ಅರ್ನೆಸ್ಟ್ ರುದರ್‍ಫೋರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ನೆಸ್ಟ್ ರುದರ್‍ಫೋರ್ಡ್
ಅರ್ನೆಸ್ಟ್ ರುದರ್‍ಫೋರ್ಡ್
ಜನನಅಗಸ್ಟ್ 30, 1871
ಬ್ರೈಟ್‌ವಾಟರ್, ನ್ಯೂಜಿಲ್ಯಾಂಡ್
ಮರಣOctober 19, 1937
ಕೆಂಬ್ರಿಡ್ಜ್, ಇಂಗ್ಲೆಂಡ್
ವಾಸಇಂಗ್ಲೆಂಡ್, ಕೆನಡ
ರಾಷ್ಟ್ರೀಯತೆನ್ಯೂಜಿಲ್ಯಾಂಡ್
ಕಾರ್ಯಕ್ಷೇತ್ರಗಳುಭೌತಶಾಸ್ತ್ರಜ್ಞ
ಸಂಸ್ಥೆಗಳುಮ್ಯಾಕ್ ಗಿಲ್ ವಿಶ್ವವಿದ್ಯಾಲಯ,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆಕ್ಯಾಂಟರ್‌ಬರಿ ವಿಶ್ವವಿದ್ಯಾಲಯ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಜೆ.ಜೆ.ಥಾಮ್ಸನ್
ಡಾಕ್ಟರೆಟ್ ವಿದ್ಯಾರ್ಥಿಗಳುನೀಲ್ಸ್ ಬೋಹ್ರ್,ಜೇಮ್ಸ್ ಚಾಡ್ವಿಕ್
ಪ್ರಸಿದ್ಧಿಗೆ ಕಾರಣಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್‌ಫೋರ್ಡ್ ಮಾದರಿ,ರುದರ್‌ಫೋರ್ಡ್ ಚದುರುವಿಕೆ,ಪ್ರೊಟಾನ್ ನ ಕಂಡುಹಿಡಿಯುವಿಕೆ
ಗಮನಾರ್ಹ ಪ್ರಶಸ್ತಿಗಳುರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ-೧೯೦೮

ಅರ್ನೆಸ್ಟ್ ರುದರ್‌ಫೋರ್ಡ್ ರವರು (೩೦ ಆಗಸ್ಟ್ ೧೮೭೧ - ೧೯ ಅಕ್ಟೋಬರ್ ೧೯೩೭) ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.[೧] ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.

ಜೀವನ ಚರಿತ್ರೆ[ಬದಲಾಯಿಸಿ]

ಅರ್ನೆಸ್ಟ್ ರುದರ್ ಫೋರ್ಡ್ ನ್ಯೂಜಿಲ್ಯಾಂಡಿನ ಪ್ರಖ್ಯಾತ ವಿಜ್ಞಾನಿ. ಇವರು ೧೮೭೧ ರ ಆಗಸ್ಟ್ ೩೦ ರಂದು ಜನಿಸಿದರು. ರುದರ್‌ಫೋರ್ಡ್‌ರವರು ನ್ಯೂಜಿಲ್ಯಾಂಡ್‍ನ ನೆಲ್ಸನ್ ಎಂಬ ಊರಿನಲ್ಲಿ ಜನಿಸಿದರು. ಮಾಂಟ್ರಿಯಲ್, ಕೆಂಬ್ರಿಡ್ಜ್, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದರು.೧೯೦೩ರಲ್ಲಿ ಫೆಲೋ ಅಫ್ ರಾಯಲ್ ಸೊಸೈಟಿ ಆಗಿ ಆಯ್ಕೆಯಾದರು. ೧೯೦೮ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದರು.[೨]

