ಶ್ಯಾಮಸುಂದರ ಬಿದರಕುಂದಿ
ಶ್ಯಾಮಸುಂದರ ಬಿದರಕುಂದಿ ಇವರು ೧೯೪೭ ಮೇ ೧೮ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಾಯಿ ತುಂಗಾಬಾಯಿ;ತಂದೆ ಗುರುರಾವ.
ಶಿಕ್ಷಣ
[ಬದಲಾಯಿಸಿ]ಶ್ಯಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು. “ನವ್ಯ ಕಾದಂಬರಿ ಮಾರ್ಗ:೧೯೬೦-೧೯೮೦” ಈ ವಿಷಯದ ಮೇಲೆ ಬರೆದ ಮಹಾಪ್ರಬಂಧಕ್ಕಾಗಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನಿಸಿತು.
ವೃತ್ತಿ
[ಬದಲಾಯಿಸಿ]ಶ್ಯಾಮಸುಂದರ ಬಿದರಕುಂದಿಯವರು ೧೯೭೦ರಿಂದ ೧೯೭೨ರವರೆಗೆ ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ೧೯೭೨ರಿಂದ ೨೦೦೫ರವರೆಗೆ ಗದಗದಲ್ಲಿರುವ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಈಗ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.ಈಗಾಗಲೇ ೫ ಜನ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಈರ್ವರು ವಿದ್ಯಾರ್ಥಿಗಳಿಗೂ ಸಹ ಇವರು ಪಿಎಚ್.ಡಿ ಮಾರ್ಗದರ್ಶಕರಾಗಿದ್ದಾರೆ.
ಶ್ಯಾಮಸುಂದರ ಬಿದರಕುಂದ್ರಿಯವರು “ಬೇಂದ್ರೆ ರಾಷ್ಟ್ರೀಯ ಟ್ರಸ್ಟ”ನ ಸಕ್ರಿಯ ಸದಸ್ಯರಾಗಿದ್ದಾರೆ.ಬೇಂದ್ರೆ ಭವನದ ಪ್ರಸರಾಂಗದ ಪ್ರಕಾಶಕರಾಗಿ ಎರಡು ಗ್ರಂಥಗಳನ್ನು ಹೊರ ತಂದಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಶ್ಯಾಮಸುಂದರ ಬಿದರಕುಂದಿಯವರು ಸರ್ಜನಶೀಲ ಸಾಹಿತಿಯಾಗಿರುವಂತೆಯೇ ವಿಚಕ್ಷಕ ವಿಮರ್ಶಕರೂ ಆಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಇಂತಿವೆ:
ಕಾವ್ಯ
[ಬದಲಾಯಿಸಿ]೧. ಅಜ್ಜಗಾವಲು
೨. ಅಲ್ಲಮ, ಪ್ರಭುವಾದ
೩. ಬರುವದೇನುಂಟೊಮ್ಮೆ
ವಿಮರ್ಶೆ
[ಬದಲಾಯಿಸಿ]೧. ಕೃತಿನೋಟ
೨. ಅಚ್ಚುಕಟ್ಟು
೩.ಪ್ರಸಂಗೋಚಿತ
ಸಂಪಾದನೆ
[ಬದಲಾಯಿಸಿ]೧. ಸ್ವಾತಂತ್ರ್ಯದ ಸವಿನೀರು (ಸಂಪಾದನೆ)
೨. ಗದುಗಿನ ಭಾರತ: ಕುಮಾರವ್ಯಾಸ (ಸಂಪಾದನೆ)
೩. ನವಲೂರಿನ ಕವಿ ಶಿವೇಶ್ವರ ದೊಡಮನಿ (ಸಂಪಾದನೆ)
೪. ಗಂಧಕೊರಡು (ಸಂಪಾದನೆ)
೫. ಪ್ರಬಂಧ ಪ್ರಪಂಚ (ಸಂಪಾದನೆ)
೬. ಜ್ವಲಂತ (ಉದಯೋನ್ಮುಖರ ಪ್ರಬಂಧ ಸಂಕಲನ)
೭. ವಿಚಾರಸಾಹಿತ್ಯ (ಕ.ಸಾ.ಅ.ಯ.ಗ್ರಂಥ)
೮. ದೀಪದಡಿಯ ಗದ್ದುಗೆ (ಉದಯೋನ್ಮುಖರ ಕಾವ್ಯ;ಕ.ಸಾ.ಅ.ಯ.ಗ್ರಂಥ)
ಇತರ
[ಬದಲಾಯಿಸಿ]೧. ಗರುಡ ಶ್ರೀಪಾದರಾವ: ಪರಿಚಯ
೨. ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡ ರಂಗಭೂಮಿ
ಪತ್ರಿಕಾ ಲೇಖನ
[ಬದಲಾಯಿಸಿ]ಸರ್ವಜಿತ ಸಂವತ್ಸರದಲ್ಲಿ ಜನಿಸಿದ ಶ್ಯಾಮಸುಂದರ ಬಿದರಕುಂದಿಯವರು "ಸರ್ವಜಿತ" ಎನ್ನುವ ಕಾವ್ಯನಾಮದಲ್ಲಿಯೇ ಅನೇಕ ಪತ್ರಿಕೆಗಳಿಗೆ ಪ್ರಾಸಂಗಿಕ ಲೇಖನಗಳನ್ನು ಬರೆದಿದ್ದಾರೆ. ಇದಲ್ಲದೆ "ಜ್ವಲಂತ" ಹಾಗು "ಪ್ರಿಯಂವದ" ಹೆಸರುಗಳಿಂದಲೂ ಸಹ ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ ನೀಡಿದ್ದಾರೆ.
ಸಾರ್ವಜನಿಕ
[ಬದಲಾಯಿಸಿ]ಶ್ಯಾಮಸುಂದರ ಬಿದರಕುಂದಿಯವರು ಸಾಹಿತ್ಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಚಟುವಟಿಕೆಗಳಲ್ಲೂ ಸಹ ತುಂಬಾ ಆಸಕ್ತಿಯಿಂದ ಭಾಗವಹಿಸುವವರು. ೧೯೭೫ರಿಂದ ೧೯೮೫ರವರೆಗೆ ಹತ್ತು ವರ್ಷಗಳ ಕಾಲ ಇವರು ನ್ಯಾಶನಲ್ ಸರ್ವೀಸ್ ಸ್ಕೀಮಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ೧೯೭೭ರಿಂದ ೧೯೮೩ರ ವರೆಗೆ ಗ್ರಾಮೀಣ ಪರಿಸರದಲ್ಲಿ ಸೇವಾ ಶಿಬಿರಗಳ ನಿರ್ವಹಣೆಯನ್ನು ಮಾಡಿದ್ದಾರೆ. ೧೯೭೬ರಿಂದ ೨೦೦೧ರವರೆಗೆ ಗದಗ ಪಟ್ಟಣದಲ್ಲಿಯ ಚಿಂತನವೇದಿಕೆ ಹಾಗು ಸಾಹಿತ್ಯ ಕಲಾವೇದಿಕೆಗಳ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೌಟುಂಬಿಕ
[ಬದಲಾಯಿಸಿ]ಶ್ರೀಮತಿ ಶೋಭಾ ಇವರು ಶ್ಯಾಮಸುಂದರ ಬಿದರಕುಂದಿಯವರ ಅರ್ಧಾಂಗಿ. ಇವರಿಗೆ ಮೂರು ಜನ ಮಕ್ಕಳು: ವಿನ್ಯಾಸ, ಮಯೂರ ಹಾಗು ಚಂದ್ರಿಕಾ.
ಗೌರವ
[ಬದಲಾಯಿಸಿ]ಶ್ಯಾಮಸುಂದರ ಬಿದರಕುಂದಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ.(೨೦೦೫-೨೦೦೮).ಅಲ್ಲದೆ ಇವರು ಅಖಿಲ ಭಾರತೀಯ ಕನ್ನಡ ಸಾಹಿತ್ಯಪರಿಷತ್ತಿನಆಜೀವ ಸದಸ್ಯರೂ ಅಹುದು.೧೯೮೨ರಲ್ಲಿ ನವದೆಹಲಿಯಲ್ಲಿ[೧] ನಡೆದ ಬಹುಭಾಷಾ ಗಣರಾಜ್ಯ ಕವಿಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿ ಕಾವ್ಯವಾಚನ ಮಾಡಿದ್ದಾರೆ.
ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯು "ಆದರ್ಶ ಶಿಕ್ಷಕ ಪ್ರಶಸ್ತಿ"ಯನ್ನು ೨೦೦೩ರಲ್ಲಿ ಇವರಿಗೆ ಪ್ರದಾನಿಸಿದೆ.