ವಿಷಯಕ್ಕೆ ಹೋಗು

ಶುಭದಾ ಅಮಿನಭಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಶುಭದಾ ಅಶೋಕ ಅಮಿನಭಾವಿ ಇವರು ಸೃಜನಶೀಲ ಸಾಹಿತ್ಯ ಹಾಗು ಅನುವಾದ ಸಾಹಿತ್ಯ ಈ ಎರಡರಲ್ಲೂ ಹೆಸರು ಪಡೆದ ಲೇಖಕಿ. ಇವರು ೧೯೫೧ ಸಪ್ಟಂಬರ ೧ರಂದು ವಿಜಾಪುರ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿದರು.


ಶಿಕ್ಷಣ

[ಬದಲಾಯಿಸಿ]

ಶುಭದಾರವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ. ಪದವಿಯನ್ನು ಹಾಗು ಬಿ.ಎಡ್. ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ೧೯೯೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ Diploma in Translation (ಇಂಗ್ಲಿಷ್ ದಿಂದ ಕನ್ನಡಕ್ಕೆ) ಸಹ ಪಡೆದಿದ್ದಾರೆ.

ಸಾಹಿತ್ಯ ಕೃಷಿ

[ಬದಲಾಯಿಸಿ]

ಶುಭದಾರವರು ಧಾರವಾಡ ಆಕಾಶವಾಣಿಗಾಗಿ ಪ್ರಸಾರ ಲೇಖನಗಳನ್ನು ಬರೆದುಕೊಟ್ಟದ್ದಲ್ಲದೆ, ಕಾರ್ಯಕ್ರಮಗಳಲ್ಲಿ ಸ್ವತಃ ಭಾಗವಹಿಸಿದ್ದಾರೆ. ೨೦೦೧ನೆಯ ಇಸವಿಯಲ್ಲಿ ಇವರು ಬರೆದ “ಬಾಳು ಲೆತ್ತದಾಟ” ನಾಟಕಕ್ಕೆ ಬೆಂಗಳೂರು ಆಕಾಶವಾಣಿಯಿಂದ ತೃತೀಯ ಬಹುಮಾನ ಲಭಿಸಿದೆ.

ಶುಭದಾರವರು ಶ್ರೀ ಅರವಿಂದ ಲಿಮಯೆ, ಶ್ರೀ ಸುಬೋಧ ಜಾವಡೇಕರ ಹಾಗು ಧಾರವಾಡಮರಾಠಿ ಲೇಖಕಿ ಪ್ರೊಫೆಸರ್ ವಿದ್ಯಾ ಸಪ್ರೆ ಚೌಧರಿ ಇವರ ಮರಾಠಿ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಈ ಕತೆಗಳು ಕರ್ಮವೀರ, ತರಂಗ, ಸುಧಾ ಹಾಗು ತುಷಾರ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಪ್ರೊಫೆಸರ್ ವಿದ್ಯಾ ಸಪ್ರೆ ಚೌಧರಿ ಇವರು ಮಲ್ಲಿಕಾರ್ಜುನ ಮನಸೂರರ ಬಗೆಗೆ ಬರೆದ ಕೃತಿಯನ್ನು “ನಾದನದಿ” ಎಂದೂ ಹಾಗು ಶ್ರೀ ವಸಂತ ಪೋತದಾರ ಇವರು ಭೀಮಸೇನ ಜೋಶಿ ಬಗೆಗೆ ಬರೆದ ಕೃತಿಯನ್ನು “ಭೀಮಸೇನ” ಎಂದೂ ಅನುವಾದಿಸಿದ್ದಾರೆ. ಇದಲ್ಲದೆ ಸುಪ್ರಸಿದ್ಧ ವಿಜ್ಞಾನಿ ಜಯಂತ ನಾರ್ಲೀಕರ ಇವರು ಬರೆದ ವೈಜ್ಞಾನಿಕ ಕಾದಂಬರಿಯನ್ನು “ವಾಮನ ಹಿಂತಿರುಗಲಿಲ್ಲ” ಎಂದು ಅನುವಾದಿಸಿದ್ದು ಇದೀಗ ಪ್ರಕಟಣೆಯ ಹಂತದಲ್ಲಿದೆ.

ಸನ್ಮಾನ

[ಬದಲಾಯಿಸಿ]

೨೦೦೩ ಮೇ ತಿಂಗಳಿನಲ್ಲಿ “ನಾದನದಿ”ಗೆ ಅತ್ಯುತ್ತಮ ಅನುವಾದವೆಂದು ಬೆಂಗಳೂರಿನಲ್ಲಿಯ ಕರ್ನಾಟಕ ಲೇಖಕಿಯರ ಸಂಘದಿಂದ “ಸಾವಿತ್ರಮ್ಮ ದತ್ತಿ ನಿಧಿ” ಬಹುಮಾನ ಲಭಿಸಿದೆ.

ಕೌಟಂಬಿಕ

[ಬದಲಾಯಿಸಿ]

ಶುಭದಾರವರ ವಿವಾಹ ೧೯೭೩ರಲ್ಲಿ ಶ್ರೀ ಅಶೋಕ ಅಮಿನಭಾವಿಯವರೊಂದಿಗೆ ಜರುಗಿತು. ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜನಿಯರ್ ಆಗಿದ್ದ ಶ್ರೀ ಎಲ್.ಟಿ.ಅಮಿನಭಾವಿ ಇವರ ಮಾವ. ಮಹತ್ವದ ವಿಷಯವೆಂದರೆ ಶ್ರೀ ಎಲ್.ಟಿ.ಅಮಿನಭಾವಿಯವರು ಸಹ ಕಲಾಪ್ರೇಮಿಗಳು. ಇವರು ಅನುವಾದಿಸಿದ ಮರಾಠಿ ನಾಟಕ “ ಸಖಾರಾಮ ಬೈಂಡರಬೆಳಗಾವಿಯಲ್ಲಿ ಪ್ರದರ್ಶಿತವಾಗಿದೆ. ಅದರಂತೆ ಪತಿ ಅಶೋಕ ಅಮಿನಭಾವಿ ಸಹ ಅನುವಾದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ.

ರಂ.ಶಾ. ಲೋಕಾಪುರ ಅವರ “ಸರಕಾರ ” ಎನ್ನುವ ನಾಟಕವನ್ನು ಹಾಗು ಜಿ.ಬಿ.ಜೋಶಿ(ಜಡಭರತ)ಯವರ “ಜಡಭರತನ ಕನಸುಗಳು” ಕೃತಿಯನ್ನು ಅಶೋಕ ಅಮಿನಭಾವಿ ಮರಾಠಿಗೆ ಅನುವಾದಿಸಿದ್ದಾರೆ.

ಈ ಸಾಹಿತಿ ದಂಪತಿಗಳ ಏಕೈಕ ಪುತ್ರಿ ಎಮ್.ಎ. ಪದವಿ ಪಡೆದು, ವಿವಾಹಿತರಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.