ವಿಷಯಕ್ಕೆ ಹೋಗು

ಸದಸ್ಯ:ಜಯಲಕ್ಷ್ಮೀ ಭಟ್/ನನ್ನ ಪ್ರಯೋಗಪುಟ4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಪ್ರಭುಶಂಕರ

[ಬದಲಾಯಿಸಿ]

ಬಾಲ್ಯ

[ಬದಲಾಯಿಸಿ]

ಡಾ. ಪ್ರಭುಶಂಕರರು ಫೆಬ್ರುವರಿ ೧೫, ೧೯೨೯ರಂದು ಚಾಮರಾಜನಗರದಲ್ಲಿ ಜನಿಸಿದರು. ತಂದೆ ಕರಿಬಸಪ್ಪ, ತಾಯಿ ರುದ್ರಮ್ಮ. ಅಂದು ಹಳ್ಳಿಯಲ್ಲಿ ಅವಿದ್ಯಾವಂತರೇ ಜಾಸ್ತಿ. ಆದರೂ ತಂದೆ ತಾಯಿಗಳು ಲೋಯರ್ ಸೆಕೆಂಡರಿಯವರೆಗೆ ಓದಿದ್ದುದು ಇವರ ಅದೃಷ್ಟ. ಮಗನಿಗೂ ವಿದ್ಯೆ ಕಲಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಚಾಮರಾಜನಗರ ಮತ್ತು ಯಳಂದೂರುಗಳಲ್ಲಾಯಿತು. ಹೈಸ್ಕೂಲು ವಿದ್ಯಾಭ್ಯಾಸ ಮೈಸೂರು, ಬೆಂಗಳೂರಿನ ಪ್ರೌಢಶಾಲೆಗಳಲ್ಲಿ ನೆರವೇರಿತು. ಬೆಳೆಯುವ ದಿನಗಳಲ್ಲಿ ರಾಮಕೃಷ್ಣ ಮಿಷನ್ನಿನ ಸಂಪರ್ಕ ಅವರಿಗೆ ಲಭಿಸಿತು. ಹೀಗೆ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಜೀವನ-ಸಾಧನೆ-ಬೋಧನೆಗಳಿಂದ ಪ್ರಭಾವಿತರಾದರು. ಕಾಲೇಜು ಕಲಿತದ್ದು ಬೆಂಗಳೂರಿನಲ್ಲಿ. ತೀ.ನಂ.ಶ್ರೀ,ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಮುಂತಾದ ಶ್ರೇಷ್ಠರ ಮಾರ್ಗದರ್ಶನದಲ್ಲಿ ಕನ್ನಡ ಕಲಿತರು. ಅಂತೆಯೇ ಆರ್. ಗುರುರಾಜರಾವ್, ಎಂ.ರಾಮರಾವ್, ಎಸ್. ಅನಂತನಾರಾಯಣರವರಿಂದ ಇಂಗ್ಲಿಷ್ ಕಲಿತರು.

ಪ್ರಭುಶಂಕರರಿಗೆ ಸಾಹಿತ್ಯ ಪ್ರೇರಣೆ ದೊರೆತದ್ದು ನಾ.ಕಸ್ತೂರಿಯವರಿಂದ. ರಾಶಿಯವರು ಪ್ರಾರಂಭಿಸಿದ್ದ ‘ಕೊರವಂಜಿ’ ಮಾಸಪತ್ರಿಕೆ ಮತ್ತು ಸುಬೋಧ ರಾಮರಾಯರು ಪ್ರಾರಂಭಿಸಿ,ಜಿ.ಎಸ್. ಕೃಷ್ಣರಾಯರ ಸಂಪಾದಕತ್ವದಲ್ಲಿ ನಡೆದ ‘ನಗುವನಂದ’ ಪತ್ರಿಕೆಗಳಿಗೆ ಅವರು ಅನೇಕ ಬಿಡಿ ಬರಹಗಳನ್ನು ಬರೆದರು. ಕುವೆಂಪು, ದೇಜಗೌ, ಕ.ವೆಂ. ರಾಘವಾಚಾರ್ ಮುಂತಾದವರ ಸೆಳೆತದಿಂದ ಮೈಸೂರು ಕಾಲೇಜಿಗೆ ಸೇರಿ ಬಿ.ಎ. ಆನರ್ಸ್ ಪಡೆದು ಎಂ.ಎ. ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು. ಪ್ರಭುಶಂಕರರು ಕುವೆಂಪು ಪರಮಾಪ್ತರಲ್ಲಿ ಒಬ್ಬರು.[] ಕುವೆಂಪು ಕೈಯ್ಯಳತೆ ದೂರದಲ್ಲಿ ತಮ್ಮ ಜೀವಿತದ ಬಹುತೇಕ ಭಾಗ ಸವೆಸಿದ ಹಿರಿಯ ಜೀವ ಅವರದ್ದು. ಅವರು ಕನ್ನಡದಲ್ಲಿ ಕುವೆಂಪು ಬರಹಗಳ ಕುರಿತು ಸಮಗ್ರ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಮೊದಲಿಗರು. ನಾ. ಕಸ್ತೂರಿ ಅವರ ಶಿಷ್ಯರೂ ಆಗಿದ್ದ ಪ್ರಭುಶಂಕರರಿಗೆ ನಾ ಕಸ್ತೂರಿ ಅವರನ್ನು ಕಂಡರೆ ಸಹಾ ಆಪಾರ ಪ್ರೀತಿ. ಪು.ತಿ.ನ ಅವರು ನಿವೃತ್ತರಾಗಿದ್ದಾಗ ಅವರ ನಿವೃತ್ತ ಜೀವನದಲ್ಲಿ ಆರ್ಥಿಕ ಸಹಾಯಕವಾಗುವಂತೆ ಅವರನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ನಿಘಂಟು ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಹಿರಿಯರಲ್ಲಿನ ಭಕ್ತಿಕೂಡಾ ಪ್ರಭುಶಂಕರರದ್ದು.

ವೃತ್ತಿ ಜೀವನ

[ಬದಲಾಯಿಸಿ]

ಬೆಂಗಳೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಪ್ರಭುಶಂಕರರು ಕೋಲಾರ ಮತ್ತು ಮೈಸೂರು ಕಾಲೇಜಿನಲ್ಲಿ ೧೪ ವರ್ಷ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ ೧೪ ವರ್ಷ ಸೇವೆ ಸಲ್ಲಿಸಿದರು. ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ, ಗೃಹಸರಸ್ವತಿ ಗ್ರಂಥಮಾಲೆಯಲ್ಲಿ ಅಮೂಲ್ಯ ಗ್ರಂಥಗಳ ಪ್ರಕಟಣೆ ಮಾಡಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭಗೊಂಡಾಗ ಪ್ರಥಮ ಪ್ರಾಧ್ಯಾಪಕರಾದರು. ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಮರಳಿ, ಅಧ್ಯಯನ ಸಂಸ್ಥೆ ನಿರ್ದೇಶಕತ್ವವಹಿಸಿ. ಪ್ರಾಧ್ಯಾಪಕರಾಗಿ ನಿವೃತ್ತಿಗೊಂಡರು. ಮಂಗಳೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.

