ವಿಷಯಕ್ಕೆ ಹೋಗು

ಕಾಲ್ಪನಿಕ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಾಮ್ ಥಂಬ್ ಮತ್ತು ದಿ ಜಾಯಂಟ್ ಚಿತ್ರ 1865

ಮಕ್ಕಳ ಕಥೆಗಳು (ಫೇರಿ ಟೇಲ್) ಫೇರಿ ಟೇಲ್ ಒಂದು ಇಂಗ್ಲಿಷ್ ಶಬಧ , ಇದು ಒಂದು ಪ್ರಕಾರದ ಸಣ್ಣ ನಿರೂಪಕ ಕಥೆಯಾಗಿದೆ. ಇದು ಪ್ರೆಂಚ್ ನುಡಿಗಟ್ಟು ಕಾಂಟೆ ಡಿ ಫಿ (conte de fee), ಜರ್ಮನ್ ಪದ ಮೆರ್ಕನ್ (Marchen), ಇಟಾಲಿಯನ್ ಫಿಯಾಬ (fiaba), ಪೋಲಿಷ್ ಬಾಸ್ನ್ (basn) ಅಥವಾ ಸ್ವೀಡಿಶ್ ಭಾಷೆಯ ಸಾಗಾ (saga) ಪದಗಳಿಗೆ ಸದೃಶವಾಗಿದೆ. ಹೀಗೆ ಸೂಚಿಸಿದ ಕೆಲವೇ ಕೆಲವು ಕಥೆಗಳು ಮಾತ್ರ ಸ್ಪಷ್ಟವಾಗಿ ಯಕ್ಷಯಕ್ಷಿಣಿಯ ಕಥೆಗಳ ಬಗ್ಗೆ ತಿಳಿಸುತ್ತವೆ. ಈ ಕಥೆಗಳನ್ನು ಉಳಿದ ಪ್ರಕಾರದ ದಂತ ಕಥೆಗಳು,ಸಾಂಪ್ರದಾಯಿಕ (ಇಂಥ ಕಥೆಗಳು ತಿಳಿಸಲಾದ ಅಂಶಗಳಲ್ಲಿ ಅಡಗಿರುವ ಸತ್ಯದಲ್ಲಿ ಸಾಮಾನ್ಯವಾಗಿ ನಂಬಿಕೆ ಒಳಗೊಂಡಿದೆ)[] ಕಥೆಗಳಿಂದ, ನೀತಿ ಪಾಠ ಹೇಳುವ ಕಥೆಗಳಿಂದ ಮತ್ತು ಪ್ರಾಣಿಗಳ ಕಾಲ್ಪನಿಕ ಕಥೆಗಳಿಂದ ವಿಭಿನ್ನ ಎಂದು ಹೇಳಬಹುದಾಗಿದೆ. ಈ ಕಾಲ್ಪನಿಕ ಕಥೆಗಳು ಸಾಮಾನ್ಯವಾಗಿ ಜನಪದಪಾತ್ರಗಳ ಲಕ್ಷಣಗಳಿಂದ ಕೂಡಿದೆ. ಯಕ್ಷಯಕ್ಷಿಣಿಯರು, ತುಂಟ ಪಿಶಾಚಿಗಳು, ಕಾಲ್ಪನಿಕ ಅತಿಮಾನುಷ ಜೀವಿಗಳು, ಗವಿಯಲ್ಲಿ ವಾಸಿಸುವ ಕುಳ್ಳ ಜೀವಿಗಳು,ದೈತ್ಯರು ಅಥವಾ ಕುಬ್ಜ ಪಿಶಾಚಿಗಳು ಮತ್ತು ಸಾಮಾನ್ಯವಾಗಿಜಾದೂ ಅಥವಾ ಮಾಟಗಾರಿಕೆಗಳು ಮುಂತಾದವು. ಈ ಪ್ರಕಾರದ ಕಥೆಗಳು ಹೆಚ್ಚಾಗಿ ಕಾಲ್ಪನಿಕ ಘಟನೆಗಳ ಸರಮಾಲೆಯನ್ನು ಒಳಗೊಂಡಿರುತ್ತವೆ.

ತಾಂತ್ರಿಕವಾಗಿ ಹೇಳುವುದಾದರೆ, ಫೇರಿ ಟೇಲ್ ಎಂಬ ಪದವನ್ನು "ಫೇರಿ ಟೇಲ್‌ನ ಮುಕ್ತಾಯ" (ಸುಖಾಂತ್ಯ)[] ಅಥವಾ "ಫೇರಿ ಟೇಲ್ ಭಾವಪ್ರಧಾನ" (ಎಲ್ಲ ಕಾಲ್ಪನಿಕ ಕಥೆಗಳು ಸುಖಾಂತ್ಯವನ್ನು ಹೊಂದುವುದಿಲ್ಲ). ಆಡು ಭಾಷೆಯಲ್ಲಿ ಹೇಳಬೇಕೆಂದರೆ, ಒಂದು "ಫೇರಿ ಟೇಲ್" ಅಥವಾ "ಕಾಲ್ಪನಿಕ ಕಥೆ "ಯ ಇನ್ನೊಂದು ಅರ್ಥವೆಂದರೆ, ವಾಸ್ತವಕ್ಕೆ ದೂರವಾದ ಕಥೆ ಅಥವಾ ನಂಬಲು ಅಸಾಧ್ಯವಾದ ಕಾಲ್ಪನಿಕತೆಯಿಂದ ಕೂಡಿರುವ ಕಥೆ.

ಕೆಲವು ಸಮಾಜಗಳಲ್ಲಿ ರಾಕ್ಷಸರು ಮತ್ತು ಮಾಟಗಾತಿಯರನ್ನು ನಿಜ ಎಂದು ನಂಬಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಈ ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆಗಳು ದಂತ ಕಥೆಗಳ ‌‌‌ಅಂದರೆ ಪ್ರಸಿದ್ಧ ಕಥೆಗಳಲ್ಲಿ ಸೇರಿಹೊಗಬಹುದು. ಇಲ್ಲಿ ಹೇಳಲಾದ ಕಥೆಯನ್ನು ಹೇಳುವವರು ಮತ್ತು ಕೇಳುವವರು ಇಬ್ಬರೂ ಐತಿಹಾಸಿಕವಾಗಿ ನಿಜವೆಂದು ಗ್ರಹಿಸುತ್ತಾರೆ. ದಂತ ಕಥೆಗಳು ಮತ್ತು ಮಹಾಕಾವ್ಯಗಳಲ್ಲಿ ಧರ್ಮ, ನಿಜವಾಗಿಯೂ ಇರುವಂತಹ ಸ್ಥಳಗಳು ಮತ್ತು ಘಟನೆಗಳ ಬಗ್ಗೆ ಉಲ್ಲೇಖವಿದ್ದು ಅವು ಸತ್ಯಕ್ಕೆ ಸಮೀಪವಿರುತ್ತವೆ. ಆದರೆ,ಕಾಲ್ಪನಿಕ ಕಥೆಗಳಲ್ಲಿ ಧರ್ಮ,ನಿಜವಾದ ಸ್ಥಳಗಳು, ಜನರು ಮತ್ತು ಘಟನೆಗಳ ಬಗ್ಗೆ ತೋರಿಕೆಯ ಉಲ್ಲೇಖವಿರುತ್ತದೆ. ಇಲ್ಲಿ ಎಲ್ಲ ಕಥೆಗಳು ವಾಸ್ತವ ಕಾಲಗಳಲ್ಲಿ ಪ್ರಾರಂಭವಾಗದೆಒಂದಾನೊಂದು ಕಾಲದಲ್ಲಿ ಪ್ರಾರಂಭವಾಗುತ್ತವೆ.[]

ಫೇರಿ ಟೆಲ್ ಅಥವಾ ಕಾಲ್ಪನಿಕ ಕಥೆಗಳು ಸಾಹಿತ್ಯಕ ರೂಪದಲ್ಲಿ ಮತ್ತು ಮೌಖಿಕ ರೂಪದಲ್ಲಿ ಇರುತ್ತವೆ. ಕೇವಲ ಸಾಹಿತ್ಯಕ ರೂಪದಲ್ಲಿ ಈ ಕಥೆಗಳು ದೊರಕಿರುವುದರಿಂದ, ಕಾಲ್ಪನಿಕ ಕಥೆಗಳ ಇತಿಹಾಸವನ್ನು ಕಂಡು ಹಿಡಿಯುವುದು ಬಹಳ ಕಠಿಣವಾದ ಕೆಲಸವಾಗಿದೆ. ಒಂದು ಪ್ರಕಾರ ಅಥವಾ ವರ್ಗವಾಗಿ ಗುರುತಿಸದೆ ಹೋದರೂ, ಸಾಹಿತ್ಯಕ ರೂಪದಲ್ಲಿ ಸಿಕ್ಕ ಕೃತಿಗಳ ಸಾಕ್ಷ್ಯಾಧಾರದಿಂದ ಕಾಲ್ಪನಿಕ ಕಥೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಸೂಚಿಸುತ್ತವೆ. ಈ ಕಾಲ್ಪನಿಕ ಕಥೆಗಳಿಗೆ "ಫೇರಿ ಟೆಲ್" ಎಂದು ಮೊದಲ ಬಾರಿಗೆ ಹೆಸರು ಕೊಟ್ಟವರು ಮ್ಯಾಡಮ್ ಡಿ'ಆಲ್ನಾಯ್ (Madame d'Aulnoy)ಎಂಬುವರು. ಇಂದು ಕಂಡು ಬರುವ ಅನೇಕ ಕಾಲ್ಪನಿಕ ಕಥೆಗಳು ನೂರಾರು ವರ್ಷ ಹಳೆಯ ಕಥೆಗಳಿಂದ ಹುಟ್ಟಿಕೊಂಡಿದ್ದು, ಆಯಾ ದೇಶಗಳ ಸಂಸ್ಕೃತಿಗಳಿಗೆ ತಕ್ಕಂತೆ ಬೇರೆ ಬೇರೆ ಪ್ರಕಾರದ ಕಥೆಗಳಾಗಿ ರೂಪ ಪಡೆದುಕೊಂಡಿವೆ.[] ಇಂದಿಗೂ ಸಹ ಕಾಲ್ಪನಿಕ ಕಥೆಗಳು ಮತ್ತು ಅವುಗಳಿಂದ ಸ್ಫೂರ್ತಿ ಪಡೆದ ಕೃತಿಗಳನ್ನು ಬರೆಯಲಾಗುತ್ತಿದೆ.

ಅತಿ ಹಳೆಯದಾದ ಕಾಲ್ಪನಿಕ ಕಥೆಗಳ ಉದ್ದೇಶ ಪ್ರೌಢವಯಸ್ಕರು ಮತ್ತು ಚಿಕ್ಕ ಮಕ್ಕಳು ಇಬ್ಬರನ್ನೂ ಗುರಿಯಾಗಿಟ್ಟುಕೊಳ್ಳುವುದು. ಆದರೆ ಪ್ರೀಸಿಯೂಸಸ್ ಪೂರ್ವದ ಬರವಣಿಗೆಗಳು ಮತ್ತು ಬ್ರದರ್ಸ್ ಗ್ರಿಮ್ ತಮ್ಮ ಕಥಾ ಸಂಗ್ರಹವನ್ನು ಚಿಲ್ಡ್ರೆನ್ಸ್ ಅಂಡ್ ಹೌಸ್ ಹೋಲ್ಡ್ ಟೇಲ್ಸ್ ಎಂದು ಹೆಸರಿಸಿದ ಕಾಲದಿಂದಲೂ ಮಕ್ಕಳ ಜತೆ ಸಂಬಂಧ ಹೊಂದಿದೆ ಹಾಗೂ ಮಕ್ಕಳ ಜತೆ ಕಾಲ್ಪನಿಕ ಕಥೆಗಳ ನಂಟು ಕಾಲಕ್ರಮೇಣ ಇನ್ನೂ ದೃಢವಾಗಿ ಬೆಳೆಯಿತು.

ಜನಪದ ಸಾಹಿತೈಗಳು ಕಾಲ್ಪನಿಕ ಕಥೆಗಳನ್ನ ಅನೇಕ ಪ್ರಕಾರವಾಗಿ ವಿಂಗಡಿಸಿದ್ದಾರೆ. ಈ ವಿಂಗಡಣೆಗಳಲ್ಲಿ ಅತ್ಯಂತ ಪ್ರಮುಖ ಎಂದರೆ, ಆರ್ನೆ-ಥಾಮ್ಪ್ಸನ್ ವರ್ಗೀಕರಣ ಪದ್ಧತಿ ಮತ್ತು ವ್ಲಾಡಿಮಿರ್ ಪ್ರಾಪ್ ರ ಶಬ್ದರೂಪ ರಚನಾಶಾಸ್ತ್ರದ ವಿಶ್ಲೇಷಣೆ. ಇತರ ಜನಪದ ಸಾಹಿತಿಗಳು ಈ ಕಾಲ್ಪನಿಕ ಕಥೆಗಳ ಪ್ರಾಮುಖ್ಯತೆ ಬಗ್ಗೆ ವ್ಯಾಖ್ಯಾನ ನೀಡಿದ್ದರೂ ಇಂಥ ಕಥೆಗಳ ಅರ್ಥ ಹೇಳಲು ಒಂದು ನಿರ್ದಿಷ್ಟವಾದ ಸಿದ್ಧಾಂತಗಳ ಅಥವಾ ವಿಧ್ವಂ‌‍‌‌‌‌ಶರ ತಂಡ ಸ್ಥಾಪಿಸಲಾಗಿಲ್ಲ.

ವ್ಯಾಖ್ಯಾನ

[ಬದಲಾಯಿಸಿ]

ಜನಪದ ಕಥೆಗಳ ಅತಿ ದೊಡ್ಡ ಕ್ಷೇತ್ರದಲ್ಲಿ ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆ ಒಂದು ವಿಶೇಷವಾದ ಪ್ರಕಾರವಾಗಿದೆ. ಒಂದು ಕೃತಿಯನ್ನು ಕಾಲ್ಪನಿಕ ಕಥೆ ಎಂದು ಸಾರುವ ಅನೇಕ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.[] ಯಕ್ಷಯಕ್ಷಿಣಿಯರು ಅಥವಾ ಮಾಂತ್ರಿಕ ಶಕ್ತಿಯ ಜೀವಿಗಳು ಕಾಲ್ಪನಿಕ ಕಥೆಗಳಲ್ಲಿ ಅವಶ್ಯವಾಗಿ ಬೇಕೇ ಬೇಕು ಎಂಬುದಂತೂ ಸ್ಪಷ್ಟವಾದ ವಿಚಾರ. ಈ ಫೇರಿ ಟೇಲ್ ಎಂಬ ಪದವು 1697 ರಲ್ಲಿ ಮ್ಯಾಡಂ ಡಿ'ಆಲ್ನಾಯ್ ಇವರ ಕಥೆಗಳ ಸಂಗ್ರಹದಲ್ಲಿ ಬಳಸಲಾದ ಫ್ರೆಂಚ್ ಪದ ಕಾಂಟೆ ಡಿ ಫೀಸ್ (conte de fees) ನ ಅನುವಾದದಿಂದಾಗಿ ಹುಟ್ಟಿಕೊಂಡಿತೆಂದು ಹೇಳಲಾಗಿದೆ.[] ರೂಢಿ ಮಾತಿನಲ್ಲಿ, ಫೇರಿ ಟೇಲ್‌ಗಳು ಮತ್ತು ಪ್ರಾಣಿಗಳ ಕಾಲ್ಪನಿಕ ಕಥೆಗಳು ಮತ್ತು ಇತರ ಜನಪದ ಕಥೆಗಳು ಎಂದರೆ ಒಂದೆ ಅರ್ಥವಾಗಿವೆ. ಆದರೆ ಯಕ್ಷಯಕ್ಷಿಣಿಯರು ಮತ್ತು/ಅಥವಾ ಅದೇ ರೀತಿಯ ಕಾಲ್ಪನಿಕ ಜೀವಿಗಳ (ತುಂಟ ಪಿಶಾಚಿಗಳು, ಕಾಲ್ಪನಿಕ ಅತಿಮಾನುಷ ಜೀವಿಗಳು, ಗವಿಯಲ್ಲಿ ವಾಸಿಸುವ ಕುಳ್ಳ ಜೀವಿಗಳು,ದೈತ್ಯರು)ಉಪಸ್ಥಿತಿಯನ್ನು ಭಿನ್ನ ಕಥೆಯಾಗಿ ಕಾಣಬೇಕೆಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ವ್ಲಾಡಿಮಿರ್ ಪ್ರಾಪ್ ತಮ್ಮ ಕೃತಿ, "ಮಾರ್ಫಲಜಿ ಆಫ್ ದಿ ಫೋಕ್ ಟೇಲ್ " ನಲ್ಲಿ ಅತ್ಯದ್ಭುತ ಅಂಶಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಅನೇಕ ಕಥೆಗಳ ಆಧಾರದ ಮೇಲೆ "ಕಾಲ್ಪನಿಕ ಕಥೆಗಳು" ಮತ್ತು "ಪ್ರಾಣಿಗಳ ಕಥೆಗಳು" ಇವುಗಳ ನಡುವೆ ಸಾಮಾನ್ಯವಾದ ವ್ಯತ್ಯಾಸವನ್ನು ಟೀಕಿಸಿದ್ದಾರೆ.[] ಅದಾಗ್ಯೂ, ತಮ್ಮ ವಿಶ್ಲೇಷಣೆಗಾಗಿ ಕೃತಿಗಳ ಆಯ್ಕೆ ಮಾಡಲು, ಪ್ರಾಪ್ ರು ಆರ್ನೆ-ಥಾಮ್ಪ್ಸನ್ ರ 300-749 ವರೆಗಿನ ವರ್ಗೀಕರಣ ಪದ್ಧತಿಯಲ್ಲಿ ಜನಪದ ಸಾಹಿತ್ಯವೆಂದು ವರ್ಗೀಕರಿಸಲಾದ ಎಲ್ಲ ರಶಿಯನ್ ಜನಪದ ಕಥೆಗಳನ್ನು ಬಳಸಿಕೊಂಡರು. ಇದರ ಮುಖ್ಯ ಉದ್ದೇಶ, ಕಥೆಗಳ ಸ್ಪಷ್ಟವಾದ ಸಮೂಹವನ್ನು ಪಡೆಯುವುದಾಗಿತ್ತು.[] ಪ್ರಾಪ್‌ರ ಸ್ವಯಂ ವಿಶ್ಲೇಷಣೆಯು ಕಥೆಗಳ ಕಥಾ ವಸ್ತುವಿನ ಮುಖ್ಶ ಅಂಶಗಳ ಆಧಾರದ ಮೇಲೆ ಕಾಲ್ಪನಿಕ ಕಥೆಗಳನ್ನು ಅಥವಾ ಫೇರಿ ಟೇಲ್‌ಗಳನ್ನು ಗುರ್ತಿಸಿದರು. ಆದರೆ, ಇವರ ವಿಶ್ಲೇಷಣೆಯು ಶೋಧನೆಯನ್ನು ಒಳಗೊಂಡಿರದ ಕಥೆಗಳ ಅಭ್ಯಾಸಕ್ಕೆ ಸುಲಭವಾಗಿ ಅವಕಾಶ ನೀಡುವುದಿಲ್ಲ ಮತ್ತು ಅದೇ ಪ್ರಕಾರದ ಕಥಾ ವಸ್ತುಗಳು ಕಾಲ್ಪನಿಕವಲ್ಲದ ಕಥೆಗಳಲ್ಲಿಯೂ ಕಂಡು ಬಂದಿವೆ ಎಂಬ ಕಾರಣಕ್ಕಾಗಿ ಟೀಕಿಸಲ್ಪಟ್ಟಿದೆ.[]

Were I asked, what is a fairytale? I should reply, Read Undine: that is a fairytale ... of all fairytales I know, I think Undine the most beautiful. (George MacDonald, The Fantastic Imagination)

ಸ್ಟಿತ್ ಥಾಮ್ಪ್ಸನ್ ರು ಹೇಳುವಂತೆ, ದೇವತೆಗಳು ಅಥವಾ ಗಂಧರ್ವ ಕನ್ಯೆಯರ ಪಾತ್ರಗಳಿಗಿಂತಲೂ ಫೇರಿ ಟೆಲ್ ಅಥವಾ ಕಾಲ್ಪನಿಕ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡು ಬಂದದ್ದೆಂದರೆ ಮಾತಾಡುವ ಪ್ರಾಣಿಗಳು ಮತ್ತು ಮಂತ್ರವಿದ್ಯೆಯ ಉಪಸ್ಥಿತಿ. .[೧೦] ಆದರೆ, ಕೇವಲ ಮಾತನಾಡುವ ಪ್ರಾಣಿಗಳು ಒಂದು ಕಥೆಯಲ್ಲಿ ಇರುವುದರಿಂದ ಆ ಕಥೆಯು ಕಾಲ್ಪನಿಕ ಕಥೆಯೆನಿಸುವುದಿಲ್ಲ. ವಿಶೇಷವಾಗಿ ಪ್ರಾಣಿಗಳ ಕಥೆ(ಫೇಬಲ್)ಗಳಲ್ಲಿರುವಂತೆ ಮಾನವ ಮುಖವನ್ನು ಸ್ಪಷ್ಟವಾಗಿ ಪ್ರಾಣಿಯ ಮುಖವಾಡದಿಂದ ಮುಚ್ಚಿದ್ದರೆ, ಕಾಲ್ಪನಿಕ ಕಥೆಯೆನಿಸುವುದಿಲ್ಲ.[೧೧]

ಜೆ.ಆರ್.ಆರ್. ಟೋಲ್ಕೀನ್ ತಮ್ಮ ಕೃತಿ "ಆನ್ ಫೇರಿ-ಸ್ಟೋರೀಸ್" ನಲ್ಲಿ ಹೇಳುವಂತೆ, "ಫೇರೀಸ್" ಎಂಬ ಪದವನ್ನು ಫೇರಿ ಟೇಲ್ ಕುರಿತು ಇರುವ ವ್ಯಾಖ್ಯಾನದಿಂದ ತೆಗೆದು ಹಾಕಬಹುದು. ಅವರ ಪ್ರಕಾರ, ಫೇರಿ ಟೇಲ್, ಯಕ್ಷಯಕ್ಷಿಣಿಯರು, ಕಾಲ್ಪನಿಕ ಕಥೆಯ ರಾಜಕುಮಾರರು, ರಾಜಕುಮಾರಿಯರು,ಕುಬ್ಜ ವ್ಯಕ್ತಿಗಳು,ಕಾಲ್ಪನಿಕ ಅತಿಮಾನುಷ ಜೀವಿಗಳು ಹಾಗೂ ಇತರೆ ಮಾಂತ್ರಿಕ ಜೀವಿಗಳಲ್ಲದೇ ಇನ್ನೂ ಇತರೆ ಅಚ್ಚರಿಗಳ ನಾಡು ಫೇರಿ ಯಲ್ಲಿರುವ ಪುರುಷರ ಸಾಹಸಗಳ ಕಥೆ ಎಂದು ವ್ಯಾಖ್ಯಾನಿಸಿದ್ದಾರೆ.[೧೨] ಆದರೆ, ಜೆ.ಆರ್.ಆರ್. ಟೋಲ್ಕೀನ್ ರ ಇದೇ ಪ್ರಬಂಧದಲ್ಲಿ ಕಾಲ್ಪನಿಕ ಕಥೆಗಳು ಅಥವಾ ಫೇರಿ ಟೇಲ್ ಗಳೆಂದು ಪರಿಗಣಿಸಲ್ಪಡುವ ಕಥೆಗಳು ಕಂಡು ಬರುವುದಿಲ್ಲ. ಉದಾಹರಣೆಗಾಗಿ, ಆಂಡ್ರ್ಯೂ ಲ್ಯಾಂಗ್ ತಮ್ಮ ಕೃತಿ "ದಿ ಲೈಲಾಕ್ ಫೇರಿ ಬುಕ್ " ನಲ್ಲಿ ಸೇರಿಸಿಕೊಂಡ ಕಥೆ "ದಿ ಮಂಕೀಸ್ ಹಾರ್ಟ್ " [೧೧]

ಸ್ಟಿವನ್ ಸ್ವಾನ್ ಜೋನ್ಸ್ ರ ಪ್ರಕಾರ, ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆಗಳಲ್ಲಿ ಬರುವ ಮಾಟ ಮಂತ್ರಗಳ ಸನ್ನಿವೇಶವು ಒಂದು ಪ್ರಮುಖ ಲಕ್ಷಣವೆಂದು ಗುರುತಿಸಿದ್ದು, ಇತರ ಜನಪದ ಕಥೆಗಳಿಗಿಂತ ಕಾಲ್ಪನಿಕ ಕಥೆಗಳು ವಿಭಿನ್ನವೆಂದು ತೋರಿಸಿ ಕೊಡುತ್ತದೆ.[೧೩] ಈ ಪ್ರಕಾರದ ಕಥೆಗಳ ಪ್ರಮುಖ ಲಕ್ಷಣ "ರೂಪಾಂತರ" ಅಥವಾ "ಬದಲಾವಣೆ" ಎಂದು ಗುರುತಿಸಿದವರು ಡೇವಿಡ್ಸನ್ ಮತ್ತು ಚೌಧರಿ.[೧೪] ಮಾನಸಿಕ ದೃಷ್ಟಿ ಕೋನದಿಂದ ನೋಡಿದರೆ, ಜೀನ್ ಚಿರಿಯಾಕ್ ಈ ಕಾಲ್ಪನಿಕ ಕಥೆಗಳಲ್ಲಿ ಅಸಾಮಾನ್ಯ ಸನ್ನಿವೇಶಗಳ ಅವಶ್ಯಕತೆಯ ಬಗ್ಗೆ ವಾದಿಸಿದರು.[೧೫]

ಕೆಲವು ಜನಪದ ಸಾಹಿತಿಗಳು ಜರ್ಮನ್ ಶಬ್ದವಾದ ಮೆರ್ಕನ್ (Marchen) ಅಥವಾ "ಅದ್ಭುತ ಕಥೆ" ಯನ್ನು ಈ ಪ್ರಕಾರದ ಕಥೆಗಳ ವ್ಯಾಖ್ಯಾನಕ್ಕೆ ಬಳಸಲು ಆದ್ಯತೆ ನೀಡುತ್ತಾರೆ. ಥಾಮ್ಸನ್ ತಮ್ಮ 1977 ರ ಆವೃತ್ತಿಯಾದ "ದಿ ಫೋಕ್ ಟೇಲ್ "ನಲ್ಲಿ ನೀಡಿದ ವ್ಯಾಖ್ಯಾನದಿಂದ ಈ ಅಭ್ಯಾಸವು ತೂಕ ಪಡೆದುಕೊಂಡಿತು:"ಒಂದು ನಿಗದಿತ ಅಳತೆಯನ್ನು ಹೊಂದಿದ ಪ್ರಮುಖ ಲಕ್ಷಣಗಳು ಅಥವಾ ಪ್ರಸಂಗಗಳ ಸಾಲನ್ನು ಒಳಗೊಂಡ ಒಂದು ಕಥೆ. ಈ ಕಥೆಗಳು ನಿರ್ದಿಷ್ಟ ಸ್ಥಳ ಅಥವಾ ನಿರ್ದಿಷ್ಟ ಜೀವಿಗಳು ಇಲ್ಲದ ಅವಾಸ್ತವ ಜಗತ್ತಿನಲ್ಲಿ ಸಾಗುತ್ತದೆ ಹಾಗೂ ಅದ್ಭುತಗಳಿಂದ ತುಂಬಿಕೊಂಡಿದೆ. ಇಂಥ ಕಾಲ್ಪನಿಕ ಭೂಮಿಯ ಮೇಲೆ ತುಂಬಾ ವಿನೀತಭಾವದ ನಾಯಕರು ವೈರಿಗಳನ್ನು ಕೊಂದುಹಾಕುತ್ತಾರೆ,ರಾಜಪ್ರಭುತ್ವಗಳನ್ನು ಆಳುತ್ತಾರೆ ಮತ್ತು ರಾಜಕುಮಾರಿಯರನ್ನು ಮದುವೆಯಾಗುತ್ತಾರೆ."[೧೬] ಕಾಲ್ಪನಿಕ ಕಥೆಗಳ ಪಾತ್ರಗಳು ಮತ್ತು ಪ್ರಮುಖ ಲಕ್ಷಣಗಳು ಸರಳ ಮತ್ತು ಹಳೆಯಕಾಲದ್ದಾಗಿರುತ್ತವೆ. ಅಂದರೆ, ಯುವರಾಣಿಯರು ಮತ್ತು ಮೂರ್ಖ ಹುಡುಗಿಯರು, ಕಿರಿಯವಯಸ್ಸಿನ ಪುತ್ರರು ಮತ್ತು ಧೀರ ಯುವರಾಜರು, ಕುರೂಪಿಗಳು, ದೈತ್ಯರು, ಡ್ರ್ಯಾಗನ್ ಗಳು ಮತ್ತು ಪಿಶಾಚಿಗಳು, ನೀಚ ಮಲತಾಯಂದಿರು ಮತ್ತು ನಕಲಿ ನಾಯಕರು, ಅದ್ಭುತ ಶಕ್ತಿಗಳಿರುವ ದೇವತೆಗಳು ಮತ್ತು ಇತರ ಮಂತ್ರವಾದಿ ಸಹಾಯಕರು, ಆಗಾಗ್ಗೆ ಮಾತನಾಡುವ ಕುದುರೆಗಳು ಅಥವಾ ನರಿಗಳು ಅಥವಾ ಪಕ್ಷಿಗಳು, ಗಾಜಿನ ಬೆಟ್ಟಗಳು, ಅಡೆತಡೆಗಳು ಮತ್ತು ಆ ಅಡೆತಡೆಗಳನ್ನು ಮೀರಿ ನಿಲ್ಲುವುದು.[೧೭]

ಕಲಾತ್ಮಕ ಮೌಲ್ಯಗಳ ದೃಷ್ಟಿಯಿಂದ ಇಟಾಲೊ ಕ್ಯಾಲ್ವಿನೋ ಇವರು ಹೇಳುವಂತೆ,ಆರ್ಥಿಕ ಸ್ಥಿತಿ ಮತ್ತು ಕಥೆಗಳ ಸಂಕ್ಷಿಪ್ತತೆಯ ಕಾರಣದಿಂದ ಫೇರಿ ಟೇಲ್ ಸಾಹಿತ್ಯದಲ್ಲಿ "ಕ್ಷಿಪ್ರತೆಗೆ" ಗೆ ಅತ್ಯುತ್ತಮ ಉದಾಹರಣೆಯಾಗಿವೆ.[೧೮]

ಈ ಪ್ರಕಾರದ ಕಥೆಗಳ ಇತಿಹಾಸ

[ಬದಲಾಯಿಸಿ]

ನಿಜವಾಗಿ ಹೇಳಬೇಕೆಂದರೆ, ಇಂದು ನಾವು ಫೇರಿ ಟೇಲ್ ಎಂದು ಕರೆಯುವ ಕಥೆಗಳು ಈ ಮುಂಚೆ ನಿರ್ಧಿಷ್ಟ ಪ್ರಕಾರಗಳಾಗಿ ಗುರುತಿಸಲಾಗಿರಲಿಲ್ಲ. ಜರ್ಮನ್ ಪದವಾದ "ಮೆರ್ಕನ್" (Marchen)ನನ್ನು ಅನುವಾದಿಸಿದಾಗ ಅದು ಅಕ್ಷರಶಃ "ಕಥೆ" ಎಂದು ಆಗುತ್ತದೆಯೇ ಹೊರತು ಯಾವುದೇ ನಿರ್ದಿಷ್ಟ ಕಥೆಯ ವಿಧವಲ್ಲ. ಮೊದಲ ಬಾರಿಗೆ ಈ ಪ್ರಕಾರವನ್ನು ಗುರ್ತಿಸಿದವರು ಪುನರುದಯಯುಗದ ಬರಹಗಾರರು. ತರುವಾಯ ಅನೇಕ ಲೇಖಕರ ಕೃತಿಗಳ ಮೂಲಕ ಸ್ಥಿರವಾಯಿತು.ಬ್ರದರ್ಸ್ ಗ್ರಿಮ್ ರ ಕೃತಿಗಳಲ್ಲಿ ವಿವಾದಾತೀತ ಪ್ರಕಾರವಾಗಿ ಹೊರಹೊಮ್ಮಿತು.[೧೯] ಈ ವಿಕಾಸದಲ್ಲಿ, ಆ ಹೆಸರು ಕಾಲ್ಪನಿಕ ಕಥೆಗಳಿಗೆ ಬರಲು ಸಾಧ್ಯವಾದದ್ದು ಪ್ರಿಸಿಯಸಸ್ ರು ಸಾಹಿತ್ಯಕ ಕಥೆಗಳನ್ನು ಬರೆಯಲು ಪ್ರಾರಂಭಿಸಿದಾಗ ಮತ್ತು ಮ್ಯಾಡಂ ಡಿ'ಆಲ್ನಾಯ್ ಇವರು ಕಾಂಟೆ ಡಿ ಫೀ ಅಥವಾ ಫೇರಿ ಟೇಲ್ (ಕಾಲ್ಪನಿಕ ಕಥೆ) ಎಂಬ ಶಬ್ದವನ್ನು ಕಂಡು ಹಿಡಿದರು.[೨೦]

"ಫ್ಯಾಂಟಸಿ" (ವಿಲಕ್ಷಣ ಕಲ್ಪನೆ) ಯ ಪ್ರಕಾರದ ಕುರಿತು ವ್ಯಾಖ್ಯಾನ ಬೆಳಕಿಗೆ ಬರುವ ಮೊದಲು, ಇಂದು ಯಾವ ಕೃತಿಗಳು ಫ್ಯಾಂಟಸಿ ಎಂದು ಕರೆಯಲ್ಪಡುತ್ತಿವೆಯೋ ಅವುಗಳನ್ನು ಇದಕ್ಕಿಂತ ಮುಂಚೆ ಫೇರಿ ಟೇಲ್ಸ್ ಎಂದು ಕರೆಯುತ್ತಿದ್ದರು. ಟೋಲ್ಕೀನ್ ರ ಕೃತಿ 'ದಿ ಹಾಬಿಟ್' , ಜಾರ್ಜ್ ಆರ್ವೆಲ್'ಎನಿಮಲ್ ಫಾರ್ಮ್' ಮತ್ತು ಎಲ್.ಫ್ರ್ಯಾಂಕ್ ಬಾಮ್'ದಿ ವಂಡರ್ಫುಲ್ ವಿಜಾರ್ಡ್ ಆಫ್ ಓಜ್' ಇವುಗಳಲ್ಲಿ ಸೇರಿವೆ. .[೨೧] ವಾಸ್ತವದಲ್ಲಿ, ಟೋಲ್ಕೀನ್‌ರ "ಆನ್ ಫೇರಿ-ಸ್ಟೋರೀಸ್" ನಲ್ಲಿ ಜಗತ್ತಿನ ನಿರ್ಮಾಣ (world-building) ದ ಕುರಿತು ಚರ್ಚೆಗಳು ಸೇರಿವೆ. ಅಲ್ಲದೆ, ಈ ಕೃತಿಯು ಫ್ಯಾಂಟಸಿಯ ವಿಮರ್ಶೆಯ ವಿಷಯದಲ್ಲಿ ಅತಿ ಮುಖ್ಯವಾದುದಾಗಿದೆ. ಫ್ಯಾಂಟಸಿ, ಅದರಲ್ಲಿಯೂ ಕಾಲ್ಪನಿಕ ಕಥೆಯ ಫ್ಯಾಂಟಸಿಉಪ ಪ್ರಕಾರವು, ಕಾಲ್ಪನಿಕ ಕಥೆಗಳ ಲಕ್ಷಣಗಳ ಮೇಲೆ ಪೂರ್ಣ ಅವಲಂಬಿತವಾಗಿದ್ದರೂ, ಇಂಥ ವರ್ಗಗಳು ಅಥವಾ ಪ್ರಕಾರಗಳು ಇಂದು ವಿಶಿಷ್ಟವೆಂದು ಪರಿಗಣಿಸಲ್ಪಡುತ್ತವೆ.[೨೨]

ಜನಪದ ಮತ್ತು ಸಾಹಿತ್ಯಕ

[ಬದಲಾಯಿಸಿ]
ಗುಸ್ಟಾವ್ ಡೋರೆ ಅವರ ಮದರ್ ಗೂಸ್ ಲಿಖಿತ(ಸಾಹಿತ್ಯಕ) ಕಾಲ್ಪನಿಕ ಕಥೆಗಳನ್ನು ಓದುತ್ತಿರುವ ಚಿತ್ರ

ಮೌಖಿಕವಾಗಿ ಹೇಳಲಾದ ಫೇರಿಟೇಲ್ ಜನಪದ ಕಥೆಯ ಉಪ ವರ್ಗವಾಗಿದೆ. ಅನೇಕ ಬರಹಗಾರರು ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆಯ ರೂಪದಲ್ಲಿ ಕಥೆಗಳನ್ನು ಬರೆದಿದ್ದಾರೆ. ಇವುಗಳನ್ನು ಸಾಹಿತ್ಯಕ ಕಾಲ್ಪನಿಕ ಕಥೆಗಳು (ಫೇರಿ ಟೇಲ್ಸ್) ಅಥವಾ ಕನ್ಸ್ಟ್‌ಮಾರ್ಚನ್ ಎಂದು ಕರೆಯುತ್ತಾರೆ.[] ಅತ್ಯಂತ ಹಳೆಯ ರೂಪಗಳಾದ ಪಂಚತಂತ್ರ ದಿಂದ ಹಿಡಿದು ಪೆಂಟಮೆರೋನ್ ವರೆಗೆ ಕಂಡು ಬರುವುದೇನೆಂದರೆ, ಮೌಖಿಕ ರೂಪದ ಕಥೆಗಳನ್ನು ರೂಪಾಂತರ ಮಾಡಿ ಪುನಃ ಬಳಸಿದ್ದನ್ನು ತೋರಿಸುತ್ತದೆ.[೨೩] ಮೌಖಿಕ ಕಥೆಗಳ ಲಕ್ಷಣಗಳನ್ನು ಉಳಿಸುವ ಪ್ರಯತ್ನ ಮಾಡಿದವರಲ್ಲಿ ಬ್ರದರ್ಸ್ ಗ್ರಿಮ್ ಮೊದಲಿಗರು. ಆದರೂ, ಗ್ರಿಮ್ ಹೆಸರಿನಲ್ಲಿ ಮುದ್ರಿಸಲಾದ ಕಥೆಗಳನ್ನು ಲಿಖಿತ ರೂಪದ ಕಥೆಗಳಿಗೆ ಹೊಂದಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಯಿತು.[೨೪]

ಸಾಹಿತ್ಯಕ ಕಾಲ್ಪನಿಕ ಕಥೆಗಳು ಮತ್ತು ಮೌಖಿಕ ರೂಪದ ಕಾಲ್ಪನಿಕ ಕಥೆಗಳು ಕಥಾ ವಸ್ತು, ಲಕ್ಷಣಗಳು ಮತ್ತು ಕಥಾ ಅಂಶಗಳನ್ನು ಪರಸ್ಪರ ಮತ್ತು ಬೇರೆ ದೇಶದ ಕಥೆಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದವು.[೨೫] 18 ನೇ ಶತಮಾನದ ಅನೇಕ ಜನಪದ ಸಾಹಿತಿಗಳು ಶುದ್ಧವಾದ,ಸಾಹಿತ್ಯಕ ಆವೃತ್ತಿಗಳಿಂದ ಮಾಲಿನ್ಯವಾಗದ ಜನಪದ ಕಥೆಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು. ಸಾಹಿತ್ಯಕ ರೂಪದ ಕಾಲ್ಪನಿಕ ಕಥೆಗಳಿಗಿಂತ ಮೊದಲೇ ಮೌಖಿಕ ಕಥೆಗಳು ಸಾವಿರಾರು ವರ್ಷಗಳು ಅಸ್ತಿತ್ವ ಹೊಂದಿದ ಸಂಭವವಿದ್ದು, ಶುದ್ಧವಾದ ಜನಪದ ಕಥೆಗಳು ಎಲ್ಲಿಯೂ ಇಲ್ಲ. ಪ್ರತಿ ಬರವಣಿಗೆ ರೂಪದ ಕಾಲ್ಪನಿಕ ಕಥೆಯು ಜನಪದ ಸಂಪ್ರದಾಯಗಳಿಂದ ಅವಲಂಬಿತವಾಗಿದ್ದು,ಅದರ ವಿಕೃತರೂಪವಾಗಿದೆ.[೨೬] ಇದರಿಂದಾಗಿ ಒಂದು ಕಾಲ್ಪನಿಕ ಕಥೆಯ ಬದಲಾದ ರೂಪಗಳನ್ನು ಕಂಡು ಹಿಡಿಯುವುದು ಅಸಾಧ್ಯವಾಗಿ ಬಿಡುತ್ತದೆ. ಮೌಖಿಕ ಕಥೆ ಹೇಳುವವರು ಕಥೆಗಳ ಸಂಗ್ರಹವನ್ನು ಮತ್ತು ನಿರೂಪಣೆಗಳನ್ನು ಹೆಚ್ಚಿಸಿಕೊಳ್ಳಲು ಸಾಹಿತ್ಯಕ ಕಾಲ್ಪನಿಕ ಕಥೆಗಳನ್ನು ಓದುತ್ತಿದ್ದರೆಂದು ಹೇಳಲಾಗುತ್ತದೆ.[೨೭]

ಇತಿಹಾಸ

[ಬದಲಾಯಿಸಿ]
ರಶಿಯಾದ ಕಾಲ್ಪನಿಕ ಕಥೆಯ ಚಿತ್ರ ವಾಸಿಲಿಸಾ ದಿ ಬ್ಯೂಟಿಫುಲ್ ಕುರಿತು ಇವಾನ್ ಬಿಲಿಬಿನ್ ವಿವರಣಾತ್ಮಕ ಚಿತ್ರ

ಬರವಣಿಗೆ ರೂಪದ ಕಥೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಮೌಖಿಕ ಅಥವಾ ಬಾಯಿಯಿಂದ ಹೇಳಲಾಗುವ ಕಥೆಗಳ ಪರಂಪರೆ ಜಾರಿಯಲ್ಲಿತ್ತು. ಅಂದು, ಕಥೆಗಳನ್ನು ಬರೆಯುವುದಕ್ಕಿಂತ ಬಾಯಿಯಿಂದ ಹೇಳಲಾಗುತ್ತಿತ್ತು ಅಥವಾ ನಟಿಸಿ ತೋರಿಸಲಾಗುತ್ತಿತ್ತು. ಇದೆ ರೀತಿಯಾಗಿ ಕಥೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹಸ್ತಾಂತರವಾದವು. ಈ ಕಾರಣದಿಂದಾಗಿ ಅವುಗಳು ಬೆಳೆದು ಬಂದ ಹಿನ್ನೆಲೆ ಅಷ್ಟೊಂದು ಸ್ಪಷ್ಟವಾಗಿಲ್ಲ.[೨೮] ಅತ್ಯಂತ ಹಳೆಯ ಬರವಣಿಗೆಯ ರೂಪದ ಕಾಲ್ಪನಿಕ ಕಥೆಗಳು ಹುಟ್ಟಿದ್ದು ಪ್ರಾಚೀನ ಈಜಿಪ್ಟ್ ನಲ್ಲಿ,c. 1300 ಕ್ರಿ.ಪೂ. ದಲ್ಲಿ (ಉದಾ: ದಿ ಟೇಲ್ ಆಫ್ ಟು ಬ್ರದರ್ಸ್),[೨೯] ಅಲ್ಲದೆ ಕಾಲ್ಪನಿಕ ಕಥೆಗಳು ಆಗಾಗ ಬರವಣಿಗೆ ರೂಪದ ಸಾಹಿತ್ಯದಲ್ಲಿ ಸಾಕ್ಷರ ಸಂಸ್ಕೃತಿಗಳ ಉದ್ದಕ್ಕೂ ಕಾಣಿಸಿಕೊಳ್ಳುತ್ತವೆ, ಇದಕ್ಕೆ ಉದಾಹರಣೆ, ದಿ ಗೋಲ್ಡನ್ ಆಸ್ . ಈ ಕೃತಿಯು ಕ್ಯುಪಿಡ್ ಮತ್ತು ಸೈಕೆ ಯನ್ನು ಒಳಗೊಂಡಿದೆ (ರೋಮನ್, ಕ್ರಿ.ಶ 100-200 )[೩೦] ಅಥವಾ ಪಂಚತಂತ್ರ (ಭಾರತ, 3 ನೇ ಶತಮಾನ BCE.[೩೦] ಆದರೆ, ಇವುಗಳು ಎಷ್ಟರ ಮಟ್ಟಿಗೆ ತಮ್ಮ ಸಮಕಾಲೀನ ಜನಪದ ಕಥೆಗಳನ್ನು ಹೇಳುತ್ತವೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲದ ವಿಷಯ. ಶೈಲಿಶಾಸ್ತ್ರದ ಆಧಾರದ ಮೇಲೆ ತಿಳಿದು ಬರುವ ವಿಷಯವೆಂದರೆ, ಈ ಕಥೆಗಳು ಮತ್ತು ನಂತರದ ಅನೇಕ ಕಥಾ ಸಂಕಲನಗಳು ಜನಪದ ಕಥೆಗಳನ್ನು ಬರವಣಿಗೆ ರೂಪದಲ್ಲಿ ರೂಪಾಂತರಿಸಿದವು.[೨೩] ಅವುಗಳು ನಮಗೆ ತಿಳಿಸಿಕೊಡುವ ಸಂಗತಿಯೆಂದರೆ, ಮಾಂತ್ರಿಕ ಕಥೆಗಳ ಸಂಗ್ರಹವಾದ ಅರೇಬಿಯನ್ ನೈಟ್ಸ್ (ಸಂಗ್ರಹಿತ circa ಕ್ರಿ.ಶ. 1500)[೩೦] ಗಿಂತಲೂ ಕಾಲ್ಪನಿಕ ಕಥೆಗಳು ಹಳೆಯ ಬೇರುಗಳನ್ನು ಹೊಂದಿವೆ. ಅವುಗಳಿಗೆ ಉದಾಹರಣೆಗಳೆಂದರೆ, ವಿಕ್ರಮ ಮತ್ತು ಬೇತಾಳ ಮತ್ತು ಬೆಲ್ ಅಂಡ್ ದಿ ಡ್ರ್ಯಾಗನ್ . ಈ ಪ್ರಕಾರದ ಕಥಾ ಸಂಕಲನಗಳು ಮತ್ತು ವೈಯಕ್ತಿಕ ಕಥೆಗಳಲ್ಲದೆ, ಚೀನಾಲಿಯೇಜಿ ಮತ್ತು ಜುವಾಂಗ್‌ಜಿ ಎಂಬ ತಾವೋವಾದಿ ತತ್ವಜ್ಞಾನಿಗಳು ತಮ್ಮ ಆಧ್ಯಾತ್ಮಿಕ ಕೃತಿಗಳಲ್ಲಿ ಕಾಲ್ಪನಿಕ ಕಥೆಗಳನ್ನು ಹೇಳಿದ್ದಾರೆ.[೩೧] ವಿಶಾಲ ಅರ್ಥದಲ್ಲಿ ಹೇಳಬೇಕೆಂದರೆ, ಪಾಶ್ಚಿಮಾತ್ಯ ಕಾಲ್ಪನಿಕ ಕಥೆಗಳಲ್ಲಿ ಮೊದಲ ಕಥೆಗಳೆಂದರೆ, ಪ್ರಾಚೀನ ಗ್ರೀಸ್ ದೇಶದ ಈಸೋಪ (ಕ್ರಿ.ಪೂ 6 ನೇ ಶತಮಾನ)ನ ಕಥೆಗಳು.

ಜೆಫ್ರಿ ಚಾಸರ್ದಿ ಕ್ಯಾಂಟರ್ಬರಿ ಟೇಲ್ಸ್ , ಎಡ್ಮಂಡ್ ಸ್ಪೆನ್ಸರ್ದಿ ಫೇರಿ ಕ್ವೀನ್ ಮತ್ತು ವಿಲಿಯಂ ಷೇಕ್ಸಪಿಯರ್ ನ ನಾಟಕಗಳಲ್ಲಿ ಕಾಲ್ಪನಿಕ ಕಥೆಗಳ ಪರೋಕ್ಷ ಉಲ್ಲೇಖಗಳು ವಿಪುಲವಾಗಿ ಕಂಡುಬಂದಿವೆ.[೩೨] ಕಿಂಗ್ ಲಿಯರ್ ನಾಟಕವನ್ನು ಕಾಲ್ಪನಿಕ ಕಥೆಗಳಾದ ವಾಟರ್ ಅಂಡ್ ಸಾಲ್ಟ್ ಮತ್ತು ಕ್ಯಾಪ್ ಓ'ರಶಸ್ ಗಳ ಸಾಹಿತ್ಯಕ ರೂಪವೆಂದು ಪರಿಗಣಿಸಬಹುದು.[೩೩] ಈ ಕಥೆಗಳು ಮರು ಕಾಣಿಸಿಕೊಂಡಿದ್ದು 16 ಮತ್ತು 17 ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಸಾಹಿತ್ಯದಲ್ಲಿ, ಮುಖ್ಯವಾಗಿ ಜಿಯೋವಾನ್ನಿ ಫ್ರಾನ್ಸಿಸ್ಕೋ ಸ್ಟ್ಪಪಾರೋಲಾ (ಇಟಲಿ, 1550 ಮತ್ತು 1553)[೩೦] ಬರೆದ ದಿ ಫೆಸೆಶಸ್ ನೈಟ್ಸ್ ಆಫ್ ಸ್ಟ್ರಪಾರೋಲಾ ಎಂಬ ಕೃತಿಯಲ್ಲಿ. ಈ ಕೃತಿಯು ಅದರಲ್ಲಿನ ಅನೇಕ ಉಪಕಥೆಗಳಲ್ಲಿ ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ. ಇನ್ನೊಬ್ಬ ಗಿಯಾಮ್‌ಬಾಟಿಸ್ಟ ಬಸಿಲೆ (ನೇಪಲ್ಸ್ ,1634-6)[೩೦]ನಿಯಪೋಲಿಟನ್ ಕಥೆಗಳೂ ಸಹ ಕಾಲ್ಪನಿಕ ಕಥೆಗಳೇ ಆಗಿವೆ.[೩೪] ಕಾರ್ಲೋ ಗೋಜಿ ತಮ್ಮ ಕಾಮಿಡಿಯಾ ಡೆಲ್'ಆರ್ಟ್ ದೃಶ್ಯಗಳಲ್ಲಿ[೩೫] ಅನೇಕ ಕಾಲ್ಪನಿಕ ಕಥೆಗಳ ಲಕ್ಷಣಗಳನ್ನು ಬಳಸಿದ್ದಾರೆ. ಅವುಗಳಲ್ಲಿ ಒಂದು ದಿ ಲವ್ ಫಾರ್ ಥ್ರೀ ಆರೆಂಜಸ್ (1761) ಆಧರಿತವಾಗಿದೆ.[೩೬] ಅದೇ ಸಮಯದಲ್ಲಿ, ಚೀನಾದಲ್ಲಿ ಪು ಸಾಂಗ್ಲಿಂಗ್ ಎಂಬುವರು ತಮ್ಮ ಕಥಾ ಸಂಗ್ರಹಗಳಲ್ಲಿ ಅನೇಕ ಕಾಲ್ಪನಿಕ ಕಥೆಗಳನ್ನು ಸೇರಿಸಿಕೊಂಡರು. ಆ ಕಥಾ ಸಂಗ್ರಹದ ಹೆಸರು ಸ್ಟ್ರೇಂಜ್ ಸ್ಟೋರೀಸ್ ಫ್ರಾಂ ಎ ಚೈನೀಸ್ ಸ್ಟುಡಿಯೋ (ಮರಣಾನಂತರ ಪ್ರಕಟಗೊಂಡಿತು, 1766).[೩೧] ಫ್ರಾನ್ಸ್ ( 1690-1710)[೩೦]ಮೇಲ್ವರ್ಗದ ಪ್ರಿಶಸಸ್ ಗಳಲ್ಲಿ ಕಾಲ್ಪನಿಕ ಕಥೆಗಳು ತುಂಬಾ ಜನಪ್ರಿಯವಾದವು ಮತ್ತು ಆ ಕಾಲದಲ್ಲಿ ಹೇಳಲಾದ ಕಥೆಗಳಲ್ಲಿ ಲಾ ಫೋಂಟೇನ್ ಮತ್ತು ಕಾಂಟೆಸ್ ಆಫ್ ಚಾರ್ಲ್ಸ್ ಪೆರಾಟ್ (1697)ಗಳು. ಈ ಕಥೆಗಳೇ ಮುಂದೆ ಸ್ಲೀಪಿಂಗ್ ಬ್ಯೂಟಿ ಮತ್ತು ಸಿಂಡರೆಲ್ಲಾ ಗಳಂತಹ ಕಥಾ ರೂಪಗಳಿಗೆ ಅಡಿಪಾಯ ಹಾಕಿದವು.[೩೭] ಸ್ತ್ರಾಪರೋಲಾ, ಬೆಸೈಲ್ ಮತ್ತು ಪೆರಾಲ್ಟ್ ಇವರೆಲ್ಲರ ಕಥಾ ಸಂಗ್ರಹಗಳಲ್ಲಿ ಅತ್ಯಂತ ಹಳೆಯ ಮತ್ತು ಚಿರಪರಿಚಿತವಾದ ಕಾಲ್ಪನಿಕ ಕಥೆಗಳ ಪ್ರಕಾರಗಳಿದ್ದರೂ, ಶೈಲಿಯ ದೃಷ್ಟಿಕೋನದಿಂದ, ಸಾಹಿತ್ಯಕ ಪ್ರಭಾವ ಬೀರಲು ಕಥೆಗಳನ್ನು ಮತ್ತೊಮ್ಮೆ ಬರೆದರು.[೩೮]

ಕಥಾ ವಸ್ತು ಮತ್ತು ಪಾತ್ರಗಳನ್ನು ಅಷ್ಟೇ ಅಲ್ಲದೆ ಕಥೆ ಹೇಳುವ ಶೈಲಿಯನ್ನೂ ಸಹ ಉಳಿಸಿ ಬೆಳೆಸುವ ಪ್ರಯತ್ನ ಮಾಡಿದವರೆಂದರೆ ಬ್ರದರ್ಸ್ ಗ್ರಿಮ್. ಅವರು ಜರ್ಮನ್ ಕಾಲ್ಪನಿಕ ಕಥೆಗಳನ್ನು ಸಂಗ್ರಹಿಸುವುದರ ಮೂಲಕ ಈ ಕಾರ್ಯ ಸಾಧನೆ ಮಾಡಿದರು. ಇಲ್ಲಿ ವ್ಯಂಗ್ಯವೇನೆಂದರೆ, ಬ್ರದರ್ಸ್ ಗ್ರಿಮ್ ರ ಮೊದಲ ಆವೃತ್ತಿಯು (1812 ಮತ್ತು 1815)[೩೦] ಅನೇಕ ಜನಪದ ಸಾಹಿತಿಗಳಿಗೆ ಅಮೂಲ್ಯವಾಗಿ ಉಳಿದರೂ, ಹೆಚ್ಚು ಸ್ವೀಕಾರಾರ್ಹ ಎನಿಸಲು ನಂತರದ ಆವೃತ್ತಿಗಳಲ್ಲಿ ಕಥೆಗಳನ್ನು ಮತ್ತೊಮ್ಮೆ ಬರೆದರು. ಇದರಿಂದಾಗಿ ಬ್ರದರ್ಸ್ ಗ್ರಿಮ್‌ರ ಪುಸ್ತಕಗಳು ಉತ್ತಮ ಮಾರಾಟ ಮತ್ತು ಜನಪ್ರಿಯತೆಗೆ ಖಾತರಿಯಾದವು.[೩೯]

ಈ ಸಾಹಿತ್ಯಕ ರೂಪಗಳು ಜನಪದ ಕಥೆಗಳಿಂದ ಹುಟ್ಟಿ, ಜನಪದ ಕಥೆಗಳ ಮೇಲೆಯೇ ತಿರುಗಿ ಪ್ರಭಾವ ಬೀರಿದವು. ಬ್ರದರ್ಸ್ ಗ್ರಿಮ್ ಜರ್ಮನ್ನರು ಮೌಖಿಕವಾಗಿ ಹೇಳಿದ ಕಥೆಗಳನ್ನು ಒಳಗೊಂಡಂತೆ ಅನೇಕ ಕಥೆಗಳನ್ನು ತಮ್ಮ ಕಥಾ ಸಂಗ್ರಹದಲ್ಲಿ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ಕಥೆಗಳು ಪೆರಾಲ್ಟ್‌ ಜನ್ಯ ಕಥೆಗಳಾಗಿದ್ದವು. ಆದ್ದರಿಂದ, ಅವು ಫ್ರೆಂಚ್ ಕಥೆಗಳೇ ಹೊರತು ಜರ್ಮನ್ ಕಥೆಗಳಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ರೀತಿಯಾಗಿ ಬ್ಲೂ ಬಿಯರ್ಡ್ ಎಂಬ ಮೌಖಿಕ ಕಥೆಯ ರೂಪವನ್ನು ತಿರಸ್ಕರಿಸಲಾಯಿತು. ಆದರೆ, ಬ್ರಿಯರ್ ರೋಜ್ ಎಂಬ ಕಥೆ ಮಾತ್ರ ಪೆರಾಲ್ಟ್ ನ ಸ್ಲೀಪಿಂಗ್ ಬ್ಯೂಟಿ ಗೆ ಸಂಬಂಧಿಸಿದ್ದರೂ ಸೇರಿಸಲಾಯಿತು. ನಿದ್ರಿಸುವ ಯುವರಾಣಿ (ಸ್ಲೀಪಿಂಗ್ ಬ್ಯೂಟಿ) ಯ ಪಾತ್ರವು ಮೂಲತಃ ಜರ್ಮನಿಯ ಜನಪದ ಸಾಹಿತ್ಯದಿಂದ ಹುಟ್ಟಿದ್ದು ಎಂದು ಬ್ರಿನ್ ಹಿಲ್ಡ್ನ ವ್ಯಕ್ತಿತ್ವವು ಸಾಬೀತು ಪಡಿಸುತ್ತೆಂದು ಜೇಕಬ್ ಗ್ರಿಮ್ ತಮ್ಮ ಸಹೋದರನಿಗೆ ಮನದಟ್ಟು ಮಾಡಿದ ಕಾರಣ ಅದನ್ನು ಸೇರಿಸಲಾಯಿತು.[೪೦]

ಸ್ಲೀಪಿಂಗ್ ಬ್ಯೂಟಿ ಕಥೆಯನ್ನು ಇಟ್ಟುಕೊಳ್ಳುವುದೋ ಬೇಡವೋ ಎಂಬ ಈ ವಿಚಾರದಿಂದಾಗಿ 19 ನೇ ಶತಮಾನದ ಜನಪದ ಸಾಹಿತಿಗಳು ಸಾಮಾನ್ಯವಾಗಿ ನಂಬಿದ್ದ ವಿಷಯವೊಂದು ಬೆಳಕಿಗೆ ಬಂದಿತು.: ಸಾಹಿತ್ಯಕ ರೂಪಗಳಿಂದ ಕಲುಷಿತವಾಗಿ, ಜನರು ಅಪ್ರಾಮಾಣಿಕ ಕಥೆಗಳನ್ನು ಹೇಳುವುದಕ್ಕೆ ದಾರಿ ಕಲ್ಪಿಸಿದ್ದನ್ನು ಹೊರತುಪಡಿಸಿ, ಇತಿಹಾಸ ಪೂರ್ವದಿಂದಲೂ ಜನಪದ ಪರಂಪರೆಯು ಕಾಲ್ಪನಿಕ ಕಥೆಗಳನ್ನು ಅವುಗಳ ನಿಜವಾದ ರೂಪದಲ್ಲಿಯೇ (ಮೌಖಿಕ)ಉಳಿಸಿಕೊಂಡು ಬಂದಿತ್ತು.[೪೧] ಗ್ರಾಮಗಳ ನಿರಕ್ಷರಿ, ಅವಿದ್ಯಾವಂತ ರೈತರನ್ನು ಸೂಕ್ತವಾಗಿ ಪ್ರತ್ಯೇಕಗೊಳಿಸಿದರೆ ಅವರೇಜನಸಮೂಹ ವಾಗಿದ್ದು, ಅವರು ಹೇಳುವ ಕಥೆಗಳೇ ಶುದ್ಧ ಜನಪದ ಕಥೆಗಳಾಗಿದ್ದವು.[೪೨] ಕೆಲವು ಸಂದರ್ಭಗಳಲ್ಲಿ ಇವರು ಕಾಲ್ಪನಿಕ ಕಥೆಗಳನ್ನು ಪಳೆಯುಳಿಕೆಯಂತೆ ಅಥವಾ ಅಳಿದುಳಿದ ಅವಶೇಷದ ರೂಪವೆಂದು ಮತ್ತು ಒಂದು ಕಾಲದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕಥೆಯ ಉಳಿದ ಭಾಗಗಳೆಂದು ಪರಿಗಣಿಸಿದರು.[೪೩] ಆದರೆ, ನಂತರದ ಸಂಶೋಧನೆಗಳ ಸಹಾಯದಿಂದ ತಿಳಿದು ಬಂದ ವಿಷಯವೆಂದರೆ, ಕಾಲ್ಪನಿಕ ಕಥೆಗಳಿಗೆ ಸ್ಥಿರ ರೂಪ ಎನ್ನುವುದು ಇಲ್ಲ.ಸಾಹಿತ್ಯಕ ಪ್ರಭಾವವನ್ನು ಲೆಕ್ಕಿಸದೇ, ಕಥೆ ಹೇಳುವವರು ತಮ್ಮ ಉದ್ದೇಶಗಳಿಗೆ ತಕ್ಕಂತೆ ಸತತವಾಗಿ ಈ ಕಥೆಗಳನ್ನು ಬದಲಾಯಿಸುತ್ತ ಬಂದಿದ್ದಾರೆ.[೪೪]

ಬ್ರದರ್ಸ್ ಗ್ರಿಮ್ ಕೆಲಸಗಳಿಂದ ಅನೇಕ ಸಂಗ್ರಹಕಾರರು ಪ್ರಭಾವಕ್ಕೊಳಗಾದರು. ಇಬ್ಬರೂ ಅವರಿಗೆ ಕಥೆಗಳನ್ನು ಸಂಗ್ರಹಿಸುವಂತೆ ಪ್ರೇರಣೆ ನೀಡಿದರು.ರಮ್ಯ ರಾಷ್ಟ್ರೀಯವಾದದ ಮನೋಭಾವದೊಂದಿಗೆ,ವಿಭಿನ್ನ ಸಂಸ್ಕೃತಿಯ ಪ್ರಭಾವವನ್ನು ಉಪೇಕ್ಷೆ ಮಾಡಿ,ದೇಶದ ಕಾಲ್ಪನಿಕ ಕಥೆಗಳು ನಿರ್ದಿಷ್ಟವಾಗಿ ಆ ದೇಶವನ್ನು ಪ್ರತಿನಿಧಿಸುತ್ತವೆ ಎಂದು ಅದೇ ರೀತಿ ನಂಬಲು ದಾರಿ ತೋರಿದರು. ಈ ರೀತಿಯಾಗಿ ಪ್ರಭಾವಕ್ಕೊಳಗಾದವರಲ್ಲಿ ರಷಿಯಾಅಲೆಕ್ಸಾಂಡರ್ ಅಫಾನಸ್‌ವೆವ್ (1866 ಪ್ರಥಮ ಬಾರಿಗೆ ಪುಸ್ತಕ ಪ್ರಕಟಗೊಂಡಿತು),[೩೦]ನಾರ್ವೆ ದೇಶದ ಪೀಟರ್ ಕ್ರಿಶ್ಚನ್ ಆಸ್ಬ್‌ಜಾನ್‌ಸನ್ಮತ್ತು ಜೋರ್ಗನ್ ಮೋಯಿ (1845 ರಲ್ಲಿ ಪ್ರಥಮ ಬಾರಿಗೆ ಪುಸ್ತಕ ಪ್ರಕಟಗೊಂಡಿತು),[೩೦] ರೋಮಾನಿಯಾದ ಪೀಟರ್ ಇಸ್ಪಿರೆಸ್ಕು(1874 ರಲ್ಲಿ ಪ್ರಥಮ ಬಾರಿಗೆ ಪುಸ್ತಕ ಪ್ರಕಟಗೊಂಡಿತು), ಇಂಗ್ಲಿಷ್ಜೋಸೆಫ್ ಜೆಕಬ್ಸ್ (1890 ರಲ್ಲಿ ಪ್ರಥಮ ಬಾರಿಗೆ ಪುಸ್ತಕ ಪ್ರಕಟಗೊಂಡಿತು)[೩೦] ಮತ್ತು ಜೆರಮಾಯಾ ಕರ್ಟಿನ್, ಇವರು ಅಮೆರಿಕಾದವರಾಗಿದ್ದು, ಐರ್ಲೆಂಡ್‌ನ ಕಥೆಗಳನ್ನು ಸಂಗ್ರಹಿಸಿದರು (1890 ರಲ್ಲಿ ಪ್ರಥಮ ಬಾರಿಗೆ ಪುಸ್ತಕ ಪ್ರಕಟ).[೨೬] ಜನಾಂಗ ನಿರೂಪಕರು ಜಗತ್ತಿನಾದ್ಯಂತ ದೊರೆತ ಕಾಲ್ಪನಿಕ ಕಥೆಗಳನ್ನು ಸಂಗ್ರಹಿಸಿದರು. ಆಫ್ರಿಕಾ, ಅಮೇರಿಕ ಮತ್ತು ಆಸ್ಟ್ರೇಲಿಯಗಳಲ್ಲಿ ಇದೇ ರೀತಿಯ ಕಥೆಗಳನ್ನು ಪತ್ತೆಹಚ್ಚಿದರು.ಆಂಡ್ರಿವ್ ಲ್ಯಾಂಗ್ ತಮ್ಮ "ಬಣ್ಣದ" ಕಾಲ್ಪನಿಕ ಕಥಾ ಸರಣಿಯ ಪುಸ್ತಕಗಳನ್ನು ತುಂಬಲು,ಯುರೋಪ್ ಮತ್ತು ಏಷ್ಯಾದ ಲಿಖಿತ ಕಥೆಗಳಿಂದಲ್ಲದೇ ಜನಾಂಗ ನಿರೂಪಕರು ಸಂಗ್ರಹಿಸಿದ ಕಥೆಗಳನ್ನು ಸೆಳೆದುಕೊಳ್ಳಲು ಸಮರ್ಥರಾದರು. ಉಳಿದ ಕಥಾ ಸಂಗ್ರಹಕಾರರಿಗೂ ಸಹ ಕಾಲ್ಪನಿಕ ಕಥೆಗಳನ್ನು ಸಂಗ್ರಹಿಸಲು ಅವರು ಪ್ರೋತ್ಸಾಹಿಸಿದರು. ಅದಕ್ಕೆ ಉತ್ತಮ ಉದಾಹರಣೆ,ಯೆ ಥಿಯೋಡೋರ ಒಝಾಕಿ. ಒಝಾಕಿ ಯವರು ಲ್ಯಾಂಗ್‌ರಿಂದ ಪ್ರೇರಿತರಾಗಿ ಜಾಪನೀಸ್ ಫೇರಿ ಟೇಲ್ಸ್ (1908) ಎಂಬ ಸಂಗ್ರಹವನ್ನು ಸೃಷ್ಟಿಸಿದರು.[೪೫] ಅದೇ ಸಮಯಕ್ಕೆ ಸರಿಯಾಗಿ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಮತ್ತು ಜಾರ್ಜ್ ಮ್ಯಾಕ್ ಡೊನಾಲ್ಡ್ ರಂತಹ ಬರಹಗಾರರು ಸಾಹಿತ್ಯಕ ಕಾಲ್ಪನಿಕ ಕಥೆಗಳ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು. ಆಂಡರ್ಸನ್‌ರ ಕೃತಿಗಳು ಕೆಲವು ಸಲ ಹಳೆಯ ಜನಪದ ಕಥೆಗಳನ್ನು ಆಧರಿಸಿ ಬರೆಯಲ್ಪಡುತ್ತಿದ್ದವು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರು ಕಾಲ್ಪನಿಕ ಕಥೆಗಳ ಲಕ್ಷಣಗಳು ಮತ್ತು ಕಥಾವಸ್ತುಗಳನ್ನು ತಮ್ಮ ಹೊಸ ಕಥೆಗಳಲ್ಲಿ ಬಳಸಿಕೊಳ್ಳುತ್ತಿದ್ದರು.[೪೬] ಮ್ಯಾಕ್ ಡೊನಾಲ್ಡ್ ಕಾಲ್ಪನಿಕ ಕಥೆಗಳ ಲಕ್ಷಣಗಳನ್ನು ತಮ್ಮ ಹೊಸ ಸಾಹಿತ್ಯಕ ಕಾಲ್ಪನಿಕ ಕಥೆಯಾದ ದಿ ಲೈಟ್ ಪ್ರಿನ್ಸೆಸ್ ನಲ್ಲಿ ಬಳಸಿದರು ಮತ್ತು ದಿ ಪ್ರಿನ್ಸಸ್ ಎಂಡ್ ದಿ ಗೋಬ್ಲಿನ್ ಆರ್ ಲಿಲಿಥ್‌ ನಂತೆ ಫ್ಯಾಂಟಸಿಯಾದ ಪ್ರಕಾರದ ಕೃತಿಗಳಲ್ಲಿ ಅಳವಡಿಸಿಕೊಂಡರು.

ವಿಭಿನ್ನ ಸಂಸ್ಕೃತಿಗಳ ನಡುವೆ ರವಾನೆ

[ಬದಲಾಯಿಸಿ]

ವಿಶ್ವದಾದ್ಯಂತ ಹರಡಿಕೊಂಡಿರುವ ಕಾಲ್ಪನಿಕ ಕಥೆಗಳ ಸಾಮಾನ್ಯ ಅಂಶಗಳನ್ನು ಬಿಡಿಸಿ ಹೇಳಲು ಅಥವಾ ವಿವರಿಸಲು ಕಾಲ್ಪನಿಕ ಕಥೆಗಳ ಉಗಮದ ಎರಡು ಸಿದ್ಧಾಂತಗಳು ಪ್ರಯತ್ನಿಸಿವೆ. ಒಂದು ಸಿದ್ಧಾಂತದ ಪ್ರಕಾರ, ಉಗಮದ ಒಂದೇ ಒಂದು ಅಂಶವು ಯಾವುದೇ ಕಥೆಯ ಸೃಷ್ಟಿಗೆ ಕಾರಣವಾಗಿದ್ದು ಆ ಕಥೆ ಶತಮಾನಗಳ ವರೆಗೆ ಉಳಿದುಕೊಂಡು ಬಂದಿದೆ. ಇನ್ನೊಂದು ಸಿದ್ಧಾಂತದ ಪ್ರಕಾರ, ಕಾಲ್ಪನಿಕ ಕಥೆಗಳು ಮಾನವನ ಸಾಮಾನ್ಯ ಅನುಭವದಿಂದ ಹುಟ್ಟಿಕೊಂಡಿರುತ್ತವೆ ಮತ್ತು ಬೇರೆ ಬೇರೆ ನೆಲೆಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬಹುದು.[೪೭]

ವಿಭಿನ್ನ ಸಂಸ್ಕೃತಿಗಳಲ್ಲಿ ಕಾಲ್ಪನಿಕ ಕಥೆಗಳ ಒಂದೇ ರೀತಿಯ ಕಥಾ ವಸ್ತುಗಳು, ಪಾತ್ರಗಳು ಮತ್ತು ಲಕ್ಷಣಗಳು ಹರಡಿಕೊಂಡಿರುವುದನ್ನು ಕಾಣಬಹುದು. ಅನೇಕ ಸಂಶೋಧನಕಾರರು ಇಂತಹ ಕಥೆಗಳ ಹರಡುವಿಕೆ ಕಾರಣದಿಂದ ಹೀಗಾಗುತ್ತದೆಂದು ಪ್ರತಿಪಾದಿಸಿದ್ದಾರೆ. ವಿದೇಶಿ ನೆಲಗಳಲ್ಲಿ ಕೇಳಿದ ಕಥೆಗಳನ್ನು ಜನರು ಪುನರಾವರ್ತಿಸುತ್ತಾರೆ. ಆದರೂ ಈ ಕಥೆಗಳ ಮೌಖಿಕ ಸ್ವರೂಪದಿಂದ, ಊಹಿಸಲು ಸಾಧ್ಯವೇ ಹೊರತು, ಅದರ ಮಾರ್ಗವನ್ನು ಹುಡುಕುವುದು ಅಸಾಧ್ಯವಾಗಿಸಿದೆ.[೪೮] ಜನಪದ ಸಾಹಿತಿಗಳು ಆಂತರಿಕ ಸಾಕ್ಷಿಗಳ ಮುಖಾಂತರ ಈ ಕಥೆಗಳ ಮೂಲವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸಿದ್ಧಾಂತಗಳು ಅಷ್ಟೊಂದು ಸ್ಪಷ್ಟವಾಗಿಲ್ಲ. ಜೋಸೆಫ್ ಜೆಕಬ್ಸ್ ಸ್ಕಾಟಿಷ್ ಕಥೆಯಾದ ದಿ ರಿಡೆರೆ ಆಫ್ ರಿಡಲ್ಸ್ ನ್ನು ಬ್ರದರ್ಸ್ ಗ್ರಿಮ್ ಸಂಗ್ರಹಿಸಿದ ಆವೃತ್ತಿಯಾದ ದಿ ರಿಡಲ್ ನೊಂದಿಗೆ ಹೋಲಿಸುತ್ತ ಕಂಡುಕೊಂಡ ಸಂಗತಿಯೆಂದರೆ, ದಿ ರಿಡೆರೆ ಆಫ್ ರಿಡಲ್ಸ್ ನಲ್ಲಿ ಒಬ್ಬ ನಾಯಕ ಬಹುವಿವಾಹಿಆಗುತ್ತಾನೆ. ಅದು ಒಂದು ಪ್ರಾಚೀನ ಪದ್ಧತಿಯತ್ತ ಬೆಟ್ಟು ಮಾಡಬಹುದು.ಆದರೆ ಗ್ರಿಮ್ ರ ದಿ ರಿಡಲ್ ನಲ್ಲಿ ಸುಲಭವಾದ ಒಗಟು ಸಹ ಅತ್ಯಂತ ಪ್ರಾಚೀನವೆಂದು ವಾದ ಮಾಡುತ್ತದೆ.[೪೯]

"ಫಿನ್ನಿಶ್" ಅಥವಾ ಫಿನ್ಲ್ಯಾಂಡ್ ದೇಶದ (ಅಥವಾ ಐತಿಹಾಸಿಕ-ಭೌಗೋಳಿಕ) ವಿಚಾರವಾದಿಗಳ ಸಮೂಹವೊಂದು ಕಾಲ್ಪನಿಕ ಕಥೆಗಳು ತಮ್ಮ ಮೂಲದ್ದೆಂದು ಸಾರಲು, ಅಪೂರ್ಣ ಫಲಿತಾಂಶಗಳೊಂದಿಗೆ ಪ್ರಯತ್ನಿಸಿದರು.[೫೦] ಬ್ರದರ್ಸ್ ಗ್ರಿಮ್‌ರು ಸಂಗ್ರಹಿಸಿದ ಕಥೆಗಳ ಮೇಲೆ ಪೆರಾಲ್ಟ್‌ರ ಕಥೆಗಳ ಪ್ರಭಾವ ನೋಡಿದಾಗ ತಿಳಿಯುವುದೇನೆಂದರೆ, ಕೆಲವು ಸಲ ಪ್ರಭಾವವು ಸ್ಪಷ್ಟವಾಗಿರುತ್ತದೆ. ಅದರಲ್ಲಿಯೂ ನಿಗದಿತ ಸ್ಥಳ ಮತ್ತು ಕಾಲಗಳ ಮಿತಿಯೊಳಗೆ ಉಂಟಾದ ಪ್ರಭಾವವು ತುಂಬಾ ಸ್ಪಷ್ಟವಾಗಿರುತ್ತದೆ. ಲಿಟಲ್ ಬ್ರಾಯರ್-ರೋಜ್ ಎಂಬ ಕಥೆಯು ಪೆರಾಲ್ಟ್ ರ ಸ್ಲೀಪಿಂಗ್ ಬ್ಯೂಟಿ ಕಥೆಯಿಂದ ಪ್ರೇರಿತವಾಗಿದೆ. ಗ್ರಿಮ್‌ರ ಕಥೆಗಳು ಜರ್ಮನಿಯ ಏಕ ಮಾತ್ರ ಸ್ವತಂತ್ರ ರೂಪಾಂತರದಂತೆ ಕಾಣುತ್ತವೆ.[೫೧] ಇದೇರೀತಿ,ಲಿಟಲ್ ರೆಡ್ ರೈಡಿಂಗ್ ಹುಡ್‌ನ ಗ್ರಿಮ್ಸ್ ಆವೃತ್ತಿ ಮತ್ತು ಪೆರಾಲ್ಟ್ಸ್ ಕಥೆಯ ಆರಂಭ ಭಾಗಗಳ ನಡುವೆ ನಿಕಟ ಹೊಂದಿಕೆಯು ಪ್ರಭಾವದತ್ತ ಬೆಟ್ಟು ಮಾಡುತ್ತದೆ. ಆದರೂ ಗ್ರಿಮ್ಸ್ ಆವೃತ್ತಿಯು ಭಿನ್ನವಾಗಿ ಅಂತ್ಯಗೊಳ್ಳುತ್ತದೆ(ಬಹುಶಃ ದಿ ವುಲ್ಫ್ ಎಂಡ್ ದಿ ಸೆವೆನ್ ಯಂಗ್ ಕಿಡ್ಸ್‌ನಿಂದ ವ್ಯುತ್ಪತ್ತಿಯಾಗಿರಬಹುದು).

ಕಥೆಯ ಲಕ್ಷಣಗಳ ಆಯ್ಕೆ,ಅವನ್ನು ಹೇಳುವ ಶೈಲಿ ಮತ್ತು ಪಾತ್ರವನ್ನು ಬಿಂಬಿಸುವ ರೀತಿ ಮತ್ತು ಸ್ಥಳೀಯ ಬಣ್ಣದ ಮೂಲಕ ಕಾಲ್ಪನಿಕ ಕಥೆಗಳು ಅವುಗಳ ಸ್ಥಳದ ಬಣ್ಣವನ್ನು ಪಡೆಯುತ್ತವೆ.[೫೨]

ಚಿಕ್ಕಮಕ್ಕಳೊಂದಿಗೆ ಕಥೆಗಳ ನಂಟು

[ಬದಲಾಯಿಸಿ]

ನಿಜವಾದ ಸಂಗತಿಯೆಂದರೆ, ಈ ಕಾಲ್ಪನಿಕ ಕಥೆಗಳಿಗೆ ಚಿಕ್ಕಮಕ್ಕಳಷ್ಟೇ ದೊಡ್ಡವರೂ ಕೂಡ ಶ್ರೋತೃಗಳಾಗಿದ್ದರು.[೫೩] ಬರವಣಿಗೆ ರೂಪದ ಕಾಲ್ಪನಿಕ ಕಥೆಗಳು ಮೊದಲು ವಯಸ್ಕರನ್ನು ಉದ್ದೇಶಿಸಿದ ಕೃತಿಗಳಲ್ಲಿ ಕಾಣಿಸಿಕೊಂಡವು. ಆದರೆ 19 ನೇ ಮತ್ತು 20 ನೇ ಶತಮಾನಗಳಲ್ಲಿ ಅವು ಮಕ್ಕಳ ಸಾಹಿತ್ಯದ ಜತೆ ನಂಟು ಹೊಂದಿದವು.

ಕಟ್ಲರಿ, ಮಕ್ಕಳಿಗಾಗಿ.ಕಾಲ್ಪನಿಕ ಕಥೆಗಳ ದೃಶ್ಯಗಳನ್ನು ವಿವರವಾಗಿ ತೋರಿಸುವ ಚಿತ್ರಗಳು: ಸ್ನೋ ವೈಟ್, ಲಿಟಲ್ ರೆಡ್ ರೈಡಿಂಗ್ ಹುಡ್, ಹ್ಯಾನ್ಸೆಲ್ ಅಂಡ್ ಗ್ರೆಟೆಲ್

ಮೇಡಮ್ ಡಿ ಅಲ್‌ನಾಯ್ ಸೇರಿದಂತೆ ಪ್ರಿಸಿಯ್ಯೂಸಸ್(ಫ್ರೆಂಚ್ ಸಾಹಿತ್ಯಕ ಶೈಲಿ)ತಮ್ಮ ಕೃತಿಗಳು ಪ್ರೌಢವಯಸ್ಕರಿಗೆಂದು ಉದ್ದೇಶಿಸಿದ್ದರೂ, ಆಳುಗಳು ಅಥವಾ ಕೆಳ ವರ್ಗದ ಮಹಿಳೆಯರು ಚಿಕ್ಕಮಕ್ಕಳಿಗೆ ಹೇಳುವ ಕಥೆಗಳೇ ಅವಕ್ಕೆ ಮೂಲವೆಂದು ಪರಿಗಣಿಸಿದರು.[೫೪] ಆ ಕಾಲದ ಕಾದಂಬರಿಯೊಂದರಲ್ಲಿ,ಕೌಂಟೆಸ್‌ಗೆ ಗೊತ್ತಾದ ವರನು ಅಂತಹ ಕಥೆ ಹೇಳುವ ಪ್ರಸ್ತಾಪ ಮಾಡಿದಾಗ, ತಾನು ಮಗುವಿನ ರೀತಿಯಲ್ಲಿ ಕಾಲ್ಪನಿಕ ಕಥೆಗಳನ್ನು ಇಷ್ಟಪಡುವುದಾಗಿ ಕೌಂಟೆಸ್ ಉದ್ಗರಿಸುತ್ತಾಳೆ ಎಂದು ಬಿಂಬಿಸಿದೆ. ನಂತರ ಬರುವ ಪ್ರಿಶಸಸ್ ನಲ್ಲಿ ಜಿಯಾನ್-ಮೇರಿ ಲಿ ಪ್ರಿನ್ಸ್ ಡಿ ಬೆಮಾಂಟ್ ಅವರು ಚಿಕ್ಕಮಕ್ಕಳಿಗಾಗಿ ಬ್ಯೂಟಿ ಅಂಡ್ ದಿ ಬೀಸ್ಟ್ ಎಂಬ ಆವೃತ್ತಿಯನ್ನು ಪ್ರಕಟಿಸಿದರು. ಆ ಕಥೆಯು ಇಂದಿಗೂ ಶ್ರೇಷ್ಠ ಕಥೆಯಾಗಿ ಉಳಿದುಕೊಂಡಿದೆ.[೫೫] ಅವರ ಕಥೆಗಳು ಚಿಕ್ಕಮಕ್ಕಳಿಗೆ ಯೋಗ್ಯವಾಗಿಲ್ಲ ಎಂಬ ದೂರುಗಳ ಬಂದ ನಂತರ, ಬ್ರದರ್ಸ್ ಗ್ರಿಮ್ ತಮ್ಮ ಕಥಾ ಸಂಕಲನವನ್ನು ಚಿಲ್ಡ್ರನ್ಸ್ ಅಂಡ್ ಹೌಸ್ ಹೋಲ್ಡ್ ಟೇಲ್ಸ್ ಎಂದು ಹೆಸರಿಸಿ ಅದರಲ್ಲಿನ ಕಥೆಗಳನ್ನು ಮಕ್ಕಳಿಗಾಗಿ ಮತ್ತೊಮ್ಮೆ ಬರೆದರು.[೫೬]

ಆಧುನಿಕ ಯುಗದಲ್ಲಿ, ಕಾಲ್ಪನಿಕ ಕಥೆಗಳನ್ನು ಚಿಕ್ಕಮಕ್ಕಳಿಗೆ ಓದಿಹೇಳಲು ಯೋಗ್ಯವಾಗುವಂತೆ ಮಾಡಲು ಅವುಗಳಲ್ಲಿ ಬದಲಾವಣೆ ಮಾಡಲಾಯಿತು. ಬ್ರದರ್ಸ್ ಗ್ರಿಮ್ ರು ತಮ್ಮ ಕಥೆಗಳಲ್ಲಿದ್ದ ಅಶ್ಲೀಲ ಅಂಶಗಳನ್ನು[೫೭] ತೆಗೆದುಹಾಕುವ ಕಡೆಗೆ ಹಚ್ಚು ಗಮನ ಹರಿಸಿದರು. ಮೊದಲನೇ ಪ್ರಕಟಣೆಯಲ್ಲಿ ಬರುವ ರಪನ್‌ಜೆಲ್ ಳು ತನ್ನ ಬಟ್ಟೆಗಳು ಏಕೆ ಬಿಗಿಯಾಗುತ್ತಿವೆ ಎಂದು ಪ್ರಶ್ನೆ ಕೇಳುವ ಮೂಲಕ ರಾಜಕುಮಾರನು ತನ್ನನ್ನು ಭೇಟಿಗಳಾಗುವ ವಿಷಯವನ್ನು ಬಹಿರಂಗಪಡಿಸುತ್ತಾಳೆ. ಇದರಿಂದಾಗಿ ಮಾಟಗಾತಿಗೆ ರಪನ್‌ಸೆಲ್ ಗರ್ಭಿಣಿ ಎಂದು ಊಹಿಸಲು ಅವಕಾಶ ಕಲ್ಪಿಸುತ್ತದೆ. ಆದರೆ, ನಂತರದ ಆವೃತ್ತಿಗಳಲ್ಲಿ ಮಾಟಗಾತಿಯನ್ನು ಮೇಲೆ ಎಳೆಯುವುದಕ್ಕಿಂತ ರಾಜಕುಮಾರನನ್ನು ಮೇಲೆ ಎಳೆಯುವುದು ಸುಲಭ ಎಂದು ರಪನ್‌ಜೆಲ್ ಬೇಜವಾಬ್ದಾರಿಯಿಂದ ಬಹಿರಂಗಪಡಿಸುತ್ತಾಳೆ.[೫೮] ಇನ್ನೊಂದೆಡೆ, ಅನೇಕ ರೀತಿಗಳಲ್ಲಿ, ಖಳನಾಯಕರನ್ನು ಶಿಕ್ಷಿಸುವ ಸಂದರ್ಭಗಳಲ್ಲಿ ಹಿಂಸೆಯ ಬಳಕೆ ಜಾಸ್ತಿಯಾಯಿತು.[೫೯] ನಂತರದ ಆವೃತ್ತಿಗಳಲ್ಲಿ ಹಿಂಸೆಯನ್ನು ತೆಗೆದು ಹಾಕಲಾಯಿತು. ಜೆ.ಆರ್.ಆರ್. ಟೋಲ್ಕೀನ್‌ರು ಹೇಳುವಂತೆ ದಿ ಜೂನಿಪರ್ ಟ್ರೀ ಯಲ್ಲಿನ ನರಮಾಂಸ ಭಕ್ಷ್ಯದಭಾಗವನ್ನು ಚಿಕ್ಕಮಕ್ಕಳಿಗಾಗಿ ತೆಗೆದು ಹಾಕಲಾಯಿತು.[೬೦] ವಿಕ್ಟೋರಿಯನ್ ಯುಗ ದಲ್ಲಿ ನೈತಿಕತೆಯ ಪ್ರವೃತ್ತಿಯಿಂದಾಗಿ ಹಳೆಯ ಕಥೆಗಳಲ್ಲಿ ಬದಲಾವಣೆಗಳನ್ನು ಮಾಡಿ ಮಕ್ಕಳಿಗೆ ಪಾಠ ಹೇಳಲು ಬರುವಂತೆ ಮಾಡಲಾಯಿತು. ಹಾಗೆಯೇ, ಜಾರ್ಜ್ ಕ್ರೂಕ್‌ಶಾಂಕ್ ರು 1854 ರಲ್ಲಿ ಸಿಂಡರೆಲ್ಲಾ ಕಥೆಯನ್ನು ಮಧ್ಯಪಾನ ಸಂಯಮ ಆಂದೋಳನದ ಕಥಾವಸ್ತುವನ್ನು ಸೇರಿಸಿ ಮತ್ತೊಮ್ಮೆ ಬರೆದರು. ಅವರಿಗೆ ಪರಿಚಿತನಾಗಿದ್ದ ಚಾರ್ಲ್ಸ್ ಡಿಕೆನ್ಸ್ ಹೀಗೆ ವಿರೋಧಿಸಿದರು, "ಎಲ್ಲ ಕಾಲಗಳಿಗಿಂತಲೂ ಉಪಯುಕ್ತವಾದ ಈ ಯುಗದಲ್ಲಿ ಕಾಲ್ಪನಿಕ ಕಥೆಗಳಿಗೆ ಗೌರವ ಕೊಡುವುದು ಬಹಳ ಪ್ರಮುಖವಾದ ವಿಚಾರವಾಗಿದೆ."[೬೧][೬೨]

ಬ್ರೂನೋ ಬೆಟಲ್ ಹೈಮ್ ರಂತಹ ಮನೋವಿಶ್ಲೇಷಕರು ಹಳೆಯ ಕಾಲ್ಪನಿಕ ಕಥೆಗಳಲ್ಲಿನ ಕ್ರೌರ್ಯತೆಯನ್ನು ಮಾನಸಿಕ ಸಂಘರ್ಷಗಳ ಸಂಕೇತ ಎಂದು ಸಾರಿದರು. ಅಷ್ಟೇ ಅಲ್ಲದೆ, ಸಾಂಕೇತಿಕವಾಗಿ ಸಮಸ್ಯೆಗಳನ್ನು ಬಿಡಿಸುವ ಮಾರ್ಗಗಳಾಗಿ ಕಾಲ್ಪನಿಕ ಕಥೆಗಳ ಉಪಯುಕ್ತತೆಯು ಮಕ್ಕಳು ಮತ್ತು ಪ್ರೌಢವಯಸ್ಕರಿಗೆ ದುರ್ಬಲಗೊಳ್ಳುತ್ತೆಂಬ ಕಾರಣದಿಂದ ಆಕ್ಷೇಪಣೀಯ ವಿಷಯಗಳನ್ನು ತೆಗೆಯುವುದನ್ನು ಟೀಕಿಸಿದರು.[೬೩]

ಚಿಕ್ಕ ಮಕ್ಕಳಿಗಾಗಿ ಕಾಲ್ಪನಿಕ ಕಥೆಗಳ ರೂಪಾಂತರವು ಸರಾಗವಾಗಿ ಮುಂದುವರಿಯುತ್ತದೆ. ವಾಲ್ಟ್ ಡಿಸ್ನಿ ಯ ಪ್ರಭಾವಶಾಲಿ ಕಥೆ, ಸ್ನೋ ವೈಟ್ ಅಂಡ್ ದಿ ಸೆವೆನ್ ದ್ವಾರ್ಫ್ಸ್ ಬಹುತೇಕ (ಆದರೂ ಖಂಡಿತವಾಗಿ ಏಕಮಾತ್ರವಲ್ಲ) ಮಕ್ಕಳ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ರಚಿಸಲಾಗಿತ್ತು.[೬೪] ಮ್ಯಾಜಿಕಲ್ ಪ್ರಿನ್ಸೆಸ್ ಮಿಂಕಿ ಮೊಮೊ ಎಂಬ ಆನಮ್ ಮೊಮೊತಾರೋ ಎಂಬ ಕಾಲ್ಪನಿಕ ಕಥೆಯಿಂದ ಪ್ರೇರಿತವಾಗಿದೆ.[೬೫] ಜಾಕ್ ಜಿಪಿಸ್ ರು ತಮ್ಮ ಜೀವನದ ಅನೇಕ ವರ್ಷಗಳನ್ನು ಈ ಪ್ರಾಚೀನ ಕಥೆಗಳನ್ನು ಅಭ್ಯಾಸ ಮಾಡಲು ಮತ್ತು ಆಧುನಿಕ ಓದುಗರಿಗೆ ಮತ್ತು ಅವರ ಮಕ್ಕಳಿಗೆ ಓದಲು ದೊರೆಯುವಂತೆ ಮಾಡಲು ಮೀಸಲಿಟ್ಟಿದ್ದಾರೆ.[೬೬]

ವಾಲ್ದೊರ್ಫ್ ಶಾಲೆ ಗಳಲ್ಲಿ ಒಂದನೆಯ ಗ್ರೇಡ್‌ನಲ್ಲಿ ಕಾಲ್ಪನಿಕ ಕಥೆಗಳನ್ನು ಪಠ್ಯದ ಮುಖ್ಯ ಭಾಗವಾಗಿ ಬಳಸಲಾಗುತ್ತಿದೆ. ಆರರಿಂದ ಏಳನೆಯ ವಯಸ್ಸಿನಲ್ಲಿ ಮಕ್ಕಳಿಗೆ ಕಥೆ ಹೇಳುವ ಮೂಲಕ ಪಾಠ ಮಾಡಿದರೆ ಚೆನ್ನಾಗಿ ಅರ್ಥವಾಗುವುದು ಎಂದು ರುಡಾಲ್ಫ್ ಸ್ಟೈನರ್ ಮಾನವನ ಅಭಿವೃದ್ಧಿಯನ್ನು ಆಧರಿಸಿ ಬರೆದ ತಮ್ಮ ಕೃತಿಯಲ್ಲಿ ಹೇಳುತ್ತಾರೆ. ಕಾಲ್ಪನಿಕ ಕಥೆಗಳ ಮೂಲಮಾದರಿಗಳು ಮತ್ತು ಅವುಗಳ ಮಾಂತ್ರಿಕ ಸ್ವರೂಪಕ್ಕೆ ಈ ವಯೋಮಿತಿಯ ಮಕ್ಕಳು ಬಲವಾಗಿ ಸ್ಪಂದಿಸುತ್ತಾರೆ. ಮೌಖಿಕ ಪರಂಪರೆ ಅನುಸರಿಸಿದ ಈ ಕಾಲ್ಪನಿಕ ಕಥೆಗಳ ಸ್ವರೂಪವು ಹೇಳಿದ ಕಥೆಯನ್ನು ಕಣ್ಮುಂದೆ ತರುವ ಹಾಗೂ ಕೇಳಿದ ಕಥೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಮಕ್ಕಳ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

ಸಮಕಾಲೀನ ಕಥೆಗಳು

[ಬದಲಾಯಿಸಿ]

ಸಾಹಿತ್ಯಕ

[ಬದಲಾಯಿಸಿ]
ಜಾನ್ ಬವರ್ ಬಿಡಿಸಿರುವ ಸ್ವೀಡನ್ ನ ಕಾಲ್ಪನಿಕ ಕಥೆಗಳಿಂದ ಆಯ್ದ ಅತಿಮಾನುಷ ದೈತ್ಯ ಮತ್ತು ಒಬ್ಬ ಯುವರಾಣಿಯ ಚಿತ್ರ

ಅನೇಕ ಲೇಖಕರು ಕಾಲ್ಪನಿಕ ಕಥೆಗಳು ಒದಗಿಸುವ ಸರಳ ಚೌಕಟ್ಟಿನಿಂದ ಮಾನವ ಪರಿಸ್ಥಿತಿಯ ಪರಿಶೀಲನೆ ಮುಂತಾದ ವಿವಿಧ ಕಾರಣಗಳಿಗಾಗಿ ಸಮಕಾಲೀನ ಸಾಹಿತ್ಯದಲ್ಲಿ ಕಾಲ್ಪನಿಕ ಕಥೆಗಳ ಸ್ವರೂಪವನ್ನು ಬಳಸಿದ್ದಾರೆ.[೬೭] ಕೆಲವು ಬರಹಗಾರರು ಈ ಸಮಕಾಲೀನ ಕಥೆಗಳಲ್ಲಿ ಅತಿರೇಕದ ಕಲ್ಪನೆಯ ಪ್ರಜ್ಞೆಯನ್ನು ಮರು ಸೃಷ್ಟಿ ಮಾಡುವ ಪ್ರಯತ್ನ ಮಾಡಿದ್ದಾರೆ.[೬೮] ಮತ್ತೆ ಕೆಲವು ಬರಹಗಾರರು ಕಾಲ್ಪನಿಕ ಕಥೆಗಳ ಸ್ವರೂಪಗಳನ್ನು ಆಧುನಿಕ ಜಗತ್ತಿನ ವಿಷಯಗಳಿಗಾಗಿ ಬಳಸುತ್ತಾರೆ. ಈ ಕಥೆಯಲ್ಲಿ ಧ್ವನಿತವಾಗಿರುವ ಮಾನಸಿಕ ರೂಪಕಗಳನ್ನು ಬಳಸಿಕೊಳ್ಳುವುದು ಸೇರಿದೆ.ಡಾಂಕಿಸ್ಕಿನ್ ಎಂಬ ಕಥೆಯನ್ನು ಡಿಯರ್ಸ್ಕಿನ್ ಎಂಬ ಕಥೆಯಾಗಿ ಪುನರ್ ರಚಿಸಿದ ರಾಬಿನ್ ಮ್ಯಾಕ್ ಕಿನ್ಲೆ ಯವರು ಕಥೆಯಲ್ಲಿ ಒಬ್ಬ ತಂದೆ ತನ್ನ ಮಗಳನ್ನು ದುರುಪಯೋಗ ಮಾಡಿಕೊಳ್ಳುವ ವರ್ತನೆಗೆ ಒತ್ತುನೀಡಿದ್ದಾರೆ.[೬೯] ಕೆಲವುಸಲ, ಅದರಲ್ಲಿಯೂ ಮಕ್ಕಳ ಸಾಹಿತ್ಯದಲ್ಲಿ, ನಗೆಯ ಪರಿಣಾಮ ಉಂಟುಮಾಡುವ ಸಲುವಾಗಿ ಕಾಲ್ಪನಿಕ ಕಥೆಗಳನ್ನು ತಿರುವಿನೊಂದಿಗೆ ಮರು ಸೃಷ್ಟಿ ಮಾಡಲಾಗುತ್ತದೆ. ಇದಕ್ಕೆ ಉದಾಹರಣೆಗಳು, ಜೋನ್ ಶೆಸ್ಕಾ ಬರೆದ ದಿ ಸ್ಟಿಂಕಿ ಚೀಸ್ ಮ್ಯಾನ್ ಮತ್ತು ಕ್ರಿಸ್ ಪಿಲ್ಬಿಯಂ ಬರೆದ ದಿ ASBO ಫೇರಿ ಟೇಲ್ಸ್ . ಒಂದು ಸಾಮಾನ್ಯ ಹಾಸ್ಯ ಕಥೆಯ ಲಕ್ಷಣವು ಎಲ್ಲ ಕಾಲ್ಪನಿಕ ಕಥೆಗಳು ಸಂಭವಿಸುವ ಲೋಕದಲ್ಲಿರುವ ಪಾತ್ರಗಳು ಕಥೆಯಲ್ಲಿ ತಮ್ಮ ಪಾತ್ರವನ್ನು ಅರಿತಿರುತ್ತವೆ.[೭೦] ಉದಾಹರಣೆಗೆ, ಶ್ರೆಕ್ ಚಲನಚಿತ್ರ ಸರಣಿ.

ಇತರ ಬರಹಗಾರರು ನಿರ್ದಿಷ್ಟ ಪ್ರೇರಣೆಗಳನ್ನು ಹೊಂದಿರಬಹುದು. ಅವುಗಳೆಂದರೆ, ಹಳೆಯ ಕಾಲ್ಪನಿಕ ಕಥೆಗಳ ವಿಮರ್ಶೆಗಳು ಸೂಚಿಸುವ ಬಹುಸಂಸ್ಕೃತಿಯ ಅಥವಾ ಸ್ತ್ರೀವಾದ ದ ದೃಷ್ಟಿಕೋನದಿಂದ ಮರು ಮೌಲ್ಯಮಾಪನ ಮಾಡಲಾದ ಪುರುಷ ಪ್ರಧಾನ ಯುರೋ ಸೆಂಟ್ರಿಕ್ ಅಥವಾ ಪ್ರಬಲವಾಗಿ ಯುರೋಪಿಯನ್ ದೃಷ್ಟಿಕೋನ ಹೊಂದಿರುವ ಕಾಲ್ಪನಿಕ ಕಥೆಗಳು.[೭೧] ಸಮಸ್ಯೆಯಲ್ಲಿ ಸಿಲುಕಿದ ಸುಂದರ ಯುವತಿ ಯ ಪಾತ್ರವನ್ನು ಅನೇಕ ಸ್ತ್ರೀವಾದಿ ವಿಮರ್ಶಕರು ಖಂಡಿಸಿದ್ದಾರೆ. ಈ ರೀತಿಯ ಪಾತ್ರಕ್ಕೆ ವೈರುದ್ಧ್ಯವಾಗಿ ಬರೆದ ಕಥೆಗಳ ಉದಾಹರಣೆಗಳಲ್ಲಿ, ಚಿಕ್ಕಮಕ್ಕಳಿಗಾಗಿ ರಾಬರ್ಟ್ ಮಂಚ್ ಬರೆದ ದಿ ಪೇಪರ್ ಬ್ಯಾಗ್ ಪ್ರಿನ್ಸೆಸ್ ಎಂಬ ಚಿತ್ರಕಥೆಯಲ್ಲಿ ಒಬ್ಬ ರಾಜಕುಮಾರಿಯು ಒಬ್ಬ ಯುವರಾಜನನ್ನು ಕಾಪಾಡುತ್ತಾಳೆ. ಅದೇ ರೀತಿ, ಎಂಜಲಾ ಕಾರ್ಟರ್ ಬರೆದ ದಿ ಬ್ಲಡಿ ಚೇಂಬರ್ ಎಂಬ ಕಥೆಯಲ್ಲಿ ಮಹಿಳೆಯ ದೃಷ್ಟಿಕೋನದಿಂದ ಹೇಳಲಾದ ಅನೇಕ ಕಾಲ್ಪನಿಕ ಕಥೆಗಳು ಸೇರಿವೆ.

ಈ ಪ್ರಕಾರದ ಇನ್ನೊಂದು ರೀತಿಯ ಉಪಯೋಗವನ್ನು ಡಿಫೆನ್ಸ್ AT&L ಎಂಬ ಮಿಲಿಟರಿ ತಂತ್ರಜ್ಞಾನ ಒಳಗೊಂಡ ನಿಯತಕಾಲಿಕ ಅಥವಾ ಪತ್ರಿಕೆ ಯಲ್ಲಿ ಕಾಣಬಹುದು. ಈ ನಿಯತಕಾಲಿಕವು ಆಪ್ಟಿಮೈಜಿಂಗ್ ಬೈ-ಮೋಡಲ್ ಸಿಗ್ನಲ್/ನಾಯಿಸ್ ರೆಶಿಯೋಸ್ ಎಂಬ ಶೀರ್ಷಿಕೆಯ ಕಾಲ್ಪನಿಕ ಕಥೆಯನ್ನು ಲೇಖನ ರೂಪದಲ್ಲಿ ಪ್ರಕಟಿಸಿತು. ಈ ಕಥೆಯನ್ನು ಬರೆದವರು ಮೇಜರ್ ಡ್ಯಾನ್ ವಾರ್ಡ್ (USAF). ಈ ಕಥೆಯಲ್ಲಿ ಗಾರ್ಬಲ್ ಎಂಬ ಹೆಸರಿನ ಕಾಲ್ಪನಿಕ ಪಾತ್ರವನ್ನು ಬಳಸಿಕೊಂಡು ಆಪರೇಟರ್‌ಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರ ನಡುವೆ ಉಂಟಾಗುವ ಸಂಪರ್ಕ ಕಡಿತಗಳನ್ನು ಪ್ರತಿಬಿಂಬಿಸಲಾಗಿದೆ.[೭೨] ವಾರ್ಡ್ ರ ಈ ಲೇಖನವು ಜಾರ್ಜ್ ಮ್ಯಾಕ್ ಡೊನಾಲ್ಡ್ ರ ತೀವ್ರ ಪ್ರಭಾವಕ್ಕೊಳಗಾಗಿತ್ತು.

ಕಾಲ್ಪನಿಕ ಕಥೆಗಳನ್ನು ಅಳವಡಿಸಿಕೊಂಡ ಪ್ರಸಿದ್ಧ ಲೇಖಕರೆಂದರೆ, ಆಸ್ಕರ್ ವೈಲ್ಡ್, ಎ.ಎಸ್. ಬೈಯಟ್, ಜೇನ್ ಯೋಲನ್, ಟೆರ್ರಿ ವಿಂಡ್ಲಿಂಗ್, ಡೊನಾಲ್ಡ್ ಬಾರ್ಥೆಲ್ಮೆ , ರಾಬರ್ಟ್ ಕೂವರ್, ಮಾರ್ಗರೇಟ ಆಟ್ವುಡ್ , ಕೇಟ್ ಬರ್ನ್ ಹೈಮರ್, ಎಸ್ಪಿಡೋ ಫ್ರೈರೆ , ತನಿತ್ ಲೀ , ಜೇಮ್ಸ್ ಥರ್ಬರ್ , ರಾಬಿನ್ ಮ್ಯಾಕ್ ಕಿನ್ಲೆ , ಐಸಾಕ್ ಬಷೆವಿಸ್ ಸಿಂಗರ್, ಕೆಲಿ ಲಿಂಕ್, ಬ್ರೂಸ್ ಹಾಲಂಡ್ ರೋಜರ್ಸ್, ಡೊನಾ ಜೋ ನಪೋಲಿ, ಕ್ಯಾಮರಾನ್ ಡೋಕಿ, ರಾಬರ್ಟ್ ಬ್ಲೈ, ಗೈಲ್ ಕಾರ್ಸನ್ ಲಿವೈನ್, ಅನೆಟ್ ಮೇರಿ ಹೈಡರ್, ಜಾಸ್ಪರ್ ಫೋರ್ಡ್ ಮತ್ತು ಇನ್ನಿತರರು.

ಕಾಲ್ಪನಿಕ ಕಥೆಗಳು ಮತ್ತು ಕಾಲ್ಪನಿಕ ಕಥೆಗಳ ಲಕ್ಷಣಗಳನ್ನು ಅಥವಾ ಇಡೀ ಕಥಾವಸ್ತುಗಳನ್ನು ಬಳಸುವ ಫ್ಯಾಂಟಸಿಗಳ(ಅವಾಸ್ತವಿಕ ಕಲ್ಪನೆ)ನಡುವೆ ನಿಯಮ ವಿಧಿಸುವುದು ಕಷ್ಟವಾಗಬಹುದು. ಆದರೆ ಸಾಮಾನ್ಯವಾಗಿ ಇವುಗಳ ನಡುವೆ ವ್ಯತ್ಯಾಸವನ್ನು ಒಬ್ಬನೇ ಲೇಖಕನ ಕೃತಿಗಳಲ್ಲಿ ಗುರುತಿಸಲಾಗಿದೆ: ಜಾರ್ಜ್ ಮ್ಯಾಕ್ ಡೊನಾಲ್ಡ್ ಅವರ ಲಿಲಿತ್ ಮತ್ತು ಫಾಂಟೇಸ್ಟಸ್ ಕಥೆಗಳು ಫ್ಯಾಂಟಸಿಗಳು.ಆದರೆ ದಿ ಲೈಟ್ ಪ್ರಿನ್ಸೆಸ್ , ದಿ ಗೋಲ್ಡನ್ ಕೀ ಮತ್ತು ದಿ ವೈಸ್ ವುಮನ್ ಕಥೆಗಳನ್ನು ಸಾಮಾನ್ಯವಾಗಿ ಕಾಲ್ಪನಿಕ ಕಥೆಗಳೆಂದು ಕರೆಯಲಾಗುತ್ತದೆ. ಅತಿ ಮುಖ್ಯವಾದ ವ್ಯತ್ಯಾಸವೆಂದರೆ, ಕಾಲ್ಪನಿಕ ಕಥೆಗಳ ಫ್ಯಾಂಟಸಿಗಳು ಇತರ ಫ್ಯಾಂಟಸಿಗಳಂತೆ ಗದ್ಯ,ಪಾತ್ರನಿರೂಪಣೆ ಅಥವಾ ಸನ್ನಿವೇಶದ ಕಾದಂಬರಿ ಲಕ್ಷಣದ ಬರಹದ ಸಂಪ್ರದಾಯಗಳನ್ನು ಬಳಸಿಕೊಳ್ಳುತ್ತವೆ.

ಚಲನಚಿತ್ರ

[ಬದಲಾಯಿಸಿ]

ಕಾಲ್ಪನಿಕ ಕಥೆಗಳನ್ನು ನಾಟಕಗಳ ರೂಪದಲ್ಲಿ ಪ್ರದರ್ಶಿಸಲಾಗಿದೆ. ಇದಕ್ಕೆ ಸಾಕ್ಷಿಯಾದ ದಾಖಲೆಗಳು ಕಾಮಿಡಿಯಾ ಡೆಲ್'ಆರ್ಟ್ [೭೩] ಮತ್ತು ನಂತರದ ಪ್ಯಾಂಟೊ ಮೈಮ್ಗಳಲ್ಲಿ ಲಭ್ಯವಿವೆ.[೭೪] ಸಿನಿಮಾ ದ ಆಗಮನದಿಂದಾಗಿ ಇಂತಹ ಕಥೆಗಳನ್ನು ವಿಶೇಷ ಪರಿಣಾಮಗಳು ಮತ್ತು ಆನಿಮೇಷನ್ ಬಳಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಾಯಿತು; ಡಿಸ್ನಿ ಚಿತ್ರ 1937 ರಲ್ಲಿ ತಯಾರಿಸಿದ ಸ್ನೋ ವೈಟ್ ಅಂಡ್ ದಿ ಸೆವೆನ್ ಢ್ವಾರ್ಫ್ಸ್ ಚಲನಚಿತ್ರವು ಕಾಲ್ಪನಿಕ ಕಥೆಗಳಲ್ಲದೆ ಸಾಮಾನ್ಯವಾಗಿ ಫ್ಯಾಂಟಸಿಯ ಅಭೂತಪೂರ್ವ ಚಿತ್ರವೆನಿಸಿತು.[೬೪] ಡಿಸ್ನಿ ಯ ಪ್ರಭಾವದಿಂದ ಈ ಪ್ರಕಾರದ ಕಥೆಗಳು ಮಕ್ಕಳ ಕಥೆಗಳಾಗಿ ನೆಲೆ ಕಂಡುಕೊಂಡವು. ಡಿಸ್ನಿ ತಾನು ಆಯ್ದುಕೊಂಡ ಅನೇಕ ಕಾಲ್ಪನಿಕ ಕಥೆಗಳಲ್ಲಿನ ನೋವು ಮತ್ತು ಸಂಕಟ ಹಾಗೂ ದುಃಖಾಂತ್ಯದ ದ್ರಶ್ಯಗಳನ್ನು ತೆಗೆದು ಎಲ್ಲವೂ ಸುಖಾಂತ್ಯಗೊಳ್ಳುವಂತೆ ಸರಳೀಕರಣ ಮಾಡಿದ್ದಕ್ಕಾಗಿ ಟೀಕಿಸಲಾಯಿತು.[೬೯]

ಡಿಸ್ನಿಯ ನಂತರದ ಅನೇಕ ಚಿತ್ರಗಳಿಂದ ಹಿಡಿದು ಅಲೆಕ್ಸಾಂಡರ್ ರೌ ಮರುನಿರೂಪಣೆ ವಾಸಿಲಿಸ್ಸಾ ದಿ ಬ್ಯೂಟಿಫುಲ್ , ರಷ್ಯಾದ ಜನಪದ ಕಥೆಗಳನ್ನು ಬಳಸಿಕೊಂಡು ತಯಾರಿಸಲಾದ ದೊಡ್ಡ ಬಜೆಟ್‌ನ ಸೋವಿಯತ್ ಚಲನಚಿತ್ರ.[೭೫] ಇತರರು ಕಾಲ್ಪನಿಕ ಕಥೆಗಳ ಸಂಪ್ರದಾಯಗಳನ್ನು ಬಳಸಿಕೊಂಡು ಸಮಕಾಲೀನ ಜೀವನಕ್ಕೆ ಪ್ರಸ್ತುತವಾದ ಭಾವನೆಗಳನ್ನು ಸೇರಿಸಿ ಹೊಸ ಕಥೆಗಳನ್ನು ತಯಾರಿಸಿದರು. ಅವುಗಳೆಂದರೆ ಲ್ಯಾಬಿರಿಂತ್,[೭೬] ಮೈ ನೇಬರ್ ತೊಟೋರೋ , ಮಿಷೆಲ್ ಅಸೆಲಾಟ್ ರ ಚಲನಚಿತ್ರಗಳು,[೭೭] ಮತ್ತು ಹ್ಯಾಪಿಲಿ ನ'ಎವರ್ ಆಫ್ಟರ್ .

ಇನ್ನಿತರ ಕೃತಿಗಳಲ್ಲಿ ಚಿರಪರಿಚಿತವಾದ ಕಾಲ್ಪನಿಕ ಕಥೆಗಳನ್ನು ವಯಸ್ಕರ ಅಭಿರುಚಿಯನ್ನು ಗುರಿಯಾಗಿಟ್ಟುಕೊಂಡು,ಕರಾಳವಾಗಿ, ಹೆಚ್ಚು ಭಯಾನಕ ಅಥವಾ ಮನೋವೈಜ್ಞಾನಿಕ ವ್ಯತ್ಯಾಸಗಳೊಂದಿಗೆ ಮರುನಿರೂಪಣೆ ಮಾಡಲಾಗಿದೆ. ಇವುಗಳಿಗೆ ಅತ್ಯುತ್ತಮ ಉದಾಹರಣೆಗಳೆಂದರೆ, ಎಂಜಲಾ ಕಾರ್ಟರ್ ಮರುಸೃಷ್ಟಿಸಿದ ಲಿಟಲ್ ರೆಡ್ ರೈಡಿಂಗ್ ಹುಡ್ ಕಥೆಯನ್ನು ಆಧರಿಸಿ ಬರೆದ ಜೀನ್ ಕಾಕ್ಟೆ ಯವರ ಬ್ಯೂಟಿ ಅಂಡ್ ದಿ ಬೀಸ್ಟ್ [೭೮] ಮತ್ತು ದಿ ಕಂಪನಿ ಆಫ್ ವುಲ್ವ್ಸ್ ಕಥೆಗಳು.[೭೯] ಹಾಗೆಯೇ, ಪ್ರಿನ್ಸೆಸ್ ಮೊನೋನೋಕಿ ,[೮೦] ಪ್ಯಾನ್ ರಿಂದ ರಚಿಸಲಾದ ಲ್ಯಾಬಿರಿಂತ್ [೮೧] ಮತ್ತು ಇನ್ನೊಂದು ಕಥೆಯಾದ ಸ್ಪೈಕ್ [೮೨] ಕಾಲ್ಪನಿಕ ಕಥೆಗಳು ಮತ್ತು ಕಾಲ್ಪನಿಕ ಕಥೆಗಳ ಲಕ್ಷಣಗಳನ್ನು ಆಯ್ದು ಈ ಪ್ರಕಾರದ ಹೊಸ ಕಥೆಗಳನ್ನು ಸೃಷ್ಟಿಸಿದರು.

ಮಕ್ಕಳ ಕಥೆಗಳು (ಕಾಮಿಕ್ಸ್) ಮತ್ತು ಎನಿಮೆಟೆಡ್ ಟಿ. ವಿ. ಕಾರ್ಯಕ್ರಮಗಳಾದ ದಿ ಸ್ಯಾಂಡ್ ಮ್ಯಾನ್ , ರೆವಲ್ಯುಶನರಿ ಗರ್ಲ್ ಯುಟೆನಾ , ಪ್ರಿನ್ಸೆಸ್ ಟುಟು , ಫೆಬಲ್ಸ್ ಮತ್ತು ಮೇರ್ ಗಳಲ್ಲಿ ಉತ್ತಮ ದರ್ಜೆಯ ಕಾಲ್ಪನಿಕ ಕಥೆಗಳ ಅಂಶಗಳನ್ನು ವಿವಿಧ ಪ್ರಮಾಣಗಳಲ್ಲಿ ಬಳಸಿಕೊಂಡವು. ಆದರೆ ಉದ್ದದ ಕಥೆ ಅಗತ್ಯವಿದ್ದ,ನಿರ್ದಿಷ್ಟ ಸ್ಥಳಗಳು ಮತ್ತು ಪಾತ್ರಗಳನ್ನೂ ಹೊಂದಿದ್ದರಿಂದ ಅವುಗಳನ್ನು ಫೇರಿ ಟೇಲ್ ಫ್ಯಾಂಟಸಿ ಎಂದು ವರ್ಗೀಕರಿಸಲಾಯಿತು.

ತೀರ ಆಧುನಿಕ ಸಿನಿಮಾ ಮಾದರಿಯ ಕಾಲ್ಪನಿಕ ಕಥೆಯೆಂದರೆ,ಲುಚಿನೋ ವಿಸ್ಕಂಟಿ ರಚಿಸಿದ ಹಾಗೂ ತಾನು ಸುಪ್ರಸಿದ್ಧ ನಟನಾಗುವ ಮುಂಚೆ ಮಾರ್ಸೆಲೋ ಮಾಸ್ಟ್ರಿ ನಟಿಸಿದ ಲೆ ನೋಟ್ಟಿ ಬಿಯಾಂಚೆ . ಇದರಲ್ಲಿ ಕಾಲ್ಪನಿಕ ಕಥೆಗಳ ಅನೇಕ ರಮ್ಯ ಸಂಪ್ರದಾಯಗಳನ್ನು ಹೊಂದಿದ್ದರೂ, II ನೇ ವಿಶ್ವ ಯುದ್ಧ ದ ನಂತರದ ಇಟಲಿ ದೇಶದಲ್ಲಿ ಸಂಭವಿಸಿದ್ದು, ವಾಸ್ತವಿಕವಾಗಿ ಅಂತ್ಯಗೊಳ್ಳುತ್ತದೆ.

ಲಕ್ಷಣಗಳು

[ಬದಲಾಯಿಸಿ]
ಚಿತ್ರ:Warwick goble beauty and beast.jpg
ವಾರ್ವಿಕ್ ಗೊಬಲ್ ಬರೆದ ಚಿತ್ರ ಬ್ಯೂಟಿ ಅಂಡ್ ದಿ ಬೀಸ್ಟ್

ಕಾಲ್ಪನಿಕ ಕಥೆಗಳನ್ನು ಹೋಲಿಸಿ ನೋಡಿದಾಗ ಕಂಡುಬರುವ ಸಂಗತಿಯೆಂದರೆ, ಅನೇಕ ಕಥೆಗಳು ಒಂದೇ ತರಹದ ಲಕ್ಷಣಗಳನ್ನು ಹೊಂದಿವೆ. ಈ ರೀತಿಯ ವರ್ಗೀಕರಣಗಳಲ್ಲಿ ಅತಿ ಪ್ರಮುಖವಾದ ಎರಡು ವರ್ಗೀಕರಣಗಳೆಂದರೆ ಆಂಟಿ ಆರ್ನೆಯದ್ದು. ಸ್ಟಿತ್ ಥಾಂಪ್ಸನ್ ಆರ್ನೆ-ಥಾಮ್ಸನ್ ವರ್ಗೀಕರಣ ಪದ್ಧತಿಯಾಗಿ ಇದನ್ನು ನವೀಕರಿಸಿದರು ಹಾಗೂ ವ್ಲಾಡಿಮಿರ್ ಪ್ರಾಪ್ (/0)ರ ಮಾರ್ಫಲಜಿ ಆಫ್ ದಿ ಫೋಕ್ ಟೇಲ್ .

ಆರ್ನೆ-ಥಾಂಪ್ಸನ್

[ಬದಲಾಯಿಸಿ]

ಈ ಪದ್ಧತಿಯು ಕಾಲ್ಪನಿಕ ಮತ್ತು ಜನಪದ ಕಥೆಗಳನ್ನು ಅವುಗಳ ಪೂರ್ಣ ಕಥಾ ವಸ್ತುವಿನ ಆಧಾರದ ಮೇಲೆ ವರ್ಗೀಕರಿಸುತ್ತದೆ. ಸಾಮಾನ್ಯವಾದ ಗುರುತಿನ ಲಕ್ಷಣಗಳನ್ನು ಆಯ್ಕೆ ಮಾಡಿ ಯಾವ ಯಾವ ಕಥೆಗಳು ಜೊತೆಯಾಗಿ ವರ್ಗೀಕರಿಸಲಾಗಿವೆ ಎಂಬುದನ್ನು ನಿರ್ಧರಿಸಲಾಗುವುದು. ಯಾವ ಲಕ್ಷಣಗಳು ನಿರ್ಧಾರಕ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ಉದಾಹರಣೆಗೆ, ಸಿಂಡರೆಲ್ಲಾ ದಂತಹ ಕಥೆಗಳನ್ನು ವಿಧ 510 ಅಂದರೆ, ಕಿರುಕುಳಕ್ಕೆ ಗುರಿಯಾದ ನಾಯಕಿ ಎಂದು ವರ್ಗೀಕರಿಸಲಾಗಿದೆ. ಸಿಂಡರೆಲ್ಲಾ ಕಥೆಯಲ್ಲಿ ಕಿರುಕುಳಕ್ಕೆ ಈಡಾದ ನಾಯಕಿಯು ಒಬ್ಬ ಮಂತ್ರ ಶಕ್ತಿಗಳನ್ನು ಹೊಂದಿರುವ ದೇವಮಾತೆ ಯ ಅಥವಾ ಮಾಯಾ ಶಕ್ತಿ ಹೊಂದಿದ ಸಹಾಯಕ ನ ನೆರವಿನಿಂದ ಒಂದು ಸನ್ನಿವೇಶದಲ್ಲಿ(ಅಥವಾ ಮೂರು) ಪಾಲ್ಗೊಂಡು, ಒಬ್ಬ ಯುವರಾಜನ ಪ್ರೀತಿ ಗೆಲ್ಲುತಾಳೆ ಮತ್ತು ಅವನ ನಿಜವಾದ ವಧು ಎಂದು ಗುರುತಿಸಲ್ಪಡುತ್ತಾಳೆ. ಇದೇ ತರಹದ ಕೆಲವು ಕಥೆಗಳೆಂದರೆ, ದಿ ವಂಡರ್ಫುಲ್ ಬರ್ಚ್ , ಅಶ್ಚೆನ್‌ಪುಟೆಲ್ , ಕೇಟಿ ವುಡನ್ ಕ್ಲೋಕ್ , ದಿ ಸ್ಟೋರಿ ಆಫ್ ಟ್ಯಾಮ ಅಂಡ್ ಕ್ಯಾಮ , ಯೆ ಝಿಯಾನ್ , ಕ್ಯಾಪ್ ಓ' ರಶಸ್ , ಕ್ಯಾಟ್ ಸ್ಕಿನ್ , ಫೇರ್, ಬ್ರೌನ್ ಅಂಡ್ ಟ್ರೆಮ್ಬ್ಲಿಂಗ್ , ಫೈನೆಟ್ ಸಿಂಡ್ರೋನ್ , ಅಲ್ಲೆರ್‌ಲೈರಾ , ಮತ್ತು ಟ್ಯಾಟರ್ ಕೋಟ್ಸ್ .

ಈ ಕಥೆಗಳನ್ನು ಮತ್ತಷ್ಟು ವಿಶ್ಲೇಷಿಸಿದಾಗ ಕಂಡುಬರುವ ವಿಷಯವೆಂದರೆ, ಸಿಂಡರೆಲ್ಲಾ , ದಿ ವಂಡರ್ಫುಲ್ ಬರ್ಚ್ , ದಿ ಸ್ಟೋರಿ ಆಫ್ ಟ್ಯಾಮ ಅಂಡ್ ಕ್ಯಾಮ , ಯೆ ಝಿಯಾನ್ , ಮತ್ತು ಅಶ್ಚೆನ್‌ಪುಟೆಲ್ ಕಥೆಗಳಲ್ಲಿ ನಾಯಕಿಯು ತನ್ನ ಮಲತಾಯಿಯಿಂದ ಕಿರುಕುಳ ಅನುಭವಿಸುತ್ತಾಳೆ ಮತ್ತು ಬಾಲ್ ನೃತ್ಯ ಅಥವಾ ಇತರೆಸಮಾರಂಭಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಲಾಗುತ್ತದೆ. ಫೇರ್, ಬ್ರೌನ್ ಅಂಡ್ ಟ್ರೆಮ್ಬ್ ಲಿಂಗ್ ಹಾಗೂ ಫಿನೆಟ್ ಸಿಂಡ್ರೋನ್‌ಗಳಲ್ಲಿ ನಾಯಕಿಯು ತನ್ನ ಸಹೋದರಿಯರು ಮತ್ತು ಇತರ ಮಹಿಳೆಯರಿಂದ ಕಿರುಕುಳಅನುಭವಿಸುತ್ತಾಳೆ. ಈ ಕಥೆಗಳನ್ನು 510A ಗುಂಪಾಗಿ ವರ್ಗೀಕರಿಸಲಾಗಿದೆ. ಅದೇ ನಾಯಕಿಯು ತನ್ನ ಸ್ವಂತ ತಂದೆಯಿಂದ ಕಿರುಕುಳಗಳನ್ನು ಅನುಭವಿಸಿ ಮನೆಯಿಂದ ಓಡಿ ಹೋಗಿ, ಬೇರೆ ಕಡೆ ಅಡುಗೆ ಕೆಲಸ ನೋಡಿಕೊಳ್ಳುವ ಕ್ಯಾಪ್ ಓ' ರಶಸ್ , ಕ್ಯಾಟ್ ಸ್ಕಿನ್, ಮತ್ತು ಅಲ್ಲೆರ್‌ಲೈರಾ ಕಥೆಗಳನ್ನು 510B ಗುಂಪಾಗಿ ವರ್ಗೀಕರಿಸಲಾಗಿದೆ. ಆದರೆ, ಕ್ಯಾಟಿ ವುಡನ್ ಕ್ಲೋಕ್ ಕಥೆಯಲ್ಲಿ ನಾಯಕಿ ತನ್ನ ಮಲತಾಯಿಯಿಂದ ಕಿರುಕುಳ ಅನುಭವಿಸಿ, ಮನೆಯಿಂದ ಓಡಿ ಹೋಗಿ ಬೇರೆ ಕಡೆ ಅಡುಗೆ ಕೆಲಸ ಮಾಡುತ್ತಾಳೆ ಮತ್ತು ಟ್ಯಾಟರ್ ಕೋಟ್ಸ್ ಕಥೆಯಲ್ಲಿ ತನ್ನ ಅಜ್ಜನಿಂದಲೇ ಬಾಲ್ ನೃತ್ಯ ಅಥವಾ ಸಮಾರಂಭಗಳಿಗೆ ಹೋಗಲು ನಾಯಕಿಗೆ ನಿರಾಕರಿಸಲಾಗುತ್ತದೆ. ಈ ಕಥೆಗಳ ಲಕ್ಷಣಗಳು 510 ರ ಎರಡೂ ಗುಂಪುಗಳಿಗೆ ಸಾಮಾನ್ಯವಾಗಿರುವುದರಿಂದ, ಕ್ಯಾಟಿ ವುಡ್ ಕ್ಲೋಕ್ ಕಥೆಯನ್ನು 510 ಎ ಗುಂಪಿಗೆ ವರ್ಗೀಕರಿಸಲಾಗುತ್ತದೆ. ಏಕೆಂದರೆ, ಈ ಕಥೆಯಲ್ಲಿ ಮಲತಾಯಿಯು ಖಳನಾಯಕಿಯಾಗಿದ್ದಾಳೆ. ಹಾಗೆಯೇ ಟ್ಯಾಟರ್ ಕೋಟ್ಸ್ ಕಥೆಯನ್ನು 510 ಬಿ ಗುಂಪಿಗೆ ಸೇರಿಸಲಾಗುತ್ತದೆ. ಏಕೆಂದರೆ, ಈ ಕಥೆಯಲ್ಲಿ ತಂದೆಯ ಪಾತ್ರವನ್ನು ಅಜ್ಜನು ತುಂಬುತ್ತಾನೆ.

ಈ ಪದ್ಧತಿಯಲ್ಲಿ ಒಂದು ಕಥೆಯಲ್ಲಿ ಬರುವ ಉಪಭಾಗಗಳನ್ನು ಲಕ್ಷಣಗಳಾಗಿ ವರ್ಗೀಕರಿಸಲು ಈ ಪದ್ಧತಿಗೆ ಸಾಧ್ಯವಿಲ್ಲ. ರಾಪುಂಜೆಲ್ 310 ವಿಧದ (ಗೋಪುರದಲ್ಲಿ ಬಂಧಿತ ಚೆಲುವೆ) ಗುಂಪಿಗೆ ಸೇರಿಸಲಾಗಿದೆ.ಪುಡೋಕಿ ರೀತಿಯಲ್ಲಿ ಕಳುವು ಮಾಡಿದ ಆಹಾರಕ್ಕೆ ಪ್ರತಿಯಾಗಿ ಮಗುವನ್ನು ಬೇಡುವ ದೃಶ್ಯದಿಂದ ಪ್ರಾರಂಭವಾಗುವ ಕಥೆ - ಆದರೆ ಪುಡೋಕಿ ಟವರ್ ಕಥೆಯ ಕನ್ಯೆಯಲ್ಲ.ಆದರೆ ಹೊಟ್ಟೆಕಿಚ್ಚಿನ ಮಲತಾಯಿಯೊಂದಿಗೆ ಆರಂಭವಾಗುವ ಕ್ಯಾನರಿ ಪ್ರಿನ್ಸ್‌ನಲ್ಲಿ ಕನ್ಯೆಯಿರುರುತ್ತಾಳೆ.

ಈ ವರ್ಗೀಕರಣ ಪದ್ಧತಿಯು ಸಾಮಾನ್ಯವಾದ ಅಂಶಗಳಿಗೆ ಯಾವ ಪ್ರಮಾಣದ ಮಹತ್ವ ನೀಡುತ್ತದೆಂದರೆ, ಜನಪದ ಸಾಹಿತಿಗಳು ದಿ ಬ್ಲಾಕ್ ಬುಲ್ ಆಫ್ ನೋರೋವೆ ಮತ್ತು ಬ್ಯೂಟಿ ಅಂಡ್ ದಿ ಬೀಸ್ಟ್ ಎರಡೂ ಒಂದೇ ತೆರನಾದ ಕಥೆ ಒಳಗೊಂಡಿವೆ ಎಂದು ವರ್ಣಿಸುವಂತಾಗಿದೆ. ಈ ಪದ್ಧತಿಯು ಸಾಂಕೇತಿಕ ಅಭಿವ್ಯಕ್ತಿಯಾಗಿ ಉಪಯುಕ್ತವಾಗಿದ್ದು, ಕಥೆಯ ರೂಪ ಮತ್ತು ವಿವರಗಳನ್ನು ಅಳಿಸಿಹಾಕಬಹುದು.[೮೩]

ಶಬ್ದ ರಚನೆಯ ಅಧ್ಯಯನ

[ಬದಲಾಯಿಸಿ]

ವ್ಲಾಡಿಮಿರ್ ಪ್ರಾಪ್ ರು ರಶಿಯನ್ ಕಾಲ್ಪನಿಕ ಕಥೆಗಳ ಸಂಗ್ರಹವನ್ನು ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಆದರೆ, ಈ ಅಧ್ಯಯನವು ಬೇರೆ ದೇಶಗಳ ಕಥೆಗಳಿಗೆ ಪ್ರಯೋಜನಕಾರಿಯಾಗಿದೆ.[೮೪]

ಫಾದರ್ ಫ್ರಾಸ್ಟ್‌ನು ನಾಯಕಿಗೆ ವರ ನೀಡುವ ಮೊದಲು ಅವಳನ್ನು ಪರೀಕ್ಷಿಸುವ ವರದೇವತೆಯಾಗಿ ನಟಿಸಿರುವ ರಶಿಯಾದ ಕಾಲ್ಪನಿಕ ಕಥೆ - ಫಾದರ್ ಫ್ರಾಸ್ಟ್.

ಕಥೆಗಳಲ್ಲಿ ಲಕ್ಷಣಗಳನ್ನು ಕಡೆಗಣಿಸಿದ್ದಕ್ಕೆ ಹಾಗೂ ಬಳಸಿದ ಲಕ್ಷಣಗಳು ಸ್ಪಷ್ಟ ಖಚಿತತೆ ಹೊಂದಿಲ್ಲದೇ ಇರುವುದಕ್ಕಾಗಿ ಆರ್ನೆ-ಥಾಮ್ಸನ್ ವಿಧದ ವಿಶ್ಲೇಷಣೆಯನ್ನು ಟೀಕಿಸಿದರು ಹಾಗೂ ಪ್ರತಿ ಪಾತ್ರದ ಕಾರ್ಯನಿರ್ವಹಣೆ ಮತ್ತು ಪೂರ್ಣಗೊಳಿಸಿದ ಕಾರ್ಯದ ಬಗ್ಗೆ ಕಥೆಗಳನ್ನು ವಿಶ್ಲೇಷಿಸಿ, ಕಥೆಯು ಮೂವತ್ತೊಂದು ಲಕ್ಷಣಗಳನ್ನು ಹೊಂದಿದೆ ಮತ್ತು 8 ಪಾತ್ರ ವಿಧಗಳನ್ನು ಹೊಂದಿದೆಯೆಂದು ಪೂರ್ಣಗೊಳಿಸಿದರು. ಎಲ್ಲ ಕಥೆಗಳಿಗೆ ಲಕ್ಷಣಗಳು ಅಗತ್ಯವಾಗಿಲ್ಲದಿದ್ದರೂ, ಅವು ಬದಲಾಗದ ರೀತಿಯಲ್ಲಿ ಕಾಣಿಸಿಕೊಂಡವು-ಅದಕ್ಕೆ ಹೊರತಾಗಿ ಪ್ರತಿ ವ್ಯಕ್ತಿಯ ಲಕ್ಷಣವನ್ನು ಎರಡು ಬಾರಿ ಇಲ್ಲವಾಗಿಸಿರಬಹುದು,ಹೀಗಾಗಿ ಅದು ಮೂರು ಬಾರಿ ಕಾಣಿಸಿಕೊಂಡಿರುತ್ತದೆ,ಬ್ರದರ್ ಮತ್ತು ಸಿಸ್ಟರ್‌ನಲ್ಲಿ, ಸಹೋದರನು ಮಾಯಾವಿ ತೊರೆಗಳಿಂದ ನೀರು ಕುಡಿಯಲು ವಿರೋಧಿಸುತ್ತಾನೆ.ಆದರೆ ಮೂರನೇ ಬಾರಿ ಮರುಳಾಗುತ್ತಾನೆ.

ಅಂತಹ ಒಂದು ಲಕ್ಷಣವೆಂದರೆ ಡೋನರ್(ಮಂತ್ರ ವಿದ್ಯೆಯ ನೆರವು).ನಾಯಕನಿಗೆ ಮಾಂತ್ರಿಕ ವಿದ್ಯೆಯ ನೆರವು ನೀಡುತ್ತದೆ. ಈ ಲಕ್ಷಣವು ನಾಯಕನನ್ನು ಆಗಾಗ್ಗೆ ಪರೀಕ್ಷಿಸಿ ನಂತರ ಮಾಯದ ನೆರವು ನೀಡುತ್ತದೆ.[೮೫] ದಿ ಗೋಲ್ಡನ್ ಬರ್ಡ್ ಕಥೆಯಲ್ಲಿ ಮಾತನಾಡುವ ನರಿ ಯೊಂದು ನಾಯಕನಿಗೆ ವಸತಿಗೃಹದ ಒಳಗೆ ಹೋಗದಂತೆ ಎಚ್ಚರಿಕೆ ನೀಡುತ್ತದೆ. ಆ ಪರೀಕ್ಷೆಯಲ್ಲಿ ನಾಯಕ ಯಶಸ್ವಿಯಾದ ನಂತರ, ನರಿಯು ಆತನು ಶೋಧಿಸುವ ವಸ್ತುವನ್ನು ಹುಡುಕಲು ಸಹಾಯ ಮಾಡುತ್ತದೆ. ದಿ ಬಾಯ್ ಹು ಡ್ರೂ ಕ್ಯಾಟ್ಸ್ ಕಥೆಯಲ್ಲಿ ಒಬ್ಬ ಅರ್ಚಕನು ನಾಯಕನಿಗೆ ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ರಾತ್ರಿ ಹೊತ್ತು ಚಿಕ್ಕ ಪುಟ್ಟ ಸ್ಥಳಗಳಲ್ಲಿ ಉಳಿದುಕೊಳ್ಳುವಂತೆ ಸಲಹೆ ನೀಡುತ್ತಾನೆ. ಸಿಂಡರೆಲ್ಲಾ ಕಥೆಯಲ್ಲಿ ನಾಯಕಿ ಸಿಂಡರೆಲ್ಲಾ ಗೆ ಸಮಾರಂಭ ಅಥವಾ ಬಾಲ್ ನೃತ್ಯಕ್ಕೆ ಹೋಗಲು ಬೇಕಾದ ಒಳ್ಳೆಯ ಬಟ್ಟೆಗಳನ್ನು ಮಂತ್ರಶಕ್ತಿ ಹೊಂದಿರುವ ದೇವಮಾತೆ ಕೊಡುತ್ತಾಳೆ. ಇದೇ ರೀತಿಯಾಗಿ ಒಳ್ಳೆಯ ಬಟ್ಟೆಗಳನ್ನು ನಾಯಕಿಯರಿಗೆ ಅವರ ತಾಯಂದಿರ ಆತ್ಮಗಳು ಕೊಡುವ ದೃಶ್ಯಗಳಿರುವ ಕಥೆಗಳೆಂದರೆ, ಬವಾಂಗ್ ಪುತಿ ಬವಾಂಗ್ ಮೇರಾ ಮತ್ತು ದಿ ವಂಡರ್ಫುಲ್ ಬರ್ಚ್ . ದಿ ಫಾಕ್ಸ್ ಸಿಸ್ಟರ್ ಕಥೆಯಲ್ಲಿ ಒಬ್ಬ ಬೌದ್ಧ ಸನ್ಯಾಸಿಯು ನರಿಯ ಆತ್ಮದಿಂದ ರಕ್ಷಿಸಿಕೊಳ್ಳಲು ಸಹೋದರರಿಗೆ ಮಂತ್ರ ಹಾಕಿದ ಭರಣಿಗಳನ್ನು ಕೊಡುತ್ತಾನೆ. ಈ ಪಾತ್ರಗಳು ಜಟಿಲವಾಗಿಯೂ ಇರಬಹುದು.[೮೬] ದಿ ರೆಡ್ ಎಟನ್ ಕಥೆಯಲ್ಲಿ ಪಾತ್ರವು ಹಂಚಿಹೋಗಿದೆ. ಒಂದು ಪಾತ್ರವು ತಾಯಿಯದಾಗಿದ್ದು, ಅವಳು ನಾಯಕನಿಗೆ ಇಡಿಯಾದ ಪ್ರವಾಸದ ಕೇಕ್ ಅಥವಾ ಸಿಹಿ ತಿಂಡಿಯನ್ನು ತನ್ನ ಶಾಪದೊಂದಿಗೆ ಅಥವಾ ಅರ್ಧ ಆಶೀರ್ವಾದದೊಂದಿಗೆ ನೀಡುತ್ತಾಳೆ ಮತ್ತು ಇನ್ನೊಂದು ಪಾತ್ರ ಒಂದು ಯಕ್ಷಿಣಿಯಾಗಿದ್ದು, ಇವಳು ನಾಯಕನಿಗೆ ಆ ಸಿಹಿ ತಿಂಡಿಯ ಕುರಿತು ಸಲಹೆ ನೀಡುತ್ತಾಳೆ. ಮಿ. ಸಿಮಿಗ್ದಲಿ ಕಥೆಯಲ್ಲಿ ಸೂರ್ಯ, ಚಂದ್ರ ಮತ್ತು ಚುಕ್ಕಿಗಳೆಲ್ಲವೂ ನಾಯಕಿಗೆ ಒಂದು ಮಾಯಾ ಕಾಣಿಕೆಯನ್ನು ನೀಡುತ್ತವೆ.ಸದಾ ಡೋನರ್(ಮಂತ್ರದ ನೆರವು ನೀಡುವ) ಪಾತ್ರಗಳೂ ಸಹ ಡೋನರ್ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಗೊತ್ತಾಗುತ್ತದೆ.[೮೭] ಕಲ್ಲೋ ಅಂಡ್ ದಿ ಗಾಬ್ಲಿನ್ಸ್ ಕಥೆಯಲ್ಲಿ,ಖಳನಾಯಕ ಗಾಬ್ಲಿನ್‌ಗಳು ಮೋಸ ಹೋಗಿ ನಾಯಕಿಗೆ ಕಾಣಿಕೆಗಳನ್ನು ನೀಡುತ್ತಾರೆ. ಸ್ಕಿಪ್ಪೈಟಾರೊ ಕಥೆಯಲ್ಲಿ ಮೋಸಕ್ಕೆ ಒಳಗಾದ ದುಷ್ಟ ಬೆಕ್ಕು ಗಳು ನಾಯಕನಿಗೆ ತಮ್ಮನ್ನು ಸೋಲಿಸುವ ದಾರಿ ತಾವೇ ಹೇಳಿಕೊಡುತ್ತವೆ. ದಿ ಸ್ಟೋರಿ ಆಫ್ ದಿ ಯೂತ್ ಹು ವೆಂಟ್ ಫೋರ್ತ್ ಟು ಲರ್ನ್ ವಾಟ್ ಫಿಯರ್ ವಾಸ್ ಗಳಂತಹ ಕಾಲ್ಪನಿಕ ಕಥೆಗಳಲ್ಲಿ ಡೋನರ್ ಲಕ್ಷಣದ ಪಾತ್ರಗಳೇ ಬರುವುದಿಲ್ಲ.

ಇಂತಹ ವಿಶ್ಲೇಷಣೆ ಮತ್ತು ನಾಯಕನ ಪ್ರಯಾಣ ದ ಕುರಿತಾಗಿರುವ ರೂಪಕಕಥೆಗಳ ವಿಶ್ಲೇಷಣೆಯ ನಡುವೆ ಹೋಲಿಕೆಗಳನ್ನು ಮಾಡಲಾಗಿದೆ.[೮೮]

ಕಥೆಗಳಲ್ಲಿನ ಧ್ವನಿ, ಮಾನಸಿಕ ಸ್ಥಿತಿ, ಪಾತ್ರಗಳು ಮತ್ತು ಒಂದು ಕಥೆ ಇನ್ನೊಂದು ಕಥೆಗಿಂತ ಬೇರೆ ಎಂದು ತೋರಿಸುವ ಅನೇಕ ಅಂಶಗಳನ್ನು ಕಡೆಗಣಿಸಿದ್ದಕ್ಕಾಗಿ ಈ ವಿಶ್ಲೇಷಣೆಯನ್ನು ಟೀಕಿಸಲಾಗಿದೆ.[೮೯]

ಅರ್ಥವಿವರಣೆಗಳು

[ಬದಲಾಯಿಸಿ]

ವಿವಿಧ ಕಥೆಗಳು, ಅದರಲ್ಲಿಯೂ ಮಕ್ಕಳಿಗಾಗಿ ಬರೆದ ಕಥೆಗಳು, ನೀತಿಗಳನ್ನು ಒಳಗೊಂಡಿದ್ದವು. ಪೆರಾಲ್ಟ್‌ ಕಥೆಗಳು ಸಂಪೂರ್ಣವಾಗಿ ನೈತಿಕವಾಗಿರದಿದ್ದರೂ,ಒಂದು ನೀತಿಯಿಂದ ಆವೃತ್ತಿಗಳನ್ನು ಮುಗಿಸುತ್ತಿದ್ದನು. ಸಿಂಡರೆಲ್ಲಾ ಕಥೆಯು ನಾಯಕಿಯ ಸೌಂದರ್ಯ ಮತ್ತು ಗುಣ ಇವೆರಡೂ ದೇವಮಾತೆ ಇಲ್ಲದಿದ್ದರೆ ನಿರುಪಯುಕ್ತ ಎಂಬ ಅಭಿಪ್ರಾಯದೊಂದಿಗೆ ಅಂತ್ಯಗೊಳ್ಳುತ್ತದೆ. ಸಾಮಾಜಿಕ ಸಂಬಂಧಗಳ ಪ್ರಾಮುಖ್ಯತೆ ಅಗತ್ಯವನ್ನು ಬಿಂಬಿಸುತ್ತದೆ.ಆದರೆ ಆಧ್ಯಾತ್ಮಿಕ ಅರ್ಥವನ್ನು ಸಂಕೇತಿಸುತ್ತದೆ.[೯೦]

ಅನೇಕ ಕಾಲ್ಪನಿಕಕಥೆಗಳನ್ನು (ಕಲ್ಪಿಸಲಾದ) ಪ್ರಾಮುಖ್ಯತೆಯಿಂದ ವ್ಯಾಖ್ಯಾನಿಸಲಾಗಿದೆ. ಒಂದು ಪೌರಾಣಿಕ ವ್ಯಾಖ್ಯಾನದ ಪ್ರಕಾರ ಹ್ಯಾನ್ಸೇಲ್ ಅಂಡ್ ಗ್ರೆಟಲ್ , ಸ್ಲೀಪಿಂಗ್ ಬ್ಯೂಟಿ ಮತ್ತು ದಿ ಫ್ರಾಗ್ ಕಿಂಗ್ ಒಳಗೊಂಡಂತೆ ಅನೇಕ ಕಾಲ್ಪನಿಕ ಕಥೆಗಳು ಸೂರ್ಯದೇವತೆ ದಂತಕಥೆಗಳಾಗಿದ್ದವು. ಇಂದು ಈ ವಿಧಾನದ ಅರ್ಥವಿವರಣೆಯ ಜನಪ್ರಿಯತೆ ಕಡಿಮೆ ಆಗಿದೆ.[೯೧] ಇನ್ನೂ ಅನೇಕ ಕಥೆಗಳು ಫ್ರಾಯ್ಡ್ ಸಿದ್ಧಾಂತ, ಯೂಂಗ್ ಸಿದ್ಧಾಂತ ಮತ್ತು ಇತರ ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ಒಳಪಟ್ಟರೂ, ಯಾವ ವಿಧಾನವೂ ನಿರ್ದಿಷ್ಟವಾದ ವ್ಯಾಖ್ಯಾನ ನೀಡಲು ಸಾಧ್ಯವಾಗಿಲ್ಲ.

ನಿರ್ದಿಷ್ಟ ವಿಶ್ಲೇಷಣೆಗಳನ್ನು ಆಗಾಗ್ಗೆ ಕಥೆಗಳಲ್ಲಿ ಅಷ್ಟೊಂದು ಅವಿಭಾಜ್ಯ ಅಂಗವಾಗಿರದ ಲಕ್ಷಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರಿಂದ ಟೀಕೆಗೆ ಗುರಿಯಾದವು.ಕಾಲ್ಪನಿಕ ಕಥೆಯ ಒಂದು ನಿದರ್ಶನವನ್ನು ಖಾತರಿಯ ಪಠ್ಯ ಎಂದು ಪರಿಗಣಿಸುವುದರಿಂದ ಇದು ಸಾಮಾನ್ಯವಾಗಿ ಉದ್ಭವಿಸಿದೆ. ಆದರೆ ಕಥೆಯನ್ನು ವಿವಿಧ ರೀತಿಗಳಲ್ಲಿ ನಿರೂಪಿಸಿ, ಮರುನಿರೂಪಿಸಲಾಗಿತ್ತು.[೯೨] ಬೇರೆ ಬೇರೆ ರೀತಿಯಲ್ಲಿ ಬರೆಯಲಾದ ಬ್ಲೂ ಬಿಯರ್ಡ್ ಕಥೆಗಳಲ್ಲಿ ಹೆಂಡತಿಯ ಕುತೂಹಲವನ್ನು ರಕ್ತದ ಕಲೆ ಗಳಿರುವ ಬೀಗ ಅಥವಾ ಕೀಲಿ ಕೈ, ಒಡೆದು ಹೋಗುವ ಮೊಟ್ಟೆ ಅಥವಾ ಅವಳು ಮುಡಿದಿದ್ದ ಹಾಡುವ ಗುಲಾಬಿ ಹೂ ಇವೆಲ್ಲವೂ ವಂಚಿಸುತ್ತವೆ. ಆದರೆ, ನಿರ್ದಿಷ್ಟ ವಿಧಗಳ ಅರ್ಥವಿವರಣೆಗಳಲ್ಲಿ ಒಂದು ನಿಖರ ವಸ್ತು ಕಥೆಗೆ ಅವಿಭಾಜ್ಯ ಎಂದು ಹೇಳುತ್ತವೆ.[೯೩]

ಇತರ ಜನಪದ ಸಾಹಿತಿಗಳ ಅರ್ಥವಿವರಣೆಯ ಪ್ರಕಾರ, ಕಥೆಗಳು ಐತಿಹಾಸಿಕ ದಾಖಲೆಗಳಾಗಿವೆ. ಜರ್ಮನಿಯ ಅನೇಕ ಜನಪದ ಸಾಹಿತಿಗಳು, ಕಥೆಗಳನ್ನು ಪ್ರಾಚೀನ ಕಾಲಗಳಿಂದ ರಕ್ಷಿಸಲಾಗಿದೆಯೆಂಬ ನಂಬಿಕೆಯಿಂದ, ಪ್ರಾಚೀನ ಆಚಾರ ವಿಚಾರಗಳನ್ನು ವಿವರಿಸಲು ಗ್ರಿಮ್‌ರ ಕಥೆಗಳನ್ನು ಬಳಸಿಕೊಂಡರು.[೯೪] ಉಳಿದ ಜನಪದ ಸಾಹಿತಿಗಳು ದುಷ್ಟ ಬುದ್ಧಿಯ ಮಲತಾಯಿಯ ವ್ಯಕ್ತಿತ್ವವನ್ನು ಇತಿಹಾಸದುದ್ದಕ್ಕೂ ವಿವರಿಸಿದ್ದಾರೆ. ಅನೇಕ ಮಹಿಳೆಯರು ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಸತ್ತುಹೋದರು. ಆಗ ಅವರ ಪತಿಯರು ಮರುವಿವಾಹವಾದರು ಮತ್ತು ಹೊಸದಾಗಿ ಬಂದ ಮಲತಾಯಂದಿರು ತಮ್ಮ ಸಂಪನ್ಮೂಲಗಳಿಗಾಗಿ ಪತಿಯ ಮೊದಲ ವಿವಾಹದಿಂದ ಜನಿಸಿದ ಮಕ್ಕಳ ಜತೆ ಪೈಪೋಟಿಗಿಳಿದರು.[೯೫]

ಸಂಕಲನಗಳು

[ಬದಲಾಯಿಸಿ]
ಓದಬಹುದಾದ ಕೃತಿ: ಕಲೆಕ್ಷನ್ಸ್ ಆಫ್ ಫೇರಿ ಟೇಲ್ಸ್

ಲೇಖಕರು ಮತ್ತು ಕೃತಿಗಳು:

ಈ ಕೆಳಗಿನವುಗಳನ್ನೂ ನೋಡಬಹುದು

[ಬದಲಾಯಿಸಿ]

ಟೆಂಪ್ಲೇಟು:Portal

ಟಿಪ್ಪಣಿಗಳು

[ಬದಲಾಯಿಸಿ]
  1. ಥಾಂಪ್ಸನ್, ಸ್ಟಿತ್. ಫಂಕ್ ಅಂಡ್ ವ್ಯಾಗ್ನಲ್ಸ್ ಸ್ಟ್ಯಾಂಡರ್ಡ್ ಡಿಕ್ಷನರಿ ಆಫ್ ಫೋಕ್ಲೋರ್, ಮೈಥಾಲಜಿ ಅಂಡ್ ಲೆಜೆಂಡ್, 1972 ಎಸ್.ವಿ. "ಫೇರಿ ಟೇಲ್"
  2. ಮೆರಿಯಮ್-ವೆಬ್ ಸ್ಟರ್ ಡೆಫಿನಿಶನ್ ಆಫ್ "ಫೇರಿ ಟೇಲ್"
  3. ಕ್ಯಾಥರಿನ್ ಒರೆನ್ ಸ್ಟೈನ್, ಲಿಟಲ್ ರೆಡ್ ರೈಡಿಂಗ್ ಹುಡ್ ಅನ್ಕ್ಲೊಕ್ದ್ , ಪು.9. ISBN 0-465-04125-6.
  4. ಗ್ರೇ, ರಿಚರ್ಡ್. "ಫೇರಿ ಟೇಲ್ಸ್ ಹ್ಯಾವ್ ಎನ್ಸಿಯಂಟ್ ಒರಿಜಿನ್." Archived 2009-09-08 ವೇಬ್ಯಾಕ್ ಮೆಷಿನ್ ನಲ್ಲಿ. Telegraph.co.uk. 5 ಸೆಪ್ಟೆಂಬರ್ 2009
  5. ಹೈಡಿ ಆನೇ ಹೈನರ್, "ವಾಟ್ ಇಸ್ ಎ ಫೇರಿ ಟೇಲ್? Archived 2010-01-03 ವೇಬ್ಯಾಕ್ ಮೆಷಿನ್ ನಲ್ಲಿ."
  6. ೬.೦ ೬.೧ ಟೆರಿ ವಿಂಡ್ಲಿಂಗ್, "ಲೆಸ್ ಕಾಂಟೆಸ್ ಡಿ ಫೀಸ್: ದಿ ಲಿಟರರಿ ಫೇರಿ ಟೇಲ್ಸ್ ಆಫ್ ಫ್ರಾನ್ಸ್"
  7. ವ್ಲಾಡಿಮಿರ್ ಪ್ರಾಪ್, ಮಾರ್ಫಾಲಜಿ ಆಫ್ ದಿ ಫೋಕ್ಟೇಲ್ , ಪು. 5. ISBN 0-292-78376-0
  8. ಪ್ರಾಪ್, ಪು. 19.
  9. ಸ್ಟಿವನ್ ಸ್ವಾನ್ ಜೋನ್ಸ್, ದಿ ಫೇರಿ ಟೇಲ್: ದಿ ಮ್ಯಾಜಿಕ್ ಮಿರರ್ ಆಫ್ ಇಮ್ಯಾಜಿನೇಶನ್ , ಟ್ವೇನ್ ಪಬ್ಲಿಷರ್ಸ್, ನ್ಯೂಯಾರ್ಕ್, 1995, ಪು. 15. ISBN 0-8057-0950-9.
  10. ಸ್ಟಿತ್ ಥಾಂಪ್ಸನ್, ದಿ ಫೋಕ್ ಟೇಲ್ , ಪು 55, ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೆಸ್, ಬರ್ಕ್ಲಿ ಲಾಸ್ ಎಂಜಲಿಸ್ ಲಂಡನ್, 1977
  11. ೧೧.೦ ೧೧.೧ ಜೆ.ಆರ್.ಆರ್. ಟೋಲ್ಕೀನ್, "ಆನ್ ಫೇರಿ-ಸ್ಟೋರೀಸ್", ದಿ ಟೋಲ್ಕೀನ್ ರೀಡರ್ , ಪು. 15.
  12. ಟೋಲ್ಕೀನ್, ಪುಟಗಳು 10-11.
  13. ದಿ ಫೇರಿ ಟೇಲ್: ದಿ ಮ್ಯಾಜಿಕ್ ಮಿರರ್ ಆಫ್ ದಿ ಇಮ್ಯಾಜಿನೇಶನ್ . ರಾಟ್ಲೆಜ್, 2002, ಪು. 8.
  14. ಎ ಕಂಪ್ಯಾನಿಯನ್ ಟು ದಿ ಫೇರಿ ಟೇಲ್ . ಹಿಲ್ಡಾ ಎಲಿಸ್ ಡೇವಿಡ್ಸನ್, ಆನಾ ಚೌಧರಿ ಇವರಿಂದ. ಬಾಯ್ಡೆಲ್ ಅಂಡ್ ಬ್ರಿವರ್ 2006. ಪು. 39.
  15. http://www.freudfile.org/psychoanalysis/fairy_tales.html
  16. ಸ್ಟಿತ್ ಥಾಂಪ್ಸನ್, ದಿ ಫೋಕ್ ಟೇಲ್ , 1977 (ಥಾಂಪ್ಸನ್: 8).
  17. ಟೆಂಪ್ಲೇಟು:0/ಎ.ಎಸ್. ಬೈಯಟ್, "ಇಂಟ್ರೋಡಕ್ಶನ್" ಪು. xviii, ಮರಿಯಾ ಟಾಟರ್, ಸಂ. ದಿ ಆನೋಟೇಟೆಡ್ ಬ್ರದರ್ಸ್ ಗ್ರಿಮ್ , ISBN 0-393-05848-4.
  18. ಇಟಾಲೋ ಕ್ಯಾಲ್ವಿನೋ, ಸಿಕ್ಸ್ ಮೆಮೊಸ್ ಫಾರ್ ದಿ ನೆಕ್ಸ್ಟ್ ಮಿಲೆನಿಯಂ , ಪುಟಗಳು 36-37. ISBN 0-674-81040-6.
  19. ಜಾಕ್ ಜಿಪಿಸ್, ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪುಟಗಳು xi-xii, ISBN 0-393-97636-X.
  20. ಜಿಪಿಸ್, ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪು. 858.
  21. ಬ್ರೈಯನ್ ಎಟ್ಬರಿ, ದಿ ಫ್ಯಾಂಟಸಿ ಟ್ರೆಡಿಶನ್ ಇನ್ ಅಮೆರಿಕನ್ ಲಿಟರೆಚರ್ , ಪು. 83, ISBN 0-253-35665-2.
  22. ಫಿಲಿಪ್ ಮಾರ್ಟಿನ್, ದಿ ರೈಟರ್ಸ್ ಗೈಡ್ ಆಫ್ ಫ್ಯಾಂಟಸಿ ಲಿಟರೆಚರ್: ಫ್ರಾಮ್ ಡ್ರ್ಯಾಗನ್ಸ್ ಲೈಯರ್ ಟು ಹೀರೋಸ್ ಕ್ವೆಸ್ಟ್ , ಪುಟಗಳು 38-42, ISBN 0-871116-195-8.
  23. ೨೩.೦ ೨೩.೧ ಸ್ವಾನ್ ಜೋನ್ಸ್, ಪು.35.
  24. ಬ್ರೈಯನ್ ಎಟ್ಬರಿ, ದಿ ಫ್ಯಾಂಟಸಿ ಟ್ರೆಡಿಶನ್ ಇನ್ ಅಮೆರಿಕನ್ ಲಿಟರೆಚರ್ , ಪು. 5, ISBN 0-253-35665-2.
  25. ಜೈಪ್ಸ್, ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪು. xii.
  26. ೨೬.೦ ೨೬.೧ ಜಿಪಿಸ್, ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪು. 846.
  27. ಲಿಂಡಾ ಡೆಗ್, "ವಾಟ್ ಡಿಡ್ ದಿ ಗ್ರಿಮ್ ಬ್ರದರ್ಸ್ ಗಿವ್ ಟು ಅಂಡ್ ಟೇಕ್ ಫ್ರಾಮ್ ದಿ ಫೋಕ್?" ಪು. 73, ಜೇಮ್ಸ್ ಎಂ. ಮ್ಯಾಕ್ ಗ್ಲೆಥರಿ, ಸಂ., ದಿ ಬ್ರದರ್ಸ್ ಗರಿ ಅಂಡ್ ಫೋಕ್ ಟೇಲ್ , ದಿ ತ್ರೀ ಬೇರ್ಸ್ ISBN 0-252-01549-5.
  28. ಜಾಕ್ ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ ಅಂಡ್ ದೇರ್ ಟ್ರೆಡಿಶನ್ , ಪು. 2. ISBN 0-415-92151-1.
  29. ಜಾನ್ ಗ್ರ್ಯಾಂಟ್ ಮತ್ತು ಜಾನ್ ಕ್ಲೂಟ್, ದಿ ಎನ್ಸೈಕ್ಲೋಪೀಡಿಯಾ ಆಫ್ ಫ್ಯಾಂಟಸಿ , "ಫೇರಿ ಟೇಲ್," ಪು. 331. ISBN 0-14-130220-8.
  30. ೩೦.೦೦ ೩೦.೦೧ ೩೦.೦೨ ೩೦.೦೩ ೩೦.೦೪ ೩೦.೦೫ ೩೦.೦೬ ೩೦.೦೭ ೩೦.೦೮ ೩೦.೦೯ ಹೈಡಿ ಆನೇ ಹೈನರ್, "ಫೇರಿ ಟೇಲ್ ಟೈಮ್ ಲೈನ್" Archived 2010-12-01 ವೇಬ್ಯಾಕ್ ಮೆಷಿನ್ ನಲ್ಲಿ.
  31. ೩೧.೦ ೩೧.೧ ಮಾಸ್ ರಾಬರ್ಟ್ಸ್, "ಇಂಟ್ರೋಡಕ್ಷನ್", ಪು. xviii, ಚೈನೀಸ್ ಫೇರಿ ಟೇಲ್ಸ್ ಅಂಡ್ ಫ್ಯಾಂಟಸೀಸ್ . ISBN 0-394-73994-9.
  32. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್ , ಪು. 11.
  33. ಸೌಲಾ ಮಿತಾಕಿದೌ ಮತ್ತು ಆಂಟನಿ ಎಲ್. ಮನ್ನಾ, ಮೇಲ್ಪೋಮೆನಿ ಕನಾತ್ಸೌಲಿ ಜೊತೆ, ಫೋಕ್ ಟೇಲ್ಸ್ ಫ್ರಾಮ್ ಗ್ರೀಸ್: ಎ ಟ್ರೆಜರಿ ಆಫ್ ಡಿಲೈಟ್ಸ್ , ಪು.100, ಲೈಬ್ರರೀಸ್ ಅನ್ಲಿಮಿಟೆಡ್, ಗ್ರೀನ್ ವುಡ್ ವಿಲೇಜ್ CO, 2002, ISBN 1-56308-908-4.
  34. ಸ್ವಾನ್ ಜೋನ್ಸ್, ಪು. 38.
  35. ಟೆರಿ ವಿಂಡ್ಲಿಂಗ್, ವೈಟ್ ಅಸ್ ರಿಕೋಟಾ, ರೆಡ್ ಅಸ್ ವೈನ್: ದಿ ಮ್ಯಾಜಿಕ್ ಲೋರ್ ಆಫ್ ಇಟಲಿ Archived 2014-02-10 ವೇಬ್ಯಾಕ್ ಮೆಷಿನ್ ನಲ್ಲಿ."
  36. ಇಟಾಲೋ ಕ್ಯಾಲ್ವಿನೋ, ಇಟಾಲಿಯನ್ ಫೋಕ್ ಟೇಲ್ಸ್, ಪು. 738. ISBN 0-15-645489-0
  37. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್, ಪುಟಗಳು 38-42.
  38. ಸ್ವಾನ್ ಜೋನ್ಸ್, ಪುಟಗಳು 38-39.
  39. ಸ್ವಾನ್ ಜೋನ್ಸ್, ಪು.40.
  40. ಜಿ. ರೋನಾಲ್ಡ್ ಮರ್ಫಿ, ದಿ ಔಲ್, ದಿ ರೇವನ್, ಅಂಡ್ ದಿ ಡವ್: ದಿ ರಿಲಿಜಿಯಸ್ ಮೀನಿಂಗ್ ಆಫ್ ದಿ ಗ್ರಿಮ್ಸ್ ಮ್ಯಾಜಿಕ್ ಫೇರಿ ಟೇಲ್ಸ್ , ISBN 0-19-515169-0.
  41. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್ , ಪು. 77.
  42. ಡೆಗ್, ಪುಟಗಳು 66-67.
  43. ಆಯೋನಾ ಅಂಡ್ ಪೀಟರ್ ಒಪೈ, ದಿ ಕ್ಲಾಸಿಕ್ ಫೇರಿ ಟೇಲ್ಸ್ ಪು.17. ISBN 0-19-211550-6
  44. ಜೇನ್ ಯೋಲನ್, ಪು. 22, ಟಚ್ ಮ್ಯಾಜಿಕ್ . ISBN 1-87483-591-7.
  45. ಯೆ ಥಿಯೋಡೊರಾ ಒಜಾಕಿ, ಜಪನೀಸ್ ಫೇರಿ ಟೇಲ್ಸ್ , "ಪ್ರಿಫೇಸ್"
  46. ಗ್ರಾಂಟ್ ಮತ್ತು ಕ್ಲೂಟ್, "ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್," ಪುಟಗಳು 26-27.
  47. ಒರೆನ್ ಸ್ಟೈನ್ , ಪುಟಗಳು 77-78.
  48. ಜಿಪಿಸ್, ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪು. 845.
  49. ಜೋಸೆಫ್ ಜಾಕೋಬ್ಸ್, ಮೋರ್ ಸೆಲ್ಟಿಕ್ ಫೇರಿ ಟೇಲ್ಸ್ ಲಂಡನ್: ಡೇವಿಡ್ ನಟ್, 1894, "ನೋಟ್ಸ್ ಅಂಡ್ ರೆಫ್ರನ್ಸಸ್ Archived 2010-02-06 ವೇಬ್ಯಾಕ್ ಮೆಷಿನ್ ನಲ್ಲಿ."
  50. ಕ್ಯಾಲ್ವಿನೋ, ಇಟಾಲಿಯನ್ ಫೋಕ್ ಟೇಲ್ಸ್ , ಪು. xx.
  51. ಹ್ಯಾರಿ ವೆಲ್ಟನ್, "ದಿ ಇನ್‌ಫ್ಲುಯೆನ್ಸಸ್ ಆಫ್ ಚಾರ್ಲೆಸ್ ಪೆರಾಲ್ಟ್ಸ್ ಕಾಂಟೆಸ್ ಡೆ ಮಾ ಮೇರೆ ಲೋಯಿ ಆನ್ ಜರ್ಮನ್ ಫೋಲ್ಕ್‌ಲೋರ್", ಪು. 962, ಜಾಕ್ ಜಿಪಿಸ್, ಸಂ., ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ .
  52. ಕ್ಯಾಲ್ವಿನೋ, ಇಟಾಲಿಯನ್ ಫೋಕ್ ಟೇಲ್ಸ್ , ಪು. xxi.
  53. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್ , ಪು. 1.
  54. ಲುಯಿಸ್ ಸಿಫರ್ಟ್, "ದಿ ಮಾರ್ವಲಸ್ ಇನ್ ಕಾಂಟೆಕ್ಸ್ಟ್: ಹದಿನೇಳನೆ ಶತಮಾನದ ಫ್ರಾನ್ಸ್ ನಲ್ಲಿ ದಿ ಕಾಂಟೆಸ್ ಡಿ ಫೀಸ್ ನ ಸ್ಥಾನಮಾನ", ಜಾಕ್ ಜಿಪಿಸ್, ಸಂ., ದಿ ಗ್ರೇಟ್ ಫೇರಿ ಟೇಲ್ ಟ್ರೆಡಿಶನ್: ಫ್ರಾಮ್ ಸ್ತ್ರಾಪರೋಲಾ ಅಂಡ್ ಬೆಸಿಲ್ ಟು ದಿ ಬ್ರದರ್ಸ್ ಗ್ರಿಮ್ , ಪು. 913.
  55. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್ , ಪು. 47.
  56. ಮರಿಯಾ ಟಾಟರ್, ದಿ ಹಾರ್ಡ್ ಫ್ಯಾಕ್ಟ್ಸ್ ಆಫ್ ದಿ ಗ್ರಿಮ್ಸ್ ಫೇರಿ ಟೇಲ್ಸ್ , ಪು. 19. ISBN 0-691-06722-8.
  57. ಟಾಟರ್, ದಿ ಹಾರ್ಡ್ ಫ್ಯಾಕ್ಟ್ಸ್ ಆಫ್ ದಿ ಗ್ರಿಮ್ಸ್ ಫೇರಿ ಟೇಲ್ಸ್ , ಪು. 20.
  58. ಟಾಟರ್, ದಿ ಹಾರ್ಡ್ ಫ್ಯಾಕ್ಟ್ಸ್ ಆಫ್ ದಿ ಗ್ರಿಮ್ಸ್ ಫೇರಿ ಟೇಲ್ಸ್ , ಪು. 32.
  59. ಬೈಯಟ್, ಪುಟಗಳು xlii-xliv.
  60. ಟೋಲ್ಕೀನ್ , ಪು. 31.
  61. ಕೆ. ಎಂ. ಬ್ರಿಗ್ಸ್, ದಿ ಫೇರೀಸ್ ಇನ್ ಇಂಗ್ಲಿಷ್ ಟ್ರೆಡಿಶನ್ ಅಂಡ್ ಲಿಟರೆಚರ್ , ಪುಟಗಳು 181-182, ಯುನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್, ಲಂಡನ್, 1967.
  62. http://www.victorianweb.org/authors/dickens/pva/pva239.html
  63. ಜಾಕ್ ಜಿಪಿಸ್, ದಿ ಬ್ರದರ್ಸ್ ಗ್ರಿಮ್: ಫ್ರಾಂ ಎನ್ಚಾಂಟೆಡ್ ಫಾರೆಸ್ಟ್ ಟು ದಿ ಮಾಡರ್ನ್ ವಲ್ಡ್ , ಪು. 48, ISBN 0-312-29380-1.
  64. ೬೪.೦ ೬೪.೧ ಗ್ರಾಂಟ್ ಮತ್ತು ಕ್ಲೂಟ್, "ಸಿನೆಮಾ", ಪು. 196.
  65. ಪ್ಯಾಟ್ರಿಕ್ ಡ್ರೆಜನ್, ಅನಿಂ ಎಕ್ಸ್ ಪ್ಲೋಜನ್!: ದಿ ವಾಟ್? ವೈ? ಅಂಡ್ ವಾವ್‌! ಆಫ್ ಜಪನೀಸ್ ಎನಿಮೇಶನ್ , ಪುಟಗಳು 43-44, ISBN 1-880656-72-8
  66. ವುಲ್ಫ್, ಎರಿಕ್ ಜೇಮ್ಸ್ ದಿ ಆರ್ಟ್ ಆಫ್ ಸ್ಟೋರಿ ಟೆಲಿಂಗ್ ಷೋ ಇಂಟರ್ವ್ಯೂ ಜಾಕ್ ಜಿಪಿಸ್ - ಆರ್ ಫೇರಿ ಟೇಲ್ಸ್ ಸ್ಟಿಲ್ ಯುಸ್ಫುಲ್ ಟು ಚಿಲ್ದ್ರೆನ್?
  67. ಜಿಪಿಸ್, ವೆನ್ ಡ್ರೀಮ್ಸ್ ಕೇಮ್ ಟ್ರೂ: ಕ್ಲಾಸಿಕಲ್ ಫೇರಿ ಟೇಲ್ಸ್ ಅಂಡ್ ದೇರ್ ಟ್ರೆಡಿಶನ್ ಮತ್ತು ಇನ್ನುಳಿದವು!, ಪುಟಗಳು 24-25.
  68. ಗ್ರಾಂಟ್ ಮತ್ತು ಕ್ಲೂಟ್, "ಫೇರಿ ಟೇಲ್," ಪು. 333.
  69. ೬೯.೦ ೬೯.೧ ಹೆಲನ್ ಪಿಲಿನೋವಸ್ಕಿ, "Donkeyskin, Deerskin, Allerleirauh: The Reality of the Fairy Tale" Archived 2014-03-25 ವೇಬ್ಯಾಕ್ ಮೆಷಿನ್ ನಲ್ಲಿ.
  70. ಬ್ರಿಗ್ಸ್, ಪು. 195.
  71. ಜಿಪಿಸ್, ದಿ ಬ್ರದರ್ಸ್ ಗ್ರಿಮ್: ಫ್ರಾಮ್ ಎನ್ಚಾಂಟೆಡ್ ಫಾರೆಸ್ಟ್ಸ್ ಟು ದಿ ಮಾಡರ್ನ್ ವಲ್ಡ್ , ಪುಟಗಳು 251-52.
  72. ಡಿ. ವಾರ್ಡ್,Optimizing Bi-Modal Signal to Noise Ratios: A Fairy Tale PDF (304 KiB) , ಡಿಫೆನ್ಸ್ ಎ ಟಿ ಅಂಡ್ ಎಲ್ , ಸೆಪ್ಟೆಂಬರ್/ಅಕ್ಟೋಬರ್ 2005.
  73. ಗ್ರಾಂಟ್ ಮತ್ತು ಕ್ಲೂಟ್, "ಕಾಮಿಡಿಯಾ ಡೆಲ್ ಆರ್ಟ್", ಪು. 219.
  74. ಗ್ರಾಂಟ್ ಮತ್ತು ಕ್ಲೂಟ್, "ಕಾಮಿಡಿಯಾ ಡೆಲ್ ಆರ್ಟ್", ಪು. 745.
  75. ಜೇಮ್ಸ್ ಗ್ರಹಾಮ್, "ಬಾಬಾ ಯಾಗಾ ಇನ್ ಫಿಲ್ಮ್" Archived 2013-01-09 ವೇಬ್ಯಾಕ್ ಮೆಷಿನ್ ನಲ್ಲಿ.
  76. ರಿಚರ್ಡ್ ಸ್ಕೇಬ್, ರಿವ್ಯೂ ಆಫ್ ಲ್ಯಾಬಿರಿಂತ್
  77. ಡ್ರೆಜನ್, ಪು. 264.
  78. ಟೆರಿ ವಿಂಡ್ಲಿಂಗ್, "ಬ್ಯೂಟಿ ಅಂಡ್ ದಿ ಬೀಸ್ಟ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ."
  79. ಟೆರಿ ವಿಂಡ್ಲಿಂಗ್, "ದಿ ಪಾತ್ ಆಫ್ ನೀಡಲ್ಸ್ ಆರ್ ಪಿನ್ಸ್: ಲಿಟಲ್ ರೆಡ್ ರೈಡಿಂಗ್ ಹುಡ್" Archived 2008-05-17 ವೇಬ್ಯಾಕ್ ಮೆಷಿನ್ ನಲ್ಲಿ.
  80. ಡ್ರೆಜನ್, ಪು. 38.
  81. Spelling, Ian (2006-12-25). "Guillermo del Toro and Ivana Baquero escape from a civil war into the fairytale land of Pan's Labyrinth". Science Fiction Weekly. Archived from the original on 2009-03-04. Retrieved 2007-07-14.
  82. "Festival Highlights: 2008 Edinburgh International Film Festival". Variety. 2008-06-13. Retrieved 2010-04-28.
  83. ಟೋಲ್ಕೀನ್, ಪು. 18
  84. ಪ್ರಾಪ್, ಮಾರ್ಫಲಜಿ ಆಫ್ ದಿ ಫೋಕ್ ಟೇಲ್ .
  85. ಪ್ರಾಪ್, ಪು. 39.
  86. ಪ್ರಾಪ್, ಪುಟಗಳು 81-82.
  87. ಪ್ರಾಪ್, ಪುಟಗಳು 80-81.
  88. ಕ್ರಿಸ್ಟೋಫರ್ ವೋಗ್ಲರ್, ದಿ ರೈಟರ್ಸ್ ಜರ್ನಿ: ಮಿಥಿಕ್ ಸ್ಟ್ರಕ್ಚರ್ ಫಾರ್ ರೈಟರ್ಸ್ , 2 ನೇ ಆವೃತ್ತಿ, p. 30, ISBN 0-941188-70-1
  89. "ವ್ಲಾಡಿಮಿರ್ ಪ್ರಾಪ್ಸ್ ಥಿಯರೀಸ್". Archived from the original on 2002-06-19. Retrieved 2010-06-14.
  90. ಮರಿಯಾ ಟಾಟರ್, ದಿ ಎನೋಟೇಟೆಡ್ ಕ್ಲಾಸಿಕ್ ಫೇರಿ ಟೇಲ್ಸ್ , ಪು. 43. ISBN 0-393-05163-3.
  91. ಟಾಟರ್, ದಿ ಹಾರ್ಡ್ ಫ್ಯಾಕ್ಟ್ಸ್ ಆಫ್ ದಿ ಗ್ರಿಮ್ಸ್ ಫೇರಿ ಟೇಲ್ಸ್ , ಪು. 52.
  92. ಅಲನ್ ಡನ್ಡಿಸ್, "ಇಂಟರ್ಪ್ರಿಟಿಂಗ್ ಲಿಟಲ್ ರೆಡ್ ರೈಡಿಂಗ್ ಹುಡ್ ಸೈಕೋ ಅನಲೈಟಿಕಲಿ", ಪುಟಗಳು 18-19, ಜೇಮ್ಸ್ ಎಂ. ಮ್ಯಾಕ್ ಗ್ಲೆಥರಿ, ಸಂ., ದಿ ಬ್ರದರ್ಸ್ ಗ್ರಿಮ್ ಅಂಡ್ ಫೋಕ್ ಟೇಲ್ , ISBN 0-252-01549-5.
  93. ಟಾಟರ್, ದಿ ಹಾರ್ಡ್ ಫ್ಯಾಕ್ಟ್ಸ್ ಆಫ್ ದಿ ಗ್ರಿಮ್ಸ್ ಫೇರಿ ಟೇಲ್ಸ್ , ಪು. 46.
  94. ಜಿಪಿಸ್, ದಿ ಬ್ರದರ್ಸ್ ಗ್ರಿಮ್: ಫ್ರಾಮ್ ಎನ್ಚಾಂಟೆಡ್ ಫಾರೆಸ್ಟ್ಸ್ ಟು ದಿ ಮಾಡರ್ನ್ ವಲ್ಡ್ , ಪು. 48.
  95. ಮರಿನಾ ವಾರ್ನರ್, ಫ್ರಾಮ್ ದಿ ಬೀಸ್ಟ್ ಟು ದಿ ಬ್ಲಾಂಡ್: ಆನ್ ಫೇರಿ ಟೇಲ್ಸ್ ಅಂಡ್ ದೇರ್ ಟೆಲರ್ಸ್ , ಪು. 213. ISBN 0-374-15901-7.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: