ಹೈದರಾಬಾದ ವಿಮೋಚನಾ ಕಾರ್ಯಾಚರಣೆ
೧೯೪೭ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, "ಡೆಕ್ಕನ್ ರೇಡಿಯೋ" (ಅಥವಾ "ನಿಜಾಮ್ ರೇಡಿಯೋ") ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹಲವು ವರ್ಷಗಳು ಮೊದಲಿನಿಂದ, ನಿಜಾಮ್ "ಸೋಲರಿಯದ ಅಲ್ಲಾಹುವಿನ ಸೈನಿಕರು" ಎಂದು ಕರೆದು ಕೊಳ್ಳುತ್ತಿದ್ದ ತನ್ನ ಸೇನೆಗೆ ಮತ್ತು ನಿಜಾಂ ಪೋಲಿಸರಿಗೆ ಬ್ರಿಟಿಷರ ಸೇನಾಧಿಕಾರಿಗಳಿಂದ ತರಬೇತಿ ಶಿಬಿರಗಳನ್ನು ನೆಡೆಸಿದ್ದ ಮತ್ತು ಆಗ ಪ್ರಸಿದ್ಧವಾಗಿದ್ದ ಸಿಡ್ನಿ ಕಾಟನ್ ಬಂದೂಕುಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ. ಆ ಕಾಲಲ್ಲಿ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್ ಹಾಗು ಪಾಕಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು.
ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ ಪ್ರಜೆಗಳು ಗಾಂಧೀ ಪ್ರಣೀತ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದ್ದರು. ಇದರ ನೇತೃತ್ವವನ್ನು ಸಂಸ್ಥಾನ ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಾಮಾನಂದ ತೀರ್ಥರು ವಹಿಸಿದ್ದರು. ಈ ಚಳುವಳಿಯನ್ನು ಹತ್ತಿಕ್ಕಲು ನಿಜಾಮನು ತನ್ನ ಪೋಲೀಸ್ ಬಲವನ್ನು ಅತ್ಯಂತ ಕ್ರೂರವಾಗಿ ಉಪಯೋಗಿಸಿದನು. ಇದಲ್ಲದೆ, ತನ್ನ ವಿರೋಧಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕಾರ (-ರಜಾಕಾರ ಎನ್ನುವದು ಪರ್ಶಿಯನ್ ಭಾಷೆಯ ಪದ ಮತ್ತು ಇದರ ಅರ್ಥ ಸ್ವಯಂಸೇವಕ-) ಹೆಸರಿನ ಭಯೋತ್ಪಾದಕರ ಪಡೆಯನ್ನು ಕೂಡಾ ನಿಸ್ಸಹಾಯಕ ಪ್ರಜೆಗಳ ಮೇಲೆ ದಾಳಿಗಿಳಿಸಿದನು. ಕಾಸಿಂ ರಜವಿ ಈಗ ಮಹಾರಾಷ್ಟ್ರ ರಾಜ್ಯದಲ್ಲಿರು ಲಾತೂರಿನಲ್ಲಿ ಒಬ್ಬ ಮಾಮೂಲಿ ವಕೀಲನಾಗಿದ್ದ. ಈತ ಉಗ್ರವಾದಿ ಸಂಘಟನೆ‘ಇತಿಹಾದುಲ್ ಮುಸಲ್ಮಾನ್’ದ ಅಧ್ಯಕ್ಷನಾಗಿದ್ದ ಕೂಡಾ. ನಿಜಾಮನು ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ ದಿನದಂದು, ಈ ರಜಾಕಾರರು, ವಿಶೇಷವಾಗಿ ಹೈದರಾಬಾದಿನಲ್ಲಿ ಸಾವಿರಾರು ಜನ ಅಮಾಯಕರ ಮೇಲೆ ದಾಳಿಯಿಟ್ಟು ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಇಂದಿನ ತೆಲಂಗಾಣ ಪ್ರದೇಶ, ದಕ್ಷಿಣ ಮಹಾರಾಷ್ಟ್ರ ಮತ್ತು ಹೊಸಪೇಟೆಯ ಬಳಿಯಿರುವ ತುಂಗಭದ್ರಾ ತೀರದವರೆಗೆ ವಿಸ್ತರಿಸಿದ್ದ ಹೈದರಾಬಾದ ಸಂಸ್ಥಾನದ ಜನ, ೧೮ ಸೆಪ್ಟೆಂಬರ್ ೧೯೪೮ ಸಂಜೆ ಆರು ಗಂಟೆಯವರೆಗೆ ನಿರಂತರವಾಗಿ ಹಿಂಸೆ, ಕೊಲೆ, ಸುಲಿಗೆ ಮತ್ತು ದೌರ್ಜನ್ಯಕ್ಕೆ ಸಿಲುಕಿದರೂ, ಭಾರತದೊಡನೆ ಹೈದರಾಬಾದ ಸಂಸ್ಥಾನದ ವಿಲೀನಕ್ಕಾಗಿ ಹೋರಾಡಿದರು.[೧]
ರಜಾಕಾರರ ದೌರ್ಜನ್ಯ
[ಬದಲಾಯಿಸಿ]ಗ್ರಾಮಗಳಲ್ಲಿರುವ ಹಿಂದು ಸಮುದಾಯದ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಗಳು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ:
೧. ಕಲಬುರ್ಗಿ ಜಿಲ್ಲೆಯಲ್ಲಿ 98 ಗ್ರಾಮಗಳ ಮೇಲೆ ದಾಳಿ, ೪೨ ಕೊಲೆ, ೩೬ ದರೋಡೆ ಹಾಗು ೩೪ ಮಹಿಳೆಯರ ಮೇಲೆ ದೌರ್ಜನ್ಯ.
೨. ಬೀದರ ಜಿಲ್ಲೆಯಲ್ಲಿ ೧೭೬ ಗ್ರಾಮಗಳ ಮೇಲೆ ದಾಳಿ, ೧೨೦ ಕೊಲೆ, ೨೩ ಮಹಿಳೆಯರ ಮೇಲೆ ದೌರ್ಜನ್ಯ.
೩. ರಾಯಚೂರು ಜಿಲ್ಲೆಯಲ್ಲಿ ೯೪ ಗ್ರಾಮಗಳ ಮೇಲೆ ದಾಳಿ, ೨೫ ಕೊಲೆ, ೬೩ ಮಹಿಳೆಯರ ಮೇಲೆ ದೌರ್ಜನ್ಯ.
‘ಕಾಟೊ, ಲೂಟೊ ಔರ ಬಾಟೊ’ ಎನ್ನುವದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು.
ಈ ಸಂದರ್ಭದಲ್ಲಿ ರಾಮಚಂದ್ರ ವೀರಪ್ಪ ಎನ್ನುವವರ ಸಾಹಸದ ಕೃತ್ಯವೊಂದನ್ನು ಇಲ್ಲಿ ನೆನೆಯಬೇಕು. ಹುಮನಾಬಾದದಲ್ಲಿಯ ಬಸವೇಶ್ವರ ಗುಡಿಗೆ ಹೋಗಿ ಪೂಜೆ ಮುಗಿಸಿಕೊಂಡು ಬರುತ್ತಿದ್ದ ಮಾನಿನಿಯೊಬ್ಬಳನ್ನು ನೋಡಿದ ರಜಾಕಾರರು ನಡುಬೀದಿಯಲ್ಲಿಯೇ ಅವಳ ಮಾನಹರಣಕ್ಕೆ ಮುಂದಾದರು. ಈ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ರಾಮಚಂದ್ರ ವೀರಪ್ಪ ಎನ್ನುವ ತರುಣ ಜೀವದ ಹಂಗು ತೊರೆದು ಅವಳನ್ನು ರಕ್ಷಿಸಿದ. ಇವನನ್ನು ಸಾಯಹೊಡೆದು ರಜಾಕಾರರು ಅಲ್ಲಿಂದ ತೆರಳಿದರು. ಆದರೆ ರಾಮಚಂದ್ರ ಬದುಕುಳಿದ ಹಾಗು ಸ್ವತಂತ್ರ ಭಾರತದಲ್ಲಿ ಲೋಕಸಭೆಗೆ – ತನ್ನ ಜೀವಿತಾವಧಿವರೆಗೂ- ಸದಸ್ಯರಾಗಿ ಚುನಾಯಿತರಾಗುತ್ತಿದ್ದರು.
ಪೋಲೀಸ ದೌರ್ಜನ್ಯ
[ಬದಲಾಯಿಸಿ]ಪೋಲೀಸರೂ ಸಹ ರಜಾಕಾರರಿಗೆ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದರು. . ನಿಜಾಮನು ಹೊರಡಿಸಿದ ‘ಕೊಡಲಿ ಬರಾದ್’ ಫರ್ಮಾನ ಮೇರೆಗೆ ಪೋಲೀಸರು ಹಿಂದುಗಳ ಬಳಿಯಿದ್ದ ನಿಯಮಬದ್ಧ ಬಂದೂಕುಗಳನ್ನಲ್ಲದೆ, ಕೊಡಲಿ, ಕುಡಗೋಲುಗಳನ್ನು ಸಹ ಕಿತ್ತುಕೊಂಡು ರಜಾಕಾರರಲ್ಲಿ ಹಂಚಿದರು.
೧೯೪೬ನೆಯ ಇಸವಿಯ ಕಾರಹುಣ್ಣಿವೆಯೆಂದು ಕಲ್ಬುರ್ಗಿಯ ಮಹಾಗಾಂವದ ಗ್ರಾಮಸ್ಥರೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಿದ್ದಾಗ, ರಜಾಕಾರರ ದೊಡ್ಡ ಗುಂಪೊಂದು ಗ್ರಾಮದ ಮೇಲೆ ದಾಳಿ ಮಾಡಿತು. ಗಂಡಸರೆಲ್ಲ ಊರಿನ ಒಂದು ಪಾರ್ಶ್ವಕ್ಕೆ ನಡೆದಾಗ ರಜಾಕಾರರು ಊರಿನಲ್ಲಿ ನುಗ್ಗಿ, ಮನೆಗಳನ್ನು ಲೂಟಿ ಮಾಡುತ್ತ, ಹೆಂಗಸರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ತಕ್ಷಣವೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟ್ಟಿ ಗುರುಬಸವ್ವ ಮೊದಲಾದ ಮಹಿಳೆಯರು ಮನೆಗಳ ಮಹಡಿ ಏರಿ ರಜಾಕಾರರ ಮೇಲೆ ಕವಣೆಗಲ್ಲುಗಳನ್ನು ಬೀಸಿದ್ದಲ್ಲದೆ ಕಾದ ಎಣ್ಣೆಯನ್ನು ಸುರುವತೊಡಗಿದರು. ರಜಾಕಾರರು ಹಿಮ್ಮೆಟ್ಟಬೇಕಾಯಿತು. ಆ ದಿನದಿಂದ ಹಲವು ಮಹಿಳೆಯರು ಸಾರ್ವಜನಿಕವಾಗಿ ಗಾಂಧಿ ಟೊಪ್ಪಿಗೆ ಧರಿಸಲಾರಂಭಿಸಿದರು.
ಚಿಕ್ಕೇನಕೊಪ್ಪದಲ್ಲಿ ಶ್ರಾವಣಮಾಸದಲ್ಲಿ ಬಸವೇಶ್ವರ ಜಾತ್ರೆ ನಡೆಯುವ ದಿನದಂದು, ೧೨ ಸಪ್ಟಂಬರ ೧೯೪೭ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಡಮನಿ, ತೇದಿ ಒಕ್ಕಲದ ಚನ್ನಪ್ಪ, ಅಡಿಗೆ ಮನಿ ಶಿವಲಿಂಗಪ್ಪ, ಮಲ್ಲಪ್ಪ ಹಕಾರಿ, ಮಹಾಲಿಂಗಯ್ಯ, ಅಕ್ಕಸಾಲಿ ಗುರಪ್ಪ, ದೇವಪ್ಪ ಮೊದಲಾದವರು “ವಂದೇ ಮಾತರಮ್” ಎಂದು ಘೋಷಿಸುತ್ತ ಚಳುವಳಿ ನಡೆಸಿದರು. ಈ ಸತ್ಯಾಗ್ರಹಿಗಳನ್ನು ಬಂಧಿಸಿದ ಪೋಲೀಸರು , ಪ್ರತೀಕಾರವಾಗಿ ರಜಾಕಾರರೊಡನೆ ಚಿಕ್ಕೇನಕೊಪ್ಪದ ಮೇಲೆ ದಾಳಿ ಮಾಡಿದರು. ಗ್ರಾಮಸ್ಥರನ್ನು ಬಗೆಬಗೆಯಾಗಿ ಹಿಂಸಿಸಿ ಮನೆಗಳನ್ನು ಲೂಟಿ ಮಾಡಿದರು. ಮಹಾದೇವಪ್ಪ ಸ್ಥಾಪಿಸಿದ ವಾಚನಾಲಯವನ್ನು ಸುಟ್ಟು ಬೂದಿ ಮಾಡಿದರು.
ಮಳ್ಳಿ ಕೃಷ್ಣರಾವ ಎನ್ನುವ ವಿದ್ಯಾರ್ಥಿ ಸತ್ಯಾಗ್ರಹಿಯನ್ನು ಹುಡುಕುತ್ತ ಮಳ್ಳಿ ಗ್ರಾಮಕ್ಕೆ ಬಂದ ಪೋಲೀಸರು ಕೃಷ್ಣರಾಯರ ತಂದೆ ಮಹಿಪತಿರಾಯರನ್ನು, ಚಿಕ್ಕಪ್ಪ ರಾಮರಾಯರನ್ನು, ಅಣ್ಣ ನಾರಾಯಣರಾಯರನ್ನು ಹಾಗು ತಮ್ಮ ಗುರುರಾಯನನ್ನು ಮನೆಯಂಗಳದಲ್ಲಿಯೆ ಗುಂಡಿಟ್ಟು ಕೊಂದರು. ಅದು ಸಾಲದೆ, ಊರಿನಲ್ಲಿ ಸಿದ್ದರಾಮ, ಶೇಷಪ್ಪ ಪತ್ತಾರ, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ,ಔದೋಜಿ ಮತ್ತು ಬಸಲಿಂಗಪ್ಪ ಎನ್ನುವ ಗ್ರಾಮಸ್ಥರನ್ನು ಸಹ ಗುಂಡಿಟ್ಟು ಕೊಂದರು
೧೯೪೮ ಮೇ ತಿಂಗಳ ಮೊದಲ ವಾರದಲ್ಲಿ ರಜಾಕಾರರು ಬೀದರ ಜಿಲ್ಲೆಯ ಗೋರ್ಟಾ ಎನ್ನುವ ಗ್ರಾಮದ ಮೇಲೆ ದಾಳಿ ಮಾಡಿ, ಅಲ್ಲಿದ್ದ ಎರಡುನೂರು ಹಿಂದುಗಳನ್ನೆಲ್ಲ ಒಟ್ಟುಗೂಡಿಸಿ, ಸುಟ್ಟುಹಾಕಿದರು. ದಕ್ಷಿಣ ಭಾರತದ ಜಾಲಿಯನವಾಲಾಬಾಗ ದುರಂತವೆಂದು ಇದು ಕುಪ್ರಸಿದ್ದವಾಯಿತು. ಭಾಲ್ಕಿಯ ಹಿರೇಮಠ ಸಂಸ್ಥಾನವು ಗಡಿಭಾಗದಲ್ಲಿ ಸಂತ್ರಸ್ಥರಿಗೆ ಆಶ್ರಯ ನೀಡಿತು. ಭೀಮಣ್ಣ ಖಂಡ್ರೆ, ಶಿವಾ ಖಂಡ್ರೆ, ಬಂಡೆಪ್ಪ ಮೊದಲಾದವರು ಬೀದರ ಜಿಲ್ಲೆಯಲ್ಲಿ ರಜಾಕಾರರ ವಿರುದ್ಧ ಹೋರಾಟ ನೆಡೆಸಿದರು. ಇದರ ಪರಿಣಾಮವಾಗಿ, ನಿಜಾಮ್ ಸರ್ಕಾರವು ಅವರ ಆಸ್ತಿಯನ್ನು ಜಪ್ತಿ ಮಾಡಿ, ಅನೇಕ ರೀತಿಯಲ್ಲಿ ತೊಂದರೆ ನೀಡಿತು.
ತುಮರಿಕೊಪ್ಪದಲ್ಲಿ ಸಭೆ ನಡೆಯಿಸುತ್ತಿದ್ದ ಜನರ ಮೇಲೆ ಪೋಲೀಸರು ಗುಂಡಿನ ದಾಳಿ ಮಾಡಿ ಹಿರೆಗೊಣ್ಣಾಗರದ ಪಿಂಜಾರ ಅಲಿಸಾಬ ಮತ್ತು ಕುನ್ನಾಪುರದ ಹನುಮಂತಪ್ಪ ಎನ್ನುವವರನ್ನು ಬಲಿ ತೆಗೆದುಕೊಂಡರು. ಅದೇ ಊರಿನ ಮೇಲೆ ಮರುದಿನ ರಜಾಕಾರರ ಜೊತೆಗೆ ಮತ್ತೊಮ್ಮೆ ದಾಳಿ ಮಾಡಿದರು. ಬಾಂದಿನಾಳದ ಮರಗವ್ವನನ್ನು ಹಿಡಿದುಕೊಂಡು ಹಾಡುಹಗಲಲ್ಲೆ ಅತ್ಯಾಚಾರ ಮಾಡಿ ಸಾಯಿಸಿದರು. ಹಾಬಲಕಟ್ಟೆಯ ವೃದ್ಧೆ ಯಮುನವ್ವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು ಹಾಕಿದರು.[೨]
ಈ ಕಾರಣಗಳಿಂದಾಗಿ ಚಳುವಳಿಗಾರರು ವಿಮೋಚನಾ ಚಳುವಳಿಯನ್ನು ಎರಡು ಸ್ತರಗಳಲ್ಲಿ ಸಂಘಟಿಸಬೇಕಾಯಿತು:
I. ಅಹಿಂಸಾತ್ಮಕ ಚಳುವಳಿಯನ್ನು ಮುಂದುವರಿಸುವದು.
II. ರಜಾಕಾರರ ವಿರುದ್ಧ ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆಯನ್ನು ಏರ್ಪಡಿಸುವದು.
ಅಹಿಂಸಾತ್ಮಕ ಚಳುವಳಿ
[ಬದಲಾಯಿಸಿ]ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ಹೈದರಾಬಾದ ಸಂಸ್ಥಾನದಲ್ಲಿ ಅಹಿಂಸಾತ್ಮಕ ಚಳುವಳಿಯ ನೇತಾರರಾದ ಸ್ವಾಮಿ ರಾಮಾನಂದ ತೀರ್ಥರು , ಡಾ: ಮೇಲ್ಕೋಟೆಯವರು ಹಾಗು ಇತರ ಕೆಲವು ಚಳುವಳಿಗಾರರು ೧೫ ಅಗಸ್ಟ ೧೯೪೭ರ ಮುಂಜಾವಿನ ಮೂರು ಗಂಟೆಯ ಸಮಯಕ್ಕೆ ಹೈದರಾಬಾದದ ಸುಲ್ತಾನ ಬಜಾರ ಎನ್ನುವ ಸಾರ್ವಜನಿಕ ಸ್ಥಳದಲ್ಲಿ ಭಾರತದ ತ್ರಿವರ್ಣಧ್ವಜ ಹಾರಿಸಿದರು.
ರಾಯಚೂರಿನಲ್ಲಿ ಅಗಸ್ಟ ೧೪ರ ನಟ್ಟಿರುಳಿನಲ್ಲಿ ಮಟಮಾರಿ ನಾಗಪ್ಪ, ಚಂದ್ರಯ್ಯ, ಶರಭಯ್ಯ ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೋಲೀಸ ಕಾವಲನ್ನು ಭೇದಿಸಿ ಜಿಲ್ಲಾಧಿಕಾರಿಯ ಕಚೇರಿಯ ಮೇಲೆ ತ್ರಿವರ್ಣಧ್ವಜ ಹಾರಿಸಿದರು.
ಕಲಬುರ್ಗಿಯಲ್ಲಿ ಅನಿರುದ್ಧ ದೇಸಾಯಿ ಎನ್ನುವ ವಿದ್ಯಾರ್ಥಿಯ ಮುಂದಾಳ್ತನದಲ್ಲಿ ೫೦-೬೦ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಮೆರವಣಿಗೆ ತೆಗೆದರು.
ಇದರಂತೆ ಕನಕಗಿರಿಯಲ್ಲಿ ಜಯತೀರ್ಥ ರಾಜಪುರೋಹಿತರು, ಆಳಂದದಲ್ಲಿ ಎ.ವಿ.ಪಾಟೀಲರು, ಯಾದಗಿರಿಯಲ್ಲಿ ಕೋಲೂರು ಮಲ್ಲಪ್ಪನವರು, ಚಿತ್ತಾಪುರದಲ್ಲಿ ಬಸಪ್ಪ ಸಜ್ಜನಶೆಟ್ಟರು, ಕಾರಟಗಿಯಲ್ಲಿ ಬೆನಕಲ್ ಭೀಮಸೇನರಾಯರು ಹೀಗೆ ಎಲ್ಲೆಡೆಗೂ ಭಾರತದ ತ್ರಿವರ್ಣಧ್ವಜ ಹಾರಾಡಿತು.
ಸ್ವಾಮಿ ರಾಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “Quit college, Act now” ಕರೆಯ ಮೇರೆಗೆ ಸಾವಿರಾರು ಕಾಲೇಜ ಹಾಗು ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿದರು. ಅನಿರುದ್ಧ ದೇಸಾಯಿ ಎನ್ನುವ ಹದಿಹರೆಯದ ಬಾಲಕ ಜೇಲು ಸೇರಿದ್ದ. ಇವನ ತಂದೆ ಸಹ ಸತ್ಯಾಗ್ರಹ ಮಾಡಿ ಅದೇ ಜೇಲಿನಲ್ಲಿ ಸೆರೆಯಾಳಾದರು. ಇದೇ ಜೈಲಿನ ಮತ್ತೊಂದು ಬರಾಕಿನಲ್ಲಿ ಅನಿರುದ್ಧ ದೇಸಾಯಿಯ ಚಿಕ್ಕಪ್ಪ ಬೆಣಕಲ್ ಭೀಮಸೇನರಾವ ಹಾಗೂ ಅವರ ಭಾವ ಮೈದುನ ಸದಾಶಿವರಾವ್ ದೇಸಾಯಿ ಸಹ ಇದ್ದರು. ಜೈಲಿನಲ್ಲಿ “ವಂದೇ ಮಾತರಮ್ ” ಹಾಡಿದುದರ ಪ್ರತೀಕಾರಾರ್ಥವಾಗಿ ಜೈಲಿನ ಅಧಿಕಾರಿಗಳು ಹಾಗು ರಜಾಕಾರರು ಸೆರೆಯಾಳುಗಳನ್ನು ಲಾಠಿಗಳಿಂದ ಚಚ್ಚಿದರು. ಇದರ ಪರಿಣಾಮವಾಗಿ ಅನೇಕ ಸೆರೆಯಾಳುಗಳು ಕೈಕಾಲು ಮುರಿದುಕೊಂಡು ತೀವ್ರ ಗಾಯಾಳುಗಳಾದರು ಹಾಗು ಬೆಣಕಲ್ ಭೀಮಸೇನರಾವ ಮರಣ ಹೊಂದಿದರು.
ಆರ್ಯಸಮಾಜದ ಚಂದ್ರಶೇಖರ ಪಾಟೀಲರಿಗೆ ಔರಂಗಾಬಾದ ಜೇಲಿನಲ್ಲಿ ಕೊರಡೇಟಿನ ಶಿಕ್ಷೆ ಕೊಡಲು ಜೈಲಿನ ಅಧಿಕಾರಿಗಳು ಮುಂದಾದಾಗ, ಅಲ್ಲಿಯ ಸೆರೆಯಾಳುಗಳು, ತಾವು ಸತ್ತೇವೆಯೆ ಹೊರತು, ಚಂದ್ರಶೇಖರ ಪಾಟೀಲರಿಗೆ ತೊಂದರೆಯಾಗಗೊಡುವದಿಲ್ಲವೆಂದು, ಇವರ ಸುತ್ತ ಮಾನವ ಕೋಟೆಯನ್ನು ನಿರ್ಮಿಸಿದ್ದು ಅಭೂತಪೂರ್ವ ಘಟನೆಯಾಗಿದೆ.
೧೯೪೮ ಫೆಬ್ರುವರಿ ೧೫ರಂದು ಮರಡಿ ಆಶ್ರಮದ ತಪಸ್ವಿ ಭೀಮಜ್ಜನವರು ಸಾರ್ವಜನಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಒಮ್ಮಿಂದೊಮ್ಮಿಗೆ ದಾಳಿ ಮಾಡಿದ ಪೋಲೀಸರು ಹಾಗು ರಜಾಕಾರರು ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಭೀಮಜ್ಜನವರನ್ನಲ್ಲದೆ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ಕಾಟಾಪುರದ ಹನುಮಂತರಾವ, ಕಿಶನರಾವ ದೇಸಾಯಿ, ಅಪ್ಪಣ್ಣ ಮರಾಠೆ, ಬಸಯ್ಯ ಗೌಡಪ್ಪ ಹಾಗು ನೂರಾರು ಜನರನ್ನು ಲಾರಿಗಳಲ್ಲಿ ತುಂಬಿ ಒಯ್ದು ಕುಷ್ಟಗಿ ಜೈಲಿಗೆ ಸೇರಿಸಿದರು.
೧೯೪೭ ಅಗಸ್ಟ ತಿಂಗಳ ಮೊದಲ ವಾರದಲ್ಲೆ ನಿಜಾಮ ಸರಕಾರವು ತ್ರಿವರ್ಣಧ್ವಜವನ್ನು ನಿಷೇಧಿಸಿತು. ಆ ಸಮಯದಲ್ಲಿ ಮಾಲಗಿತ್ತಿಯಲ್ಲಿ ನಡೆದ ಬಹಿರಂಗ ಮೆರವಣಿಗೆಯಲ್ಲಿ, ಇದ್ದಕ್ಕಿದ್ದಂತೆ ಸೀತಮ್ಮ ಬಡಿಗೇರ ಎನ್ನುವ ೨೪ ವಯಸ್ಸಿನ ಹೆಣ್ಣು ಮಗಳು ವೀರಗಚ್ಚೆ ಹಾಕಿಕೊಂಡು, ಹಣೆ ತುಂಬ ಕುಂಕುಮ ಹಾಗು ಗಲ್ಲಕ್ಕೆ ಅರಿಶಿಣ ಹಚ್ಚಿಕೊಂಡು, ಒಂದು ಕೈಯಲ್ಲಿ ತ್ರಿವರ್ಣಧ್ವಜ ಹಾಗು ಇನ್ನೊಂದು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಕಾಳಿಯಂತೆ ಕುಣಿಯುತ್ತ ಬಂದಳು. “ವಂದೇ ಮಾತರಮ್” ಘೋಷಣೆ ಮುಗಿಲು ಮುಟ್ಟಿತು.
ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆ
[ಬದಲಾಯಿಸಿ]ಹೈದರಾಬಾದ್ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮಿ ರಾಮಾನಂದ ತೀರ್ಥರ ಬಂಧನದ ನಂತರ ಹೈದರಾಬಾದಿನ ಪರಿಸ್ಥಿತಿ ಗಂಭೀರವಾಯಿತು. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮುಖಂಡರಾದ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ ಮೊದಲಾದ ಯುವಕರು, ಸ್ಥಳೀಯ ಗಣ್ಯರಾದ ಅನ್ನಪೂರ್ಣಯ್ಯ ಸ್ವಾಮಿ ಮೊದಲಾದವರ ಸಹಾಯದಿಂದ ರಜಾಕಾರರ ಹಾವಳಿಗೆ ತುತ್ತಾದ ಹಿಂದು-ಮುಸ್ಲಿಂರ ರಕ್ಷಣೆ ಮಾಡಿದರು. ಹೈದರಾಬಾದ್ ನಿಜಾಮ್ ನ ಹತ್ತಿರ ದಿವಾನರಾಗಿದ್ದ ಮಿರ್ಜಾ ಇಸ್ಮ್ಐಲ್ ಹಿಂದೂಗಳ ರಕ್ಷಣೆಗೆ ವಿಶೇಷ ಸಹಾಯ ನೀಡಿದರು.ತಮ್ಮ ವಿದ್ಯಾಭ್ಯಾಸ ತೊರೆದು, ಮುಂಡರಗಿಗೆ ಬಂದ ಈ ಯುವಕರು, ಹಳೆಯ ಅನ್ನದಾನೀಶ್ವರ ಮಠದಲ್ಲಿ ಪ್ರಪ್ರಥಮ ಶಿಬಿರವನ್ನು ಸ್ಥಾಪಿಸಿದರು. ಶಿವಮೂರ್ತಿ ಸ್ವಾಮಿ ಅಳವಂಡಿ, ಡಾ.ಚುರ್ಚಿಹಾಳ್ ಮಠಮೊದಲಾದವರು ಈ ಶಿಬಿರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಪೋಲಿಸ್ ಕೆಲಸದಲ್ಲಿದ್ದರೂ, ಫೌಜದಾರ್ ಹೆಬ್ಬಸ್ಸೂರ್, ಈ ಶಿಬಿರದವರಿಗೆ ಅಗತ್ಯ ಮಾಹಿತಿ ಮತ್ತು ಬಂದೂಕು ಬಳಸುವ ತರಬೇತಿ ನೀಡಿದರು. ಅನೇಕ ದಿನಗಳ ಕಾಲ ಒಂದು ಹೊತ್ತು ಊಟಕ್ಕೂ ಶಿಬಿರಾರ್ಥಿಗಳು ಪರದಾಡ ಬೇಕಾಯಿತು.
ಕಾಲಕ್ರಮೇಣ,ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಗಡಿಗಳಲ್ಲಿ ಸುಮಾರು ೩೦ ಶಿಬಿರಗಳಿದ್ದವು.[೩]
ಗಜೇಂದ್ರಗಡದ ಶಿಬಿರಕ್ಕೆ ಪುಂಡರೀಕಪ್ಪ ಜ್ಞಾನಮೋಠೆ ಶಿಬಿರಾಧಿಪತಿಯಾಗಿದ್ದರು. ಬಿ.ವಿ.ದೇಸಾಯಿ ಇವರಿಗೆ ಸಹಾಯಕರು. ಮಂತ್ರಾಲಯದ ಗಡಿಶಿಬಿರಕ್ಕೆ ನಾಗಪ್ಪನವರು ಶಿಬಿರಾಧಿಪತಿಗಳು. ಚಂದ್ರಯ್ಯ, ಈಶ್ವರಯ್ಯ, ಅಯನೂರು ನರಸಪ್ಪ ಇವರೆಲ್ಲ ಸಹಾಯಕರು. ಅಯನೂರು ಹೋಬಳಿಯ ಹತ್ತಿರದ ಶಿಬಿರಕ್ಕೆ ಕುರ್ಲಹಳ್ಳಿ ರಾಘವೇಂದ್ರರಾಯರು ಶಿಬಿರಾಧಿಪತಿಗಳು.
ಮುಂಡರಗಿಯ ಶಿಬಿರಕ್ಕೆ ಅಳವಂಡಿ ಶಿವಮೂರ್ತಿ ಸ್ವಾಮಿ ಶಿಬಿರಾಧಿಪತಿ. ಅನ್ನದಾನಯ್ಯ ಪುರಾಣಿಕರು ಕಾರ್ಯಾಚರಣೆ, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಪ್ರಚಾರದ ಮುಖ್ಯಸ್ಥರು. ಇವರ ಸಹಾಯಕರಾಗಿ ಕೆಲಸ ಮಾಡಿದವರು ಪ್ರಭುರಾಜ್ ಪಾಟೀಲ, ಡಂಬಳ ಸೋಮಪ್ಪ, ದೇವೇಂದ್ರ ಕುಮಾರ ಹಕಾರಿ, ನೀಲಕಂಠಗೌಡ, ಮೊದಲಾದವರು. ಗಾಯಗೊಂಡ ಶಿಬಿರಾರ್ಥಿಗಳಿಗೆ ನೆರವು ನೀಡಿದ್ದು ಡಾ.ಚುರ್ಚಿಹಾಳ್ ಮಠ. ಕೊಪ್ಪಳ ಕೋಟೆಯಲ್ಲಿ ಭಾರತದ ಧ್ವಜ ಹಾರಿಸಲು ಯತ್ನಿಸಿದ ಬಾಲಕ ಪಂಚಾಕ್ಷರಿ ಹಿರೇಮಠನನ್ನು ಪರಿಚಿತ ಪೋಲಿಸನೊಬ್ಬ ಬಂಧಿಸದೆ, ಆತನನ್ನು ಸುರಕ್ಷಿತ ಸ್ಥಾನಕ್ಕೆ ಕಳುಹಿಸಿದ.
ಹಾಲು-ಮೊಸರು ಮಾರಲು ಹಳ್ಳಿ-ಹಳ್ಳಿ ತಿರುಗುತ್ತಿದ್ದ ಮಹಿಳೆಯರು, ದನಗ್ರಾಹಿಗಳು, ಹೀಗೆ ಜನಸಾಮಾನ್ಯರು ರಜಾಕಾರರ ಮತ್ತು ನಿಜಾಮ್ ಪೋಲೀಸರ ಕುರಿತ ಮಾಹಿತಿಯನ್ನು ಮುಂಡರಗಿಯ ಶಿಬಿರಕ್ಕೆ ತಲುಪಿಸುವಂತಹ ಗುಪ್ತಚಾರ ವ್ಯವಸ್ಥೆಯನ್ನು ಅನ್ನದಾನಯ್ಯ ಪುರಾಣಿಕ ನೆಡೆಸುತ್ತಿದ್ದರು. ಶಿಬಿರದ ಕಾರ್ಯಾಚರಣೆಗಳನ್ನು ಕುರಿತ ಗುಪ್ತ ಮಾಹಿತಿ, ಕೈಬರಹದ ಪತ್ರಗಳ ಮೂಲಕ ರವಾನೆಯಾಗುತ್ತಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ , ಮುಂಡರಗಿಯ ಶಿಬಿರದ ಕಾರ್ಯಾಚರಣೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವರ ಸೂಚನೆಯ ಮೆರೆಗೆ, ಕೇಂದ್ರ ಮಂತ್ರಿ ಗಾಡ್ಗೀಳ, ಕಾಂಗ್ರೆಸ್ ಮುಖಂಡ ನಿಜಲಿಂಗಪ್ಪ ಮೊದಲಾದವರು ರಹಸ್ಯವಾಗಿ ಈ ಶಿಬಿರಕ್ಕೆ ಬಂದು, ಉತ್ತೇಜನ ನೀಡಿದ್ದರು. ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದ ವಿವರಗಳನ್ನು ರಾಷ್ಟ್ರೀಯ ವೃತ್ತ ಪರ್ತಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಿಸುವಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸೂಚನೆ ನೀಡಿದ್ದರು. ಈ ಪತ್ರಿಕೆಗಳಿಗೆ ವರದಿಯನ್ನು ಅಲ್ಲಮ ಹೆಸರಿನಲ್ಲಿ ಬರೆದು ಕಳುಹಿಸುವ ಕೆಲಸವನ್ನು ಅವರು, ಅನ್ನದಾನಯ್ಯ ಪುರಾಣಿಕರಿಗೆ ವಹಿಸಿದ್ದರು. ಆಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ, ಸಂಯುಕ್ತ ಕರ್ನಾಟಕ ಪತ್ರಿಕೆ ನಿರ್ಭಿತಿಯಿಂದ ಹೋರಾಟದ ವರದಿಗಳನ್ನು ಪ್ರಕಟಿಸಿದ್ದು, ಇಲ್ಲಿ ಗಮನಾರ್ಹ.
ವಿಜಯಪುರ ಜಿಲ್ಲೆಯ ಕಕ್ಕಲಮೇಳದಲ್ಲಿ ಸ್ಥಾಪಿತವಾದ ಸರದಾರ ಶರಣಗೌಡ ಇನಾಮದಾರರ ಇವರ ಶಿಬಿರದಲ್ಲಿಯ ಯೋಧರಂತೂ ರಕ್ತಪ್ರತಿಜ್ಞೆಯನ್ನೇ ಮಾಡಿದರು. ಶರಣಗೌಡರ ಪ್ರತಿದಾಳಿಗಳು ರಜಾಕಾರರಲ್ಲಿ ನಡುಕವನ್ನೆ ಹುಟ್ಟಿಸಿದವು. ಶಂಕರೇಗೌಡ ಮತ್ತು ಅಮರೇಶ ಎನ್ನುವ ಹೈಸ್ಕೂಲ ವಿದ್ಯಾರ್ಥಿಗಳು ಮಾನವಿಯಲ್ಲಿ ರಜಾಕಾರರ ಪರೇಡಿನ ಮೇಲೆ ಕೈಬಾಂಬ್ ಎಸೆದರು. (ಕೈಬಾಂಬ್ ಸ್ಫೋಟಗೊಳ್ಳಲಿಲ್ಲ. ಈ ಇಬ್ಬರೂ ವಿದ್ಯಾರ್ಥಿಗಳು ಪಾರಾಗಿ ಓಡಿಹೋದರು). ಹಡಗಿನಹಾಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ತಹಶೀಲದಾರನ ಡೇರೆಗೆ ರಾತ್ರಿಯಲ್ಲಿ ಬೆಂಕಿ ಹಚ್ಚಿ ಅವನನ್ನು ಅಲ್ಲಿಂದ ಓಡಿಸಲಾಯಿತು. ಅಯನೂರು ಹೋಬಳಿಯ ಮಂಗಳೂರಿನಲ್ಲಿ ಪೋಲೀಸ ಅಧಿಕಾರಿಯ ಕ್ಯಾಂಪ್ ಮೇಲೆ ದಾಳಿ ಮಾಡಿ ಅವರನ್ನು ಓಡಿಸಿದರು. ಗುಡದೂರಿನಲ್ಲಿ ನಿಜಾಮನ ಸೇನಾ ತುಕಡಿಯ ಮೇಲೆ ರಾತ್ರಿದಾಳಿ ಮಾಡಿ ಅಲ್ಲಿ ತ್ರಿವರ್ಣಧ್ವಜ ಹಾರಿಸಿದರು.
ರಜಾಕಾರರ ಪ್ರಬಲ್ಯವಿದ್ದ ಕುಕುನೂರಿನಲ್ಲಿದ್ದ ಪ್ರಮುಖ ಪೋಲಿಸ್ ಠಾಣೆಯ ಮೇಲೆ ದಾಳಿ ನೆಡೆಸಲು ಪ್ರಭುರಾಜ ಪಾಟೀಲ, ಮುರುಘೇಂದ್ರಯ್ಯ ಶಿರೂರಮಠ ಮೊದಲಾಗಿ ಸುಮಾರು ಅರವತ್ತು ಯುವಕರನ್ನು ಮುಂಡರಗಿಯ ಶಿಬಿರದಿಂದ ಬಸರಿಗಿಡ ವೀರಪ್ಪನವರ ಬಸ್ಸಿನಲ್ಲಿ ಕಳುಹಿಸಿದ ಅನ್ನದಾನಯ್ಯ ಪುರಾಣಿಕ, ಮತ್ತೊಂದೆಡೆ ಕುಕುನೂರಿನಲ್ಲಿದ್ದ ರಜಾಕಾರರು ಮತ್ತು ಪೋಲಿಸ್ ಅಧಿಕಾರಿ ರಾಮಿ ರೆಡ್ಡಿಯನ್ನು ಚಿಕೇನಕೊಪ್ಪದಲ್ಲಿ ನೆಡೆಯುತ್ತಿದ್ದ ಜಾತ್ರೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಪೂರ್ವ ಯೋಜನೆಯಂತೆ ಕುಕುನೂರಿನ ಪೋಲಿಸ್ ಠಾಣೆಯ ಮೇಲೆ ನೆಡೆದ ದಾಳಿಯಲ್ಲಿ ಮುಂಡರಗಿ ಶಿಬಿರದ ಯುವಕರು ವಿಜಯ ಸಾಧಿಸಿ, ಅಪಾರ ಪ್ರಮಾಣದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ಈ ದಾಳಿಯಲ್ಲಿ ನಿಜಾಮ್ ಪೋಲಿಸರ ಗುಂಡಿಗೆ ಬಲಿಯಾಗಲಿದ್ದ ಪ್ರಭುರಾಜ ಪಾಟೀಲರನ್ನು ಅಸಾಮಾನ್ಯ ಸಾಹಸ ಪ್ರದರ್ಶಿಸಿ ಮುರುಘೇಂದ್ರಯ್ಯ ಶಿರೂರಮಠ ರಕ್ಷಿಸಿದರು. ಈ ಕಾರ್ಯಾಚರಣೆಯಿಂದಾಗಿ, ನಿಜಾಮ್ ಪೋಲೀಸರು ಮತ್ತು ರಜಾಕಾರರ ವಿರುದ್ಧ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರು ಜಯಗಳಿಸಿದ್ದರು. ಸೋಲಿನಿಂದ ಕುಪಿತನಾದ ನಿಜಾಮ್, ಅಳವಂಡಿ ಶಿವಮೂರ್ತಿ ಸ್ವಾಮಿ, ಅನ್ನದಾನಯ್ಯ ಪುರಾಣಿಕರನ್ನು ಜೀವಂತ ಅಥವಾ ಶವವಾಗಿ ತಂದವರಿಗೆ ಭಾರೀ ಬಹುಮಾನ ನೀಡುವುದಾಗಿ ಘೋಷಿಸಿದ.
ಕೆಲವು ಕಾಂಗ್ರೆಸ್ ಮುಖಂಡರ ಪಿತೂರಿಯಿಂದಾಗಿ ಮುಂಬಯಿ ಸರ್ಕಾರದ ಮುಖ್ಯಸ್ಥರಾದ ಮುರಾರ್ಜಿ ದೇಸಾಯಿ, ಪೋಲಿಸರಿಗೆಮುಂಡರಗಿ ಶಿಬಿರದ ಮೇಲೆ ದಾಳಿ ನೆಡೆಸಿ, ಹೋರಾಟಗಾರರನ್ನು ಜೀವಂತವಾಗಿ ಅಥವಾ ಕೊಂದು ತರಬೇಕೆಂಬ ಆಜ್ಞೆ ಮಾಡಿದರು. ಪೋಲಿಸರು ಬರುತ್ತಿರುವ ಮಾಹಿತಿಯನ್ನು ಹೆಬ್ಬಸೂರ ಬಂದು ತಿಳಿಸಿದಾಗ, ಅನ್ನದಾನಯ್ಯ ಪುರಾಣಿಕ ಮುಂಡರಗಿ ಶಿಬಿರವನ್ನು ಖಾಲಿ ಮಾಡಿಸಿ, ಎಲ್ಲರನ್ನು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಿದರು. ನಂತರ ಅವರು, ಪ್ರಮುಖ ದಾಖಲೆಗಳೊಂದಿಗೆ ಮುಂಡರಗಿಯಿಂದ, ತುಂಗಭದ್ರಾ ತೀರದಲ್ಲಿರುವ ಹೊಸೂರು ಶಿಬಿರಕ್ಕೆ ಓಡುತ್ತಾ ,ಪೋಲಿಸರ ಕೈಗೆ ಸಿಗದಂತೆ ಬಂದು ತಲುಪಿದರು. ಹೊಸೂರು ಶಿಬಿರದಲ್ಲಿದ್ದ ಹೋರಾಟಗಾರರನ್ನು ಕೂಡಾ ಪೋಲೀಸರಿಂದ ರಕ್ಷಿಸಲಾಯಿತು. ಮುಂದೆ, ಧಾರವಾಡದದ ಜಿಲ್ಲಾಧಿಕಾರಿ ಈ ಆದೇಶವನ್ನು ರದ್ದುಗೊಳಿಸುವ ತನಕ, ಹೋರಾಟಗಾರರ ಪರಿಸ್ಥಿತಿ ಬಹಳ ಕಠಿಣವಿತ್ತು.
ಮರುದಿನ,ಸ್ವಾಮಿ ರಾಮಾನಂದ ತೀರ್ಥ, ಗದುಗಿಗೆ ಬರುವ ಕಾರ್ಯಕ್ರಮವಿದ್ದ ಕಾರಣ, ಅಳವಂಡಿ ಶಿವಮೂರ್ತಿ ಸ್ವಾಮಿ ಆಗ ಗದುಗಿನಲ್ಲಿದ್ದು, ಈ ಪೋಲೀಸ ಕಾರ್ಯಾಚರಣೆಯಿಂದ ಸುರಕ್ಷಿತವಾಗಿದ್ದರು. ಸ್ವಾಮಿ ರಾಮಾನಂದ ತೀರ್ಥರ ಭೇಟಿಗಾಗಿ ಅನ್ನದಾನಯ್ಯ ಪುರಾಣಿಕ,ಬೆಟಗೇರಿ ವಿರೂಪಾಕ್ಷಪ್ಪ ಸರಕು ಸಾಗಾಣಿಕೆ ರೈಲಿನಲ್ಲಿ ಹೊಸಪೇಟೆಯಿಂದ ಗದುಗಿಗೆ ಹೊರಟರು. ಇವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ರಜಾಕಾರರು ತುಂಬಿದ್ದರೆ, ಬನ್ನಿಕೊಪ್ಪ ನಿಲ್ದಾಣದಲ್ಲಿ ರಾಮಿರೆಡ್ಡಿ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಫೋಲಿಸರು ಕಾದಿದ್ದರು. ಇವರ ಕಣ್ಣು ತಪ್ಪಿಸಿ, ಗದಗ ತಲುಪಿ ಸ್ವಾಮಿ ರಾಮಾನಂದ ತೀರ್ಥರ ಭೇಟಿ ಮಾಡಿದರು. ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ತೀವ್ರಗೊಳಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ಗೌರಪುರದಲ್ಲಿ ಜನಸಂಘಟನೆಗಾಗಿ ತೆರಳಿದ್ದ ಜಯತೀರ್ಥ ರಾಜಪುರೋಹಿತರನ್ನು ಪೋಲೀಸರು ಬೆನ್ನಟ್ಟಿ ಬಂದಾಗ, ಈ ತರುಣ ಕ್ರಾಂತಿಕಾರಿಗೆ ಆಶ್ರಯವಿತ್ತವನು ಉಪ್ಪಾಲದಿನ್ನೆಯ ಮಡಿವಾಳಪ್ಪ ಎನ್ನುವ ರೈತ. ಪೋಲೀಸರು ಮಡಿವಾಳಪ್ಪನ ಮನೆಗೆ ಶೋಧನೆಗೆ ಬಂದಾಗ , ರಾಜಪುರೋಹಿತರು ಅಲ್ಲಿಂದ ಹೊರಬರಲು ಉದ್ಯುಕ್ತರಾದರು. ಆ ಸಂದರ್ಭದಲ್ಲಿ ರೈತ ಮಡಿವಾಳಪ್ಪ ಹೇಳಿದ ಮಾತು ಹೈದರಾಬಾದ ಪ್ರಜೆಗಳ ಹೃದಯವನ್ನು ತೆರೆದು ತೋರಿಸುವಂತಹ ಮಾತಾಗಿದೆ: “ಅಲ್ಲೇ ನನ್ ಹೇಣ್ತಿ ಹಂತೇಕ್ ಹೋಗಿ, ಕೌದಿ ಹೊಚ್ಕೊಂಡ್ ಮಲಕೋರಿ, ನನ್ ಮಗಾ ಮಲಗ್ಯಾನ ಅಂತ ಹೇಳ್ತೀನಿ”![೪]
ಇಟಗಿ ಸೀಮೆ ವಿಮೋಚನೆ
[ಬದಲಾಯಿಸಿ]೧೯೪೭ ನವಂಬರ ೧೦ರಂದು ಸ್ವಾತಂತ್ರ್ಯಸಂಗ್ರಾಮದ ಕ್ರಿಯಾಸಮಿತಿಯು ಚೆನ್ನೈನಲ್ಲಿ ಸಭೆ ಸೇರಿದರು. ಹಿರಿಯ ಸ್ವಾತಂತ್ರ್ಯ ಸೇನಾನಿ ಸಿರೂರು ವೀರಭದ್ರಪ್ಪನವರು, ಗಜೇಂದ್ರಗಡ ಶಿಬಿರದ ಪುಂಡರೀಕ ಜ್ಞಾನಮೋಠೆಯವರು, ಮುಂಡರಗಿ ಶಿಬಿರದ ಅಳವಂಡಿ ಶಿವಮೂರ್ತಿ ಸ್ವಾಮಿಯವರು, ಅನ್ನದಾನಯ್ಯ ಪುರಾಣಿಕ, ರಾಮಾಚಾರ್ಯ ಪುರೋಹಿತ, ನಾಗಪ್ಪ, ಶಂಕರೇಗೌಡ ಮೊದಲಾದವರು ಕೂಡಿಕೊಂಡು ಇಟಗಿ ಸೀಮೆಯ ವಿಮೋಚನೆಯ ನಿರ್ಧಾರ ತೆಗೆದುಕೊಂಡರು. ಇಟಗಿ ಸೀಮೆಯ ೧೩ ಹಳ್ಳಿಗಳು ನಿಜಾಮ ಸಂಸ್ಥಾನದಲ್ಲಿದ್ದರೂ ಸಹ, ನಾಲ್ಕೂ ದಿಕ್ಕುಗಳಲ್ಲಿ ಭಾರತದಿಂದ ಆವೃತವಾಗಿತ್ತು. ನಿರ್ಣಯದ ಮೇರೆಗೆ ಹದಿಮೂರೂ ಗ್ರಾಮಗಳಲ್ಲಿ ಒಂದೇ ದಿನ ಸ್ವಾತಂತ್ರ್ಯಯೋಧರ ಪಡೆಗಳು ಮುನ್ನುಗ್ಗಿ ಅಲ್ಲಿದ್ದ ಎಲ್ಲ ಸರಕಾರಿ ಕಚೇರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದವು. ಆ ಗ್ರಾಮಗಳಲ್ಲಿದ್ದ ರಜಾಕಾರರು ಹಾಗು ಪಠಾಣರು ದಿಕ್ಕೆಟ್ಟು ಓಡಿ ಹೋದರು. ಈ ಗ್ರಾಮಗಳಲ್ಲಿ ಸ್ವತಂತ್ರ ಆಡಳಿತವನ್ನು ಸಾರಲಾಯಿತು.
ಭಾರತ ಸರಕಾರದ ಪೋಲೀಸ ಕಾರ್ಯಾಚರಣೆ
[ಬದಲಾಯಿಸಿ]೧೯೪೮ ಸಪ್ಟಂಬರ ೧೨ರಂದು ಪ್ರಧಾನಿ ನೆಹರೂ ಸಂಪುಟ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ರಕ್ಷಣಾ ಮಂತ್ರಿ ಬಲದೇವ ಸಿಂಗ. ಗೋಪಾಲಸ್ವಾಮಿ ಅಯ್ಯಂಗಾರ, ಜನರಲ್ ಬುಕರ್,ಜನರಲ್ ಕರಿಯಪ್ಪ ಮತ್ತು ಏರ್ ಮಾರ್ಶಲ್ ಎಲ್ಮ್‍ಹರ್ಸ್ಟ್ ಉಪಸ್ಥಿತರಿದ್ದರು. ಜನರಲ್ ಬುಕರ್ ಹೈದರಾಬಾದದ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವದೆ ಆದರೆ, ತಾವು ರಾಜೀನಾಮೆ ಕೊಡುವದಾಗಿ ಘೋಷಿಸಿದರು. ಚಿಂತಾಕ್ರಾಂತರಾದ ನೆಹರೂ ಅತ್ತಿತ್ತ ನೋಡತೊಡಗಿದಾಗ, ಸರದಾರ ವಲ್ಲಭಭಾಯಿ ಪಟೇಲ ಮರುನುಡಿದರು: “ ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು; ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು!”
ಸರದಾರ ಪಟೇಲರ ಆದೇಶದಂತೆ ಸಪ್ಟಂಬರ ೧೩ ರಂದು ಭಾರತೀಯ ಸೇನೆ ಹೈದರಾಬಾದ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತು. ಸಪ್ಟಂಬರ ೧೮ರಂದು, ಸಂಜೆ ನಾಲ್ಕು ಗಂಟೆಗೆ ಭಾರತೀಯ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್ ಎದ್ರೂಸ್ (-ಈತ ಒಬ್ಬ ಅರಬ-) ಶರಣಾಗತನಾದ. ನಿಜಾಮ ಹಾಗು ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆಯಿತು. ಮೊದಲ ಕೆಲದಿನಗಳ ಮಟ್ಟಿಗೆ ಚೌಧರಿ ಸೈನಿಕ ಆಡಳಿತಗಾರರಾಗಿದ್ದರು . ಆ ನಂತರ ಕೆ.ಎಮ್.ಮುನ್ಶಿ ರಾಜ್ಯಪಾಲರೆಂದು ನಿಯಮಿಸಲ್ಪಟ್ಟರು. ಹೈದರಾಬಾದ ಸಂಸ್ಥಾನವು ಪ್ರಜೆಗಳ ಅಪೇಕ್ಷೆಯಂತೆ ಭಾರತಕ್ಕೆ ಮರಳಿತು.[೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-06-02. Retrieved 2018-08-28.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2018-04-11. Retrieved 2018-08-28.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ https://www.prajavani.net/news/article/2014/04/12/239014.html[ಶಾಶ್ವತವಾಗಿ ಮಡಿದ ಕೊಂಡಿ]
- ↑ https://vijaykarnataka.indiatimes.com/edit-oped/columns/-/articleshow/16576162.cms
- ↑ https://postcardkannada.com/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6-%E0%B2%85%E0%B2%82%E0%B2%97%E0%B2%B5%E0%B2%BE%E0%B2%97%E0%B2%BF%E0%B2%B0%E0%B3%81%E0%B2%B5-%E0%B2%B9%E0%B3%88%E0%B2%A6%E0%B3%8D/[ಶಾಶ್ವತವಾಗಿ ಮಡಿದ ಕೊಂಡಿ]
ಆಧಾರ
[ಬದಲಾಯಿಸಿ]೧.ಡಾ|ಎಂ.ಬಿ.ಮರಕಿಣಿಯವರ ಕೃತಿ: ನೂರು ಘಟನೆ-ಸಾವಿರ ನೆನಪುಗಳು
೨. ಕೆ.ಎಂ.ಮುನ್ಶಿಯವರ ಕೃತಿ: The End of an Era
3. ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟ ಕುರಿತು, ಕರ್ನಾಟಕ ರಾಜ್ಯ ಸರ್ಕಾರಕ್ಕೆ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ,ಮಾಜಿ ಸಂಸದ ಮತ್ತು ಮುಂಡರಗಿ ಶಿಬಿರಾಧಿಪತಿ ಅಳವಂಡಿ ಶಿವಮೂರ್ತಿ ಸ್ವಾಮಿ ಬರೆದಿರುವ ಅಧಿಕೃತ ಪತ್ರಗಳು.