ನೇರಳಾತೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅತಿನೇರಿಳೆ ಕಿರಣಗಳು ಇಂದ ಪುನರ್ನಿರ್ದೇಶಿತ)
</img>
ಸಾಗಿಸಲು ಸುಲಭವಾದ ನೇರಳಾತೀತ ದೀಪ
</img>
ಯುವಿ ವಿಕಿರಣವು ವಿದ್ಯುಚ್ಚಾಪಗಳಿಂದ ಕೂಡ ಉತ್ಪತ್ತಿಯಾಗುತ್ತದೆ.

ನೇರಳಾತೀತ ಕಿರಣಗಳು (UV Ray) ದೃಷ್ಟಿಗೆ ಗೋಚರಿಸುವ ಬೆಳಕಿಗಿಂತ ಹೆಚ್ಚಿನ ಆವರ್ತನವನ್ನು ಹೊಂದಿರುತ್ತವೆ. ಈ ಕಿರಣಗಳ ತರಂಗಾಂತರವು ದೃಶ್ಯ ತರಂಗಗಳಿಗಿಂತ ಕಡಿಮೆಯಿದ್ದು ಕ್ಷ-ಕಿರಣಗಳಿಗಿಂತ ಹೆಚ್ಚಿದ್ದು 400 nm ರಿಂದ 10nm ರ ವ್ಯಾಪ್ತಿಯಲ್ಲಿರುತ್ತದೆ. ಇದರ ಶಕ್ತಿ ೩-೧೨೪ ಎಲೆಕ್ಟ್ರಾನ್ ವೋಲ್ಟ್‌ಗಳು. ಇವುಗಳ ಆವರ್ತನವು ಮನುಷ್ಯರು ನೇರಳೆ ಎಂದು ಗುರುತಿಸುವ ತರಂಗಗಳಿಗಿಂತ ಹೆಚ್ಚಿರುವುದರಿಂದ ಇವುಗಳಿಗೆ ಅತಿನೇರಳೆ ಎಂಬ ಹೆಸರು ಬಂದಿದೆ. ಇವು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಹಲವು ಕೀಟಗಳು ಮತ್ತು ಪಕ್ಷಿಗಳಿಗೆ ಈ ಕಿರಣಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ. ನೇರಳಾತೀತ ಎಂಬುದು ವಿದ್ಯುತ್ಕಾಂತೀಯ ವಿಕಿರಣದ ಒಂದು ರೂಪವಾಗಿದೆ. ನೇರಳಾತೀತ ಕಿರಣವು ಸೂರ್ಯನ ಬೆಳಕಿನಲ್ಲಿ ಇರುತ್ತದೆ ಮತ್ತು ಸೂರ್ಯನ ಒಟ್ಟು ವಿದ್ಯುತ್ಕಾಂತೀಯ ವಿಕಿರಣದ ಉತ್ಪಾದನೆಯ ಸುಮಾರು 10% ರಷ್ಟಿದೆ. ಇದು ವಿದ್ಯುತ್ ಚಾಪಗಳಿಂದ, ಚೆರೆಂಕೋವ್ ವಿಕಿರಣ; ಮತ್ತು ವಿಶೇಷ ದೀಪಗಳಿಂದ ಕೂಡ ಉತ್ಪತ್ತಿಯಾಗುತ್ತದೆ.

ದೀರ್ಘ-ತರಂಗಾಂತರದ ನೇರಳಾತೀತವನ್ನು ಅಯಾನೀಕರಿಸುವ ಕಿರಣವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅದರ ಫೋಟಾನ್‌ಗಳು ಪರಮಾಣುಗಳನ್ನು ಅಯಾನೀಕರಿಸುವ ಶಕ್ತಿಯನ್ನು ಹೊಂದಿರುವುದಿಲ್ಲ, ಇದು ರಾಸಾಯನಿಕ ಕ್ರಿಯೆಗಳನ್ನು ಉಂಟುಮಾಡಬಹುದು ಮತ್ತು ಅನೇಕ ಪದಾರ್ಥಗಳ ಹೊಳಪು ಅಥವಾ ಪ್ರತಿದೀಪ್ತಿಗೆ ಕಾರಣವಾಗಬಹುದು. ರಾಸಾಯನಿಕ ಮತ್ತು ಜೈವಿಕ ಪರಿಣಾಮಗಳನ್ನು ಒಳಗೊಂಡಂತೆ ಅನೇಕ ಪ್ರಾಯೋಗಿಕ ಅನ್ವಯಿಕೆಗಳನ್ನು, ನೇರಳಾತೀತ ಕಿರಣವು ಸಾವಯವ ಅಣುಗಳೊಂದಿಗೆ ಸಂವಹನ ನಡೆಸುವ ವಿಧಾನದಿಂದ ಪಡೆಯಲಾಗಿದೆ. ಈ ಪರಸ್ಪರ ಕ್ರಿಯೆಗಳು ಅಣುಗಳಲ್ಲಿ ಶಕ್ತಿಯ ಸ್ಥಿತಿಗಳ ಹೀರಿಕೆ ಅಥವಾ ಸರಿಹೊಂದಿಕೆಯನ್ನು ಒಳಗೊಂಡಿರುತ್ತದೆ, ಆದರೆ ಅಗತ್ಯವಾಗಿ ತಾಪನವನ್ನು ಒಳಗೊಳ್ಳುವುದಿಲ್ಲ.

ಸೂರ್ಯನ ಪ್ರಭಾವಲಯ ಅತಿನೇರಳೆ ಕಿರಣಗಳ ಮುಖಾಂತರ ಗೋಚರಿಸುವ ರೀತಿ. ಚಿತ್ರವು ಎಕ್ಸ್ಟ್ರೀಂ ಅಲ್ಟ್ರಾವಾಯ್ಲೆಟ್ ಇಮೇಜಿಂಗ್ ಟೆಲಿಸ್ಕೋಪ್‍ನಿಂದ ತೆಗೆದಿದ್ದು.

ಸೂರ್ಯನ ವರ್ಣಪಟಲದಲ್ಲಿ ಇವುಗಳ ಇರುವಿಕೆಯನ್ನು ಗುರುತಿಸಲಾಗಿದೆ. ವಿದ್ಯುಚ್ಚಾಪಗಳು, ಪಾದರಸ ದೀಪಗಳು ಹಾಗೂ ಅತಿನೇರಳೆ ದೀಪಗಳು ಅತಿನೇರಳೆ ಕಿರಣಗಳನ್ನು ಹೊರಸೂಸುತ್ತವೆ. ಈ ವಿಕಿರಣಗಳನ್ನು ಹಲವಾರು ರಾಸಾಯನಿಕ ಕ್ರಿಯೆಗಳಲ್ಲಿ ಬಳಸಿಕೊಳ್ಳುತ್ತಾರೆ. ಇವು ಕೆಲವು ವಸ್ತುಗಳನ್ನು ಬೆಳಗುವಂತೆ ಮಾಡುತ್ತವೆ. ಸೂರ್ಯನಿಂದ ಭೂಮಿಯನ್ನು ತಲುಪುವ ಹೆಚ್ಚಿನ ಅತಿನೇರಳೆ ಕಿರಣಗಳು ಅಯಾನೀಕರಣ ಮಾಡದಂತಹ ಕಿರಣಗಳು. ಅಯಾನೀಕರಣ ಮಾಡುವ ಕಿರಣಗಳು 120 nm ರಿಂದ 10 nm ರವರೆಗೆ ತರಂಗಾಂತರವನ್ನು ಹೊಂದಿದ್ದು ಉತ್ಕಟ ಅತಿನೇರಳೆ ಕಿರಣಗಳೆಂದು ಕರೆಯಲ್ಪಡುತ್ತವೆ. ಈ ರೀತಿಯ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ ಸಾರಜನಕ ಮತ್ತು ಆಮ್ಲಜನಕದಿಂದ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಭೂಮಿಯನ್ನು ತಲುಪುವ ಸಾಧ್ಯತೆ ಕಡಿಮೆ.

ಕಿರು-ತರಂಗ ನೇರಳಾತೀತ ಬೆಳಕು ಡಿಎನ್‌ಎಗೆ ಹಾನಿ ಮಾಡುತ್ತದೆ ಮತ್ತು ಅದು ಸಂಪರ್ಕಕ್ಕೆ ಬರುವ ಮೇಲ್ಮೈಗಳನ್ನು ಕ್ರಿಮಿನಾಶಗೊಳಿಸುತ್ತದೆ. ಮಾನವರಿಗೆ, ಚರ್ಮವನ್ನು ನೇರಳಾತೀತ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಬಿಸಿಲುಗಂದಿನ ಜೊತೆಗೆ ಚರ್ಮದ ಕ್ಯಾನ್ಸರ್‌ನ ಅಪಾಯವಿದೆ.[೧] ಆದಾಗ್ಯೂ, ನೇರಳಾತೀತ ಬೆಳಕು ಹೆಚ್ಚಿನ ಭೂ ಕಶೇರುಕಗಳಲ್ಲಿ ವಿಟಮಿನ್ ಡಿ ರಚನೆಗೆ ಕಾರಣವಾಗಿದೆ.[೨]

ಮಾನವ ದೃಷ್ಟಿಯ ತರಂಗಾಂತರದ ಮಿತಿಯನ್ನು 400 nm ಎಂದು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ನೇರಳಾತೀತ ಕಿರಣಗಳು ಮಾನವರಿಗೆ ಅಗೋಚರವಾಗಿರುತ್ತವೆ, ಆದರೂ ಜನರು ಕೆಲವೊಮ್ಮೆ ಇದಕ್ಕಿಂತ ಕಡಿಮೆ ತರಂಗಾಂತರದ ಬೆಳಕನ್ನು ಗ್ರಹಿಸಬಹುದು.[೩] ಕೀಟಗಳು, ಪಕ್ಷಿಗಳು ಮತ್ತು ಕೆಲವು ಸಸ್ತನಿಗಳು ಸಮೀಪ-ನೇರಳಾತೀತವನ್ನು ನೋಡಬಹುದು.[೪]

ಹಿನ್ನೆಲೆ[ಬದಲಾಯಿಸಿ]

ಸೂರ್ಯನ ಬೆಳಕನ್ನು ಅಶ್ರಗವೊಂದರ ಮೂಲಕ ಹಾದುಹೋಗುವಂತೆ ಮಾಡಿದರೆ ಬಿಳಿಯ ಬೆಳಕಿಗೆ ಬದಲಾಗಿ ಕಾಮನಬಿಲ್ಲಿನಲ್ಲಿ ಕಾಣುವಂತೆ ನೇರಿಳೆ, ನೀಲಿ, ನೀಲ, ಹಸುರು, ಕಿತ್ತಳೆ, ಹಳದಿ ಮತ್ತು ಕೆಂಪು-ಈ 7 ಬಣ್ಣಗಳು ಕಂಡುಬರುತ್ತವೆ. ಇದಕ್ಕೆ ಗೋಚರರೋಹಿತ (ವಿಸಿಬಲ್ ಸ್ಪೆಕ್ಟ್ರಮ್) ಎಂದು ಹೆಸರು. ಇದರಲ್ಲಿ ಕೆಂಪುರಶ್ಮಿಯ ಅಲೆಯುದ್ದ 8000 ಆಂಗ್‍ಸ್ಟ್ರಾಂಗಳು (ಆ.) [1 ಸೆಂ. ಮೀ. ಉದ್ದವನ್ನು ಒಂದು ದಶಕೋಟಿಯಿಂದ ಭಾಗಿಸಿದಾಗ ಬರುವ ಅತ್ಯಲ್ಪಪ್ರಮಾಣ ಒಂದು ಆಂಗ್‍ಸ್ಟ್ರಾಂ] ಮತ್ತು ನೇರಿಳೆರಶ್ಮಿಯ ಅಲೆಯುದ್ದ ಸುಮಾರು 4000 ಆ.ಗಳು. ಇವೆರಡೂ ಗೋಚರರೋಹಿತದ ಎರಡು ಕೊನೆಗಳು. ಹೀಗೆ ಪಡೆದ ಗೋಚರರೋಹಿತವು ಅಖಂಡವ್ಯಾಪ್ತಿಯುಳ್ಳ ವಿದ್ಯುತ್ಕಾಂತ ರೋಹಿತದಲ್ಲಿ (ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಮ್) ಅತ್ಯಲ್ಪವ್ಯಾಪ್ತಿಯುಳ್ಳ ಒಂದು ಭಾಗ ಮಾತ್ರ. ವಿದ್ಯುತ್ಕಾಂತ ರೋಹಿತದಲ್ಲಿ ನೇರಿಳೆಕಿರಣಕ್ಕಿಂತಲೂ ಕಡಿಮೆ ಹಾಗೂ ಕೆಂಪು ರಶ್ಮಿಗಿಂತಲೂ ಹೆಚ್ಚು ತರಂಗದೂರವುಳ್ಳ ಅಧಿಕಪ್ರಮಾಣದ ಕಿರಣಗಳು ಅಡಕವಾಗಿವೆ. ವಿದ್ಯುತ್ಕಾಂತ ವಿಕಿರಣ ಪಸರಿಸಿರುವ ಅಲೆಯುದ್ದಗಳ ವ್ಯಾಪ್ತಿಗೆ ವಿದ್ಯುತ್ಕಾಂತ ರೋಹಿತವೆಂದು ಹೆಸರು. ಅತಿ ದೀರ್ಘ ಅಲೆಯುದ್ದದವು ರೇಡಿಯೊ ತರಂಗಗಳು (ಅಲೆಯುದ್ದ 105-10-3 ಮೀ); ಅತಿ ಕಡಿಮೆ ಅಲೆಯುದ್ದದವು ಗ್ಯಾಮ ಕಿರಣಗಳು (10-11-10-14 ಮೀ)

ಗೋಚರತೆ[ಬದಲಾಯಿಸಿ]

ನೇರಳಾತೀತ ಕಿರಣಗಳು ಹೆಚ್ಚಿನ ಮಾನವರಿಗೆ ಅಗೋಚರವಾಗಿರುತ್ತವೆ. ಮಾನವನ ಕಣ್ಣಿನ ಮಸೂರವು 300-400 nm ತರಂಗಾಂತರ ವ್ಯಾಪ್ತಿಯಲ್ಲಿ ಹೆಚ್ಚಿನ ವಿಕಿರಣವನ್ನು ನಿರ್ಬಂಧಿಸುತ್ತದೆ. ಕಡಿಮೆ ತರಂಗಾಂತರಗಳನ್ನು ಕಾರ್ನಿಯಾ ನಿರ್ಬಂಧಿಸುತ್ತದೆ.[೫] ಮಾನವರು ನೇರಳಾತೀತ ಕಿರಣಗಳಿಗೆ ವರ್ಣಗ್ರಾಹಿ ಹೊಂದಿಕೆಗಳನ್ನು ಹೊಂದಿರುವುದಿಲ್ಲ. ಅದೇನೇ ಇದ್ದರೂ, ರೆಟಿನಾದ ದ್ಯುತಿಗ್ರಾಹಕಗಳು ಸಮೀಪದ-ನೇರಳಾತೀತಕ್ಕೆ ಸಂವೇದನಾಶೀಲವಾಗಿರುತ್ತವೆ ಮತ್ತು ಮಸೂರವನ್ನು ಹೊಂದಿರದ ಜನರು (ಅಪಾಕಿಯಾ ಎಂದು ಕರೆಯಲ್ಪಡುವ ಸ್ಥಿತಿ) ಹತ್ತಿರದ-ನೇರಳಾತೀತವನ್ನು ಬಿಳಿ-ನೀಲಿ ಅಥವಾ ಬಿಳಿ-ನೇರಳೆಯಾಗಿ ಗ್ರಹಿಸುತ್ತಾರೆ.[೩] ಕೆಲವು ಪರಿಸ್ಥಿತಿಗಳಲ್ಲಿ, ಮಕ್ಕಳು ಮತ್ತು ಯುವ ವಯಸ್ಕರು ನೇರಳಾತೀತವನ್ನು ಸುಮಾರು 310 nm ತರಂಗಾಂತರದವರೆಗೆ ನೋಡಬಹುದು.[೬][೭] ಹತ್ತಿರದ ಯುವಿ ವಿಕಿರಣವು ಕೀಟಗಳು, ಕೆಲವು ಸಸ್ತನಿಗಳು ಮತ್ತು ಕೆಲವು ಪಕ್ಷಿಗಳಿಗೆ ಗೋಚರಿಸುತ್ತದೆ. ಪಕ್ಷಿಗಳು ನೇರಳಾತೀತ ಕಿರಣಗಳಿಗೆ ನಾಲ್ಕನೇ ಬಣ್ಣದ ಗ್ರಾಹಕವನ್ನು ಹೊಂದಿವೆ; ಇದು, ಹೆಚ್ಚು ನೇರಳಾತೀತವನ್ನು ರವಾನಿಸುವ ಕಣ್ಣಿನ ರಚನೆಗಳೊಂದಿಗೆ ಸೇರಿಕೊಂಡು, ಸಣ್ಣ ಪಕ್ಷಿಗಳಿಗೆ "ನಿಜವಾದ" ನೇರಳಾತೀತ ದೃಷ್ಟಿ ನೀಡುತ್ತದೆ.[೮][೯]

ಇತಿಹಾಸ ಮತ್ತು ಅನ್ವೇಷಣೆ[ಬದಲಾಯಿಸಿ]

"ನೇರಳಾತೀತ" ಎಂದರೆ "ನೇರಳೆಗೆ ಮೀರಿ" (ಲ್ಯಾಟಿನ್ ಅಲ್ಟ್ರಾ, "ಆಚೆ") ಎಂದು. ನೇರಳೆ ಬಣ್ಣವು ಗೋಚರ ಬೆಳಕಿನ ಅತ್ಯಧಿಕ ಆವರ್ತನಗಳ ಬಣ್ಣವಾಗಿದೆ. ನೇರಳಾತೀತವು ನೇರಳೆ ಬೆಳಕಿಗಿಂತ ಹೆಚ್ಚಿನ ಆವರ್ತನವನ್ನು ಹೊಂದಿದೆ (ಹೀಗಾಗಿ ಕಡಿಮೆ ತರಂಗಾಂತರ).

1801 ರಲ್ಲಿ ಜರ್ಮನ್ ಭೌತಶಾಸ್ತ್ರಜ್ಞ ಜೋಹಾನ್ ವಿಲ್ಹೆಲ್ಮ್ ರಿಟ್ಟರ್ ಗೋಚರ ವರ್ಣಪಟಲದ ನೇರಳೆ ತುದಿಯನ್ನು ಮೀರಿದ ಅದೃಶ್ಯ ಕಿರಣಗಳು ಸಿಲ್ವರ್ ಕ್ಲೋರೈಡ್‍ನಲ್ಲಿ ಅದ್ದಿದ ಕಾಗದವನ್ನು ಕಪ್ಪಾಗಿಸುತ್ತವೆ ಎಂದು ಗಮನಿಸಿದಾಗ ನೇರಳಾತೀತ ವಿಕಿರಣವನ್ನು ಕಂಡುಹಿಡಿಯಲಾಯಿತು. ಅವುಗಳ ರಾಸಾಯನಿಕ ಕ್ರಿಯಾತ್ಮಕತೆಯನ್ನು ಒತ್ತಿಹೇಳಲು ಮತ್ತು ಅವುಗಳು "ಶಾಖ ಕಿರಣಗಳಿಂದ" ಬೇರೆಯಾಗಿವೆಯೆಂದು ಹೇಳಲು, ಅವನು ಅವುಗಳನ್ನು "(ಡಿ-)ಆಕ್ಸಿಡೈಸಿಂಗ್ ಕಿರಣಗಳು" ಎಂದು ಕರೆದನು. ಈ ಶಾಖ ಕಿರಣಗಳನ್ನು ಹಿಂದಿನ ವರ್ಷ ಗೋಚರ ವರ್ಣಪಟಲದ ಇನ್ನೊಂದು ತುದಿಯಲ್ಲಿ ಕಂಡುಹಿಡಿಯಲಾಗಿತ್ತು. "ರಾಸಾಯನಿಕ ಕಿರಣಗಳು" ಎಂಬ ಹೆಚ್ಚು ಸರಳವಾದ ಪದವನ್ನು ಶೀಘ್ರದಲ್ಲೇ ಅಳವಡಿಸಿಕೊಳ್ಳಲಾಯಿತು ಮತ್ತು 19 ನೇ ಶತಮಾನದುದ್ದಕ್ಕೂ ಜನಪ್ರಿಯವಾಗಿತ್ತು, ಆದಾಗ್ಯೂ, ಕೆಲವರು ಈ ವಿಕಿರಣವು ಬೆಳಕಿನಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದರು (ಮುಖ್ಯವಾಗಿ ಜಾನ್ ವಿಲಿಯಂ ಡ್ರೇಪರ್ ಇವನ್ನು "ಟೈಥೋನಿಕ್ ಕಿರಣಗಳು"[೧೦][೧೧] ಎಂದು ಹೆಸರಿಸಿದರು.) "ರಾಸಾಯನಿಕ ಕಿರಣಗಳು" ಮತ್ತು "ಶಾಖ ಕಿರಣಗಳು" ಎಂಬ ಪದಗಳನ್ನು ಅಂತಿಮವಾಗಿ ಬದಲಿಸಿ ಅನುಕ್ರಮವಾಗಿ ನೇರಳಾತೀತ ಮತ್ತು ಅತಿಗೆಂಪು ವಿಕಿರಣ ಪದಗಳನ್ನು ಬಳಸಲಾಯಿತು.[೧೨][೧೩] 1878 ರಲ್ಲಿ, ಬ್ಯಾಕ್ಟೀರಿಯಾವನ್ನು ಕೊಲ್ಲುವ ಕಡಿಮೆ-ತರಂಗಾಂತರದ ಬೆಳಕಿನ ಕ್ರಿಮಿನಾಶಕ ಪರಿಣಾಮವನ್ನು ಕಂಡುಹಿಡಿಯಲಾಯಿತು. 1903 ರ ಹೊತ್ತಿಗೆ, ಅತ್ಯಂತ ಪರಿಣಾಮಕಾರಿ ತರಂಗಾಂತರಗಳು ಸುಮಾರು 250 nm ಎಂದು ತಿಳಿದುಬಂದಿತು. 1960 ರಲ್ಲಿ, ಡಿಎನ್ಎ ಮೇಲೆ ನೇರಳಾತೀತ ವಿಕಿರಣದ ಪರಿಣಾಮವನ್ನು ದೃಢಪಡಿಸಲಾಯಿತು.

ಸ್ಟೋಕ್ಸ್ ಎಂಬ ಭೌತಶಾಸ್ತ್ರ ವಿದ್ವಾಂಸ ಎರಡು ಅಲ್ಯುಮಿನಿಯಂ ವಿದ್ಯುತ್‍ದ್ವಾರಗಳ (ಎಲೆಕ್ಟ್ರೋಡ್) ನಡುವಿನ ಕಿಡಿ ವಿಸರ್ಜನೆಯನ್ನು (ಸ್ಪಾರ್ಕ್ ಡಿಸ್‍ಛಾರ್ಜ್) ಆಕರವನ್ನಾಗಿಯೂ ಪ್ರತಿದೀಪ್ತಿವರ್ಣಪ್ರಭಾವ ಪೊರೆಯನ್ನು (ಫ್ಲೂರೆಸೆಂಟ್ ಫಿಲ್ಮ) ಶೋಧಕವನ್ನಾಗಿಯೂ ಉಪಯೋಗಿಸಿಕೊಂಡು ಕ್ವಾರ್ಟ್ಸ್‌ನಿಂದ ಮಾಡಿದ ಅಶ್ರಗದ ಸಹಾಯದಿಂದ, ಅತಿನೇರಿಳೆ, ನೇರಿಳೆಕಿರಣದ ಅಂಚಿನಿಂದ ಸುಮಾರು 1830 ಆ.ವರೆಗೂ ವ್ಯಾಪಿಸಿದೆ ಎಂಬುದನ್ನು ಸಂಶೋಧಿಸಿದ (1862).

ಇದಲ್ಲದೆ ಇನ್ನೂ ಕೆಳಗೆ ಅಂದರೆ 1300 ಆ.ವರೆಗೆ ಸಂಶೋಧನೆಯನ್ನು ವಿಸ್ತರಿಸಿದವ ವಿಕ್ಟರ್ ಸ್ಕ್ಯೂಮನ್. ಜೆಲಟಿನ್ ಹೊಂದಿರುವ ವಿದ್ರಾವಣ್ಯಪೊರೆಗಳು (ಎಮಲ್ಷನ್ ಫಿಲ್ಮ್) ದೂರಾತಿನೇರಿಳೆಗೆ ಸಚೇತನವಾಗಿರುವುದಿಲ್ಲ ಮತ್ತು ಕ್ವಾರ್ಟ್ಸ್‌ನಿಂದ ಮಾಡಿದ ಅಶ್ರಗಗಳು ಮತ್ತು ಮಸೂರಗಳು ಕೂಡ ದೂರಾತಿನೇರಿಳೆಗೆ ಅಪಾರಕವಾಗಿವೆ ಎಂದು ಮೊದಲು ಮನಗಂಡವನು ಇವನೇ.

