ಲಕ್ಷ್ಮಣದಾಸ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಲಕ್ಷ್ಮಣದಾಸ್
ಜನನಮಲ್ಲಸಂದ್ರ, ತುಮಕೂರು, ಕರ್ನಾಟಕ, ಭಾರತ
ವೃತ್ತಿದ್ವಿತೀಯ ದರ್ಜೆ ಸಹಾಯಕ, ಕಥಾ ಕೀರ್ತನಕಾರ
ರಾಷ್ಟ್ರೀಯತೆಭಾರತೀಯ

ಲಕ್ಷ್ಮಣದಾಸ್ ಅವರು ಹರಿಕಥಾ ವಿದ್ವಾಂಸರು. ಇಲ್ಲಿಯವರೆಗೆ ಸಾವಿರಾರು ಹರಿಕಥೆಗಳನ್ನು ಮಾಡಿದ್ದಾರೆ. ಮದ್ರಾಸ್, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ಭೋಪಾಲ್ ಮತ್ತು ಅಮೆರಿಕದ ‘ಅಕ್ಕ’ ಸಮ್ಮೇಳನದಲ್ಲಿ ಹರಿಕಥೆ ಮಾಡಿದ್ದಾರೆ. ಪಂಪ, ರಾಮಕೃಷ್ಣ ಪರಮಹಂಸರು, ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್‌, ಗುಬ್ಬಿ ವೀರಣ್ಣ, ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಮೇಲೆ ‘ಜನಕಥಾ ಕೀರ್ತನೆ’ ಕಟ್ಟಿದ್ದಾರೆ. ಸದ್ಯ ‘ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್’ ಅಧ್ಯಕ್ಷರಾಗಿದ್ದಾರೆ.

ಬಾಲ್ಯ[ಬದಲಾಯಿಸಿ]

ತುಮಕೂರು ಹೊರವಲಯದ ಮಲ್ಲಸಂದ್ರದಲ್ಲಿ ಜನಿಸಿದರು. ಅಪ್ಪ ಸೀಬಯ್ಯ, ಅವ್ವ ಸೀಬಮ್ಮ. ಅವರದು ಕೆಳವರ್ಗದ ಕುಟುಂಬ. ತುಮಕೂರಿನ ಶಿರಾ ರಸ್ತೆಯಲ್ಲಿರುವ ಸೀಬಿ ನರಸಿಂಹ ಸ್ವಾಮಿ ಅವರ ಮನೆಯ ಕುಲದೇವರು. ಆ ಕಾರಣದಿಂದ ಅಪ್ಪ–ಅವ್ವನಿಗೆ ಆ ಹೆಸರು. ಅಪ್ಪ–ಅಮ್ಮನಿಗೆ ಇವರೊಬ್ಬರೇ ಮಗ. ಅವ್ವ ಜಾನಪದ ಗಾಯಕಿ. ಗೀತೆಗಳನ್ನು ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದಳು. 10ನೇ ವರುಷದಲ್ಲಿದ್ದಾಗ ಅವ್ವ ತೀರಿಕೊಂಡಳು. ಅವರ ದೊಡ್ಡಮ್ಮ ಸಾಕಿ, ಸಲುಹಿದಳು.

ಬಣ್ಣದ ಬದುಕು[ಬದಲಾಯಿಸಿ]

ಲಕ್ಷ್ಮಣದಾಸರು 1964ರಲ್ಲಿ ‘ಎಚ್ಚೆಮ್ಮ ನಾಯಕ’ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಕಾಲಿಟ್ಟರು. ಬಾಲ್ಯದಲ್ಲಿ ‘ಭಕ್ತ ಪ್ರಹ್ಲಾದ’, ‘ಕೃಷ್ಣಗಾರುಡಿ’ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿದರು. ಅವರಿಗೆ ನಾಟಕದ ಹುಚ್ಚು ತೀವ್ರವಾಗಿತ್ತು. ಹಾಡುಗಳನ್ನೂ ಹಾಡುತ್ತಿದ್ದರು. ಆ ಸಮಯದಲ್ಲಿ ರಂಗಭೂಮಿಯ ಪ್ರತಿಭಾನ್ವಿತ ನಟ ನಾರಾಯಣದಾಸರು ಮತ್ತು ಸಿ.ಎಸ್. ರಾಮನಾಥರಾವ್ ಅವರ ಗುರುಗಳಾಗಿದ್ದರು. ಸುಬ್ಬರಾಯರು, ಹೊನ್ನಪ್ಪ ಭಾಗವತರ್, ಮುಸುರಿ ಕೃಷ್ಣಮೂರ್ತಿ ಸೇರಿದಂತೆ ಅಂದಿನ ಗುಬ್ಬಿ ಕಂಪೆನಿಯ ಮತ್ತು ವೃತ್ತಿ ರಂಗಭೂಮಿಯ ಪ್ರಮುಖ ನಟರ ಸಂಪರ್ಕ ಲಭ್ಯವಾಯಿತು. ‘ಮಕ್ಮಲ್ ಟೋಪಿ’, ‘ಸಂಸಾರ ನೌಕೆ’, ‘ಸಂಪೂರ್ಣ ರಾಮಾಯಣ’, ‘ದಾನಶೂರ ಕರ್ಣ’, ‘ರಾಮಾಂಜನೇಯ ಯುದ್ಧ’, ‘ಸದಾರಮೆ’– ಹೀಗೆ ಹಲವು ಪ್ರಯೋಗಗಳಲ್ಲಿ ಮುಖ್ಯಪಾತ್ರಗಳಲ್ಲಿ ಬಣ್ಣ ಹಚ್ಚಿದರು.

ಕಥಾ ಕೀರ್ತನೆಯೆಡೆಗೆ[ಬದಲಾಯಿಸಿ]

ಗುರು ದೊರಕಿದ[ಬದಲಾಯಿಸಿ]

ಒಮ್ಮೆ ಒಂದು ನಾಟಕದಲ್ಲಿ ಲಕ್ಷ್ಮಣನ ಪಾತ್ರಧಾರಿ ಕಾರಣಾಂತರಗಳಿಂದ ಬಂದಿರಲಿಲ್ಲ. ರಾಮನಾಥ ರಾವ್ ಅವರ ಬಳಿ ಹಾರ್ಮೋನಿಯಂ ಅಭ್ಯಾಸ ಮಾಡುತ್ತಿದ್ದರು. ‘ನನ್ನ ಶಿಷ್ಯ ಒಬ್ಬ ಇದ್ದಾನೆ. ಲಕ್ಷ್ಮಣನ ಪಾತ್ರ ಮಾಡುತ್ತಾನೆ’ ಎಂದು ಅವರಿಗೆ ಆ ಪಾತ್ರ ನೀಡಿದರು. ಹರಿಕಥೆಯ ಮೇರು ಪರ್ವತ ಗುರುರಾಜಲು ನಾಯ್ಡು ಆ ನಾಟಕದಲ್ಲಿ ರಾಮನ ಪಾತ್ರಧಾರಿ. ನಾಟಕ ಮುಗಿಯಿತು. ‘ಏ ಬಾರಪ್ಪ ಇಲ್ಲಿ’ ಎಂದು ನಾಯ್ಡು ಅವರು ಲಕ್ಷ್ಮಣದಾಸರನ್ನು ಕರೆದರು. ಅಷ್ಟರಲ್ಲಾಗಲೇ ಅವರು ಕಾವ್ಯ, ಪದ್ಯಗಳ ಸಾರವನ್ನು ಗ್ರಹಿಸುವಷ್ಟು ಜ್ಞಾನ ಸಂಪಾದಿಸಿದ್ದರು. ಕುಮಾರವ್ಯಾಸನ ‘ಆದಿಪರ್ವ’ದ ಪದ್ಯಗಳು ಕಂಠಸ್ಥವಾಗಿದ್ದವು. ಕುವೆಂಪು ಅವರ ‘ಜಲಗಾರ’ ನಾಟಕವನ್ನು ಓದಿದ್ದರು. ಪಂಪನ ಕಾವ್ಯಗಳು ನಾಲಿಗೆಯಲ್ಲಿ ನಲಿಯುತ್ತಿದ್ದವು. ‘ನೀನು ಚೆನ್ನಾಗಿ ನಟಿಸುತ್ತೀಯಾ ಕಣಯ್ಯ. ರಂಗಭೂಮಿಯಿಂದ ಕಥಾಕೀರ್ತನೆಗೆ ಬಾ’ ಎಂದರು ಗುರುರಾಜಲು ನಾಯ್ಡು. ಅವರು ವಿಶ್ವಾಸದಿಂದ ಕರೆಯಲು ಕಾರಣ– ಹರಿಕಥೆ ಮಾಡುವವನಿಗೆ ನಟನೆಯೂ ಅಗತ್ಯವಾಗಿ ಬೇಕು. ರಂಗಭೂಮಿ ನಟನಿಗೆ ಕಥಾಕೀರ್ತನೆ ಸಿದ್ಧಿಸಿದರೆ ಅದು ಮತ್ತೊಂದು ಹೊಸ ಆಯಾಮ ಪಡೆಯಬಹುದು ಎನ್ನುವ ಅರಿವು ಗುರುಗಳಿಗೆ ಇತ್ತು. ಅದೇ ವೇಳೆ ಟಿ. ಭದ್ರಾಚಾರ್ ಲಕ್ಷ್ಮಣದಾಸರನ್ನು ನಾಯ್ಡು ಅವರ ಬಳಿ ಕರೆದುಕೊಂಡು ಹೋಗಿ ‘ಇವನಿಗೆ ಸಹಾಯ ಮಾಡಿ’ ಎಂದರು. ನಾಯ್ಡು ಅವರು ಬೆಂಗಳೂರಿನ ಬಳೇಪೇಟೆಯ ಅವರ ಮನೆಯಲ್ಲಿ ಬಿ.ಪಿ. ರಾಜಮ್ಮ, ಕನಕದಾಸ್ ಹಾಗೂ ಲಕ್ಷ್ಮಣದಾಸ್ ಸೇರಿದಂತೆ ಕೆಲವರಿಗೆ ಶನಿವಾರ ಮತ್ತು ಭಾನುವಾರಗಳಲ್ಲಿ ಕಥಾಕೀರ್ತನೆಯ ಬಗ್ಗೆ ಹೇಳಿಕೊಟ್ಟರು. ಉಪಕಥೆಗಳನ್ನು ಹೇಳುವುದು, ಸಭೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಅನುಸರಿಸುವ ಬಗೆ... ದನಿಯ ಏರಿಳಿತ, ಯಾವ ಸಮಯದಲ್ಲಿ ಹೇಗೆ ನಟಿಸಬೇಕು, ಮಾತನಾಡಬೇಕು– ಹೀಗೆ ಅವರ ಒಂದೊಂದು ಅನುಭವಗಳನ್ನು ಧಾರೆ ಎರೆದರು. ‘ದ್ವಯ–ದ್ವಂದ’ ಎನ್ನುವ ಪ್ರಯೋಗವನ್ನು ನಾಯ್ಡು ಅವರಿಂದ ತಿಳಿದುಕೊಂಡರು. ‘ದ್ವಯ–ದ್ವಂದ’ ಎಂದರೆ ಒಂದು ಪ್ರಸಂಗದಲ್ಲಿ ವಿಶ್ವಾಮಿತ್ರ ಮತ್ತು ಹರಿಶ್ಚಂದ್ರ ಇಬ್ಬರೂ ಇದ್ದಾರೆ. ಒಬ್ಬರು ವಿಶ್ವಾಮಿತ್ರನ ಕಥೆ ಹೇಳಿದರೆ, ಅದಕ್ಕೆ ಎದುರಾಗಿ ಇನ್ನೊಬ್ಬರು ಹರಿಶ್ಚಂದ್ರನ ಕಥೆ ಹೇಳಬೇಕು.

ಏಕಲವ್ಯ[ಬದಲಾಯಿಸಿ]

ಗುರುರಾಜಲು ನಾಯ್ಡು ಅವರು ಗುರು ಸ್ಥಾನದಲ್ಲಿ ಪ್ರತ್ಯಕ್ಷವಾಗಿ ನಿಲ್ಲುವ ಮುಂಚೆಯೇ ಲಕ್ಷ್ಮಣದಾಸರು ಅವರನ್ನು ಗುರುವಾಗಿ ಪರೋಕ್ಷವಾಗಿ ಸ್ವೀಕರಿಸಿದ್ದರು. ರಂಗಭೂಮಿ ನಟನಾಗಿದ್ದಾಗಲೇ ಮಾಲೂರು ಸೊಣ್ಣಪ್ಪ ದಾಸರು, ಭದ್ರಗಿರಿ ಅಚ್ಯುತದಾಸರು ಮತ್ತು ಗ್ರಾಮೀಣ ಭಾಗದ ಹರಿಕಥೆ ದಾಸರ ಕೀರ್ತನೆಗಳನ್ನು ಕೇಳಿ ಪ್ರಭಾವಿತನಾಗಿದ್ದರು. ಗುರುರಾಜಲು ನಾಯ್ಡು ಅವರು ಅರಸೀಕೆರೆಯ ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿ ವರ್ಷ 15 ದಿನ ಕಾರ್ಯಕ್ರಮ ನೀಡುತ್ತಿದ್ದರು. ತುಮಕೂರಿನ ಶ್ರೀರಾಮನಗರದಲ್ಲಿ ರಾಮನವಮಿಯಲ್ಲಿ, ತುರುವೇಕೆರೆಯಲ್ಲಿ ಹೀಗೆ ಅವರು ಕಾರ್ಯಕ್ರಮ ನೀಡುತ್ತಿದ್ದ ಸ್ಥಳಗಳಿಗೆ ತೆರಳುತ್ತಿದ್ದರು. ಬೆಳಗಿನವರೆಗೂ ಹರಿಕಥೆಯನ್ನು ಕೇಳಿಸಿಕೊಳ್ಳುತ್ತಿದ್ದರು. ಜತೆಗೆ ಅವರ ಶೈಲಿ, ದನಿಯ ಏರಿಳಿತಗಳನ್ನು ನೋಡಿಕೊಳ್ಳುತ್ತಿದ್ದರು. ಅವರ ಸಂಬಂಧ ದ್ರೋಣಾಚಾರ್ಯ ಮತ್ತು ಏಕಲವ್ಯನಿದ್ದಂತೆ. ಲಕ್ಷ್ಮಣದಾಸ್ ಗುರುಗಳ ಜೊತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿದರು. 1972ರಿಂದ 85ರವರೆಗೆ ಗುರುಗಳ ಜತೆ ಇದ್ದರು.

ಜನಕಥಾ ಕೀರ್ತನೆಗಳು[ಬದಲಾಯಿಸಿ]

‘ಜನಕಥಾ ಕೀರ್ತನಾ’ ಅವರ ಬದುಕಿನ ವಿಶಿಷ್ಟ ಘಟ್ಟ. ವಿದ್ವತ್ ವಲಯದಲ್ಲಿ ‘ಜನಕಥಾ ಕೀರ್ತನೆ’ಗೆ ಅಪಾರ ಪ್ರಶಂಸೆ ಮತ್ತು ಮನ್ನಣೆ ದೊರೆಯಿತು. ಪುರಾಣ ಕಥೆಗಳು, ರಾಮಾಯಣ, ಮಹಾಭಾರತಗಳಿಗೆ ಕಥಾ ಕೀರ್ತನೆ ಸೀಮಿತವಾಗಿತ್ತು. ನಮ್ಮ ನಡುವಿನ ಐತಿಹಾಸಿಕ ಮಹಾಪುರುಷರ ಜೀವನಗಾಥೆಯನ್ನು ಕೀರ್ತನೆಗಳಲ್ಲಿ ಕಟ್ಟುವುದೇ ‘ಜನಕಥಾ ಕೀರ್ತನೆ’ಯ ವೈಶಿಷ್ಟ್ಯ. ಪಂಪ, ರಾಮಕೃಷ್ಣ ಪರಮಹಂಸರು, ಗಾಂಧಿಜೀ, ಬಾಬಾ ಸಾಹೇಬ್ ಅಂಬೇಡ್ಕರ್‌, ಗುಬ್ಬಿ ವೀರಣ್ಣ, ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಮೇಲೆ ‘ಜನಕಥಾ ಕೀರ್ತನೆ’ ಕಟ್ಟಿದ್ದಾರೆ. ಇಲ್ಲಿ ಅವರ ಹುಟ್ಟು, ಸಾಧನೆ, ಬದುಕಿನ ಹಾದಿಯ ಪರಿಚಯ ಇರುತ್ತದೆ. ಅಂಬೇಡ್ಕರ್ ಅವರ ಬಗೆಗಿನ ‘ಜನಕಥಾ ಕೀರ್ತನೆ’ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ‘ಅಂಬೇಡ್ಕರ್‌ ಶುಭ ಚರಿತೆಗೆ ವಂದನೆ...’ ಎಂದು ಆ ಕಥೆ ಆರಂಭವಾಗುತ್ತದೆ. ಇಲ್ಲಿ ಪಾಳಿ ಭಾಷೆಯ ಪದ್ಯಗಳನ್ನು ಬಳಸಿಕೊಂಡಿದ್ದಾರೆ. ಅಂಬೇಡ್ಕರ್ ಅವರ ಇಂಗ್ಲಿಷ್‌ ಭಾಷಣದ ತುಣುಕುಗಳು, ಡಾ. ಸಿದ್ದಲಿಂಗಯ್ಯ ಅವರ ಪದ್ಯಗಳು ಕಥೆಯ ಭಾಗವಾಗಿವೆ.

ಜಾತಿ ಕಟ್ಟಳೆಯ ಸಂಕಟಗಳು[ಬದಲಾಯಿಸಿ]

ಕಥಾಕೀರ್ತನೆ ವೈದಿಕ ಪ್ರಭುತ್ವದ್ದು. ಲಕ್ಷ್ಮಣದಾಸರು ಕಥಾಕೀರ್ತನೆಗೆ ಬಂದ ಸಮಯದಲ್ಲಿ ಮಡಿವಂತಿಕೆ ತೀವ್ರವಾಗಿತ್ತು. ಬ್ರಾಹ್ಮಣರನ್ನು ಹೊರತುಪಡಿಸಿದರೆ ಬೇರೆ ಸಮುದಾಯದವರು ಕಥಾಕೀರ್ತನೆ ಮಾಡುವುದು ನಿಷಿದ್ಧ ಎನ್ನಲಾಗುತ್ತಿತ್ತು. ‘ಅಂಬೇಡ್ಕರ್ ಕಥೆ’ ಮಾಡಿದ ವೇಳೆ ರಾಮೋತ್ಸವಕ್ಕೆ ಅವರನ್ನು ಆಹ್ವಾನಿಸುವುದನ್ನೇ ಕೈಬಿಟ್ಟರು. ಎರಡು ಮೂರು ವರ್ಷ ಈ ಕಷ್ಟವನ್ನು ಅನುಭವಿಸಿದರು. ಆದರೆ ನಂತರದ ದಿನಗಳಲ್ಲಿ ಎಲ್ಲ ಸಮುದಾಯದವರೂ ಅವರನ್ನು ಗೌರವಿಸಿದರು, ಪ್ರೀತಿಸಿದರು.

ತುಮಕೂರು ಜಿಲ್ಲೆ ಕೊರಟಗೆರೆಯ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ 1971ರಲ್ಲಿ ಹರಿಕಥೆ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಅವರು ಮಾಡಿದ ಮೊದಲ ಹರಿಕಥೆ. ಇಲ್ಲಿಯವರೆಗೆ ಸಾವಿರಾರು ಹರಿಕಥೆಗಳನ್ನು ಮಾಡಿದ್ದಾರೆ. ಮದ್ರಾಸ್, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ಭೋಪಾಲ್ ಮತ್ತು ಅಮೆರಿಕದ ‘ಅಕ್ಕ’ ಸಮ್ಮೇಳನದಲ್ಲಿ ಹರಿಕಥೆ ಮಾಡಿದ್ದಾರೆ. ಸದ್ಯ ‘ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್’ ಅಧ್ಯಕ್ಷರಾಗಿದ್ದಾರೆ.

ಸರ್ಕಾರಿ ನೌಕರ[ಬದಲಾಯಿಸಿ]

ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡಿದರು. ಕೊರಟಗೆರೆಯಲ್ಲಿ ಸರ್ಕಾರಿ ವೃತ್ತಿ ಆರಂಭವಾಯಿತು. ತುಮಕೂರು, ನೆಲಮಂಗಲದ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದರು.