ರೆಪ್ಪೆ ಸುರೂಪಿಕೆ
ರೆಪ್ಪೆ ಸುರೂಪಿಕೆ (ಬ್ಲೆಫರೊಪ್ಲಾಸ್ಟಿ) ಎಂದರೆ ಕಣ್ಣುರೆಪ್ಪೆಗಳ ದೋಷಗಳು, ಕುರೂಪತೆಗಳು, ವಿಕಾರಗಳನ್ನು ಸರಿಮಾಡುವ; ಮತ್ತು ಮುಖದ ಕಣ್ಣು ಪ್ರದೇಶವನ್ನು ಸುಂದರವಾಗಿ ಮಾರ್ಪಡಿಸುವ ಪ್ಲ್ಯಾಸ್ಟಿಕ್ ಸರ್ಜರಿ ಶಸ್ತ್ರಕ್ರಿಯೆ.
ಮಾನವನ ಕಣ್ಣುಗಳು ಮುಖ ತೋರಿಸುವ ಪ್ರತಿಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರವನ್ನಾಡುತ್ತದೆ. ಕಣ್ಣ ರೆಪ್ಪೆಗಳು ದೇಹದಲ್ಲಿಯೇ ತುಂಬ ತೆಳುವಾದ ಚರ್ಮವನ್ನು ಹೊಂದಿದೆ. ಅದರಲ್ಲಿನ ಸ್ಥಿತಿಸ್ಥಾಪಕಶಕ್ತಿಯ ಎಲಾಸ್ಟಿನ್ ತುಂಬ ಕಡಿಮೆ. ನಿಮಿಷಕ್ಕೆ 6 ರಿಂದ 12 ಬಾರಿ ಬಡಿಯುವ ರೆಪ್ಪೆಗಳು ಸದಾ ಕಾರ್ಯನಿರತ. ಅದರ ಮೇಲೆ ಕಣ್ಣೊರೆಸುವುದು, ಸೂರ್ಯನ ಪ್ರಭಾವ, ರಾತ್ರಿ ನಿದ್ದೆಗೆಡುವುದು, ಧೂಮಪಾನ, ಮದ್ಯಪಾನ ಮತ್ತು ಧೂಳು ತಮ್ಮ ಪ್ರಭಾವವನ್ನು ಬೀರುತ್ತವೆ. ವಯಸ್ಸಾದಂತೆ ಕಣ್ಣುಗಳಿಗೆ ಆಧಾರ ನೀಡುವ ರಚನೆಗಳು ದುರ್ಬಲಗೊಳ್ಳುತ್ತದೆ. ಅದರಿಂದಾಗಿ ರೆಪ್ಪೆಗಳು ಇಳಿಬಿದ್ದು ಮಡಿಕೆಗಳನ್ನು ಹೊಂದುತ್ತದೆ. ಕಣ್ಣಿನ ಕೆಳಗೆ ರೆಪ್ಪೆ ಇಳಿಬಿದ್ದು ಚೀಲದಂತಾಗುತ್ತದೆ. ಯೌವನದ ಅಗಲ ಕಣ್ಣುಗಳು ಸುಸ್ತಾದ ಚಿತ್ರವನ್ನು ನೀಡುತ್ತದೆ.
ಚೀಲದ ಮಡಿಕೆಯಂತಿರುವ ರೆಪ್ಪೆಗಳಿಗೆ ಕಾರಣ ಹುಡುಕಿ ಅದರ ಚಿಕಿತ್ಸೆ ಕೈಕೊಳ್ಳಬೇಕು. ಎಲ್ಲ ಬಗೆಯ ಚಿಕಿತ್ಸೆಗೆ ಮಣಿಯದೆ ಉಳಿದರೆ, ರೆಪ್ಪೆ ಸುರೂಪಿಕೆಯನ್ನು ಕೈಗೊಳ್ಳಬೇಕು. ಅಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಚರ್ಮದ ಮಡಿಕೆಗಳನ್ನು ಮತ್ತು ಕೊಬ್ಬಿನ ಸಂಗ್ರಹವನ್ನು ತೆಗೆದುಹಾಕಿ,[೧] ಸಡಿಲಗೊಂಡ ಸ್ನಾಯುಗಳ ಭಾಗವನ್ನು ಕತ್ತರಿಸಿ ಬಿಗಿಮಾಡಬೇಕು. ಇದರ ಫಲವಾಗಿ ಕಣ್ಣುಗಳಲ್ಲಿ ಯೌವನದ ಹೊಳಪು ಪುನಃ ಗೋಚರಿಸುವುದು. ಈ ಬಗೆಯ ಸುರೂಪಿಕಾ ಚಿಕಿತ್ಸೆಯನ್ನು ವೃದ್ಧಾಪ್ಯದ ಮೊದಲೇ ಕೈಕೊಳ್ಳುವುದು ಉತ್ತಮ.
ಆದರೂ ಈ ಚಿಕಿತ್ಸೆ ಕಣ್ಣ ಸುತ್ತ ಇರುವ ಸುಕ್ಕುಗಳನ್ನು ಸಂಪೂರ್ಣವಾಗಿ ಹೋಗಲಾಡಿಸದು. ಅಲ್ಲದೆ ಕಣ್ಣ ಸುತ್ತ ಇರುವ ಕಪ್ಪು ವೃತ್ತಗಳನ್ನು ಕಳೆಯದು. ಅಲ್ಲದೆ ಅದು ಕೆನ್ನೆ ಮೇಲೆ ಕಣ್ಣ ಕೆಳಗಿರುವ ಚೀಲಗಳನ್ನು ಕಳೆಯದು. ಇಲ್ಲಿ ಕೈಕೊಳ್ಳುವ ಶಸ್ತ್ರಚಿಕಿತ್ಸೆ ಕಣ್ಣು ಎತ್ತುವುದೆಂದರೂ ಅಲ್ಲಿ ಎತ್ತುವುದೇನೂ ಇಲ್ಲ. ಕೇವಲ ಅಲ್ಲಿನ ಊತಕವನ್ನು ತೆಗೆದುಹಾಕುವುದು. ಅಲ್ಲಿ ಸಂಗ್ರಹಗೊಂಡ ಕೊಬ್ಬು, ಸುಕ್ಕುಗಟ್ಟುವ ಚರ್ಮವನ್ನು ಕತ್ತರಿಸಿ ಟ್ರಿಂ ಮಾಡಲಾಗುತ್ತದೆ. ಅಲ್ಲಿನ ಪ್ರದೇಶವೆಲ್ಲವನ್ನು ನಯ (ಸ್ಮೂತ್) ಮಾಡಲಾಗುತ್ತದೆ. ಈ ಶಸ್ತ್ರಕ್ರಿಯೆ ತುಂಬ ನಾಜೂಕಾದುದು. ಕೆಲವೊಮ್ಮೆ ಲೇಸರ್ನಿಂದ ಅಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬಹುದು. ರೆಪ್ಪೆ ಸುರೂಪಿಕೆಯನ್ನು ಕೂಕುಪರೆಯ ಮೂಲಕವೂ ಕೈಕೊಳ್ಳಬಹುದು.
ಈ ಪ್ರಕ್ರಿಯೆಯು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಅಮೇರಿಕದಲ್ಲಿ ೨೦೧೪ರಲ್ಲಿ ಸರಿಸುಮಾರು 85% ರೆಪ್ಪೆ ಸುರೂಪಿಕೆ ಪ್ರಕ್ರಿಯೆಗಳನ್ನು ಮತ್ತು ಯುಕೆಯಲ್ಲಿ 88% ರೆಪ್ಪೆ ಸುರೂಪಿಕೆ ಪ್ರಕ್ರಿಯೆಗಳನ್ನು ಮಹಿಳೆಯರ ಮೇಲೆ ಕೈಗೊಳ್ಳಲಾಯಿತು.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ "Los Angeles Eye Surgery 90210". Oculoplastic Surgery. 2023-02-03. Retrieved 2023-03-28.
- ↑ "2014 Plastic Surgery Statistics Report" (PDF). American Society of Plastic Surgeons. p. 12. Archived from the original (PDF) on 16 June 2015. Retrieved 31 March 2016.
- ↑ Sedghi A (3 February 2014). "UK cosmetic surgery statistics 2013: which are the most popular?". The Guardian. Retrieved 31 March 2016.