ಅದಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅದಿತಿ[ಬದಲಾಯಿಸಿ]

ಅದಿತಿ ಪ್ರಚೇತಸಪುತ್ರ ದಕ್ಷನ ಮಗಳು, ಕಶ್ಯಪನ ಹೆಂಡತಿ. ದೇವತೆಗಳ ವರ್ಗೀಕರಣದಲ್ಲಿ ಸ್ತ್ರೀದೇವತೆಗಳಲ್ಲೆಲ್ಲ ಅದಿತಿಗೆ ಅಗ್ರಸ್ಥಾನವಿದ್ದರೂ (ನಿರುಕ್ತ 11.22) ಋಕ್ಸಂಹಿತೆಯಲ್ಲಿ ಅವಳನ್ನೇ ಉದ್ದೇಶಿಸಿದ ಪ್ರತ್ಯೇಕ ಸೂಕ್ತವಿಲ್ಲ. ಆದರೆ ಜ್ಯೋತಿ ರೂಪರಾದ ಆದಿತ್ಯರಿಗೆಲ್ಲ ಮಾತೆ ಎಂಬ ಪ್ರಶಂಸೆ ಈ ದೇವತೆಯ ವೈಶಿಷ್ಟ್ಯವನ್ನು ತಿಳಿಸುತ್ತದೆ.

ಅದಿತಿ ಎಂಬ ಪದಕ್ಕೆ ಅನಂತ, ಅಲಂಘ್ಯ, ಅಳೆಯಲು ಸಾಧ್ಯವಿಲ್ಲದ್ದು ಮುಂತಾದ ಅರ್ಥಗಳು ಸಹಜವಾಗಿವೆ. ಆದ್ದರಿಂದ ಈಕೆ ಅನಂತತ್ವವನ್ನೂ ಪ್ರತಿಬಿಂಬಿಸುವ ದೇವತಾವಿಶೇಷವೆನ್ನಬಹುದು. ಲೌಕಿಕ ಗೋಚರಕ್ಕೆ ನಿಲುಕದ ನಿತ್ಯತತ್ತ್ವವನ್ನು ಪ್ರತಿಬಿಂಬಿಸುವುದರಿಂದಲೇ ಈ ದೇವತೆಯ ನಿರ್ದಿಷ್ಟರೂಪಾದಿಗಳು ವರ್ಣಿತವಾಗಿರಲು ಸಾಧ್ಯವಿಲ್ಲ. ಆದಿತ್ಯರಿಂದಲೇ ಧರಿಸಲ್ಪಡತಕ್ಕದ್ದಾದ ಈ ನಿತ್ಯತತ್ತ್ವ ಎಲ್ಲ ಲೋಕಗಳನ್ನೂ ಒಳಗೊಂಡು ಎಲ್ಲವನ್ನೂ ಮೀರಿದೆ. ಒಂದು ಮಂತ್ರದಲ್ಲಿ ಅವಳ ವರ್ಣನೆ ಈ ರೀತಿ ಇದೆ.

ಅಖಂಡಳಾದ ಅದಿತಿ ಸಕಲ ವಿಶ್ವಕ್ಕೂ ಜನನಿ. ಅವಳೆ ಜನಕ. ಅವಳೆ ಸಕಲ ದೇವತೆಗಳು. ಪ್ರಕಾಶಮಾನವಾದ ಸ್ವರ್ಗ ಮತ್ತು ಅಂತರಿಕ್ಷಾದಿಗಳೂ ಅವಳೆ. ಉತ್ಪನ್ನವಾದ ಸಕಲ ವಿಶ್ವವೂ ವಿಶ್ವನಿಯಾಮಕಳೂ ಎಲ್ಲವೂ ಅದಿತಿ' (ಋ.1.89.10).

ಅದಿತಿ ಶಬ್ದಕ್ಕೆ ಪಾಪರಾಹಿತ್ಯ ಬಂಧನರಾಹಿತ್ಯ ಎಂಬ ಅರ್ಥವೂ ಉಂಟು. ಪಾಪದಿಂದ ಬಿಡಿಸುವಂತೆ ಮಿತ್ರಾವರುಣಾದಿಗಳನ್ನು ಪ್ರಾರ್ಥಿಸುವ ರೀತಿಯಲ್ಲಿಯೇ ಅದಿತಿಯನ್ನು ಪಾಪಗಳನ್ನು ನಾಶಗೊಳಿಸುವ ನಾಶಕಳಾಗಬೇಕೆಂದು ಪ್ರಾರ್ಥಿಸಿದೆ. ಬಂಧನರಹಿತರಾದ, ಪ್ರಕಾಶಮಾನರಾದ, ಆದಿತ್ಯರೂಪರಾದ ಪುತ್ರರನ್ನೂ ಹೊಂದಿರುವುದರಿಂದ ಅವಳನ್ನು ರಾಜಪುತ್ರಾ, ಸುಪುತ್ರಾ ಎಂದು ಕರೆದಿದೆ.

ಋಗ್ವೇದದಲ್ಲಿ ಹೇಳಿರುವಂತೆ ಆದಿತಿ ದಕ್ಷನಾಮಕನಾದ ಆದಿತ್ಯನ ತಾಯಿ. ಆದರೆ ಅದೇ ಋಕ್ಸಂಹಿತೆಯಲ್ಲಿ ವಿಶ್ವಸೃಷ್ಟಿಯನ್ನು ವಿವರಿಸುವಾಗಿ ಒಂದೇ ಸೂಕ್ತದಲ್ಲೆ ದಕ್ಷನಿಂದ ಅದಿತಿ ಉತ್ಪನ್ನಳಾದಳು, ಹಾಗೆಯೇ ಅದಿತಿಯಿಂದ ದಕ್ಷನು ಉತ್ಪನ್ನನಾದನು ಎನ್ನಲಾಗಿದೆ.[೧][೨]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಅದಿತಿ&oldid=760679" ಇಂದ ಪಡೆಯಲ್ಪಟ್ಟಿದೆ