ಮೋಲಿಯೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಲಿಯೆರ್ ( 1622 - 73). 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ. ನಟ ಹಾಗೂ ನಿರ್ದೇಶಕ. ಇವನ ನಿಜವಾದ ಹೆಸರು ಜಾನ್ ಬ್ಯಾಸ್ಟಿಸ್ಟ್ ಪೋಕ್ಲಾನ್. ಮೋಲಿಯೆರ್ ಇವನ ಕಾವ್ಯನಾಮ.

ಬದುಕು[ಬದಲಾಯಿಸಿ]

15 ಜನವರಿ 1622 ರಲ್ಲಿ ಪ್ಯಾರಿಸ್‍ನಲ್ಲಿ ಹುಟ್ಟಿದ. ಇವನ ತಂದೆ ಜಾನ್ ಪೋಕ್ಲಾನ್, ತಾಯಿ ಮಾರಿ ಕ್ರೆಸೆ. ಅರಮನೆಯಲ್ಲಿ ರಾಜನ ಶಯ್ಯಾಗಾರವನ್ನು ಸಜ್ಜುಗೊಳಿಸುವುದು ವಂಶ ಪಾರಂಪರ್ಯವಾಗಿ ಬಂದ ಇವನ ತಂದೆಯ ವೃತ್ತಿಯಾಗಿತ್ತು. ಹಾಗಾಗಿ ದೊರೆ ಮತ್ತು ಪ್ರತಿಷ್ಠಿತರ ಸಂಪರ್ಕವನ್ನು ಇವನ ತಂದೆ ಜಾನ್ ಪೋಕ್ಲಾನ್ ಹೊಂದಿದ್ದ. ಮೋಲಿಯೆರ್ ತನ್ನ ಬಾಲ್ಯವನ್ನು ಸುಖವಾಗಿ ಕಳೆದ. ಇವನ ತಾತನೂ ಸೋದರ ಮಾವನೂ ಆಗಿದ್ದ ಲೂಯಿ ಕ್ರೆಸೆಗೆ ನಾಟಕದ ಖಯಾಲಿ. ಅವನೊಂದಿಗೆ ಪದೆ ಪದೇ ನೋಡುತ್ತಿದ್ದ ಸಂಚಾರಿ ನಾಟಕ ಕಂಪನಿಯ ನಾಟಕಗಳು. ಮೂಕಾಭಿನಯ ಪ್ರದರ್ಶನಗಳು ಮೋಲಿಯೆರ್‍ನ ಮೇಲೆ ಗಾಢವಾದ ಪ್ರಭಾವ ಬೀರಿದವು; ನಾಟಕದ ಕಡೆ ಒಲವು ಬೆಳೆಯಿತು. ಇವನಿಗೆ ಹತ್ತು ವರ್ಷವಾಗಿದ್ದಾಗ ತಾಯಿ ತೀರಿಹೋದಳು. ಶಾಲಾ ಶಿಕ್ಷಣದ ಬಳಿಕ ಪ್ರತಿಷ್ಠಿತ ಕ್ಲೇರ್‍ಮೋನ್ ಚೆಸುಯಿಟ್ ಕಾಲೇಜಿನಲ್ಲಿ ಐದು ವರ್ಷ ಓದಿ ಮಾನವಿಕ ವಿಷಯಗಳಲ್ಲಿ ಪದವಿ ಪಡೆದ. ಪ್ರಖ್ಯಾತ ಪ್ರಾಧ್ಯಾಪಕ ಗ್ಯಾಸೆಮಡಿ ಬಳಿ ತತ್ತ್ವಶಾಸ್ತ್ರಧ್ಯಯನ, ಎಪಿಕ್ಯೂರಸ್‍ನ ತತ್ತ್ವಗಳು, ಟೆರೆನ್ಸ್, ಪ್ಲಾಟಿಸ್, ಸೆನಕ - ಇವರ ನಾಟಕಗಳು. ಕಾಲೇಜು ನಾಟಕಗಳಲ್ಲಿ ಅಭಿನಯಿಸುವ ಅವಕಾಶಗಳು, ಕೆಪ್ಲರ್, ಗೆಲಿಲಿಯೊ ಇವರ ವೈಜ್ಞಾನಿಕ ಸಿದ್ಧಾಂತಗಳು ಈತನ ಮನೋಧರ್ಮವನ್ನು ಖಚಿತವಾಗಿ ರೂಪಿಸಿದವು. ಒಳ್ಳೆಯ ಕಲಾಭಿರುಚಿ, ವಿಚಾರವಂತಿಕೆ, ಅಂಧಸಂಪ್ರದಾಯ ಶರಣತೆಯನ್ನು ಪರಿಹಾಸಮಾಡುವ ಧೈರ್ಯ, ಪೊಳ್ಳು ಶಿಷ್ಟಾಚಾರದ ಬಗ್ಗೆ ಅಸಹನೆ ಇವನ ಮನೋಧರ್ಮದಲ್ಲಿ ಸೇರಿಕೊಂಡವು. 1641ರಲ್ಲಿ ಕಾನೂನು ಪದವಿಯನ್ನೂ ಪಡೆದ. ಆದರೆ ತಂದೆ ಆಶಿಸಿದಂತೆ ವಕೀಲನಾಗಲಿಲ್ಲ. ಕುಲಕಸುಬಿಗೂ ಬರಲಿಲ್ಲ. 1643ರಲ್ಲಿ ಭೆಟ್ಟಿಯಾದ ಮಾದಲೆನ ಬೆಜಾರ್ ಎಂಬ ತನಗಿಂತ ನಾಲ್ಕು ವರ್ಷಕ್ಕೆ ದೊಡ್ಡವಳಾದ ನಡಿಯ ಆಕರ್ಷಣೆಗೂ ಪ್ರಭಾವಕ್ಕೂ ಸಿಕ್ಕು ಬಣ್ಣದ ಬದುಕನ್ನು ಆರಿಸಿಕೊಂಡ. ಆಕೆ ನಡೆಸುತ್ತಿದ್ದ ಇಲ್ಲುಸ್ತ್ರೆತಿಯೇತರ್ ಎಂಬ ನಾಟಕ ಕಂಪನಿಗೆ ಪಾಲುದಾರನಾಗಿ ಸೇರಿಕೊಂಡು ಮುಖ್ಯ ನಟನಾದ. ಹಣಕಾಸಿನ ನವ್ಯವಹಾರ, ಆಡಳಿತಗಳ ಹೊಣೆಯನ್ನೂ ಹೊತ್ತು ಕಂಪನಿಯ ಸಾಲದ ದೆಸೆಯಿಂದ ಎರಡು ಬಾರಿ ಸೆರೆಮನೆಗೂ ಹೋಗಿ ಬಂದ. ಆ ಕಾಲದಲ್ಲಿ ನಾಟಕದವರು ನೀತಿಗೆಟ್ಟವರೆಂಬ ತುಚ್ಛ ಭಾವನೆಯಿದ್ದದರಿಂದ ತನ್ನಿಂದ ತನ್ನ ಮನೆತನದವರಿಗೆ ಕೆಟ್ಟ ಹೆಸರು ಬರದಿರಲೆಂದು ಮೋಲಿಯೆರ್ ಎಂಬ ಗುಪ್ತ ನಾಮವಿರಿಸಿಕೊಂಡ. ಅನಂತರ ಇದೇ ಹೆಸರಿನಲ್ಲಿ ನಟನಾಗಿ, ನಾಟಕ ಕಾರನಾಗಿ ಪ್ರಸಿದ್ಧನಾದ.