ಜೆಲಟಿನ್‍ರಹಿತ ವಿದ್ರಾವಣ್ಯಪೊರೆಯನ್ನು ತಯಾರಿಸಿದ್ದೇ ಅಲ್ಲದೆ ಈತ ಫ್ಲ್ಯೂರೈಟ್ ಸ್ಫಟಿಕದಿಂದ ಮಾಡಿದ ಅಶ್ರಗವನ್ನು ಹೊಂದಿರುವ ರೋಹಿತಮಾಪಕವನ್ನು (ಸ್ಪೆಕ್ಟ್ರೋಮೀಟರ್) ತನ್ನ ಸಂಶೋಧನೆಗೆ ಉಪಯೋಗಿಸಿಕೊಂಡ.[೧೪] ಜಲಜನಕದ ಮೂಲಭೂತ ಶ್ರೇಣಿಯಾಗಿದ್ದು 1300 ಆ. ಮಿತಿಯನ್ನು ಮೀರಿರುವ, ರಚನೆಯಲ್ಲಿ ಸರಳವಾಗಿದ್ದು ಹೆಚ್ಚು ಪ್ರಚಾರದಲ್ಲಿರುವ ಲೈಮನ್‍ಶ್ರೇಣಿಯನ್ನು ಸಂಶೋಧಿಸಿ ಈ ಕ್ಷೇತ್ರದಲ್ಲಿ ಶ್ಲಾಘನೀಯವಾದ ಕೆಲಸ ಮಾಡಿದವನು ಥಿಯೊಡರ್ ಲೈಮನ್. ಈತ ತನ್ನ ಸಂಶೋಧನೆಯನ್ನು ಲೈಮನ್‍ಶ್ರೇಣಿಯ ಪರಮಾವಧಿಯಾದ 911.7 ಆ.ಗಳಿಗಿಂತಲೂ ಕೆಳಕ್ಕೆ ವಿಸ್ತರಿಸಿದ. ಅಶ್ರಗ ಮತ್ತು ಮಸೂರಗಳ ಬದಲು ಈತ ವಿವರ್ತನ ಗ್ರೇಟಿಂಗ್ ಉಪಯೋಗಿಸಿದ. ಆರ್.ಎ.ಮಿಲಿಕನ್, ಓಸ್‍ಗುಡ್ ಮತ್ತು ಡಾವಿಲ್ಲಯರ್ ಮುಂತಾದವರು ಸಂಶೋಧನೆಯನ್ನು ಮುಂದುವರಿಸಿ ಸುಮಾರು 120 ಆ.ಗಳವರೆಗೆ ವಿಸ್ತರಿಸಿ ಮತ್ತೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿದರು.

ವರ್ಗೀಕರಣ[ಬದಲಾಯಿಸಿ]

ಅತಿನೇರಿಳೆ ಕಿರಣ ಪಟ್ಟಿಯನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು

ಹತ್ತಿರದ ಅತಿನೇರಿಳೆ[ಬದಲಾಯಿಸಿ]

ಹತ್ತಿರದ ಅತಿನೇರಿಳೆ ಅಥವಾ ನಿಯರ್ ಅಲ್ಟ್ರವಯೊಲೆಟ್ 4000 ಆ.ಗಳಿಂದ ಸುಮಾರು 3000 ಆ.ವರೆಗೂ ವ್ಯಾಪಿಸಿದೆ. ಸೂರ್ಯನ ಬೆಳಕಿನಲ್ಲೂ ಇದು ಅಡಕವಾಗಿದೆ.

ಮಧ್ಯಾತಿನೇರಿಳೆ[ಬದಲಾಯಿಸಿ]

ಮಧ್ಯಾತಿನೇರಿಳೆ, (ಮಿಡ್ಲ್ ಅಲ್ಟ್ರವಯೊಲೆಟ್). ಇದು 3000 ಆ.ಗಳಿಂದ 2000 ಆ.ವರೆಗೂ ವ್ಯಾಪಿಸಿದೆ. ಸೂರ್ಯನ ಬೆಳಕಿನಲ್ಲಿ ಅಡಕವಾಗಿದ್ದರೂ ಇದು ಭೂಮಿಯನ್ನು ತಲಪುವುದಿಲ್ಲ. ಗಾಳಿ ಇದಕ್ಕೆ ಪಾರದರ್ಶಕ.

ದೂರಾತಿನೇರಿಳೆ[ಬದಲಾಯಿಸಿ]

ದೂರಾತಿನೇರಿಳೆ (ಫಾರ್ ಅಲ್ಟ್ರವಯೊಲೆಟ್) ಇದು 2000 ಆ.ಗಳಿಗಿಂತ ಕಡಿಮೆ ತರಂಗದೂರವುಳ್ಳ ಅತಿನೇರಿಳೆಯ ವಿಭಾಗ. ಗಾಳಿ ಇದಕ್ಕೆ ಅಪಾರದರ್ಶಕವಾದ್ದರಿಂದ ಇದನ್ನು ನಿರ್ವಾತಾತಿನೇರಿಳೆ (ವ್ಯಾಕ್ಯೂಮ್ ಅಲ್ಟ್ರವಯೊಲೆಟ್) ಎಂದೂ ಕರೆಯಬಹುದು. ಇದು ಎಕ್ಸ್-ರಶ್ಮಿಯನ್ನೂ ಅತಿನೇರಿಳೆ ಕಿರಣವನ್ನೂ ಕೂಡಿಸುವ ವಿಭಾಗ.

ವಿವಿಧ ಎತ್ತರಗಳಲ್ಲಿ (DU/km) ಓಝೋನ್ ಮಟ್ಟಗಳು ಮತ್ತು ನೇರಳಾತೀತ ವಿಕಿರಣದ ವಿವಿಧ ಪಟ್ಟಿಗಳನ್ನು ನಿರ್ಬಂಧಿಸುವುದು: ಮೂಲಭೂತವಾಗಿ, ವಾತಾವರಣದಲ್ಲಿ ಎಲ್ಲಾ UVC ಯನ್ನು ದ್ವಿಪರಮಾಣು ಆಮ್ಲಜನಕ (100-200 nm) ಅಥವಾ ಓಝೋನ್ (ತ್ರಿಪರಮಾಣು ಆಮ್ಲಜನಕ) (200-280 nm) ನಿರ್ಬಂಧಿಸುತ್ತದೆ. ಓಝೋನ್ ಪದರವು ಹೆಚ್ಚಿನ UVB ಅನ್ನು ನಿರ್ಬಂಧಿಸುತ್ತದೆ. ಏತನ್ಮಧ್ಯೆ, UVA ಓಝೋನ್‌ನಿಂದ ಅಷ್ಟೇನೂ ಬಾಧಿತವಾಗುವುದಿಲ್ಲ ಮತ್ತು ಅದರಲ್ಲಿ ಹೆಚ್ಚಿನವು ನೆಲವನ್ನು ತಲುಪುತ್ತದೆ. UVA ಭೂಮಿಯ ವಾತಾವರಣವನ್ನು ಭೇದಿಸುವ ಬಹುತೇಕ ಎಲ್ಲ UV ಬೆಳಕನ್ನು ರೂಪಿಸುತ್ತದೆ.

ನೇರಳಾತೀತ ವಿಕಿರಣದ ಆಕರಗಳು[ಬದಲಾಯಿಸಿ]

ಸೂರ್ಯನೇ ಅಲ್ಲದೆ ಹೆಚ್ಚುಕಡಿಮೆ ಎಲ್ಲ ಬೆಳಕಿನ ಆಕರಗಳೂ ಸ್ವಲ್ಪಮಟ್ಟಿಗೆ ಅತಿ ನೇರಿಳೆಯನ್ನು ವಿಸರಿಸುತ್ತವೆ. ಸಾಮಾನ್ಯವಾಗಿ ಉಷ್ಣತೆ ಹೆಚ್ಚಿದಷ್ಟು ಅಥವಾ ಉದ್ರಿಕ್ತತೆ ಹೆಚ್ಚು ತೀವ್ರವಾದಷ್ಟೂ ವಿಸ್ತರಣೆಯಾಗುವ ಅತಿನೇರಿಳೆಯ ತರಂಗದೂರ ಕಡಿಮೆಯಾಗತೊಡಗುವುದು. ಕ್ವಾರ್ಟ್ಸ್ ಆವರಣವುಳ್ಳ ಟಂಗ್‍ಸ್ಟನ್ ದೀಪ, ಸುಮಾರು ಅ ಸೆಂ.ಗ್ರೇ. ಉಷ್ಣತೆಯುಳ್ಳ ಇಂಗಾಲ ವಿದ್ಯುತ್‍ಚಾಪ (ಕಾರ್ಬನ್ ಆರ್ಕ್), ಅನಿಲಗಳ ಮುಖಾಂತರ ವಿದ್ಯುತ್ ವಿಸರ್ಜನೆ (ಡಿಸ್‍ಛಾರ್ಜ್)-ಇವೆಲ್ಲವೂ ಅತಿನೇರಿಳೆಯ ಉತ್ತಮ ಆಕರಗಳು. ಆದರೆ ಬಹಳ ಹೆಚ್ಚಾಗಿ ಉಪಯೋಗಿಸಲಾಗುವ ಆಕರವೆಂದರೆ ಕ್ವಾರ್ಟ್ಸ್-ಪಾದರಸದ ವಿದ್ಯುತ್‍ಚಾಪ (ಕ್ವಾರ್ಟ್ಸ್-ಮರ್ಕ್ಯುರಿ ಆರ್ಕ್). ಅತ್ಯಂತ ಕಡಿಮೆ ತರಂಗದೂರವುಳ್ಳ ಅತಿನೇರಿಳೆ ಬೇಕಾದಲ್ಲಿ ಅತ್ಯಂತ ಹೆಚ್ಚು ಉಷ್ಣತೆಯುಳ್ಳ ಆಕರಗಳು ಬೇಕಾಗುತ್ತವೆ. ಉದಾಹರಣೆಗೆ, ಜ಼ೀಟಾ ಮತ್ತು ಥೀಟಾ ಪಿಂಚ್ ಎಂದು ಕರೆಯಲಾಗುವ ಸಾಧನದಿಂದ ಉತ್ಪತ್ತಿಯಾದ, ಕಾಂತೀಯವಾಗಿ ಸಂಪೀಡಿಸಲ್ಪಟ್ಟ (ಮ್ಯಾಗ್ನೆಟಿಕಲಿ ಕಂಪ್ರೆಸ್ಡ್) ಪ್ಲಾಸ್ಮ. ಇಲ್ಲಿ ಉಷ್ಣತೆ ಸುಮಾರು 5 ಲಕ್ಷ ಡಿಗ್ರಿ ಸೆಂ.ಗ್ರೇ. ನಷ್ಟಿರುತ್ತದೆ. ಆದರೆ ಹೆಚ್ಚು ತೀವ್ರತೆ ಮತ್ತು ಕಡಿಮೆ ತರಂಗದೂರದ ಅತಿನೇರಿಳೆಗೆ ಪರಮಾಣು ಬಾಂಬನ್ನು ಸರಿಗಟ್ಟುವಂಥ ಬೇರೆ ಯಾವ ಮಾನವನಿರ್ಮಿತ ಆಕರವೂ ಇಲ್ಲ.

ಎರಡು ಕಪ್ಪು ಬೆಳಕಿನ ಪ್ರತಿದೀಪಕ ಕೊಳವೆಗಳು ಬಳಕೆಯನ್ನು ತೋರಿಸುತ್ತಿವೆ. ಹೆಚ್ಚು ಉದ್ದವಾದ ಕೊಳವೆ F15T8/BLB 18 ಇಂಚಿನ, 15 ವ್ಯಾಟ್ ಕೊಳವೆ ಆಗಿದ್ದು, ಅದನ್ನು ಕೆಳಗಿನ ಚಿತ್ರದಲ್ಲಿ ಪ್ರಮಾಣಿತ ಒಳತೂರಿಸುವ ಪ್ರತಿದೀಪಕ ಘಟಕದಲ್ಲಿ ತೋರಿಸಲಾಗಿದೆ. ಚಿಕ್ಕದು F8T5/BLB 12 ಇಂಚಿನ, 8 ವ್ಯಾಟ್ ಕೊಳವೆ ಆಗಿದ್ದು, ಸಾಕುಪ್ರಾಣಿಯ ಮೂತ್ರ ಪತ್ತೆಕಾರಕವಾಗಿ ಮಾರಾಟವಾಗುವ, ಇದನ್ನು ಸಾಗಿಸಲು ಸುಲಭವಾದ, ಬ್ಯಾಟರಿ ಚಾಲಿತ ಕಪ್ಪು ಬೆಳಕಿನಲ್ಲಿ ಬಳಸಲಾಗುತ್ತದೆ.

ಅತಿನೇರಿಳೆ ಉಪಕರಣ[ಬದಲಾಯಿಸಿ]

ಅತಿನೇರಿಳೆ ಉಪಕರಣಗಳಿಗೆ ಬೇಕಾಗುವ ಮಸೂರ ಮತ್ತು ಅಶ್ರಗಗಳನ್ನು ತಯಾರಿಸಲು ಬೇಕಾದ ಅಮೂಲ್ಯವಾದ ಸಾಮಗ್ರಿಗಳೆಂದರೆ, ಸ್ಫಟಿಕ ರೂಪದಲ್ಲಿರುವ ಅಥವಾ ಕರಗಿಸಿ ಪುನಃ ಗಟ್ಟಿಮಾಡಿದ ಕ್ವಾರ್ಟ್ಸ್, ಲಿಥಿಯಂ ಫ್ಲೋರೈಡ್ ಮತ್ತು ಕ್ಯಾಲ್ಸಿಯಂ ಫ್ಲೋರೈಡ್. ಇವು ಅತಿನೇರಿಳೆಯ ಬಹುಭಾಗಕ್ಕೆ ಪಾರಕಗಳಾಗಿವೆ. ಬಹಳ ತೆಳುವಾದ ಪೊರೆಯ ರೂಪದಲ್ಲಿರುವ ಕೆಲವು ಘನವಸ್ತುಗಳು ಸ್ವಲ್ಪಮಟ್ಟಿಗೆ ದೂರಾತಿನೇರಿಳೆಯ ಪೂರ್ಣಭಾಗಕ್ಕೆ ಪಾರಕಗಳಾಗಿರುತ್ತವೆ. ಉದಾಹರಣೆಗೆ, ಬಹಳ ತೆಳುವಾದ ಅಲ್ಯುಮಿನಿಯಮ್ ಪೊರೆ ಮತ್ತು ಸುಮಾರು 300 ಆ.ಗಳಷ್ಟು ದಪ್ಪವಿರುವ ಅಸ್ಫಟಿಕದಂಥ (ಕಲಾಡಿಯನ್) ಪ್ಲಾಸ್ಟಿಕ್ ಪೊರೆ. ಇವು ಅತಿನೇರಿಳೆಯ ಸೋಸುಕಗಳಾಗಿ (ಫಿಲ್ಟರ್ಸ್) ಪ್ರಯೋಜನಕ್ಕೆ ಬರುತ್ತವೆ.

ಗಾಳಿಯಲ್ಲಿನ ಅನಿಲಗಳು ಅತಿನೇರಿಳೆ ಕಿರಣದಲ್ಲಿ ಬೇರೆ ಬೇರೆ ಶೋಷಣ (ಅಬ್ಸಾರ್ಪ್‍ಷನ್) ವೈಶಿಷ್ಟ್ಯಗಳನ್ನು ಹೊಂದಿವೆ. ಅಣುರೂಪದಲ್ಲಿರುವ ಆಮ್ಲಜನಕವು ಗಾಳಿ 1850 ಆ.ಗಳಿಗಿಂತ ಕಡಿಮೆ ತರಂಗದೂರದ ಅತಿನೇರಿಳೆಗೆ ಪಾರಕರಹಿತವಾಗಿರುವುದಕ್ಕೆ ಕಾರಣವಾಗಿದೆ. ಹೀಗೆಯೇ ಗಾಳಿ ಅತಿನೇರಿಳೆಯ ಬೇರೆ ಬೇರೆ ಭಾಗಗಳಿಗೆ ಪಾರಕವಾಗಿಲ್ಲದಿರುವುದಕ್ಕೆ ಅಣುರೂಪದಲ್ಲಿರುವ ನೈಟ್ರೊಜನ್, ಹೈಡ್ರೊಜನ್, ಕಾರ್ಬನ್ ಡೈ ಆಕ್ಸೈಡ್, ನೈಟ್ರಿಕ್ ಆಕ್ಸೈಡ್, ನೀರಿನ ಹಬೆ ಮುಂತಾದವು ಕಾರಣವಾಗಿವೆ.

ಪ್ರತಿಫಲನ ಗುಣ[ಬದಲಾಯಿಸಿ]

ಗೋಚರ ರಷ್ಮಿಪುಂಜದಂತೆಯೆ ಅತಿನೇರಿಳೆಗೂ ಪ್ರತಿಫಲಿಸುವ ಗುಣವಿದೆ. ತರಂಗದೂರ ಕಡಿಮೆಯಾದಂತೆಲ್ಲ ಪ್ರತಿಫಲಿಸುವಿಕೆಯೂ ಕಡಿಮೆಯಾಗುತ್ತದೆ. ಆದರೆ ಈ ಗುಣ ಅತಿನೇರಿಳೆಯ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಕೂಡ ವಿಶೇಷ ರೀತಿಯಲ್ಲಿ ತಯಾರುಮಾಡಿದ ಪ್ರತಿಫಲಕಗಳು ಅವಶ್ಯಕ.

ನೇರಳಾತೀತ ವಿಕಿರಣದ ಪತ್ತೆ ಹಚ್ಚುವಿಕೆ[ಬದಲಾಯಿಸಿ]

ಅತಿನೇರಿಳೆ ದೃಗ್ಗೋಚರವಲ್ಲದಿದ್ದರೂ ಅದರ ಇರುವಿಕೆಯನ್ನು ಬೇರೆ ಬೇರೆ ವಿಧಾನಗಳಿಂದ ಪತ್ತೆಹಚ್ಚಬಹುದು. ಇದಕ್ಕಾಗಿ ಅತಿನೇರಿಳೆರಶ್ಮಿಯು ಪದಾರ್ಥಗಳ ಮೇಲೆ ಬಿದ್ದಾಗ ಉಂಟಾಗುವ ಪರಿಣಾಮಗಳನ್ನೇ ಬಳಸಬಹುದು. ಅತಿನೇರಿಳೆಯ ಬೆಳಕಿನ ಕಣಗಳು (ಫೋಟಾನುಗಳು) ಗೋಚರ ಫೋಟಾನುಗಳಿಗಿಂತ ಸುಮಾರು 10 ಸಾವಿರದಷ್ಟು ಶಕ್ತಿಯುತವಾದ್ದರಿಂದ ಅವು ಉಂಟುಮಾಡುವ ಪರಿಣಾಮಗಳ ಅವಲೋಕನ ಸುಲಭಸಾಧ್ಯ.

ಕೆಲವು ಪದಾರ್ಥಗಳ ಮೇಲೆ ರಶ್ಮಿ ಬಿದ್ದಾಗ ಉಂಟಾಗುವ ಪ್ರತಿದೀಪ್ತಿವರ್ಣ ಪ್ರಭಾವದಿಂದ, ಮತ್ತೆ ಕೆಲವು ಪದಾರ್ಥಗಳ ಮೇಲೆ ಬಿದ್ದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳಿಂದ, ಇನ್ನು ಕೆಲವು ಘನವಸ್ತುಗಳ ಮೇಲೆ ಬಿದ್ದಾಗ ಆಗುವ ವಿಘಟನೆಯಿಂದ ಅವುಗಳು ಅಯಾನೀಕೃತವಾಗುವುದರಿಂದ-ಹೀಗೆ ಬೇರೆ ಬೇರೆ ವಿಧಾನಗಳಿಂದ ಇದನ್ನು ಪತ್ತೆಹಚ್ಚಬಹುದು. ದೂರಾತಿನೇರಿಳೆಯನ್ನು ಪತ್ತೆ ಹಚ್ಚಲು ಇನ್ನೂ ಸುಲಭವಾದ ಮಾರ್ಗವೆಂದರೆ, ಕ್ಯಾಲ್ಸಿಯಂ ಟಂಗ್‍ಸ್ಟೇಟ್, ಸೋಡಿಯಂ ಸ್ಯಾಲಿಸಿಲೇಟ್ ಮುಂತಾದ ವಸ್ತುಗಳನ್ನುಪಯೋಗಿಸಿಕೊಂಡು ಪ್ರತಿದೀಪ್ತಿ ವಿಧಾನದಿಂದ ಹತ್ತಿರದ ಅತಿನೇರಿಳೆಯದನ್ನಾಗಿಯಾಗಲಿ ಅಥವಾ ಗೋಚರಕಿರಣವನ್ನಾಗಿಯಾಗಲಿ ಬದಲಾಯಿಸಬಹುದು. ಹೀಗೆ ಬದಲಾಯಿಸಿದ ಅನಂತರ ಅದನ್ನು ಛಾಯಾಗ್ರಹಿಸಬಹುದು ಅಥವಾ ರೂಢಿಯಲ್ಲಿರುವ ದ್ಯುತಿಗುಣಕಗಳ (ಫೋಟೋ ಮಲ್ಟಿಪ್ಲಯ್ಸರ್) ಸಹಾಯದಿಂದಲೂ ಅಳೆಯಬಹುದು. 2500 ಆ.ಗಳಿಗಿಂತಲೂ ಕೆಳಗಿನ ಅತಿನೇರಿಳೆಯನ್ನು ಛಾಯಾಗ್ರಹಿಸಲು ಜೆಲಟಿನ್‍ರಹಿತವಾದ ಮತ್ತು ಸೋಡಿಯಂ ಸ್ಯಾಲಿಸಿಲೇಟ್ ಅಥವಾ ಕೆಲವು ವಿಶೇಷ ರೀತಿಯ ಎಣ್ಣೆಗಳ ಲೇಪನಹೊಂದಿದ ಛಾಯಾಗ್ರಾಹಕ ತಟ್ಟೆಗಳು ಬೇಕಾಗುತ್ತವೆ. ಅತಿನೇರಿಳೆಯನ್ನು ಶಾಖವನ್ನಾಗಿ ಪರಿವರ್ತಿಸಿ ಶಾಖಯುಗ್ಮಗಳನ್ನು (ಥರ್ಮೋಕಪಲ್ಸ್) ಉಪಯೋಗಿಸಿಕೊಂಡು ಈ ಶಾಖವನ್ನಳೆದು ಕೂಡ ಪತ್ತೆಹಚ್ಚಬಹುದು. ಗೈಗರ್-ಮುಲ್ಲರ್ ಗಣಕಗಳು (ಕೌಂಟರ್ಸ್) ಮತ್ತು ಅಯಾನೀಕರಣ ಸಂಪುಟ (ಅಯಾನೈಜೇಷನ್ ಛೇಂಬರ್) ಪ್ರಯೋಜನಕಾರಿಯಾದ ಅತಿನೇರಿಳೆಯ ಶೋಧಕಗಳ ಗುಂಪಿಗೆ ಸೇರಿವೆ.

ಅತಿನೇರಿಳೆರಶ್ಮಿಯಿಂದ ಹಾನಿ[ಬದಲಾಯಿಸಿ]

ಅತಿನೇರಿಳೆರಶ್ಮಿ ಚರ್ಮದ ಮೇಲೆ ಕೆಲವು ಹಾನಿಕಾರಕ ಪರಿಣಾಮಗಳನ್ನುಂಟುಮಾಡಬಲ್ಲುದು. ಇದನ್ನು ಮೊದಲು ವಿವರಿಸಿದವ ಡೆನ್ಮಾರ್ಕಿನ ವಿಜ್ಞಾನಿ ನೀಲ್ಸ್ ರೈಬರ್ಗ್ ಫಿನ್‍ಸನ್. ಕಡಿಮೆ ತರಂಗದೂರದ ಅತಿನೇರಿಳೆ ಚರ್ಮದ ಮೇಲೆ ಹೆಚ್ಚು ಹಾನಿಕಾರಕ ಪರಿಣಾಮವನ್ನುಂಟುಮಾಡುತ್ತದೆ.[೧೫] ಭೂಮಿಯ ಮೇಲ್ಮೈಯನ್ನು ತಲಪುವ ಸೂರ್ಯರಶ್ಮಿಯಲ್ಲಿ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಇಲ್ಲಿ ಆಗುವ ಪರಿಣಾಮ ಅಷ್ಟು ಗಣನೀಯವಲ್ಲ. ಆದರೆ ಭೂಮಿಯಿಂದ ಮೇಲೆ ಬಹಳ ಎತ್ತರಕ್ಕೆ ಹೋದಾಗ ಆಗುವ ಪರಿಣಾಮ ಗಣನೀಯ. ಸೂರ್ಯನ ಬೆಳಕಿಗೆ ಅತಿಯಾಗಿ ಮೈಯೊಡ್ಡುವುದು ಚರ್ಮದ ಕ್ಯಾನ್ಸರ್ ರೋಗಕ್ಕೆ ಒಂದು ಕಾರಣವೆಂದೂ ಹೇಳುತ್ತಾರೆ. 3000 ಆ. ಗಳಿಗಿಂತ ಕಡಿಮೆ ತರಂಗದೂರದ ಅತಿನೇರಿಳೆಗೆ ಕಣ್ಣನ್ನು ಅತಿಯಾಗಿ ಒಡ್ಡುವುದೂ ಅಪಾಯಕಾರಿ. ಇದು ಕಣ್ಣುಗುಡ್ಡೆಯ ಮುಂಭಾಗದಿಂದ (ಕಾರ್ನಿಯಾ) ಹೀರಲ್ಪಟ್ಟು ಪ್ರತಿದೀಪ್ತಿಯುಂಟಾಗಿ ಆ ಭಾಗದ ಉರಿ (ಕಂಜಂಕ್ಟಿವೈಟಿಸ್) ಉಂಟಾಗಬಹುದು. ಈ ಕಾರಣದಿಂದಲೇ ತೀವ್ರವಾದ ಮಧ್ಯಾತಿನೇರಿಳೆ ರಷ್ಮಿಪುಂಜದ ಮುಂದೆ ಇದ್ದಾಗ ಬಿಸಿಲುಕನ್ನಡಕಗಳನ್ನು (ಗಾಗಲ್ಸ್) ಧರಿಸಿಕೊಳ್ಳುವುದು ಅವಶ್ಯಕ.

ಮತ್ತೊಂದು ಪರಿಣಾಮವೆಂದರೆ ಕೆಲವು ಸಂದರ್ಭಗಳಲ್ಲಿ ಸೂರ್ಯಾತಿನೇರಿಳೆ ಕಿರಣ ಕಣ್ಣಿನ ಮೇಲೂ, ಮತ್ತು ಸಸ್ಯಗಳ ಮೇಲೂ ಹಾನಿಕಾರಕ ಪರಿಣಾಮವನ್ನುಂಟುಮಾಡಬಲ್ಲ ದಟ್ಟವಾದ ಧೂಮವನ್ನು ವಾತಾವರಣದಲ್ಲಿ ಉಂಟುಮಾಡಬಲ್ಲುದು. ಈಚೆಗೆ ಇದನ್ನು ಗುರುತಿಸಲಾಗಿದೆ. ಇದರ ವಿವರ ಬಹಳ ಜಟಿಲವಾದದ್ದು. ಇದರ ಸಂಬಂಧವಾಗಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.

ಹಿಮದಿಂದಾವೃತವಾದ ಪ್ರದೇಶಗಳಲ್ಲಿ ಮತ್ತು ಹಿಮನದಿಗಳ ಮೇಲೆ ಸಂಚರಿಸುವಾಗ ಬಿಸಿಲುಕನ್ನಡಕವನ್ನು ಧರಿಸುವುದು ಅವಶ್ಯಕ. ಇಲ್ಲವಾದಲ್ಲಿ ಇಲ್ಲೂ ಕೂಡ ಅತಿನೇರಿಳೆ ಕಿರಣದ ಪ್ರಭಾವದಿಂದ ಹಿಮಾಂಧತೆ (ಸ್ನೋ ಬ್ಲೈಂಡ್‍ನೆಸ್) ಬರಬಹುದು.[೧೬]

ಅತಿನೇರಿಳೆಯ ಪ್ರಯೋಜನಗಳು[ಬದಲಾಯಿಸಿ]

ಅತಿನೇರಿಳೆ ಕಿರಣವನ್ನು ಉಕ್ಕಿನ ಮುಖಾಂತರ ಹಾಯಿಸಿ ಹೊರಬಂದ ಕಿರಣವನ್ನು ದ್ಯುತಿಗುಣಕ ಮತ್ತು ವಿವಿಧಮಾರ್ಗದ (ಮಲ್ಟಿಛಾನಲ್) ರೋಹಿತಮಾಪಕಗಳ ಸಹಾಯದಿಂದ ವಿಶ್ಲೇಷಿಸಿ ಉಕ್ಕಿನ ಸಂಘಟನೆಯನ್ನು ಕೆಲವೇ ಮಿನಿಟುಗಳಲ್ಲಿ ತಿಳಿಯಬಹುದು. ತಾಂತ್ರಿಕ ಮತ್ತು ಕೈಗಾರಿಕಾಕ್ಷೇತ್ರಗಳಲ್ಲಿ ಅತಿನೇರಿಳೆಯಿಂದಾಗಿರುವ ಅನೇಕ ಉಪಯೋಗಗಳಲ್ಲಿ ಇದೂ ಒಂದು.

ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ಇದರ ಸಹಾಯದಿಂದ ಇನ್ನೂ ಸಮರ್ಪಕವಾಗಿ ಮಾಡಬಹುದು.

ಜೀವಸಂಬಂಧಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಇದರ ಪ್ರಯೋಜನ ಅಪಾರ. ಆಸ್ಪತ್ರೆಗಳಲ್ಲಿ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳನ್ನು ಕೊಲ್ಲಲೂ,[೧೭] ಅದರಲ್ಲೂ ಶಸ್ತ್ರಚಿಕಿತ್ಸೆಯ ಕೊಠಡಿಗಳಲ್ಲಿ ರಕ್ತನಾಳಗಳಲ್ಲಿನ ಯಕೃತ್ತುವಿಷಾಣುಗಳನ್ನು ಕೊಲ್ಲಲೂ, ಆಹಾರವನ್ನು ಕ್ರಿಮಿ ಶುದ್ಧೀಕರಿಸಲು (ಸ್ಟೆರಿಲೈಜ಼ೇಶನ್) ಇದನ್ನು ಉಪಯೋಗಿಸುತ್ತಾರೆ. ಚರ್ಮವನ್ನು ಅತಿನೇರಿಳೆ ರಶ್ಮಿಪುಂಜಕ್ಕೆ ಒಡ್ಡಿದಾಗ ಡಿ-ಅನ್ನಾಂಗ ಉತ್ಪತ್ತಿಯಾಗುತ್ತದೆ ಎಂದು ಕಂಡುಹಿಡಿಯಲಾಗಿದೆ.[೧೮] ಇದಕ್ಕೆ ಅತಿನೇರಿಳೆ ಚಿಕಿತ್ಸೆ ಎಂದು ಹೆಸರು.

ಕ್ವಾರ್ಟ್ಸ್ ಮಸೂರಗಳನ್ನು ಹೊಂದಿರುವ ಅತಿನೇರಿಳೆ ಸೂಕ್ಷ್ಮದರ್ಶಕ ರೂಢಿಯಲ್ಲಿರುವ ಸೂಕ್ಷ್ಮದರ್ಶಕಗಳಿಗಿಂತಲೂ ಹೆಚ್ಚು ವಿಘಟನ ಸಾಮರ್ಥ್ಯ ಹೊಂದಿರುವುದರಿಂದ ಭೌತಿಕ, ವೈದ್ಯಕೀಯ ಮತ್ತು ಜೀವವೈಜ್ಞಾನಿಕವೇ ಮುಂತಾದ ಕ್ಷೇತ್ರಗಳಲ್ಲಿ ಬಹಳ ಪ್ರಯೋಜನಕಾರಿ.

ಸೂರ್ಯಾತಿನೇರಿಳೆ, ಅದರಲ್ಲೂ ಅಲ್ಲಿನ ದೂರಾತಿನೇರಿಳೆ ಕಿರಣ ವಾಯುಮಂಡಲದೊಡನೆ ವರ್ತಿಸಿ ಅನೇಕ ಅಯಾನುಮಂಡಲದ ಪದರಗಳನ್ನು ಉಂಟುಮಾಡುತ್ತದೆ. ವಾಯು ಮಂಡಲದಲ್ಲಿ ಏರ್ಪಟ್ಟ ಈ ಪದರಗಳು ರೇಡಿಯೋತರಂಗಗಳಿಗೆ ಒಳ್ಳೆಯ ಪ್ರತಿಫಲಕಗಳಾಗಿ ಕೆಲಸಮಾಡಿ ರೇಡಿಯೋಸಂದೇಶಗಳನ್ನು ಬಹಳ ದೂರದವರೆಗೂ ಕಳುಹಿಸಲು ಸಹಾಯಮಾಡುತ್ತವೆ.

ಅತಿನೇರಿಳೆಯ ಸೋಸಕವೊಂದನ್ನು ಇಂಗಾಲ ವಿದ್ಯುತ್ ಚಾಪ ಪ್ರಕ್ಷೇಪಕದ (ಪ್ರೊಜೆಕ್ಟರ್) ಮುಂದಿಟ್ಟು ಹೊರಬರುವ ತೀವ್ರಾತಿನೇರಿಳೆ ರಶ್ಮಿಪುಂಜವನ್ನು ಸೂಕ್ತವಾಗಿ ಅಳವಡಿಸಿರುವ ರಾಸಾಯನಿಕ ವಸ್ತುಗಳ ಮೇಲೆ ಬೀಳುವಂತೆ ಮಾಡಿದರೆ ಅವು ತಮ್ಮ ಅಣುಗಳ ರಚನೆಗನುಗುಣವಾಗಿ ವಿಧವಿಧವಾದ ಬಣ್ಣಗಳಿಂದ ಬೆಳಗುತ್ತವೆ. ಈ ಕ್ರಿಯೆಯನ್ನು ಚಲನಚಿತ್ರಮಂದಿರಗಳಲ್ಲಿ ಉಪಯೋಗಿಸಿಕೊಳ್ಳುತ್ತಾರೆ.

ಮಾನವನ ಉಳಿವು 2000 ಆ.-13000 ಆ.ಗಳವರೆಗೆ ವಿಸ್ತರಿಸಲ್ಪಟ್ಟ ಸೂರ್ಯಾತಿನೇರಿಳೆ ಕಿರಣವನ್ನು ಅವಲಂಬಿಸಿದೆ. ಈ ಕಿರಣ ವಾಯುಮಂಡಲದಲ್ಲಿನ ಆಮ್ಲಜನಕದ ಅಣುವಿನಿಂದ ಹೀರಲ್ಪಟ್ಟು ಆಮ್ಲಜನಕದ ಪರಮಾಣುವನ್ನು ಉತ್ಪತ್ತಿಮಾಡುತ್ತದೆ. ಇದು ಮತ್ತೆ ಆಮ್ಲಜನಕಅಣುವಿನೊಡನೆ ಸಂಯೋಗವಾಗಿ ವಾಯುಮಂಡಲದಲ್ಲಿ ಓಜೋನಿನ ಶಾಶ್ವತಪದರಗಳನ್ನು ಉತ್ಪತ್ತಿ ಮಾಡುತ್ತದೆ. ಓಜೋನ್ ಪದರ ಹಾನಿಕಾರಕ ಅತಿನೇರಿಳೆ ವಿಕಿರಣಗಳನ್ನು ಹೀರಿಕೊಂಡು ಜೀವ ಸಂಕುಲವನ್ನು ರಕ್ಷಿಸುತ್ತದೆ.

9 ವ್ಯಾಟ್ ರೋಗಾಣುಕಾರಕ ನೇರಳಾತೀತ ಬಲ್ಬ್, ಒತ್ತಾಗಿರುವ ಪ್ರತಿದೀಪಕ (CF) ಫಾರ್ಮ್ ಫ್ಯಾಕ್ಟರ್‌ನಲ್ಲಿ

ಉಲ್ಲೇಖಗಳು[ಬದಲಾಯಿಸಿ]

  1. "Reference Solar Spectral Irradiance: Air Mass 1.5". Archived from the original on 27 January 2011. Retrieved 2009-11-12.
  2. Wacker, Matthias; Holick, Michael F. (2013-01-01). "Sunlight and Vitamin D". Dermato-endocrinology. 5 (1): 51–108. doi:10.4161/derm.24494. ISSN 1938-1972. PMC 3897598. PMID 24494042.
  3. ೩.೦ ೩.೧ David Hambling (29 May 2002). "Let the light shine in". The Guardian. Archived from the original on 23 November 2014. Retrieved 2 January 2015. ಉಲ್ಲೇಖ ದೋಷ: Invalid <ref> tag; name "hambling" defined multiple times with different content
  4. Cronin, Thomas W.; Bok, Michael J. (2016-09-15). "Photoreception and vision in the ultraviolet". Journal of Experimental Biology (in ಇಂಗ್ಲಿಷ್). 219 (18): 2790–2801. doi:10.1242/jeb.128769. ISSN 1477-9145. PMID 27655820. Archived from the original on 24 June 2022. Retrieved 23 June 2022.
  5. M A Mainster (2006). "Violet and blue light blocking intraocular lenses: photoprotection versus photoreception". British Journal of Ophthalmology. 90 (6): 784–792. doi:10.1136/bjo.2005.086553. PMC 1860240. PMID 16714268.
  6. Lynch, David K.; Livingston, William Charles (2001). Color and Light in Nature (2nd ed.). Cambridge: Cambridge University Press. p. 231. ISBN 978-0-521-77504-5. Archived from the original on 31 December 2013. Retrieved 12 October 2013. Limits of the eye's overall range of sensitivity extends from about 310 to 1050 nanometers
  7. Dash, Madhab Chandra; Dash, Satya Prakash (2009). Fundamentals of Ecology 3E. Tata McGraw-Hill Education. p. 213. ISBN 978-1-259-08109-5. Archived from the original on 31 December 2013. Retrieved 18 October 2013. Normally the human eye responds to light rays from 390 to 760 nm. This can be extended to a range of 310 to 1,050 nm under artificial conditions.
  8. Bennington-Castro, Joseph (22 November 2013). "Want ultraviolet vision? You're going to need smaller eyes". Archived from the original on 7 May 2016.
  9. Hunt, D. M.; Carvalho, L. S.; Cowing, J. A.; Davies, W. L. (2009). "Evolution and spectral tuning of visual pigments in birds and mammals". Philosophical Transactions of the Royal Society B: Biological Sciences. 364 (1531): 2941–2955. doi:10.1098/rstb.2009.0044. ISSN 0962-8436. PMC 2781856. PMID 19720655.
  10. "On a new Imponderable Substance and on a Class of Chemical Rays analogous to the rays of Dark Heat", J.W. Draper, The London, Edinburgh, and Dublin Philosophical Magazine and Journal of Science, 1842, LXXX, pp.453–461
  11. "Description of the Tithonometer", J.W. Draper, The Practical Mechanic and Engineer's Magazine, January 1844, pp.122–127
  12. Beeson, Steven; Mayer, James W (2007-10-23). "12.2.2 Discoveries beyond the visible". Patterns of light: chasing the spectrum from Aristotle to LEDs. New York: Springer. p. 149. ISBN 978-0-387-75107-8.
  13. Hockberger, Philip E. (2002). "A history of ultraviolet photobiology for humans, animals and microorganisms". Photochem. Photobiol. 76 (6): 561–79. doi:10.1562/0031-8655(2002)0760561AHOUPF2.0.CO2. PMID 12511035.
  14. Lyman, T. (1914), "Victor Schumann", Astrophysical Journal, 38: 1–4, Bibcode:1914ApJ....39....1L, doi:10.1086/142050
  15. "Health effects of UV radiation". World Health Organization. Archived from the original on 17 March 2015.
  16. The known health effects of UV (Report). World Health Organization. https://www.who.int/uv/faq/uvhealtfac/en/index3.html. 
  17. Lorenzo-Leal, Ana C.; Tam, Wenxi; Kheyrandish, Ata; Mohseni, Madjid; Bach, Horacio (2023-10-31). Barbosa, Joana (ed.). "Antimicrobial Activity of Filtered Far-UVC Light (222 nm) against Different Pathogens". BioMed Research International (in ಇಂಗ್ಲಿಷ್). 2023: 1–8. doi:10.1155/2023/2085140. ISSN 2314-6141. PMC 10630020. PMID 37942030.
  18. Wacker, Matthias; Holick, Michael F. (2013-01-01). "Sunlight and Vitamin D". Dermato-endocrinology. 5 (1): 51–108. doi:10.4161/derm.24494. ISSN 1938-1972. PMC 3897598. PMID 24494042.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: