ಕೆ. ಪಿ. ಪುಟ್ಟಣ್ಣ ಚೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿವಾನ್ ಬಹದ್ದೂರ್ ಸರ್
ಕೆ. ಪಿ. ಪುಟ್ಟಣ್ಣ ಚೆಟ್ಟಿ
ವೈಯಕ್ತಿಕ ಮಾಹಿತಿ
ಜನನ ೨೯ ಏಪ್ರಿಲ್ ೧೮೫೬
ಬೆಂಗಳೂರು, ಮೈಸೂರು ಸಂಸ್ಥಾನ (ಈಗಿನ ಕರ್ನಾಟಕ)
ಮರಣ ೨೩ ಜುಲೈ ೧೯೩೮
ರಾಷ್ಟ್ರೀಯತೆ ಭಾರತೀಯ
ವೃತ್ತಿ ಮೈಸೂರು ಸಂಸ್ಥಾನದ ಲೋಕೋಪಕಾರಿ, ಮೈಸೂರು ರಾಜ್ಯದ ರೈಲ್ವೆ ಟ್ರಾಫಿಕ್ ಮ್ಯಾನೇಜರ್, ಸಹಾಯಕ ಕಮಿಷನರ್, ಡೆಪ್ಯುಟಿ ಕಮಿಷನರ್, ಜಿಲ್ಲಾಧಿಕಾರಿ
ಉದ್ಯೋಗ ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಗಳು
ಧರ್ಮ ಹಿಂದೂ

ದಿವಾನ್ ಬಹದ್ದೂರ್ ಸರ್ ಕೃಷ್ಣರಾಜಪುರ ಪಲ್ಲಿಗೊಂಡೆ ಪುಟ್ಟಣ್ಣ ಚೆಟ್ಟಿ CIE (೨೯ ಏಪ್ರಿಲ್ ೧೮೫೬- ೨೩ ಜುಲೈ ೧೯೩೮) ರವರು ಲೋಕೋಪಕಾರಿಗಳು ಹಾಗೂ ಆಗಿನ ಮೈಸೂರು ಸಂಸ್ಥಾನದ ಲೋಕೋಪಕಾರಿಯಾಗಿದ್ದರು, ಅವರು ಬೆಂಗಳೂರು ಪುರಸಭೆಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೮೭೫ ರಲ್ಲಿ ತಮ್ಮ ೧೯ನೇ ವಯಸ್ಸಿನಲ್ಲಿಯೇ ಮೈಸೂರು ಸರ್ಕಾರದ ಸಿವಿಲ್ ಸರ್ವೀಸಸ್ ಸೇರಿದ ಪುಟ್ಟಣ್ಣ ಚೆಟ್ಟಿ ಅವರು, ತಮ್ಮ ಕರ್ತವ್ಯ ನಿಷ್ಠೆ, ಆಡಳಿತ ಸಾಮರ್ಥ್ಯ, ಸರಳ ಸ್ವಭಾವದಿಂದಾಗಿ ಹಂತ ಹಂತವಾಗಿ ಅಂದಿನ ಮೈಸೂರು ರಾಜ್ಯದ ರೈಲ್ವೆ ಟ್ರಾಫಿಕ್ ಮ್ಯಾನೇಜರ್, ಸಹಾಯಕ ಕಮಿಷನರ್, ಡೆಪ್ಯುಟಿ ಕಮಿಷನರ್, ಜಿಲ್ಲಾಧಿಕಾರಿ ಇವೇ ಮುಂತಾದ ಉನ್ನತ ಹುದ್ದೆಗಳನ್ನು ಹಂತ ಹಂತವಾಗಿ ಅಲಂಕರಿಸಿ ಶಿವಮೊಗ್ಗ, ಕೋಲಾರ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದರು.[೧]