ಮೋಲಿಯೆರ್‍ನ ಪ್ರತಿಭೆಯನ್ನು ಮೊದಲು ಗುರುತಿಸಿದ ದ್ಯೂಕ್‍ಡಿ ಇ ಪೆರ್‍ನಾ ಮತ್ತು ಹಳೆಯ ಕಾಲೇಜು ಸಹಪಾಠಿ ಪ್ರಿನ್ಸ್‍ಡಿ ಕೋಂಟಿ ಇವನಿಗೆ ಪೋಷಕರಾಗಿ ಪ್ರೋತ್ಸಾಹಕೊಟ್ಟರು. ಈತ 13 ವರ್ಷ ಕಾಲ ಪ್ರೊವೆನ್ಸ್‍ನಲ್ಲಿ ಪ್ರವಾಸ ಮಾಡುತ್ತ, ನಾನಾ ಊರು, ನಗರಗಳಲ್ಲಿ ನಾಟಕವಾಡಿಸಿದ. ಅನೇಕ ನಾಟಕಗಳನ್ನೂ ರಚಿಸಿದ. ಕಾಮೆಡಿಯ ಡೆಲ್‍ಆರ್ಟ್ ಎಂಬ ಇಟಲಿಯ ಜನಪದ ನಾಟಕ ಮಾದರಿಯಲ್ಲಿ ಬರೆದ ವೈನೋದಿಕಗಳು, ಸುತ್ತಲಿನ ಸಾಮಾಜಿಕ ಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರೆದ ವಿಡಂಬನಾತ್ಮಕ ಪ್ರಹಸನಗಳು, ಹರ್ಷಕಗಳು ಅತ್ಯಂತ ಜನಪ್ರಿಯವಾದವು. ದೂರದ ಹಳ್ಳಿಗಳಿಂದ ಇವನ ನಾಟಕಗಳನ್ನು ನೋಡಲು ಗಾಡಿಕಟ್ಟಿಕೊಂಡು ಬರುತ್ತಿದ್ದರು. ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಈತ ಒಳ್ಳೆಯ ನಟನೆಂದೂ ಹೆಸರಾದ. ಹಾಸ್ಯ ಪಾತ್ರಗಳಿಗಂತೂ ಹೇಳಿ ಮಾಡಿಸಿದಂತಿದ್ದ. ಇವನ ಬಗ್ಗೆ ಎಲ್ಲರಿಗೂ ತುಂಬ ಗೌರವವಿತ್ತು. ಕಂಪನಿಯ ನಟ ನಟಿಯರಂತೂ ಅಪಾರ ಪ್ರೀತಿ ಗೌರವಗಳೊಡನೆ ಈತನಿಗೆ ನಿಷ್ಠರಾಗಿದ್ದರು. ನಾಟಕಗಳು ಚೆನ್ನಾಗಿ ಹಣಗಳಿಸಿದವು. ನಟರು ಸುಖವಾದ ಜೀವನ ನಡೆಸುವಂತಾಯಿತು.

1658ರಲ್ಲಿ 14ನೆಯ ಲೂಯಿ ಚಕ್ರವರ್ತಿಯ ಆಸ್ಥಾನದಲ್ಲಿ ನಾಟಕವಾಡುವ ಅವಕಾಶ ಮೋಲಿಯೆರ್‍ನ ಕಂಪನಿಗೆ ಸಿಕ್ಕಿತು. ಕೋರ್ನಿಲ್ ಎಂಬವನ ನಿಕೊಮೀಡ್ ಎಂಬ ರುದ್ರನಾಟಕವನ್ನೂ ಕಡೆಯಲ್ಲಿ ಲಿ ಡಾಕ್ತ್ಯೂರ್‍ಅಮೋರೊ ಎಂಬ ಪ್ರಹಸವನ್ನೂ (ಮೋಲಿಯೆರನ ಈ ನಾಟಕ ಕಳೆದುಹೋಗಿದೆ ) ಆಡಿದರು. ಪ್ರಹಸನ ಪ್ರಚಂಡ ಮೆಚ್ಚುಗೆ ಗಳಿಸಿತು. ಅಂದಿನಿಂದ ಉದರ ರಾಜಾಶ್ರಯ ದೊರೆತು ಮೋಲಿಯೆರ್ ಪ್ಯಾರಿಸ್‍ನಲ್ಲಿ ನೆಲೆಸಿದ. ಕೊನೆಯವರೆಗೂ ಇವನಿಗೂ ಇವನ ನಾಟಕಗಳಿಗೂ ವಿಶೇಷವಾದ ರಾಜ ಮನ್ನಣೆ ದೊರೆಯಿತು. ದ್ಯೂಕ್‍ಡಿ ಅಂಜೊವ್‍ನ ಕೃಪಾಪೋಷನೆಯಲ್ಲಿ ಮೋಲಿಯೆರ್‍ನ ಕಂಪನಿ ತ್ರೂಪ್ ಡ ಮಾಶ್ಯರ್ ಎಂದೂ 1665ರಲ್ಲಿ ಲೂಯಿ ದೊರೆಯ ಆಶ್ರಯದಲ್ಲಿ ತ್ರೂಪ್ ದು ರಾಯ್ ಎಂದೂ ಪ್ರಸಿದ್ಧವಾಯಿತು. ಇದಕ್ಕೆ ಪ್ರತಿಸ್ಪರ್ಧಿಗಳಾಗಿದ್ದ ನಾಟಕ ಕಂಪನಿಗಳಲ್ಲಿ ಓಟೆಲ್‍ದ ಬೋರ್ಗೋನ್ನಾ ಮುಖ್ಯವಾದುದು. ರುದ್ರನಾಟಕಗಳನ್ನು ಆಡುವುದರಲ್ಲಿ ಅದರ ಸಮ ಇನ್ನೊಂದಿರಲಿಲ್ಲ. ಆದರೆ, ಮೋಲಿಯೆರ್‍ನ ಪ್ರಹಸನಗಳ ಪ್ರದರ್ಶನವನ್ನು ಬೇರಾವ ಕಂಪನಿಯೂ ಮೀರಿಸುವುದಕ್ಕಾಗಲಿಲ್ಲ.

1662ರಲ್ಲಿ 40 ವರ್ಷದ ಮೋಲಿಯೆರ್ ತನ್ನ ಕಂಪನಿಯಲೆಲ್ಲ ನಟಿಯೂ ಮಾದಲೆನ ಬೆಜಾರ್‍ಳ ತಂಗಿಯೂ ಆಗಿದ್ದ 19 ವರ್ಷದ ಆರ್ಮಂದೆ ಬೆಜಾರ್‍ಳನ್ನು ಪ್ರೀತಿಸಿ ಮದುವೆಯಾದ. ಆಕೆ ಚಂಚಲೆ, ಸುಖಲೋಲುಪಳು, ಮೋಲಿಯೆರ್‍ನ ಅತಿ ಪ್ರಶಂಸೆಯಿಂದ ಹಾಳಾಗಿದ್ದಳು. ಇವರ ದಾಂಪತ್ಯ ಜೀವನ ಉದ್ದಕ್ಕೂ ವಿರಸದಿಂದ ಕೂಡಿತ್ತು. 1666ರಲ್ಲಿ ಇಬ್ಬರೂ ಬೇರೆಯಾದರು. 1671ರಲ್ಲಿ ಮತ್ತೆ ರಾಜಿಯಾದರು. ಮೋಲಿಯೆರ್ ಈಕೆಯಿಂದ ಪಡೆದ ಮಕ್ಕಳಲ್ಲಿ ಮೊದಲನೆಯ ಮಗ (10 ನವೆಂಬರ್ 1664) 9 ತಿಂಗಳಲ್ಲಿ, ಕೊನೆಯ ಮಗ (15 ಸೆಪ್ಟೆಂಬರ್ 1672) ಒಂದೇ ತಿಂಗಳಲ್ಲಿ ತೀರಿಹೋಗಿ ಮಧ್ಯೆ ಹುಟ್ಟಿದ ಮಗಳು (1665) ಮಾತ್ರ ಉಳಿದಳು.

