ಶೆಣೈ ಗೊಯೆಂಬಾಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಾಮನ್ ವರ್ದೆ ವಾಲಾವ್ಲೀಕಾರ್
ಶೆಣೈ ಗೊಯೆಂಬಾಬ್
ಜನನವಾಮನ್ ರಘುನಾಥ್ ಶೆಣೈ ವರ್ದೆ ವಾಲಾವ್ಲೀಕಾರ್
(೧೮೭೭-೦೬-೨೩)೨೩ ಜೂನ್ ೧೮೭೭
ಬಿಚೋಲಿಂ, ಪೋರ್ಚುಗೀಸ್ ಗೋವಾ
ಮರಣApril 9, 1946(1946-04-09) (aged 68)
ಮುಂಬೈ
ಕಾವ್ಯನಾಮಶೆಣೈ ಗೊಯೆಂಬಾಬ್
ವೃತ್ತಿಬರಹಗಾರ ಮತ್ತು ಕಾರ್ಯಕರ್ತ
ಭಾಷೆಕೊಂಕಣಿ
ಪ್ರಮುಖ ಕೆಲಸ(ಗಳು)ಭಗವಂತಾಲೇಂ ಗೀತ್
ಭುರ್ಗಿಯಾಂಚೇಂ ವ್ಯಾಕರಣ್
ಪ್ರಮುಖ ಪ್ರಶಸ್ತಿ(ಗಳು)ಸಹಸ್ರಮಾನದ ಕೊಂಕಣಿ ವ್ಯಕ್ತಿ ಪ್ರಶಸ್ತಿ
ಬಾಳ ಸಂಗಾತಿಶಾಂತಾಬಾಯಿ
ಮಕ್ಕಳು

ವಾಮನ್ ರಘುನಾಥ್ ಶೆಣೈ ವರ್ದೆ ವಾಲಾವ್ಲೀಕಾರ್ (೨೩ ಜೂನ್ ೧೮೭೭ - ೯ ಏಪ್ರಿಲ್ ೧೯೪೬), ಜನಪ್ರಿಯವಾಗಿ ಶೆಣೈ ಗೊಯೆಂಬಾಬ್ ಎಂದು ಕರೆಯಲ್ಪಡುವ ಇವರು ಹೆಸರಾಂತ ಕೊಂಕಣಿ ಬರಹಗಾರ ಮತ್ತು ಕೊಂಕಣಿ ಭಾಷೆಯ ಪರ ಹೋರಾಟಗಾರ.[೧]

ಶಿಕ್ಷಣ[ಬದಲಾಯಿಸಿ]

ಇವರು ೨೩ ಜೂನ್ ೧೮೭೭ರಂದು ಗೋವಾದ ಬಿಚೋಲಿಂನಲ್ಲಿ ಹುಟ್ಟಿದರು. ೬ ನೇ ತರಗತಿಯವರೆಗೆ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಓದಿ, ನಂತರ ಪೋರ್ಚುಗೀಸ್ ಪ್ರಾಥಮಿಕ ಶಾಲೆಯಲ್ಲಿ ಓದಿದರು. ಅಲ್ಲಿ ಅವರು "ಸೆಗುಂಡೋ ಗ್ರೌ" (ಸರಿಸುಮಾರು ೪ ನೇ ತರಗತಿ) ಮುಗಿಸಿದರು. ಹಣಕಾಸಿನ ತೊಂದರೆಯಿಂದಾಗಿ ಓದನ್ನು ನಿಲ್ಲಿಸಿ, ಮನೆಯಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಅನ್ನು ಕಲಿತರು. ೧೮೯೩ರಲ್ಲಿ ಮುಂಬೈಗೆ ಹೋಗಿ ತಮ್ಮ ಓದನ್ನು ಮುಂದುವರೆಸಿದರು. ೧೮೯೮ರಲ್ಲಿ ಪ್ರೌಢ ಶಾಲೆಯಲ್ಲಿ ಓದಿ ಮುಗಿಸಿದರು.[೧]

ಕುಟುಂಬ[ಬದಲಾಯಿಸಿ]

ವಾಮನ್ ಶೆಣೈ ಅವರು ಮುಂಬೈನ ಶಾಂತಾಬಾಯಿಯನ್ನು ಮದುವೆಯಾಗಿ, ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ವೃತ್ತಿ[ಬದಲಾಯಿಸಿ]

ಗೊಯೆಂಬಾಬ್ ಅವರು ೧೮೯೯ರಲ್ಲಿ ಗೋವಾಕ್ಕೆ ಮರಳಿ, ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ತೆಗೆದುಕೊಂಡರು. ಆದರೆ ಅವರು ತೃಪ್ತರಾಗದ ಕಾರಣ ಅದನ್ನು ತೊರೆದರು. ಅವರು ಕರಾಚಿಗೆ ಹೋಗಿ ಲಾಹೋರ್ ಪುರಸಭೆಯಲ್ಲಿ ಗುಮಾಸ್ತರಾಗಿ ಸ್ವಲ್ಪ ಕಾಲ ಕೆಲಸ ಮಾಡಿದರು. ನಂತರ ಮುಂಬೈಗೆ ಬಂದು ಮದುವೆಯಾಗಿ, ಇಟಾಲಿಯನ್ ಕಾನ್ಸುಲೇಟಿನಲ್ಲಿ ಕೆಲಸ ಪಡೆದರು. ನಂತರ ಅವರು ಸ್ಟೆನೊಗ್ರಾಫರ್ ಆಗಿ ಜರ್ಮನ್ ಕಂಪನಿಯಾದ ಮೈಸ್ಟರ್ ಲೂಸಿಯಸ್ & ಬ್ರೂನಿಂಗ್ಗೆ ಸೇರಿದರು.[೨]

ಮೊದಲನೆಯ ಮಹಾಯುದ್ಧದಿಂದಾಗಿ ಜರ್ಮನ್ನರು ಹೊರಹೋಗಬೇಕಾಯಿತು, ಮತ್ತು ವಾಮನ್ ಅವರನ್ನು ಕಂಪನಿಯ ಉಸ್ತುವಾರಿ ವಹಿಸಲಾಯಿತು. ಅವರು ಕಂಪನಿಯ ನಿರ್ವಾಹಕರ ಅನುಪಸ್ಥಿತಿಯಲ್ಲಿ ಉತ್ತಮವಾಗಿ ನಿರ್ವಹಿಸಿ, ನಿರ್ವಾಹಕರು ವಾಪಸ್ ಬಂದಾಗ ಅವರ ಪ್ರಶಂಸೆಯನ್ನು ಗಳಿಸಿದರು. ನಂತರ ಅವರು ಕಂಪನಿಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದರು. ಆದಾಗ್ಯೂ ಕೆಲ ಅತೃಪ್ತ ಉದ್ಯೋಗಿಗಳು ಕೆಟ್ಟ ನಿರ್ವಹಣೆಯ ಆರೋಪ ಹೊರಿಸಿದ ಕಾರಣ ಕಂಪನಿಯನ್ನು ತೊರೆದರು.[೧] ಇದರ ನಂತರ ಅವರು ಕೊಂಕಣಿ ಭಾಷೆಯ ಪುನರುಜ್ಜೀವನಗೊಳಿಸಲು ತಮ್ಮ ಜೀವನವನ್ನು ಅರ್ಪಿಸಿದರು.

ಅಡ್ಡಹೆಸರು[ಬದಲಾಯಿಸಿ]

ತಮ್ಮ ಚಿಕ್ಕಪ್ಪ ಚಿಂತಾಮನ್‌ರಾವ್ ಅವರೊಂದಿಗೆ ಮುಂಬೈಗೆ ಉಗಿಹಡಗಿನಲ್ಲಿ ಹೋಗುವಾಗ "ಗೊಯೆಂಬಾಬ್" ಎಂಬ ಅಡ್ಡಹೆಸರನ್ನು ಪಡೆದರು ಎಂದು ನಂಬಲಾಗಿದೆ. ಹಡಗಿನಲ್ಲಿದ್ದ ಸ್ನೇಹಿತನೊಬ್ಬ ಚಿಕ್ಕಪ್ಪನಿಗೆ "ನೀವು ಈ ಗೊಯೆಂಬಾಬ್ (ಗೋವಾದ ಸುಸಂಸ್ಕೃತವಂತ) ಅನ್ನು ನಿಮ್ಮೊಂದಿಗೆ ಮುಂಬೈಗೆ ಕರೆದೊಯ್ಯುತ್ತಿದ್ದೀರಿ ಎಂದು ನಾನು ಕೇಳಿದೆ" ಎಂದು ಹೇಳಿದರು. ನಂತರ ಆದರ್ಶವಾದಿ ಮತ್ತು ತರುಣನಾದ ವಾಮನ್ ಅವರು "ಶೆಣೈ ಗೊಯೆಂಬಾಬ್" ಅನ್ನು ತಮ್ಮ ಕಾವ್ಯನಾಮವಾಗಿ ಇಟ್ಟುಕೊಂಡರು.[೩]

