ವಿಷಯಕ್ಕೆ ಹೋಗು

ಅಕ್ಬರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಬರ್
ಜನ್ಮನಾಮ: ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್
ಉಪಾಧಿ: ಮೊಘಲ್ ಸಾಮ್ರಾಜ್ಯಸಾಮ್ರಾಟ
ಜನ್ಮ: ಅಕ್ಟೋಬರ್ ೧೫ ೧೫೪೨
ಜನ್ಮ ಸ್ಥಳ: ಉಮರ್ ಕೋಟೆ, ಸಿಂಧ್
ಮೃತ್ಯು: ಅಕ್ಟೋಬರ್ ೨೭ ೧೬೦೫
ಉತ್ತರಾಧಿಕಾರಿ: ಜಹಾಂಗೀರ್
ವಿವಾಹ:

ಜೋಧಾಬಾಯಿ
ಮರಿಯಂ-ಉಝ್-ಝಮಾನಿ
ರುಕಯ್ಯಾ ಸುಲ್ತಾನ್ ಬೇಗಂ
ಸಕೀನಾ ಬಾನು ಬೇಗಂ
ಸಲೀಮಾ ಸುಲ್ತಾನ್ ಬೇಗಂ

ಮಕ್ಕಳು:

ಜಹಾಂಗೀರ್, ಮಗ
ಷಾ ಮುರಾದ್, ಮಗ
ದನ್ಯಾಲ್, ಮಗ
ಷಹಝಾದಾ ಖಾನಂ, ಮಗಳು
ಶಕ್ರುನ್ನಿಸಾ ಬೇಗಂ, ಮಗಳು
ಆರಂ ಬಾನು ಬೇಗಂ, ಮಗಳು
ಕ್ಸಿಮಿನಿ ಬೇಗಂ, ಮಗಳು

The Mughal Emperor Akbar shoots the Rajput warrior Jaimal during the Siege of Chittorgarh in 1567
Bullocks dragging siege-guns up hill during Akbar's attack on Ranthambhor Fort in 1568

ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ (ಪರ್ಶಿಯನ್ ಭಾಷೆಯಲ್ಲಿ: جلال الدین محمد اکبر), (ಅಕ್ಟೋಬರ್ ೧೫ ೧೫೪೨ಅಕ್ಟೋಬರ್ ೨೭ ೧೬೦೫) ಹುಮಾಯೂನ್ ನ ಮಗ, ಮೊಘಲ್ ಸಾಮ್ರಾಜ್ಯ ದ ದೊರೆಯಾಗಿ ೧೫೫೬ರಿಂದ ೧೬೦೫ರ ವರೆಗೆ ಆಳಿದನು. ಅಕ್ಬರ್[] []ಸಿಂಹಾಸನವೇರಿದಾಗ ಕೇವಲ ೧೩ ವರ್ಷ ವಯಸ್ಸಾದರೂ ಮುಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿ ಚರಿತ್ರೆಯಲ್ಲಿ ಪರಿಗಣಿತನಾಗಿದ್ದಾನೆ.

ಬಾಲ್ಯ

[ಬದಲಾಯಿಸಿ]
Akbar as a boy
  • ಅಕ್ಬರನ ಜನ್ಮ ರಜಪೂತರ ಕೋಟೆಯಾದ ಉಮರ್ ಕೋಟೆಯಲ್ಲಿ ಆಶ್ರಯ ಪಡೆಯುತ್ತಿದ್ದಹುಮಾಯೂನ್ ಮತ್ತು ಹಮೀದಾ ಬಾನು ಬೇಗಂರಿಗೆ ಜನಿಸಿದನು. ೧೫೪೦ರಲ್ಲಿ ಆಫ್ಘನ್ ದೊರೆಯಾದ ಶೇರ್ ಷಾ ಸೂರಿ ಬಹಳಷ್ಟು ಕಾಳಗಗಳನ್ನು ಮಾಡಿ ಹುಮಾಯೂನನನ್ನು ಗಡೀಪಾರು ಮಾಡಿದನು.
  • ಅಕ್ಬರನನ್ನು ಅವನ ಮಾವ ಅಸ್ಕರಿ ಮತ್ತು ಅವನ ಹೆಂಡತಿ ಆಫ್ಘಾನಿಸ್ತಾನದಲ್ಲಿ ಬೆಳೆಸಿದರು. ಬಾಲ್ಯಾವಸ್ಥೆಯನ್ನು ಬೇಟೆ ಆಡುತ್ತಾ, ಓಡುತ್ತಾ, ಮತ್ತು ಕಾದಾಡುತ್ತಾ ಕಳೆದು, ಓದು-ಬರಹ ಕಲಿಯಲಿಲ್ಲ.ಹುಮಾಯೂನ್ ದೆಹಲಿಯನ್ನು ೧೫೫೫ರಲ್ಲಿ ಮರುಕಬಳಿಸಿದನು. ಇದಾದ ಸ್ವಲ್ಪ ತಿಂಗಳುಗಳಲ್ಲಿಯೇ ಅಪಘಾತದಲ್ಲಿ ತೀರಿಹೋದನು.

ರಾಜ್ಯಾಭಿಷೇಕ

[ಬದಲಾಯಿಸಿ]
The Mughal Emperor Akbar is depicted training an elephant

ಅಕ್ಬರನು []ಫೆಬ್ರವರಿ ೧೪, ೧೫೫೬ರಲ್ಲಿ ಸಿಕಂದರ್ ಷಾನೊಂದಿಗೆ ಯುದ್ಧದ ಮಧ್ಯದಲ್ಲಿ ಸಿಂಹಾಸನವನ್ನೇರಿ ಷಹನ್ ಷಾ ಎಂಬ ಬಿರುದನ್ನು ಪಡೆದನು.

ಹೇಮುವಿನೊಂದಿಗೆ ಕದನ

[ಬದಲಾಯಿಸಿ]
  • ಸಿಂಹಾಸನವನ್ನೇರಿದ ಕೆಲವು ಕಾಲದಲ್ಲಿಯೇ ಶೇರ್ ಷಾ ಸಂತತಿಯಾದ ಸಿಕಂದರ್ ಷಾ ಸೂರಿಯ ವಿರುದ್ಧ ಪಂಜಾಬ್ ನಲ್ಲಿ ಕದನಕ್ಕೆ ಹೋದನು. ಸಿಕಂದರ್ ಷಾ ಅಕ್ಬರನಿಗೆ ಬಹಳ ತೊಂದರೆ ಕೊಡದೇ ಹಿಂದೆ ಸರಿದು ರಾಜ್ಯವನ್ನು ಬಿಟ್ಟುಕೊಟ್ಟನು. ಆದರೆ ಹೇಮು ಎಂಬ ಹಿಂದೂ ಯೋಧನು ಆಶ್ಚರ್ಯಕರ ರೀತಿಯಲ್ಲಿ ಅಕ್ಬರನ ಸೇನಾಪತಿಯನ್ನು ಸೋಲಿಸಿ ದೆಹಲಿಯನ್ನು ಆಕ್ರಮಿಸಿದನು. * ಈ ಸುದ್ದಿಯನ್ನು ತಿಳಿದ ಅಕ್ಬರ್ ಬಾಯಿರಾಂ ಜೊತೆಗೂಡಿ ದೆಹಲಿಯತ್ತ ಆಕ್ರಮಣ ಮಾಡಿ ನವೆಂಬರ್ ೫ ೧೫೫೬ರಂದು ಸಾಕಷ್ಟು ಸಂಖ್ಯೆಯಲ್ಲಿದ್ದ ಹೇಮುವಿನ ಸೈನ್ಯವನ್ನು ಎರಡನೇ ಪಾಣಿಪತ್ ಯುದ್ಧದಲ್ಲಿ ಸೋಲಿಸಿ ಕೊಂದನು.
  • ಹೇಮುವಿನ ಕತ್ತರಿಸಿದ ರುಂಡವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು. ಇನ್ನೂ ಅಮಾನುಷವಾಗಿ ಅಕ್ಬರನು ಸತ್ತ ಸೈನಿಕರ ರುಂಡಗಳಿಂದ ಜಯದ ಕಂಬವನ್ನು ಮಾಡಿಸಿದನು. ಈ ಜಯದಿಂದ ಅಕ್ಬರನಿಗೆ ೧,೫೦೦ ಕಾಳಗದ ಆನೆಗಳು ದೊರೆತು ಸಿಕಂದರ್ ಷಾನನ್ನು ಸೋಲಿಸಿದನು. ಸಿಕಂದರನ ಸಹೋದರ ಆದಿಲ್ ಷಾ ಬಂಗಾಳದಲ್ಲಿ ಒಂದು ಯುದ್ಧದಲ್ಲಿ ತೀರಿಹೋದನು.

ಪುನಃ ಸ್ಥಾಪನೆ

[ಬದಲಾಯಿಸಿ]
  • ಅಕ್ಬರನು ವಿವಿಧ ಧರ್ಮೀಯರನ್ನು ತನ್ನ ಮಂತ್ರಿಮಂಡಲಕ್ಕೆ ಆಹ್ವಾನಿಸಿದನು. ರಜಪೂತರ ಸ್ನೇಹ ಕೋರಿ ದೊರೆಯ ಮಗಳಾದ ಹೀರಾ ಕುಂವರಿಯನ್ನು ಮದುವೆಯಾದನು. ಇವಳು ಅಕ್ಬರನ ರಾಣಿಯಾಗಿ ಜೋಧಾಬಾಯಿ ಎಂಬ ಹೆಸರು ಪಡೆದಳು. ಸಲೀಂ ಎಂಬ ಮಗನನ್ನು ಹಡೆದಳು, ಇವನು ಜಹಾಂಗೀರನಾಗಿ ಮುಂದಿನ ಮುಘಲ್ ದೊರೆಯಾದನು.
  • ಅಕ್ಬರನ ಕಾಲದಲ್ಲಿ ಅತಿ ಹೆಚ್ಚು ಹಿಂದೂಗಳನ್ನು ನಾಗರಿಕ ಸೇವೆಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಗೋವಾ ಪ್ರದೇಶದ ಮರಿಯಂ ಎಂಬ ಕ್ರೈಸ್ತ ಹುಡುಗಿಯನ್ನೂ ಮದುವೆಯಾದನು. ಇತರ ರಜಪೂತ ದೊರೆಗಳು ತಮ್ಮ ಹೆಣ್ಣುಮಕ್ಕಳನ್ನು ಅಕ್ಬರನಿಗೆ ಕೊಟ್ಟು ಮದುವೆ ಮಾಡಿದರು. ಇದರಿಂದ ಅಕ್ಬರನಿಗೆ ಅವರ ಸಹಕಾರ ದೊರೆಯಿತು.
  • ರಜಪೂತ ಸೈನಿಕರು ಮೋಘಲ್ ಸಾಮ್ರಾಜ್ಯದ ಪರವಾಗಿ ಮುಂದಿನ ೧೦೦ ವರ್ಷಗಳಷ್ಟು ಕಾಲ ಕಾದಾಡಿದರು. ಅಕ್ಬರನು ನಂತರ ಮುಘಲ್ ಸಾಮ್ರಾಜ್ಯವನ್ನು ಮಾಳ್ವ (೧೫೬೨), ಗುಜರಾತ್ (೧೫೭೨), ಬಂಗಾಳ (೧೫೭೪), ಕಾಬುಲ್ (೧೫೮೧), ಕಾಶ್ಮೀರ (೧೫೮೬), ಮತ್ತು ಕಂದೇಶ ಪ್ರದೇಶಗಳಲ್ಲಿ ವಿಸ್ತರಿಸಿದನು.
  • ಅಕ್ಬರನ ತೆರಿಗೆ ಸುಧಾರಣೆಯು ಒಂದು ಗಮನಾರ್ಹ ಸಾಧನೆ. ಮುಘಲ್ ಸಾಮ್ರಾಜ್ಯದ ಖಜಾನೆ ಭರ್ತಿ ಮಾಡಲು ಇದು ಬಹಳಷ್ಟು ಕಾರಣವಾಯಿತು. ಅವನು ಮುಸ್ಲಿಮೇತರರ ಮೇಲೆ ಹೇರಿದ್ದ ಜಝಿಯಾ ಕರವನ್ನು ರದ್ದುಪಡಿಸಿದನು.

ಅಕ್ಬರನ ವ್ಯಕ್ತಿತ್ವ

[ಬದಲಾಯಿಸಿ]
  • ಅಕ್ಬರನು ಒಬ್ಬ ಉದಾರಶೀಲ ಮತ್ತು ಧೀಮಂತ ದೊರೆಯಾಗಿ ಪ್ರಜೆಗಳ ಪ್ರೀತ್ಯಾದರಗಳನ್ನು ಪಡೆದನು. ಅಬುಲ್ ಫಝಲ್ ಮತ್ತು ಅಕ್ಬರನ ತೀಕ್ಷ್ಣ ವಿಮರ್ಶಕ ಬಾದಯೂನಿ ಅಕ್ಬರನ ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಯುದ್ಧಭೂಮಿಯಲ್ಲಿ ಧೈರ್ಯಶಾಲಿಯಾಗಿ ಕಾದಾಡಿ ಸಂಬಂಧಿಗಳಿಗೆ ಪ್ರೀತಿಪಾತ್ರನಾಗಿದ್ದನು.
  • ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸದೇ ಬಿಡುತ್ತಿರಲಿಲ್ಲ. ಬಹಳಷ್ಟು ಚರಿತ್ರಾಕಾರರು ನಂಬುವ ಪ್ರಕಾರ ಅಕ್ಬರನಿಗೆ ಹೆಣ್ಣುಗಳ ಲಾಲಸೆಯಿತ್ತು. ಜೊತೆಗೆ ಕುಡಿತದ ಚಟವೂ ಇತ್ತು.ಅವನು ಮುಸ್ಲಿಮೇತರ ಪ್ರಜೆಗಳಿಗೆ ಜೆಸಿಯಾ ಕರವನ್ನು ತೆಗೆದು ಹಾಕಿದ್ದರು[]

ಮತೀಯ ಸಾಮರಸ್ಯ

[ಬದಲಾಯಿಸಿ]
  • ಅಕ್ಬರನ ಮತೀಯನೀತಿ ಇತಿಹಾಸದಲ್ಲಿ ಸ್ಮರಣೀಯ. ಉನ್ನತ ಧ್ಯೇಯಗಳನ್ನು ಹೊಂದಿ ಭಾವಜೀವಿಯಾಗಿದ್ದ ಆತ ಎಲ್ಲ ಮತಗಳ ತತ್ವ್ತಗಳನ್ನೂ ಗ್ರಹಿಸಿ ಮತೀಯ ಏಕತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದ. ಈ ಗುರಿಯನ್ನು ಸಾಧಿಸಲು 1581ರಲ್ಲಿ ದೀನ್-ಏ-ಇಲಾಹಿ, ಎಂಬ ಹೊಸ ಮತವನ್ನು ಸ್ಥಾಪಿಸಿದ.
  • ಅದು ಪ್ರಗತಿಪರ ವಿಚಾರಶೀಲರ ಸಂಘವಾಗಿತ್ತು; ಸರ್ವಧರ್ಮ ಸಹಿಷ್ಣುತೆಯ ಆದರ್ಶವಾಗಿತ್ತು. ಈ ಹೊಸ ಮತದ ಪ್ರಕಾರ ಸರ್ವಶಕ್ತನಾದ ದೇವರು ಒಬ್ಬನೇ. ಎಲ್ಲರೂ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅನುಸರಿಸಿ ವಿವೇಚನೆಗೆ ತಲೆಬಾಗಬೇಕು. ಪುಜೆ-ಪುರಸ್ಕಾರ ಮತ್ತು ಪುರೋಹಿತರ ಆವಶ್ಯಕತೆ ಇಲ್ಲ.
  • ದೀನ್-ಏ-ಇಲಾಹಿ ಸರ್ವ ಮತಗಳ ಆಧ್ಯಾತ್ಮಿಕ ಮತ್ತು ತಾತ್ವ್ತಿಕ ಸಂಪ್ರದಾಯಗಳ ಸಂಗ್ರಹವಾಗಿತ್ತು. ಧರ್ಮೋಪದೇಶಕರಿಗಾಗಲಿ ಮೌಢ್ಯ ಮತ್ತು ಕಂದಾಚಾರಗಳಿಗಾಗಲಿ ಈ ಮತದಲ್ಲಿ ಅವಕಾಶವಿರಲಿಲ್ಲ. ಈ ಮತಕ್ಕೆ ಸೇರಲು ಯಾರನ್ನೂ ಬಲಾತ್ಕರಿಸುತ್ತಿರಲಿಲ್ಲ. ವಿಚಾರಶೀಲರಾದ ಹದಿನೆಂಟು ಜನರು ಮಾತ್ರ ಅದನ್ನು ಅವಲಂಬಿಸಿದ್ದರು.
  • ಅವರಲ್ಲಿ ರಾಜ ಬೀರಬಲ್ಲನೂ ಒಬ್ಬ. ಅಕ್ಬರ್ ವೈಯಕ್ತಿಕವಾಗಿ ಆಧ್ಯಾತ್ಮಿಕ ಜೀವನದ ರಹಸ್ಯಗಳನ್ನು ಅರಿಯಲು ಕುತೂಹಲಿಯಾಗಿದ್ದವನು. ಅವನು ಅನೇಕ ವೇಳೆ ಏಕಾಂಗಿಯಾಗಿ ತನ್ನ ಅರಮನೆಯ ಪ್ರಾಂಗಣದಲ್ಲಿ ಕುಳಿತು ಮಧ್ಯರಾತ್ರಿಯ ವರೆಗೂ ನಭೋಮಂಡಲವನ್ನು ವೀಕ್ಷಿಸುತ್ತ ಜೀವನದ ಸತ್ಯಾಸತ್ಯಗಳ ವಿಚಾರವಾಗಿ ದೀರ್ಘಾಲೋಚನೆಗಳಲ್ಲಿ ಮಗ್ನನಾಗುತ್ತಿದ್ದ.
  • ಜನರ ಮತೀಯ ಮೌಢ್ಯಗಳನ್ನು ಕಂಡು ಮರುಗುತ್ತಿದ್ದ. ಸರ್ವಧರ್ಮಗಳ ಸಮನ್ವಯವಾದ ದೀನ್-ಇಲಾಹಿಯ ಮುಖಾಂತರ ಜನರ ಭಿನ್ನಭಾವಗಳನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದ. ಈ ಪ್ರಯತ್ನದಲ್ಲಿ ಕೆಲವು ಅಂಶಗಳು ಅವನಿಗೆ ಸಹಕಾರಿಯಾದುವು.
  • ಮೊದಲನೆಯದಾಗಿ ಆತನ ತಂದೆ ಮತ್ತು ತಾತ ಸಂಪ್ರದಾಯಶರಣರಾಗಿರದೆ ಉದಾರ ಪಂಥಿಗಳಾಗಿದ್ದರು. ಎರಡನೆಯದಾಗಿ ಆತನು ರಾಜಪುತ್ರ ರಾಜಕುಮಾರಿಯನ್ನು ವಿವಾಹವಾದದ್ದು ಅವನ ವಿಚಾರಧಾರೆಯನ್ನು ಬದಲಾಯಿಸಿತು.
  • ಕೊನೆಯದಾಗಿ ನಿಕಟವರ್ತಿಗಳಾದ ಶೇಕ್ ಮುಬಾರಕ್, ಫೈಜಿ ಮತ್ತು ಅಬುಲ್ ಫಜ಼ಲ್ ಅವರ ಭಾವನೆಗಳು ಮತ್ತು ವಿಚಾರಧಾರೆಗಳು ಅಕ್ಬರನ ಮೇಲೆ ಪರಿಣಾಮ ಬೀರಿದುವು. ‘ಜೀವಾತ್ಮಗಳು ಪರಮಾತ್ಮನ ಅಂಶಗಳು ಮತ್ತು ಕೊನೆಗೆ ಪರಮಾತ್ಮನಲ್ಲೇ ಐಕ್ಯವಾಗುತ್ತವೆ', ಎಂಬ ಸೂಫಿó ತತ್ವ್ತದಲ್ಲಿ ಅವನಿಗೆ ಬಹಳ ನಂಬಿಕೆ. ಅಕ್ಬರ್ 1575ರಲ್ಲಿ ಸಿಕ್ರಿ ಎಂಬಲ್ಲಿ ಇಬದತ್ಖಾನವನ್ನು (ಪ್ರಾರ್ಥನಾಮಂದಿರ) ಕಟ್ಟಿಸಿದ.
  • ಇಲ್ಲಿ ಸಾಮ್ರಾಜ್ಯದ ಎಲ್ಲ ಭಾಗಗಳಿಂದಲೂ ಹಿಂದೂ, ಜೈನ, ಪಾರಸಿ, ಕ್ರೈಸ್ತ ಮತ್ತು ಮಹಮದೀಯ ಮತದ ಪಂಡಿತರು ಸಭೆ ಸೇರಿ ಅಕ್ಬರನ ಸಂದೇಹಗಳನ್ನು ನಿವಾರಿಸ ಬೇಕಾಗಿದ್ದಿತು. ಆದರೆ ನಾನಾ ಪಂಥಗಳ ವಿದ್ವಾಂಸರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ವಾದ ವಿವಾದದಲ್ಲಿ ನಿರತರಾಗಿ ಸಮಸ್ಯೆಗಳನ್ನೇ ಸೃಷ್ಟಿಸಿದರು.
  • ಆದ್ದರಿಂದ ಅಕ್ಬರ್ ತಾನೇ ಸರ್ವಧರ್ಮಗಳ ಮುಖಂಡತ್ವವನ್ನು ವಹಿಸಿಕೊಂಡು ಮತೀಯ ಕಚ್ಚಾಟಗಳನ್ನು ನಿಲ್ಲಿಸಿ ತನ್ನ ತೀರ್ಪನ್ನು ಅವರು ಒಪ್ಪುವಂತೆ ವಿಧೇಯಕ ಮಾಡಿದ. ಅಕ್ಬರ್ ತಾನೊಬ್ಬ ಪ್ರವಾದಿ ಎಂದು ನಂಬಿಯೂ ಇರಲಿಲ್ಲ. ಹಾಗೆ ಪ್ರಚಾರವನ್ನೂ ಮಾಡಲಿಲ್ಲ. ಆದರೆ ವಿಭಿನ್ನ ಮತೀಯರನ್ನು ಸಮತೆಯ ಆಧಾರದ ಮೇಲೆ ಒಂದುಗೂಡಿಸಲು ಸತತವಾಗಿ ಪ್ರಯತ್ನಪಟ್ಟ.
  • ಅಲ್ಲದೆ ಅವನ ಆಳ್ವಿಕೆಯು ಮಹಾ ಘಟನಾವಳಿಗಳಿಂದ ಕೂಡಿದ ಉಜ್ವಲ, ಐತಿಹಾಸಿಕ ಕಾಲವಾಗಿತ್ತು. ಆದ್ದರಿಂದ ಚರಿತ್ರಕಾರರು ಅಕ್ಬರನನ್ನು ಮಹಾಶಯ ಎಂದು ಕರೆದರು. ಅಕ್ಬರನ ಕಾಲದಲ್ಲಿ ಮುಘಲ್ ಸಾಮ್ರಾಜ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇದ್ದರು. ಅಕ್ಬರನು ಸಿಂಹಾಸನವನ್ನೇರಿದ ಕಾಲದಲ್ಲಿ ಮುಘಲ್ ಸಾಮ್ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದರು.
  • ಆದರೆ ಆಡಳಿತಗಾರರು ಎಲ್ಲರೂ ಮುಸ್ಲಿಮರಾಗಿದ್ದರು. ಇಂತಹ ಧ್ರುವೀಕೃತ ಕಾಲದಲ್ಲಿ ಅಕ್ಬರನು ಧರ್ಮ ಸಹಿಷ್ಣುತೆಯನ್ನು ಪ್ರೋತ್ಸಾಹಿಸಿದನು. ಹಿಂದೂಗಳನ್ನು ಉನ್ನತಹುದ್ದೆಗಳಿಗೆ ಏರಿಸಿದನು. ಜಝಿಯಾ ಕರವನ್ನು ರದ್ದುಪಡಿಸಿದನು. ಕ್ಯಾಥೊಲಿಕ್ ಚರ್ಚಿನ ಜೊತೆಗೂ ಒಳ್ಳೆ ಸಂಬಂಧ ಹೊಂದಿದ್ದ ಅಕ್ಬರ್ ತನ್ನ ಮೂರು ಮೊಮ್ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದನು. (ಇವರು ನಂತರ ಮುಸ್ಲಿಮರಾಗಿ ಮತಾಂತರ ಹೊಂದಿದರು)
  • ಅಕ್ಬರನು ಇಬಾದತ್ ಖಾನಾ ಎಂಬ ಕಟ್ಟಡವನ್ನು ಕಟ್ಟಿಸಿದನು. ಇದರಲ್ಲಿ ಧಾರ್ಮಿಕ ತರ್ಕಗಳನ್ನು ಏರ್ಪಡಿಸುತ್ತಿದ್ದನು. ಇಸ್ಲಾಮೀಯ ಸೂಫಿ ಪಂಥ ಮತ್ತು ಹಿಂದೂ ಧರ್ಮದ "ಭಕ್ತಿ" ಪಂಥಗಳನ್ನು ಆಧರಿಸಿ ದಿನ್-ಇ-ಇಲಾಹಿ ಎಂಬ ಧರ್ಮವನ್ನು ಹುಟ್ಟುಹಾಕಿದನು. ಇವನ ಧಾರ್ಮಿಕ ನಂಬಿಕೆಯನ್ನು ಕಟ್ಟಾ ಮುಸ್ಲಿಮರು ಸಹಿಸಲಿಲ್ಲ.
  • ಇವರು ಅಕ್ಬರನ ವಿರುದ್ಧ ಬಹಳಷ್ಟು ಗಾಳಿಸುದ್ದಿಯನ್ನು ಹಬ್ಬಿಸಿದರು. ಹಿಂದೂ-ಮುಸ್ಲಿಮ್ ಭಾವೈಕ್ಯತೆಗಾಗಿ ಇಷ್ಟು ದುಡಿದರೂ ಕೊನೆಗೆ ೧೬ನೇ ಶತಮಾನದ ಅಂಚಿನಲ್ಲಿ ಈ ಸಂಬಂಧಗಳು ಬಹಳಷ್ಟು ಹಳಸಿದವು. ಅಕ್ಬರನು ಬಾಲ್ಯ ವಿವಾಹ ಮತ್ತು ಸತಿಯ ವಿರುದ್ಧ ರಾಜಾದೇಶವನ್ನು ಹೊರಡಿಸಿದನು.

ನವರತ್ನಗಳು

[ಬದಲಾಯಿಸಿ]

ಅಕ್ಬರನ ಆಸ್ಥಾನದಲ್ಲಿ ನವರತ್ನ ಅಂದರೆ ಒಂಬತ್ತು ಅಸಾಧಾರಣ ಕಲಾಕಾರರಿದ್ದರು. ಇವರು:

  1. ಅಬುಲ್ ಫಝಲ್ - ಅಕ್ಬರನ ಮುಖ್ಯ ಸಲಹೆಗಾರ ಮತ್ತು ಅಕ್ಬರನ ಜೀವನಚರಿತ್ರೆಯಾದ ಅಕ್ಬರ್ ನಾಮಾ ಲೇಖಕ
  2. ಫೈಜಿ
  3. ತಾನ್ ಸೇನ್ - ಕಂಠ ಮತ್ತು ಸಂಗೀತಕ್ಕೆ ಪ್ರಖ್ಯಾತ
  4. ಬೀರಬಲ್ []- ತೀಕ್ಷ್ಣ ಬುದ್ಧಿಗೆ ಪ್ರಖ್ಯಾತ
  5. ರಾಜಾ ತೋದರ್ ಮಲ್
  6. ರಾಜಾ ಮಾನ್ ಸಿಂಗ್
  7. ಅಬ್ದುಲ್ ರಹೀಂ ಖಾನ್-ಇ-ಖಾನಾ
  8. ಫಕೀರ್ ಅಝಿಯಾಓದಿನ್
  9. ಮುಲ್ಲಾ ದೋಪ್ಯಾಝಾ

ಕೊನೆಯ ದಿನಗಳು

[ಬದಲಾಯಿಸಿ]

ಅಕ್ಬರನ ಜೀವನದ ಕೊನೆಯ ವರ್ಷಗಳು ಮಕ್ಕಳ ಕೆಟ್ಟ ನಡತೆಯಿಂದ ತುಂಬಿಹೋಗಿದ್ದವು. ಕುಡಿತದ ಚಟದಿಂದ ಇಬ್ಬರು ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಸತ್ತು ಹೋದರು. ಮೂರನೆಯವನಾದ ಸಲೀಂ ಬಹಳಷ್ಟು ಸಲ ತಂದೆಯ ವಿರುದ್ಧ ದಂಗೆಯೆದ್ದನು. ಇವನೇ ಜಹಾಂಗೀರ್. ಈ ದುರ್ಘಟನೆಗಳು ಅಕ್ಬರನ ಸ್ವಾಸ್ಥ್ಯ ಹದಗೆಡುವಂತೆ ಮಾಡಿ ಕೊನೆಗೆ ಆಗ್ರಾದಲ್ಲಿ ಮಡಿದನು. ಆಗ್ರಾದ ಸಮೀಪ ಸಿಕಂದ್ರಾ ಎಂಬ ಸ್ಥಳದಲ್ಲಿ ಅಕ್ಬರನ ಸಮಾಧಿಯಿದೆ.

ಮಾಧ್ಯಮಗಳಲ್ಲಿ ಅಕ್ಬರ್

[ಬದಲಾಯಿಸಿ]
  • "ಮುಘಲ್-ಎ-ಆಝಮ್" ಹಿಂದಿ ಚಲನಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಅಕ್ಬರನ ಪಾತ್ರದಲ್ಲಿ.
  • ಝೀ ಟಿವಿಯಲ್ಲಿ ಅಕ್ಬರ್-ಬೀರಬಲ್ ಹಿಂದಿ ಭಾಷೆಯ ಧಾರಾವಾಹಿ ೧೯೯೦ರ ದಶಕದಲ್ಲಿ ಪ್ರಸಾರ.
  • ಸಂಜಯ್ ಖಾನ್ ನಿರ್ದೇಶನದಲ್ಲಿ ಅಕ್ಬರ್ ದಿ ಗ್ರೇಟ್ ಹೆಸರಿನ ಧಾರಾವಾಹಿ ದೂರದರ್ಶನದಲ್ಲಿ ೧೯೯೦ರ ದಶಕದಲ್ಲಿ ಪ್ರಸಾರ.
  • ಅಕ್ಬರ್-ಜೋಧಾ ಹೆಸರಿನಲ್ಲಿ ಅಶುತೋಷ್ ಗೊವಾರಿಕರ್ ಚಲನಚಿತ್ರವನ್ನು ತಯಾರಿಸುತ್ತಿದ್ದಾರೆ.
  • ಅಮರ್ತ್ಯ ಸೇನ್ ತಮ್ಮ ಪುಸ್ತಕ ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ)ದಲ್ಲಿ ಅಕ್ಬರನನ್ನು ಪ್ರಮುಖ ಉದಾಹರಣೆಯನ್ನಾಗಿ ಕೊಡುತ್ತಾರೆ.

ಇವನ್ನೂ ನೋಡಿ

[ಬದಲಾಯಿಸಿ]

ಟಿಪ್ಪಣಿ

[ಬದಲಾಯಿಸಿ]
  1. https://postcardkannada.com/%E0%B2%85%E0%B2%95%E0%B3%8D%E0%B2%AC%E0%B2%B0%E0%B2%A8-%E0%B2%AC%E0%B2%B2%E0%B2%BE%E0%B2%A2%E0%B3%8D%E0%B2%AF-%E0%B2%B8%E0%B3%88%E0%B2%A8%E0%B3%8D%E0%B2%AF%E0%B2%B5%E0%B2%A8%E0%B3%8D%E0%B2%A8%E0%B3%81/
  2. https://ankanaangala.wordpress.com/2015/06/20/%E0%B2%85%E0%B2%95%E0%B3%8D%E0%B2%AC%E0%B2%B0%E0%B2%A8-%E0%B2%B2%E0%B3%8A%E0%B3%95%E0%B2%B2%E0%B3%81%E0%B2%AA%E0%B2%A4%E0%B3%86%E0%B2%AF%E0%B3%82-%E0%B2%A6%E0%B3%80%E0%B2%A8%E0%B3%8D-%E0%B2%87/
  3. "ಆರ್ಕೈವ್ ನಕಲು". Archived from the original on 2017-09-30. Retrieved 2018-05-14.
  4. ೮೧ನೇ ಪುಟ, "ಅಕ್ಬರ್, ದಿ ಗ್ರೇಟ್ ಮೊಘಲ್" ಲೇ. ವಿ. ಸ್ಮಿಥ್, ಎರಡನೇ ಅವತರಣಿಕೆ. ಪ್ರಕಾಶಕರು ಎಸ್. ಚಾಂದ್ ಮತ್ತು ಕಂ. ದೆಹಲಿ ೧೯೫೮
  5. http://www.sobagu.in/%E0%B2%85%E0%B2%95%E0%B3%8D%E0%B2%AC%E0%B2%B0%E0%B2%A8-%E0%B2%B8%E0%B2%82%E0%B2%A6%E0%B3%87%E0%B2%B9/

ಉಲ್ಲೇಖಗಳು

[ಬದಲಾಯಿಸಿ]
  • ಅಬುಲ್ ಫಝಲ್ ನ ಅಕ್ಬರ್ ನಾಮಾ ಸಂಪಾದಕ ಮೊಹಮ್ಮದ್ ಸಾದಿಕ್ ಅಲಿ (ಕಾನ್ಪುರ-ಲಖ್ನೋ: ನವಲ್ ಕಿಶೋರ್) ೧೮೮೧-೩ (ಪರ್ಶಿಯನ್ ಭಾಷೆ)
  • ಅಬುಲ್ ಫಝಲ್ ನ ಅಕ್ಬರ್ ನಾಮಾ ಸಂಪಾದಕ ಮೌಲ್ವಿ ಅಬ್ದಲ್ ರಹೀಂ. (ಕಲ್ಕತ್ತಾ: ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳ (ಪರ್ಶಿಯನ್ ಭಾಷೆ)
  • ಹೆನ್ರಿ ಬೆವರಿಜ್ (ಅನು.) ಅಬುಲ್ ಫಝಲನ ಅಕ್ಬರ್ ನಾಮಾ (ಕಲ್ಕತ್ತಾ: ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳ) ೧೮೯೭
  • ಹಾಜಿ ಮೊಹಮ್ಮದನ ಆರಿಫ್ ಕಂದಹಾರಿ ತಾರಿಖ್-ಇ-ಕಂದಹಾರಿ ಸಂಪಾದಕ ಹಾಜಿ ಮೊಯಿನುದ್ದಿನ್ ನಡವಿ, ಡಾ. ಅಝರ್ ಅಲಿ ದಿಹಲವಿ ಮತ್ತು ಇಂತಿಯಾಜ್ ಅಲಿ ಅರ್ಷಿ (ರಾಮ್ಪುರ: ರಝಾ ಲೈಬ್ರರಿ) ೧೯೬೨ (ಪರ್ಶಿಯನ್ ಭಾಷೆ)

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಕ್ಬರ್&oldid=1272811" ಇಂದ ಪಡೆಯಲ್ಪಟ್ಟಿದೆ