ವಿಷಯಕ್ಕೆ ಹೋಗು

ಅಮರ್ತ್ಯ ಸೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರ್ತ್ಯ ಸೇನ್
ನೊಬೆಲ್ ಪಾರಿತೋಷಕ ಸಂಸ್ಥೆಯಲ್ಲಿನ ಅಧಿಕೃತ ಚಿತ್ರ
ಜನನನವೆಂಬರ್ ೩, ೧೯೩೩
ರಾಷ್ಟ್ರೀಯತೆಭಾರತೀಯರು
Known forನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು

ಅಮರ್ತ್ಯ ಸೇನ್ (ನವೆಂಬರ್ ೩, ೧೯೩೩) ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾಗಿ ವಿಶ್ವಮಾನ್ಯರಾಗಿದ್ದಾರೆ.

ಜೀವನ[ಬದಲಾಯಿಸಿ]

ರವೀಂದ್ರರ ಶಾಂತಿನಿಕೇತನದಲ್ಲಿ ಜನಿಸಿದ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರದಲ್ಲಿ ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿ ನೊಬೆಲ್ ಪಾರಿತೋಷಕ ಪಡೆದವರು. ಅಮರ್ತ್ಯ ಸೇನ್ ಅವರು ಜನಿಸಿದ್ದು ನವೆಂಬರ್ ೩, ೧೯೩೩ರಲ್ಲಿ. ಅಮರ್ತ್ಯ ಸೇನ್ ಅವರ ವಂಶಜರು ಇಂದಿನ ಬಾಂಗ್ಲಾದೇಶದ ಡಾಕ್ಕಾ ಪ್ರದೇಶದಿಂದ ಬಂದವರಾಗಿದ್ದು ಅವರ ಹಿರಿಯರು ರವೀಂದ್ರನಾಥ ಠಾಗೋರ್ರಿಗೆ ಆಪ್ತರಾಗಿಯೂ ಶಾಂತಿನಿಕೇತನದ ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ನಿರಂತರ ಸಕ್ರಿಯರಾಗಿಯೂ ಇದ್ದವರು. ಹೀಗಾಗಿ ಅವರ ಜನನದಿಂದ ಮೊದಲ್ಗೊಂಡಂತೆ ಶಾಲಾ ಕಾಲೇಜುಗಳ ವಿದ್ಯಾಭ್ಯಾಸಗಳು ನಡೆದದ್ದೆಲ್ಲಾ ಶಾಂತಿನಿಕೇತನದಲ್ಲೇ. ಮುಂದೆ ಅವರು ಕೆಂಬ್ರಿಡ್ಜ್, ಹಾರ್ವರ್ಡ್ ಅಂತಹ ವಿಶ್ವವಿದ್ಯಾಲಯಗಳಲ್ಲಿ ಓದು, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತಮ್ಮ ಬದುಕನ್ನು ನಡೆಸಿದರು.

ತಮ್ಮ ೨೩ನೇ ವರ್ಷದಲ್ಲಿಯೇ ಕೊಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದರು.ಅಲ್ಲಿಂದ ಪ್ರಾರಂಭವಾದ ಇವರ ಸಾಧನೆಗಳ ಸರಪಳಿ ಅವಿರತವಾಗಿ ಮುಂದುವರಿಯಿತು.೧೯೯೮ ರಿಂದ ೨೦೦೪ರವರೆಗೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಆಕ್ಸ್‌ಬ್ರಿಜ್‌ಕಾಲೇಜ್‌‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅವರು ಹಾಗೆ ನೇಮಕಗೊಂಡ ಪ್ರಥಮ ಏಷ್ಯನ್ ಎಂಬ ಕೀರ್ತಿಗೆ ಪಾತ್ರರಾದವರು.

ಗಣ್ಯ ಅರ್ಥಶಾಸ್ತ್ರಜ್ಞರಾಗಿ[ಬದಲಾಯಿಸಿ]

ಅಮರ್ತ್ಯ ಸೇನ್ ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ. ಅವರ ಚಿಂತನೆಗಳೆಲ್ಲವೂ ಬಡತನದ ದೌರ್ಭಾಗ್ಯಗಳಿಂದ ಬೆಂದು ಬಳಲಿದ ಜನರ ಕುರಿತಾದ ಖಾಳಜಿಗಳಿಂದ ಕೂಡಿದ್ದಾಗಿರುವುದು ಮಹತ್ವದ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರತಿಪಾದಿಸಿದ ‘ಬರಗಾಲಕ್ಕೆ ಕುರಿತಾದ ಕಾರಣಗಳು’ ಮತ್ತು ‘ವಿಶ್ವದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಚಿಂತನೆಗಳು’ ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿವೆ. 1998ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ಅವರ ಮಾನವ ಕಲ್ಯಾಣ ಅರ್ಥಶಾಸ್ತ್ರದಲ್ಲಿನ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಗೌರವವನ್ನು ಸಲ್ಲಿಸಿತು.

ಮಹಾನ್ ಪ್ರಭಾವಿಗಳಲ್ಲೊಬ್ಬರು[ಬದಲಾಯಿಸಿ]

೨೦೧೦ರ ‘ನ್ಯೂ ಸ್ಟೇಟ್ಸ್ ಮನ್’ ಪತ್ರಿಕೆಯು ಅಮರ್ತ್ಯ ಸೇನ್ ಅವರನ್ನು ವಿಶ್ವದ ಐವತ್ತು ಮಹಾನ್ ಪ್ರಭಾವಿಗಳ ಪಟ್ಟಿಯಲ್ಲಿ ಹೆಸರಿಸಿದೆ. ಇದೇ ಅಭಿಪ್ರಾಯವನ್ನು ಈ ಹಿಂದೆ ‘ಟೈಮ್ಸ್’ ಕೂಡಾ ವ್ಯಕ್ತಪಡಿಸಿತ್ತು. ಅಮರ್ತ್ಯ ಸೇನ್ ಅವರು ವಿಶ್ವ ಸಮುದಾಯದ ‘ಆರ್ಥಿಕ ಶಾಂತಿ ಮತ್ತು ಭದ್ರತಾ ಸಮಿತಿಯ’ ನಿರ್ವಾಹಕರಾಗಿದ್ದಾರೆ. ಇದಲ್ಲದೆ ವಿಶ್ವದ ಆರ್ಥಿಕ ಚಿಂತನೆಗಳ ಬಹುಮುಖ ವೇದಿಕೆಗಳಲ್ಲಿ ಪ್ರಧಾನರೆನಿಸಿದ್ದಾರೆ.

ಪುಸ್ತಕಗಳು[ಬದಲಾಯಿಸಿ]

ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರ ಮತ್ತು ಮಾನವ ಕಲ್ಯಾಣದ ಕುರಿತಾಗಿ ಮೂಡಿಸಿರುವ ಮಹತ್ವದ ಚಿಂತನೆಗಳು ಮತ್ತು ಗ್ರಂಥಗಳೂ ವಿಶ್ವದಾದ್ಯಂತ ಬಹುತೇಕ ಭಾಷೆಗಳಲ್ಲಿ ಮೂಡಿಬಂದಿವೆ. ಅವರು ೩೦ಕೊ ಹೆಚ್ಚು ಕೃತಿಗಳನ್ನು ಹೊರತಂದಿದ್ದು ಈ ಕೆಳಗಿನ ಪ್ರಸಿದ್ಧ ಕೃತಿಗಳು ಅದರಲ್ಲಿ ಸೇರಿವೆ.

  • ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ)
  • ವಯಲೆನ್ಸ್ ಅಂಡ್ ಐಡೆಂಟಿಟಿ (ಹಿಂಸೆ ಮತ್ತು ನೆಲೆ)

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  1. ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಹಾಗೂ ೧೯೯೯ರ ವರ್ಷದಲ್ಲಿನ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ'ವೂ ಸೇರಿದಂತೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
  2. ನೊಬೆಲ್ ಪ್ರಶಸ್ತಿ ವಿಜೇತ, ಅಮರ್ತ್ಯ ಸೇನ್ ಅವರಿಗೆ ಸ್ಪೇನ್‌ನ ಉನ್ನತ ಸಾಮಾಜಿಕ ವಿಜ್ಞಾನ ಪ್ರಶಸ್ತಿ, ಕನ್ನಡ ಪ್ರಭ, ೨೬,ಮೇ ೨೦೨೧

ಆಕರಗಳು[ಬದಲಾಯಿಸಿ]

  1. ಇಂಗ್ಲಿಷ್ ವಿಕಿಪೀಡಿಯಾ ಲೇಖನ