ಫನೆರೊಜೋಯಿಕ್ ಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಲ್ಕು ಕಲ್ಪಗಳು

೫೪೧ - ೦* ಫನರೊಜೋಯಿಕ್
೨೫೦೦-೫೪೧* ಪ್ರೊಟೆರೊಜೋಯಿಕ್
೪೦೦೦ -೨೫೦೦ * ಆರ್ಕಿಯನ್
೪೬೦೦- ೪೦೦೦ * ಹಡೇಯನ್

*ದಶಲಕ್ಷ ವರುಷಗಳ ಹಿಂದೆ

ಫನೆರೊಜೋಯಿಕ್ ಕಲ್ಪ ಇಂದು ಚಾಲ್ತಿಯಲ್ಲಿರುವ ಕಲ್ಪ ಮತ್ತು ಇದರ ಆರಂಭ ಈ ಕಲ್ಪವು ೫೪೧ ದಶಲಕ್ಷ ವರುಷಗಳ ಹಿಂದೆ ಆರಂಭವಾಯಿತು.[೧] ಈ ಕಲ್ಪದಲ್ಲಿ ಮೂರು ಯುಗಗಳಿವೆ ಮತ್ತು ಅವು ಸೆನೊಜೋಯಿಕ್, ಮೀಸೊಜೋಯಿಕ್ ಮತ್ತು ಪಾಲಿಯೊಜೋಯಿಕ್. ಪಾಲಿಯೊಜೋಯಿಕ್ ಯುಗದ ಲಕ್ಷಣವೆಂದರೆ ಮೀನುಗಳು, ಉಭಯವಾಸಿಗಳು ಮತ್ತು ಸರೀಸೃಪಗಳು ಅಭಿವೃದ್ಧಿಯಾದದ್ದು. ಮೀಸೊಜೋಯಿಕ್ ಯುಗವು ಸರೀಸೃಪಗಳ ಯುಗ ಮತ್ತು ಸಸ್ತನಿಗಳ ಹಲವು ಲಕ್ಷಣಗಳು ವಿಕಾಸವಾದವು. ಇಲ್ಲಿನ ಪ್ರಮುಖ ಘಟನಾವಳಿಗಳಲ್ಲಿ ಹಕ್ಕಿಗಳು ವಿಶೇಷವಾಗಿ ಬೃಹತ್‌ ಸರೀಸೃಪಗಳಾದ ಡೈನೊಸಾರಸ್‌ಗಳ ವರ್ದಮಾನಕ್ಕೆ ಬರುವುದನ್ನು ಒಳಗೊಂಡಿದೆ. ಸೆನೊಜೋಯಿಕ್ ಯುಗವು ಸಸ್ತನಿಗಳ ಯುಗ ಮತ್ತು ಇತ್ತೀಚಿನದು ಮಾನವನ ಕಾಲಮಾನ.

ಪಾಲಿಯೊಜೋಯಿಕ್ ಯುಗ[ಬದಲಾಯಿಸಿ]

ಈ ಯುಗದಲ್ಲಿ ಭೂಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಕೀರ್ಣ ಜೀವಿಗಳು ವಿಕಾಸವಾಗುತ್ತವೆ. ಇದನ್ನು ಆರು ಅವಧಿಗಳಾಗಿ ವಿಭಜಿಸಲಾಗಿದೆ. ಅವು ಕ್ಯಾಂಬ್ರಿಯನ್, ಒರ್ಡೊವಿಸಿಯನ್, ಸಿಲುರಿಯನ್, ದೆವೊನಿಯನ್, ಕಾರ್ಬೊನಿಫೆರಸ್ ಮತ್ತು ಫರ್ಮಿಯನ್ ಅವಧಿಗಳು.[೨]

ಫನರೊಜೋಯಿಕ್ ಕಲ್ಪದಲ್ಲಿನ ಯುಗಗಳು.

0 ದಿಂದ ೫೪೧ ಫನರೊಜೋಯಿಕ್ ಕಲ್ಪ
0 ದಿಂದ ೬೬ ೬೬ ದಿಂದ ೨೫೨.೧೭ ೨೫೨.೧೭ ದಿಂದ ೫೪೧ ದಶಲಕ್ಷ ವರುಷಗಳ ಹಿಂದೆ
ಸೆನೊಜೋಯಿಕ್ ಮೀಸೊಜೋಯಿಕ್ ಪಾಲಿಯೊಜೋಯಿಕ್ ಯುಗಗಳು

ಕ್ಯಾಂಬ್ರಿಯನ್ ಅವಧಿ[ಬದಲಾಯಿಸಿ]

ಟ್ರೈಲೊಬೈಟ್‌ಗಳು

ಇದರ ಕಾಲಾವಧಿ ೫೪೧ ರಿಂದ ೪೮೫ ದಶಲಕ್ಷ ವರುಷಗಳ ಹಿಂದೆ (ದವಹಿಂ). ಯಾವುದೇ ಒಂದು ಅವಧಿಯಲ್ಲಿ ಅತಿಹೆಚ್ಚು ಜೀವಿಗಳ ವಿಕಾಸ ಈ ಅವಧಿಯಲ್ಲಿ ಆಯಿತು ಮತ್ತು ಇದನ್ನು ಕ್ಯಾಂಬ್ರಿಯನ್ ಸ್ಪೋಟ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಶೈವಲ (ಪಾಚಿ) ಸಸ್ಯಗಳು ವಿಕಾಸವಾದವು ಮತ್ತು ಪ್ರಾಣಿಗಳಲ್ಲಿ ಸಂಧಿಪಾದಿಗಳು ಪ್ರಭಲವಾಗಿದ್ದವು (ಉದಾಹರಣೆಗೆ ಟ್ರೈಲೊಬೈಟ್‌ಗಳು- ಸಾಗರ ಜೀವಿಗಳು). ಬಹತೇಕ ಎಲ್ಲಾ ಸಾಗರ ಸಸ್ಯಗಳು ಈ ಅವಧಿಯಲ್ಲಿ ವಿಕಾಸವಾದವು. ಈ ಅವಧಿಯಲ್ಲಿ ಸೂಪರ್ ಖಂಡ ವಿಘಟಿತವಾಗಿ ಅದರ ಬಹುಪಾಲು ಗೊಂಡ್ವಾನ ಸೂಪರ್ ಖಂಡವಾಗುತ್ತದೆ.[೩]

ಒರ್ಡೊವಿಸಿಯನ್ ಅವಧಿ[ಬದಲಾಯಿಸಿ]

ಸೆಫಲಾಪ್ಸಿಸ್ ಒಂದು ದವಡೆಗಳಲ್ಲಿದ ಮೀನು

ಈ ಅವದಿಯ ಕಾಲಮಾನ ೪೮೫ ರಿಂದ ೪೪೦ ದವಹಿಂ. ಹಲವು ಇಂದು ಜೀವಿಸಿರುವ ಪ್ರಾಣಿಗಳ ವಿಕಾಸ ಉದಾಹರಣೆಗೆ ಪ್ರಾಚೀನ ಮೀನುಗಳು, ಶಿರಪಾದಿ (ಕಟ್ಲ್‌ ಮೀನು, ಆಕ್ಟೋಪಸ್ ಮುಂತಾದ ‌ವಂಶಕ್ಕೆ ಸೇರಿದವು) ಮತ್ತು ಹವಳ ಜೀವಿಗಳು. ಈ ಅವಧಿಯಲ್ಲಿ ಸಾಮಾನ್ಯವಾದ ಜೀವಿಗಳು ಟ್ರೈಲೊಬೈಟ್‌, ಬಸವನ ಹುಳು ಮತ್ತು ಚಿಪ್ಪುಮೀನುಗಳು. ಮೊದಲ ಸಂದಿಪಾದಿಗಳು ಖಾಲಿ ಇದ್ದ ಸೂಪರ್ ಖಂಡ ಗೊಂಡ್ವಾನದ ಮೇಲೆ ವಾಸಿಸತೊಡಗಿದವು. ಈ ಅವಧಿಯ ಕೊನೆಗೆ ಗೊಂಡ್ವಾನವು ದಕ್ಷಿಣ ಧ್ರುವದಲ್ಲಿತ್ತು ಮತ್ತು ಹಿಂದಿನ ಉತ್ತರ ಅಮೆರಿಕವು ಯುರೋಪಿಗೆ ಡಿಕ್ಕಿಹೊಡೆದು ಅಟ್ಲಾಂಟಿಕ್ ಸಾಗರವನ್ನು ಮುಚ್ಚಿಹಾಕಿತು. ಹಿಮನದಿಗಳ ಕಾರಣಕ್ಕೆ ಒರ್ಡೊವಿಸಿಯನ್-ಸಿಲುರಿಯನ್ ಸಾಮೂಹಿಕ ಅಳಿವಿಗೆ ಕಾರಣವಾಗಿ ಸಾಗರದ ಅಕಶೇರುಕ ಜೀವಿಗಳಲ್ಲಿ ಶೇ ೬೦ರಷ್ಟು ಮತ್ತು ಶೇ ೩೫ರಷ್ಟು ಕುಟುಂಬಗಳು ಅಳಿದವು.[೪]

ಸಿಲುರಿಯನ್ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನ ೪೪೦ ರಿಂದ ೪೧೫ ದವಹಿಂ. ಹಿಂದಿನ ತೀವ್ರ ತಂಪಿನ ವಾತಾವರಣವು ಸುಧಾರಿಸಿತು. ಈ ಕಾಲಮಾನದಲ್ಲಿ ಮೀನುಗಳು ದೊಡ್ಡ ಮಟ್ಟದಲ್ಲಿ ವಿಕಾಸವಾದವು, ದವಡೆಗಳಿಲ್ಲದ ಮೀನುಗಳು ವಿಫುಲವಾದವು ಮತ್ತು ದವಡೆಯ ಮೀನುಗಳು ವಿಕಾಸವಾದವು. ಆದರೆ ಪ್ರಮುಖ ಪರಭಕ್ಷಕ ಸಂಧಿಪಾದಿ ಸಮುದ್ರ ಚೇಳಾಗಿತ್ತು. ಭೂವಾಸಿ ಜೀವಿಗಳ ಪೂರ್ಣ ವಿಕಾಸ, ಇದು ಆರ್ಯಾಕ್ನಿಡ (ಜೇಡಗಳನ್ನು ಹೋಲುವ ರುಂಡಮುಂಡ ಸೇರಿಕೊಡ ಜೀವಿಗಳ ಗುಂಪು), ಶಿಲೀಂಧ್ರ ಮತ್ತು ಜರಿಗಳನ್ನು ಒಳಗೊಂಡಿದೆ. ನಾಳೀಯ ಸಸ್ಯಗಳ ವಿಕಾಸವು ಅವು ಭೂಮಿಯ ಮೇಲೆ ಬೆಳೆಯಲು ಸಹಾಯ ಮಾಡಿತು. ಈ ಆರಂಭಿಕ ಸಸ್ಯಗಳು ಭೂಮಿಯ ಮೇಲಿನ ಸಸ್ಯಗಳ ಪೂರ್ವಸೂರಿಗಳು. ಈ ಕಾಲಮಾನದಲ್ಲಿ ನಾಲ್ಕು ಖಂಡಗಳು ಇದ್ದವು. ಅವು ಗೊಂಡ್ವಾನ (ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯ, ಅಂಟಾರ್ಕಿಟಿಕ ಮತ್ತು ಭಾರತ), ಲಾರೆಂಟಿಯಾ (ಉತ್ತರ ಅಮೆರಿಕ ಮತ್ತು ಯುರೋಪಿನ ಒಂದು ಭಾಗ), ಬಾಲ್ಟಿಕ (ಉಳಿದ ಯುರೋಪ್) ಮತ್ತು ಸೈಬೇರಿಯಾ (ಉತ್ತರ ಏಶಿಯಾ). ಇತ್ತೀಚಿನ ಸಮುದ್ರ ಮಟ್ಟದ ಹೆಚ್ಚಳ ಹೊಸ ಪ್ರಭೇದಗಳು ನೀರಿನಲ್ಲಿ ಬದುಕಲು ಸಹಾಯಕವಾಯಿತು.[೫]

ದೆವೊನಿಯನ್ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನ ೪೧೫ ರಿಂದ ೩೬೦ ದವಹಿಂ. ಈ ಅವಧಿಯನ್ನು “ಮೀನಿನ ಕಾಲ” ಎಂದು ಸಹ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮೀನುಗಳ ವೈವಿಧ್ಯತೆ ದೊಡ್ಡ ಮಟ್ಟದಲ್ಲಿ ಹೆಚ್ಚಾಯಿತು. ಇದು ರಕ್ಷಾಕವಚ ಉಳ್ಳ ಮೀನುಗಳನ್ನೂ ಒಳಗೊಂಡಿತ್ತು. ಲೋಬ್ ಫಿನ್ ಮೀನಿನಿಂದ ಮೊದಲ ಚತುಷ್ಪಾದಿಗಳು (ಮೊದಲ ನಾಲ್ಕುಕಾಲಿನ ಕಶೇರುಕಗಳು) ವಿಕಾಸವಾದವು. ಸಸ್ಯಗಳು ನಂಬಲು ಕಷ್ಟವಾಗುವಷ್ಟು ವೈವಿಧ್ಯತೆಯನ್ನು ಪಡೆದವು ಮತ್ತು ಇದನ್ನು ದೆವೊನಿಯನ್ ಸ್ಫೋಟ ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ ಮೊದಲ ಮರಗಳು ಮತ್ತು ಬೀಜಗಳು ವಿಕಾಸವಾದವು. ದೆವೊನಿಯನ್ ಕೊನೆಗೆ ತಡವಾದ ದೆವೊನಿಯನ್ ಸಾಮೂಹಿಕ ಅಳಿವು ಆಯಿತು ಮತ್ತು ಈ ಘಟನೆಯಲ್ಲಿ ಶೇ ೭೦ರಷ್ಟು ಜೀವಿ ಪ್ರಬೇದಗಳು ಅಳಿದವು. ಇದು ಇಂದು ತಿಳಿದ ಎರಡನೆಯ ಸಾಮೂಹಿಕ ಅಳಿವು.[೬]

ಕಾರ್ಬೋನಿಫೆರಸ್ ಅವಧಿ[ಬದಲಾಯಿಸಿ]

ಕಾರ್ಬೋನಿಫೆರಸ್‌ ಕಾಲಮಾನದ ಇಯೊಗಿರಿನಸ್ (ಒಂದು ಉಭಯವಾಸಿ)

ಈ ಅವಧಿಯ ಕಾಲಮಾನ ೩೬೦ ರಿಂದ ೩೦೦ ದವಹಿಂ. ಈ ಕಾಲಮಾನದಲ್ಲಿ ಜಾಗತಿಕ ಸರಾಸರಿ ತಾಪಮಾನವು ಹೆಚ್ಚಾಗಿದ್ದು ೨೦ ಡಿಗ್ರಿ ಸೆಲ್ಸಿಯಸ್ ಆಯಿತು ಮತ್ತು ಮಧ್ಯ ಕಾಲಕ್ಕೆ ೧೦ ಡಿಗ್ರಿ ಸೆಲ್ಸಿಯಸ್‌ಗೆ ಕಡಿಮೆಯಾಯಿತು.[೭] ಉಷ್ಣವಲಯದ ಚೌಗು ಪ್ರದೇಶಗಳು ಹೆಚ್ಚಾದವು. ದೊಡ್ಡ ಮರಗಳು ನಾವು ಇಂದು ಬಳಸುವ ಇಂಗಾಲಕ್ಕೆ ಮೂಲವಾಗಿವೆ (ಹೀಗಾಗಿ ಹೆಸರು ಕಾರ್ಬೋನಿಫೆರಸ್ ಎಂದು ಬಂದಿದೆ). ವಿಕಾಸದ ದೃಷ್ಟಿಯಿಂದ ಮಹತ್ವವಾದುದು ಭೂಮಿಯ ಮೇಲೆ ಮೊಟ್ಟೆಯಿಡುವ ಜೀವಿಗಳ ವಿಕಾಸ ಮತ್ತು ಇದು ಉಭಯವಾಸಿಗಳು ಭೂಮಿಯ ಮೇಲೆ ದೂರ ಹೋಗಲು ಮತ್ತು ಇದು ಭೂಮಿಯ ಮೇಲಿನ ಪ್ರಮುಖ ಕಶೇರುಕಗಳಾಗುವಲ್ಲಿ ಸಹಾಯ ಮಾಡಿತು. ಚೌಗುಗಳಲ್ಲಿ ಮೊದಲ ಸರೀಸೃಪಗಳು ಮತ್ತು ಸಿನಾಪ್ಸಿಡ್‌ಗಳು (ಕೆಲವೊಮ್ಮೆ ಇವನ್ನು ಸಸ್ತನಿ ರೀತಿಯ ಸರೀಸೃಪಗಳು ಎಂದು ಕರೆಯಲಾಗಿದೆ) ವಿಕಾಸವಾದವು. ಕಾರ್ಬೋನಿಫೆರಸ್ ಆದ್ಯಾಂತ ತಣ್ಣಗಾಗುವಿಕೆ ಇತ್ತು ಮತ್ತು ಇದು ಕೊನೆಗೆ ಹಿಮಯುಗಕ್ಕೆ ಕಾರಣವಾಯಿತು. ಫೆರ್ಮಿ-ಕಾರ್ಬೋನಿಫೆರಸ್ ಹಿಮಯುಗ ಎಂದು ಕರೆಯಲಾಗುತ್ತದೆ.[೮]

ಪರ್ಮಿಯನ್ ಅವಧಿ[ಬದಲಾಯಿಸಿ]

ಡ್ವಿಮೆಟ್ರಡಾನ್

ಈ ಅವಧಿಯ ಕಾಲಮಾನ ೩೦೦ ರಿಂದ ೨೫೦ ದವಹಿಂ. ಪಾಲಿಯೊಜೋಯಿಕ್ ಯುಗದ ಕೊನೆಯ ಅವಧಿ. ಈ ಅವಧಿಯ ಆರಂಭದಲ್ಲಿ ಎಲ್ಲಾ ಖಂಡಗಳು ಪಾಂಜಿಯ ಎನ್ನುವ ಸೂಪರ್ ಖಂಡ ಹಾಗೂ ಪಂಥಲಸ್ಸ ಎಂದು ಕರೆಯಲಾದ ಸಾಗರ ಆಸ್ತಿತ್ವದಲ್ಲಿದ್ದವು. ಈ ಕಾಲಮಾನದಲ್ಲಿ ಒಣ ಹವೆ ಇತ್ತು. ಈ ಒಣ ವಾತಾವರಣದಲ್ಲಿ ಸರೀಸೃಪಗಳು ಮತ್ತು ಸಿನಾಪ್ಸಿಡ್‌ಗಳು ವಿಫುಲವಾದವು. ದ್ವಿಮಾನ ಹಲ್ಲಿ (ಡ್ವಿಮೆಟ್ರಡಾನ್- ಎರಡು ರೀತಿಯ ಹಲ್ಲುಗಳಿರುವ ಹಲ್ಲಿ) ಮತ್ತು ಹಾಸು ಹಲ್ಲುಗಳ ಹಲ್ಲಿ (ಎಡಫೊಸಾರಸ್-ಒತ್ತಾಗಿ ಸೇರಿದ ಹಲ್ಲು) ಈ ಕಾಲಮಾನದಲ್ಲಿ ಪ್ರಭಲವಾಗಿದ್ದುವು. ಶಂಕುಮರಗಳು ವಿಕಾಸವಾಗಿ ಭೂಮಿಯ ಮೇಲೆ ವಿಫುಲವಾದವು. ಈ ಕಾಲಮಾನದ ಕೊನೆಗೆ ಗುರಾಣಿ ಹಲ್ಲಿಗಳು (ಸ್ಕುಟೊಸಾರಸ್) ಮತ್ತು ಘೋರಮುಖಿ ಹಲ್ಲಿಗಳು (ಗಾರ್ಗನೋಪ್ಸಿಯ) ಖಾಲಿ ಇದ್ದ ಮರುಭೂಮಿಗಳಲ್ಲಿ ವಿಫುಲವಾದವು. ಇವು “ಮಹಾ ಸಾವು” ಘಟನೆಯಲ್ಲಿ ಅಳಿದವು. ಈ ಮೂರನೆಯ ಸಾಮೂಹಿಕ ಜೀವಿಗಳ ಅಳಿವಿನ ಘಟನೆಯಲ್ಲಿ ಭೂಮಿಯ ಮೇಲಿನ ಶೇ ೯೫ರಷ್ಟು ಜೀವಿಗಳು ಅಳಿದವು.[೯][೧೦]

ಮೀಸೊಜೋಯಿಕ್ ಯುಗ[ಬದಲಾಯಿಸಿ]

ಇದನ್ನು “ಡೈನಾಸರಸ್‌ಗಳ ಯುಗ” ಎಂದು ಸಹ ಕರೆಯಲಾಗುತ್ತದೆ. ಈ ಯುಗದಲ್ಲಿ ಸರೀಸೃಪಗಳು ಆಳಿದವು. ಅವು ಸಾಗರ, ಭೂಮಿ ಮತ್ತು ಗಾಳಿಯಲ್ಲಿಯೂ ಪ್ರಭಲವಾಗಿದ್ದವು. ಈ ಯುಗದಲ್ಲಿ ಮೂರು ಅವಧಿಗಳಿವೆ. ಅವು ಟ್ರಯಾಸಿಕ್, ಜುರಾಸಿಕ್ ಮತ್ತು ಕ್ರೆಟೇಶಿಯಸ್.

ಟ್ರಯಾಸಿಕ್ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನ ೨೫೦ ರಿಂದ ೨೦೦ ದವಹಿಂ. ಈ ಅವಧಿಯು ಫರ್ಮಿಯನ್ ಸಾಮೂಹಿಕ ಅಳಿವು ಮತ್ತು ಹುಲುಸಾದ ಜುರಾಸಿಕ್‌ಗಳಿರುವ ಏಕಾಂಗಿ ಅವಧಿ. ಈ ಅವಧಿಯು ಆರಂಭಿಕ ಟ್ರಯಾಸಿಕ್, ಮಧ್ಯ ಟ್ರಯಾಸಿಕ್ ಮತ್ತು ನಂತರದ ಟ್ರಯಾಸಿಕ್ ಎಂದು ಮೂರು ಶಕಗಳನ್ನಾಗಿ ವಿಭಜಿಸಲಾಗಿದೆ.[೧೧]

ಆರಂಭಿಕ ಟ್ರಯಾಸಿಕ್ ಶಕದ ಕಾಲಮಾನ ೨೫೦ ರಿಂದ ೨೪೭ ದವಹಿಂ. ಈ ಅವಧಿಯಲ್ಲಿ ಪಾಂಜಿಯ ವಿಘಟಿತವಾಗದೇ ಏಕವಾಗಿತ್ತು ಮತ್ತು ಇದರಲ್ಲಿ ಮರುಭೂಮಿಗಳು ವಿಪುಲವಾಗಿದ್ದವು. ಈ ಅವಧಿಯಲ್ಲಿ ದೊಡ್ಡ ಮಟ್ಟದ ಸಾಮೂಹಿಕ ಜೀವಿಗಳ ಅಳಿವು ಸಂಭವಿಸಿತು ಮತ್ತು ಇದರಲ್ಲಿ ಬದುಕಿದ್ದ ಶೇ ೯೫ರಷ್ಟು ಜೀವಿಗಳು ಅಳಿದವು. ಈ ಅವಧಿಯಲ್ಲಿ ಸಾಮಾನ್ಯವಾದ ಜೀವಿಗಳು ಸಲಾಕೆ ಹಲ್ಲಿ (ಲಿಸ್ಟ್ರೊಸಾರಸ್), ಗೋಜಲು ಹಲ್ಲಿನ ಉಭಯವಾಸಿ ವರ್ಗ (ಲೇಬ್ರಿಂಥೊಡೊಂಟಿಯ) ಮತ್ತು ಯುಪಾರ್ಕೇರಿಯಗಳು ಸಾಮೂಹಿಕ ಅಳಿವಿನ ನಡುವೆಯೂ ಉಳಿದುಕೊಂಡು ಸಾಮಾನ್ಯವಾದವು.[೧೨]

ಪ್ಲೇಟೊಸಾರಸ್ (ಒಂದು ಪ್ರೊಸುರೊಪಾಡ್)

ಮಧ್ಯ ಟ್ರಯಾಸಿಕ್ ಶಕದ ಕಾಲಮಾನ ೨೪೭ ರಿಂದ ೨೩೭ ದವಹಿಂ. ಈ ಅವಧಿಯು ಪಾಂಜಿಯದ ವಿಘಟನೆ ಮತ್ತು ಟೈಥಿಸ್ ಸಾಗರದ ಆರಂಭವನ್ನು ಕಂಡಿತು. ತೇಲುಸಸ್ಯ, ಹವಳ ಜೀವಿ ಮತ್ತು ಕಠಿಣಚರ್ಮಿಗಳು ದೊಡ್ಡ ಮಟ್ಟದ ಜೀವಿಗಳ ಅಳಿವಿನ ನಡುವೆಯೂ ಉಳಿದುಕೊಂಡವು. ಸರೀಸೃಪಗಳ ಗಾತ್ರ ಬಹಳ ಹೆಚ್ಚಾಯಿತು. ಮೀನು ಹಲ್ಲಿಗಳಂತಹ (ಇಕ್ಥಿಯೊಸಾರಸ್‌) ಹೊಸ ಜಲವಾಸಿ ಸರೀಸೃಪಗಳು ವಿಕಾಸವಾದವು. ಇದೇ ಸಮಯದಲ್ಲಿ ಪೀತದಾರು (ಪೈನ್) ಮರಗಳ ಅರಣ್ಯಗಳು ಭೂಮಿಯ ಮೇಲೆ ರೂಪಗೊಂಡವು ಮತ್ತು ಇದರೊಂದಿಗೆ ಸೊಳ್ಳೆಗಳು ಮತ್ತು ಹಣ್ಣುನೊಣಗಳು ಸಹ ವಿಕಾಸವಾದವು. ಮೊದಲ ಪ್ರಾಚೀನ ಮೊಸಳೆಗಳು ವಿಕಾಸವಾಗಿ ಇದುವರೆಗೂ ಸಿಹಿನೀರಿನಲ್ಲಿ ಪ್ರಭಲಾಗಿದ್ದ ದೊಡ್ಡ ಉಭಯವಾಸಿಗಳೊಂದಿಗೆ ಸ್ಪರ್ಧಿಸಿದವು.[೧೩]

ನಂತರದ ಟ್ರಯಾಸಿಕ್ ಶಕದ ಕಾಲಮಾನ ೨೩೭ ರಿಂದ ೨೦೦ ದವಹಿಂ. ತಡವಾದ ಟ್ರಯಾಸಿಕ್‌ನ ಲಕ್ಷಣ ನಡುನಡುವೆ ಬಿಸುಪಿನ ವಾತಾವರಣ ಮತ್ತು ಮಿತವಾದ ಮಳೆ (ಹಿಮ ಸುರಿತವನ್ನೂ ಒಳಗೊಂಡು) ವಾರ್ಷಿಕವಾಗಿ ೧೦ ರಿಂದ ೨೦ ಇಂಚು ಇತ್ತು. ಇತ್ತೀಚಿನ ಬಿಸುಪು ಸರೀಸೃಪಗಳ ವಿಕಾಸಕ್ಕೆ ದಾರಿಯಾಯಿತು. ಮೊದಲ ಭೂ ಡೈನೊಸಾರಸ್‌ಗಳು ಅಥವಾ ದೈತೋರಗಗಳು ಮತ್ತು ಪೆಟರೊಸಾರಸ್‌ಗಳು ವಿಕಾಸವಾದವು. ಈ ಎಲ್ಲಾ ವಾತಾವರಣದ ಬದಲಾವಣೆಗಳೂ ಟ್ರಯಾಸಿಕ್-ಜುರಾಸಿಕ್ ಸಮೂಹಿಕ ಅಳಿವಿನ ಘಟನೆಗೆ ಕಾರಣವಾದವು. ಈ ಘಟನೆಯಲ್ಲಿ ಎಲ್ಲಾ ಆರ್ಕಸಾರಸ್‌ಗಳು (ಪ್ರಾಚೀನ ಮೊಸಳೆಗಳನ್ನು ಹೊರತುಪಡಿಸಿ), ಸಿನಾಪ್ಸಿಡ್‌ಗಳು ಮತ್ತು ದೊಡ್ಡ ಉಭಯವಾಸಿಗಳೂ ಅಳಿದವು. ಇದನ್ನು ನಾಲ್ಕನೆಯ ಸಾಮೂಹಿಕ ಅಳಿವಿನ ಘಟನೆ ಎನ್ನಲಾಗಿದೆ. ಇದರಲ್ಲಿ ಶೇ ೩೪ರಷ್ಟು ಸಾಗರ ಜೀವಿಗಳೂ ಅಳಿದವು. ಈ ಅಳಿವಿನ ನಿರ್ದಿಷ್ಟ ಕಾರಣದ ಬಗೆಗೆ ಚರ್ಚೆ ನಡೆಯುತ್ತಿದೆ.[೧೪][೧೫]

ಜುರಾಸಿಕ್ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನ ೨೦೦ ರಿಂದ ೧೪೫ ದವಹಿಂ. ಇದನ್ನು ಆರಂಭಿಕ, ಮಧ್ಯ ಮತ್ತು ತಡವಾದ ಜುರಾಸಿಕ್ ಅವಧಿಗಳಾಗಿ ವಿಭಜಿಸಲಾಗಿದೆ.[೧೬]

ರಹಮ್‌ಫೊರಿಂಕಸ್

ಆರಂಭಿಕ ಜುರಾಸಿಕ್ ಅವಧಿಯ ಕಾಲಮಾನ ೨೦೦-೧೭೫ ದವಹಿಂ.[೧೬] ಈ ಕಾಲಮಾನದಲ್ಲಿ ಟ್ರಯಾಸಿಕ್‌ಗಿಂತ ವಾತಾವರಣ ಹೆಚ್ಚು ತೇವಾಂಶ ಭರಿತವಾಗಿತ್ತು . ಪರಿಣಾಮವಾಗಿ ಉಷ್ಣವಲಯದ ವಾತಾವರಣವಿತ್ತು. ಪ್ಲೆಸಿಯೋಸಾರಸ್‌, ಮೀನು ಹಲ್ಲಿ, ಅಮೊನೈಟ್ ಮೃದ್ವಂಗಿಗಳು ಸಾಗರಗಳಲ್ಲಿ ವಿಫುಲವಾದವು. ಭೂಜೀವಿಗಳಲ್ಲಿ ಡೈನೊಸರಸ್‌ಗಳು ವಿಫುಲವಾದವು ಅದರಲ್ಲೂ ವಿಶೇಷವಾಗಿ ಮಾಂಸಹಾರಿ ಡಿಲೊಫೊಸಾರಸ್ ಪ್ರಭೇದವು ಹೆಚ್ಚಾಗಿತ್ತು. ಮೊದಲ ನಿಜ ಮೊಸಳೆ ವಿಕಾಸವಾಗಿ ದೊಡ್ಡ ಗಾತ್ರದ ಉಭಯವಾಸಿಗಳನ್ನು ಅಳಿವಿನ ಅಂಚಿಗೆ ತಳ್ಳಿತು. ಸರೀಸೃಪಗಳು ಆಳ್ವಿಕೆಯ ಈ ಕಾಲಮಾನದಲ್ಲಿ ಮೊದಲ ಸಸ್ತನಿಗಳು ವಿಕಾಸವಾದವು ಆದರೆ ‌ಅವುಗಳ ಗಾತ್ರ ತೀರ ಸಣ್ಣದಿತ್ತು.[೧೭]

ಮಧ್ಯ ಜುರಾಸಿಕ್ ಅವಧಿಯ ಕಾಲಮಾನ ೧೭೫ ರಿಂದ ೧೬೩ ದವಹಿಂ.[೧೬] ಹಲ್ಲಿಕಾಲಿನ (ಸುರೊಪಾಡ್) ವಂಶಕ್ಕೆ ಸೇರಿದ ಬ್ರಾಚಿಯೊಸಾರಸ್ ಮತ್ತು ಡಿಪ್ಲೊಡಿಕಸ್‌ಗಳ ದೊಡ್ಡ ಮಂದೆಗಳು ವಿಫುಲವಾದವು. ಅಲ್ಲೊಸಾರಸ್‌ನಂತಹ ಪರಭಕ್ಷಗಳೂ ಹೆಚ್ಚಾದವು. ಶಂಕುಧರ ಅಡವಿಗಳು ಭೂಮಿಯ ದೊಡ್ಡ ಭಾಗವನ್ನು ಆಕ್ರಮಿಸಿದವು. ಸಾಗರಗಳಲ್ಲಿ ಪ್ಲೆಸಿಯೊಸಾರಸ್‌ ಮತ್ತು ಹಲ್ಲಿಮೀನುಗಳು ವಿಫುಲವಾದವು.[೧೮]

ತಡವಾದ ಜುರಾಸಿಕ್ ಅವಧಿಯ ಕಾಲಮಾನ ೧೫೩ ರಿಂದ ೧೪೫ ದವಹಿಂ.[೧೬] ಪಾಂಜಿಯ ಸುಪರ್‌ ಖಂಡವು ಗೊಂಡ್ವಾನ ಮತ್ತು ಯುರೇಶಿಯಾ ಆಗಿ ವಿಭಜನೆಯಾದ ಕಾರಣಕ್ಕೆ ದೊಡ್ಡ ಮಟ್ಟದ ಜೀವಿಗಳ ಸಾಮೂಹಿಕ ಅಳಿವು ಉಂಟಾಯಿತು. ಇದನ್ನು ಜುರಾಸಿಕ್-ಕ್ರೆಟೇಶಿಯಸ್ ಜೀವಿಗಳ ಸಾಮೂಹಿಕ ಅಳಿವು ಎಂದು ಕರೆಯಲಾಗಿದ್ದು ಇದರಲ್ಲಿ ಸುರೊಪಾಡ್‌ಗಳು ಮತ್ತು ಮೀನುಹಲ್ಲಿಗಳು ಅಳಿದವು. ಜರಿಗಿಡದ ಪ್ರಿಯರಿಗಳು (ಮರಗಳಿಲ್ಲದ ಹುಲ್ಲುಗಾವಲುಗಳು) ಸಮುದ್ರ ಮಟ್ಟದ ಹೆಚ್ಚಳದಿಂದಾಗಿ ನಾಶವಾದವು. ಮೀನುಹಲ್ಲಿಗಳು ಪೂರ್ತಿಯಾಗಿ ಅಳಿದರೆ ಸುರೊಪಾಡ್‌ಗಳ ವಿಷಯದಲ್ಲಿ ಹೀಗಾಗಲಿಲ್ಲ, ಅದರಲ್ಲಿನ ಟಿಟನೊಸಾರಸ್‌ನಂತಹ ಪ್ರಬೇಧಗಳು ಕ್ರೆಟೇಶಿಯಸ್-ಪಾಲಿಯೊಜೀನ್ ಸಾಮೂಹಿಕ ಅಳಿವಿನವರೆಗೂ ಉಳಿದುಕೊಂಡು ಬಂದವು.[೧೯] ಸಮುದ್ರ ಮಟ್ಟ ಹೆಚ್ಚಳದ ಕಾರಣಕ್ಕೆ ಅಟ್ಲಾಂಟಿಕ್ ಸಮುದ್ರ ತೆರೆದುಕೊಂಡಿತು ಮತ್ತು ಕಾಲಕಳೆದಂತೆ ದೊಡ್ಡದಾಯಿತು. ವಿಭಜಿತ ಜಗತ್ತು ಹೊಸ ಡೈನಸಾರಸ್‌ಗಳು ವೈವಿಧ್ಯಮಯವಾಗಲು ಅವಕಾಶ ಒದಗಿಸಿತು.

ಕ್ರೆಟೇಶಿಯಸ್ ಅವಧಿ[ಬದಲಾಯಿಸಿ]

ಕ್ರೆಟೇಶಿಯಸ್ ಅವಧಿಯು ಮೀಸೊಜೋಯಿಕ್ ಯುಗದಲ್ಲಿ ದೀರ್ಘವಾದುದು. ಇದರಲ್ಲಿ ಆರಂಭಿಕ ಕ್ರೆಟೇಶಿಯಸ್ ಮತ್ತು ನಂತರದ ಕ್ರೆಟೇಶಿಯಸ್ ಎಂದು ಎರಡೇ ಯುಗಗಳಿವೆ.[೨೦]

ಕ್ಸಿಫಾಕ್ಟಿನಸ್‌ನ್ನು ಬೇಟೆಯಾಡುತ್ತಿರುವ ಟೈಲೊಸಾರಸ್

ಆರಂಭಿಕ ಕ್ರೆಟೇಶಿಯಸ್‌ ಯುಗದ ಕಾಲಮಾನ ೧೪೫ ರಿಂದ ೧೦೦ ದವಹಿಂ.[೨೦] ಈ ಅವಧಿಯಲ್ಲಿ ಸಮುದ್ರ ಮಾರ್ಗಗಳು ಹಿಗ್ಗಿದ ಕಾರಣಕ್ಕೆ ಸುರೊಪಾಡ್‌ಗಳು ಅಳಿದವು (ದಕ್ಷಿಣ ಅಮೆರಿಕ ಹೊರತುಪಡಿಸಿ). ಕರಾವಳಿಗಳು ಆಳವಿಲ್ಲದವಾದ ಕಾರಣಕ್ಕೆ ಹಲ್ಲಿಮೀನುಗಳು ಅಳಿದು ಮೊಸಸಾರ್‌ಗಳು ವಿಫುಲವಾಗಿ ಅವುಗಳ ಸ್ಥಾನದಲ್ಲಿ ಬಂದವು. ಯುಸ್‌ಟ್ರೆಪ್ಟೊಸ್ಪಾಂಡಿಲಸ್‌ ನಂತಹ ದ್ವೀಪದಿಂದ ದ್ವೀಪಕ್ಕೆ ನೆಗೆಯುವ ಡೈನೊಸಾರಸ್‌ಗಳು ಪ್ರಾಚಿನ ಯರೋಪಿನ ಆಳವಿಲ್ಲದ ಕರಾವಳಿ ಮತ್ತು ಸಣ್ಣ ದ್ವೀಪಗಳ ಪ್ರದೇಶದಲ್ಲಿ ವಿಕಾಸವಾದವು. ಜುರಾಸಿಕ್-ಕ್ರೆಟೇಶಿಯಸ್ ಸಾಮೂಹಿಕ ನಾಶದಿಂದ ಖಾಲಿಯಾದ ಭೂಮಿಯನ್ನು ಇತರ ಡೈನೊಸಾರಸ್‌ಗಳು ತುಂಬಿದವು. ಇದರಲ್ಲಿ ಹೆಚ್ಚು ಯಶಸ್ವಿಯಾದವುಗಳಲ್ಲಿ ಇಗ್ವಾನೊಡಾನ್ ಪ್ರಮುಖವಾದುದು ಮತ್ತು ಇದು ಎಲ್ಲಾ ಖಂಡಗಳಿಗೂ ಹರಡಿತು. ರುತುಗಳು ಚಾಲ್ತಿಗೆ ಬಂದವು ಮತ್ತು ದ್ರುವಗಳು ಕೆಲವು ಕಾಲದಲ್ಲಿ ತಂಪಾಗ ತೊಡಗಿದವು ಆದರೆ ಲಿಯೆಲ್ಲಿನಾಸುರದಂತಹ ಡೈನೋಸಾರಸ್‌ಗಳು ಇಲ್ಲಿ ವರ್ಷದಾದ್ಯಂತ ದ್ರುವ ಅರಣ್ಯಗಳಲ್ಲಿ ಜೀವಿಸುತ್ತಿದ್ದವು. ಸಸ್ಯಾಹಾರಿ ಮುಟ್ಟಬುರ್ರಸಾರಸ್‌ನಂತಹ ಕೆಲವು ಡೈನೋಸಾರಸ್‌ಗಳು ಬೇಸಿಗೆಯಲ್ಲಿ ವಲಸೆ ಹೋದವು. ಮೊಸಳೆಗಳಿಗೆ ಇದು ತೀರ ತಂಪಾದ್ದರಿಂದ ಈ ಪ್ರದೇಶವು ಕೂಲಸುಕಸ್‌ನಂತಹ ದೊಡ್ಡ ಉಭಯವಾಸಿಗಳ ಕೊನೆಯ ನೆಲೆಯಾಯಿತು. ರೆಕ್ಕಹಲ್ಲಿ ಎಂದು ಕರೆಯಲಾದ ಪೆಟ್ರೊಸಾರ್‌ಗಳ ಗಾತ್ರ ಟಪೆಜರ ಮತ್ತು ಒರಿಂಥೊಕೆರಿಯಸ್ ವಿಕಾಸದೊಂದಿಗೆ ಹೆಚ್ಚಾಯಿತು. ನಿಜವಾದ ಮೊದಲ ಹಕ್ಕಿಗಳ ವಿಕಾಸದೊಂದಿಗೆ ಅವುಗಳ ಹಾಗೂ ರೆಕ್ಕೆಹಲ್ಲಿಗಳ ನಡುವಿನ ಸ್ಪರ್ಧೆ ಏರ್ಪಟ್ಟಿತು.

ನಂತರದ ಕ್ರೆಟೇಶಿಯಸ್ ಯುಗದ ಕಾಲಮಾನ ೧೦೦-೬೫ ದವಹಿಂ.[೨೦] ಈ ಕಾಲಮಾನದ ಲಕ್ಷಣ ನಂತರದ ಸೆನೊಜೋಯಿಕ್ ಕಾಲಮಾನದಲ್ಲಿಯೂ ಮುಂದುವರೆದ ತಂಪಾಗುವ ಪ್ರವೃತ್ತಿ. ಉಷ್ಣವಲಯಗಳು ಸಮಭಾಜಕ ವೃತ್ತಕ್ಕೆ ಸೀಮಿತವಾಗಿದ್ದವು ಮತ್ತು ನಂತರದ ಪ್ರದೇಶಗಳು ತೀವ್ರ ವಾತಾವರಣದ ರುತು ಆಧಾರಿತ ಏರುಪೇರುಗಳನ್ನು ಒಳಗೊಂಡಿದ್ದವು. ಟೈರನ್ನೊಸಾರ್, ಅಂಕಿಲೊಸಾರ್‌, ಟ್ರಿಸೆರಟಾಪ್ ಮತ್ತು ಹಡ್ರೊಸಾರಸ್‌ಗಳಂತಹ ಡೈನೊಸಾರಸ್‌ನ ಪ್ರಭೇದಗಳು ವಿಕಾಸವಾಗಿ ಆಹಾರ ಸರಪಳಿಯಲ್ಲಿ ಪ್ರಭಾವಯುತವಾಗಿದ್ದವು. ಹಕ್ಕಿಗಳು ಪೆಟೆರೊಸಾರಸ್‌ಗಳಿಗೆ ಬದಲಿಯಾದವು. ಕ್ವೆಜ್ವಲೊಕೊಟಲಸ್‌ ಅಳಿದ ಕೊನೆಯ ಪೆಟೆರೊಸಾರಸ್‌. ದೊಡ್ಡ ಶಂಕುಧಾರಿ ಅಡವಿಗಳಲ್ಲಿನ ಕೊಳೆತ ಮಾಂಸ ಭಕ್ಷಿಗಳಾಗಿ ಹೊಟ್ಟೆಚೀಲ ಸಸ್ತನಿಗಳು (ಮರ್ಸುಪಿಯಲ್‌ಗಳು) ವಿಕಾಸವಾದವು. ಮೀನುಹಲ್ಲಿಯ ಜಾಗವನ್ನು ಮೊಸಸಾರ್‌ಗಳು ತುಂಬಿದವು. ಉದ್ದಕತ್ತಿನ ಹಲ್ಲಿ ಎಂದು ಕರೆಯ ಬಹುದಾದ ಎಲಾಸ್ಮೊಸಾರ್‌ಗಳಂತಹ ದೊಡ್ಡ ಪ್ಲೆಸಿಯೊಸಾರ್‌ಗಳು ವಿಕಾಸವಾದವು. ಮೊದಲ ಹೂಬಿಡುವ ಸಸ್ಯಗಳ ವಿಕಾಸ. ಭಾರತದ ಡೆಕ್ಕನ್ ಟ್ರಾಪ್ ಮತ್ತು ಇತರ ಜ್ವಾಲಾಮುಖಿಗಳ ಉಗುಳುವಿಕೆಯ ಕಾರಣಕ್ಕೆ ವಾತಾವರಣ ವಿಷಮಯವಾಯಿತು. ಇದೇ ಸಮಯದಲ್ಲಿ ಮೆಕ್ಸಿಕೊದಲ್ಲಿ ಚಿಕ್ಸುಲುಬ್ ಗುಂಡಿ ನಿರ್ಮಿಸಿದ ಉಲ್ಕೆಯ ಬೀಳುವಿಕೆ ಕ್ರೆಟೇಶಿಯಸ್-ಪಾಲಿಯೊಜೀನ್ ಸಾಮೂಹಿಕ ಜೀವಿಗಳ ಅಳಿವಿಗೆ ಕಾರಣವಾಯಿತು. ಈ ಐದನೆಯ ಅಳಿಯುವಿಕೆಯಲ್ಲಿ ಭೂಮಿಯ ಮೇಲಿನ ಶೇ ೭೫ರಷ್ಟು ಜೀವಿಗಳು ಅಳಿದವು. ಈ ಅಳಿಯುವಿಕೆಯಲ್ಲಿ ಹಾರದ ಡೈನೊಸಾರಸ್‌ಗಳು ಮತ್ತು ಹತ್ತು ಕಿಲೋಗ್ರಾಂಗೂ ಹೆಚ್ಚಿನ ತೂಕದ ಎಲ್ಲಾ ಜೀವಿಗಳೂ ಅಳಿದವು. ಡೈನೊಸಾರಸ್‌ಗಳ ಯುಗವು ಅಧಿಕೃತವಾಗಿ ಕೊನೆಗೊಂಡಿತು.[೨೧][೨೨]

ಸೆನೊಜೋಯಿಕ್ ಯುಗ[ಬದಲಾಯಿಸಿ]

ಈ ಯುಗವು ಪ್ರಮುಖ ಜೀವಿಗಳಾಗಿ ಸಸ್ತನಿಗಳು ವಿಕಾಸವಾದ ಯುಗ. ಡೈನೊಸಾರಸ್‌ಗಳು ಹುಟ್ಟುಹಾಕಿದ ದೊಡ್ಡ ಖಾಲಿ ಪ್ರದೇಶವನ್ನು ಸಸ್ತನಿ ವರ್ಗ ತುಂಬಿತು. ಈ ಯುಗದಲ್ಲಿ ಮೂರು ಅವಧಿಗಳಿವೆ. ಅವು ಪಾಲಿಯೊಜೀನ್, ನಿಯೊಜೀನ್ ಮತ್ತು ಕ್ವಾರ್ಟನೆರಿ.

ಪಾಲಿಯೊಜೀನ್ ಅವಧಿ[ಬದಲಾಯಿಸಿ]

ಪಾಲಿಯೊಜೀನ್ ಅವಧಿ. ಈ ಅವಧಿಯ ಕಾಲಮಾನ ೬೫ ರಿಂದ ೨೩ ದವಹಿಂ. ಇದರಲ್ಲಿ ಮೂರು ಶಕಗಳಿವೆ. ಅವು ಪಾಲಿಯೋಸಿನ್, ಇಯೋಸಿನ್ ಮತ್ತು ಒಲಿಗೊಸಿನ್.

ಬಸಿಲೊಸಾರಸ್ ಹಲ್ಲಿ ಎಂಬ ಹೆಸರಿನ ನಡುವೆಯೂ ಒಂದು ತಿಮಿಂಗಲ

ಪಾಲಿಯೋಸಿನ್ ಶಕದ ಕಾಲಮಾನ ೬೫ ರಿಂದ ೫೫ ದವಹಿಂ. ಈ ಶಕವು ಕ್ರೆಟೇಶಿಯಸ್-ಪಾಲಿಯೊಜೀನ್ ಅಳಿವು ಮತ್ತು ಆರಂಭಿಕ ಇಯೊಸೀನ್‌ನ ಸಮೃದ್ಧ ಅರಣ್ಯ ಪರಿಸರದ ನಡುವಿನ ಬದಲಾವಣೆಯ ಕಾಲ. ಖಂಡಗಳು ಆಧುನಿಕ ರೂಪವನ್ನು ಪಡೆಯುವ ಕಾಲ. ಎಲ್ಲಾ ಖಂಡಗಳು (ಹಾಗೂ ಭಾರತ) ಬೇರೆಯಾಗಿದ್ದವು. ಆಫ್ರೊ-ಯುರೇಶಿಯಾವು ಟೆಥಿಸ್ ಸಮುದ್ರದಿಂದ ಬೇರ್ಪಟ್ಟಿತ್ತು. ಅಮೆರಿಕಗಳು ಪನಾಮ ಕೊಲ್ಲಿಯಿಂದ ಬೇರ್ಪಟ್ಟಿದ್ದವು ಮತ್ತು ಅವುಗಳ ನಡುವೆ ಭೂಸೇತುವೆ ಇನ್ನೂ ರೂಪಗೊಂಡಿರಲಿಲ್ಲ. ಇದು ತಾಪಮಾನ ಹೆಚ್ಚುವ ಕಾಲಮಾನ ಮತ್ತು ಅರಣ್ಯಗಳು ದ್ರುವಗಳನ್ನು ತಲುಪಿದವು. ಸಾಗರಗಳನ್ನು ಒಮ್ಮೆ ಆಳುತಿದ್ದ ದೊಡ್ಡ ಸರೀಸೃಪಗಳ ಕಾಣೆಯಾದ ಕಾರಣಕ್ಕೆ ಶಾರ್ಕ್‌ಗಳು ಪ್ರಭಲವಾದವು. ಮೀಸೊಜೋಯಿಕ್‌ನಲ್ಲಿ ವಿಕಾಸವಾದ ಮಾಂಸಾಹಾರಿ ಕ್ರೆಡೊಂಟ್‌ನಂತಹ ಪ್ರಾಚೀನ ಸಸ್ತನಿಗಳು ಮತ್ತು ಆರಂಭಿಕ ಪ್ರೈಮೇಟ್‌ಗಳು ಜಗತ್ತನ್ನು ಆಕ್ರಮಿಸಿದವು. ಪರಿಣಾಮವಾಗಿ ಹತ್ತು ಕಿಲೊಗ್ರಾಂಗಿಂತಲೂ ದೊಡ್ಡವು ಯಾವುವೂ ಇರಲಿಲ್ಲ, ಸಸ್ತನಿಗಳು ತೀರ ಸಣ್ಣವಿದ್ದವು.[೨೩]

ಇಯೋಸಿನ್ ಶಕದ ಕಾಲಮಾನ ೫೫ ರಿಂದ ೩೩ ದವಹಿಂ. ಆರಂಭಿಕ ಇಯೋಸಿನ್‌ನಲ್ಲಿ ಪಾಲಿಯೋಸಿನ್‌ನಂತೆ ಜೀವಿಗಳು ಸಣ್ಣವಿದ್ದವು ಮತ್ತು ಅರಣ್ಯಗಳ ಇರುಕಿನಲ್ಲಿ ಜೀವಿಸುತ್ತಿದ್ದವು. ಯಾವುವೂ ಹತ್ತು ಕಿಲೋಗ್ರಾಂಗೂ ಮಿಂಚಿರಲಿಲ್ಲ.[೨೪] ಇವುಗಳಲ್ಲಿ ಆರಂಭಿಕ ಪ್ರೈಮೇಟ್‌ಗಳು, ತಿಮಿಂಗಿಲ, ಕುದುರೆಗಳು ಮತ್ತು ಸಸ್ತನಿಗಳ ಆರಂಭಿಕ ರೂಪಗಳೂ ಸೇರಿದ್ದವು. ಆಹಾರ ಸರಪಳಿಯ ತುದಿಯಲ್ಲಿ ಗ್ಯಾಸ್ಟೊರ್ನಿಸ್‌ನಂತಹ ಹಾರದ ದೊಡ್ಡ ಹಕ್ಕಿಗಳು ಇದ್ದವು. ಅವುಗಳ ಪೂರ್ವಜರಾದ ಡೈನೊಸಾರಸ್‌ಗಳನ್ನು ಹೊರತು ಪಡಿಸಿದರೆ ಭೂಮಿ ಇತಿಹಾಸದ ಹಕ್ಕಿಗಳು ಪ್ರಭಲವಾದ ಒಂದೇ ಕಾಲಮಾನ ಇದು. ತಾಪಮಾನವು ೩೦ ಡಿಗ್ರಿ ಸೆಲಿಸಿಯಸ್ ಇದ್ದು ದ್ರುವದಿಂದ ದ್ರುವಕ್ಕೆ ಹೆಚ್ಚು ವ್ಯತ್ಯಾಸವಾಗುತ್ತಿರಲಿಲ್ಲ. ಇಯೋಸಿನ್‌ ನಡುವಿನಲ್ಲಿ ಆಸ್ಟ್ರೇಲಿಯ ಮತ್ತು ಅಂಟಾರ್ಕಿಟಿಕ ನಡುವೆ ಸರ್ಕಮ್-ಅಂಟಾರ್ಕಿಟಿಕ್ ಪ್ರವಾಹ ಉಂಟಾಗಿ ಜಗತ್ತಿನಾದ್ಯಂತದ ಸಾಗರ ಪ್ರವಾಹಗಳನ್ನು ಏರುಪೇರು ಮಾಡಿ, ವಾತಾವರಣ ತಂಪಾಗಿಸುವ ಮೂಲಕ ಅರಣ್ಯಗಳ ಕುಗ್ಗುವಿಕೆಗೆ ಕಾರಣವಾಯಿತು. ಇದು ಸಸ್ತನಿಗಳು ಗಾತ್ರದಲ್ಲಿ ದೊಡ್ಡವಾಗಲು ಅವಕಾಶ ಮಾಡಿಕೊಟ್ಟಿತು ಮತ್ತು ಇದಕ್ಕೆ ಇಂದು ಪೂರ್ತಿಯಾಗಿ ನೀರಿಗೆ ಸೀಮಿತವಾದ ತಿಮಿಂಗಲ ಒಂದು ಉದಾಹರಣೆ. ಆಹಾರ ಸರಪಳಿಯ ತುದಿಯಲ್ಲಿ ಆಂಡ್ರಿಯೊಸಾರಕಸ್‌ನಂತಹ ಸಸ್ತನಿಗಳು ಮೇಲೆ ಇದ್ದವು ಮತ್ತು ಸಾಗರಗಳನ್ನು ಶಾರ್ಕ್‌ಗಳ ಬದಲಿಗೆ ಬಸಿಲೊಸಾರಸ್‌ನಂತಹ (ಹಲ್ಲಿ ಎಂಬ ಹೆಸರಿನ ನಡುವೆಯೂ ಇದೊಂದು ಸಾಗರ ಸಸ್ತನಿ) ತಿಮಿಂಗಲಗಳು ಪ್ರಭಲವಾದವು. ತಡವಾದ ಇಯೋಸಿನ್‌ನಲ್ಲಿ ರುತುಗಳ ಮರುಹುಟ್ಟು ಪಡೆಯುತ್ತವೆ. ಅದರೊಂದಿಗೆ ಸವಾನ್ನಾ ಪ್ರದೇಶಗಳು ಹೆಚ್ಚಾದವು ಮತ್ತು ಹುಲ್ಲುಗಳು ಹುಟ್ಟಿದವು.[೨೫][೨೬]

ಒಲಿಗೊಸಿನ್ ಶಕದ ಕಾಲಮಾನ ೩೩ ರಿಂದ ೨೩ ದವಹಿಂ. ಈ ಕಾಲಮಾನದಲ್ಲಿ ಹುಲ್ಲುಗಳು ವಿಕಾಸವಾದವು ಮತ್ತು ಇದು ಹಲವು ರೀತಿಯ ಹೊಸ ಪ್ರಭೇದಗಳು ಆನೆ. ಬೆಕ್ಕು, ನಾಯಿ, ಹೊಟ್ಟೆಚೀಲ ಸಸ್ತನಿಗಳು ಮತ್ತು ಇಂದು ಇರುವ ಇತರ ಸಸ್ತನಿ ಪ್ರಭೇದಗಳ ವಿಕಾಸಕ್ಕೆ ದಾರಿಯಾಯಿತು. ತಣ್ಣಾಗಾಗುವ ಪ್ರವೃತ್ತಿ ಮುಂದುವರೆದಿತ್ತು ಹಾಗೆಯೇ ರುತುವಿನಲ್ಲಿ ಮಳೆ. ಸಸ್ತನಿಗಳ ಗಾತ್ರ ಹಿಗ್ಗುವುದು ಮುಂದುವರೆಯಿತು. ಈ ಕಾಲಮಾನದಲ್ಲಿ ಗಾತ್ರದಲ್ಲಿ ಭಾರಿ ಎನ್ನಿಸಿದ ಪರಸೆರಥಿರಿಯಮ್ ಸಸ್ತನಿ ಮತ್ತು ಇತರ ಪೆರಿಸ್ಸೊಡಕ್ಟೈಲ್‌ಗಳು (ಬೆಸಸಂಖ್ಯೆಯ ಗೊರಸುಗಳುಳ್ಳ ಸಸ್ತನಿ) ವಿಕಾಸವಾದವು. ಈ ಕಾಲಮಾನದಲ್ಲಿ ಸಣ್ಣ ಮಟ್ಟದ ಜೀವಿಗಳ ಅಳಿವು ನಡೆಯಿತು ಇದನ್ನು “ಮಹಾ ಬಿರುಕು” ಎಂದು ಕರೆಯಲಾಗಿದೆ.[೨೭]

ನಿಯೋಜೀನ್ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನ ೨೩ ರಿಂದ ೩ ದವಹಿಂ. ಫನೆರೊಜೋಯಿಕ್‌ ಕಲ್ಪದಲ್ಲಿನ ತೀರ ಸಣ್ಣ ಅವಧಿ ಇದು. ಇದರಲ್ಲಿ ಎರಡು ಶಕಗಳಿವೆ. ಅವು ಮಿಯೋಸಿನ್ ಮತ್ತು ಪ್ಲಿಯೊಸಿನ್.[೨೮]

ಚಿತ್ರ:Miocene.jpg
ಮಿಯೋಸಿನ್‌ನ ಪ್ರಾಣಿಗಳು (ಚಾಲಿಕೊಥೀರಿಯಮ್, ಹಯೆನಡಾನ್, ಎಂಟೆಲೊಡಾಂಟ್)

ಮಿಯೋಸಿನ್ ಶಕದ ಕಾಲಮಾನ ೨೩ ರಿಂದ ೫ ದವಹಿಂ. ಈ ಕಾಲಮಾನದಲ್ಲಿ ಅರಣ್ಯಗಳನ್ನು ಹಿಂತಳ್ಳಿ ದೊಡ್ಡ ಮಟ್ಟದಲ್ಲಿ ಹುಲ್ಲುಗಳು ಹರಡುತ್ತವೆ. ಕೆಲ್ಪ್ (ಸಾಗರಗಳಲ್ಲಿ ಬದುಕುವ ಶೈವಲ ಅಥವಾ ಪಾಚಿ) ಅರಣ್ಯಗಳು ವಿಕಾಸವಾದವು ಮತ್ತು ಇದರೊಂದಿಗೆ ಸಮುದ್ರನಾಯಿ, ಸಮುದ್ರಬೆಕ್ಕಿನಂತಹ ಪ್ರಾಣಿಗಳು ಸಹ. ಈ ಕಾಲಮಾನದಲ್ಲಿ ಪೆರಿಸ್ಸೇಡಕ್ಟೈಲ್‌ಗಳು ಹಲವು ವೈವಿಧ್ಯತೆ ಪಡೆದು ವಿಕಾಸವಾದವು. ಇವುಗಳೊಂದಿಗೆ ವಾನರಗಳೂ ವಿಕಾಸವಾದವು ಮತ್ತು ಅವುಗಳಲ್ಲಿ ಮೂವತ್ತರಷ್ಟು ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ. ಒಣ ಮತ್ತು ಬೆಟ್ಟಗಳ ಪ್ರದೇಶವು ಪ್ರಮುಖವಾಗಿತ್ತು ಹಾಗೆಯೇ ಮೇಯುವ ಪ್ರಾಣಿಗಳು ಸಹ. ಟೆಥಿಸ್ ಸಮುದ್ರ ಕೊನೆಯದಾಗಿ ಮುಚ್ಚಿಕೊಂಡು ಅರೇಬಿಯ ಪರ್ಯಾದ್ವೀಪ ಮತ್ತು ಕಪ್ಪು, ಕೆಂಪು, ಮೆಡಿಟರೇನಿಯನ್ ಮತ್ತು ಕ್ಯಾಪ್ಸಿಯನ್ ಸಮುದ್ರಗಳು ರೂಪಗೊಂಡವು. ಇದು ಒಣಹವೆಯನ್ನು ಹೆಚ್ಚು ಮಾಡಿತು. ಹಲವು ಪ್ರಭೇದಗಳು ವಿಕಾಸವಾದವು, ನಡುವಿನ ಮಿಯೋಸಿನ್‌ನಲ್ಲಿ ಆಧುನಿಕ ಬೀಜ ಸಸ್ಯಗಳಲ್ಲಿ ಶೇ ೯೫ರಷ್ಟು ವಿಕಾಸವಾದವು.[೨೯]

ಪ್ಲಿಯೊಸಿನ್ ಶಕದ ಕಾಲಮಾನ ೫ ರಿಂದ ೩ ದವಹಿಂ. ಈ ಶಕದ ವಾತಾವರಣ ದೊಡ್ಡ ಮಟ್ಟದಲ್ಲಿ ಬದಲಾಗಿ ಆಧುನಿಕ ಪ್ರಭೇದಗಳು ವಿಕಾಸವಾಗಲು ಕಾರಣವಾಗುತ್ತದೆ. ಪನಾಮದ ರೂಪಗೊಳ್ಳುವಿಕೆ, ದ್ರುವಗಳಲ್ಲಿ ಹಿಮ ಪೇರುವಿಕೆ ಮತ್ತು ಈ ಕಾರಣದಿಂದ ದೊಡ್ಡ ಮಟ್ಟದ ಜೀವಿಗಳ ಸಾವು, ಭಾರತ ಮತ್ತು ಏಶಿಯಾ ಡೀಕೊಳ್ಳುವದರಿಂದ ಹಿಮಾಲಯ ಉಂಟಾಗುವುದು, ರೂಕೀಸ್ ಮತ್ತು ಅಪ್ಪಲಚಿಯನ್ ಬೆಟ್ಟಗಳ ನಿರ್ಮಾಣ, ಕೆಲವು ದಶಲಕ್ಷ ವರುಷಗಳು ಮೆಡಿಟರೇನಿಯನ್ ಸಮುದ್ರ ಒಣಗುವಿಕೆ ಕೆಲವು ಪ್ರಮುಖ ಘಟನೆಗಳು. ಅಸ್ಟ್ರಲೋಪಿತಿಕಸ್ ಆಫ್ರಿಕಾದಲ್ಲಿ ವಿಕಾಸವಾಗುತ್ತದೆ ಮತ್ತು ಮಾನವನ ಕವಲು ಆರಂಭವಾಗುತ್ತದೆ. ಪನಾಮ ಭೂಸೇತುವೆಯ ಕಾರಣಕ್ಕೆ ದಕ್ಷಿಣ ಮತ್ತು ಉತ್ತರ ಅಮೆರಿಕಗಳ ನಡುವೆ ಪ್ರಾಣಿಗಳು ವಲಸೆಹೋಗುವಿಕೆ ಸ್ಥಳೀಯ ಪರಿಸರದಲ್ಲಿ ವ್ಯಾಪಕ ಹಾನಿ ಉಂಟುಮಾಡುತ್ತದೆ. ವಾತಾವರಣದ ಬದಲಾವಣೆ ಸವನ್ನಾಗಳನ್ನು ಮುಂದೆ ತರುತ್ತಿದ್ದು ಇವು ಇನ್ನೂ ಜಗತ್ಯಿನಾದ್ಯಂತ ಹರಡುತ್ತಿವೆ. ಈ ಬದಲಾವಣೆಗಳು ಭಾರತಕ್ಕೆ ಮಾನ್ಸೂನನ್ನು, ಪೂರ್ವ ಏಶಿಯಾಕ್ಕೆ ಮರುಭೂಮಿಯನ್ನು ಮತ್ತು ಸಹಾರ ಮರುಭೂಮಿಯ ಆರಂಭವನ್ನು ತರುತ್ತವೆ. ಭೂಮಿಯ ಖಂಡಗಳು ಮತ್ತು ಸಮುದ್ರಗಳು ಇಂದು ಇದ್ದ ಸ್ಥಳಕ್ಕೆ ಚಲಿಸುತ್ತವೆ ಮತ್ತು ಇಂದಿನವರೆಗೂ ದೊಡ್ಡ ಬದಲಾವಣೆಯಾಗಿಲ್ಲ.[೩೦][೩೧]

ಕ್ವಾರ್ಟೆನರಿ ಅವಧಿ[ಬದಲಾಯಿಸಿ]

ಈ ಅವಧಿಯ ಕಾಲಮಾನವು ೩ ದವಹಿಂ ನಿಂದ ಇಂದಿನವರೆಗೂ ಇದೆ. ಈ ಅವಧಿಯಲ್ಲಿ ಎರಡು ಶಕಗಳಿವೆ ಮತ್ತು ಅವು ಪ್ಲಿಸ್ಟೋಸಿನ್ ಮತ್ತು ಹೊಲೋಸಿನ್.

ಪ್ಲಿಸ್ಟೋಸಿನ್‌ನ ದೊಡ್ಡ ಪ್ರಾಣಿಗಳು (ಮ್ಯಾಮೊಥ್, ಗವಿ ಸಿಂಹ, ಉಣ್ಣೆ ರೈನೊ, ಮೆಗಲೊಸೆರಸ್ ಮತ್ತು ಅಮೆರಿಕ ಕುದುರೆ)

ಪ್ಲಿಸ್ಟೋಸಿನ್ ಶಕದ ಕಾಲಮಾನ ೩ ದಶಲಕ್ಷ ವರುಷಗಳಿಂದ ೧೨,೦೦೦ ವರುಷಗಳ ವರೆಗೂ ಇದೆ. ಮಧ್ಯ ಇಯೋಸಿನ್‌ನಲ್ಲಿ ಆರಂಭವಾದ ತಣ್ಣಗಾಗುವ ಪ್ರಕ್ರಿಯಿಂದಾಗಿ ಈ ಕಾಲಮಾನದಲ್ಲಿ ಹಿಮಯುಗಗಳು ಉಂಟಾಗಿವೆ. ಹಿಮವು ಸಮಭಾಜಕ ವೃತ್ತದತ್ತ ಚಲುಸುತ್ತಿದ್ದಂತೆ ಉತ್ತರ ಮತ್ತು ದಕ್ಷಿಣದ ಉಷ್ಣವಲಯದ ರೇಖೆಗಳ ಪ್ರದೇಶಗಳು ತೀವ್ರ ಚಳಿ ಮತ್ತು ತೀವ್ರವಲ್ಲದ ಬೇಸಿಗೆಗಳನ್ನು ಕಾಣುತ್ತಿವೆ. ಇದರೊಟ್ಟಿಗೆ ಆಫ್ರಿಕಾ ತೀವ್ರ ಬರಗಾಲವನ್ನು ಎದುರಿಸಿತು ಮತ್ತು ಸಹಾರ, ನಮಿಬ್ ಮತ್ತು ಕಲಹರಿ ಮರುಭೂಮಿಗಳು ರೂಪಗೊಂಡವು. ಇದನ್ನು ಎದುರಿಸಲು ಆನೆಗಳ ವಂಶದ ಹಲವು ಪ್ರಭೇದಗಳು, ಉಗ್ರ ತೋಳ (ಡೈರ್ ವುಲ್ಫ್) ಮತ್ತು ಹೆಸರಾಂತ ಹೋಮೊ ಸೆಪೆಯನ್ಸ್‌ನ (ಮಾನವ) ವಿಕಾಸವಾದವು. ಒಂದು ಲಕ್ಷ ವರುಷಗಳ ಹಿಂದೆ ಆಫ್ರಿಕಾದ ಬರಗಾಲ ಕೊನೆಗೊಂಡು ಆದಿ ಮಾನವನ ಹರಡುವಿಕೆ ಆಯಿತು. ಪ್ಲಿಸ್ಟೋಸಿನ್ ಕೊನೆಗೆ ದೊಡ್ಡ ಪ್ರಾಣಿಗಳು ಮತ್ತು ಮಾನವನ ವಂಶಗಳು (ಹೋಮೋ ಸೆಪಿಯನ್ಸ್ ಹೊರತು ಪಡಿಸಿ) ಅಳಿದವು. ಎಲ್ಲಾ ಖಂಡಗಳಲ್ಲಿ ಇದು ಆಯಿತು ಆದರೆ ಇದರ ತೀವ್ರತೆ ಆಫ್ರಿಕಾದಲ್ಲಿ ಕಡಿಮೆ ಇತ್ತು.[೩೨]

ಹೊಲೋಸಿನ್ ೧೨,೦೦೦ ವರುಷಗಳಿಂದ ಇಂದಿನವರೆಗೂ ಇದೆ. ಎಲ್ಲಾ ಇತಿಹಾಸವೂ ಈ ಶಕದೊಳಗೆಯೇ ಬರುತ್ತದೆ.[೩೩] ಕ್ರಿ ಪೂ ೧೦,೦೦೦ ವರುಷಗಳಿಂದ ಈಚಿನ ಅಳಿವನ್ನು “ಆರನೆಯ ಸಾಮೂಹಿಕ ಅಳಿವು” ಎಂದು ಬಣ್ಣಿಸಲಾಗಿದ್ದು ಮಾನವನ ಚಟುವಟಿಕೆಯೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಅಳಿವಿನ ದರ ವರುಷಕ್ಕೆ ೧,೪೦,೦೦೦ ಪ್ರಭೇದಗಳಷ್ಟು ಇದೆ.[೩೪]

ಟಿಪ್ಪಣಿಗಳು ಮತ್ತು ಉಲ್ಲೇಖಗಳು[ಬದಲಾಯಿಸಿ]

  1. Cohen, K.M.; Finney, S.C.; Gibbard, P.L.; Fan, J.-X. (2013). "International Chronostratigraphic Chart v 2015/01" (PDF). Episodes 36: 199-204. International Commission on Stratigraphy. Retrieved 2015-11-26.
  2. University of California.[ http://www.ucmp.berkeley.edu/paleozoic/paleozoic.php "Paleozoic"]. University of California.
  3. University of California. "Cambrian". University of California.
  4. University of California. "Ordovician". University of California.
  5. University of California. "Silurian". University of California.
  6. University of California. "Devonian". University of California.
  7. Monte Hieb. "Carboniferous Era". unknown.
  8. University of California. "Carboniferous". University of California.
  9. Natural History Museum. "The Great Dying". Natural History Museum.
  10. University of California. "Permian Era". University of California.
  11. Alan Logan. "Triassic". University of New Brunswick.
  12. Alan Kazlev. "Early Triassic" Archived 2015-04-27 ವೇಬ್ಯಾಕ್ ಮೆಷಿನ್ ನಲ್ಲಿ.. unknown.
  13. Rubidge.[ http://palaeos.com/mesozoic/triassic/midtrias.html "Middle Triassic"]. unknown.
  14. Graham Ryder; David Fastovsky & Stefan Gartner. "Late Triassic Extinction". Geological Society of America.
  15. Enchanted Learning. "Late Triassic life". Enchanted Learning
  16. ೧೬.೦ ೧೬.೧ ೧೬.೨ ೧೬.೩ Carol Marie Tang. "Jurassic Era". California Academy of Sciences
  17. Alan Kazlev. "Early Jurassic". unknown.
  18. Enchanted Learning. "Middle Jurassic". Enchanted Learning
  19. Bob Strauss. "Cretaceous sauropods" Archived 2015-03-19 ವೇಬ್ಯಾಕ್ ಮೆಷಿನ್ ನಲ್ಲಿ.. author.
  20. ೨೦.೦ ೨೦.೧ ೨೦.೨ Carl Fred Koch. [Carl Fred Koch. "Cretaceous". Old Dominion University. "Cretaceous"]. Old Dominion University.
  21. University of California. "Cretaceous". University of California.
  22. Elizabeth Howell. "K-T Extinction event". Universe Today.
  23. Encyclopedia Britannica. "Paleocene". Encyclopedia Britannica.
  24. University of California. "Eocene Epoch". University of California.
  25. University of California.[ http://www.ucmp.berkeley.edu/tertiary/eocene.php "Eocene Climate"]. University of California.
  26. National Geographic Society. "Eocene" Archived 2010-05-08 ವೇಬ್ಯಾಕ್ ಮೆಷಿನ್ ನಲ್ಲಿ.. National Geographic
  27. University of California. "Oligocene". University of California.
  28. Encyclopedia Britannica. "Neogene". Encyclopedia Britannica.
  29. University of California. "Miocene". University of California.
  30. University of California. "Pliocene". University of California.
  31. Jonathan Adams. "Pliocene climate". Oak Ridge National Library.
  32. University of California. "Pleistocene". University of California.
  33. University of California. "Holocene". University of California.
  34. International Union for Conservation of Nature. "Sixth Extinction". International Union for Conservation of Nature.
  • Markov, Alexander V.; Korotayev, Andrey V. (2007). "Phanerozoic marine biodiversity follows a hyperbolic trend". Palaeoworld. 16 (4): 311–318. doi:10.1016/j.palwor.2007.01.002.
  • Miller, K. G.; Kominz, M. A.; Browning, J. V.; Wright, J. D.; Mountain, G. S.; Katz, M. E.; Sugarman, P. J.; Cramer, B. S.; Christie-Blick, N; Pekar, S. F.; et al. (2005). "The Phanerozoic record of global sea-level change". Science. 310 (5752): 1293–1298. Bibcode:2005Sci...310.1293M. doi:10.1126/science.1116412. PMID 16311326.