ಸರ್ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್), ಬೆಂಗಳೂರು

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

೧೮೫೬ ರ ವರ್ಷದ ಏಪ್ರಿಲ್ ೨೯ ರಂದು ಬೆಂಗಳೂರು ಬಳಿಯ ಕೃಷ್ಣರಾಜಪುರದಲ್ಲಿ ಯಲ್ಲಪ್ಪ ಚೆಟ್ಟಿ ಮತ್ತು ಯಲ್ಲಮ್ಮ ದಂಪತಿಗಳ ಸುಪುತ್ರರಾಗಿ ಲಿಂಗಾಯತ ಕುಟುಂಬದಲ್ಲಿ ಜನಿಸಿದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಇವರು ಪ್ರೌಢಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನ ವೆಸ್ಲಿಯನ್ ವಿಷನ್ ಹೈಸ್ಕೂಲಿನಲ್ಲಿಯೂ, ಕಾಲೇಜಿನ ವಿಧ್ಯಾಭ್ಯಾಸ ಸೆಂಟ್ರಲ್ ಕಾಲೇಜಿನಲ್ಲಿಯೂ ನಡೆಯಿತು. ಕಾರಣಾಂತರಗಳಿಂದ ಅವರು ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ, ಯಾವ ಪದವಿಯನ್ನೂ ಪಡೆಯಲಾಗಲಿಲ್ಲ. ಆಂಗ್ಲಭಾಷೆ ಮತ್ತು ಕನ್ನಡ ಇವೆರಡರಲ್ಲಿ ಹೆಚ್ಚಿನ ಪ್ರಭೂತ್ವವನ್ನೂ ಸಾಧಿಸಿದ್ದರು. ಸರಳ ಸ್ವಾಭಾವ ಹಾಗೂ ಕರ್ತವ್ಯ ಪ್ರಜ್ಞೆಗೆ ಹೆಸರಾದ ಇವರು ಕೊಡುಗೈ ದಾನಿಗಳಾಗಿ ಸದಾ ಬಡಜನರ ಏಳಿಗೆಗೆ ಸಹಾಯನ್ನೂ ಮಾಡುತ್ತಿದ್ದರು. ಇವರ ನಡೆ, ನುಡಿ, ಸಹಾಯ ಮನೋಭಾವ, ಮುಖಂಡತ್ವತನ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದ. ಇವರ ದೃಢ ಸ್ವಭಾವ ಹಾಗೂ ಧೀಮಂತ ವ್ಯಕ್ತಿತ್ವ ಮೈಸೂರಿನ ಜನರಿಗೆ ಅಪ್ಯಾಯಮಾನ ವಾಗಿತ್ತು. ಇವರ ನಿಸ್ವಾರ್ಥ ಸೇವಾ ಮನೋಭಾವ, ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿತು. ೧೮೭೫ ರಲ್ಲಿ ಮೈಸೂರು ನಾಗರಿಕ ಸೇವೆಗೆ ಪ್ರವೇಶಿಸಿದರು.[೨]

ವೃತ್ತಿ ಜೀವನ[ಬದಲಾಯಿಸಿ]

ಪುಟ್ಟಣ್ಣ ಚೆಟ್ಟಿರವರು ೧೮೮೪ ರಿಂದ ೧೮೯೮ ರವರೆಗೆ ಮೈಸೂರು ರಾಜ್ಯ ರೈಲ್ವೆ ಇಲಾಖೆಯಲ್ಲಿ ಟ್ರಾಫಿಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. ೧೮೯೮ ರಿಂದ ೧೯೦೬ ರವರೆಗೆ ಉಪ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. ೧೯೦೬ ರಿಂದ ೧೯೧೨ ರವರೆಗೂ ಅವರು ಬೆಂಗಳೂರು ಸಿಟಿ ಕೌನ್ಸಿಲ್ನ ಸದಸ್ಯರಾಗಿದ್ದರು. ೧೯೧೩ ರಲ್ಲಿ, ಪುಟ್ಟಣ್ಣ ಚೆಟ್ಟಿ ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾಗಿ ೧೯೧೯ ರವರೆಗೆ ಸೇವೆ ಸಲ್ಲಿಸಿದರು, ವಿಕ್ಟೋರಿಯಾ ಆಸ್ಪತ್ರೆಯನ್ನು ಉದ್ಘಾಟಿಸಿದರು ಮತ್ತು ಅವರ ಅಧಿಕಾರಾವಧಿಯಲ್ಲಿ ಅನೇಕ ಸಾರ್ವಜನಿಕ ದೇಣಿಗೆಗಳನ್ನು ಮಾಡಿದರು.

