ವೈ.ಎನ್.ಕೃಷ್ಣಮೂರ್ತಿ

ವಿಕಿಪೀಡಿಯ ಇಂದ
Jump to navigation Jump to search

ವೈಯೆನ್ಕೆ ಎಂದೇ ಪರಿಚಿತರಾದ ಹಿರಿಯ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ ವೃತ್ತಿ ಜೀವನವನ್ನು ಆರಂಭಿಸಿದ್ದು ದೇಶಬಂಧು ಪತ್ರಿಕೆಯ ಮೂಲಕ. ಪ್ರಜಾವಾಣಿಯ ಆರಂಭದ ದಿನಗಳಲ್ಲೇ ಟಿ.ಎಸ್.ರಾಮಚಂದ್ರರಾವ್ ಜತೆಗೂಡಿದ ವೈಯೆನ್ಕೆ ಹಂತ ಹಂತವಾಗಿ ಉಪಸಂಪಾದಕ, ಮುಖ್ಯ ಉಪಸಂಪಾದಕ, ಉಪ ಸುದ್ದಿಸಂಪಾದಕ, ಸುದ್ದಿ ಸಂಪಾದಕ ಹುದ್ದೆಗೇರಿದರು. ಟಿಯೆಸ್ಸಾರ್ ನಿಧನದ ನಂತರ ಪ್ರಜಾವಾಣಿ ಸಂಪಾದಕರಾದ ವೈಯೆನ್ಕೆ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಸಾಹಿತ್ಯ, ಕಲೆ ಹಾಗೂ ಚಲನಚಿತ್ರರಂಗದಲ್ಲಿ ತೀವ್ರ ಆಸಕ್ತಿಯಿದ್ದ ವೈಯೆನ್ಕೆ ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ, ಪಿ.ಲಂಕೇಶ್, ಸಿ.ಆರ್.ಸಿಂಹ, ಅನಂತನಾಗ್ ಮುಂತಾದವರಿಗೆ ಆತ್ಮೀಯ ಸ್ನೇಹಿತ ಹಾಗೂ ಮಾರ್ಗದರ್ಶಿಯಾಗಿದ್ದರು. ನವ್ಯ ಹಾಗೂ ನವ್ಯೋತ್ತರ ಸಾಹಿತಿಗಳಿಗೆ ಆತ್ಮೀಯ ಬಂಧುವಾಗಿದ್ದರು. ಸಾಪ್ತಾಹಿಕ ಪುರವಣಿಯ ಮೂಲಕ ಬಿ.ಸಿ.ರಾಮಚಂದ್ರ ಶರ್ಮ, ಸುಮತೀಂದ್ರ ನಾಡಿಗ, ಹೆಚ್.ಎಸ್.ಬಿಳಿಗಿರಿ ಮತ್ತಿತರ ಲೇಖಕರ ಬರಹಗಳನ್ನು ಪ್ರಕಟಿಸಿದರು. `ಪ್ರಜಾವಾಣಿ' ಪತ್ರಿಕೆಗೆ ವೈಯೆನ್ಕೆ ಬರೆಯುತ್ತಿದ್ದ ಮೂರನೆಯ ಸಂಪಾದಕೀಯ ಹಾಸ್ಯದ ನವಿರಿನೊಂದಿಗೆ ಪ್ರಚಲಿತ ಸಮಸ್ಯೆಗಳನ್ನು ವಿಶ್ಲೇಷಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿತು. ಅವರು ಸೃಷ್ಟಿಸಿದ ಘಾ ಕನ್ನಡ ಸಾರಸ್ವತ ಲೋಕದಲ್ಲಿ ಇಂದಿಗೂ ಚಾಲ್ತಿಯಲ್ಲಿದ್ದಾನೆ. ಹನಿಗವನಗಳನ್ನು ಬಹಳ ಹಿಂದಿನಿಂದಲೂ ಪ್ರಚುರ ಪಡಿಸಿದ ಕೀರ್ತಿ ವೈಯೆನ್ಕೆಯವರದು. ಪದಗಳನ್ನು ಮಥಿಸಿ ಮಥಿಸಿ ಹೊಸ ಅರ್ಥವನ್ನು ಹುಡುಕುವ, ಪದಗಳೊಂದಿಗೆ `ಪನ್' ಮಾಡುವ ಕಲೆ ಅವರಿಗೆ ಕರಗತವಾಗಿತ್ತು. ಮದ್ಯ ಸೇವನೆಗೆ ಹೊಸ ವ್ಯಾಖ್ಯಾನವನ್ನು ಬರೆದ ವೈಯೆನ್ಕೆ ಇಂಗ್ಲಿಷ್‌ನಲ್ಲಿದ್ದ `ರೌಂಡ್'ಗೆ `ಗುಂಡು' ಎಂದು ಸೂಚಿಸಿದವರು. ಇಂದು `ಮದ್ಯ ಸೇವನೆ'ಗೆ ಪರ್ಯಾಯವಾಗಿ `ಗುಂಡು ಹಾಕುವುದು' ಎಂದೇ ಜನಪ್ರಿಯವಾಗಲು ವೈಯೆನ್ಕೆ ಕಾರಣರಾದರು. ಹೊಸ ಬರಹಗಾರರನ್ನು, ಹೊಸ ಪತ್ರಕರ್ತರನ್ನು ಉತ್ತೇಜಿಸುವ ಮೂಲಕ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. `ಪ್ರಜಾವಾಣಿ'ಯಿಂದ ನಿವೃತ್ತಿಯಾದ ನಂತರ ಉದಯವಾಣಿ ಪತ್ರಿಕೆಗೆ ಅವರು ಬರೆಯುತ್ತಿದ್ದ `Wonder-ಕಣ್ಣು' ಅಂಕಣ ಬರಹಕ್ಕೊಂದು ಹೊಸ ರೂಪ ನೀಡಿತು. ಕನ್ನಡವಲ್ಲದೆ ತಾವು ಓದಿದ ಇಂಗ್ಲಿಷ್ ಭಾಷೆಯ ವಿಭಿನ್ನ ಕೃತಿಗಳನ್ನು ಈ ಅಂಕಣದಲ್ಲಿ ಅವರು ಪರಿಚಯಿಸುತ್ತಿದ್ದರು. ಖಾದ್ರಿ ಶಾಮಣ್ಣನವರ ನಿಧನದಿಂದ ತೆರವಾದ ಕನ್ನಡಪ್ರಭ ಸಂಪಾದಕರ ಸ್ಥಾನವನ್ನು ತುಂಬಿದ ವೈಯೆನ್ಕೆ, ಪತ್ರಿಕೆಗೆ ಹೊಸ ಸಾಂಸ್ಕೃತಿಕ ಸ್ವರೂಪವನ್ನು ನೀಡಿದರು. `Wonder-ಕಣ್ಣು' ಅಂಕಣವನ್ನು ಇಲ್ಲಿ ಮುಂದುವರಿಸಿದರು. ಅವರ ಉತ್ತೇಜನದಿಂದ ಪತ್ರಿಕೋದ್ಯಮದಲ್ಲಿ ಯಶಸ್ಸು ಕಂಡ ಪ್ರಮುಖರೆಂದರೆ ಜಿ.ಎಸ್.ಸದಾಶಿವ, ವಿಶ್ವೇಶ್ವರ ಭಟ್, ಹೆಚ್.ಗಿರೀಶ್‌ರಾವ್ ಮುಂತಾದವರು.

ದಾರ್ಶನಿಕ ಯು.ಜಿ.ಕೃಷ್ಣಮೂರ್ತಿಯವರ ಅಭಿಮಾನಿ ಹಾಗೂ ಶಿಷ್ಯರಾಗಿದ್ದ ವೈಯೆನ್ಕೆ ಕನ್ನಡ ಓದುಗರಿಗೆ ಯೂ.ಜಿ. ಚಿಂತನೆಗಳನ್ನು ಪರಿಚಯಿಸಿದ್ದರು. ಅವರ `ಯೂಜಿ ಅಲ್ಲ, ಗುರೂಜಿ' ಲೇಖನ ಜನಪ್ರಿಯವಾದದ್ದು.

ಪ್ರಜಾವಾಣಿ ಮೂರನೆಯ ಸಂಪಾದಕೀಯ[ಬದಲಾಯಿಸಿ]

ಸೌಂದರ್ಯ ದ್ವೇಷಿ?


ಲವಣದ ಮೇಲೆ ತೆರಿಗೆ ವಿಧಿಸುತ್ತಿದ್ದ ಕಾಲವೊಂದಿತ್ತು. ಈಗ ಲಾವಣ್ಯದ ಮೇಲೂ

ತೆರಿಗೆ ವಿಧಿಸುವ ಕಾಲವೂ ಬಂದಿದೆಯಲ್ಲ ಎಂದು ಸೌಂದರ್ಯೋಪಾಸಕರು ಕೊರಗಬಹುದು.

ಆದರೆ ಭವಿಷ್ಯತ್ತಿನ ಸುಖಕ್ಕೆ ಈಗಿನವರಿಗೆ ಭೂತ ಬಿಡಿಸಲು ಪಣ ತೊಟ್ಟಿರುವ ವ್ರತನಿಷ್ಠ,

ಭೋಗತ್ಯಾಗಗಳ ಮಂತ್ರ ಜಪಿಸುವ ಅರ್ಥಸಚಿವರ ಕರಭಾರದ ವಿರುದ್ಧ ಮಹಿಳಾ ಪ್ರಪಂಚದ

ಪರವಾಗಿ ಲೋಕಸಭಾ ಸದಸ್ಯೆಯೊಬ್ಬರು ತಮ್ಮ ಪ್ರತಿಭಟನೆ ಸಲ್ಲಿಸಿದ್ದಾರೆ.


ದೇಶಕ್ಕೆ ಕನ್ನ ಹಾಕಿರುವವರನ್ನು ಸದೆ ಬಡೆಯಲು ಜನರ ಚಿನ್ನ ಬೇಕೆಂದು ಆಜ್ಞೆ ಹೊರಡಿಸಿದ್ದ

ಅರ್ಥಸಚಿವರೇ, ಅನ್ನವಿಲ್ಲದಿರುವಾಗ ಮಲ್ಲಿಗೆ ಹೂವು ಏಕೆ ಎಂಬ ಧೋರಣೆಯ ಅನ್ವಯವನ್ನು

ವಿಸ್ತರಿಸಬಹುದು. ಆಭರಣ ತೊಟ್ಟರೆ ಮಾತ್ರ, ಸೌಂದರ್ಯ ಸಾಧಕ ಸಾಮಗ್ರಿಗಳಿಂದ

ಮಾತ್ರ ಸೌಂದರ್ಯವರ್ಧನವೆ? ಬರಿಯ ರೂಪೊಂದೇ ಸಾಲದೆ? ನಿರಾಭರಣ ಸುಂದರಿಯಾಗಿ

ಮೆರೆಯಬಾರದೇಕೆ? ಎಂಬುದೇ ಅರ್ಥಸಚಿವರ ವಿಚಾರಲಹರಿಯಾಗಿರಬಹುದು ಅಥವಾ ನಿಜವಾದ

ಸುಂದರಿಯರಿಗೆ ಈ ಸೌಂದರ್ಯ ಸಾಮಗ್ರಿಗಳು ಅನಗತ್ಯ. ಸುಂದರಿಯವರಲ್ಲದವರಿಗೆ ಎಂಥ

ಸಾಮಗ್ರಿಗಳೂ ಸೊಬಗು ಹೆಚ್ಚಿಸಲು ನೆರವಾಗಬಾರವು ಎಂಬ ವಾಸ್ತವಿಕ ದೃಷ್ಟಿಯೇ ಅರ್ಥಸಚಿವರ

ಅಭಿಪ್ರಾಯಕ್ಕೆ ಕಾರಣವಾಗಿರಬಹುದು. ನಾಜೂಕಿನ ಬಟ್ಟೆ, ಬೇಕಾಗಿಲ್ಲ; `ಖದ್ದರಿ'ನಂತ ಒರಟು

ಉಡುಪುಟ್ಟರೂ `ಖದರ್' ಇದ್ದರೆ ಸಾಕೆಂಬುದೇ ಅವರ ತೀರ್ಮಾನವಾಗಿರಬಹುದು.


(ಹಿರಿಯ ಪತ್ರಕರ್ತ ಹಾಗೂ ವೈಯೆನ್ಕೆ ಅವರ ಸ್ನೇಹಿತರಾಗಿದ್ದ ಹೆಚ್.ಆರ್.ನಾಗೇಶರಾವ್

ಅವರ ಸಂಗ್ರಹದಲ್ಲಿದ್ದ `ಪ್ರಜಾವಾಣಿ', ದಿನಾಂಕ 8ನೇ ಮಾರ್ಚಿ 1969ರ ಸಂಚಿಕೆಯಲ್ಲಿ

ಈ ಮೂರನೆಯ ಸಂಪಾದಕೀಯ ಪ್ರಕಟವಾಗಿದೆ)

ಹನಿಗವನ[ಬದಲಾಯಿಸಿ]

ವಿಶ್ವಾಮಿತ್ರ-ಮೇನಕೆ

ಡ್ಯಾನ್ಸ್ ಮಾಡಿದ್ದು ಏನಕೆ?

ಆಸ್ಕ್ ಮಿಸ್ಟರ್ ವೈಯೆನ್ಕೆ


ದಿನಾ

ಸಂಜೆ

ಮಧ್ಯಾನ್ಹ

ನಾ

ಕುಡೀತೀನಿ

ಮದ್ಯಾನಾ


ಪ್ರಕಟಿತ ಕೃತಿಗಳು[ಬದಲಾಯಿಸಿ]

  • ಬರಲಿದೆ, ಬರಲಿದೆ
  • ಮಾತು, ಮಾತು ಮಥಿಸಿ
  • ತೀರ್ಥರೂಪ
  • ವಂಡರ್ ಕಂಡರ್
  • ಕೊನೆ ಸಿಡಿ