ಚಿಕ್ಕಂದಿನಿಂದಲೂ ಇವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಇವನ ಆರಂಭದ ಸಂಶೋಧನಾ ವಲಯಗಳು ‘ಉಚ್ಚ ಆವೃತ್ತಿ ವಿಸರ್ಜನೆಗಳ ಮೂಲಕ ಕಬ್ಬಿಣದ ಕಾಂತೀಕರಣ’ (1894, ಮ್ಯಾಗ್ನೆಟೈಸೇಶನ್ ಆಫ್ ಐರನ್ ಬೈ ಹೈ ಫ್ರೀಕ್ವೆನ್ಸಿ ಡಿಸ್ಚಾರ್ಜಸ್) ಮತ್ತು ‘ಕಾಂತೀಯ ಸ್ನಿಗ್ಧತೆ’ (1896, ಮ್ಯಾಗ್ನೆಟಿಕ್ ವಿಸ್ಕಾಸಿಟಿ). ವಿದ್ಯಾರ್ಥಿ ವೇತನ ಪಡೆದು ಕ್ಯಾವೆಂಡಿಶ್ ಲ್ಯಾಬೊರೇಟರಿ ಟ್ರಿನಿಟಿ ಕಾಲೇಜ್ ಕೇಂಬ್ರಿಜ್ಜಿಗೆ ಪ್ರವೇಶಗಳಿಸಿದ (1895).[೩] ಅಲ್ಲಿ ಮೊದಲ ಬಾರಿಗೆ ಯಶಸ್ವೀ ನಿಸ್ತಂತು ಪ್ರೇಷಣೆ (ವೈರ್‌ಲೆಸ್ ಟ್ರಾನ್ಸ್‌ಮಿಶನ್) ಸಾಧಿಸಿದ-3.2 ಕಿಮೀಗಳಿಗಿಂತಲೂ ಹೆಚ್ಚು ದೂರಕ್ಕೆ. ಜೆ.ಜೆ. ತಾಮ್ಸನ್‌ನ (1856-1940) ಭವ್ಯ ಧುರೀಣತ್ವದಲ್ಲಿ ಮೂಲಭೂತ ಸಂಶೋಧನೆ ಮಾಡಿ ಈತ ಯುರೇನಿಯಮ್ ಸೂಸುವ ವಿಕಿರಣದಲ್ಲಿ ಮೂರು ಬಗೆಗಳಿರುವುದನ್ನು ಆವಿಷ್ಕರಿಸಿದ. ಈ ಕಿರಣಗಳಲ್ಲಿ ಕೆಲವು ಆಲ್ಫಾ ಕಿರಣಗಳಿದ್ದು ಇನ್ನು ಕೆಲವು ಬೀಟಾ ಕಿರಣಗಳು ಮತ್ತು ಗ್ಯಾಮ ತರಂಗಗಳು ಎಂದು ರುದರ್‌ಫೋರ್ಡ್ ಕರೆದರು. ಆಲ್ಫಾ ಕಿರಣಗಳ ನೆರವಿನಿಂದ ಪರಮಾಣುವನ್ನು ಅಭ್ಯಾಸ ಮಾಡಿ ಅದರ ಬಹಳಷ್ಟು ದ್ರವ್ಯರಾಶಿಯಲ್ಲಿ ನ್ಯೂಕ್ಲಿಯಸ್ ಇರುತ್ತದೆಂದು ಕಂಡುಹಿಡಿದರು.[೪][೫]

ಮುಂದೆ ಮಾಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಕೆನಡ ದೇಶಕ್ಕೆ ತೆರಳಿದ (1898). ಅಲ್ಲಿ ಫ್ರೆಡರಿಕ್ ಸಾಡಿ (1877-1965) ಎಂಬ ಸಹೋದ್ಯೋಗಿ ಜೊತೆ ಸಂಶೋಧನೆಗೈದು ಯುರೇನಿಯಮ್ ವಿತರಿಸುವ ಅತಿ ತೀವ್ರ ಉಷ್ಣಶಕ್ತಿಯ ಕಾರಣವಾಗಿ ಸಂಭವಿಸುವ ಪರಮಾಣವಿಕ ವಿಘಟನೆ ಕುರಿತ ಸಿದ್ಧಾಂತ ಮಂಡಿಸಿದ. 1907ರಲ್ಲಿ ಮ್ಯಾಂಚೆಸ್ಟರಿಗೆ ಬಂದ. ಇಲ್ಲಿ ಈತ ಸಂಶೋಧನೆಯ ಮೂಲಕ ಆಲ್ಫಕಣಗಳು ಎರಡು ಮಡಿ ಅಯಾನೀಕೃತ ಹೀಲಿಯಮ್ ಅಯಾನುಗಳೆಂದು ರುಜುವಾತಿಸಿದ. ಈ ಅಯಾನುಗಳನ್ನು ಈತ ವಾಸ್ತವವಾಗಿ ಎಣಿಸಿ ನೋಡಿದ್ದ! ಇದರ ಸಲುವಾಗಿ ಈತ ಜರ್ಮನ್ ಭೌತವಿಜ್ಞಾನಿ ಹ್ಯಾನ್ಸ್‌ ಗೀಗರ್ (1882-1945) ಸಹಯೋಗದಲ್ಲಿ ಹೊಸತೊಂದು ಸಾಧನವನ್ನು ಉಪಜ್ಞಿಸಿದ.

ಈ ಸಂಶೋಧನೆ ಪರಮಾಣು ಬಗೆಗಿನ ಪರಿಕಲ್ಪನೆಯನ್ನು ಕ್ರಾಂತಿಕಾರಿಯಾಗಿ ಮಾರ್ಪಡಿಸಿತು: ಪರಮಾಣುವೊಂದು ಸೂಕ್ಷ್ಮಾತಿಸೂಕ್ಷ್ಮ ವಿಶ್ವ, ಇದರ ರಾಶಿ ಪೂರ್ತಿ ಬೀಜದಲ್ಲೇ ಸಾಂದ್ರೀಕರಿಸಿದೆ, ಇದನ್ನು ಸುತ್ತುವರಿದು ಎಲೆಕ್ಟ್ರಾನ್ ‘ಗ್ರಹ’ಗಳು ಪರಿಭ್ರಮಿಸುತ್ತಿವೆ. ಸಂಕ್ಷೇಪವಾಗಿ ಹೇಳುವುದಾದರೆ ಪರಮಾಣುವೊಂದು ಅತಿ ಸಂಕೋಚಿತ ಸೌರವ್ಯೂಹ. ಈ ಚಿಂತನೆಗೆ ಈತನ ಯುವ ಸಹಾಯಕ ನೀಲ್ಸ್ ಬೋರ್ (1882-1962) ಸಕಲ ಸಿದ್ಧಾಂತವನ್ನು (ಕ್ವಾಂಟಮ್ ತಿಯರಿ) ಅನ್ವಯಿಸಿದ. ಹೀಗೆ ಮೈದಳೆಯಿತು ರುದರ್ಫರ್ಡ್-ಬೋರ್ ಪರಮಾಣು ಪರಿಕಲ್ಪನೆ. ಮೊದಲನೆಯ ಮಹಾಯುದ್ಧದ ವೇಳೆ (1914-18) ಈತ ಬ್ರಿಟಿಷ್ ನೌಕಾದಳದ ಸಲುವಾಗಿ ಜಲಾಂತರ್ಗಾಮೀ ನೌಕೆಗಳನ್ನು ಪತ್ತೆ ಹಚ್ಚುವ ತಂತ್ರ ಸಂಶೋಧನೆಯಲ್ಲಿ ನಿರತನಾದ.[೬]

ವಾಯುಮಂಡಲದಲ್ಲಿರುವ ನೈಟ್ರೊಜನನ್ನು ಆಲ್ಫ ಕಣಗಳ ಸತತ ತಾಡನೆಗಳಿಗೆ ಒಡ್ಡಿದಾಗ ಅದು (ನೈಟ್ರೊಜನ್) ಪರಮಾಣವಿಕ ಪರಿವರ್ತನೆಗೆ ಒಳಗಾಗುತ್ತದೆ ಮತ್ತು ಆಗ ಹೈಡ್ರೊಜನ್ನಿನ ಒಂದು ಬೀಜ ವಿಮೋಚಿತವಾಗುವುದೆಂಬ ತಥ್ಯವನ್ನು ಹಲವಾರು ಪ್ರಯೋಗಗಳನ್ನು ಮಾಡಿ ಆವಿಷ್ಕರಿಸಿದ (1919).[೭][೮] ಅದೇ ವರ್ಷ ಇವನಿಗೆ ಕೇಂಬ್ರಿಜ್ಜಿನಲ್ಲಿ ಆ ಮೊದಲು ತಾಮ್ಸನ್ ಅಲಂಕರಿಸಿದ್ದ ಕ್ಯಾವೆಂಡಿಶ್ ಪ್ರಾಧ್ಯಾಪಕ ಹುದ್ದೆ ದೊರೆಯಿತು. ನ್ಯೂಟ್ರಾನ್ ಕಣದ ಅಸ್ತಿತ್ತ್ವವನ್ನು ಸೈದ್ಧಾಂತಿಕ ವೇಗದಿಂದ ಮುನ್ನಡಿಸಿದ (1920). ಇವನ ಸಹೋದ್ಯೋಗಿ ಜೇಮ್ಸ್ ಚಾಡ್‌ವಿಕ್ (1891-1974) ನ್ಯೂಟ್ರಾನಿನ ಭೌತಅಸ್ತಿತ್ವವನ್ನು ದೃಢೀಕರಿಸಿದ (1932). ಈತ 1925-30ರ ತನಕ ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.

ಸಾಧನೆಗಳು[ಬದಲಾಯಿಸಿ]

ರುದರ್‌ಫೋರ್ಡ್ ೧೯೦೮ ರಲ್ಲಿ ವಿಕಿರಣ ವಸ್ತುಗಳ ಕುರಿತು ನಡೆಸಿದ ಅಧ್ಯಯನಕ್ಕಾಗಿ ರಸಾಯನ ಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಪಡೆದರು. ಇವರು ಪರಮಾಣುಗಳು ಸ್ಥಿರವಾಗಿರಬೇಕಿಲ್ಲ, ಅವು ವಿಭಜನೆ ಹೊಂದಬಹುದು ಎಂಬುದನ್ನು ತಮ್ಮ ಅನೇಕ ಪ್ರಯೋಗಗಳ ಮೂಲಕ ತಿಳಿಸಿಕೊಟ್ಟರು. ೧೯೩೧ರಲ್ಲಿ ಇವರಿಗೆ ನೆಲ್ಸನ್ ಆಫ್ ಬ್ಯಾರನ್ ಪದವಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಗಳು[ಬದಲಾಯಿಸಿ]

  • ೧೯೦೮ ರಲ್ಲಿ ನೋಬೆಲ್ ಪ್ರಶಸ್ತಿ.
  • ೧೯೩೧ ರಲ್ಲಿ ಬ್ಯಾರನ್ ರುದರ್‌ಫೋರ್ಡ್ ಆಫ್ ನೆಲ್ಸನ್ ಪ್ರಶಸ್ತಿ.

ಉಲ್ಲೇಖಗಳು[ಬದಲಾಯಿಸಿ]

  1. "Ernest Rutherford, Baron Rutherford of Nelson". Encyclopædia Britannica.
  2. https://www.nobelprize.org/nobel_prizes/chemistry/laureates/1908/rutherford-bio.html
  3. ಟೆಂಪ್ಲೇಟು:Acad
  4. http://www.chemheritage.org/discover/online-resources/chemistry-in-history/themes/atomic-and-nuclear-structure/rutherford.aspx
  5. Longair, M. S. (2003). Theoretical concepts in physics: an alternative view of theoretical reasoning in physics. Cambridge University Press. pp. 377–378. ISBN 978-0-521-52878-8.
  6. Alan Selby (9 November 2014). "Manchester scientist Ernest Rutherford revealed as top secret mastermind behind sonar technology". Manchester Evening News. Retrieved 13 November 2014.
  7. Rutherford, E. (1919). "Collision of α particles with light atoms. IV. An anomalous effect in nitrogen". The London, Edinburgh, and Dublin Philosophical Magazine and Journal of Science. Series 6. 37 (222): 581–587. doi:10.1080/14786440608635919.
  8. Rutherford, E. (1920). "Bakerian Lecture. Nuclear Constitution of Atoms". Proceedings of the Royal Society A: Mathematical, Physical and Engineering Sciences. 97 (686): 374–400. Bibcode:1920RSPSA..97..374R. doi:10.1098/rspa.1920.0040.

ಹೊರಗಿನ ಕೊಂಡಿಗಳು[ಬದಲಾಯಿಸಿ]