ಕೆ.ಪಿ. ಪುಟ್ಟಣ್ಣ ಚೆಟ್ಟಿಯವರು ೧೮೭೫ ರಲ್ಲಿ ಮೈಸೂರು ಸರ್ಕಾರದಲ್ಲಿ ಕರಣಿಕಾರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅನಂತರ ೧೮೮೬ ರಲ್ಲಿ ಸಹಾಯಕ ಕಮಿಷನ್ ರವರಾಗಿ, ತಮ್ಮ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಹೆಸರಾದವರು. ಇದರ ಜೊತೆಗೆ ಕೋಲಾರ ಮತ್ತು ಶಿವಮೊಗ್ಗಗಳಲ್ಲಿ ಜಿಲ್ಲಾಧಿಕಾರಿಗಳಾಗಿ ತಮ್ಮ ಕಾರ್ಯ ದಕ್ಷತೆಯಿಂದ ಜನರ ಮೆಚ್ಚುಗೆಗ ಪಾತ್ರರಾಗಿ ಪ್ರಖ್ಯಾತಿಯನ್ನೂ ಪಡೆದರು ಇವರ ಜೀವನದ ಅತ್ಯಂತ ಪ್ರಮುಖವಾದ ಘಟ್ಟವೆಂದರೆ ೧೯೧೧ ನೇ ಇಸವಿ. ಈ ಸಂವತ್ಸರದಲ್ಲಿ ಇವರು ಆಗಿನ ಮೈಸೂರು ಸಂಸ್ಥಾನದ ಕೌನ್ಸಿಲಿನ ಪ್ರಥಮ ಸದಸ್ಯರಾಗಿ ವಿಶೇಷ ಸ್ಥಾನಮಾನಗಳನ್ನು ಗಳಿಸಿಕೊಂಡರು. ಇದಲ್ಲದೆ ಶ್ರೀ ಮನ್ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ “ರಾಜಸಭಾ ಭೂಷಣ” ಎಂಬ ಪ್ರಶಸ್ತಿಯನ್ನು. ಭಾರತ ಸರ್ಕಾರದಿಂದ “ದಿವಾನ್ ಬಹದ್ದೂರ್”, ಎಂಬ ಘನ ಪ್ರಶಸ್ತಿಯನ್ನು ಗಳಿಸಿಕೊಂಡರು. ೧೯೧೨ ರಲ್ಲಿ ಇವರು ಅಧಿಕಾರದಿಂದ ನಿವೃತ್ತರಾದರು. ಆದರೂ ಇವರು ವಿಶ್ರಾಂತಿ ಜೀವನವನ್ನು ಅನುಭವಿಸಲು ಬಯಸಲಿಲ್ಲ. ಅದಕ್ಕೆ ಬದಲಾಗಿ ಇನ್ನೂ ಹೆಚ್ಚು ಸೇವಾ ಕಾಯಕಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು.

ಪುಟ್ಟಣ್ಣ ಚೆಟ್ಟಿ ೧೯೨೫ ರಲ್ಲಿ ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ನಲ್ಲಿ ಚುನಾಯಿತರಾದರು. ಚೆಟ್ಟಿಯು ಮೈಸೂರು ಬ್ಯಾಂಕ್ ಮತ್ತು ಕೇಂದ್ರ ಸಹಕಾರ ಬ್ಯಾಂಕ್, ಬೆಂಗಳೂರು, ಶ್ರೀ ಕೃಷ್ಣರಾಜೇಂದ್ರ ಮಿಲ್ಸ್ ಅಧ್ಯಕ್ಷರು ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹವರ್ತಿಯಾಗಿ ಅವರ ಜೀವನದಲ್ಲಿ ವಿವಿಧ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದರು. ೧೯೧೦ ರಿಂದ ೧೯೩೮ ರವರೆಗೆ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯಲ್ಲಿ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಪುಟ್ಟಣ್ಣ ಚೆಟ್ಟಿಯವರು ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳು[ಬದಲಾಯಿಸಿ]

  1. ಮೈಸೂರು ಬ್ಯಾಂಕಿನ ಆಡಳಿತ ಮಂಡಳಿಯ ಪ್ರಥಮ ಅಧ್ಯಕ್ಷರು ಮತ್ತು ೧೯೧೫-೧೯೨೦ ರವರೆಗೂ ಅಧ್ಯಕ್ಷರಾಗಿ ಮುಂದುವರಿಕೆ, ನಂತರ ಆಡಳಿತ ಮಂಡಳಿಯಲ್ಲಿ ಅವರ ಕೊನೆಯವರೆಗೂ ನಿರ್ದೇಶಕರಾಗಿ ಸೇವೆ.
  2. ಬೆಂಗಳೂರುಚಿಕ್ಕಬಳ್ಳಾಪುರ ರೈಲ್ವೆ ಬೋರ್ಡಿನ ಅಧ್ಯಕ್ಷರಾಗಿ.
  3. ಆರ್ಥಿಕ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ
  4. ೧೯೧೩-೧೯೨೦ ಕೈಗಾರಿಕ ಮತ್ತು ವಣಿಜ್ಯ ಮಂಡಳಿಯ ಸದಸ್ಯರಾಗಿ
  5. ಬೆಂಗಳೂರು ಮುನಿಸಿಪಾಲಿಟಿಯ ಅಧ್ಯಕ್ಷರಾಗಿ
  6. ೧೯೧೩-೧೯೨೨ ಬೆಂಗಳೂರಿನ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ
  7. ರಾಜ್ಯ ಹಣಕಾಸು ಸಮಿತಿ ಮತ್ತು ಪಶು ಸಂರಕ್ಷಣಾ ಸಮಿತಿಯ ಸದಸ್ಯರಾಗಿ
  8. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ
  9. ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ
  10. ಬೆಂಗಳೂರು ಪ್ರಿಂಟಿಂಗ್ ಪ್ರೆಸ್ ನ ಅಧ್ಯಕ್ಷರಾಗಿ
  11. ೧೯೨೧ ನೇ ಇಸವಿಯಲ್ಲಿ ೭ನೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ[೩]
  12. ೧೯೦೭-೧೯೧೭ರ ತನಕ ಸೊಲ್ಲಾಪುರದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ
  13. ರಾವ್ ಬಹದ್ದೂರ್ ಧರ್ಮ ಪ್ರವರ್ತಕ ಶ್ರೀ ಗುಬ್ಬಿ ತೋಟದಪ್ಪನವರ ಧರ್ಮಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
  14. ಮೈಸೂರು ಲಿಂಗಾಯತ ವಿದ್ಯಾಭಿವೃದ್ಧಿ ಸಂಘದಲ್ಲಿ ಅಧ್ಯಕ್ಷರಾಗಿ ೧೭ ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.

ಸಮಾಜ ಸೇವೆ[ಬದಲಾಯಿಸಿ]

೧೯೧೨ ರಲ್ಲಿ ನಿವೃತ್ತರಾದ ಪುಟ್ಟಣ್ಣ ಚೆಟ್ಟಿ ಅವರು, ನಂತರ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಆ ದಿನಗಳಲ್ಲಿ ಪ್ರಾರಂಭವಾದ ಬಹುತೇಕ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆ ಮತ್ತು ಮಾರ್ಗದರ್ಶನದಲ್ಲಿ ಪುಟ್ಟಣ್ಣ ಚೆಟ್ಟಿಯವರ ಪ್ರಮುಖ ಪಾತ್ರವಿದೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷತೆ, ಮೈಸೂರ್ ಬ್ಯಾಂಕಿನ ಅಧ್ಯಕ್ಷತೆ, ಬೆಂಗಳೂರು ಪೌರಸಭಾದ ಅಧ್ಯಕ್ಷತೆ ಮುಂತಾದ ಜವಾಬ್ಧಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಇದಲ್ಲದೆ ರೈಲ್ವೆ ಮಂಡಳಿ, ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರ್ ಪ್ರೆಸ್, ಮೈಸೂರು ಕೃಷ್ಣರಾಜೇಂದ್ರ ಮಿಲ್ಸ್, ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ಸಹಾ ಅವರು ಅಪಾರವಾಗಿ ಶ್ರಮಿಸಿದರು. ಮೈಸೂರು ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆಗಳಲ್ಲಿ ಸಹಾ ಅವರು ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದರು. ಗುಬ್ಬಿ ತೋಟದಪ್ಪನವರ ಧರ್ಮನಿಧಿ, ಆರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರ್ ಧರ್ಮನಿಧಿ ಮುಂತಾದ ಅನೇಕ ಧರ್ಮಸಂಸ್ಥೆಗಳಿಗೆ ಅವರು ನ್ಯಾಯಪಾಲಕರಾಗಿದ್ದರು.

೧೯೧೩ ರಿಂದ ೧೯೨೨ ರ ಅವಧಿಯಲ್ಲಿ ತಾವು ಬೆಂಗಳೂರು ನಗರಸಭೆಯ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪುಟ್ಟಣ್ಣ ಚೆಟ್ಟಿಯವರು ನಗರಸಭೆಯ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಿದರಲ್ಲದೆ, ಹೊಸ ಮಾರುಕಟ್ಟೆಗಳು, ಕೈಗಾರಿಕಾ ಪ್ರದೇಶಗಳು, ಬಡಜನತೆಗಾಗಿ ವಸತಿ ಸೌಕರ್ಯ, ಒಳಚರಂಡಿ ವ್ಯವಸ್ಥೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತ ಮಾಡಿದರು. ೧೯೧೮-೧೯ ರಲ್ಲಿ ಸಾಂಕ್ರಾಮಿಕ ರೋಗ ಹಾಗೂ ತೀವ್ರ ಆಹಾರ ಕೊರತೆ ಉಂಟಾದಾಗ ಇವರು ಕಾರ್ಯನಿರ್ವಹಿಸಿದ ರೀತಿ ಅನುಕರಣೀಯವಾದದ್ದು ಎಂಬ ಶ್ಲಾಘನೆ ಎಲ್ಲೆಲ್ಲೂ ಮಾರ್ದನಿಸಿತು.

ಪುರಭವನ ನಿರ್ಮಾಣಕ್ಕಾಗಿ ೭೫,೦೦೦ ರೂ., ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ನಿರ್ಮಾಣಕ್ಕೆ ೨೫,೦೦೦ ರೂ, ಮೈಸೂರು ವಿಶ್ವವಿದ್ಯಾಲಯಕ್ಕೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ೨೦,೦೦೦ ರೂ, ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸವನಗುಡಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯ ಕಟ್ಟಿದ್ದಲ್ಲದೆ ಅದಕ್ಕೆ ೮೫,೦೦೦ ರೂ. ಗಳನ್ನು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯ ವರ್ಗದ ಸದಸ್ಯರಾಗಿದ್ದ ಪುಟ್ಟಣ್ಣ ಚೆಟ್ಟಿಯವರು ಪರಿಷತ್ತಿಗೆ ಅಪಾರ ಧನಸಹಾಯ ಮಾಡಿ ಅದರ ಅಭಿವೃದ್ಧಿಗೆ ಕಾರಣರಾದರು.

ನಿಧನ[ಬದಲಾಯಿಸಿ]

ದಿವಾನ್ ಬಹದ್ದೂರ್ ಸರ್ ಪುಟ್ಟಣ್ಣ ಚೆಟ್ಟಿಯವರು ಜುಲೈ ೨೩, ೧೯೩೮ರ ವರ್ಷದಲ್ಲಿ ತಮ್ಮ ಎಂಭತ್ತೆರಡರ ವಯಸ್ಸಿನಲ್ಲಿ ನಿಧನರಾದರು.

ಗೌರವಗಳು[ಬದಲಾಯಿಸಿ]

  • ಬ್ರಿಟಿಷ್ ಸರ್ಕಾರ ಇವರಿಗೆ ‘ಸರ್’ ಬಿರುದನ್ನು ನೀಡಿತು.
  • ೧೯೧೧ ರಲ್ಲಿ ಪುಟ್ಟಣ್ಣ ಚೆಟ್ಟಿಯವರ ಸೇವೆಯನ್ನು ಬಹುವಾಗಿ ಮೆಚ್ಚಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ರಾಜ್ಯಸಭಾ ಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿದರು.
  • ೧೯೧೧ ರಲ್ಲಿ ಭಾರತ ಸರ್ಕಾರ ‘ದಿವಾನ್ ಬಹದ್ದೂರ್’ ಪ್ರಶಸ್ತಿ ನೀಡಿ ಗೌರವಿಸಿತು
  • ೧೯೧೭ ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು ಗೋಲ್ಡ್ ಕೈಸರ್-ಇ-ಹಿಂದ್ ಪದಕಗಳನ್ನು ನೀಡಲಾಯಿತು.
  • ೧೯೧೭ ರಲ್ಲಿ, ಅವರು ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದ ಇಂಡಿಯನ್ ಎಂಪೈರ್ ಆಗಿದ್ದರು ಮತ್ತು ತರುವಾಯ ೧೯೨೫ ರಲ್ಲಿ ನೈಟ್ ಬ್ಯಾಚಲರ್ ಆಗಿ ನೇಮಕಗೊಂಡರು.
  • ೧೯೧೭ ರಲ್ಲಿ ಇವರಿಗೆ Kt., C.I.E. ಎಂಬ ಶೈಕ್ಷಣಿಕ ಬಿರುದನ್ನು (Company of the Indian Empire) ನೀಡಲಾಗಿದೆ.
  • ೧೯೨೧ ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇವರನ್ನು ಗೌರವಿಸಿತು.
  • ೧೯೨೫ ರಲ್ಲಿ ‘ಕೈಸರ್ ಹಿ ಹಿಂದ್’ ಪದಕ ಪಾರಿತೋಷಕ ಗೌರವವನ್ನು ಇವರಿಗೆ ಸಮರ್ಪಿಸಲಾಯಿತು
  • ೧೯೩೬ ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.
  • ೧೯೩೬ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ L.L.D (Doctor of Laws) ಎಂಬ ಗೌರವ ಸನ್ಮಾನವೂ ದೊರಕಿದೆ.

ಉಲ್ಲೇಖಗಳು[ಬದಲಾಯಿಸಿ]

  • Mysore Gazetteer. p. 3156.
  1. http://www.sallapa.com/2016/04/blog-post_29.html
  2. http://www.thenewsism.com/2017/04/19/kp-puttanna-chetti/[ಶಾಶ್ವತವಾಗಿ ಮಡಿದ ಕೊಂಡಿ]
  3. https://vijaykarnataka.indiatimes.com/lavalavk/weekly-magazine/-/articleshow/12909775.cms