ಜ್ಞಾನಪೀಠ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
ಜ್ಞಾನಪೀಠದ ಹಿನ್ನೆಲೆ [ಬದಲಾಯಿಸಿ]
ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನ ಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಕನ್ನಡ ಸಾಹಿತಿಗಳು ಎಂಟು ಪ್ರಶಸ್ತಿಗಳನ್ನು ಪಡೆದು ಕನ್ನಡವನ್ನು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಹಿಂದಿ ಭಾಷೆಯು ಆರು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.