ವಿಷಯಕ್ಕೆ ಹೋಗು

ಶೂನ್ಯ ಬಂಡವಾಳ ಕೃಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೈಸರ್ಗಿಕ ಕೃಷಿ
ನೈಸರ್ಗಿಕ ಕೃಷಿ

ಶೂನ್ಯ ಬಂಡವಾಳ ಕೃಷಿಯೆಂಬುದು ಕೃತಕವಾಗಿ ಸಿಗುವ ಯಾವುದೇ ವಸ್ತುಗಳನ್ನು ಬಳಸದೆ, ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಸರಿಯಾದ ಕ್ರಮದಲ್ಲಿ ಅಳವಡಿಸಿ ಕೃಷಿ ಮಾಡುವ ವಿಧಾನ.[] ಶೂನ್ಯ ಬಂಡವಾಳ ಕೃಷಿಯು ರೈತರು ಬಳಸುವ ಕೃತಕ ಗೊಬ್ಬರ, ಕೀಟನಾಶಕ, ವಾಣಿಜ್ಯ ವೆಚ್ಚ ಹಾಗೂ ಮಾರುಕಟ್ಟೆ ಅವಲಂಬನೆಯ ವಿರುದ್ಧ ಧ್ವನಿ ಎತ್ತುವ ಕೃಷಿಯ ಒಂದು ವಿಧಾನವಾಗಿದೆ. ಈ ವಿಧಾನವು ಸ್ಥಳೀಯವಾಗಿ ದೊರೆಯುವ ಹಾಗೂ ನೈಸರ್ಗಿಕವಾಗಿ ವಿಘಟನೆ ಹೊಂದಬಲ್ಲ ವಸ್ತುಗಳನ್ನು, ವೈಜ್ಞಾನಿಕ ಪರಿಸರ ಜ್ಞಾನವನ್ನು ಮತ್ತು ಆಧುನಿಕ ತಂತ್ರಜ್ಞಾನದ ಜೊತೆಗಿನ ಸಾಂಪ್ರದಾಯಿಕ ಕೃಷಿ ಅಭ್ಯಾಸಗಳ ಆಧಾರಿತವಾದ ನೈಸರ್ಗಿಕವಾಗಿ ನಡೆಯುವ ಜೈವಿಕ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಶೂನ್ಯ ಬಂಡವಾಳ ಕೃಷಿ ಪದ್ಧತಿಯು, ಕೃಷಿ ವಿಜ್ಞಾನಿಗಳಾದ ಸುಭಾಶ್ ಪಾಳೇಕರ್(ಸಾಂಪ್ರದಾಯಿಕ ಕೃಷಿ) ಮತ್ತು ಮಸನೊಬು ಫುಕುಒಕ(ನೈಸರ್ಗಿಕ ಕೃಷಿ) ಅವರಿಂದ ಪ್ರೋತ್ಸಾಹಿಸಲ್ಪಟ್ಟಿದೆ.[][]

ಶೂನ್ಯ ಬಂಡವಾಳ ಕೃಷಿಯಲ್ಲಿ ನೈಸರ್ಗಿಕ ಕೀಟನಾಶಕಗಳನ್ನು ಮತ್ತು ಗೊಬ್ಬರವನ್ನು ಬಳಸಲಾಗುತ್ತದೆ. ಈ ಕೃಷಿ ಪದ್ಧತಿ ಬೆಳೆಗಳ ಸರದಿ, ಹಸಿರು ಗೊಬ್ಬರ, ಮಿಶ್ರಗೊಬ್ಬರ, ಜೈವಿಕ ಕೀಟ ನಿಯಂತ್ರಣ ಹಾಗೂ ಯಾಂತ್ರಿಕ ಕೃಷಿ ಎಂಬ ತತ್ವಗಳನ್ನು ಒಳಗೊಂಡಿರುತ್ತದೆ. ಈ ಕ್ರಮಗಳನ್ನು ಬಳಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ. ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರವಾಗಿರಿಸಲು ಕಾಳುಗಳನ್ನು ಬೆಳೆಯಲಾಗುತ್ತದೆ, ನೈಸರ್ಗಿಕ ಕೀಟ ಪರಭಕ್ಷಕಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಮಣ್ಣಿನ ಗುಣಮಟ್ಟವನ್ನು ವೃದ್ಧಿಸಲು ಬೆಳೆಗಳನ್ನು ಸರದೀಕರಿಸಲಾಗುತ್ತದೆ ಮತ್ತು ನೈಸರ್ಗಿಕ ವಸ್ತುಗಳಾದ ಪೊಟ್ಯಾಸಿಯಮ್ ಬೈಕಾರ್ಬೋನೇಟ್ ಮತ್ತು ಹಸಿ ಗೊಬ್ಬರವನ್ನು, ಕಳೆ ಮತ್ತು ರೋಗವನ್ನು ನಿಯಂತ್ರಿಸಲು ಬಳಸಲಾಗುತ್ತದೆ.[]

ದೇಶೀಯ ಹಸುವಿನ ಗಂಜಲ, ಸಗಣಿ, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತು ಬದುವಿನ ಮಣ್ಣನ್ನು ಸರಿಯಾದ ಅನುಪಾತದಲ್ಲಿ ನೀರಿನಲ್ಲಿ ಮಿಶ್ರಣ ಮಾಡಿ ೭೨ ಗಂಟೆಗಳ ನಂತರ ಬೆಳೆಗಳಿಗೆ ಹಾಯಿಸುವುದರಿಂದ (ಅಂದರೆ ಪ್ರತಿ ೧೫ ದಿನಗಳಿಗೊಮ್ಮೆ) ಸಸ್ಯಗಳಿಗೆ ಬೇಕಾಗುವ ಏಲ್ಲಾ ಪೋಷಕಾಂಶಗಳು ದೊರೆಯುತ್ತದೆ. ಈ ವಿಧಾನದಿಂದ ರೋಗಭಾದೆ ಕಡಿಮೆ ಇದ್ದು, ಹೆಚ್ಚು ಇಳುವರಿ ಬರುತ್ತದೆ ಮತ್ತು ಈ ಉತ್ಪನ್ನಗಳ ಬಾಳಿಕೆ ಹೆಚ್ಚುತ್ತದೆ.[][]

ಗೋವುಗಳ ಪಾತ್ರ

[ಬದಲಾಯಿಸಿ]

