ಜಯತೀರ್ಥ ರಾಜಪುರೋಹಿತ

ವಿಕಿಪೀಡಿಯ ಇಂದ
Jump to navigation Jump to search
ಜಯತೀರ್ಥ ರಾಜಪುರೋಹಿತ
ಜನನಜುಲೈ ೧, ೧೯೨೫
ರಾಯಚೂರು ಜಿಲ್ಲೆಯ ಕನಕಗಿರಿ
ನಿಧನಏಪ್ರಿಲ್ ೨೪, ೧೯೮೬
ವೃತ್ತಿಐ. ಎ. ಎಸ್. ಅಧಿಕಾರಿ, ಬರಹಗಾರರು

ಜಯತೀರ್ಥ ರಾಜಪುರೋಹಿತರು (ಜುಲೈ ೧, ೧೯೨೫ - ಏಪ್ರಿಲ್ ೨೪, ೧೯೮೬) ತಮ್ಮ ಶ್ರದ್ಧೆ ಮತ್ತು ಕಾರ್ಯನಿಷ್ಠೆಗಳಿಂದ ಐ. ಎ. ಎಸ್ ಹುದ್ದೆಗೆ ಏರಿ ಕರ್ನಾಟಕ ಮತ್ತು ಕನ್ನಡ ಭಾಷೆಗೆ ಅಪಾರ ಸೇವೆ ಸಲ್ಲಿಸಿದವರಾಗಿಯೂ, ಮಹತ್ವದ ಬರಹಗಾರರಾಗಿಯೂ ಹೆಸರಾಗಿದ್ದಾರೆ.

ಜೀವನ[ಬದಲಾಯಿಸಿ]

 • ಜಯತೀರ್ಥ ರಾಜಪುರೋಹಿತ ಇವರು ೧೯೨೫ರಲ್ಲಿ ರಾಯಚೂರು ಜಿಲ್ಲೆಯ ಕನಕಗಿರಿಯಲ್ಲಿ ಜನಿಸಿದರು. ಐ.ಏ.ಎಸ್. ಅಧಿಕಾರಿಯಾದ ಇವರು ಆಡಳಿತದಲ್ಲಿ ಕನ್ನಡವನ್ನು ತರುವ ಸಲುವಾಗಿ ತುಂಬ ಶ್ರಮಿಸಿದವರು. ಇವರು ಕಥೆ, ಕಾದಂಬರಿ, ಜೀವನ ಚರಿತ್ರೆ ರಚಿಸಿದ್ದಲ್ಲದೆ ಅನುವಾದವನ್ನೂ ಸಹ ಮಾಡಿದ್ದಾರೆ. ಕನಕಗಿರಿ ರಾಯಚೂರು ಜಿಲ್ಲೆಯ ಒಂದು ಊರು. ಹಿಂದೆದೆ ಅದೊಂದು ಪಾಳೆಯಪಟ್ಟು. ಅದನ್ನಾಳುತ್ತಿದ್ದ ನಾಯಕರು ವಿಜಯನಗರದ ಅರಸರಿಗೆ ಅಧೀನರಾಗಿದ್ದವರು. ಅವರಿಗೆ ಪುರೋಹಿತರಾಗಿದ್ದವರು ಜಯತೀರ್ಥ ರಾಜ ಪುರೋಹಿತರ ಪೂರ್ವಿಕರು. ಹೀಗಾಗಿ ಜಯತೀರ್ಥರಿಗೆ ಪುರೋಹಿತ ಎಂಬ ಹೆಸರು ಅಂಟಿಕೊ೦ಡು ಬಂತು.
 • ಅವರ ಪೌರೋಹಿತ್ಯ ಇವರದು. ಜಯತೀರ್ಥರು ಮಧ್ವಾಚಾರ್ಯರ ವ್ಯಾಖ್ಯಾನ ಗ್ರಂಥಕ್ಕೆ ಟೀಕೆ ಬರೆದು ಟೀಕಾಚಾರ್ಯರೆಂದೇ ಪ್ರಸಿದ್ಧರಾದವರು. ಜಯತೀರ್ಥ ರಾಜಪುರೋಹಿತರ ತಂದೆ ಶೇಷಾಚಾರ್ಯರು ಮಳಖೇಡದಲ್ಲಿ ಜಯತೀರ್ಥರ ವೃಂದಾವನದ ಬಳಿ ಕೆಲವು ದಿನ ಪಾರಾಯಣ ಮಾಡಿದ್ದರಂತೆ. ಅನಂತರ ಹುಟ್ಟಿದ ಮಗನಿಗೆ ಜಯತೀರ್ಥ ಎಂದೇ ನಾಮಕರಣವಾಯಿತಂತೆ. ಹೆಸರು, ಕುಲ ಬಲು ದೊಡ್ಡವು - ಆಗಿನ ಕಾಲದ ಲೆಕ್ಕದಲ್ಲಿ ರಾಜಪೌರೋಹಿತ್ಯಕ್ಕಾಗಿ ಇಷ್ಟಷ್ಟು ಭೂಮಿ ಕಾಣಿ ಆ ವಂಶದ ಹಿರಿಯರಿಗೆ ದೊರೆತಿದ್ದುವಾದರೂ ಯಾವುದೂ ಅಷ್ಟಾಗಿ ಉಳಿದಿರಲಿಲ್ಲ. ಆದ್ದರಿಂದ ಹೆಸರಿಗೆ ಇವರು ಅನುಕೂಲಸ್ಥರು. ಮನೆಯಲ್ಲಿ ನವಣಕ್ಕಿ ಅನ್ನದ ಊಟ, ಆದರೂ ಎಲ್ಲರೂ ಅಕ್ಕಿ ಅನ್ನ ಉಣ್ಣುವವರೆಂದೇ ಪ್ರತೀತಿ, ಆದ್ದರಿಂದ ಇವರು ಬಡವರಲ್ಲ ಎಂದು ತೀರ್ಪು, ಯೂಕ್ಲಿಡನ ಜಾಮಿಟ್ರಿಯ "ಕ್ಯೂ, ಈ, ಡಿ" ಯಂತೆ. "ಕ್ಯೂ. ಈ. ಡಿ" ಎಂದರೆ "ಕ್ವಾಡ್ ಎರಾಡ್ ಡೆಮಾನ್‌ಸ್ಟ್ರಾಂಡಮ್" "ತೀರ್ಮಾನವಾದದ್ದು" ಎಂದು ಅರ್ಥ. ಅನ್ನ ಉಣ್ಣುವವರು ಬಡವರಲ್ಲ ಎಂಬುದು ಇದರರ್ಥ. ಮನೆಯಲ್ಲಿ ಇತರರು ನವಣಕ್ಕಿ ಊಟ ಮಾಡುತ್ತಿದ್ದರು ಕೂಡ. ಅಂತೂ ರಾಜಯೋಗ, ಬಡತನದ ಜೀವನ. ತಂದೆ ಮಹಾ ಸಂಪ್ರದಾಯಪ್ರಿಯ, ರಾಜಪೌರೋಹಿತ್ಯ ಎಂದೋ ತಪ್ಪಿ ಹೋಗಿದ್ದರೂ ಜನರ ಪೌರೋಹಿತ್ಯದ ವೃತ್ತಿ. ಆದರೆ ಸಂಪಾದನೆ ಅಷ್ಟಕಷ್ಟೇ. ಲೌಕಿಕ ವಿದ್ಯೆ ವರ್ಜ್ಯ - ಮಗನೂ ತನ್ನ ವಂಶದ ಹಿರೀಕರಂತೆ ಸಂಸ್ಕ್ರತ ಓದಿ ಬಾಳು ಸಾರ್ಥಕಪಡಿಸಿಕೊಳ್ಳಬೇಕೆಂಬ ತೀರ್ಮಾನ. ಕಟ್ಟುನಿಟ್ಟಿನ ಬದುಕು. ತತ್ಪರಿಣಾಮವಾಗಿ ಸಿಡುಕು. ಕೋಪ ಬಂದಾಗ ಪೆಟ್ಟು ಕೊಡಲೂ ಹೇಸದ ಗುಣ, ಮಗನಾಗಲೀ - ಪತ್ನಿಯಾಗಲೀ ಒಂದೇ.
 • ಈ ವಿಚಾರದಲ್ಲಿ ಮಗ ವೈದಿಕ ವೇಷ ತೊರೆಯತಕ್ಕದ್ದಲ್ಲ. ಮಗನಿಗೆ ಇಂಗ್ಲೀಷ್ ಕಲಿಯಬೇಕೆಂಬ ಆಸೆ. ಆದರೆ ತಂದೆ ಬಿಡಬೇಕಲ್ಲ? ಸಂಸ್ಕೃತ ಚೆನ್ನಾಗಿ ಕಲಿತಿದ್ದಾಯಿತು. ಜಯತೀರ್ಥರಿಗೆ ಹತ್ತು ವರ್ಷ ಆಗಿದ್ದಾಗ ಬೇಸರದಿಂದ ಮನೆ ಬಿಟ್ಟು ಓಡಿ ಹೋಗಿದ್ದರು. ತಂದೆಯೂ ಓಡಿ ಹೋಗಿ ಹತ್ತಾರು ವರ್ಷ ಹೊರ ಊರುಗಳಲ್ಲಿದ್ದು ಚೆನ್ನಾಗಿ ಸಂಸ್ಕ್ರತ ಕಲಿತು ಹಿಂದಿರುಗಿದ್ದರಂತೆ. ತಂದೆಯ ಚಾಳಿ ಮಗನಿಗೂ, ಅವರೇ ಹೀಗೆ ಹೇಳಿಕೊಂಡಿದ್ದಾರೆ. ಕೊನೆಗೆ ತಂದೆ ಮಗನನ್ನು ಪತ್ತೆ ಹಚ್ಚಿ ಮನೆಗೆ ಕರೆತಂದರು. ಮಗ ಮನೆ ಬಿಟ್ಟು ಓಡಿ ಹೋದದ್ದು ಮದುವೆಗಾಗಿ ಎಂದು ತಂದೆ ಭಾವಿಸಿ ಮಗನಿಗೆ ಮದುವೆ ಮಾಡಿಯೇ ಬಿಟ್ಟರು. ಆಗ ಮಗನಿಗೆ ಹದಿನೆಂಟು ವರ್ಷ ವಧುವಿಗೆ ಹದಿನಾಲ್ಕು. ಜಯತೀರ್ಥರು ಏಳನೆಯ ಕ್ಲಾಸ್ ಫೇಲು. ಹುಡುಗಿ ಸೀತಾ ಪಾಸು. ಆಗ ಜಯತೀರ್ಥರಿಗೆ ಅದೃಷ್ಟ ಖುಲಾಯಿಸಿತೆನ್ನಬೇಕು.
 • ಹೈದರಬಾದಿನ ಮಾವನ ಮನೆಯಲ್ಲಿ ಓದು ಮುಂದುವರಿಕೆ. ಏಳನೆಯ ತರಗತಿ ಸೇರ್ಪಡೆ. ಖಾಸಗಿಯಾಗಿ ಓದಿ ಮೆಟ್ರಿಕ್ ಪಾಸು. ಆ ಸಮಯದಲ್ಲಿ ಹೈದರಾಬಾದಿನಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಮಾಸ್ತಿ, ಶ್ರೀರಂಗ, ಬಿ. ಎ೦. ಶ್ರೀ, ಗೋಕಾಕ, ಬೆಟಗೇರಿ, ಸಾಲಿ - ಹೀಗೆ ಹಲವು ಸಾಹಿತ್ಯ ದಿಗ್ಗಜಗಳ ಸಂದರ್ಶನ, ಭಾಷಣಗಳ ಸುರಿಮಳೆ. ಮೆಟ್ರಿಕ್ಕಿಗೇ ಓದು ಸಾಕೆನಿಸಿ ಕೆಲಸಕ್ಕಾಗಿ ಪ್ರಯತ್ನ., ಒಂದೆರಡು ತಿಂಗಳು ಸಂಬಳವಿಲ್ಲದೆ ದುಡಿತ. ಅನಂತರ ಮೂವತ್ತು ರೂಪಾಯಿ ಸಂಬಳ. ಮತ್ತೆ ಓದಬೇಕೆಂಬ ಇರಾದೆ. ಇಂಟರ್ ಪರೀಕ್ಷೆಯಲ್ಲಿ ತೇರ್ಗಡೆ. ಮುಂದೆ ಓದಲು ಕಾಲೇಜು ಸೇರಲೇ ಬೇಕಿತ್ತು.
 • ಹೆಂಡತಿ ಮಗುವನ್ನು ಊರಿನಲ್ಲಿ ಬಿಟ್ಟು, ಹೈದರಾಬಾದಿನಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಬಿ. ಎ. ವಿದ್ಯಾರ್ಥಿಯಾದರು. ಪ್ರೊ. ಡಿ. ಕೆ. ಭೀಮಸೇನ ರಾವ್ ಗುರು. ಗೋಕಾಕರೂ ಅಲ್ಲಿಗೆ ಇ೦ಗ್ಲೀಷ್ ಅಧ್ಯಾಪಕರಾಗಿ ಬಂದರು. ಅವರ ನೇತೃತ್ವದಲ್ಲಿ "ಜಿಜ್ಞಾಸು ಕೂಟ" ದ ಸಂಘಟನೆಯಾಗಿ ಬರವಣಿಗೆಗೆ ಪ್ರೇರಣೆಯಾಯಿತು. ನಾಟಕ ಪ್ರದರ್ಶನಗಳಲ್ಲೂ ಪಾಲ್ಗೊಂಡರು. ಒಂದು ವರ್ಷದಲ್ಲಿ ಗೋಕಾಕ್ ಅಲ್ಲಿಂದ ವೀಟಾನಗರ ಕಾಲೇಜಿಗೆ ಹೋದರು. ರಾಜಕೀಯ ಬಿರುಗಾಳಿ ಎದ್ದಿತು. ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮ ಕೊಟ್ಟಿರಲಿಲ್ಲ. ಪಟೇಲರ ನೇತೃತ್ವದಲ್ಲಿ ಪೋಲೀಸ್ ಕಾರ್ಯಾಚರಣೆ, ಪ್ರಕ್ಷುಬ್ಧ ದಿನಗಳು ಅವು.
 • ಕೊನೆಗೆ ಬಿ. ಎ. ಪಾಸು. ಕನ್ನಡ - ಸಂಸ್ಕ್ರತಗಳಲ್ಲಿ ಅತ್ಯಧಿಕ ಅಂಕ. ಮತ್ತೆ ಕೆಲಸದ ಭೇಟೆ. ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಗೆದ್ದು ತಹಸೀಲ್ದಾರ್ ಆಗಿ ನೇಮಕವಾಗಿ ಜಹೀರಾಬಾದಿನಲ್ಲಿ ಕೆಲಸ ಆರಂಭ. ಆ ಮೇಲೆ ಬೀದರಿಗೆ ವರ್ಗ. ಈ ನಡುವೆ ಅನಾರೋಗ್ಯ, ಕ್ಷಯ ರೋಗ, ಗೆಳೆಯರ ನೆರವಿನಿ೦ದ ಗಂಡಾಂತರದಿಂದ ಪಾರು. ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮೈಸೂರು - ಬೆಂಗಳೂರಿನಲ್ಲಿ ಉದ್ಯೇೂಗ.

ಬರವಣಿಗೆ[ಬದಲಾಯಿಸಿ]

 • ಉದ್ಯೋಗಕ್ಕೆ ಬಂದ ನಂತರ ಸಣ್ಣದಾಗಿ ಆರಂಭವಾಗಿದ್ದ ಜಯತೀರ್ಥರ ಸಾಹಿತ್ಯಾಧ್ಯಯನ - ಲೇಖನ ಕಾರ್ಯ ಮುಂದುವರಿಯಿತು. ಕಾದಂಬರಿ, ಸಣ್ಣಕಥೆ, ನಾಟಕ, ಜೀವನ ಚರಿತ್ರೆ, ನ್ಯಾಯಕ್ಷೇತ್ರದಲ್ಲಿ ಕನ್ನಡದಲ್ಲಿ ತೀರ್ಪು, ಹಲವಾರು ಕೃತಿಗಳ ಸಂಪಾದನೆ, ಬಿಡಿಲೇಖನಗಳು ಹೀಗೆ ಎಲ್ಲ ರೀತಿಯಲ್ಲೂ ಅವರ ಬರವಣಿಗೆ ಹರಿಯಿತು. ೧೯೬೨ರಲ್ಲಿ ಅವರು ಬರೆದ "ಪಾರವ್ವನ ಪಂಚಾಯತಿ" ಕಥೆಗೆ ಬಹುಮಾನ ಬಂತು, ಮೂರು ವರ್ಷಗಳ ಅನಂತರ ಬರವಣಿಗೆ ಬಿರುಸು ಬಂತು.

ಕೃತಿಗಳು[ಬದಲಾಯಿಸಿ]

ಕಾದಂಬರಿಗಳು[ಬದಲಾಯಿಸಿ]

 • "ಹಾಲು ಜೇನು" ಮೊದಲ ಕಾದಂಬರಿ. ಇದೊಂದು ಪ್ರಾದೇಶಿಕ ವಸ್ತುವನ್ನಾಧರಿಸಿದ ಕೃತಿ. ಸ್ವಾತಂತ್ರ್ಯಾನಂತರ ಹೈದರಾಬಾದ್ ಸಂಸ್ಥಾನ ಪಡೆದ ಸ್ಥಿತ್ಯಂತರವೂ, ಅದಕ್ಕೆ ಹಿಂದೆ ಇದ್ದ ನಿಜಾಮ್ ಆಡಳಿತದ ವಾತಾವರಣವೂ ಇದಕ್ಕೆ ಹಿನ್ನಲೆ. ಹಳ್ಳಿಯ ಬಾಳಿನ, ಎರಡು ಧರ್ಮ - ಪಂಗಡಗಳ ಮಧುರ ಸಂಬಂಧದ ಪ್ರತೀಕ.


* "ಸುಳಿಗಾಳಿ" ಕೂಡ ಪ್ರಾದೇಶಿಕ ಕಾದಂಬರಿ. ಇದು ಕೂಡ ಹೈದರಾಬಾದ್ ಕರ್ನಾಟಕದ ನಿಜಾಮಶಾಹಿ ಆಡಳಿತದ ಅವನತಿಯ ಕಾಲದ ಜೀವನದ ಸೂಕ್ಷ್ಮ ಎಳೆಗಳ ಕಲಾತ್ಮಕ ಹೆಣಿಕೆ. ದ್ವಿರಾಷ್ಟ್ರಭಾರ, ಅಶಾಂತಿ, ಕ್ಷೋಭೆ, ಮೌಲ್ಯಗಳ ಪತನ, ಹಿಂದೂ - ಮುಸ್ಲಿಂ ವೈಷಮ್ಯ, ಧಾರ್ಮಿಕ ದಬ್ಬಾಳಿಕೆ ನವಾಬಶಾಹಿಯ ವಿಲಾಸ ಜೀವನ - ಇವೆಲ್ಲವೂ 

ಕಥಾವಸ್ತುವಿಗೆ ಹಿನ್ನೆಲೆಯಾಗಿ ಒದಗಿಬಂದಿದೆ.


 • "ಹಾಲು ಜೇನು" ಕಾದಂಬರಿಯ ಮುಂದುವರಿದ ಭಾಗವೇ "ಸುಳಿಗಾಳಿ" ಕಾದಂಬರಿ. ಈ ಎರಡೂ ಕಾದಂಬರಿಗಳು ಒಟ್ಟಾಗಿ "ಜೇನು ಸುಳಿ" ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.


 • ಮೂರನೆಯ ಕಾದಂಬರಿ "ಜೊಹರಾ". ಇದು ಎರಡು ಮುಗ್ಧ ಜೀವಿಗಳ ಅಥವಾ ಕುಟುಂಬಗಳ ಕಥೆ. ಅನ್ಯ ಮತೀಯರ ಅನನ್ಯ ನಡವಳಿಕೆ. ಪಾದ್ರಿಗಳ ಮತಾಂತರ ಪ್ರಯತ್ನ. ಬಗೆಬಗೆಯ ಕಷ್ಟಗಳ ಪರಂಪರೆ. ಅಂತಿಮವಾಗಿ ಪ್ರೀತಿ - ಪ್ರೇಮ ಸೌಹಾರ್ದ ಭಾವಗಳ ವಿಜಯ. ಹಲವು ಸ್ಥಳಗಳಲ್ಲಿ ಅಲೆದಾಡುವ ಕಥೆಯ ಐತಿಹಾಸಿಕ ಸನ್ನಿವೇಶಗಳೂ ವಿಶೇಷ ಅರ್ಥ ನೀಡುತ್ತವೆ.


 • ಕಡಲ ತೋಳ ಎಂಬುದೂ ಕಾದಂಬರಿಯಾದರೂ ಇದೊಂದು ಅನುವಾದ. ಅಮೆರಿಕನ್ ಸಾಮ್ಯವಾದಿ ಲೇಖಕ ಜಾಕ್ ಲ೦ಡನ್‌ನ "ದಿ ಸೀವುಲ್ಫ್" ಎಂಬ ಇ೦ಗ್ಲೀಷ್ ಕಾದಂಬರಿಯ ಭಾಷಾಂತರ. ನಾಸ್ತಿಕ ವಾದದ ಅತ್ಯಂತತ ಶಕ್ತಪೂರ್ಣ ಅಭಿವ್ಯಕ್ತಿ. ಎದೆ ನಡುಗಿಸುವಂಥ ಘಟನೆಗಳು. ಜಯತೀರ್ಥರು ಮೂಲದ ಸತ್ವವನ್ನು ಬಹಳ ಸಮರ್ಥವಾಗಿ ಕನ್ನಡದಲ್ಲಿ ಭಟ್ಟಿ ಇಳಿಸಿದ್ದಾರೆ.

ಕಥಾಸಂಕಲನಗಳು[ಬದಲಾಯಿಸಿ]

 • ಜಯತೀರ್ಥ ರಾಜಪುರೋಹಿತರ ಸಣ್ಣ ಕಥೆಗಳ ಸಂಕಲಗಳು ನಾಲ್ಕು-
 • "ಪಾರವ್ವನ ಪಂಚಾಯಿತಿ"-ಬದುಕಿನ ಹಾಗೂ ರಾಜಕಾರಣದ ಕ್ಷೇತ್ರಗಳ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಯೂ ಅಭಿವ್ಯಕ್ತಿಯನ್ನು ಈ ಕಥೆಗಳಲ್ಲಿ ಕಾಣಬಹುದು. ರಕ್ತ ಸಂಬಂಧಕ್ಕಿಂತ ಭಾವ ಸಂಬಂಧ ಮುಖ್ಯ ಎಂಬುದೊಂದು ಪಾರವ್ವನ ಪಂಚಾಯಿತಿ. ನಮ್ಮವರು - ಪರರು ಎಂಬ ಅರಿವು ಮೂಡಿಸುವ ಕಥೆ "ನಮ್ಮವರು ಯಾರು?", "ಮುಂದೇನು" ಮುಂತಾದ ಒಟ್ಟು ಹತ್ತು ಕಥೆಗಳು ಇಲ್ಲಿವೆ.
 • "ರೋಹಿಣಿ"-ಸಮಕಾಲೀನತೆಯನ್ನು ಪರೀಕ್ಷೆಗೆ ಒಡ್ಡುವ ಕಥೆಗಳ ಸಂಕಲನ "ರೋಹಿಣಿ".
 • "ಮೌಲ್ಯಗಳು" - ಮೂರನೆಯದು "ಮೌಲ್ಯಗಳು" ಒಂಬತ್ತು ಕಥೆಗಳ ಕಟ್ಟು,
 • "ಶಿಥಿಲ ಕಲೆ" - ನಾಲ್ಕನೆಯ ಸಂಕಲನ "ಶಿಥಿಲ ಕಲೆ", ರಾಜಕೀಯ, ಸಾಮಾಜಿಕ, ಐತಿಹಾಸಿಕ, ಆಡಳಿತ, ಮನೋವಿಶ್ಲೇಷಣಾತ್ಮಕ - ಹೀಗೆ ಎಲ್ಲ ಬಗೆಯ ಕಥೆಗಳಲ್ಲೂ ರಾಜ ಪುರೋಹಿತರ ಕೌಶಲ ಮೆಚ್ಚುವಂಥದ್ದು.

ನಾಟಕಗಳು[ಬದಲಾಯಿಸಿ]

 • "ತುಂಗೆಯಂಗಳದಲ್ಲಿ",
 • "ಕುಮಾರವ್ಯಾಸ",
 • "ಜಯಬಂಗ್ಲಾ" ಎಂಬ ನಾಟಕಗಳನ್ನು, ಜೀವನ ಚರಿತ್ರೆಗಳನ್ನು ಸಂಪಾದಿತ ಕೃತಿಗಳನ್ನು ಅವರು ಹೊರತಂದಿದ್ದಾರೆ. ನ್ಯಾಯಾಧಿಕಾರಿಯಾಗಿ ಕನ್ನಡದಲ್ಲಿ ಇವರು ನೀಡಿದ ತೀರ್ಪುಗಳೂ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.

ಇತರ ಪ್ರಮುಖ ಕೃತಿಗಳು[ಬದಲಾಯಿಸಿ]

 • ಜಗನ್ನಾಥದಾಸರು
 • ಸುರಪುರದ ಶೂರನಾಯಕರು
 • ಕಡಲ ತೋಳ
 • ಕೃಷ್ಣದೇವರಾಯ
 • ಕನ್ನಡದಲ್ಲಿ ತೀರ್ಪುಗಳು

ಕನ್ನಡಕ್ಕಾಗಿ ಕಾಯಕ[ಬದಲಾಯಿಸಿ]

ಜಯತೀರ್ಥ ರಾಜಪುರೋಹಿತರು ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವಲ್ಲಿ ಮಾಡಿರುವ ಕೆಲಸ ಮಹತ್ವದ್ದು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಯಾದ "ಕನ್ನಡ ಕೈಪಿಡಿ" ಇವರ ಶ್ರಮದ ಫಲ. ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿ ಯಾಗಿ ಸರ್ಕಾರದ ಕನ್ನಡ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿ ಇವರು ಮಾಡಿದ ಕೆಲಸ ಇವರ ಶ್ರದ್ಧೆ ನಿಷ್ಠೆಗಳ ದ್ಯೋತಕ. ಅಂತಿಮವಾಗಿ ಐ. ಎ. ಎಸ್. ಶ್ರೇಣಿಗೆ ಏರಿದ್ದು ಇವರ ದಕ್ಷತೆ ಪ್ರಾಮಾಣಿಕತೆಗಳಿಗೆ ಸಾಕ್ಷಿ. ಸಾಹಿತ್ಯ ಕೊನೆಯವರೆಗೂ ಇವರ ಸಂಗಾತಿಯಾಗಿತ್ತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಇವರು ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದರು.

ವಿದಾಯ[ಬದಲಾಯಿಸಿ]

ಜಯತೀರ್ಥ ರಾಜಪುರೋಹಿತರು ಏಪ್ರಿಲ್ ೨೪, ೧೯೮೬ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪೆ[ಬದಲಾಯಿಸಿ]

ಮೈಸೂರು ಮಿತ್ರ ಪತ್ರಿಕೆಯಲ್ಲಿ ಎಚ್ಚೆಸ್ಕೆ ಅವರ ಲೇಖನ ಮತ್ತು ಕಣಜ