ಸೊಗಲ
ಸೊಗಲ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಳಗಾವಿ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ಬೆಳಗಾವಿ ಜಿಲ್ಲೆಯಲ್ಲಿರುವ ಸೊಗಲ ಕ್ಷೇತ್ರವು ಒಂದು ಧಾರ್ಮಿಕ ಸ್ಥಳ. ಬೆಳಗಾವಿ ನಗರದಿಂದ ಸುಮಾರು ೬೦ ಕಿ.ಮೀ ಮತ್ತು ಬೈಲಹೊಂಗಲ ಪಟ್ಟಣದಿಂದ ೧೬ ಕಿ.ಮೀ ದೂರದಲ್ಲಿದೆ. ಈ ಸ್ಥಳ ಸವದತ್ತಿ ತಾಲೂಕಿನಲ್ಲಿದ್ದು ತಾಲೂಕು ಕೇಂದ್ರದಿಂದ ೩೫ ಕಿ.ಮೀ ಅಂತರದಲ್ಲಿದೆ. ಸೊಗಲ ಕ್ಷೇತ್ರವು ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾದುದು ಸೋಮೇಶ್ವರನ ದೇವಸ್ಥಾನ. ಎತ್ತರದ ಬಂಡೆಗಲ್ಲಿನ ಮೇಲೆ ನಿರ್ಮಿಸಿರುವ ಈ ದೇವಾಲಯ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಬೆಟ್ಟಗಳ ನಡುವಿನಿಂದ ಪ್ರಾಕೃತಿಕವಾಗಿ ಹರಿಯುತ್ತಿರುವ ತೊರೆಯೊಂದು ಜಲಪಾತದಂತೆ ಧುಮುಕುವುದರಿಂದ ಇದು ಸೊಗಲ ಜಲಪಾತ ಎಂದು ಕರೆಯಲ್ಪಡುತ್ತದೆ. ದೇವಾಲಯದ ಬಳಿಯೇ ಈ ಜಲಧಾರೆ ಸುಮಾರು ೧೫ ಅಡಿ ಎತ್ತರದಿಂದ ಧುಮುಕಿ ನಂತರ ಸ್ವಲ್ಪ ಮುಂದಕ್ಕೆ ಹರಿದು ಜಲಧಾರೆಯಾಗಿ ೧೨೦ ಅಡಿ ಆಳಕ್ಕೆ ಬೀಳುತ್ತದೆ.
ಇತಿಹಾಸ
[ಬದಲಾಯಿಸಿ]ಇಲ್ಲಿ ದೊರೆತಿರುವ ಕ್ರಿ.ಶ.೯೮೦ರ ಚಾಲುಕ್ಯ ಇಮ್ಮಡಿ ತೈಲಪನ ಕಾಲದ ಶಾಸನದ ಪ್ರಕಾರ ತ್ರೇತಾಯುಗದ ಅಂತ್ಯದಲ್ಲಿದ್ದ ರಾವಣನ ಅನುಚರರಾದ ಮಾಲಿ ಮತ್ತು ಸುಮಾಲಿ ಎಂಬ ಶಿವಭಕ್ತರು ಈ ಸ್ಥಳದಲ್ಲಿ ಸೋಮೇಶ್ವರ ದೇವಾಲಯವನ್ನು ಪ್ರತಿಷ್ಠಾಪಿಸಿದರೆಂದು ಮತ್ತು ಆಗ ಈ ಸ್ಥಳವನ್ನು ’ಸುಮಾಲಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಲಾಗಿದೆ. ನಂತರ ಸುಗೋಲ (ಅಥವಾ ಸುಗೊಳ) ಎಂಬ ಮುನಿಯು ಇಲ್ಲಿ ತಪಸ್ಸು ಮಾಡಿದ್ದನೆಂಬ ಕಾರಣದಿಂದ ಈ ಸ್ಥಳಕ್ಕೆ ಈಗ ’ಸೊಗಲ’ ಎಂಬ ಹೆಸರು ಬಂತು. ರಟ್ಟ ಅರಸರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದ ಆಳ್ವಿಕೆ ಆರಂಭಿಸಿದರು. ರಾಷ್ಟ್ರಕೂಟರ ಕಾಲದ ಈ ದೇವಾಲಯವನ್ನು ಕ್ರಿ.ಶ. ೯೫೦-೯೭೪ರ ಅವಧಿಯಲ್ಲಿ ಕಟ್ಟಿರಬಹುದಾಗಿದೆ.
ಸ್ಥಳ ವಿವರಗಳು
[ಬದಲಾಯಿಸಿ]ಜಲಪಾತದ ಪೂರ್ವ ಮಗ್ಗುಲಿನ ಮೆಟ್ಟಿಲುಗಳನ್ನೇರುತ್ತ ಸಾಗಿದರೆ ಮುಂದೆ ಸೋಮೇಶ್ವರ ಹಾಗೂ ಶಿವ ಪಾರ್ವತಿ ದೇವಾಲಯಗಳು ಹಾಗೂ ಎರಡು ಜಲಧಾರೆಗಳನ್ನು ಕಾಣಸಿಗುತ್ತವೆ. ಇಲ್ಲಿನ ಶಿವಪಾರ್ವತಿ ಹಾಗೂ ಸೋಮೇಶ್ವರ ದೇವಾಲಯ ಪಕ್ಕದಲ್ಲಿ ಮೇಲುಗಡೆ ಮೆಟ್ಟಿಲು ಏರಿ ಬಂದರೆ ಜಿಂಕೆವನ ಇದೆ. ಜಿಂಕೆಗಳಷ್ಟೇ ಅಲ್ಲ ಪಾರಿವಾಳ, ನವಿಲುಗಳು, ಮೊಲಗಳು ಇಲ್ಲಿವೆ. ಈ ಪ್ರದೇಶದಲ್ಲಿ ತೆಂಗು, ಸಪೋಟ, ಮಾವು, ನಿಂಬೆ, ಕದಳಿ, ಪಪ್ಪಾಳೆ, ಹುಲುಗಲು, ಶ್ರೀಗಂಧ, ಜಾಜಿಮಲ್ಲಿಗೆ ಮುಂತಾದ ನೂರಾರು ವನಸ್ಪತಿ ಸಸ್ಯಸಂಕುಲವಿದೆ. ಅಲ್ಲಲ್ಲಿ ಸಿದ್ದಿಪುರುಷರ ಗುಹೆಗಳಿದ್ದು ಆಶ್ರಮಗಳಲ್ಲಿ ಯೋಗಿಗಳ ವಾಸವಿದೆ. ಕಡಿದಾದ ಬೆಟ್ಟದಲ್ಲಿ ವಿಶ್ರಾಂತಿ ನೆಲೆಗಳು, ಅಲ್ಲಲ್ಲಿ ಕಟ್ಟಡಗಳು, ಅಡ್ಡಾಡಲು ಮೆಟ್ಟಿಲುಗಳನ್ನು ನಿರ್ಮಿಸಿದ್ದು ಪ್ರವಾಸಿಗರಿಗೆಂದೇ ಇಲ್ಲಿ ಅನೇಕ ಅನುಕೂಲತೆಗಳನ್ನು ಮಾಡಲಾಗಿದೆ, ವಸತಿಗೃಹಗಳ ವ್ಯವಸ್ಥೆ ಕೂಡ ಉಂಟು. ಈ ಬೆಟ್ಟಗಳ ಮೇಲೆ ಪಾಳುಬಿದ್ದ ಕೋಟೆಯೊಂದಿದ್ದು ಅದನ್ನು ಕದಂಬರಾಯನ ಕೋಟೆ ಎಂದು ಕರೆಯಲಾಗುತ್ತದೆ.
ಧಾರ್ಮಿಕ ಪರಂಪರೆ
[ಬದಲಾಯಿಸಿ]ಸೊಗಲ ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆ ಹೊಂದಿದೆ. ಸೊಗಲ ಕ್ಷೇತ್ರದ ಆರಾಧ್ಯ ದೈವ ಸೋಮೇಶ್ವರ. ಇದು ವಿಶಾಲವಾದ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಮುಖಮಂಟಪ ಹೊಂದಿದೆ. ಇಲ್ಲಿ ಮಕರ ಸಂಕ್ರಾಂತಿಯಂದು ತೆಪ್ಪೋತ್ಸವ, ಹೋಳಿ ಹುಣ್ಣಿಮೆಯ ಹಿಂದಿನ ಸೋಮವಾರದಂದು ಸೋಮಲಿಂಗೇಶ್ವರ ರಥೋತ್ಸವ ಜರುಗುತ್ತದೆ. ರಾಷ್ಟ್ರಕೂಟರು, ಚಾಲುಕ್ಯರು, ಕದಂಬ ಅರಸರು ಇಲ್ಲಿನ ಸೋಮೇಶ್ವರನ ಆರಾಧಕರಾಗಿದ್ದರು. ಸೋಮೇಶ್ವರ ದೇವಾಲಯವಲ್ಲದೇ ವೀರಭದ್ರ, ಬೋರಮ್ಮ ಅಥವಾ ಭ್ರಮರಾಂಭ, ಕಾಳಮ್ಮ, ಕಣ್ವಋಷಿ, ತಿಮ್ಮಯ್ಯ. ಮಲ್ಲಿಕಾರ್ಜುನ, ಶಿವಪಾರ್ವತಿ ಮೊದಲಾದ ದೇವಾಲಯಗಳಿವೆ. ಪಾರ್ವತಿಯು ಉಗ್ರವಾದ ತಪಸ್ಸನ್ನು ಆಚರಿಸಿ ಶಿವನನ್ನು ಒಲಿಸಿಕೊಂಡು ವಿವಾಹವಾದ ಸಂಕೇತವಾಗಿ ಶಿವ ಪಾರ್ವತಿ ದೇವಾಲಯ ಖ್ಯಾತಿ ಪಡೆದಿದೆ.
ಕೆಲ ವಿಶೇಷಗಳು
[ಬದಲಾಯಿಸಿ]- ದೊಡ್ಡ ಜಲಪಾತದ ಪಕ್ಕಕ್ಕೆ ಬುಗುರಿಯಾಕಾರದ ಬಂಡೆಗಲ್ಲು ಇದೆ. ಅದು ಸುತ್ತಲೂ ಯಾವುದೇ ಆಸರೆ ಪಡೆಯದೇ ನಿರಾಧಾರವಾಗಿ ಗುರುತ್ವ ಬಿಂದುವಿನ ಮೇಲೆ ನಿಂತಿದ್ದು ಇದಕ್ಕೆ ಸೂಜಿಗಲ್ಲು ಎನ್ನುತ್ತಾರೆ.
- ಸೊಗಲ ಕ್ಷೇತ್ರದ ಸೊಬಗನ್ನು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ಕೂಡ ಚಿತ್ರೀಕರಿಸಲಾಗಿದೆ. ಕಿತ್ತೂರ ಚೆನ್ನಮ್ಮ, ವೀರ ಸಿಂಧೂರ ಲಕ್ಷ್ಮಣ, ರೈತನ ಮಕ್ಕಳು, ನವಿಲೂರ ನೈದಿಲೆ, ಅಮೃತಸಿಂಧು, ನೀಲಾ ಶುಕ್ಲಾಂಬರಧರಂ, ವೀರ ಸಂಗೊಳ್ಳಿ ರಾಯಣ್ಣ ಮುಂತಾದ ಚಲನಚಿತ್ರಗಳಲ್ಲಿ ಹಲವು ದೃಶ್ಯಗಳು, ಗೀತೆಗಳನ್ನು ಚಿತ್ರೀಕರಿಸಲಾಗಿದೆ.
ಆಕರಗಳು
[ಬದಲಾಯಿಸಿ]ಸೊಗಲದ ಸೊಗಸು - ವಿಜಯಕರ್ನಾಟಕ ಪತ್ರಿಕೆ