1672ರಲ್ಲಿ ಮಾದಲೆನ ಬೆಜಾರ್ ತೀರಿಹೋದುದು, ಎರಡನೆಯ ಮಗನೂ ಸತ್ತದ್ದೂ ಮೊದಲೇ ಅಸ್ವಸ್ಥನಾಗಿದ್ದ ಮೋಲಿಯೆರ್‍ಗೆ ಮಾನಸಿಕ ಆಘಾತ ಉಂಟಾಯಿತು. ಅನೇಕ ಕಾಲ್ಪನಿಕ ಕಾಯಿಲೆಗಳಿಗೊಳಗಾದಂತೆ ಭಯಭ್ರಾಂತಿಗಳಿಂದ ವಿಹ್ವಲಚಿತ್ತನಾದ. ಆಗ ರಚಿಸಿದ ಲಿ ಮ್ಯಾಲಡ್ ಇಮ್ಯಾಜಿನೇರ್ (ಕಾಲ್ಪನಿಕ ಖಾಯಿಲೆ) ಎಂಬ ನಾಟಕವನ್ನು 1673 ಫೆಬ್ರುವರಿ 17 ರಂದು ಆಡುತ್ತಿರುವಾಗ, ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಮೋಲಿಯೆರ್‍ಗೆ ಧನುರ್ವಾಯತು ತೋರಿತು. ನಾಟಕ ಮುಗಿದು ಮನೆಗೆ ಕರೆದೊಯ್ದು ಸ್ವಲ್ಪ ಸಮಯದಲ್ಲೇ ಈತ ಕೊನೆಯುಸಿರೆಳೆದ.

ನಾಟಕಗಳು[ಬದಲಾಯಿಸಿ]

ಮೋಲಿಯೆರ್ ಒಟ್ಟು 33 ನಾಟಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಒಂದೆರಡು ರುದ್ರನಾಟಕಗಳನ್ನು ಬಿಟ್ಟರೆ ಉಳಿದವುಗಳೆಲ್ಲ ಹರ್ಷಕಗಳೇ. ಇವುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. (1) ಇಟಲಿಯ ಜನಪದ ಹಾಗೂ ಹಳೆಯ ಕ್ಲಾಸಿಕ್ ರಂಗಭೂಮಿಯಿಂದ ಸ್ಪೂರ್ತಿ, ಪ್ರೇರಣೆ ಪಡೆದು ರಚಿಸಿದ ನಾಟಕಗಳು (2) ಆಸ್ಥಾನಕ್ಕಾಗಿ ಬರೆದ ಮನರಂಜನ ಪ್ರಹಸನಗಳು (3) ಸಾಮಾಜಿಕ ವಾಸ್ತವ ಜೀವನಾಧರಿತ ವಿಡಂಬನೆಗಳು. ಎಲ್ಲ ನಾಟಕಗಳಲ್ಲೂ ಈ ಮೂರು ಅಂಶಗಳು ಒಂದೊಂದು ಪ್ರಮಾಣದಲ್ಲಿವೆ. 1654ರಲ್ಲಿ ಲಿಯೋನ್ ನಗರದಲ್ಲಿ ಪ್ರದರ್ಶಿತವಾದ ಲಾ ಎತೂರ್ದ್ (ಮುಟ್ಠಾಳರು) ಇವನ ಮೊಟ್ಟಮೊದಲ ನಾಟಕ; ಅಪಾರ ಮೆಚ್ಚುಗೆಯನ್ನು ಜನಪ್ರಿಯತೆಯನ್ನೂ ಗಳಿಸಿತು. ಈ ಪ್ರೋತ್ಸಾಹದಿಂದಲೇ ಈತ ಇಂಥ ಅನೇಕ ನಾಟಕಗಳನ್ನು ರಚಿಸಿದ. ಇವನ ಎಲ್ಲ ನಾಟಕಗಳು ರಂಗದ ಮೇಲೆ ಅದ್ಭುತವಾಗಿ ಯಶಸ್ವಿಯಾದವು. ಅನೇಕ ಪ್ರದರ್ಶನಗಳನ್ನು ಕಂಡವು. 14ನೆಯ ಲೂಯಿಯಂಥ ಸುಸಂಸ್ಕøತ ಅಭಿರುಚಿಯುಳ್ಳ ಮೇಲುವರ್ಗದವರಿಗೆ ಹಿಡಿಸಿದಂತೆಯೇ ಜನಸಾಮಾನ್ಯರಿಗೂ ಪ್ರಿಯವಾದವು. ಮೋಲಿಯೆರ್ ದೇಶಾದ್ಯಂತ ಪ್ರಖ್ಯಾತನಾದ. ಅಷ್ಟೇ ವ್ಯಾಪಕವಾಗಿ ಪ್ರತಿಷ್ಠಿತ ಹಾಗೂ ಧಾರ್ಮಿಕ ವರ್ಗಗಳಲ್ಲಿ ದೊಡ್ಡ ವಿವಾದ. ಪ್ರಬಲವಾದ ವಿರೋಧ, ಧಾರ್ಮಿಕ ಗುರುಗಳ ಉಗ್ರ ಬಹಿಷ್ಕಾರಗಳನ್ನು ಈತನ ನಾಟಕಗಳು ಪ್ರಚೋದಿಸಿದವು. ಈತನನ್ನು ಪ್ರತಿಭಾನ್ವಿತ ಕಲಾವಿದನೆಮದು ಮೆಚ್ಚಿಕೊಂಡಂತೆಯೇ ನೀತಿಗೆಟ್ಟವ, ಧರ್ಮಬಾಹಿರ ನಾಸ್ತಿಕ, ಸುಧಾರಣೆಯಾಗಲಿ, ಉದ್ಧಾರವಾಗಲಿ ಸಾಧ್ಯವೇ ಇಲ್ಲದಷ್ಟು ಪತಿತ ಎಂದು ಖಂಡಿಸುವವರೂ ಆಗ ಇದ್ದರು.

ಲಾ ಒಕೋಲ್‍ಡೆ ಮಾರಿ (1661, ದಿ ಸ್ಕೂಲ್ ಫಾರ್ ಹಸ್ಟೆಂಡ್ಸ್), ಲಾ ಇಕೋಲ್ ಡೆ ಫೆಮೆ (1663, ದಿ ಸ್ಕೂಲ್ ಫಾರ್ ವೈವ್ಸ್ ಕ್ರಿಟಿಸೈಸ್ಡ್), ತಾರ್ತುಫ್ 91664, ದಿ ಇಂಪೋಸ್ಟರ್), ಲಿ ಮಿಸಾಂತ್ರೋಪ್ (1666, ದಿ ಮಿಸಾಂತ್ರೋಪ್), ಲಿ ಮೆಡಿಸಿನ್ ಮಾಲ್ ರೆ ಲ್ಯೂಯಿ (1666, ದಿ ಡಾಕ್ಟರ್ ಇನ್‍ಸ್ಪೈಟ್ ಆಫ್ ಹಿಮ್‍ಸೆಲ್ಫ್), ಲಾ ಆವೆರ್ (1668, ದಿ ಮೈಸರ್), ಲಿ ಮ್ಯಾಲಡ್ ಇಮ್ಯಾಜಿನೇರ್ (1673, ದಿ ಇಮ್ಯಾಜಿನೆರಿ ಇನ್‍ವ್ಯಾಲಿಡ್) - ಇವು ಇವನ ಪ್ರಸಿದ್ಧ ನಾಟಕಗಳು. ಇವನ ಹಲವು ನಾಟಕಗಳು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದವಾಗಿವೆ; ರೂಪಾಂತರಗೊಂಡಿವೆ. ಇಂಗ್ಲಿಷ್ ಆದಿಯಾಗಿ ಜಗತ್ತಿನ ಅನೇಕ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿವೆ. ಇವನ ಸಮಗ್ರ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ. ದಿ ಮೈಸರ್ ಅಂಡ್ ಅದರ್ ಪ್ಲೇಸ್ (1953), ಎಯ್ಟ್ ಪ್ಲೇಸ್ (1957), ತಾರ್ತುಫ್ ಅಂಡ್ ಅದರ್ ಪ್ಲೇಸ್ (1967), ದಿ ಮಿಸಾಂತ್ರೋಪ್ ಅಂಡ್ ಅದರ್ ಪ್ಲೇಸ್ (1968)- ಇವು ಕೆಲವು ಮುಖ್ಯ ಸಂಗ್ರಹಗಳು.

ಮೋಲಿಯೆರ್ ಒಬ್ಬ ಮಹಾನ್ ಕಲಾವಿದ. ಶ್ರೇಷ್ಠ ನಾಟಕಕಾರ. ಇವನ ನಾಟಕಗಳಲ್ಲಿ ಮುಕ್ತ ಮನಸ್ಸಿನ ಗಹನ ಸಾಮಾಜಿಕ ಚಿಂತನೆಗಳು ವಸ್ತುನಿಷ್ಠವಾಗಿ ಪ್ರತಿಪಾದಿತವಾಗಿದೆ. ಮಾನವ ಸ್ವಭಾವದ ವಿವಿಧ ಪರಿಗಳನ್ನು ಚೆನ್ನಾಗಿಪ್ರದರ್ಶಿಸುವ ಹಲವು ಅವಿಸ್ಮರಣೀಯ ಪಾತ್ರಗಳನ್ನು ಈತ ಕಣ್ಣು ಮುಂದೆ ನಿಲ್ಲಿಸುತ್ತಾನೆ. ಈತನ ನಾಟಕಗಳು ಸಮಾಜದ ರೀತಿ ನೀತಿಗಳಿಗೆ ಹಿಡಿದ ಹಾಸ್ಯಗನ್ನಡಿ; ದೋಷ ದೌರ್ಬಲ್ಯಗಳನ್ನು ನಗೆಯ ಮೂಲಕ ತಿದ್ದುವ ಸಾಧನ. ಈತ ಪೂರ್ವಗ್ರಹ ಮುಕ್ತನಾದ ವಿಚಾರವಂತ. ಆರೋಗ್ಯಕರವಾದ ಬುದ್ಧಿಯನ್ನೂ ನ್ಯಾಯವಾದ ವರ್ತನೆಯನ್ನೂ ವಿಕೃತಗೊಳಿಸುವ ಕಾರ್ಯಶೀಲತೆಯನ್ನೂ ಮೊಟಕುಗೊಳಿಸುವ ವಿಚಾರಗಳನ್ನು ಮಾತ್ರ ಬಿಟ್ಟು ಉಳಿದ ಎಲ್ಲ ವಿಚಾರಗಳನ್ನು ಸ್ವೀಕರಿಸುವ ಉದಾರ ಹಾಗೂ ತೆರೆದ ಮನಸ್ಸು ಈತನದು. ನಿರ್ವಿಕಾರವಾದ ವಿಚಾರಪರತೆಯನ್ನೂ ಅತಿರೇಕಗಳನ್ನು ತ್ಯಜಿಸಿ ಅನುಸರಿಸಬೇಕಾದ ಸುವರ್ಣಮಾಧ್ಯಮ ಮಾರ್ಗವನ್ನು ಈತನ ನಾಟಕಗಳು ಎತ್ತಿ ಹಿಡಿಯುತ್ತವೆ. ಈತನ ಹಾಸ್ಯ ಮೊನಚಾದರೂ ಮಾತುಗಳಲ್ಲಿ ನಂಜಿಲ್ಲ. ಮಾನವ ಸಹಜವಾದ ದೋಷ, ದುವ್ರ್ಯಸನಗಳ ಬಗ್ಗೆ ಮರುಕ, ಜೀವನದ ನೋವು ನಿರಾಸೆಗಳ ಬಗ್ಗೆ ನಿರ್ಲಿಪ್ತತೆ ಈತನ ವ್ಯಕ್ತಿತ್ವದ ಹಿರಿಯ ಗುಣಗಳು. ಎಂತಹ ಸಂದರ್ಭದಲ್ಲೂ (ಆರ್ಮಂದೆಯನ್ನು ಮದುವೆಯಾದಾಗ ಅಗಮ್ಯ ಗಮನ ಮಾಡಿದ ಪಾಪವೆಂದು ದೊಡ್ಡ ಗುಲ್ಲಾಗಿ - ಆರ್ಮಂದೆಯು ಮಾದಲೆನ ಬೆಜಾರಳ ತಂಗಿಯಲ್ಲ, ಮಗಳು ಎಂಬ ಊಹೆಯಿಂದ - ತೀವ್ರ ಟೀಕೆ, ನಿಂದೆಗಳಿಗೆ ಈತ ಗುರಿಯಾಗಿದ್ದ) ಈತ ತನ್ನ ಮಾನಸಿಕ ಸಮತೋಲನವನ್ನಾಗಲೀ ಪ್ರಸನ್ನತೆಯನ್ನಾಗಲಿ ಕಳೆದುಕೊಳ್ಳಲಿಲ್ಲ. ಎಷ್ಟೇ ಕಹಗಿಯನ್ನುಂಡರೂ ಜೀವನೋತ್ಸಾಹ, ಉಲ್ಲಾಸಗಳನ್ನು ಉಳಿಸಿಕೊಂಡು ಎಲ್ಲರಿಗೂ ಹಂಚಿದ. ಬದುಕು ಅನಂತವಾದುದು; ಅದರ ಶಕ್ತಿ ವೈವಿಧ್ಯತೆಗಳು ಅಪಾರ; ಮಾನವ ಚೇತನ ಯಾವ ಒಂದು ಸೂತ್ರಕ್ಕಾಗಲಿ, ಕಟ್ಟುಪಾಡಿಗಾಗಲಿ ಸೀಮಿತವಾಗದು - ಎಂಬುದು ಈತನ ದೃಢವಾದ ಅಭಿಮತವಾಗಿತ್ತು. ಸ್ವತಂತ್ರ ಹಾಗೂ ನಿರ್ದಾಕ್ಷಿಣ್ಯ ವಿಚಾರ ಧಾರೆ ಇವನ ಎಲ್ಲ ಕೃತಿಗಳಲ್ಲೂ ಪ್ರತಿಬಿಂಬಿತವಾಗಿದೆ. ಈತನ ಶೈಲಿ ಸುಲಲಿತವಾದುದು; ನಿರರ್ಗಳ:ವಾದುದು. ವಿಪುಲತೆ, ಸಂಕ್ಷಿಪ್ತತೆ ಎರಡರಲ್ಲೂ ಈತ ಸಮರ್ಥ. ಮೋಲಿಯೆರ್‍ನ ಚುರುಕಾದ ಮತ್ತು ಅರ್ಥ ವ್ಯಂಜಕತೆಯುಳ್ಳ ಸಂಭಾಷಣಾ ಚಾತುರ್ಯ ಷೇಕ್‍ಸ್ಪಿಯರ್‍ನ ಹೊರತು ಬೇರಾವ ನಾಟಕಕಾರನಲ್ಲೂ ಕಂಡುಬರುವುದಿಲ್ಲ.

ಕನ್ನಡಕ್ಕೆ ಅನುವಾದಗೊಂಡ ನಾಟಕಗಳು[ಬದಲಾಯಿಸಿ]

ಕೆಲವು ನಾಟಕಗಳು ರೂಪಾಂತರಗೊಂಡು ಕನ್ನಡದಲ್ಲೂ ಬಂದಿವೆ. ಎ. ಎನ್. ಮೂರ್ತಿರಾಯರ ಆಷಾಢಭೂತಿ, ಪರ್ವತವಾಣಿಯವರ ಹಣಹದ್ದು, ನಾ. ಕಸ್ತೂರಿಯವರ ಗಗ್ಗಯ್ಯನ ಗಡಿಬಿಡಿ - ಇವು ಇಂಥ ಕೆಲವು ಕೃತಿಗಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: