ವಿಷಯಕ್ಕೆ ಹೋಗು

ಶೈಲಾ ಛಬ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಲೇಖಕಿಯರಲ್ಲಿ ಸದಭಿರುಚಿಯ ಸಾಹಿತ್ಯರಚನೆಗಾಗಿ ಹೆಸರು ಮಾಡಿದವರಲ್ಲಿ ಧಾರವಾಡ ನಿವಾಸಿ ಶ್ರೀಮತಿ ಶೈಲಾ ಛಬ್ಬಿಯವರು ಪ್ರಮುಖರು. ಇವರ ತಂದೆ ರಮೇಶ ಕುಲಕರ್ಣಿ ವಿದ್ಯಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು; ತಮ್ಮ ಕರ್ತವ್ಯ ಹಾಗು ಪ್ರವಾಸಗಳಲ್ಲಿ ತಂದೆ ನಿರತರಾಗಿದ್ದರಿಂದ ತಾಯಿ ಶ್ರೀಮತಿ ವಿಜಯಲಕ್ಷ್ಮಿಯವರೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮೆಲ್ಲ ಸಮಯವನ್ನು ಧಾರೆಯೆರೆದರು.


ಬಾಲ್ಯ ಹಾಗು ಶಿಕ್ಷಣ

[ಬದಲಾಯಿಸಿ]

ಶೈಲಾರವರು ೧೯೫೦ ಮೇ ೨೦ ರಂದು ಧಾರವಾಡದಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ನಾಲ್ಕನೆಯ ತರಗತಿಯವರೆಗೆ ಪ್ರೆಜೆಂಟೇಶನ್ ಕಾನ್ವೆಂಟ್ ಸ್ಕೂಲಿನಲ್ಲಿ , ಆನಂತರ ಎಸ್.ಎಸ್.ಎಲ್.ಸಿ.ಯವರೆಗೆ ಏ.ಕೆ.ಗರ್ಲ್ಸ್ ಹಾಯ್‍ಸ್ಕೂಲಿನಲ್ಲಿ (ಈಗ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್) ಜರುಗಿತು.

ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ (ವಿಜ್ಞಾನ) ಪರೀಕ್ಷೆಯ ಬಳಿಕ, ಬಿ.ಏ.(ಮನ:ಶಾಸ್ತ್ರ)ದಲ್ಲಿ ಪದವಿ ಪಡೆದ ಶೈಲಾ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೨ರಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದರು.


ಆಸಕ್ತಿ ಹಾಗು ಚಟುವಟಿಕೆಗಳು

[ಬದಲಾಯಿಸಿ]

ಪ್ರಾಥಮಿಕ ಶಾಲೆಯಲ್ಲಿದ್ದಾಗಲೆ ಶೈಲಾರವರು ಸಹಪಾಠಿಗಳನ್ನು ಜೊತೆಗೂಡಿಸಿ ನಾಟಕಗಳನ್ನು ಮಾಡಿಸುತ್ತಿದ್ದರು. ಜೊತೆಗಾರರು ಸಿಗದಿದ್ದಾಗ ಏಕಪಾತ್ರಾಭಿನಯ! ಆಟಗಳಲ್ಲೂ ಮುಂದಿದ್ದ ಶೈಲಾ ಸಂಗೀತ ಹಾಗು ನೃತ್ಯದ ಅಭ್ಯಾಸವನ್ನೂ ಮಾಡಿದರು.

ಸಾಹಿತ್ಯರಚನೆ

[ಬದಲಾಯಿಸಿ]

ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೆ ಶೈಲಾ “ಕಲ್ಪನಾ” ಎನ್ನುವ ಹೆಸರಿನ ನಾಟಕವನ್ನು ಬರೆದರು. ಇದು (-೧೯೬೩ನೆಯ ಇಸವಿಯಲ್ಲಿಯೆ-) ಲಿಂಗತಾರತಮ್ಯದ ಬಗೆಗೆ ಅವರು ಬರೆದ ನಾಟಕ. ಇದಲ್ಲದೆ ಅನೇಕ ಹರಟೆ, ಕಥೆ ಹಾಗು ಪ್ರವಾಸಸಾಹಿತ್ಯ ಲೇಖನವನ್ನೂ ಸಹ ಇವರು ಬಾಲ್ಯದಿಂದಲೇ ಬರೆಯುತ್ತಿದ್ದು ಇವು ಕರ್ಮವೀರ, ಸುಧಾ, ಜಾಗೃತ ಕರ್ನಾಟಕ, ತರಂಗ ಹಾಗು ಸಂಯುಕ್ತ ಕರ್ನಾಟಕ ಮೊದಲಾದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಹನಿಗವನ ಹಾಗು ಮಕ್ಕಳ ಸಾಹಿತ್ಯವನ್ನೂ ಸಹ ಶೈಲಾ ರಚಿಸಿದ್ದು ಇವು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ೧೯೮೩ರಿಂದ ೨೦೦೬ರವರೆಗೆ ಇವರು ಬರೆದ ಸುಮಾರು ೭೨ ರೇಡಿಯೊ ನಾಟಕ ಹಾಗು ಪ್ರಹಸನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ವಚನಸಾಹಿತ್ಯ ಇನ್ನು ಮೇಲೆ ಪ್ರಕಟವಾಗಬೇಕಾಗಿದೆ. ಆದರೆ ಶೈಲಾ ಛಬ್ಬಿಯವರು ಹಾಸ್ಯಲೇಖಕಿ ಎಂದೇ ಪ್ರಸಿದ್ಧರು.

ಇವರ ಪ್ರಕಟಿತ ಹರಟೆಯ ಸಂಕಲನಗಳು ಇಂತಿವೆ:

  • ಬಿಳಿ ಆನೆ (೧೯೯೬)
  • ನಾಯಿ ದೇವರು (೨೦೦೨)
  • ಹಾಯ್ ಹೈ ಹೀಲ್ಸ್ (೨೦೦೬)


ಪುರಸ್ಕಾರ

[ಬದಲಾಯಿಸಿ]
  • ತರಂಗ ವಾರಪತ್ರಿಕೆ ಏರ್ಪಡಿಸಿದ ಹಾಸ್ಯಕಥಾಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಹಾಗು ಸಿ.ವೇಣುಗೋಪಾಲ ಅವರು ನಡೆಯಿಸುತ್ತಿರುವ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಇವರ ಕಥೆಗಳಿಗೆ ಲಭಿಸಿವೆ.


ಸ್ನೇಹಕುಂಜ

[ಬದಲಾಯಿಸಿ]

ಅವಿರತವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಶೈಲಾ ಛಬ್ಬಿಯವರು ಸುಮಾರು ೧೯೯೬ನೆಯ ಇಸವಿಯಿಂದ ಸ್ನೇಹಕುಂಜವೆಂಬ ಸಾಹಿತ್ಯಿಕ ಕೂಟವನ್ನು ರಚಿಸಿಕೊಂಡಿದ್ದಾರೆ. ಸಾಹಿತ್ಯದಲ್ಲಿ ಅಭಿರುಚಿಯಿರುವ ಗೆಳತಿಯರು ನಿಯಮಿತವಾಗಿ ಕೂಡಿ ಚರ್ಚಿಸುವ ವೇದಿಕೆಯಿದು. ಮಂದಾಕಿನಿ ಪುರೋಹಿತ,ಶುಭದಾ ಅಮಿನಭಾವಿ,ಮಾಲತಿ ಮುದಕವಿ ಮೊದಲಾದ ಖ್ಯಾತ ಲೇಖಕಿಯರು ಈ ಕುಂಜದ ಸದಸ್ಯರು. ಶ್ರೀ ಶ್ಯಾಮಸುಂದರ ಬಿದರಕುಂದಿ, ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಇವರು ಈ ಕುಂಜದ ಸಂದರ್ಶಕರು.

ಕೌಟಂಬಿಕ

[ಬದಲಾಯಿಸಿ]

ಶೈಲಾರವರ ಪತಿ ಮೋಹನ ಛಬ್ಬಿ ಇಂಜನಿಯರ್. ಇವರ ಇಬ್ಬರು ಮಕ್ಕಳೂ ಸಹ ಇಂಜನಿಯರರಾಗಿದ್ದಾರೆ. ಶೈಲಾ ಸಂತೃಪ್ತ ಗೃಹಿಣಿ.