ವಿಷಯಕ್ಕೆ ಹೋಗು

ಚದುರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚದುರಂಗ
ಚಿತ್ರ[[File:|200px]]
ಜನನದ ದಿನಾಂಕ1916
ಸಾವಿನ ದಿನಾಂಕ೧೯ ಅಕ್ಟೋಬರ್ 1998
ಮರಣ ಸ್ಥಳಮೈಸೂರು
ವೃತ್ತಿಲೇಖಕ, ಚಲನಚಿತ್ರ ನಿರ್ದೇಶಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ
ಮಹಾರಾಜ ಕಾಲೇಜು
ಮಂಡ್ಯದಲ್ಲಿ (1994) ನಡೆದ 63ನೇ ಸಮ್ಮೇಳನದ ಅಧ್ಯಕ್ಷ ಚದುರಂಗ ಮೆರವಣಿಗೆ

ಶ್ರೀ ಚದುರಂಗರು

ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು.

ಜನ್ಮವೃತ್ತಾಂತ

[ಬದಲಾಯಿಸಿ]

೧೯೧೬ಜನವರಿ ೧ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದ ಚದುರಂಗರು ಮೈಸೂರು ರಾಜಮನೆತನದ ಸಂಬಂಧಿ. ಇತರ ವಂಶದ ಪೂರ್ವಿಕರಲ್ಲಿ ಒಬ್ಬನಾದ ಮಂಗರಸ ಕವಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತನಾಗಿದ್ದಾನೆ. ಮೈಸೂರಿನ ಮಹಾರಾಜ ಜಯ ಚಾಮರಾಜ ಒಡೆಯರ ಓರಗೆಯವರಾಗಿದ್ದ ಚದುರಂಗ ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಬೆಂಗಳೂರಿನ ಮೀಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು ಹೋಗಿ ಕಾರಣಾಂತರಗಳಿಂದ ಓದು ನಿಲ್ಲಿಸಿದರು.

ಬಾಲ್ಯ

[ಬದಲಾಯಿಸಿ]

ಬಾಲ್ಯದಲ್ಲೇ ಕತೆ ಕೇಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸಿ ಬರೆಯುವ ಆಸಕ್ತಿ ಇದ್ದುದರಿಂದ ತಮ್ಮ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪುರಾಣ ಕತೆಗಳನ್ನು ರಾಜ ಮನೆತನದ ಹುಡುಗರಿಗೆ ಹೇಳುತ್ತಿದ್ದರು. ಗಾಂಧೀ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಎಡಪಂಥೀಯ ವಿಚಾರಧಾರೆಗೆ ಮನಸೋತಿದ್ದ ಚದುರಂಗ ಎಂ. ಎನ್. ರಾಯ್ ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡಿದ್ದರು. ರಾಜ ಮನೆತನದ ಸಿರಿ ಸಂಪತ್ತು, ಅಲ್ಲಿನ ಆಡಂಬರ ಚದುರಂಗರಿಗೆ ಇಷ್ಟವಾಗಲಿಲ್ಲವಾದ್ದರಿಂದ ಶ್ರೀಮಂತ ಹೆಣ್ಣು ತಂದು ಮದುವೆ ಮಾಡಬೇಕೆಂಬ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ತಮ್ಮಿಷ್ಟವಾದವರನ್ನು ಮದುವೆಯಾದರು. ಸಂಪ್ರದಾಯ ಹಾಗೂ ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿದು ಸಂಗಾತಿ ಆಯ್ಕೆ ಮಾಡಿಕೊಂಡ ಚದುರಂಗ ಬದುಕನ್ನು ಹೋರಾಟವಾಗಿ ಸ್ವೀಕರಿಸಿ ನೋವುಂಡರು. ಮೈಸೂರು ತೊರೆದು ಹುಟ್ಟೂರು ಕಲ್ಲಹಳ್ಳಿಯಲ್ಲಿ ಬೇಸಾಯಕ್ಕೆ ತೊಡಗಿದರು. ಅಲ್ಲಿನ ಅನುಭವಗಳೇ ಮುಂದೆ ಕತೆ, ಕಾದಂಬರಿಗಳಲ್ಲಿ ಮೈತಾಳಿದವು. ಹಳ್ಳಿಯಲ್ಲೇ ಬರಹ ಆರಂಭಿಸಿ ಸಾಹಿತ್ಯದ ಒಡನಾಟವಿಟ್ಟುಕೊಂಡ ಚದುರಂಗರಿಗೆ ಕುವೆಂಪು, ಮಾಸ್ತಿ, ಗೊರೂರು ಪ್ರಭಾವ ಬೀರಿದರು. ಅನಕೃ, ತರಾಸು ಅವರ ಒಡನಾಟದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿಗೂ ಪಾಲ್ಗೊಂಡರು.

