ಹೋಮೋ ಹೆಬಿಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೋಮೋ ಹೆಬಿಲಿಸ್
ಕಾಲಮಾನದ ವ್ಯಾಪ್ತಿ: ೨.೮೬೫ ರಿಂದ ೧.೫ ದವಹಿಂ
ಆರಂಭಿಕ ಪ್ಲಿಸ್ಟೋಸಿನ್
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ಕ್ಲಾಡ್: ಸಿನಾಪ್ಸಿಡ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಕುಟುಂಬ: ಹೋಮಿನಿಡೇ
ಬುಡಕಟ್ಟು ಹೋಮಿನಿನಿ
ಕುಲ: ಹೋಮೋ
ಪ್ರಭೇದ: ಹೆಬಿಲಿಸ್
ದ್ವಿಪದ ಹೆಸರು
ಹೋಮೋ ಹೆಬಿಲಿಸ್
ಲೀಕಿ ಮತ್ತು ಇತರರು, ೧೯೬೪

ಹೋಮೋ ಹೆಬಿಲಿಸ್ ಹೋಮಿನಿನಿ ಬುಡಕಟ್ಟಿನ ದ್ವಿಪಾದಿಗಳಲ್ಲೊಂದು ಮತ್ತು ಸುಮಾರು ೨.೮ ರಿಂದ ೧.೫ ದಶಲಕ್ಷ ವರುಷಗಳ ಹಿಂದೆ ಇದು ಬದುಕಿತ್ತು. ಇದನ್ನು ಮೊದಲು ಲೂಯೀಸ್ ಮತ್ತು ಮೇರಿ ಲೀಕಿ ವಿಜ್ಞಾನಿ ದಂಪತಿಗಳು ತಂಜಾನಿಯದ ಓಲ್ಡುವೈ ಗಾರ್ಗ್‌ನಲ್ಲಿ ೧೯೬೦-೧೯೬೩ರ ನಡುವೆ ಸಾವಿರಾರು ಕಲ್ಲಿನ ಪರಿಕರಗಳೊಂದಿಗೆ (ಟೂಲ್) ಪತ್ತೆ ಮಾಡಿದರು. ಇದಕ್ಕೆ ಹೋಮೋ ಹೆಬಿಲಿಸ್ ಎಂದು ಹೊಸ ಪ್ರಭೇದದ ಹೆಸರು ಕೊಡಲಾಯಿತು. ಈ ಹೆಸರನ್ನು ರೈಮಂಡ್ ಡಾರ್ಟ್ ಸೂಚಿಸಿದರು.[೧]

ಆರಂಭದಲ್ಲೇ ಹಲವು ವಿವಾದಗಳಿಗೆ ಕಾರಣವಾದ ಇದನ್ನು ತಜ್ಞರು ಹಲ್ಲುಗಳು, ಸಾಕ್ಷೇಪಿಕವಾಗಿ ದೊಡ್ಡ ಮೆದುಳಿನ ಗಾತ್ರದ ಕಾರಣಕ್ಕೆ ಹೋಮೋ ಪ್ರಭೇದದಲ್ಲಿ ಸೇರಿಸಿದರು. ಆದರೆ ಅದೇ ಪ್ರದೇಶದಲ್ಲಿ ಆ, ಬೋಯಿಸೇಯಿ (ಪರಾಂತ್ರೋಪಸ್ ಬೋಯಿಸೇಯಿ) ದೊರೆತ ಕಾರಣಕ್ಕೆ ಬಹಳಷ್ಟು ಕಾಲ ವಿದ್ವಾಂಸರು ಇದನ್ನು ಒಪ್ಪಿಕೊಳ್ಳಲಿಲ್ಲ.

ವಿವಾದ[ಬದಲಾಯಿಸಿ]

ನವೆಂಬರ್ ೧೯೬೦ರಲ್ಲಿ ಲೂಯಿಸ್ ಲೀಕಿಯ ದೊಡ್ಡ ಮಗ ಜೊನಾಥನ್ ಲೀಕಿ ಮತ್ತು ಮೇರಿ ಲೀಕಿ ಸುಮಾರು ೧೨ ವರುಷದಷ್ಟು ಎಳೆಯ ನರವಾನರ (ಹೋಮಿನಿಡ್) ತಲೆಬುರುಡೆ ಮತ್ತು ಕೆಳ ದವಡೆಯನ್ನು ಪತ್ತೆ ಮಾಡಿದರು. ನಂತರದ ಮೂರು ವರುಷಗಳಲ್ಲಿ ಪಾದ, ಕೈ ಮತ್ತು ಪಕ್ಕೆಲುಬುಗಳ ಪಳೆಯುಳಿಕೆಗಳು ಪತ್ತೆಯಾದವು. ‌ಇವು ಇದುವರೆಗೂ ಪತ್ತೆಮಾಡಿದ ಜಿಂಜಾಂತ್ರೊಪಸ್‌ಗಿಂತ ಭಿನ್ನವಾದ ಜೀವಿಯದು ಎಂದು ಲೀಕಿ ಭಾವಿಸಿದ.[೨]pages:141-142 ಲೂಯಿಸ್ ಲೀಕಿ, ಫಿಲಿಪ್ ಟೋಬಿಯಾಸ್ ಮತ್ತು ಜಾನ್ ರಸೆಲ್ ನೇಪಿಯರ್ ೧೯೬೪ರಲ್ಲಿ ನೇಚರ್ ನಿಯತಕಾಲಿಕದಲ್ಲಿ ಹೊಸ ಹೋಮೋ ಪ್ರಭೇದ ಹೋಮೋ ಹೆಬಿಲಿಸ್ ಪತ್ತೆಯಾದುದಾಗಿ ಪ್ರಕಟಿಸಿದರು.[೩]

ಅಂದಿನ ವಿಕಾಸದ ಬಗೆಗಿನ ವಿದ್ವಾಂಸರ ಚಿಂತನೆಗಳಿಗೆ ಮಾರ್ವಿನ್ ಲ್ಯೂಬ್‌ನೌ ಅವರ ಈ ಹೇಳಿಕೆ ಕನ್ನಡಿ ಹಿಡಿಯುತ್ತದೆ. ಅವರನ್ನು ಹೀಗೆ ಉಲ್ಲೇಖಿಸಲಾಗಿದೆ: “ಒಂದು ತಾತ್ತ್ವಿಕ ಸಮಸ್ಯೆಯೂ ಸಹ ವಿವಾದದ ಕೇಂದ್ರದಲ್ಲಿತ್ತು. ಅಂದು ಒಪ್ಪಿತ ಮಾನವ ವಿಕಾಸದ ಚಿತ್ರಣವು ಆಸ್ಟ್ರಾಲೋಪಿತೆಕಸ್ ಆಫ್ರಿಕಾನಸ್‌ನಿಂದ (ಟಾಂಗನ್ನೂ ಒಳಗೊಂಡು) ಹೋಮೋ ಎರೆಕ್ಟಸ್‌ಗೂ ಮತ್ತು ನಂತರದಲ್ಲಿ ಹೋಮೋ ಸೆಪಿಯನ್ಸ್‌ಗೂ ಹೋಗುತ್ತಿತ್ತು. ಹಲವು ವಿಕಾಸ ತಜ್ಞರ ಪ್ರಕಾರ ಆಫ್ರಿಕಾನಸ್ ಮತ್ತು ಎರಕ್ಟಸ್‌ ನಡುವೆ ಇನ್ನೊಂದು ಪ್ರಬೇದಕ್ಕೆ ‘ಅವಕಾಶ’ವಿರಲಿಲ್ಲ ಮತ್ತು ಅದರ ಅಗತ್ಯವೂ ಇರಲಿಲ್ಲ.”[೪] ಹೀಗಾಗಿ ಬಹಳಷ್ಟು ವಿದ್ವಾಂಸರು ಈ ಹೊಸ ಪ್ರಭೇದವನ್ನು ಕಟು ವಿಮರ್ಶೆಯಿಂದ ಸ್ವಾಗತಿಸಿದರು.