ಬರಹಗಾರ[ಬದಲಾಯಿಸಿ]

ವಾಮನ್ ಅವರು ಮುಂಬೈನಲ್ಲಿ ಕೆಲಸ ಮಾಡುತ್ತಿರುವಾಗ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದ್ದರು. ಅವರ ಹೆಂಡತಿಯು ಅನಕ್ಷರಸ್ಥರಾಗಿದ್ದರೂ ಕೊಂಕಣಿ ಭಾಷೆ ಮತ್ತು ಜಾನಪದದ ಬಗ್ಗೆ ಬಹಳ ತಿಳುವಳಿಕೆ ಹೊಂದಿದ್ದರು. ಹೆಂಡತಿ ಹೇಳುತ್ತಿದ್ದ ಕಥೆ ಮತ್ತು ಗಾದೆಗಳನ್ನು ಗೊಯೆಂಬಾಬ್ ಅವರು ಪ್ರಕಟಿಸಿದರು.

"ಗೋಂಯಕರಾಂಚಿ ಗೋಂಯಭೈಲಿ ವೋಸ್ನೂಕ್" (ಗೋವಾದ ವಲಸಿಗರು ಗೋವಾದ ಹೊರಗೆ) ಹೆಸರಿನ ಇತಿಹಾಸ ಉಪನ್ಯಾಸಗಳ ಸರಣಿಯನ್ನು ೧೯೨೭ರಲ್ಲಿ ಮುಂಬೈನ ಸಾರಸ್ವತ್ ಬ್ರಾಹ್ಮಣ ಸಮಾಜದಲ್ಲಿ ಶೆಣೈ ಗೊಯೆಂಬಾಬ್ ಅವರು ನೀಡಿದರು.[೪]

ಗೊಯೆಂಬಾಬ್ ಅವರು ಬರೆದ ಮತ್ತೊಂದು ಐತಿಹಾಸಿಕ ಪುಸ್ತಕವೆಂದರೆ "ಅಲ್ಬುಕರ್ಕಾನ್ ಗೋಂಯ್ ಕೊಶೇಂ ಜಿಕ್ಲೇಂ" (ಅಲ್ಬುಕರ್ಕಿಯು ಗೋವೆಯನ್ನು ಹೇಗೆ ಗೆದ್ದನು).

ಗೊಯೆಂಬಾಬ್ ಬರೆದ "ಮ್ಹೋಜಿ ಬಾ ಖುಂಯ್ ಗೆಲ್ಲಿ?" ಅನ್ನು ಆಧುನಿಕ ಕೊಂಕಣಿಯ ಮೊದಲ ಸಣ್ಣಕಥೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಎರಡು ಸಂಪುಟಗಳ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಕಥೆಗಳ ಸಂಗ್ರಹವಾದ "ಗೋಮಾಂತೋಪನಿಶತ್ " ನಲ್ಲಿ ಪ್ರಕಟಿಸಲಾಯಿತು.[೫] ಎರಡನೇ ಸಂಪುಟದಲ್ಲಿ "ಸೋಂವ್ಸಾರ್ ಬುಡ್ತಿ" (ಪ್ರಪಂಚದ ಮುಳುಗುವಿಕೆ) ಕಥೆಯಿತ್ತು. ಇದರಲ್ಲಿ ಬೇರೆಬೇರೆ ತತ್ವಚಿಂತನೆಗಳನ್ನು ಚರ್ಚಿಸಲು ಮಹಾ ಪ್ರವಾಹದ ಕಥೆಯನ್ನು ಬಳಸಲಾಗಿದೆ. ಇದರಲ್ಲಿ ಉಪನಿಷತ್ತುಗಳು, ಬೈಬಲ್, ಕುರಾನ್ ಮತ್ತು ತಾಲ್ಮುದ್‌ನಂತಹ ವಿವಿಧ ಧಾರ್ಮಿಕ ಕೃತಿಗಳ ಭಾಗಗಳನ್ನು ಒಳಗೊಂಡಿದೆ. [೬]

ಕೊಂಕಣಿ ಭಾಷೆಯು ಒಂದು ಕ್ರಾಂತಿಗಾಗಿ ಕಾಯುತ್ತಿದೆ, ಮತ್ತು ಅದನ್ನು ಯುವಕರು ಮಾತ್ರ ತರಬಹುದು ಎಂದು ಗೊಯೆಂಬಾಬ್ ಅವರು ನಂಬಿದ್ದರು. ಇದು ಅವರ "ಅಮೃತಾಚೋ ಪಾವ್ಸ್" (ಮಕರಂದದ ಮಳೆ) ಮತ್ತು "ಕೊಂಕಣಿ ವಿಧ್ಯಾರ್ಥಿಯಾಂಕ್" (ಕೊಂಕಣಿ ವಿದ್ಯಾರ್ಥಿಗಳಿಗೆ) ಪ್ರಬಂಧಗಳಲ್ಲಿ ತಿಳಿಯಪಡಿಸಿದ್ದಾರೆ.

ಗೊಯೆಂಬಾಬ್ ಅವರ ಒಂದು ಮಹತ್ವದ ಕೊಡುಗೆಯೆಂದರೆ ಮಕ್ಕಳ ಸಾಹಿತ್ಯಕ್ಕೆ. ಅವರು ತಮ್ಮ ಮಗನಿಗೆ ಕಲಿಸಲು ಬಳಸುತ್ತಿದ್ದ ಪ್ರಶ್ನೆ-ಉತ್ತರಗಳ ಸರಣಿಯನ್ನು "ಭುರ್ಗಿಯಾಂಚೇಂ ವ್ಯಾಕರಣ್" (ಮಕ್ಕಳ ವ್ಯಾಕರಣ) ಹೆಸರಿನಲ್ಲಿ ಬರೆದರು. "ಭುರ್ಗಿಯಾಂಲೋ ಇಶ್ಟ್" ಸಣ್ಣ ಕಥೆಗಳ ಸಂಗ್ರಹವಾಗಿದೆ.

ಗೊಯೆಂಬಾಬ್ ಅವರು ಹಲವು ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸಿದರು. ಅದರಲ್ಲಿ ಮೋಲಿಯೆರ್ ಅವರ ಲಿ ಮೆಡಿಸಿನ್ ಮಾಲ್ ರೆ ಲ್ಯೂಯಿ ನಾಟಕವನ್ನು "ಮೊಗಾಚೇಂ ಲೊಗ್ನ್" (ಪ್ರೇಮ ವಿವಾಹ) ಮತ್ತು ಷೇಕ್ಸ್‌ಪಿಯರ್‌ನ ಒಥೆಲೋ, ಹ್ಯಾಮ್ಲೆಟ್ ಮತ್ತು ಕಿಂಗ್ ಲೀರ್ ಸೇರಿದೆ.[೭]

"ಭಗವಂತಾಲೇಂ ಗೀತ್" ಹೆಸರಿನಲ್ಲಿ ಭಗವದ್ಗೀತೆಯನ್ನು ಕೊಂಕಣಿಗೆ ಅನುವಾದಿಸಿದ್ದಕ್ಕಾಗಿ ಅವರನ್ನು ಹೆಚ್ಚು ಸ್ಮರಿಸಲಾಗುತ್ತದೆ.

ಕೊಂಕಣಿ ಕಾರ್ಯಕರ್ತ[ಬದಲಾಯಿಸಿ]

ಗೋವಾದಲ್ಲಿ ವಿದ್ಯಾವಂತ, ಮೇಲ್ವರ್ಗದ ಹಿಂದೂ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ಕೊಂಕಣಿ ಭಾಷೆಯ ಪ್ರತಿಷ್ಠೆ ಕುಗ್ಗಿ, ಕ್ರಮವಾಗಿ ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರತಿಷ್ಠೆಯ ಸ್ಥಾನವನ್ನು ಪಡೆದಿರುವುದನ್ನು ಗೊಯೆಂಬಾಬ್ ಅವರು ಗಮನಿಸಿದ್ದರು. ಕೊಂಕಣಿಯನ್ನು ತಮ್ಮ ಉದ್ಯೋಗಿಗಳು, ಬಡ ಮತ್ತು ದೀನ ಜಾತಿಗಳೊಂದಿಗೆ ಮಾತನಾಡಲು ಮಾತ್ರ ಬಳಸಲಾಗುತ್ತಿತ್ತು. ಗೋವಾದಲ್ಲಿ ಪೋರ್ಚುಗೀಸ್ ಆಡಳಿತಗಾರರು ಬೇರೆಲ್ಲರಿಗಿಂತ ಕ್ರೈಸ್ತರಿಗೆ ಅನುಕೂಲಕರ ಸ್ಥಾನಮಾನ ನೀಡುತ್ತಿದ್ದರಿಂದ ಕೋಮು ವಿಭಜನೆಗೂ ಕಾರಣವಾಯಿತು.

ಜೀವನ ನಡೆಸಲು ಒಬ್ಬ ವ್ಯಕ್ತಿಯು ಎಷ್ಟೇ ಭಾಷೆಗಳಲ್ಲಿ ಸಂವಹನ ನಡೆಸಬಹುದಾದರೂ, ಅವನು ತನ್ನ ತಾಯಿನುಡಿಯಲ್ಲಿ ("ನಿಮ್ಮ ಆತ್ಮದ ಭಾಷೆ" ಎಂದು ಹೇಳುತ್ತಿದ್ದರು) ಸಂವಹನ ನಡೆಸಲು ಆಗದಿದ್ದರೆ, ಅವನು ಕಳೆದುಹೋದಂತೆ ಎಂದು ಗೊಯೆಂಬಾಬ್ ನಂಬಿದ್ದರು.[೧] "ನಾವು ಬೇರೆಯವರ ದೀಪಗಳ ಕೆಳಗೆ ಹೊಳೆಯುತ್ತಿದ್ದೇವೆ" ಎಂಬುದನ್ನು ಗೊಯೆಂಬಾಬ್ ಗಮನಿಸಿದರು.[೧]

ಕೊಂಕಣಿಯರಿಗೆ ಅವರ ತಾಯಿನುಡಿಯ ಮಾಧುರ್ಯ ಮತ್ತು ಅದರ ಗತಕಾಲದ ಶ್ರೀಮಂತಿಕೆಯ ಬಗ್ಗೆ ಹೇಳಲು ಪ್ರಾರಂಭಿಸಿದರು. ಅವರು ತಮ್ಮ ಅನಿಸಿಕೆಗಳನ್ನು ಪ್ರಚಾರ ಮಾಡಲು ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದರು.[೧] ಗೊಯೆಂಬಾಬ್ ಅವರು ಕೊಂಕಣಿ ಭಾಷೆಯನ್ನು ಕೇವಲ ಪ್ರತಿ ಗೋವಾದವರ, ಹಾಗೂ ಕೊಂಕಣಿಯರ ಅವಿಭಜ್ಯ ಅಂಗವೆಂಬುದಾಗಿ ಮಾತ್ರ ನೋಡಲಿಲ್ಲ, ಗೋವಾದಲ್ಲಿ ಪೋರ್ಚುಗೀಸರ ಆಡಳಿತ ವಿರೋಧಿ ಚಳುವಳಿಯ ಭಾಗವಾಗಿಯೂ ನೋಡಿದರು.

ಶೆಣೈ ಗೊಯೆಂಬಾಬ್ ಅವರು ರೋಮನ್ ಲಿಪಿಯಲ್ಲಿ ೭ ಮತ್ತು ದೇವನಾಗರಿಯಲ್ಲಿ ೨೨ ಪುಸ್ತಕಗಳನ್ನು ಬರೆದಿದ್ದಾರೆ. ಇದರಲ್ಲಿ ಸಣ್ಣ ಕಥೆಗಳು, ನಾಟಕಗಳ ಕಾದಂಬರಿಗಳು, ಕವನ, ಪ್ರಬಂಧಗಳು, ಭಾಷಾಶಾಸ್ತ್ರ, ತತ್ವಶಾಸ್ತ್ರದ ಇತಿಹಾಸ ಸೇರಿವೆ. [೧]

ಬಹುಶಃ ತಮ್ಮ ಕಾಲಕ್ಕಿಂತ ಮುಂಚಿತವಾಗಿ, ಶೆಣೈ ಗೊಯೆಂಬಾಬ್ ಅವರು ಜಾತಿ ಅಡೆತಡೆಗಳನ್ನು ತೊಡೆದುಹಾಕುವ ಮತ್ತು ಕೆಳಜಾತಿಯವರು ಶಿಕ್ಷಣ ಪಡೆಯುವ ಅಗತ್ಯವನ್ನು ಒತ್ತಿಹೇಳಿದರು. "ಗೌಡೆಯರನ್ನು (ರೈತರನ್ನು) ಪಂಡಿತರನ್ನಾಗಿ ಮಾಡೋಣ" ಎಂದು ಅವರು ಹೇಳಿದರು.

ಕೋಮುಗಳ ನಡುವೆ ವಿಭಜಿತವಾದ ಭಾಷಾ ಸಮುದಾಯದಲ್ಲಿ ವಾಮನ್ ಶೆಣೈ ಧರ್ಮವನ್ನು ತಿರಸ್ಕರಿಸದೆ ಶಾಂತಿ ಮತ್ತು ಏಕತೆಯ ಸಂದೇಶವನ್ನು ಹರಡಿದರು. ಗೋವಾದ ಎರಡು ಪ್ರಮುಖ ಸಮುದಾಯಗಳಾದ ಗೋವಾ ಕ್ಯಾಥೊಲಿಕರು ಮತ್ತು ಹಿಂದೂಗಳು ಕೊಂಕಣಿಗಾಗಿ ಕೈಜೋಡಿಸಲು, ಅವರು ಶಾಂತೇರಿ (ಗೋವಾದ ಜನಪ್ರಿಯ ದೇವತೆ) ಯನ್ನು ವರ್ಜಿನ್ ಮೇರಿಯೊಂದಿಗೆ ಹೋಲಿಸಿದರು. ಅವರು "ಓಂ ಸಾಂತೇರಿ ನಮ್ಮ ಮೇಲೆ ಕರುಣಿಸು! ಪವಿತ್ರ ಕನ್ಯೆಯ ತಾಯಿ ನಮ್ಮ ಮಾರ್ಗವನ್ನು ಆಶೀರ್ವದಿಸು!" ಎಂದು ಜಪಿಸುತ್ತಿದ್ದರು.

ಸಾವು ಮತ್ತು ಗುರುತಿಸುವಿಕೆ[ಬದಲಾಯಿಸಿ]

ಗೊಯೆಂಬಾರ್ ಅವರು ೯ ಏಪ್ರಿಲ್ ೧೯೪೬ರಂದು ಮುಂಬೈಯಲ್ಲಿ ಸಾವಿಗೀಡಾದರು. ಅವರ ಸಾವಿನ ವಾರ್ಷಿಕೋತ್ಸವ, ಏಪ್ರಿಲ್ ೯ರಂದ ಪ್ರತಿ ವರ್ಷ ವಿಶ್ವ ಕೊಂಕಣಿ ದೀಸ್ (ವಿಶ್ವ ಕೊಂಕಣಿ ದಿನ) ಆಚರಿಸಲಾಗುತ್ತದೆ.[೮]

ಶೆಣೈ ಗೊಯೆಂಬಾಬ್ ಅವರ ೫೪ನೇ ಸಾವಿನ ವಾರ್ಷಿಕೋತ್ಸವದಂದು, (೯ ಏಪ್ರಿಲ್ ೨೦೦೦) ಮಾಂಡ್ ಸೋಭನ್ (ಮಂಗಳೂರು ಮೂಲದ ಕೊಂಕಣಿ ಸಂಸ್ಥೆ) ವತಿಯಿಂದ ಮರಣೋತ್ತರವಾಗಿ ಕೊಂಕಣಿ ಪರ್ಸನ್ ಆಫ್ ದಿ ಮಿಲೇನಿಯಮ್ ಪ್ರಶಸ್ತಿಯನ್ನು ನೀಡಲಾಯಿತು.[೮]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "GOANEWS - BY SANDESH PRABHUDESAI". 28 August 2008.
  2. Goa Konkani Akademi – promoting the development of Konkani language, literature and culture Archived 24 August 2007 at the Wayback Machine.
  3. 1988-, Iliadis, Dennis. Gullo, Bill. Wakefield, Rhys, 1988- Miller, Logan, 1992- Hinshaw, Ashley, 1988- Hall, Natalie, +1, ISBN 978-0788617539, OCLC 867735697CS1 maint: numeric names: authors list (link)
  4. Couto, Maria Aurora (2005-04-05). Goa: A Daughter'S Story (in ಇಂಗ್ಲಿಷ್). Penguin Books Limited. ISBN 9789351180951.
  5. Goembab, Shenoi (1989). Gomantopanishat. Shenoi Goembabali Barpaval : Dusre Pustak. Goa: Konkani Bhasha Mandal.
  6. "Remembering Shenoi Goembab on Vishwa Konkani Dis (World Konkani Day)". Archived from the original on 17 November 2018.
  7. Shenoi, Goembab (1989). Moganche Lagna. Margao: Konkani Bhasha Mandal.
  8. ೮.೦ ೮.೧ "Goanews – By Sandesh Prabhudesai". Archived from the original on 17 May 2008. Retrieved 12 April 2007.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]