ಶ್ವಾಸಕೋಶ ಕಾರ್ಯಸಾಮರ್ಥ್ಯ ಪರೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಲೆತಿಸ್ಮೋಗ್ರಾಫ್ "ಬಾಡಿ ಬಾಕ್ಸ್"

ಶ್ವಾಸಕೋಶ ಕಾರ್ಯಸಾಮರ್ಥ್ಯ ಪರೀಕ್ಷೆಗಳು (ಪಲ್ಮನರಿ ಫ಼ಂಕ್ಷನ್ ಟೆಸ್ಟ್, ಪಿಎಫ್‍ಟಿ) ಉಸಿರಾಟಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಚಟುವಟಿಕೆಗಳ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.[೧][೨] ಪ್ಯಾಪನ್‍ಹೀಮರ್ ಪ್ರಕಾರ ಆ ಕಾರ್ಯಗಳು ಗಾಳಿ ಸಂಚಾರ (ವೆಂಟಿಲೇಶನ್), ಹರಡಿಕೆ ಸೂಸಿಕೆ (ರೆಫ್ಯೂಷನ್), ರಕ್ತದುಂಬಿಕೆ (ಪರ್‌ಫ್ಯೂಷನ್) ಮತ್ತು ಒಪ್ಪಿಗೆ (ಕಂಪ್ಲೈಯನ್ಸ್). ಶ್ವಾಸಕೋಶ ಕಾರ್ಯಸಾಮರ್ಥ್ಯ ಪರೀಕ್ಷೆಯ ಮುಖ್ಯ ಉದ್ದೇಶವೆಂದರೆ ಶ್ವಾಸಕೋಶ ದುರ್ಬಲತೆಯ ತೀವ್ರತೆಯನ್ನು ಗುರುತಿಸುವುದು.[೩] ಈ ಪರೀಕ್ಷೆಗಳು ನೀಡುವ ಉತ್ತರಗಳು ರೋಗನಿದಾನದಲ್ಲಿ ಮತ್ತು ರೋಗಿಯಲ್ಲಿ ತೋರಿರುವ ವ್ಯತ್ಯಯದ ತೀವ್ರತೆಯನ್ನು ಅರಿಯುವಲ್ಲಿ ಉಪಯುಕ್ತ. ಅವು ರೋಗದ ಮುನ್ನಡೆ ಹಾಗೂ ಹಿನ್ನಡೆಯ ಬಗ್ಗೆ ವಿವರಗಳನ್ನು ಒದಗಿಸುತ್ತದೆ. ಅಲ್ಲದೆ ಚಿಕಿತ್ಸೆಯ ಫಲಶೃತಿಯನ್ನು ತೋರಿಸಿಕೊಡುತ್ತದೆ.

ಈ ಪರೀಕ್ಷೆಗಳು ಫುಪ್ಪುಸ ಘನಾಳತೆ (ವಾಲ್ಯೂಂ), ಸೋಸಿ ಹೋಗುವ ಸಾಮರ್ಥ್ಯ, ಹರಿವಿನ ಘನಾಳತೆ ಉಬ್ಬು ತಗ್ಗುಗಳು, ಧಮನಿ ರಕ್ತದ ಅನಿಲಗಳು, ಶ್ವಾಸಕೋಶದ ಕಾರ್ಯವೈಖರಿ ಮತ್ತು ರಕ್ತ ಪ್ರವಾಹದ ವಿಧಿವಿಧಾನಗಳ ತಿಳಿವಳಿಕೆಯನ್ನು ಒದಗಿಸುತ್ತವೆ.

ಶ್ವಾಸಕೋಶದ ಕಾರ್ಯ[ಬದಲಾಯಿಸಿ]

ಉಸಿರಾಟದ ಮಂಡಲವು ಉಚ್ಛ್ವಾಸ ಕಾಲದಲ್ಲಿ ಒಳ ತೆಗೆದುಕೊಂಡ ಗಾಳಿ ಬುಕ್ಕೆಗಳ ಮೇಲೆ ಹರಡಿದ ಲೋಮನಾಳಗಳ ಹರಿಯುವ ರಕ್ತದ ಮಧ್ಯ ಅನಿಲ ವಿನಿಮಯಕ್ಕೆ ಒಂದು ಮೇಲ್ಮೈಯನ್ನು ಒದಗಿಸುತ್ತದೆ. ಅದರಿಂದಾಗಿ ರಕ್ತ ಜೀವವಸ್ತುಕರಣ ಕ್ರಿಯೆಯಿಂದ ಉದ್ಭವಿಸಿದ ಇಂಗಾಲ ಡೈ ಆಕ್ಸೈಡನ್ನು ಕಳೆದುಕೊಂಡು ಆಮ್ಲಜನಕದ ಹೀರಿಕೆಯುಂಟಾಗುತ್ತದೆ. ಅದರ ಫಲವಾಗಿ ಸಮುದ್ರಮಟ್ಟದಲ್ಲಿ ವಾತಾವರಣದಲ್ಲಿನ ಗಾಳಿಯನ್ನು ಉಸಿರಾಡುವ ವ್ಯಕ್ತಿಯ ಧಮನಿ (ಆರ್ಟೀರಿಯಲ್) ರಕ್ತದಲ್ಲಿ ಆಕ್ಸಿಜನ್ ಒತ್ತಡ 100 ಮಿ. ಮೀ ಪಾದರಸ ಮತ್ತು ಇಂಗಾಲ ಡೈ ಆಕ್ಸೈಡ್ ಒತ್ತಡ 40 ಮಿ. ಮೀ. ಪಾದರಸ. ಅದರಿಂದಾಗಿ ಫುಪ್ಪುಸ ದೇಹದಲ್ಲಿನ ಆಮ್ಲ ಕ್ಷಾರ ಸಮತೋಲನೆಯನ್ನು ಕಾಯ್ದಿರಿಸುವಲ್ಲಿ ಪ್ರಮುಖ ಪಾತ್ರವನ್ನಾಡುತ್ತದೆ.

ಉಸಿರಾಟ ಕಾರ್ಯವು

  1. ಉಸಿರು ನಾಳದಲ್ಲಿ ಗಾಳಿಯಾಡಿಕೆ,
  2. ಫುಪ್ಪುಸದೊಡನೆ ಅದರ ಹರಡಿಕೆ ಮತ್ತು ಉಸಿರಾಟ ಅನಿಲಗಳ ಜೊತೆ ಮಿಶ್ರಣ,
  3. ಸಮರ್ಪಕ ರೀತಿಯಲ್ಲಿ ರಕ್ತದ ಹರಿವು,
  4. ಅನಿಲಗಳ ವಿನಿಮಯವನ್ನೊಳಗೊಂಡಿದೆ.

ಗಾಳಿ ಬುಕ್ಕೆ ಮತ್ತು ಅವುಗಳ ಮೇಲೆ ಹರಡಿರುವ ಲೋಮನಾಳಗಳ ಪದರು ಅನಿಲಗಳು ಸೋಸಿ ಹೋಗುವುದಕ್ಕೆ ಅನುಕೂಲವಾಗುವಂತಿದ್ದು, ಅವೆರಡು ಪರಸ್ಪರ ಹೊಂದಾಣಿಕೆಯನ್ನು ತೋರಿಸುತ್ತದೆ. ಉಸಿರಾಟವೆಂದರೆ ಉಸಿರುನಾಳದ ಮೂಲಕ ಗಾಳಿ ಒಳ ಮತ್ತು ಹೊರಹೋಗುವಿಕೆ. ಆ ರೀತಿಯ ಚಲನೆಗಳನ್ನು ಮಾಡುವಾಗ ಫುಪ್ಪುಸ ಮತ್ತು ಎದೆಗೂಡಿನ ಭಿತ್ತಿ ಬೇರ್ಪಡಿಸುವ ಸ್ಥಿತಿಸ್ಥಾಪಕ ಶಕ್ತಿಯಿಂದ ಮುನ್ನ ಸ್ಥಿತಿಗೆ ಬರುವ ಕಾರ್ಯ ಮತ್ತು ಅಲ್ಲಿನ ಊತಕಗಳು ಹಾಗೂ ಉಸಿರುನಾಳಗಳ ತಾಕಲಾಟದ ಪ್ರತಿರೋಧವನ್ನು ಮೆಟ್ಟಿಬರಲು ಸಾಕಷ್ಟು ಶ್ರಮ ಪಡಬೇಕಾಗುವುದು.

ಪರೀಕ್ಷೆಗಳು[ಬದಲಾಯಿಸಿ]

ಶ್ವಾಸಕೋಸ ಕಾರ್ಯಸಾಮರ್ಥ್ಯ ಪರೀಕ್ಷೆಗೆ ಈಡುಮಾಡುವ ಉತ್ತರಗಳನ್ನು ರೋಗಿ ತೋರ್ಪಡಿಸುವ ರೋಗಲಕ್ಷಣಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತದೆ. ಮೇಲಾಗಿ ಈ ಪರೀಕ್ಷಾ ಪರಿಣಾಮಗಳು ವ್ಯಕ್ತಿಯ ವಯಸ್ಸು, ಎತ್ತರ, ಲಿಂಗ, ಮತ್ತು ಬುಡಕಟ್ಟನ್ನು ಆಧರಿಸಿದೆ.

ಪರೀಕ್ಷೆಗಳು ನೀಡುವ ವಿವರ[ಬದಲಾಯಿಸಿ]

ಪಲ್ಮನರಿ ಫಂಕ್ಷನ್ ಟೆಸ್ಟ್‌ಗಳು ಕೆಳಕಾಣಿಸಿದ ವಿವರಗಳನ್ನು ನೀಡುತ್ತದೆ:

  1. ರೋಗದಿಂದ ತೊಂದರೆಗೀಡಾದ ಫುಪ್ಪುಸದಲ್ಲಿನ ಕಾರ್ಯ ಸಾಮರ್ಥ್ಯದಲ್ಲಿನ ವ್ಯತ್ಯಾಸದಿಂದ ಗೋಚರಕ್ಕೆ ಬರುವ ಪುರಾವೆಗಳು.
  2. ಉಬ್ಬಸಕ್ಕೆ ಕಾರಣವೇನಾದರೂ ಇದೆಯೇ ಇಲ್ಲವೇ ಎಂಬುದು.
  3. ಶ್ವಾಸಕೋಶ ಇಲ್ಲವೆ ಬೇರೆ ಅಂಗಭಾಗಗಳ ಮೇಲೆ ಕೈಗೊಳ್ಳುವ ಶಸ್ತ್ರಚಿಕಿತ್ಸೆಯ ಮೊದಲು ಶ್ವಾಸಕೋಶ ಕಾರ್ಯಸಾಮರ್ಥ್ಯದ ತಿಳಿವಳಿಕೆ.
  4. ನಿಡುಗಾಲ (ಕ್ರಾನಿಕ್) ಉಸಿರುನಾಳ ಅಡಚಣೆಯಿಂದ ನರಳುವವರ ರೋಗದ ಮುನ್ನೋಟದ ಅರಿವು.
  5. ಅಸ್ತಮಾದಂತಹ ಕಾಯಿಲೆಯಲ್ಲಿ ಕೈಗೊಂಡ ಚಿಕಿತ್ಸೆಯ ಫಲಶೃತಿ
  6. ಬೇರೆ ಬೇರೆ ತೆರನಾದ ಉಸಿರಾಟಮಂಡಲ ಸೋರುವಿಕೆಯ ಭೇದಗಾಣಿಕೆ.
  7. ಉಸಿರ್ನಾಳ ತೋರ್ಪಡಿಸುವ ತೀವ್ರತೆರನಾದ ಹೆಚ್ಚಿನ ಪ್ರತಿಕ್ರಿಯೆ. (ಹೈಪರ್ ರೆಸ್ಪಾನ್ಸಿವ್‌ನೆಸ್)
  8. ಕುಗ್ಗಿದ ಕಾರ್ಯ ಸಾಮರ್ಥ್ಯದ ಪರಿಶೀಲನೆ.

ಈ ರೀತಿಯ ಪರೀಕ್ಷೆಗಳು ನೀಡುವ ಪರಿಣಾಮದ ಉಪಯುಕ್ತತೆ ಕೆಲವೊಂದು ಇತಿ ಮಿತಿಗಳನ್ನು ಹೊಂದಿದೆ. ಅಲ್ಲಿ ತೋರಿಬರುವ ಅಸಹಜತೆ ಎದುರಾದ ಪ್ರಶ್ನೆಯ ಬಗ್ಗೆ ತಿಳಿವಳಿಕೆ ನೀಡಿದರೂ, ಅದು ನೇರವಾಗಿ ಯಾವ ರೋಗ ಎಂಬುದನ್ನು ತಿಳಿಸಿಕೊಡುವುದಿಲ್ಲ. ಅಲ್ಲಿನ ಶಾರೀರಿಕ ರಚನೆಯಲ್ಲಿನ ತೊಂದರೆಯನ್ನಾಗಲೀ, (ಇಲ್ಲವೇ ರೋಗದ ಕಾರಣವನ್ನಾಗಲೀ) ತೋರಿಸದು. ಶ್ವಾಸಕೋಶದ ಬೇರೆ ಬೇರೆ ಭಾಗಗಳ ಕಾರ್ಯಸಾಮರ್ಥ್ಯವನ್ನು ಅಳೆಯಲು ಬೇರೆ ಬೇರೆ ಬಗೆಯ ಪರೀಕ್ಷೆಗಳಿವೆ. ವ್ಯಕ್ತಿಯಲ್ಲಿ ಆತನ ಸಾಮರ್ಥ್ಯದ ಅಡಿಪಾಯ ಮಟ್ಟವನ್ನು ಗುರುತಿಸಿದ ಮೇಲೆ ಆಗಾಗ್ಗೆ ಕೈಗೊಳ್ಳುವ ಈ ಪರೀಕ್ಷೆಗಳು ರೋಗಿಯಲ್ಲಿ ರೋಗದ ಮುನ್ನೋಟವನ್ನು ಮುಂದುವರಿಯುತ್ತಿದೆಯೇ ಇಲ್ಲವೇ ಹಿಂದೆ ಸರಿಯುತ್ತಿದೆಯೇ-ತಿಳಿಸಿಕೊಡುತ್ತದೆ. ಶ್ವಾಸಕೋಶದ ಎಲ್ಲಾ ಕಾರ್ಯಗಳನ್ನೂ ಅಳೆಯಲು ಒಂದೇ ಪರೀಕ್ಷೆ ಲಭ್ಯವಿಲ್ಲ.

ಶ್ವಾಸಕೋಶ ಕಾರ್ಯಸಾಮರ್ಥ್ಯ ಪರೀಕ್ಷೆಗಳು ವ್ಯಕ್ತಿಗತವಾಗಿ ಕೇಡುಮಾಡುವ ಪರಿಣಾಮಗಳನ್ನು ಅದೇ ಎತ್ತರ, ವಯಸ್ಸು, ಮತ್ತು ಲಿಂಗದ ವ್ಯಕ್ತಿ ಕೇಡುಮಾಡುವ ಪರಿಣಾಮಗಳ ಜೊತೆ ತುಲನೆ ಮಾಡಲಾಗುತ್ತದೆ. ಸಹಜ ಪರಿಣಾಮಕ್ಕಿಂತ ಭಿನ್ನವಾಗಿದ್ದರೆ ಅದು ಅಸಹಜ ಮತ್ತು ಶ್ವಾಸಕೋಶ ಕಾರ್ಯಸಾಮರ್ಥ್ಯದಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ಸೂಚಿಸುತ್ತದೆ.

ಉಸಿರ್ಮಾಪಕ ಪರೀಕ್ಷೆ: ಸಾಮಾನ್ಯವಾಗಿ ಉಸಿರ್ಮಾಪಕ (ಸ್ಪೈರೋಮೀಟರ್) ಬಳಸಿ ವ್ಯಕ್ತಿ ಶ್ವಾಸಕೋಶ ರೋಗ ಹೊಂದಿದ್ದಾನೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿ ಕೈಗೊಳ್ಳುವ ಪರೀಕ್ಷೆಗಳು ಒತ್ತರದ (ಫೋರ್ಸರ್) ಜೀವುಸಿರಾಳವು (ವೈಟಲ್ ಕೆಪ್ಯಾಸಿಟಿ) ಒತ್ತರದ ನಿಶ್ವಾಸ ಸಾಮರ್ಥ್ಯ ಒಂದು ಸೆಕೆಂಡಿನಲ್ಲಿ (ಎಫ್ ಇ ಎ1) ಮತ್ತು ಎಫ್ ಇ ಎ1/ಎಫ್ ಎಸ್ ದಾಮಾಷಾ ಈ ಪರೀಕ್ಷೆ ನೀಡುವ ಉತ್ತರಗಳು ಸಹಜ ಪರಿಮಿತಿಯಲ್ಲಿದ್ದರೆ ರೋಗಿಯ ಉಸಿರುನಾಳ ಗಾಳಿಯಾಡಿಕೆಯಲ್ಲಿ ಯಾವ ಬಗೆಯ ತೊಂದರೆ ಹೊಂದಿಲ್ಲವೆಂದು ನಿರ್ಧರಿಸಲಾಗುತ್ತದೆ. ಈ ನಿಯಮಕ್ಕೆ ಶ್ವಾಸಕೋಶ ರಕ್ತನಾಳಕ್ಕೆ ಸಂಬಂಧಿಸಿದ ರೋಗಗಳು ಮತ್ತು ಸಿಸ್ಟಮಿಕ್ ಸ್ಕ್ಲೀರೋಸಿಸ್ ರೋಗಗಳು ಹೊರತು. ಆ ರೋಗಗಳು ಉಸಿರ್ಮಾಪಕ ಪರಿಣಾಮವನ್ನು ಸಮರ್ಪಕವಾಗಿ ತೋರಿಸಿದರೂ ಅನಿಲ ಸೋಸಿ ಹೋಗುವ ಸಾಮರ್ಥ್ಯಕ್ಕೆ  ಭಂಗಬಂದಿರುವುದನ್ನು ತೋರಿಸುತ್ತದೆ. ಅಲ್ಲದೆ ಅಸ್ತಮಾ ರೋಗ ಆಗ್ಗಾಗ್ಗೆ ಬರುವಂತಹುದು. ರೋಗಿಯು ಯಾವುದೇ ಗುಣಲಕ್ಷಣಗಳನ್ನು ತೋರಿಸದಿದ್ದಾಗ  ಶ್ವಾಸಕೋಶ ಪರೀಕ್ಷೆಯ ಪರಿಣಾಮಗಳು ಸಹಜವಾಗಿರುತ್ತದೆ. ಆ ರೋಗಿಗಳು ಉಸಿರ್ನಾಳದ ತೀವ್ರತರ ಹೆಚ್ಚಿನ ಪ್ರತಿಕ್ರಿಯೆಯನ್ನೂ ತೋರಿಸಬಲ್ಲರು.

ಉಸಿರ್ಮಾಪಕ ಪರೀಕ್ಷೆಯಲ್ಲಿ ವ್ಯತ್ಯಯ ತೋರಿಬಂದರೆ ಅದನ್ನು ಅಡಚಣೆ (ಅಡ್ಡ, ಅಬ್‍ಸ್ಟ್ರಕ್ಟಿವ್)ಯ, ಮಿತಿಗಟ್ಟಿನ (ರೆಸ್ಟ್ರಿಕ್ಟಿವ್) ಇಲ್ಲವೆ ಮಿಶ್ರತೆರನಾದವುಗಳೆಂದು ವಿಂಗಡಿಸಲಾಗುತ್ತದೆ.

  1. ಅಡಚಣೆಯ ಗಾಳಿಯಾರಕ ವ್ಯತ್ಯಯ: ಇಲ್ಲಿ ನಿಶ್ವಾಸದ ಹರಿವಿನ ಗತಿ ಹೆಚ್ಚು ಪರಿಶ್ರಮ ಮಾಡಿದರೂ ಕಡಿಮೆಯಾಗಿರುತ್ತದೆ. ಉಸಿರುನಾಳದ ಪ್ರತಿರೋಧ ಅಥವಾ ಸ್ಥಿತಿಸ್ಥಾಪಕ ಶಕ್ತಿಯು ಫುಪ್ಪುಸ ಮುನ್ನಾ ಸ್ಥಿತಿಗೆ ಬರಲು ಎದುರಿಸುವ ತೊಂದರೆಯಿಂದಾಗಿ ನಿಶ್ವಾಸದಲ್ಲಿ ಹೆಚ್ಚು ಪ್ರತಿರೋಧ ಕಂಡುಬರುತ್ತದೆ. ಅಲ್ಲಿ ಎಫ್ ಇ ಎ1/ಎಫ್ ಎಸ್ ದಾಮಾಷಾ 0.75 ಕ್ಕಿಂತ ಕಡಿಮೆಯಾಗಿರುತ್ತದೆ.
  2. ಮಿತಿಗಟ್ಟಿನ ಗಾಳಿಯಾಡಿಕೆ ವ್ಯತ್ಯಯ: ಇಲ್ಲಿ ಫುಪ್ಪುಸದ ಘನಮಾನ (ವಾಲ್ಯೂಂ) ಕಡಿಮೆಯಾಗಿರುತ್ತದೆ. ಅದರಿಂದಾಗಿ ಜೀವುಸಿರಾಳವು ಲೆಕ್ಕ ಹಾಕಿದುದಕ್ಕಿಂತ ಕಡಿಮೆಯಾಗಿರುತ್ತದೆ. ಅದರಲಿ ಶ್ವಾಸಕೋಶದ ಎಲ್ಲ ವಿಭಾಗಗಳಲ್ಲಿನ ಘನಮಾನ ಕಡಿಮೆಯಾಗಿರುತ್ತದೆ. ಈ ಸ್ಥಿತಿಯಲ್ಲಿ ಉಸಿರುನಾಳದಲ್ಲಿ ಯಾವುದೇ ಬಗೆಯ ಅಡಚಣೆ ಇರುವುದಿಲ್ಲವಾದುದರಿಂದ ಎಫ್ ಇ ಎ1/ಎಫ್ ಎಸ್ ದಾಮಾಷಾ ಸಹಜ ಸ್ಥಿತಿಯಲ್ಲಿರುವಂತೆಯೇ ಇರುತ್ತದೆ. ಜೀವುಸಿರಾಳವು ಮಾಡಿದಾಗ ಎಫ್ ಎಸ್ ಮತ್ತು ಎಫ್ ಇ ಎ1 ಎರಡೂ ಕಡಿಮೆಯಾಗಿರುವುದು ತೋರಿಬರುತ್ತದೆ.
  3. ಮಿಶ್ರ ಗಾಳಿಯಾರಕ ವ್ಯತ್ಯಯ: ಕೆಲವು ರೋಗಗಳು ಅಡಚಣೆಯ ಮತ್ತು ಮಿತಿಗಟ್ಟಿನ ಗಾಳಿಯಾರಕ ವ್ಯತ್ಯಯಗಳನ್ನು ತೋರಿಸಬಲ್ಲುದು. ಅಲ್ಲಿ ಮಿತಿಗಟ್ಟು ವಿಶೇಷವಾಗಿದ್ದರೆ ಎಫ್ ಇ ಎ1 ಗಿಂತ ಎಫ್ ಎಸ್ ಯು ತುಲನಾತ್ಮಕವಾಗಿ ಕಡಿಮೆಯಾಗಿರುವುದು ಹೆಚ್ಚು. ಅಡಚಣೆಯ ತೊಂದರೆ ಹೆಚ್ಚಾಗಿದ್ದಲ್ಲಿ ಎಫ್ ಇ ಎ1 ಅಳತೆಯು ಎಫ್ ಎಸ್ ಗಿಂತ ಕಡಿಮೆಯಾಗಿರುವುದು ಹೆಚ್ಚು.

ಇತರ ಪರೀಕ್ಷೆಗಳು[ಬದಲಾಯಿಸಿ]

ಶ್ವಾಸಕೋಶದ ಬೇರೆ ಬೇರೆ ಕಾರ್ಯಚಟುವಟಿಕೆಗಳನ್ನು ಅರಿಯಲು ಬೇರೆ ಬೇರೆ ತೆರನಾದ ಪರೀಕ್ಷೆಗಳು ಲಭ್ಯ. ಅವುಗಳೆಂದರೆ:

  1. ಉಸಿರುನಾಳದ ಕಾರ್ಯ: ಉಸಿರುನಾಳದ ಕಾರ್ಯವನ್ನು ಅಳೆಯಲು ಉಸಿರ್ಮಾಪಕವಿದೆ. ಅದರಿಂದ ಜೀವುಸಿರಾಳವು, ಒತ್ತರದ ಜೀವುಸಿರಾಳವು ಒಂದು ಸೆಕೆಂಡಿನಲ್ಲಿ ಒತ್ತರದ ನಿಶ್ವಾಸ ಘನಮಾನ ಮತ್ತು ಹರಿವಿನ ಘನಮಾನ ನೀಡುವ ಸರಪಳಿ (ಲೂಸ್) ಯನ್ನು ಅಳೆಯಬಹುದು. ಗರಿಷ್ಠ ಹರಿವು ಮಾಪಕದಿಂದ (ಪೀಕ್ ಫೋ ಮೀಟರ್) ಗರಿಷ್ಠ ನಿಶ್ವಾಸ ಹರಿವು ದರವನ್ನು ಅಳೆಯಬಹುದು. ಪ್ಲೆಥಿಸ್ಮೋಗ್ರಾಫಿ (ತುಂಬುಚಿತ್ರಕ) ಯಿಂದ ಉಸಿರುನಾಳ ತೋರಿಸುವ ಪ್ರತಿರೋಧವನ್ನು ಲೆಕ್ಕಹಾಕಬಹುದು.
  2. ಫುಪ್ಪುಸ ಘನಮಾನ: ಉಸಿರ್ಮಾಪಕ, ಅನಿಲಸಾರ ಗುಂಬಕ (ಡೈಲೂಶನ್) ವಿಧಾನ ಮತ್ತು ತುಂಬುಚಿತ್ರಕಗಳನ್ನು ಬಳಸಿ ಅಳೆದುಬಿಡುವ (ವೈಟಲ್) ಘನಮಾನ, ಒಟ್ಟು ಫುಪ್ಪುಸ ಸಾಮರ್ಥ್ಯ, ಕಾರ್ಯಶೀಲ ಉಳಿಕೆಯ (ರೆಸಿಡ್ಯುಯಲ್) ಸಾಮರ್ಥ್ಯ ಮತ್ತು ಉಳಿಕೆಯ ಘನಮಾನವನ್ನು ತಿಳಿಯಬಹುದು.
  3. ಸೂಸಿಕೆ: ಸೂಸಿಕೆ ಸಾಮರ್ಥ್ಯವು ಕಾರ್ಬನ್ ಮೋನಾಕ್ಸೈಡ್ ಅನಿಲ ವಿನಿಮಯದ ಎಷ್ಟರಮಟ್ಟಿಗೆ ಫುಪ್ಪುಸ ಲೋಮನಾಳ ಹಾನಗೆಯ ಮೂಲ ಜರುಗುತ್ತದೆ ಎಂಬುದನ್ನು ತಿಳಿಸಬೇಕಾಗುತ್ತದೆ. ಅಲ್ಲಿ ಗಾಳಿಯಾಡಿಕೆ ಮತ್ತು ರಕ್ತಹರಿವು ಪರಸ್ಪರ ಸಮವಾಗಿದೆಯೇ ಇಲ್ಲವೋ ಎಂಬುದನ್ನು ಅದು ಆಧರಿಸಿದೆ.
  4. ಉಸಿರಾಟ ಸ್ನಾಯುಕಾರ್ಯ: ಸ್ನಾಯುಗಳ ಕಾರ್ಯದಿಂದ ಫುಪ್ಪುಸಗಳು ಹೀಚುತ್ತವೆ. ಅದರಲ್ಲಿನ ವ್ಯತ್ಯಯದಿಂದ ಉಬ್ಬಸ ತೋರಿಬರುತ್ತದೆ. ಉಚ್ಛ್ವಾಸ ಮತ್ತು ನಿಶ್ವಾಸದ ಗರಿಷ್ಠ ಬಾಯಿ ಒತ್ತಡದ ಅಳತೆಯಿಂದ ಉಸಿರಾಟ ಸ್ನಾಯುಗಳ ಸಾಮರ್ಥ್ಯವನ್ನು ತಿಳಿಸಿಕೊಡುತ್ತದೆ.

ಶ್ವಾಸಕೋಶದ ಕಾರ್ಯಸಾಮರ್ಥ್ಯವು ಶಾರೀರಿಕ ರಚನೆ ಮತ್ತು ಕ್ರಿಯೆಯ ವೈಫಲ್ಯದಿಂದ ಏರುಪೇರಾಗಬಹುದು. ಅದನ್ನು ಪಿ.ಎಫ್.ಟಿ ಯಿಂದ ಅಳೆಯಲಾಗುತ್ತದೆ. ಅಲ್ಲಿ ತೋರಿಬರುವ ವ್ಯತ್ಯಯದಿಂದ ಉಂಟಾಗಿರುವ ತೊಂದರೆಯನ್ನು ತಿಳಿಯಬಹುದು.

ಉಲ್ಲೇಖಗಳು[ಬದಲಾಯಿಸಿ]

  1. https://www.urmc.rochester.edu/encyclopedia/content.aspx?contenttypeid=92&contentid=p07759#:~:text=Pulmonary%20function%20tests%20(PFTs)%20are,treatment%20of%20certain%20lung%20disorders.
  2. Britannica, The Editors of Encyclopaedia. "pulmonary function test". Encyclopedia Britannica, 1 Jun. 2023, https://www.britannica.com/science/pulmonary-function-test. Accessed 2 March 2024.
  3. Burrows B (May 1975). "Pulmonary terms and symbols: A report of the ACCP-ATS joint committee on pulmonary nomenclature". Chest. 67 (5): 583–593. doi:10.1378/chest.67.5.583. PMID 1126197.