ಹಲವರಿಗೆ ಜಿಂಜಾಂತ್ರೋಪಸ್, ಹೋಮೋ ಹೆಬಿಲಿಸ್ ಮತ್ತು ಕಲ್ಲಿನ ಪರಿಕರಗಳು ಒಂದೇ ಕಾಲಮಾನದಲ್ಲಿ ದೊರೆತದ್ದು ಒಂದು ಪರಿಹರಿಸಲಾಗದ ಸಮಸ್ಯೆಯಾಗಿ ಕಂಡಿತು. ಹೀಗಾಗಿ ಹಲವರು ಹೋಮೋ ಹೆಬಿಲಿಸ್ ಅದುವರೆಗೂ ಇದ್ದ ಅಸ್ಟ್ರಾಲೋಪಿತೆಕಸ್ ಪ್ರಭೇದಗಳ ಮತ್ತು ಹೋಮೋ ಎರೆಕ್ಟಸ್‌ನ ಮಿಶ್ರಣ ಎಂದು ಭಾವಿಸಿದರು. ಅಲ್ಲದೆ ಹೋ. ಹೆಬಿಲಿಸ್‌ನ ಮಿದುಳಿನ ಗಾತ್ರದ ಬಗೆಗಿನ ಟೋಬಿಯಾಸ್ ಅವರ ಅಂದಾಜು ೬೭೫ ರಿಂದ ೬೮೯ ಘನ ಸೆಂಮೀ ಆಗಿತ್ತು ಮತ್ತು ಇದು ಆರ್ಥರ್ ಕೀತ್ ಸೂಚಿಸಿದ ಮಾನವ ಎಂದು ಪರಿಗಣಿಸಲು ಇರುವ ಮೆದುಳಿನ ಕೆಳಗಿನ ಮಿತಿಯಾದ ೭೫೦ ಘನ ಸೆಂಮೀಗೂ ಕಡಿಮೆ ಇತ್ತು.[೫] ಅಲ್ಲದೆ ಪತ್ರಿಕೆಯೊಂದರಲ್ಲಿನ ವಿಮರ್ಶೆಗೆ ಉತ್ತರವಾಗಿ ಟೋಬಿಯಾಸ್ ಮತ್ತು ನೇಪಿಯರ್ ಹೆಬಿಲಿಸ್‌ಹೋಮೋ ವರ್ಗೀಕರಣಕ್ಕೆ ಪೂರಕವಾಗಿ ಕಲ್ಲಿನ ಪರಿಕರಗಳ ಬಳಕೆಯ ಪುರಾವೆಯನ್ನು (ಸಾಂಸ್ಕೃತಿಕ ಪುರಾವೆಗಳನ್ನು) ಬಳಸಿದುದು ಮತ್ತು ಈ ಬಗೆಗೆ ಲೂಯಿಸ್‌ ಲೀಕಿಯ ನಿಲುವು ಸಹ ಇಬ್ಬಂದಿಕರವಾಗಿದ್ದುದು ವಿಮರ್ಶೆಗೆ ಒಳಗಾಯಿತು.[೨]page: 146 ಇದು ಜೀವಿಯ ರಚನೆಯಲ್ಲದೆ ಸಾಂಸ್ಕೃತಿಕ ಆಯಾಮಗಳನ್ನು ಪ್ರಭೇದ ನಿರ್ದಾರದಲ್ಲಿ ಒಳತರಲಾಗಿದೆ ಎಂಬ ಅಪಾದನೆಗೆ ಎಡೆ ಮಾಡಿಕೊಟ್ಟಿತ್ತು. ಜೊತೆಗೆ ಲೀಕಿಯ ನಿಲುವಾದ ಹೋ. ಹೆಬಿಲಿಸ್ ನೇರವಾಗಿ ಹೋಮೋ ಸೆಪಿಯೆನ್ಸ್‌ಗೆ ಹಾದಿ ಮಾಡಿಕೊಟ್ಟಿತು ಎಂಬುದು ಸಹ ವಿವಾದಾಸ್ಪದವಾಗಿ ಪರಿಣಮಿಸಿತು. ಈ ನಿಲುವಿಗೆ ಭಿನ್ನವಾಗಿ ಟೋಬಿಯಾಸ್ ಮತ್ತು ನೇಪಿಯರ್ ಆಸ್ಟ್ರಾಲೋಪಿತೆಕಸ್ ಮತ್ತು ಹೋಮೋ ಎರೆಕ್ಟಸ್ ಮಧ್ಯದ ಜೀವಿಯಾಗಿ ಹೋ. ಹೆಬಿಲಿಸ್‌ನ್ನು ನೋಡುತ್ತಾರೆ.[೨]: pages 145-146 ಹೀಗೆ ಹಲವು ರೀತಿಗಳ ವಿಮರ್ಶೆಗೆ ಗುರಿಯಾದ ಈ ಪ್ರಭೇದವನ್ನು ವಿಜ್ಞಾನಿಗಳು ಸಾಮಾನ್ಯವಾಗಿ ಒಪ್ಪಿಕೊಳ್ಳಲು ಸುಮಾರು ೨೦ ವರುಷಗಳೇ ಬೇಕಾದವು.[೬]

ರಚನೆ[ಬದಲಾಯಿಸಿ]