ಕೃತಿಗಳು

[ಬದಲಾಯಿಸಿ]

ಕುವೆಂಪುರವರ ವ್ಯಕ್ತಿತ್ವ, ಬೆರಳ್‌ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಶೂದ್ರತಪಸ್ವಿ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು. ಜನಮನ (ವ್ಯಕ್ತಿಚಿತ್ರ) ; ಎತ್ತಿಗೆ ಜ್ವರ ಎಮ್ಮೆಗೆ ಬರೆ’ (ಲಘು ಪ್ರಬಂಧ) ; ಜೀವ ಜೀವದ ನಂಟು (ಕಾದಂಬರಿ) ; ಅಂಗುಲಿಮಾಲ, ಆಮ್ರಪಾಲಿ (ನಾಟಕ) ; ವಿದೇಶ ಪ್ರವಾಸಾನುಭವದ ನಾನು ಮತ್ತು ಶಾಂತಿ (ಪ್ರವಾಸಕಥನ) ಮುಂತಾದವುಗಳನ್ನು ಪ್ರಕಟಿಸಿದರು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಕನ್ನಡದಲ್ಲಿ ಮೂಡುವಲ್ಲಿ ಪ್ರಭುಶಂಕರರು ಮಹಾನ್ ಸೇವೆ ಸಲ್ಲಿಸಿದ್ದಾರೆ. ಪ್ರೇಮವೇ ಮೂರ್ತಿವೆತ್ತಾದ ಬುದ್ಧನ ಕುರಿತಾದ ಪ್ರೇಮಭಿಕ್ಷು ಎಂಬ ಅವರ ಮನೋಹರ ಕೃತಿ ಹಲವಾರು ವರ್ಷಗಳ ಕಾಲ ಕಾಲೇಜು ಪಠ್ಯ ಪುಸ್ತಕವಾಗಿತ್ತು. ಅವರ ಅನೇಕ ಮನೋಲ್ಲಾಸಕರ ಹಾಸ್ಯ ಬರಹಗಳು ‘ಬೆಸ್ಟ್ ಆಫ್ ಪ್ರಭುಶಂಕರ’ದಂತಹ ಸಂಕಲನಗಳಲ್ಲಿ ಬೆಳಕು ಕಂಡು ಜನಮನವನ್ನು ತಣಿಸುತ್ತಿವೆ. ಇತ್ತೀಚಿನ ದಿನಗಳಲ್ಲ್ಲೂ ಪ್ರಭುಶಂಕರರ ಉಪನ್ಯಾಸಗಳೆಂದರೆ ಜನ ಎಲ್ಲೆಡೆಯಿಂದ ಓಡಿ ಬರುತ್ತಿದ್ದರು. ಅಷ್ಟು ವಿದ್ವತ್ಪೂರ್ಣ, ಸೊಗಸಿನ, ವಿನೋದಪೂರ್ಣ,ಅಪ್ಯಾಯಮಾನ ಮಾತುಗಾರಿಕೆ ಪ್ರಭುಶಂಕರ ಅವರದ್ದು.[]

ಪ್ರಶಸ್ತಿ

[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಡಾ. ಪ್ರಭುಶಂಕರರನ್ನು ಅರಸಿ ಬಂದಿದ್ದವು.

ಹಿರಿಯ ಸಾಹಿತಿ, ವಿದ್ವಾಂಸ, ಸದಾ ಹಸನ್ಮುಖಿ ಪ್ರಭುಶಂಕರ ಅವರು ಇಂದು (೦೮.೪.೨೦೧೮ರಂದು) ನಿಧನರಾಗಿದ್ದಾರೆ.[] ಕನ್ನಡದ ಈ ಹಿರಿಯ ವಿದ್ವಾಂಸರ ಅಗಲಿಕೆಯಿಂದ ಕನ್ನಡ ಶ್ರೇಷ್ಠ ಸಾಹಿತ್ಯ ಪರಂಪರೆಯ ಒಂದು ಬೃಹತ್ ಕೊಂಡಿ ಕಳಚಿದಂತಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://www.kannadaprabha.com/karnataka/senior-writer-dr-prabhushankar-passed-away/313757.html
  2. https://vijaykarnataka.indiatimes.com/district/mysuru/writer-dr-prabhushankar-no-more/articleshow/63672239.cms
  3. https://starofmysore.com/tag/dr-k-prabhushankar/
  4. https://citytoday.news/obituary-meet-held-for-dr-prabhushankar/