ವಿಷಯಕ್ಕೆ ಹೋಗು

ಹೆಬ್ಬಾರೆ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಬ್ಬಾರೆ ಕುಣಿತ

[ಬದಲಾಯಿಸಿ]

ಹೊಲೆಯರಿಗೆ ಜನಿವಾರ ತೊಡಿಸಿ ಬ್ರಾಹ್ಮಣರನ್ನಾಗಿಸುವ ಮೂಲಕ ಹಬ್ಬಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಟ್ಟ ವಿಶೇಷ ಸಂಪ್ರದಾಯ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಉಜ್ಜನಿ ಚೌಡಮ್ಮನ ಹಬ್ಬದಲ್ಲಿ ನಡೆಯುತ್ತದೆ. ಈ ರೀತಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಇಪ್ಪತ್ತೊಂದು ದಿನ ಜನಿವಾರ ಧಾರಣೆ ಮಾಡಿಕೊಳ್ಳುವ ಹೊಲೆಯರು ನುಡಿಸುವ ಮತ್ತು ಹಿಡಿದು ಕುಣಿಯುವ ಒಂದು ಬೃಹತ್ ವಾದ್ಯವೇ ಹೆಬ್ಬಾರೆ. ಇದೇ ಊರಿನಲ್ಲಿ ಹೆಸರಾಗಿರುವ ದೇವತೆ ಚೌಡಮ್ಮನಿಗೆ ಸುತ್ತಮುತ್ತಲ ಹತ್ತಾರು ಊರುಗಳಲ್ಲಿ ಸಾವಿರಾರು ಭಕ್ತರಿದ್ದಾರೆ. ಹೆಬ್ಬಾರಮ್ಮ ಕೂಡ ಅದೇ ಊರಿನ ದೇವತೆಯಾದರೂ ಚೌಡಮ್ಮನ ಹಬ್ಬದ ಸಂದರ್ಭದಲ್ಲಿ ಮಾತ್ರ ಮಹತ್ವ ಪಡೆಯುತ್ತಾಳೆ.[]

ಹೆಬ್ಬಾರಮ್ಮನ ಪುರಾಣ

[ಬದಲಾಯಿಸಿ]

ಹೆಬ್ಬಾರಮ್ಮ ಒಬ್ಬ ಬ್ರಾಹ್ಮಣ ಕನ್ಯೆ. ಈ ಯುವತಿ ಸುಂದರಿ ಜೊತೆಗೆ ಹಾಸ್ಯಪಟು. ಉಜ್ಜನಿಯ ಬ್ರಾಹ್ಮಣ ಮನೆತನಗಳಿಗೆಲ್ಲಾ ಬುದ್ಧಿಶಾಲಿಯಾಗಿದ್ದವಳು. ಪ್ರತಿನಿತ್ಯವೂ ಹಾಸ್ಯಮಾಡಿ ಜನರನ್ನು ನಗಿಸುತ್ತಿದ್ದುದೇ ಅವಳ ಕೆಲಸವಾಗಿತ್ತು. ಒಂದು ದಿನ ಒಂದು ವಸ್ತುವನ್ನು ಬಟ್ಟೆಯ ಗಂಟಿನಲ್ಲಿ ಬಚ್ಚಿಟ್ಟು ಯಾವ ಬ್ರಾಹ್ಮಣ ಯುವಕ ತಾನು ಬಚ್ಚಿಟ್ಟಿರುವ ರಹಸ್ಯ ವಸ್ತುವನ್ನು ಗುರುತಿಸಿ ಹೇಳುವನೋ ಅವನನ್ನು ತಾನು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಮದುವೆಯನ್ನೇ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದಳು. ಉಜ್ಜನಿಯ ಯಾವ ಬ್ರಾಹ್ಮಣ ಯುವಕನೂ ಅದನ್ನು ಗುರುತಿಸಲಿಲ್ಲ. ಊರ ಮುಂದಿನ ಬಾವಿಯ ದಡದಲ್ಲಿ ನೀರು ಸೇದುವ ಹೆಂಗಸರು ಈ ವಿಚಾರವನ್ನು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದಾಗ, ಪರ ಊರಿನ ಒಬ್ಬ ಹೊಲೆಯರ ಕುಲದ ಯುವಕ ಹುಣಸೇಮರದಡಿ ಮಲಗಿರುತ್ತಾನೆ. ಈ ಹೆಂಗಸರ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ. ಆ ಯುವಕ ನೋಡಲು ಬ್ರಾಹ್ಮಣನಂತೆಯೇ ಕಾಣುತ್ತಿರುತ್ತಾನೆ. ಸುಂದರನಾಗಿಯೂ ಇರುತ್ತಾನೆ. ಸರಿ, ಆ ರಹಸ್ಯ ವಸ್ತುವನ್ನು ತಾನೇ ಗುರುತಿಸಿ ಹೇಳಿ ಆ ಯುವತಿಯನ್ನು ಏಕೆ ಮದುವೆಯಾಗಬಾರದು ಎಂದು ತನ್ನಲ್ಲಿಯೇ ಯೋಚಿಸುತ್ತಾನೆ. ಅಂತೆಯೇ ನಾನು ದೂರದ ಊರಿನಿಂದ ಬಂದಿರುವ ಬ್ರಾಹ್ಮಣ ಎಂದು ಎಲ್ಲರಿಗೂ ಹೇಳಿಕೊಳ್ಳುತ್ತಾ, ಹೆಬ್ಬಾರಮ್ಮನ ಮನೆಯನ್ನು ಪ್ರವೇಶಿಸುತ್ತಾನೆ. ಆಕಸ್ಮಿಕವಾಗಿ ಆ ರಹಸ್ಯವನ್ನು ಬಯಲು ಮಾಡುತ್ತಾನೆ. ತನ್ನ ಚಮತ್ಕಾರದಿಂದ ಬ್ರಾಹ್ಮಣನಂತೆಯೇ ವರ್ತಿಸುತ್ತಾನೆ. ಎಲ್ಲರೂ ಒಪ್ಪಿಕೊಳ್ಳುತ್ತಾರೆ. ತನ್ನ ಪ್ರತಿಜ್ಞೆಗೆ ಅನುಗುಣವಾಗಿ ಹೆಬ್ಬಾರಮ್ಮ ಆ ಯುವಕನನ್ನು ಮದುವೆಯಾಗುತ್ತಾಳೆ. ಯುವಕ ಅವರ ಮನೆಯಲ್ಲಿಯೇ ಸೇರಿಕೊಳ್ಳುತ್ತಾನೆ. ಆದರೆ ಅವನಿಗೆ ಒಬ್ಬಳು ತಾಯಿ ಇರುತ್ತಾಳೆ. ಅವಳು ಇಷ್ಟು ದಿನವಾದರೂ ಮಗ ಹಿಂದಕ್ಕೆ ಬರಲಿಲ್ಲ ಎಂದು ಚಿಂತೆ ಮಾಡುತ್ತಾಳೆ. ಅವನು ತನ್ನೂರಿಗೆ ಹಿಂದಿರುಗುವುದೇ ಇಲ್ಲ. ಆಗ ಊರೂರು ತಿರುಗುತ್ತಾ ತನ್ನ ಮಗನನ್ನು ಹುಡುಕುತ್ತಾ ಉಜ್ಜನಿಯ ದಾರಿಯಲ್ಲಿ ಬರುತ್ತಿರುತ್ತಾಳೆ. ಉಜ್ಜನಿಯಿಂದ ಎಲ್ಲಿಗೋ ಹೋಗುತ್ತಿದ್ದ ಯುವಕ ದಾರಿಯಲ್ಲೇ ತನ್ನ ತಾಯಿಗೆ ಸಿಕ್ಕಿ ಬೀಳುತ್ತಾನೆ. ಆ ಮುದುಕಿ ಗೋಳಾಡುತ್ತಾಳೆ. ಅವನು ಯೋಚಿಸುತ್ತಾನೆ. ತನ್ನ ತಾಯಿಯನ್ನು ಹೀಗೆ ಕರೆದುಕೊಂಡು ಹೋದರೆ ಬ್ರಾಹ್ಮಣತಿ ಎಂದು ಯಾರೂ ನಂಬುವುದಿಲ್ಲ ಎಂದುಕೊಂಡು, ಅವಳಿಗೆ ತಲೆ ಬೋಳಿಸಿ, ಒಂದು ಕೆಂಪು ಸೀರೆಯನ್ನು ಉಡಿಸಿ ಮನೆಗೆ ಕರೆದುತರುತ್ತಾನೆ. ಆಗ ಎಲ್ಲರಿಗೂ ಸಂತೋಷವಾಗುತ್ತದೆ. ಆದರೆ ಕೀಳು ಕುಲದವಳಾದ ಆ ಮುದುಕಿಗೆ ಬ್ರಾಹ್ಮಣರಂತೆ ನಯವಾಗಿ ಮಾತನಾಡಲು ಬರುವುದಿಲ್ಲ. ಆದ್ದರಿಂದ ತನ್ನ ತಾಯಿ ಮೂಗಿ, ಮಾತೇ ಬರುವುದಿಲ್ಲ ಎಂದು ಹೇಳಿ, ಮೂಗಿಯಂತೆ ನಟಿಸಬೇಕೆಂದು ತನ್ನ ತಾಯಿಗೆ ಸೂಚಿಸುತ್ತಾನೆ. ಕೆಲವಾರು ದಿನ ಸುಖವಾಗಿರುತ್ತಾರೆ. ಆ ಮುದುಕಿ ಮೂಕಿಯಾಗಿಯೇ ದಿನ ಇರುತ್ತಾಳೆ. ಇಷ್ಟರಲ್ಲಿ ಹೆಬ್ಬಾರಮ್ಮನಿಗೆ ಐದು ಜನ ಗಂಡು ಮಕ್ಕಳಾಗಿರುತ್ತಾರೆ. ಒಂದು ದಿನ ಹೆಬ್ಬಾರಮ್ಮ ಎಲ್ಲಿಯೋ ಹೋಗಿರುವಾಗ ಮನೆಯ ಬಾಗಿಲು ಭದ್ರಪಡಿಸಿ ತಾಯಿ ಮಗ ಮಾತಿಗೆ ಪ್ರಾರಂಭಿಸುತ್ತಾರೆ. ಮಗ ತಾಯಿಯನ್ನು ಕೇಳುತ್ತಾನೆ ‘ಎಂಗಿದ್ದತವ್ವಾ ಬ್ರಾಮ್ಮುರ್ ಮನೆ ಸಂಸಾರ’ ಎಂದು. ಮಗನ ಮಾತಿಗೆ ಉತ್ತರ ಕೊಡುತ್ತಾ ತಾಯಿ ಹೇಳುತ್ತಾಳೆ, ‘ಏ ಎಂಗಿದ್ರೇನ್ ಬುಡ್ ಮಗಾ, ನಮ್ಮಮ್ಮೆ ಕರೀನ್‍ಕಾಲ್ ತಿಂದಂಗಾದತಾ, ಎಷ್ಟು ದಿನಾ ಆಯ್ತು ಕರೀನ್‍ಕಾಲ್ ತಿಂದು ಏನ್ ಕತೇ’ ಎನ್ನುತ್ತಾಳೆ. ಅಷ್ಟರಲ್ಲಿ ಮನೆಯ ಬಾಗಿಲಿಗೆ ಬಂದಿದ್ದ ಹೆಬ್ಬಾರಮ್ಮ ಆಕಸ್ಮಿಕವಾಗಿ ತಾಯಿ ಮಗನ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಾಳೆ. ಇವರಿಬ್ಬರೂ ಶ್ರೂದರು ಎಂಬುದು ಅವಳಿಗೆ ಗೊತ್ತಾಗುತ್ತದೆ. ಅತಿಯಾದ ದುಃಖವಾಗುತ್ತದೆ. ಹೊಲೆಯನನ್ನು ಮದುವೆಯಾದುದಲ್ಲದೆ, ಅವನಿಗೆ ಐದು ಜನ ಮಕ್ಕಳನ್ನೂ ಹಡೆದೆನಲ್ಲಾ ಎಂಬ ಕೊರಗು ಮನಸ್ಸಿಗೆ ಅಂಟುತ್ತದೆ. ಇನ್ನು ಈ ಭೂಮಿಯಲ್ಲಿ ಜೀವಿಸಿಕೊಂಡು ಇರಲೇಬಾರದು ಎಂಬ ಹಟ ಮನದಲ್ಲಿ ಬಲಿಯುತ್ತದೆ. ಚೌಡಮ್ಮನ ಕೊಂಡದ ದಿನ ಉರಿಯುತ್ತಿರುವ ಅಗ್ನಿಯಲ್ಲಿ ಬಿದ್ದು ಅದಕ್ಕೆ ಆಹುತಿಯಾಗಿ ತನ್ನ ಪಾಪವನ್ನು ಕಳೆದುಕೊಳ್ಳಬೇಕೆಂದು ನಿಶ್ಚಯಿಸುತ್ತಾಳೆ. ಅಂತೆಯೇ ಹಬ್ಬ ಹತ್ತಿರ ಬಂದಾಗ ತನ್ನ ದೇಹತ್ಯಾಗಕ್ಕೆ ನೇಮನಿಷ್ಠೆಯಿಂದ ಸಿದ್ಧವಾಗುತ್ತಿರುತ್ತಾಳೆ. ಕನಸು ಮನಸ್ಸಿನಲ್ಲಿ ಚೌಡಮ್ಮನನ್ನು ಧ್ಯಾನಿಸುತ್ತಿರುತ್ತಾಳೆ. ಇನ್ನು ಇವಳು ಬದುಕುವುದಿಲ್ಲ ಎಂದು ಶೂದ್ರ ಗಂಡನಿಗೆ ಖಚಿತವಾದಾಗ ಆಕೆಯಲ್ಲಿ ತನ್ನ ತಪ್ಪಿಗೆ ಪ್ರಾಯಶ್ಚಿತವೇನು ಎಂದು ಬೇಡಿದಾಗ ಹೆಬ್ಬಾರಮ್ಮ ಪ್ರಾಯಶ್ಚಿತದ ಹಾದಿಯನ್ನು ತೋರಿಸುತ್ತಾಳೆ. ಅದೆಂದರೆ “ಪ್ರತಿ ವರ್ಷ ನಡೆಯುವ ಚೌಡಮ್ಮನ ಹಬ್ಬದಲ್ಲಿ ತನ್ನ ಐದು ಜನ ಮಕ್ಕಳಿಗೂ ಹಬ್ಬಕ್ಕೆ ಹದಿನೈದು ದಿನ ಮುಂಚೆಯೇ ಜನಿವಾರ ಧಾರಣೆ ಮಾಡಬೇಕು. ಕೊಂಡದ ದಿನ ತನ್ನನ್ನು ಪ್ರತಿನಿಧಿಸುವ ಪ್ರತೀಕವೊಂದನ್ನು ಹೊತ್ತು ಅಗ್ನಿಯಲ್ಲಿ ಓಡಬೇಕು” ಎಂದು ಹೇಳಿ ಉರಿಯುತ್ತಿದ್ದ ಕೊಂಡದಲ್ಲಿ ಬಿದ್ದು ಸಾಯುತ್ತಾಳೆ, ಚೌಡಮ್ಮನ ಸಾನಿಧ್ಯವನ್ನು ಸೇರುತ್ತಾಳೆ.[]

ಹೆಬ್ಬಾರೆ

[ಬದಲಾಯಿಸಿ]

ಸಾಮಾನ್ಯವಾಗಿ ಅನೇಕ ಕಡೆ ದೇವರ ಉತ್ಸವ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ತಮಟೆವಾದ್ಯದ ಜೊತೆಗೆ ಅರೆ ಬಡಿಯುತ್ತಾರೆ. ಅರೆ ಡೋಲಿನ ಆಕಾರದಲ್ಲಿರುತ್ತದೆ. ಎರಡೂ ಕಡೆ ಚರ್ಮದ ಹೊದಿಕೆ ಇರುತ್ತದೆ. ಒಂದು ಕಡೆ ಕಡ್ಡಿಯಿಂದ ಉಜ್ಜುವುದು, ಇನ್ನೊಂದು ಕಡೆ ಬಡಿಯುವುದು. ಇದನ್ನು ಉಜ್ಜನಿಯಲ್ಲೂ ತಮಟೆ ನಗಾರಿಗಳ ಜೊತೆ ಶ್ರುತಿವಾದ್ಯದಂತೆ ಬಳಸುತ್ತಾರೆ. ಇದು ಅರೆ, ಹೆಬ್ಬಾರೆ ಎಂದರೆ ದೊಡ್ಡದಾದ ಅರೆ. ಡೊಳ್ಳು ಕುಣಿತದಲ್ಲಿ ಕುರುಬರು ಉಪಯೋಗಿಸುವ ಅರೆಗಿಂತಲೂ ದೊಡ್ಡದಾದ, ಬಡಿದರೆ ಚರ್ಮದ ಕಂಪನದಿಂದ ಭಾರಿ ಶಬ್ಧ ಬರುವ ಬೃಹದಾಕಾರದ ಚರ್ಮದ ವಾದ್ಯ. ಇದನ್ನು ಒಬ್ಬರೆ ಹೊರುವುದಕ್ಕೂ ಕಷ್ಟವೇ. ಈ ಹೆಬ್ಬಾರೆಗೆ ಚರ್ಮದ ಬಡಿಯುವ ಭಾಗಗಳನ್ನು ಬಿಟ್ಟು ಉಳಿದೆಡೆ ಬಟ್ಟೆ ಹೊದಿಸುತ್ತಾರೆ. ಮತ್ತೊಂದು ಮಂದವಾದ ರಟ್ಟಿನಂತಹ ಬಿಳಿಯ ಬಟ್ಟೆಯನ್ನು ಕೆಳಕ್ಕೆ ಇಳಿಬೀಳುವ ಹಾಗೆ ಹೊದಿಸಿ ಕಟ್ಟುತ್ತಾರೆ. ಒಡವೆ ಮತ್ತು ಹೂವಿನ ಹಾರಗಳಿಂದ ಸಿಂಗರಿಸುತ್ತಾರೆ. ತಳದಲ್ಲಿ ಹೊತ್ತುಕೊಳ್ಳುವುದಕ್ಕೆ ಸಿಂಬೆ ಮಾಡಿರುತ್ತಾರೆ. ಹೀಗೆ ಶೃಂಗಾರ ಮಾಡಿದ ಹೆಬ್ಬಾರೆಗಳು ಬರಿಯ ಹೆಬ್ಬಾರೆಯಲ್ಲ, ಹೆಬ್ಬಾರಮ್ಮ. ಇಂಥ ಎರಡು ಹೆಬ್ಬಾರಮ್ಮಗಳನ್ನು ಸಿಂಗರಿಸಲಾಗುತ್ತದೆ.

ಹೊಲೆಯರಿಗೆ ಜನಿವಾರ ಶಾಸ್ತ್ರ

[ಬದಲಾಯಿಸಿ]

ಕಂಬ ಇಕ್ಕುವ ದಿನ ಬೆಳಗ್ಗೆ ಈ ಆರು ಜನ ಹೊಲೆಯರೂ ಚವುರ ಮಾಡಿಸಿಕೊಂಡು ಉಡುದಾರವನ್ನು ಕಿತ್ತುಹಾಕಿ ಸ್ನಾನ ಮಾಡುತ್ತಾರೆ. ನಂತರ ಅರಿಶಿಣ, ಸೀಗೇಕಾಯನ್ನು ನುಂಗಿದರೆ ಇದುವರೆಗೆ ಇದ್ದ ಹೊಲಸೆಲ್ಲ ಕಳೆದು ಶುಚಿಯಾಗುತ್ತಾರೆ ಎಂಬ ನಂಬಿಕೆ. ಆಮೇಲೆ ಚೆನ್ನಾಗಿ ಸ್ನಾನ ಮಾಡಿ ಹೊಸ ಉಡುಪುಗಳನ್ನು ಧರಿಸಿ, ಬಾಯಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ಇದಕ್ಕೆ ಕಾರಣ ಹೆಚ್ಚು ಮಾತನಾಡದೆ ಮೌನವಾಗಿರಬೇಕೆಂಬ ನಿಯಮದ ಪಾಲನೆ. ನಂತರ ತಲೆಗೆ ಪೇಟವನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಇವರು ಶುಚಿರ್ಭೂತರಾಗುವುದು ಊರ ಒಳಗೆ ಇರುವ ಹೆಬ್ಬಾರಮ್ಮನ ಗುಡಿಯಲ್ಲಿ. ಇಷ್ಟಾದ ಮೇಲೆ ಅವರು ಯಾವ ಕಾರಣಕ್ಕೂ ಮನೆಗೆ ಹೊಗಬಾರದು. ಅವರ ಜಾತಿಯವರನ್ನು ಮುಟ್ಟಿಸಿಕೊಳ್ಳಬಾರದು. ಸಂಪೂರ್ಣವಾಗಿ ಹಬ್ಬ ಮುಗಿದ ಮೇಲೆಯೇ ಮನೆಗಳಿಗೆ ಹಿಂದಿರುಗಬೇಕು. ಹೀಗೆ ಮಡಿಯಾದ ಆರು ಜನರೂ ತಮಟೆ ವಾದ್ಯಗಳ ಸಮೇತರಾಗಿ ಊರಮಧ್ಯೆ ದೊಡ್ಡ ಬೀದಿಯ ಪಕ್ಕದಲ್ಲಿರುವ ಹಳೆಕಲ್ಲು ಬಾವಿಯ ದಡಕ್ಕೆ ಬಂದು ಕುಳಿತುಕೊಳ್ಳುತ್ತಾರೆ. ಬ್ರಾಹ್ಮಣ ಜಾತಿಯ ಜೋಯಿಸರು ಅಲ್ಲಿಗೆ ಬಂದು ಹೋಮನೇಮಗಳನ್ನು ಮಾಡಿ ಬಹಳಷ್ಟು ಕಾಲ ಮಂತ್ರಗಳನ್ನು ಹೇಳುತ್ತಾರೆ. ನಂತರ ನಗಾರಿ, ತಮಟೆ ವಾದ್ಯಗಳ ಸದ್ದಿನಲ್ಲಿ ನೆರೆದ ನೂರಾರು ಜನರ ಕೈ ಚಪ್ಪಾಳೆಯ ನಡುವೆ ಬಹಿರಂಗವಾಗಿ ಆರು ಜನರಿಗೂ ಜನಿವಾರ ಧಾರಣೆ ಮಾಡುತ್ತಾರೆ. ಅಲ್ಲಿಗೆ ಈ ಆರು ಜನ ಹೊಲೆಯರ ಶೂದ್ರತ್ವ ಕಳೆದು ಪವಿತ್ರತೆ ಬಂತು ಎಂಬ ನಂಬಿಕೆ. ಒಟ್ಟಿನಲ್ಲಿ ಅವರು ಬ್ರಾಹ್ಮಣರಾಗುತ್ತಾರೆ. ಜನಿವಾರ ಧಾರಣೆಯ ನಂತರ ವಾದ್ಯ ಸಮೇತರಾಗಿ ಹೆಬ್ಬಾರಮ್ಮನ ಗುಡಿಗೆ ಹೋಗುತ್ತಾರೆ. ಹೆಬ್ಬಾರಮ್ಮನನ್ನು ಸಿಂಗರಿಸಲು ಪ್ರಾರಂಭಿಸುತ್ತಾರೆ.

ಹೆಬ್ಬಾರೆ ವಾದನ ಮತ್ತು ಹಬ್ಬ ಸಾರುವುದು

[ಬದಲಾಯಿಸಿ]

ಚೌಡಮ್ಮನ ಹಬ್ಬದ ಕಂಬ ಇಕ್ಕಿದ ಮೇಲೆ ಹೆಬ್ಬಾರೆ ಗುಡ್ಡರು ದಿನಬಿಟ್ಟು ದಿನ ಎರಡೂ ಹೆಬ್ಬಾರೆಗಳನ್ನು ಚೌಡಮ್ಮನ ಗುಡಿಗೆ ಹೊತ್ತು ತರುತ್ತಾರೆ. ಆದರೆ ಗುಡಿಯ ಒಳಗೆ ಪ್ರವೇಶವಿಲ್ಲ. ಗುಡಿಯ ಹೊರಗೆ ಹೆಬ್ಬಾರೆಗಳನ್ನು ನೇತುಹಾಕುವುದಕ್ಕಾಗಿ ನೆಟ್ಟ ಕಲ್ಲುಕಂಬಗಳಿಗೆ ಹೆಬ್ಬಾರೆಗಳನ್ನು ನೇತುಬಿಟ್ಟು “ಢವ್ ಢವ್ ಢವ್ವನೆ” ಬಡಿಯುತ್ತಾರೆ. ನಂತರ ಒಂದೊಂದನ್ನು ಮೂವರು ಹಿಡಿದು ತಮಟೆ ನಗಾರಿಯ ಗತ್ತಿಗೆ ಅನುಗುಣವಾಗಿ ಓಲಾಡಿಸುತ್ತಾ ಕುಣಿಯುತ್ತಾರೆ. ಪೂಜೆಯ ನಂತರ ಹೆಬ್ಬಾರಮ್ಮನ ಗುಡಿಗೆ ಹಿಂತಿರುಗುತ್ತಾರೆ. ಕೊಂಡ ಮಂಗಳವಾರ ಅನ್ನುವಾಗ ಅದರ ಹಿಂದಿನ ಶುಕ್ರವಾರದಿಂದ ಈ ಹೆಬ್ಬಾರೆಗಳು ಸುತ್ತಮುತ್ತಲ ಊರುಗಳಿಗೆ ಹೋಗುತ್ತವೆ. ಆಯಾ ಊರಿನ ಮಾರಿಗುಡಿಯ ಮುಂದಿನ ಬಯಲಲ್ಲಿ ಹೆಬ್ಬಾರೆಗಳನ್ನು ಮೊಳಗಿಸಿ ಕುಣಿಸಲಾಗುತ್ತದೆ. ಇದು ಹಬ್ಬದ ಸಂದೇಶ ನೀಡುವ ಕ್ರಮವೂ ಹೌದು. ಹೆಬ್ಬಾರೆಗಳು ಯಾವ ಯಾವ ಊರಿಗೆ ಯಾವ ಯಾವ ದಿನ ಹೋಗುತ್ತವೋ ಅಂದಂದಿನಿಂದ ಕೊಂಡ ಮುಗಿಯುವವರೆಗೆ ಆಯಾ ಊರುಗಳವರು ಸೂತಕ ಮಾಡಿಕೊಳ್ಳುವಂತಿಲ್ಲ. ನೇಮನಿಷ್ಠೆಗಳಿಂದ ಇರಬೇಕು. ಹೀಗೆ ಊರೂರುಗೆ ಹೊರಡುವ ಹೆಬ್ಬಾರೆ ಗುಡ್ಡರುಗಳ ಜೊತೆ ಹೊಲೆಯರ ಹೆಂಗಸರು ಮಕ್ಕಳು ಹೆಡಿಗೆ ಪುಟ್ಟಿಗಳನ್ನು ಹೊತ್ತೊಕೊಂಡು ಹಿಂಬಾಲಿಸುತ್ತಾರೆ. ಆದರೆ ಗುಡ್ಡರನ್ನು ಮುಟ್ಟಿಸಿ ಕೊಳ್ಳುವಂತಿಲ್ಲ. ಅವರು ಹೊತ್ತು ತರುವ ಹೆಡಿಗೆಗಳಿಗೆ ಆಯಾ ಊರಿನ ಜನ ಅಕ್ಕಿ, ರಾಗಿಯ ಹಿಟ್ಟು, ಕಾಳು, ಮೆಣಸಿನಕಾಯಿ ಹಾಗೂ ಹುಣಸೇ ಹಣ್ಣುಗಳನ್ನು ತುಂಬುತ್ತಾರೆ. ಪೂಜೆಯ ನಂತರ ಹೆಬ್ಬಾರೆಗಳು ಹಿಂತಿರುಗುತ್ತವೆ.

ಉಲ್ಲೇಖ

[ಬದಲಾಯಿಸಿ]
  1. https://tumkur.nic.in/en/about-district/
  2. "ಆರ್ಕೈವ್ ನಕಲು". Archived from the original on 2019-04-21. Retrieved 2019-03-01. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
   ಕರ್ನಾಟಕ ಜನಪದ ಕಲೆಗಳ ಕೋಶ- ಡಾ. ಹಿ ಚಿ ಬೋರಲಿಂಗಯ್ಯ