ಚಿತ್ರ:Homo habilis.JPG
ಹೆಮೆ ಮ್ಯೂಸಿಯಂ ಒಂದರ ಹೋಮೋ ಹೆಬಿಲಿಸ್‌ನ ಮರುರಚನೆ

ಆಧುನಿಕ ಮಾನವನಿಗೆ ಹೋಲಿಸಿದರೆ ಹೋ. ಹೆಬಿಲಿಸ್‌ನ ಕೈಗಳು ದೇಹದ ಹೋಲಿಕೆಯಲ್ಲಿ ತೀರಾ ಉದ್ದ. ಇದು ಆಸ್ಟ್ರಾಲೋಪಿತೆಸಿನಗಿಂತ ಕಡಿಮೆ ಮುಂಚಾಚಿದ ಮುಖವನ್ನು ಹೊಂದಿದೆ ಮತ್ತು ಇದರ ಮೆದುಳಿನ ಗಾತ್ರ ಮಾನವನ ಮೆದುಳಿನ ಗಾತ್ರದ ಅರ್ಧಕ್ಕಿಂತ ತುಸು ಕಡಿಮೆ. ಇದು ತೀರಾ ಪ್ರಾಚೀನ ಕಲ್ಲಿನ ಪರಿಕರಗಳೊಂದಿಗೆ ಕಂಡು ಬಂದಿದೆ. ಈಗಲೂ ಕೆಲವರು ಇದರ ವರ್ಗೀಕಣವನ್ನು ಒಪ್ಪಿಕೊಂಡಿಲ್ಲ ಮತ್ತು ಇದು ಆಸ್ಟ್ರಾಲೋಪಿತೆಕಸ್ ಮತ್ತು ಇತರ ಹೋಮೋ ಪ್ರಭೇದಗಳ ಮಿಶ್ರಣ ಎಂದೇ ಭಾವಿಸುತ್ತಾರೆ.[೭] ೨೦೦೭ರ ಪುರಾವೆಗಳು ಹೋ. ಹೆಬಿಲಿಸ್ ಮತ್ತು ಹೋ. ಎರೆಕ್ಟಸ್‌ಗಳು ಒಂದೇ ಕಾಲದಲ್ಲಿ ಬದುಕಿದ್ದವು ಎಂದು ಸೂಚಿಸುತ್ತವೆ,[೮] ಈ ಬಗೆಗಿನ ಬದಲೀ ವಿವರಣೆಯು ಬಹುಶಹ ಹೋ. ಹೆಬಿಲಿಸ್ ಎರಡು ಗುಂಪುಗಳಾಗಿ ಒಡೆದು ಒಂದು ಗುಂಪು ಹೋ. ಎರೆಕ್ಟಸ್ ಆಗಿ ಬದಲಾಯಿತು ಮತ್ತು ಇನ್ನೂಂದು ಗುಂಪು ಹಾಗೆಯೇ ಉಳಿದುಕೊಂಡು ಮುಂದೆ ಅಳಿದಿರ ಬೇಕು ಎನ್ನುತ್ತದೆ.[೯] ಇದರ ಮೆದುಳಿನ ಗಾತ್ರ ಸುಮಾರು ೬೪೦ ಘನ ಸೆಂಮೀ ಮತ್ತು ಇದು ಆಸ್ಟ್ರಾಲೋಪಿತೆಸಿನಗಳ ಮೆದುಳಿಗಿಂತ ಶೇ ೫೦ ಹೆಚ್ಚು ಆದರೆ ಮಾನವನ ಮೆದುಳಿನ ಗಾತ್ರವಾದ ೧೩೫೦-೧೪೫೦ ಘನ ಸೆಂಮೀ ಹೋಲಿಸಿದಲ್ಲಿ ತೀರಾ ಕಡಿಮೆ. ಇದರ ಎತ್ತರ ಮಾನವರಿಗಿಂತ ಕಡಿಮೆ ಇದ್ದು, ಸುಮಾರು ೧.೩ ಮೀ (ಅಥವಾ ೪ ಅಡಿ ೩ ಇಂಚು) ಆಗಿತ್ತು. ಇತಿಯೋಪಿಯಾದ ಆಫಾರ್ ಪ್ರದೇಶದಲ್ಲಿ ೨೦೧೩ರಲ್ಲಿ ಪತ್ತೆಯಾದ ದವಡೆ ಮೂಳೆಯ ತುಂಡಿನ ಪಳೆಯುಳಿಕೆ ಕಾಲಮಾನ ೨.೮ ದಶಲಕ್ಷ ವರುಷ ಹಿಂದೆ ಮತ್ತು ಇದುವರೆಗೆ ದೊರೆತ ಹೋಮೋ ಪ್ರಭೇದದ ಅತಿ ಪ್ರಾಚೀನ ಪಳೆಯುಳಿಕೆ ಇದು.[೧೦]

ಓಲ್ಡುವಾನ್ ಸಂಪ್ರದಾಯದ ಕಡಿಗತ್ತಿ

ವಿಶ್ಲೇಷಣೆ[ಬದಲಾಯಿಸಿ]

ಆಹಾರ ಪದ್ಧತಿಯ ಬಗೆಗಿನ ವಿಶ್ಲೇಷಣೆಗಳು ಇದರ ಆಹಾರವು ಗಟ್ಟಿಯಾದ ಆಹಾರ ಮತ್ತು ಎಲೆಗಳ ಆಹಾರದ ನಡುವೆ ಇತ್ತು ಎಂದು ಸೂಚಿಸುತ್ತವೆ.[೧೧] ಹಲ್ಲಿನ ಮೇಲೆ ಉಂಟಾದ ಮೈಕ್ರೋವಿಯರ್ ಟೆಕ್ಸರ್ (ತೀರಾಸಣ್ಣ ಸವೆಯುವಿಕೆ ವಿನ್ಯಾಸ) ವಿಶ್ಲೇಷಣೆಯ ಆಧಾರದ ಮೇಲೆ ಈ ಬಗೆಗೆ ಹೇಳಿದ್ದು ಇದು ಸಾಮಾನ್ಯವಾಗಿ ಹೋ. ಹೆಬಿಲಿಸ್ ಸರ್ವಭಕ್ಷಿಯಾದುದರ ಸೂಚನೆ ನೀಡುತ್ತದೆ ಎನ್ನಲಾಗಿದೆ.[೧೨]

ಇದು ಕೆಳ ಶಿಲಾಯುಗದ ಓಲ್ಡೊವಾನ್ ಪರಿಕರಗಳ[೧೩] ತೆಳು ಚಕ್ಕೆಗಳನ್ನು ಬಳಸುವುದರಲ್ಲಿ ನಿಷ್ಠಾತವಾಗಿತ್ತು ಎಂದು ಭಾವಿಸಲಾಗಿದೆ. ಪ್ರಾಣಿಗಳನ್ನು ಕೊಲ್ಲಲು ಮತ್ತು ಅದರ ಚರ್ಮವನ್ನು ಸುಲಿಯಲು ಈ ಕಲ್ಲಿನ ಚಕ್ಕೆಗಳನ್ನು ಬಳಸಲಾಯಿತು.[೧೪] ಈ ಪರಿಕರಗಳು ಇದುವರೆಗೂ ಬಳಸಿದ ಪರಿಕರಗಳಿಗಿಂತ ಹೆಚ್ಚು ಅಭಿವೃದ್ಧಿಯಾಗಿದ್ದು ಪ್ರೈಮೇಟ್‌ಗಳಿಗೆ ಪ್ರತಿಕೂಲ ವಾತಾವರಣವನ್ನು ಹೋ. ಹೆಬಿಲಿಸ್ ಎದುರಿಸಲು ಇವು ಸಹಾಯ ಮಾಡಿದವು ಎನ್ನಲಾಗಿದೆ. ಆದರೆ ಮೊದಲು ಪರಿಕರಗಳನ್ನು ಇದೇ ಬಳಕೆ ಮಾಡಿತು ಎಂಬುದು ವಿವಾದಾಸ್ಪದವಾಗಿದ್ದು ಆಸ್ಟ್ರಾಲೋಪಿತೆಕಸ್ ಗಾರ್ಹಿ ಸುಮಾರು ೨.೬ ದವಹಿಂ ಪರಿಕರಗಳೊಂದಿಗೆ ಕಂಡುಬಂದಿದೆ.

ಬಹಳಷ್ಟು ವಿದ್ವಾಂಸರು ಆಸ್ಟ್ರಾಲೋಪಿತೆಸಿನ ಮತ್ತು ಚಿಂಪಾಜಿಗಿಂತ ಇದರ ಬುದ್ಧಿವಂತಿಕೆ ಮತ್ತು ಸಾಮಾಜಿಕ ಸಂಘಟನೆ ಹೆಚ್ಚು ಸಂಕೀರ್ಣವಾಗಿತ್ತು ಎಂದು ಭಾವಿಸುತ್ತಾರೆ. ಇವು ಮೂಲಭೂತವಾಗಿ ಪರಿಕರಗಳನ್ನು ರಕ್ಷಣೆ ಮತ್ತು ಬೇಟಗಳಿಗಾಗಿ ಬಳಸುತ್ತಿರಲಿಲ್ಲ ಬದಲಾಗಿ ಕೊಳೆತ ಮಾಂಸವನ್ನು ಬೇರ್ಪಡಿಸಲು ಬಳಸುತ್ತಿತ್ತು ಎನ್ನಲಾಗಿದೆ. ಈ ಪರಿಕರಗಳ ಹೊರತಾಗಿಯೂ ಇದು ಇತರ ಸಹೋದರ ಪ್ರಭೇದಗಳಂತೆ ತಂತ್ರದ ಬೇಟೆಗಾರನಾಗಿರಲಿಲ್ಲ ಮತ್ತು ದೊಡ್ಡ ಮಾಂಸಹಾರಿ ಪ್ರಾಣಿಗಳ ಆಹಾರವಾಗುತ್ತಿತ್ತು ಎಂದು ಪುರಾವೆಗಳು ತಿಳಿಸುತ್ತವೆ.[೧೫]

ಹೋ. ಹೆಬಿಲಿಸ್ ಇತರ ಹೋಮೋ ಮತ್ತು ಪರಾಂತ್ರೋಪಸ್ ಬೋಯಿಸೇಯಿನಂತಹ ದ್ವಿಪಾದಿಗಳೊಂದಿಗೆ ಹಲವು ದಶಲಕ್ಷ ವರುಷಗಳ ಕಾಲ ಸಮಕಾಲೀನಾಗಿತ್ತು. ಅದು ಬಹುಶಹ ಆರಂಭಿಕ ಪರಿಕರಗಳ ಬಳಕೆ ಮತ್ತು ವಿಶಿಷ್ಟ ಆಹಾರಭ್ಯಾಸ ಇರದ ಕಾರಣಗಳಿಂದಾಗಿ ಹೊಸ ಪ್ರಭೇದದ ಹುಟ್ಟಿಗೆ ಕಾರಣವಾದರೆ ಪರಾಂತ್ರೋಪಸ್ ಬೋಯಿಸೇಯಿ ಮತ್ತು ಇತರ ಗಡಸು ದೇಹದ ಸಂಬಂಧಿಗಳು ಪಳೆಯುಳಿಕೆಯ ದಾಖಲೆಯಿಂದ ಅಳಿಸಿ ಹೋದವು. ಇದು ಹೋ. ಎರೆಕ್ಟಸ್‌ ಜೊತೆಗೆ ಸಮಕಾಲೀನವಾಗಿ ಸುಮಾರು ೫ ಲಕ್ಷ ವರುಷಗಳಷ್ಟು ಕಾಲ ಇದ್ದಿರ ಬಹುದು.[೧೬]

ಪಳೆಯುಳಿಕೆಗಳು[ಬದಲಾಯಿಸಿ]

ಕೆಳಗೆ ಹೋ. ಹೆಬಿಲಿಸ್‌ನ ಕೆಲವು ಪಳೆಯುಳಿಕೆಗಳನ್ನು ಪಟ್ಟಿ ಮಾಡಲಾಗಿದೆ.

  • ಓಹೆಚ್ ೬೨- ಇದು ಓಲಡೈ ಗಾರ್ಗ್‌ನಲ್ಲಿ ಡೊನಾಲ್ಡ್ ಜಾನ್ಸನ್ ಮತ್ತು ಟಿಮ್ ವೈಟ್ ೧೯೮೬ರಲ್ಲಿ ಕಂಡು ಹಿಡಿದ ಪಳೆಯುಳಿಕೆಗಳು. ಇದು ಕೈ ಮತ್ತು ಕಾಲಿನ ಪ್ರಮುಖ ಭಾಗವನ್ನು ಒಳಗೊಂಡಿದೆ.
  • ಕೆಎನ್ಎಮ್ ಇಆರ್ ೧೮೩೦- ತುರ್ಕಾನ ಸರೋವರದ ಪೂರ್ವ ದಂಡೆಯಲ್ಲಿನ ಕೀನ್ಯಾದ ಕೂಬಿ ಪೋರ ಕಮೊಯ ಕಿಮೆಯು ೧೯೭೩ರಲ್ಲಿ ಪತ್ತೆ ಮಾಡಿದ ಬಹುತೇಕ ಪೂರ್ಣ ತಲೆಬುರುಡೆ. ಮೆದುಳಿನ ಗಾತ್ರ ೫೧೦ ಘನ ಸೆಂಮೀ ಮತ್ತು ಇತರ ಮಾದರಿಗಳಿಗೆ ಹೋಲಿಸಿದರೆ ಕಡಿಮೆ ಗಾತ್ರ. ಇದರ ಕಾಲಮಾನ ೧.೯ ದವಹಿಂ.
  • ಓಹೆಚ್ ೨೪- ವಿರೂಪಗೊಂಡ ತಲೆಬುರುಡೆ, ತಾಂಜನೀಯದ ಓಲಡೈ ಗಾರ್ಗ್‌ನಲ್ಲಿ ಅಕ್ಟೋಬರ್ ೧೯೬೮ರಲ್ಲಿ ಪತ್ತೆಯಾದ ೧.೮ ದಶಲಕ್ಷ ವರುಷ ಹಿಂದಿನ ಪಳೆಯುಳಿಕೆ. ಮೆದುಳಿನ ಗಾತ್ರ ೬೦೦ ಘನ ಸೆಂಮೀಗೂ ತುಸು ಕಡಿಮೆ. ಹೆಚ್ಚು ಪ್ರಾಚೀನ ಆಸ್ಟ್ರಾಲೋಪಿತೆಸಿನೆಗೆ ಹೋಲಿಸಿದರೆ ಮುಂಚಾಚಿದ ಮುಖದ ಕಡಿಮೆಯಾಗಿರುವುದು ಕಂಡುಬಂದಿದೆ.
  • ಓಹೆಚ್ ೭- ಇದನ್ನು ಮೇರಿ ಮತ್ತು ಲೂಯಿಸ್ ಲೀಕಿ ನವೆಂಬರ್ ೪, ೧೯೬೦ರಲ್ಲಿ ಓಲ್‌ಡೈ ಗಾರ್ಗ್‌ನಲ್ಲಿ ಪತ್ತೆ ಹಚ್ಚಿದರು. ಇದರ ಕಾಲಮಾನ ೧.೭೫ ದವಹಿಂ. ಇದು ಕೆಳದವಡೆ ಹಲ್ಲುಗಳೊಂದಿಗೆ ಇದೆ. ಇದರ ಮೆದುಳಿನ ಗಾತ್ರ ೩೬೩ ಘನ ಸೆಂಮೀ. ಇದರ ಸಣ್ಣ ಹಲ್ಲಿನ ಕಾರಣಕ್ಕೆ ಇದನ್ನು ವಯಸ್ಸಿನಲ್ಲಿ ಚಿಕ್ಕದು ಎಂದು ನಿರ್ಣಯಿಸಲಾಗಿದೆ. ಇದರೊಂದಿಗೆ ಇಪ್ಪತ್ತು ಎರಡಗೈನ ತುಂಡುಗಳು ದೊರೆತಿವೆ. ಇದನ್ನು ಈ ಪ್ರಭೇದದ ಮಾದರಿ ಪಳೆಯುಳಿಕೆಯಾಗಿ ವರ್ಗೀಕರಿಸಲು ಟೋಬಿಯಾಸ್ ಮತ್ತು ನೇಪಿಯರ್ ನೆರವಾದರು. ಹೋ. ಹೆಬಿಲಿಸ್‌ನ ಓಹೆಚ್ ೭ ಕೈ ಕರಾರುವಕ್ಕಾದ ಹಿಡಿತ, ಮರ ಏರುವಿಕೆ ಹೊಂದಾಣಿಕೆ ಮತ್ತು ಚಿಂಪಾಜಿಯಂತಹ ಕೆಳ ಮತ್ತು ಮೇಲಿನ ಕೈಕಾಲು ಭಾಗಗಳ ಅನುಪಾತ ಹೊಂದಿವೆ.
  • ಕೆಎನ್‌ಎಮ್ ಇಆರ್ ೧೮೦೫- ವಯಸ್ಕ ಹೋ. ಹೆಬಿಲಿಸ್‌ನ ತಲೆಬುರುಡೆಯ ಮೂರು ತುಂಡುಗಳು. ಇದು ದೊರೆತುದು ಕೂಬಿ ಫೋರಾದಲ್ಲಿ ಮತ್ತು ಇದರ ಕಾಲಮಾನ ೧.೭೪ ದವಹಿಂ. ಇದನ್ನು ಮೊದಲು ದವಡೆಚಾಚುವಿಕೆ ಮತ್ತ್ತುತಲೆಬುರುಡೆಯ ಆಕಾರದ ಮೇಲೆ ಹೋ. ಎರೆಕ್ಟಸ್‌ಗೆ ಸೇರಿಸಲಾಗಿತ್ತು.

ಅಲ್ಲದೆ ಕೆಎನ್ಎಮ್ ಇಆರ್ ೧೪೭೦ ರಂತಹ ಇತರ ಕೆಲವು ಪಳೆಯುಳಿಕೆಗಳನ್ನು ಮೊದಲು ಹೋ. ಹೆಬಿಲಿಸ್‌ನಲ್ಲಿ ಸೇರಿಸಲಾಗಿತ್ತು ಮತ್ತು ನಂತರದಲ್ಲಿ ಬೇರಯದೇ ಪ್ರಭೇದವಾಗವಷ್ಟು ವ್ಯತ್ಯಾಸಗಳಿವೆ ಎಂದು ಭಾವಿಸಿ ಹೋಮೋ ರೋಡಾಲ್ಫೆನ್ಸಿಸ್‌ ಎನ್ನುವ ಇನ್ನೊಂದು ಪ್ರಭೇದಕ್ಕೆ ಸೇರಿಸಲಾಗಿದೆ.

ಹೋಮೋ ಹೆಬಿಲಿಸ್‌ನ್ನೂ ಒಳಗೊಂಡು ಬೇರೆ ಬೇರೆ ಹೋಮಿನಿನ್ ಪ್ರಭೇದಗಳ ಕಾಲಮಾನದಲ್ಲಿ ಹಂಚಿಕೆ

ಉಲ್ಲೇಖಗಳು ಮತ್ತು ಟಿಪ್ಪಣಿಗಳು[ಬದಲಾಯಿಸಿ]

  1. ”Homo habilis” Archived 2016-09-22 ವೇಬ್ಯಾಕ್ ಮೆಷಿನ್ ನಲ್ಲಿ. Archeologyinfo.com, access date 2016-09-19
  2. ೨.೦ ೨.೧ ೨.೨ Lewin, Roger, "Bones of Contention: Controversies in the Search for Human Origins", Publisher University of Chicago Press, 1997
  3. Murray Tim, "Milestones in Archaeology: A Chronological Encyclopedia", Publisher ABC-CLIO, 2007, page 493
  4. Harrub, Brad and Bert Thomson, "The Truth about Human Origins", Publisher Apologetics Press Inc., 2003, page 68-69
  5. Regal Braian, "Human Evolution: A Guide to the Debates Controversies in science", Publisher ABC-CLIO, 2004, page 104
  6. Tobias V Phillip, Chapter 2 Homo habilis-A premature Discovery: Remembered by One of Its Founding Fathers, 42 Years Later, In "The First Humans: Origin and Early Evolution of the Genus Homo", Grine E Fredrick, John G Fleagle and Richard E. Leakey (Editors) Publisher Springer Science & Business Media, 2009, page 13
  7. Tattersall, I. & Schwartz, J.H., Extinct Humans, Westview Press, New York, 2001, p. 111.
  8. F. Spoor; M. G. Leakey; P. N. Gathogo; F. H. Brown; S. C. Antón; I. McDougall; C. Kiarie; F. K. Manthi; L. N. Leakey (2007-08-09). "Implications of new early Homo fossils from Ileret, east of Lake Turkana, Kenya". Nature. 448 (7154): 688–691. doi:10.1038/nature05986. PMID 17687323.
  9. F. Spoor; M. G. Leakey; P. N. Gathogo; F. H. Brown; S. C. Antón; I. McDougall; C. Kiarie; F. K. Manthi; L. N. Leakey (2007-08-09). "Implications of new early Homo fossils from Ileret, east of Lake Turkana, Kenya". Nature. 448 (7154): 688–691. doi:10.1038/nature05986. PMID 17687323. "A partial maxilla assigned to H. habilis reliably demonstrates that this species survived until later than previously recognized, making an anagenetic relationship with H. erectus unlikely" (Emphasis added).
  10. "Oldest known member of human family found in Ethiopia". New Scientist. 4 March 2015. Retrieved 7 March 2015. Ghosh, Pallab (4 March 2015). "'First human' discovered in Ethiopia". bbc.co.uk. Retrieved 7 March 2015.
  11. Ungar, Peter (February 9, 2012). "Dental Evidence for the Reconstruction of Diet in African Early Homo". Current Anthropology. 53: S318–S329. doi:10.1086/666700
  12. Ungar, Peter; Grine, Frederick; Teaford, Mark; Zaatari, Sireen (January 1, 2006). "Dental Microwear and Diets of African Early Homo". Journal of Human Evolution. doi:10.1016/j.jhevol.2005.08.007.
  13. ಈ ಪರಿಕರಗಳನ್ನು ಕೆಳ ಹಳೆಯಶಿಲಾಯುಗದ ಪರಿಕರಗಳು ಎಂದು ಕರೆಯಲಾಗಿದ್ದು ಇದು ೨.೬ ರಿಂದ ೧.೭ ದಶಲಕ್ಷ ವರುಷ ಹಿಂದಿನವರೆಗೂ ಇದ್ದು ಇದು ಇದಕ್ಕಿಂತ ಹೆಚ್ಚು ಸಂಕೀರ್ಣವಾದ ಅಚೆಲುಯೆನ್ ಕಲ್ಲಿನ ಪರಿಕರಗಳಿಗೆ ದಾರಿಮಾಡಿಕೊಟ್ಟಿತು
  14. Pollard, Elizabeth. Worlds Together, Worlds Apart. 500 Fifth Avenue, New York, N.Y. 10110. p. 11. ISBN 978-0-393-91847-2
  15. Hillary Mayell. "Killer Cats Hunted Human Ancestors". National Geographic News. Retrieved 2008-02-15.
  16. Urquhart, James (August 8, 2007). "Finds test human origins theory". BBC News. Retrieved July 27, 2007.

|