ಸೂರ್ಯ ನಮಸ್ಕಾರ


ಸೂರ್ಯ ನಮಸ್ಕಾರ ಹಿಂದೂ ಧರ್ಮ ಸಾಹಿತ್ಯದಲ್ಲಿ, ಸೂರ್ಯನನ್ನು ಕಣ್ಣಿಗೆ ಕಾಣುವ ದೇವರೆಂದು ಹೋಲಿಸಿದ್ದು,ಈತನನ್ನು ಪ್ರತಿದಿನ ನೋಡಬಹುದಾಗಿದೆ. ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿದ್ದಾರೆ.
ಸೂರ್ಯ ನಮಸ್ಕಾರದ ಮಹತ್ವ[ಬದಲಾಯಿಸಿ]
- ಶಾರೀರಿಕ ಮಾನಸಿಕ ಮತ್ತು ಆದ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ.ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ.ಇದನ್ನು ವ್ಯಾಯಾಮ ಎಂದಷ್ಟೇ ಕರೆಯದೆ ಪ್ರಾರ್ಥನೆ ಮತ್ತು ನಮಸ್ಕಾರದ ಪಟ್ಟಿಯಲ್ಲಿ ಇದು ಬರುತ್ತದೆ. ಹೀಗಾಗಿ ಹಿರಿಯರು ದೈನಂದಿನ ಚಟುವಟಿಕೆಯ ಒಂದು ಭಾಗವಾಗಿ ಇದನ್ನು ಸ್ವೀಕರಿಸಿದ್ದಾರೆ.
- ಹಠಯೋಗದಲ್ಲಿ ಸೂರ್ಯ ನಮಸ್ಕಾರದ ಪ್ರಸ್ತಾಪವಿದ್ದು ಇದೊಂದು ಹನ್ನೆರಡು ಯೋಗಾಸನಗಳ ಒಂದು ಚಕ್ರ. ಸೂರ್ಯ ದೇವನಿಗೆ ಸಂಬಂದಿಸಿದ ಬೀಜ ಮಂತ್ರವನ್ನು ಉಚರಿಸುತ್ತ ಪ್ರಾಣಾಯಾಮದ ರೀತಿಯಲ್ಲಿ ಉಸಿರನ್ನೆಳೆದುಕೊಂಡು ಅದನ್ನು ಬಿಗಿ ಹಿಡಿದುಕೊಂಡು ಮತ್ತೆ ಹೊರಗೆ ಬಿಡುತ್ತ ಮಾಡಬಹುದಾದ ವ್ಯಾಯಾಮವೇ ಸೂರ್ಯ ನಮಸ್ಕಾರ.
- ಸೂರ್ಯ ನಮಸ್ಕಾರದ ಪ್ರತಿಯೊಂದು ಭಂಗಿಯನ್ನು ಉಸಿರಾಟದ ಜೊತೆಗೇ ಬೆಸೆಯಲಾಗಿದೆ.ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ದ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲ ಆಸನಗಳಿಂದಲೂ ಸರ್ವಶ್ರೇಷ್ಠವಾದದ್ದು.ವಿವಿಧ ಆಸನಗಳ ಬದಲಿಗೆ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ಅಧಿಕ ಲಾಭವಿದೆ ಎನ್ನುತ್ತಾರೆ ತಜ್ಞರು.
ಸೂರ್ಯ ನಮಸ್ಕಾರದ ಮಹತ್ವವನ್ನು ಮನಗಂಡಿರುವ "ಆರ್ ಎಸ್ ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ ) " ಪ್ರಾರಂಭದಿಂದಲೂ ತನ್ನ ದೈನಂದಿನ ಶಾಖೆಗಳಲ್ಲಿ ಇದನ್ನು ಬಹು ಮುಖ್ಯ ಭಾಗವಾಗಿ ಅಳವಡಿಸಿಕೊಂಡದ್ದರಿಂದ ಅದು ಹೆಚ್ಹು ಜನಪ್ರಿಯಗೊಂಡಿತಲ್ಲದೆ ಹೆಚ್ಚಿನ ಯುವ ಜನತೆ ಇದರ ಪ್ರಯೋಜನ ಪಡೆಯುವಂತಾಯಿತು. ಭಾರತೀಯ ಸಂಸ್ಕೃತಿಯ ಅಂಗವಾಗಿರುವ ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಇತರ ಅದ್ಯಾತ್ಮಿಕ ಸಾಧನೆಗಳಂತೆಯೇ ಸೂರ್ಯ ನಮಸ್ಕಾರವೂ ಕೂಡ ಇಂದು ಜಗತ್ತಿನೆಲ್ಲೆಡೆ ಜನಪ್ರಿಯಗೊಳ್ಳುತ್ತಿದೆ.
ಧಾರ್ಮಿಕ ನಂಬಿಕೆ[ಬದಲಾಯಿಸಿ]
- ಸೂರ್ಯ ನಮಸ್ಕಾರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ,ಗೋ ದಾನದ ಫಲವೂ ಇದೆ ಎಂದು ಹೇಳಿ ಇದಕ್ಕೆ ಧಾರ್ಮಿಕ ನಂಬಿಕೆಯನ್ನು ನೀಡಿ ಇದನ್ನು ನಿತ್ಯವೂ ಮಾಡುವಂತೆ ಪ್ರೇರೇಪಿಸುತ್ತಿದ್ದರು.ಹಾಗಾಗಿ ಸೂರ್ಯನಿಗೆ ಅರ್ಘ್ಯ ಕೊಡುವುದು ಮತ್ತು ಮಂತ್ರ ಸ್ತೋತ್ರ ಗಳೊಂದಿಗೆ ಆತನನ್ನು ಸ್ತುತಿಸುವುದು ಧಾರ್ಮಿಕ ಆಚರಣೆಯ ಅಂಗವಾಗಿ ಬೆಳೆದು ಬಂದಿದೆ.ಧಾರ್ಮಿಕ ಆಚರಣೆಗಳೆಲ್ಲವನ್ನು ಬದಿಗಿಟ್ಟು ನೋಡಿದರೂ ಸೂರ್ಯ ನಮ್ಮ ಆರೋಗ್ಯವನ್ನು ವ್ರದ್ದಿಸುವ ಜೀವಸತ್ವಗಳ ಗಣಿ.
- ದೇಹಕ್ಕೆ ಅವಶ್ಯಕವಾದ "ಡಿ"ಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ."ಡಿ"ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ, ಕ್ಷಯ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ.
- ಇದಕ್ಕೂ ಮಿಗಿಲಾಗಿ ತನು ಮನಕ್ಕೆ ಚೈತನ್ಯ ತುಂಬುವ ಉಚಿತ ಔಷಧಿ ಎಂದರೆ ಸೂರ್ಯನ ಬೆಳಕು. ಕತ್ತಲಲ್ಲಿ ಇರುವ ಗಿಡ, ಮರ, ಬಳ್ಳಿಗಳು ಕೂಡಾ ಸೂರ್ಯನ ಬೆಳಕಿಗೆ ಕತ್ತು ಚಾಚುತ್ತವೆ. ಬೆಳಕಿನೆಡೆಗೆ ಬಾಗುತ್ತವೆ.ಸೂರ್ಯನ ಬೆಳಕಿನ ಕೊರತೆ ಮನುಷ್ಯನ ಖಿನ್ನತೆಗೆ ಕಾರಣ ವಾಗುವುದಲ್ಲದೆ ಜೀವನದಲ್ಲಿ ಬೇಸರ ಜಿಗುಪ್ಸೆ ಹುಟ್ಟಿಸಬಲ್ಲುದು, ಇದನ್ನು ತಪ್ಪಿಸಲು ಮುಂಜಾನೆಯ ಹಾಗೂ ಸಾಯಂಕಾಲದ ಬಿಸಿಲಿಗೆ ಮೈಒಡ್ಡುವುದು ಪ್ರಯೋಜನಕಾರಿ ಅಂತಾರೆ ವಿಜ್ಞಾನಿಗಳು.
ಪ್ರಸ್ತುತ ದಿನಗಳಲ್ಲಿ ಸೂರ್ಯ ನಮಸ್ಕಾರ[ಬದಲಾಯಿಸಿ]
- ಆದರೆ ಇಂದು ಬೆಳಿಗ್ಗೆ ಬೇಗನೆ ಏಳುವ ಅಬ್ಯಾಸ ಕಡಿಮೆಯಾಗುತ್ತಿದೆ. ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಅಥವಾ ಸೂರ್ಯನೊಂದಿಗಾದರೂ ಏಳುವುದು ಅತ್ಯಂತ ಶ್ರೆಯಷ್ಕರ. ಮುಂಜಾನೆ ಬೇಗ ಏಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿ ಅನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಕಾರಣಗಳಿದ್ದರೂ ಅದಕ್ಕೂ ಮಿಗಿಲಾಗಿ ಮುಂಜಾನೆಯ ಪ್ರಶಾಂತ ಹಾಗೂ ಸುಂದರ ವಾತಾವರಣವನ್ನು ಅನುಭವಿಸುತ್ತ ಆ ಸಂದರ್ಭದಲ್ಲಿ ನಡಿಗೆ, ವ್ಯಾಯಾಮ, ಸೂರ್ಯ ನಮಸ್ಕಾರ, ಧ್ಯಾನ, ಜಪ ತಪಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಗರಿಷ್ಟ ಲಾಭವಿದೆ. *ತನು ಮನಗಳಿಗೆ ಮುಂಜಾನೆ ದೊರೆತ ಚೈತನ್ಯ ಇಡೀ ದಿನ ನಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ.ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿಯಾದಂತಹ ಮುಂಜಾನೆಯ ಎಳೆಬಿಸಿಲು ಮುಂಜಾನೆಯಲ್ಲಿ ಮಾತ್ರ ಲಬ್ಯ.ಆದ್ದರಿಂದಲೇ ಆರೋಗ್ಯದ ಕಾಳಜಿ ಹೊಂದಿರುವವರು, ಆದ್ಯಾತ್ಮಿಕ ಸಾಧಕರೆಲ್ಲರೂ ನಸುಕಿನಲ್ಲಿಯೇ ಸೂರ್ಯನ ಸ್ವಾಗತಕ್ಕೆ ಆತನ ಆರಾಧನೆಗೆ ಸಿದ್ದರಾಗುತ್ತಾರೆ.
- ೨೦೦೪ರಲ್ಲಿ ಮದ್ಯಪ್ರದೇಶದ ಗ್ವಾಲಿಯರ್ನಲ್ಲಿ ೧೮೦ ಶಾಲೆಗಳ ಸುಮಾರು ೧೫,೦೦೦ ಕ್ಕೂ ಹೆಚ್ಹಿನ ಮಕ್ಕಳು ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿ ವಿಶ್ವ ದಾಖಲೆ ಮಾಡಿ ಸೂರ್ಯ ನಮಸ್ಕಾರದ ಮಹತ್ವವನ್ನು ಸಾಬೀತು ಪಡಿಸಿದ್ದಾರೆ. ಅಮೆರಿಕಾದ "ಹಿಂದೂ ಸ್ವಯಂ ಸೇವಾ ಸಂಘ ""ಹೆಲ್ತ್ ಫಾರ್ ಹ್ಯುಮಾನಿಟಿ ಯೋಗತಾನ್"ಕಾರ್ಯಕ್ರಮದ ಅಂಗವಾಗಿ ೨೦೧೧ರ ಜನವರಿ ತಿಂಗಳಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ೧೭ ಶಾಲೆಗಳು, ೨೫ ವಿಶ್ವ ವಿದ್ಯಾಲಯಗಳು, ೧೪ ಯೋಗ ಕೇಂದ್ರಗಳಲ್ಲದೆ ಹಲವಾರು ದೇಗುಲ ಸಮಿತಿಗಳು ಸಕ್ರೀಯವಾಗಿ ಭಾಗವಹಿಸಿರುವುದು ಸೂರ್ಯನಮಸ್ಕಾರದ ಮಹತ್ವ ಮತ್ತು ಜನಪ್ರಿಯತೆಯನ್ನು ಸಾರುತ್ತದೆ.
- ಆರೋಗ್ಯ ಕುರಿತ ಕಾಳಜಿಯೊಂದಿಗೆ ನ್ಯೂಯಾರ್ಕಿನ ಮೇಯರ್ "ಮಿಷೆಲ್ ಬ್ಲುವತ್ ಬರ್ಗ್ "ಯೋಗತಾನ್ ಅನ್ನು ಸಂಘಟಿಸಿ ಸಾರ್ವಜನಿಕರನ್ನು ಸಕ್ರೀಯವಾಗಿ ಭಾಗವಹಿಸುವಂತೆ ಕೋರಿದ್ದರು.ಸಾರ್ವಜನಿಕರೊಂದಿಗೆ ಗಣ್ಯಾತಿಗಣ್ಯರು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಅತ್ಯದಿಕ ಸಂಖ್ಯೆಯಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದರು.
ಆರೋಗ್ಯ ವ್ರದ್ದಿಗೆ ಹಾಗೂ ಮನೋಬಲವನ್ನು ಹೆಚಿಸುವುದಕ್ಕೆ ನೆರವಾಗುವ ಸೂರ್ಯ ನಮಸ್ಕಾರವು ಆರೋಗ್ಯ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ತರುವುದಲ್ಲದೆ ರೋಗ ಪ್ರತಿರೋದಕ ಶಕ್ತಿ, ಸಾಮರ್ಥ್ಯ ಮತ್ತು ಜೀವನಾಸಕ್ತಿಯನ್ನು ಹೆಚ್ಚಿಸಿದೆ ಅನ್ನುವುದು ಇದನ್ನು ಅಳವಡಿಸಿಕೊಂಡವರ ಅನುಭವದ ಮಾತು. ಒಟ್ಟಿನಲ್ಲಿ ವ್ಯಕ್ತಿತ್ವದ ಸರ್ವತೋಮುಖ ಅಭಿವ್ರದ್ದಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರವು ಜಾತಿ ಮತ ಪಂಥಗಳನ್ನು ಮೀರಿ ಎಲ್ಲಾ ವಯೋಮಾನದ ಜನರಿಗೂ ಅನ್ವಯವಾಗುವಂಥ ಒಂದು ವಿಶಿಷ್ಟಪೂರ್ಣ ವ್ಯಾಯಾಮವಾಗಿದೆ.