡಿಯಲ್ಲಿ ಇರುತ್ತಿದ್ದಳು. ಆಸ್ಥಾನ ಜೀವನದ ಚಿತ್ರಣಗಳಲ್ಲಿ ಚಿತ್ರಿಸಲಾದ ಇತರ ಸೌಲಭ್ಯಗಳಲ್ಲಿ ಹರಿಯುತ್ತಿರುವ ನೀರು ಮತ್ತು ಸೂಕ್ಷ್ಮ ವಿವರಗಳಿಗೆ ಗಮನ ಕೊಡುವ ತೋಟಗಳು ಸೇರಿವೆ.

ಹೆಂಡತಿಯರು, ಉಪಪತ್ನಿಯರು, ವಿಧವೆಯರು, ಅವಿವಾಹಿತ ಸೋದರಿಯರು ಮತ್ತು ಸೋದರಸಂಬಂಧಿಗಳು, ಮತ್ತು ಅವಲಂಬಿ ಬಳಗ ಎಂದು ಪರಿಗಣಿತವಾಗಿದ್ದ ಹೆಚ್ಚು ದೂರದ ಸಂಬಂಧಿಕರು ಕೂಡ ಸೇರಿದಂತೆ ಮನೆಯ ಮಹಿಳಾ ಸದಸ್ಯರ ಪ್ರದೇಶವಾಗಿ ಜನಾನಾ ಕಾರ್ಯನಿರ್ವಹಿಸುತ್ತಿತ್ತು. ಉನ್ನತ ಸ್ಥಾನದ ಮಹಿಳೆಯರ ಜೊತೆಗೆ, ಅಲ್ಲಿರುವ ಮಹಿಳೆಯರ ಅಗತ್ಯಗಳನ್ನು ಪೂರೈಸಲು ಜನಾನಾದಲ್ಲಿ ವಿವಿಧ ಕೌಶಲ ಮತ್ತು ಉದ್ದೇಶದ ಸೇವಕಿಯರೂ ಇದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Sharmila Rege (2003). Sociology of Gender: the challenge of feminist sociological knowledge. Sage Publications. pp. 312 ff. ISBN 978-0-7619-9704-7. Retrieved 12 February 2012.
"https://kn.wikipedia.org/w/index.php?title=ಜನಾನಾ&oldid=805320" ಇಂದ ಪಡೆಯಲ್ಪಟ್ಟಿದೆ