ಚಿತ್ರರಂಗದೊಡನೆ ಚದುರಂಗರ ನಂಟು

[ಬದಲಾಯಿಸಿ]

ಪದವಿ ಅಧ್ಯಯನಕ್ಕೆಂದು ಪುಣೆಗೆಹೋದ ಚದುರಂಗರಿಗೆ ಚಿತ್ರರಂಗದ ಸಂಪರ್ಕವಾಯಿತು. ಆಗಿನ ಪ್ರಖ್ಯಾತ ಸಿನಿಮಾ ಪತ್ರಿಕೆ Motion pictures magazineಯಲ್ಲಿ Random shots ಎಂಬ ಅಂಕಣವನ್ನು ಬರೆಯಲು ಪ್ರಾರಂಭಿಸಿದರು. ಮಾಯಾ ಎಂಬ ಇಂಗ್ಲಿಷ್ ಚಿತ್ರಕ್ಕೆ ಸಹನಿರ್ದೇಶನ ಮಾಡಿದರು.

೧೯೪೮ ರಲ್ಲಿ ಸೋದರ ಸಂಬಂಧಿ ಕೆಂಪರಾಜ್ ಅರಸ್ ಅವರಿಗಾಗಿ ಭಕ್ತ ರಾಮದಾಸ ಎಂಬ ಚಿತ್ರವನ್ನು ನಿರ್ದೇಶಿದರು. ಈ ಚಿತ್ರಕ್ಕೆ ಚಿತ್ರಕಥೆ , ಸಂಭಾಷಣೆಗಳಲ್ಲದೆ ಎರಡು ಗೀತೆಗಳನ್ನು ರಚಿಸಿದರು. ೧೯೬೮ರಲ್ಲಿ ತಮ್ಮ ಕಾದಂಬರಿಯನ್ನು ಆಧರಿಸಿದ ಸರ್ವಮಂಗಳ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚದುರಂಗರ ಕಾದಂಬರಿ ಉಯ್ಯಾಲೆ ಅದೇ ಹೆಸರಿನಿಂದ ಚಲನಚಿತ್ರವಾಯಿತು. ಉಯ್ಯಾಲೆ ಚಲನಚಿತ್ರವನ್ನು ಲಕ್ಷ್ಮೀ ನಾರಾಯಣ್ ನಿರ್ದೇಶಿಸಿದರು. ಇದಕ್ಕೆ ಚದುರಂಗರು ಸಂಭಾಷಣೆ ಬರೆದಿದ್ದರು. ಅದರಲ್ಲಿ ರಾಜಕುಮಾರ್, ಕಲ್ಪನಾ ಪ್ರಮುಖ ಪಾತ್ರವಹಿಸಿದ್ದರು. ಇದು ರಾಜ್ಯ ಪ್ರಶಸ್ತಿ ಪಡೆಯಿತು. ಇದು ಹೊಸ ಅಲೆಯ ಚಿತ್ರಗಳ ಗುಂಪಿಗೆ ಸೇರಿ ಕಲಾತ್ಮಕ ಚಿತ್ರವೆನಿಸಿತು.

ಇದಲ್ಲದೆ, ಕುವೆಂಪು ಮತ್ತು ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ ಕುರಿತಾಗಿ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕೃತಿಗಳು

[ಬದಲಾಯಿಸಿ]

ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ :

  • ಕಾದಂಬರಿಗಳು : ಸರ್ವಮಂಗಳಾ(೧೯೫0), ಉಯ್ಯಾಲೆ(೧೯೬0), ವೈಶಾಖ (೧೯೮೧), ಹೆಜ್ಜಾಲ(೧೯೯೮)
  • ಕಥಾಸಂಕಲನಗಳು : ಸ್ವಪ್ನ ಸುಂದರಿ(೧೯೪೮), ಶವದ ಮನೆ(೧೯೫0), ಇಣುಕು ನೋಟ(೧೯೫0), ಬಂಗಾರದ ಹೆಜ್ಜೆ(೧೯೫೧), ಮೀನಿನ ಹೆಜ್ಜೆ(೧೯೫೮), ಕ್ವಾಟೆ(೧೯೯೨), ಮೃಗಯಾ(೧೯೯೮), ಬಣ್ಣದಬೊಂಬೆ ಇತ್ಯಾದಿ ಕೃತಿಗಳು.

`ನಾಲ್ಕುಮೊಳಭೂಮಿ' ಕನ್ನಡದ ಉತ್ತಮ ಕತೆಗಳಲ್ಲಿ ಒಂದು. ಕಥೆಯೊಳಗೊಂದು ಕಥಾ ತಂತ್ರದ ಬಳಕೆಯಿಂದ ಗ್ರಾಮ ಹಾಗೂ ನಗರ ಬದುಕಿನ ಅನ್ಯಾಯಗಳನ್ನು ಸಾಂಕೇತಿಸುವ ಈ ಕತೆ ಭೂವಿವಾದಕ್ಕೆ ಪರಿಹಾರ ಸೂಚಿಸುತ್ತದೆ.

  • ನಾಟಕಗಳು : ಕುಮಾರರಾಮ(೧೯೬೬), ಇಲಿಬೋನು(೧೯೭೨), ಬಿಂಬ(೧೯೯0) .
  • ಕವನ ಸಂಕಲನ: ಅಲೆಗಳು
  • ಚಲನಚಿತ್ರಗಳು: ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಪ್ರಶಸ್ತಿ ವಿಜೇತ ಚಿತ್ರ ‘ಸರ್ವಮಂಗಳಾ’ವನ್ನು ನಿರ್ಮಿಸಿದರು. ಮತ್ತು ‘ಉಯ್ಯಾಲೆ’ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದರು. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ಇವರ 'ವೈಶಾಖ' ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[] , ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ,(೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್[](೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು.[]

ಚದುರಂಗ ಅವರು ತಮ್ಮ ಎಂಭತ್ತೆರಡನೇ ವಯಸ್ಸಿನಲ್ಲಿ ೧೯೯೮, ಅಕ್ಟೋಬರ್ ೧೯ರಂದು ಮೈಸೂರಿನಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. http://www.sahitya-akademi.gov.in/old_version/awa10307.htm#kannada Archived 26 August 2009 ವೇಬ್ಯಾಕ್ ಮೆಷಿನ್ ನಲ್ಲಿ.
  2. "Personalities of Mysore". Archived from the original on 21 ಆಗಸ್ಟ್ 2008. {{cite web}}: Unknown parameter |deadurl= ignored (help)
  3. http://kannadasahithyaparishattu.in/?page_id=1710
  4. "Noted Kannada writer dead". The Tribune. 21 ಅಕ್ಟೋಬರ್ 1998. Retrieved 15 ಏಪ್ರಿಲ್ 2017.
"https://kn.wikipedia.org/w/index.php?title=ಚದುರಂಗ&oldid=1262119" ಇಂದ ಪಡೆಯಲ್ಪಟ್ಟಿದೆ