ಸಸ್ಯ-ಮರಗಳು, ಪ್ರಾಣಿ-ಪಕ್ಷಿಗಳು, ಮಾನವನ ಮೃತ ಶರೀರದಂತಹ ಕಾಷ್ಠ ಪದಾರ್ಥಗಳ, ಸಾವಯವ ಪದಾರ್ಥಗಳ ಕಳೆಯುವಿಕೆಯಿಂದ ಉತ್ಪನ್ನಗೊಳ್ಳುವ ಜೀವದ್ರವ್ಯ(ಹ್ಯೂಮಸ್)ದ ತಯಾರಿಕೆಯ ಪ್ರಕ್ರಿಯೆಯಲ್ಲಿ ಕಾಷ್ಠಗಳ ವಿಘಟನೆಗೆ ಅನಂತಕೋಟಿ ಸೂಕ್ಷ್ಮಾಣುಜೀವಿಗಳು ದುಡಿಯುತ್ತವೆ.[] ದೇಶೀಯ ಆಕಳಿನ ೧ ಗ್ರಾಂ ಸಗಣಿಯಲ್ಲಿ ಅಂಥ ೩೦೦ ರಿಂದ ೫೦೦ ಕೋಟಿ ಸೂಕ್ಷ್ಮಜೀವಾಣುಗಳಿವೆ. ಸತತ ಪ್ರಯೋಗ ಅಧ್ಯಯನಗಳಿಂದ ನೈಸರ್ಗಿಕ ಕೃಷಿಗೆ ದೇಶೀ ಆಕಳ ಸಗಣಿ, ಗಂಜಲು ಹೊರತುಪಡಿಸಿ ಬೇರೇನೂ ಬೇಕಿಲ್ಲ ಎಂದು ತಿಳಿದುಬಂದಿದೆ. ಸಗಣಿ ತಾಜಾ ಇದ್ದಷ್ಟು ಹಾಗೂ ಗೋಮೂತ್ರ ಹಳೆಯದಾದಷ್ಟು ಹೆಚ್ಚು ಫಲಪ್ರದ. ಅಧಿಕ ಹಾಲು ಕೊಡುವ ದೇಶೀ ಆಕಳಿನ ಸಗಣಿ, ಗಂಜಲಿಗಿಂತ ಕಡಿಮೆ ಹಾಲು ಕೊಡುವ ದೇಶೀ ಆಕಳ ಸಗಣಿ ಮತ್ತು ಗಂಜಲು ಜೀವಾಮೃತ ತಯಾರಿಕೆಗೆ ಹೆಚ್ಚು ಫಲಪ್ರದವಾಗಿವೆ. ೧ ಆಕಳು ಪ್ರತಿದಿನಕ್ಕೆ ಸರಾಸರಿ ೧೧ ಕೆ.ಜಿ. ಸಗಣಿ ಹಾಕುವುದರಿಂದ ೧ ಜವಾರಿ ಆಕಳಿಂದ ಒಟ್ಟು ೩೦ ಎಕರೆ ನೈಸರ್ಗಿಕ ಕೃಷಿ ಮಾಡಬಹುದು ಎಂಬ ಫಲಿತಾಂಶಗಳು ಕಂಡುಬಂದಿವೆ. ಹಸುಗಳ ಕರುಗಳಲ್ಲಿ ಅನುಕ್ಷಣವೂ ಜನ್ಮ ತಾಳುವ ಪಿಎಸ್‌ಬಿ, ಬ್ಯಾಸಿಲಸ್ ಸಿಲಿಕಸ್, ಥಿಯೋಆಕ್ಸಿಡೆಂಟ್ಸ್, ಮೈಕೋರೈಜಾ ಇತ್ಯಾದಿ ಕೋಟಿ ಕೋಟಿ ಜೀವಾಣುಗಳು ಕೃಷಿ ಕ್ಷೇತ್ರವನ್ನು ಸಮೃದ್ಧಗೊಳಿಸುವಷ್ಟು ಶಕ್ತಿಶಾಲಿಗಳಾಗಿವೆ. ದೇಶೀ ಆಕಳ ಸಗಣಿಯ ಹೆಚ್ಚುವರಿ ಸಾಮರ್ಥ್ಯವೆಂದರೆ, ಪರಮಾಣು ವಿಕಿರಣಗಳ ಸೋರಿಕೆಯ ವೇಳೆಗೆ ಹೊರಬೀಳುವ ಅಪಾಯಕಾರಿ ಆಲ್ಫಾ, ಬೀಟಾ ಹಾಗೂ ಗಾಮಾ ಕಿರಣಗಳನ್ನು ಹೀರಿಕೊಳ್ಳುವುದು.[]

ಶೂನ್ಯ ಬಂಡವಾಳ ಕೃಷಿಯ ನಾಲ್ಕು ಚಕ್ರಗಳು

[ಬದಲಾಯಿಸಿ]
  • ಬೀಜಾಮೃತ
  • ಜೀವಾಮೃತ
  • ಮುಚ್ಚಿಗೆ
  • ಗಾಳಿಯಾಡುವಿಕೆ

ಬೀಜಾಮೃತ

[ಬದಲಾಯಿಸಿ]

ಬೀಜದ ಅಂಚಿನಲ್ಲಿ ಇರಬಹುದಾದ ಹಾನಿಕಾರಕ ಶಿಲೀಂಧ್ರಗಳು ಹಾಗೂ ಬ್ಯಾಕ್ಟೀರಿಯಾಗಳು ಅಥವಾ ಅವುಗಳ ಮೊಟ್ಟೆಗಳು, ಮೋಡ ಮುಸುಕುವ ತಂಪಿನ ದಿನಗಳಲ್ಲಿ ಪೈರನ್ನು ಬಾಧೆಪಡಿಸುತ್ತವೆ. ಮಣ್ಣಲ್ಲಿರಬಹುದಾದ ಅಂಥ ಹಾನಿಕಾರಕ ಜೀವಾಣುಗಳು, ಮಳೆ ಸುರಿದಾಗ ಬೇರಲ್ಲಿ ಬೆರೆತು ಇಡೀ ಸಸ್ಯದ ಭಾಗವನ್ನು ಆನುಸರಿಸಿ ಉಂಟುಮಾಡಬಹುದಾದ ಅವಾಂತರಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟುವ ತಂತ್ರಗಾರಿಕೆಯೇ ಬೀಜಾಮೃತದ ಬೀಜೋಪಚಾರ.

೧೦೦ ಕೆ.ಜಿ. ಬೀಜಕ್ಕಾಗಿ ೨೦ ಲೀ. ನೀರು + ೫ ಕೆ.ಜಿ. ದೇಶೀ ಆಕಳ ಸಗಣಿ+ ೫ ಲೀ. ದೇಶೀ ಆಕಳ ಗಂಜಲು+ ೫೦ ಗ್ರಾಂ ಸುಣ್ಣವನ್ನು ಬಿತ್ತನೆ ಹಿಂದಿನ ದಿನ ಸಂಜೆ ಬೆರೆಸಿ ಕಲಸಿ ಇರಿಸಬೇಕು. ಬಿತ್ತನೆಯ ದಿನ ಬೆಳಿಗ್ಗೆ ಆಯಾ ಬೀಜಗಳ ಸ್ವರೂಪ ಅವಂಬಿಸಿ ಈ ಬೀಜಾಮೃತವನ್ನು ಲೇಪಿಸಬೇಕು. ನಾಟಿ ಮಾಡುವ ಸಸಿಗಳ ಬೇರುಗಳನ್ನು ಹಾಗೂ ಬೀಜದ ಕಡ್ಡಿ- ತುಂಡುಗಳನ್ನು ಬೀಜಾಮೃತದಲ್ಲಿ ಅದ್ದಬೇಕು. ಅದನ್ನು ೨ ದಿನ ಇಟ್ಟು ಬಳಸಬಹುದು. ಬೀಜ ಮಣ್ಣಿಗೆ ಬಿದ್ದ ಒಡನೆಯೇ ಅದರ ರಕ್ಷಣೆಗೆ ಬೀಜಾಮೃತದಲ್ಲಿನ ಟ್ರೈಕೋಡರ್ಮಾ ಇತ್ಯಾದಿ ಜೀವಾಣುಗಳು ಕ್ರಿಯಾಶೀಲಗೊಳ್ಳುತ್ತವೆ.

ಜೀವಾಮೃತ

[ಬದಲಾಯಿಸಿ]

೨೦೦ ಲೀ. ನೀರು + ೧೦ ಕೆ.ಜಿ. ದೇಶೀ ಆಕಳ ಸಗಣಿ + ೧೦ ಲೀ. ದೇಶೀ ಆಕಳ ಗಂಜಲ + ೨ ಕೆ.ಜಿ. ಕಪ್ಪು ಬೆಲ್ಲ + ೨ ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು + ೨ ಹಿಡಿ ಹೊಲದ ಬದುವಿನ ಮಣ್ಣಿನಿಂದ ಜೀವಾಮೃತ ತಯಾರಿಸಲಾಗುತ್ತದೆ. ಜೀವಾಮೃತ ಭೂಮಿಗೆ ಪೂರೈಕೆಯಾದ ೪ ದಿನಗಳಲ್ಲಿ, ಆಳದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ದೇಶೀ ಎರೆಹುಳು ಹಾಗೂ ಜೀವಜಂತುಗಳು ಜಾಗೃತಗೊಂಡು ಮೇಲೆ ಬಂದು ಅವಿಶ್ರಾಂತವಾಗಿ ದುಡಿಯಲಾರಂಭಿಸುತ್ತದೆ. ಜೀವಾಮೃತವು ಕೋಶವಿಭಜನೆಯಿಂದಾಗಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಪ್ರತಿ ೨೦ ನಿಮಿಷಕ್ಕೆ ದ್ವಿಗುಣಗೊಳಿಸುತ್ತದೆ.

ಮುಚ್ಚಿಗೆ

[ಬದಲಾಯಿಸಿ]

ಜೀವಾಮೃತ ಪೂರೈಕೆಯಾದೊಡನೆ ಕ್ರಿಯಾಶೀಲವಾಗುವ ದೇಶೀ ಎರೆಹುಳು ಭೂಮಿಯ ಆಳದ ಅನ್ನದ್ರವ್ಯಗಳನ್ನು ಹಿಕ್ಕೆಯ ರೂಪದಲ್ಲಿ ಭೂಮಿಯ ಮೇಲ್ಪದರಕ್ಕೆ ತಂದುಹಾಕುತ್ತದೆ. ಇವುಗಳೊಡನೆ ಅನಂತಾನಂತ ಕೋಟಿ ಜೀವಜಂತುಗಳು, ಸೂಕ್ಷ್ಮಾಣುಜೀವಿಗಳು ಅವಿತರ ಕ್ರಿಯಾಶೀಲವಾಗಿರಲು ಭೂಮಿಯ ಮೇಲೆ ೨೫ ಡಿಗ್ರಿ ರಿಂದ ೩೨ ಡಿಗ್ರಿ ಸೆಂ.ಗ್ರೇ. ತಾಪಮಾನ ಹಾಗೂ ೬೫ ರಿಂದ ಶೇ.೭೨ ತೇವಾಂಶಗಳಿದ್ದು ಮೇಲ್ಮಣ್ಣು ನೆರಳಿನಿಂದ ಆವರಿಸಬೇಕು. ಈ ಎಲ್ಲಾ ವಾತಾವರಣವನ್ನು ಕಲ್ಫಿಸುವುದೇ ಮುಚ್ಚಿಗೆಯ ಉದ್ದೇಶವಾಗಿದೆ. ಮುಚ್ಚಿಗೆಯಲ್ಲಿ ೩ ಪ್ರಕಾರಗಳಿವೆ- ಮೃದಾಚ್ಛಾದನ ಅಥವಾ ಮಣ್ಣಿನ ಮುಚ್ಚಿಗೆ, ಕಾಷ್ಠಾಚ್ಛಾದನ ಅಥವಾ ಕಸ-ಕಡ್ಡಿ ತರಗೆಲೆಗಳ ಮುಚ್ಚಿಗೆ, ಅಂತರ್ ಬೆಳೆ - ಮಿಶ್ರ ಬೆಳೆಗಳ ಮುಚ್ಚಿಗೆ.

ಗಾಳಿಯಾಡುವಿಕೆ

[ಬದಲಾಯಿಸಿ]

ಮಣ್ಣಿನಲ್ಲಿ ಗಾಳಿಯ ಸುಲಭ ಚಲನೆ ಅತ್ಯಾವಶ್ಯಕ. ಇದು ಬೆಳೆಯ ಬೆಳವಣಿಗೆಗೆ ಸಹಾಯಕಾರಿ ಹಾಗೂ ಅಗತ್ಯ.

ಉಲ್ಲೇಖಗಳು

[ಬದಲಾಯಿಸಿ]
  1. https://www.thehindu.com/sci-tech/agriculture/what-is-zero-budget-natural-farming/article61590716.ece
  2. http://www.palekarzerobudgetspiritualfarming.org/
  3. "ಆರ್ಕೈವ್ ನಕಲು" (PDF). Archived from the original (PDF) on 2015-05-01. Retrieved 2017-02-09.
  4. https://www.hindustantimes.com/india-news/report-wary-of-large-scale-switch-to-zero-budget-natural-farming-101645294493225.html
  5. https://www.newindianexpress.com/states/karnataka/2020/Dec/20/zero-budget-bumper-crop-all-thanks-tonatural-farming-2238705.html
  6. "ಆರ್ಕೈವ್ ನಕಲು". Archived from the original on 2016-11-25. Retrieved 2017-02-09.
  7. https://www.deccanherald.com/opinion/zero-budget-natural-farming-may-provide-sustainable-future-for-agriculture-907926.html
  8. https://indianexpress.com/article/explained/explained-the-idea-of-zero-budget-farming-and-why-scientists-are-sceptical-5983583/