ಜಯಶ್ರೀ ಅರವಿಂದ್
ಜಯಶ್ರೀ ಅರವಿಂದ್
[ಬದಲಾಯಿಸಿ]ಜಯಶ್ರೀ ಅರವಿಂದ್ ಗಾಯನ, ರಾಗ ಸಂಯೋಜನೆ, ಗೀತ ರಚನೆ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾಗಿರುವವರು ಕಲಾಶ್ರೀ ಡಾ. ಜಯಶ್ರೀ ಅರವಿಂದ್. ಜಯಶ್ರೀ ಯವರ ಸಂಯೋಜನೆಯ ಗೀತೆಗಳಿಗೆ ರಾಜ್ ಕುಮಾರ್, ಪಿ. ಬಿ. ಶ್ರೀನಿವಾಸ್, ಕೆ. ಜೆ. ಯೇಸುದಾಸ್, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ, ಪಿ. ಸುಶೀಲಾ, ವಾಣಿ ಜಯರಾಮ್, ಸ್ವರ್ಣಲತಾ, ಉನ್ನಿ ಮೇನನ್, ಉನ್ನಿ ಕೃಷ್ಣನ್, ಮಧು ಬಾಲಕೃಷ್ಣ, ಕವಿತಾ ಕೃಷ್ಣಮೂರ್ತಿ, ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ರತ್ನಮಾಲಾ ಪ್ರಕಾಶ್, ವಿದ್ಯಾ ಭೂಷಣ್, ಬಿ. ಆರ್. ಛಾಯ, ಕಸ್ತೂರಿ ಶಂಕರ್, ಚಂದ್ರಿಕಾ ಗುರುರಾಜ್, ಮಂಜುಳಾ ಗುರುರಾಜ್, ಸಂಗೀತ ಕಟ್ಟಿ, ರಾಜೇಶ್ ಕೃಷ್ಣನ್, ಹೇಮಂತ್, ನಂದಿತಾ ಮುಂತಾದ ಸಕಲ ಗಣ್ಯರು ಧ್ವನಿ ನೀಡಿದ್ದಾರೆ.
ಬಾಲ್ಯ
[ಬದಲಾಯಿಸಿ]ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ೨೬ನೇ ಏಪ್ರಿಲ್ ೧೯೫೫ರಲ್ಲಿ ಜಯಶ್ರೀ ಅವರು ಜನಿಸಿದರು. ತಂದೆ ಗೋವಿಂದರಾಜು ಅಂಯ್ಯಂಗಾರ್. ತಾಯಿ ಶ್ರೀರಂಗನಾಯಕಿ ಸಾಹಿತ್ಯ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ತಳೆದಿದ್ದವರು. ಚೀನಾ ಯುದ್ಧದ ಸಂದರ್ಭದಲ್ಲಿ ತಾವೇ ಸ್ವತಃ ಹಾಡು ಬರೆದು ಅದಕ್ಕೆ ರಾಗ ಹೊಂದಿಸಿ ಹಾಡಿ ಜನಪ್ರಿಯತೆ ಪಡೆದಿದ್ದರು. ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನ ಗೀತೆಗಳ ರಾಗಕ್ಕೆ ಪದ ಜೋಡಿಸುವ ಕೆಲಸವನ್ನು ಮಾಡುತ್ತಿದ್ದರು. ಶ್ರೀರಂಗನಾಯಕಮ್ಮನವರಿಗಿದ್ದ ಸಂಗೀತ-ಸಾಹಿತ್ಯದಲ್ಲಿ ಜಯಶ್ರೀಯವರಿಗೆ ಹುಟ್ಟಿನಿಂದಲೇ ಬಂದಿತ್ತು. ತಾಯಿ ಹಾಡುತ್ತಿದ್ದ ಸ್ವರಚಿತ ಗೀತೆಗಳಲ್ಲದೆ, ಸಂಪ್ರದಾಯ ಗೀತೆಗಳು, ಭಕ್ತಿ ಗೀತೆಗಳು ಜಯಶ್ರೀಯವರನ್ನು ಬಹಳಷ್ಟು ಆಕರ್ಷಿಸಿತು. ಕೆಲವು ಹಾಡುಗಳನ್ನು ಕಲಿತು ಹಾಡುತ್ತಾ ಅದರ ಬಗ್ಗೆ ಒಲವು ಬೆಳೆಸಿಕೊಂಡ ಜಯಶ್ರೀ ಹೈಸ್ಕೂಲಿಗೆ ಬಂದ ಮೇಲೆ ಸಂಗೀತವನ್ನು ದ್ವೀತೀಯ ಭಾಷೆಯನ್ನಾಗಿ ತೆಗೆದುಕೊಂಡರು. ಇಲ್ಲಿಂದ ಶಾಸ್ತೀಯ ಸಂಗೀತ ಪಾಠವನ್ನು ಆರಂಭಿಸಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಜಯಶ್ರೀ ಮಾನಸ ಗಂಗೋತ್ರಿಯಲ್ಲಿ ಉನ್ನತ ಶಿಕ್ಷಣ ಆರಂಭಿಸಿದರು. ಅಲ್ಲಿ ಸಂಗೀತದ ಒಳ ಹೊರಗನ್ನು ಸಾಕಷ್ಟು ತಿಳಿದುಕೊಂಡರು. ವಿವಿಧ ರಾಗಗಳ ಪರಿಚಯ, ವಾಗ್ಗೇಯಕಾರರ ರಚಿತ ಕೃತಿಗಳ ಪರಿಚಯ ಮನನವಾಗತೊಡಗಿತು. ಹಾಗೆಯೇ ಹಲವಾರು ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನೀಡತೊಡಗಿದರು.[೧] ಈ ಹಿಂದೆಯೇ ವೀಣಾಭ್ಯಾಸವನ್ನು ೪ ವರ್ಷಗಳ ಕಾಲ ತಮ್ಮ ಚಿಕ್ಕಮ್ಮನಿಂದ ಕಲಿತಿದ್ದ ಜಯಶ್ರೀ ವಿವಿಧ ವಾದ್ಯಗಳ ವಿಶೇಷತೆಯನ್ನು ಅಭ್ಯಸಿಸಿದರು. ಮತ್ತೆ ವಿದ್ಯಾಭ್ಯಾಸ ಮುಂದುವರೆದು ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಯುವಕಲಾವಿದರಾಗಿ ಹೆಸರು ಮಾಡಿರುವ ಪುತ್ತೂರು ನರಸಿಂಹ ನಾಯಕ್, ಕೆ.ಎಸ್. ಸುರೇಖಾ, ರಮೇಶ್ ಚಂದ್ರ ಮುಂತಾದವರು ಜಯಶ್ರೀಯವರ ಗರಡಿಯಲ್ಲಿ ಬೆಳೆದು ಬಂದವರಾಗಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]೧೯೭೭-೭೮ರ ಅವಧಿಯಲ್ಲಿ ಪು.ತಿ.ನರಸಿಂಹಾಚಾರ್ ರಚಿತ ರಾಮಾಯಣ ಗೀತರೂಪಕಗಳ ಮೇಲೆ ಎಂ.ಫಿಲ್. ಪಡೆದರು. ಮುಂದೆ ತವರೂರಿಗೆ ವಾಪಸ್ಸು ಬಂದು ಕನ್ನಡ ಪ್ರಾಧ್ಯಾಪಕರಾಗಿ ಕಾವೇರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದರು. ಇದೇ ಸಂದರ್ಭದಲ್ಲಿ ಕಲಾವಿದ ಹಾಗೂ ತಂತ್ರಜ್ಞ ಅರವಿಂದ್‌ರ ಜೊತೆ ವಿವಾಹವಾಯಿತು. ಮದುವೆಯ ನಂತರ ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅರವಿಂದ್ ಜಯಶ್ರೀಯವರಲ್ಲಿ ಹುದುಗಿದ್ದ ಸಂಗೀತದ ಪ್ರತಿಭೆಯನ್ನು ಅರಳಿಸಲು ನಾದಲಹರಿ ಎಂಬ ಧ್ವನಿ ಸುರುಳಿ ಸಂಸ್ಥೆಯನ್ನು ಹುಟ್ಟುಹಾಕಿದರು. ‘ನವೋದಯ’, ‘ನಾಕುತಂತಿ’ ಮುಂತಾದ ಧ್ವನಿ ಸುರುಳಿಯನ್ನು ತಯಾರಿಸಿ ಇದರಲ್ಲಿ ಕೆಲವು ಗೀತೆಗಳನ್ನು ಜಯಶ್ರೀಯವರಿಂದ ಹಾಡಿಸಿದರು. [೨]ಧ್ವನಿಸುರುಳಿ ಪ್ರಪಂಚಕ್ಕೆ ಕಾಲಿರಿಸಿದ ಜಯಶ್ರೀಯವರು ಮುಂದೆ ಮತ್ತಷ್ಟು ಗೀತೆಗಳನ್ನು ಹಾಡಿದರು. ಅರವಿಂದ್ ಕೆಲವು ಕಾರಣಾಂತರದಿಂದ ನಾದಲಹರಿ ಸಂಸ್ಥೆಯಿಂದ ಹೊರಬಂದು ತಮ್ಮದೇ ಆದ ರೆಕಾರ್ಡಿಂಗ್ ಸ್ಟುಡಿಯೋ ಗಾನಲಹರಿಯನ್ನು ಆರಂಭಿಸಿದರು. ಜಯಶ್ರೀ ಅವರಿಗೆ ಮುಂದೆ ಹಿಂದಿರುಗಿ ನೋಡುವ ಪ್ರಸಂಗಗಳೇ ಬರಲಿಲ್ಲ. ತಮ್ಮದೇ ಆದ ಸ್ಟುಡಿಯೋ ಇರುವಾಗ ಎಷ್ಟು ಬೇಕಾದರೂ ಪ್ರಯೋಗಗಳನ್ನು ಮಾಡಬಹುದು ಎಂಬ ಧೈರ್ಯ ಬಂತು. ಜನಪದ ಗೀತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿ ಅದರ ಬಗ್ಗೆ ಆಳವಾದ ಅಧ್ಯಯನದಲ್ಲಿ ತೊಡಗಿದರು ಧ್ವನಿ ಸುರುಳಿಯೊಂದನ್ನು ಹೊರತರಲು ತೀರ್ಮಾನಿಸಿದರು. ಇದರ ಫಲವಾಗಿ ಹೊರಬಂದದ್ದೇ ‘ಆಡೋಣ ಬನ್ನಿ’ ಎಂಬ ಧ್ವನಿಸುರುಳಿ. ಸಂಬಂಧಗಳೇ ಇರದ ಸಾಲುಗಳನ್ನು ಪರಿಷ್ಕರಿಸಿ ಹಾಡಾಗಿ ರೂಪಿಸುವುದರಲ್ಲಿ ಜಯಶ್ರೀ ಸಿದ್ದಹಸ್ತರು. ಹೀಗೇ ಮುಂದುವರೆದ ಇವರ ಕಾಯಕದಲ್ಲಿ ಬಹಳಷ್ಟು ಧ್ವನಿಸುರುಳಿಗಳು ಹೊರಬಂದವು. ಬರವಣಿಗೆಯಲ್ಲಿ ಬಹಳಷ್ಟು ಅಧ್ಯಯನ ನಡೆಸಿದ್ದ ಜಯಶ್ರೀಯವರು ತಮ್ಮದೇ ಆದ ‘ತೂಗೀರೇ ಉಯ್ಯಾಲೆ ಲಕ್ಷ್ಮಿ’ಗೆ ಎಂಬ ಪುಸ್ತಕವನ್ನು ಹೊರತಂದರು. [೩] ನಂತರ ‘ಸುವ್ವಿ ಸುವ್ವಾಲೆ’ ಎಂಬ ಭಾವಗೀತೆ ಸಂಕಲನವನ್ನು ಹೊರತಂದರು. ಹೀಗೆ ೧೦ ಪುಸ್ತಕವನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ‘ಆಮೋದ’ ‘ಒಲವೇ’, ‘ಹೂಜೇನು’, ‘ಮಧುಕೋಗಿಲೆ’, ‘ನಿನ್ನ ಬಾಂದಳದಂತೆ’ ಮುಂತಾದ ಭಾವಗೀತೆಗಳ ಧ್ವನಿಸುರುಳಿಗೂ ಸಂಯೋಜನೆಯನ್ನು ಮಾಡಿದರು. ಸಂಯೋಜಕರಾಗಿ ಭಡ್ತಿ ಹೊಂದಿದ ನಂತರ ಹಾಡುವುದರ ಕಡೆಗೆ ಒಲವನ್ನು ಕಡಿಮೆ ಮಾಡಿದರು. ಸುಮಾರು ೩೫೦ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹೆಗ್ಗಳಿಕೆ ಇವರದ್ದಾಗಿದೆ. ಜಯಶ್ರೀಯವರ ಸಂಯೋಜನೆಯಲ್ಲಿ ಜಿ.ವಿ. ಅಯ್ಯರ್ ತಯಾರಿಸಿದ ‘ಕೃಷ್ಣಲೀಲಾ’ ಚಿತ್ರದ ಸಂಗೀತ ನಿರ್ದೇಶಕಿಯಾಗಿದ್ದರು. ಸುಗಮ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರಸಿದ್ಧ ಸಂಯೋಜಕ ಪದ್ಮಚರಣ್ ಹಾಗೂ ಪಿ.ಕಾಳಿಂಗರಾವ್ ಬಗ್ಗೆ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಪ್ರಶಸ್ತಿ -ಪುರಸ್ಕಾರ
[ಬದಲಾಯಿಸಿ]೧೯೯೬ರಲ್ಲಿ ಇವರ ಸಾಹಿತ್ಯ ಭಂಡಾರದಿಂದ ಹೊರಹೊಮ್ಮಿದ ಧ್ವನಿಸುರುಳಿ ‘ಚೆಲ್ಲಾಟಗಾರ ಮಾದಪ್ಪ’ ದಾಖಲೆಯನ್ನೇ ನಿರ್ಮಿಸಿತು. ಇದರಲ್ಲಿನ ಗೀತೆಗಳನ್ನು ಡಾ.ರಾಜಕುಮಾರ್ ಹಾಡಿದ್ದಾರೆ. ಈ ದಾಖಲೆಯ ನಂತರ ಒಂದರಮೇಲೊಂದರಂತೆ ಐದು ಧ್ವನಿಸುರುಳಿಗಳು ಹೊರಬಂದವು. ಪುಸ್ತಕ ಪ್ರಾಧಿಕಾರದಿಂದ ೨೦೦೦ದ ವರ್ಷದ ‘ಪುಸ್ತಕ ಸೊಗಸು’ ಪ್ರಶಸ್ತಿಯನ್ನು ಜಯಶ್ರೀಯವರ ರಚಿತ ‘ತುಂಟ ಕೃಷ್ಣನ ಕಂಡರೆ ಹೇಳಿ’ ಕವಿತಾ ಸಂಕಲನಕ್ಕೆ ನೀಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ‘ಸುಗಮಸಂಗಿತ ಒಂದು ಸಮಗ್ರ ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಹಂಪಿ ಯೂನಿವರ್ಸಿಟಿಯ ಡಿಲಿಟ್ ಪಡೆದು ಡಾ. ಜಯಶ್ರೀ ಅರವಿಂದ್ ಆಗಿದ್ದಾರೆ. ಜಯಶ್ರೀಯವರನ್ನು ಹಲವಾರು ಸಂಘ ಸಂಸ್ಥೆಗಳು, ಸಂಗೀತ ಸಾಹಿತ್ಯ ಕಲಾನಿಧಿ, ಸ್ವರ ಮಂದಾರ, ಅತ್ತಿಮಬ್ಬೆ ಮುಂತಾದ ಪ್ರಶಸ್ತಿಗಳ ಮೂಲಕ ಗೌರವಿಸಿವೆ.