ರಾಷ್ಟ್ರ ಸೇವಿಕಾ ಸಮಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರ ಸೇವಿಕಾ ಸಮಿತಿ
ರಾಷ್ಟ್ರ ಸೇವಿಕಾ ಸಮಿತಿಯ ಲಾಂಛನ
ಸ್ಥಾಪನೆ೧೯೩೬ ವಿಜಯದಶಮಿ
ಸ್ಥಾಪಿಸಿದವರುಲಕ್ಷ್ಮಿಬಾಯಿ ಕೇಳಕರ
ಶೈಲಿರಾಷ್ಟ್ರೀಯತೆ
Legal statusಸಕ್ರಿಯ
ಪ್ರಧಾನ ಕಚೇರಿನಾಗಪುರ
ಪ್ರದೇಶ
ಭಾರತ
Methodನಿತ್ಶ ಶಾಖಾ
Membership
ಸ್ವಯಂಪ್ರೇರಿತ
ಅಧಿಕೃತ ಭಾಷೆ
ಸಂಸ್ಕೃತ, ಹಿಂದಿ
ಪ್ರಮುಖ್ ಸಂಚಾಲಿಕಾ
ವಿ.ಶಾಂತಕ್ಕ
ಅಂಗಸಂಸ್ಥೆಗಳುಸಂಘ ಪರಿವಾರ
ಅಧಿಕೃತ ಜಾಲತಾಣsevikasamiti.org

ರಾಷ್ಟ್ರ ಸೇವಿಕಾ ಸಮಿತಿಯು ರಾಷ್ಟ್ರೀಯ ದೃಷ್ಟಿಕೋನವುಳ್ಳ, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ, ಮಹಿಳಾ ಸದಸ್ಯರಿಗಾಗಿ ಸೀಮಿತವಾದ, ಮಹಿಳೆಯರನ್ನು ರಾಷ್ಟ್ರೀಯ ನಿರ್ಮಾಣದಲ್ಲಿ ತೊಡಗಿಸುವ ಸ್ವಯಂಸೇವಿ ಸಂಸ್ಥೆ[೧]. ವಿಶ್ಲೇಷಕರ ಪ್ರಕಾರ ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ವಿಭಾಗ. ಆದರೆ ಸೇವಿಕಾ ಸಂಸ್ಥೆಯ ಪ್ರಕಾರ ಅವರ ಸಂಸ್ಥೆ ಸಮಾನ ಧ್ಯೇಯೋದ್ದೇಶಗಳನ್ನು ಹೊಂದಿದ ಒಂದು ಸ್ವತಂತ್ರ, ಸಮಾನಾಂತರ ಸಂಸ್ಥೆ, ಹೀಗೆಯೇ ಇರಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಕೇಶವ ಬಲಿರಾಮ್ ಹೆಡಗೇವಾರ್ ಕೂಡ ಆಶಿಸಿದ್ದರು[೨]. ೨೦೧೯ರಲ್ಲಿ ಭಾರತ ದೇಶದಲ್ಲಿ ೫,೨೧೫ ಶಾಖೆಗಳು ನಡೆಯುತ್ತಿದೆ ಮತ್ತು ೧೦ ಲಕ್ಷ ಸಮಿತಿಯ ಸದಸ್ಯರಿರಬಹುದು ಎಂದು ಒಂದು ಅಂದಾಜು[೩].

ಇತಿಹಾಸ[ಬದಲಾಯಿಸಿ]

ವ ಲಕ್ಷ್ಮೀಬಾಯಿ ಕೇಳ್ಕರ್ (ಮೌಶೀಜಿ ಕೇಳ್ಕರ್)
ಮಹಿಳೆಯು ಮನೆ ಮತ್ತು ಸಮಾಜದ ಪ್ರೇರಕ ಶಕ್ತಿ.
ಆ ಶಕ್ತಿಯ ಜಾಗೃತಿಯಾಗದೆ, ಸಮಾಜವು ಬೆಳೆಯಲಾಗದು

ವ. ಲಕ್ಷ್ಮೀಬಾಯಿ ಕೇಳ್ಕರ್, ಆದ್ಯ ಪ್ರಮುಖ್ ಸಂಚಾಲಿಕಾ, ರಾಷ್ಟ್ರ ಸೇವಿಕಾ ಸಮಿತಿ.[೪]

೧೯೨೫ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. ಇದು ಕೇವಲ ಪುರುಷರಿಗೆ ಸೀಮಿತವಾದ ಸಂಘಟನೆ. ಆ ಸಮಯದಲ್ಲಿ ಹಲವು ಸಮಾಜಮುಖೀ ಮಹಿಳೆಯರು, ಮಹಿಳೆಯರಿಗಾಗಿಯೇ, ಮಹಿಳೆಯರ ನಡುವೆ ಕಾರ್ಯನಿರ್ವಹಿಸಲು, ರಾಷ್ಟ್ರೀಯ ದೃಷ್ಠಿಕೋನದ ಒಂದು ಸಂಘಟನೆಯ ಅವಶ್ಯಕತೆಯಿದೆ ಎಂದು ಮನಗಂಡರು. ೧೯೩೬ರಲ್ಲಿ ಲಕ್ಷ್ಮಿಬಾಯಿ ಕೇಳಕರ ರವರು ವರ್ಧಾದಲ್ಲಿ ವಿಜಯದಶಮಿಯ ದಿನ ರಾಷ್ಟ್ರ ಸೇವಿಕಾ ಸಮಿತಿಯನ್ನು ಪ್ರಾರಂಭಿಸಿದವರು[೫]. ಇನ್ನೊಂದು ಮೂಲದ ಪ್ರಕಾರ ವರ್ಧಾದಲ್ಲಿ ವಿಜಯದಶಮಿಯ ದಿನ ೧೯೩೫-೩೬ ರಲ್ಲಿ ಪ್ರಾರಂಭವಾಗಿದ್ದ ರಾಷ್ಟ್ರ ಸೇವಿಕಾ ಸಮಿತಿ ಮತ್ತು ರಾಷ್ಟ್ರೀಯ ಸ್ವಯಂಸೇವಿಕಾ ಸಂಘ, ಇವುಗಳ ಸಮಾಗಮದಿಂದ ರಾಷ್ಟ್ರ ಸೇವಿಕಾ ಸಮಿತಿ ಹುಟ್ಟಿತು. ಈ ಸಂಘಟನೆಯ ಹುಟ್ಟಿಗೆ ಕೇಶವ ಬಲಿರಾಮ್ ಹೆಡಗೇವಾರ್ ರವರ ಮಾರ್ಗದರ್ಶನವೂ ಕಾರಣ[೬].

ಈ ಸಂಸ್ಥೆಯ ಮುಖ್ಯಸ್ಥರನ್ನು (ಅಥವಾ ಅಧ್ಯಕ್ಷರನ್ನು) ಪ್ರಮುಖ್ ಸಂಚಾಲಿಕಾ ಎಂದು ಕರೆಯುತ್ತಾರೆ. ಮೊದಲ ಪ್ರಮುಖ್ ಸಂಚಾಲಿಕಾರಾಗಿ ಲಕ್ಷ್ಮೀಬಾಯಿ ಕೇಳ್ಕರ್ ಜವಾಬ್ದಾರಿ ನಿರ್ವಹಿಸಿದರು. ೧೯೭೬ರವರೆಗೂ ಲಕ್ಷ್ಮೀಬಾಯಿ ಕೇಳ್ಕರ್ ರವರೇ ಈ ಜವಾಬ್ದಾರಿ ನಿರ್ವಹಿಸಿದರು[೩]. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು, ಶ್ರೀರಾಮ ಚರಿತ್ರೆಯನ್ನು ಹೇಳುತ್ತಿದ್ದರು. ಅಲ್ಲಿ ಅವನು ಮನುಷ್ಯ ಪ್ರಯತ್ನದ ಮಹತ್ವವನ್ನು ಬಣ್ಣಿಸುತ್ತಿದ್ದರು. ಈ ಮೂಲಕ ಸಹಸ್ರಾರು ಹೊಸ ಕಾರ್ಯಕರ್ತೆಯರನ್ನು ರಾಷ್ಟ್ರ ಸೇವೆಗೆ ಅಣಿಗೊಳಿಸಿದರು [೭].

ಅವರ ನಿಧನದ ನಂತರ ೪ ಪ್ರಮುಖ್ ಸಂಚಾಲಿಕೆಯರು ಸಂಘಟನೆಯನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಮೂಲತ: ಕರ್ನಾಟಕದ, ಬೆಂಗಳೂರಿನ ನಿವಾಸಿಯಾದ ವಿ. ಶಾಂತ ಕುಮಾರಿ (ಶಾಂತಕ್ಕ) ಪ್ರಮುಖ್ ಸಂಚಾಲಿಕಾರಾಗಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ [೩].

ಪ್ರಮುಖ್ ಸಂಚಾಲಿಕಾರನ್ನು ವಂದನೀಯ ಎಂದು ಸಂಭೋದಿಸಲಾಗುತ್ತದೆ. ಲಕ್ಷ್ಮೀಬಾಯಿ ಕೇಳ್ಕರ್ ರವರನ್ನು ವಂದನೀಯ ಮೌಶೀಜೀ ಎಂದು ಸಂಭೋದಿಸಲಾಗುತ್ತದೆ ಮತ್ತು ಆದ್ಯ ಪ್ರಮುಖ್ ಸಂಚಾಲಿಕಾ ಎಂಬ ಗೌರವ ನೀಡಲಾಗುತ್ತದೆ[೭].

ಕಾರ್ಯ ಚಟುವಟಿಕೆ[ಬದಲಾಯಿಸಿ]

ರಾಷ್ಟ್ರ ಸೇವಿಕಾ ಸಮಿತಿಯು ಪ್ರಮುಖ್ ಸಂಚಾಲಿಕಾ ವಂದನೀಯ ಶಾಂತಕ್ಕ

ನಿತ್ಯ ಶಾಖಾ[ಬದಲಾಯಿಸಿ]

ಸಮಿತಿಯು ನಿತ್ಯ ಶಾಖೆಯನ್ನು ತನ್ನ ದೈನಿಕ ಚಟುವಟಿಕೆಯಾಗಿ ಸ್ವೀಕರಿಸಿದೆ. ನಿತ್ಯ ಒಂದು ನಿಶ್ಚಿತ ಸ್ಥಳದಲ್ಲಿ ವಿವಿಧ ವಯಸ್ಸಿನ ತರುಣಿಯರು/ಮಹಿಳೆಯರು ಸೇರಿ, ಆಟ (ಕಬ್ಬಡ್ಡಿ, ಖೋ-ಖೋ), ಯೋಗಾಸನ, ನಿಯುದ್ಧ (ಕರಾಟೆ ಮಾದರಿಯ ಸಮರ ಕಲೆ) ಮುಂತಾದ ಶಾರೀರಿಕ ಚಟುವಟಿಕೆ ಮತ್ತು ಅಮೃತ ವಚನ (ನುಡಿಮತ್ತು), ಹಾಡು, ಸುಭಾಷಿತ-ಶ್ಲೋಕ, ಕತೆ, ಚರ್ಚೆ, ಭೌದ್ಧಿಕ್ (ಭಾಷಣ) ಸೇರಿಧ ವಿವಿಧ ಭೌದ್ಧಿಕ ಚಟುವಟಿಕೆಗಳನ್ನು ಮಾಡುವರು [೫]. ಈಚೆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅವಶ್ಯಕವಾದ ಆತ್ಮ ರಕ್ಷಣೆಯ ಮಾರ್ಗಗಳನ್ನು ತಿಳಿಸಿಕೊಡಲಾಗುತ್ತದೆ[೮]. ಅನುಶಾಸನಕ್ಕೆ ಇಲ್ಲಿ ತುಂಬಾ ಮಹತ್ವವಿದೆ. ಭಗವಾ ಧ್ವಜವನ್ನು ತನ್ನ ಗುರುವಾಗಿ ಸ್ವೀಕರಿಸಿರುವ ಸಮಿತಿಯು ಎಲ್ಲಾ ಚಟುವಟಿಕೆಗಳನ್ನು ಈ ಧ್ವಜವನ್ನು ಸಾಕ್ಷಿಯಾಗಿಟ್ಟು ಮಾಡುತ್ತದೆ. ಪ್ರತಿ ದಿನದ ಶಾಖೆಯು ಸಮಿತಿಯ ಪ್ರಾರ್ಥನೆಯೊಂದಿಗೆ ಮುಕ್ತಾಯವಾಗುತ್ತದೆ. ನಿತ್ಯ ಮಾಡುವ ಕಾರಣ ಈ ಅಭ್ಯಾಸವು ವರ್ಷಾನುಗಟ್ಟಲೆ ಇರುತ್ತದೆ.

ಆದರ್ಶ ವ್ಯಕ್ತಿಗಳು[೪][ಬದಲಾಯಿಸಿ]

ಸಮಿತಿಯು ತನ್ನ ಆದರ್ಶವಾಗಿ ಮೂವರು ಪ್ರಭಾವಿ ಸ್ತ್ರೀಯರನ್ನು ನೋಡುತ್ತದೆ.

  • ಜೀಜಾಬಾಯಿ - ಜೀಜಾ ಮಾತೆ. ಛತ್ರಪತಿ ಶಿವಾಜಿ ಮಹಾರಾಜರ ಮಾತೆ ಮತ್ತು ಶಿವಾಜಿಯ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು. ಅವರನ್ನು ಮಾತೃತ್ವದ ಪ್ರತೀಕವಾಗಿ ತೆಗೆದುಕೊಳ್ಳಲಾಗಿದೆ.
  • ಅಹಲ್ಯಾ ಬಾಯಿ ಹೋಳ್ಕರ- ಅಹಲ್ಯಾ ಬಾಯಿ ಹೋಳ್ಕರ ಒಬ್ಬ ಕುಶಲ ಆಡಳಿತಗಾರ್ತಿ. ಅವರನ್ನು ಕರ್ತೃತ್ವದ ಪ್ರತೀಕವಾಗಿ ತೆಗೆದುಕೊಳ್ಳಲಾಗಿದೆ.
  • ಝಾನ್ಸಿ ರಾಣಿ ಲಕ್ಷ್ಮೀಬಾಯಿ- ಝಾನ್ಸಿ ರಾಣಿ ಲಕ್ಷ್ಮೀಬಾಯಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಖ್ಯಾತ ನಾಯಕ ಮಣಿಗಳಲ್ಲಿ ಒಬ್ಬರು. ಅವರನ್ನು ನೇರ್ತೃತ್ವದ ಪ್ರತೀಕವಾಗಿ ತೆಗೆದುಕೊಳ್ಳಲಾಗಿದೆ.

ಉತ್ಸವಗಳು[೫][ಬದಲಾಯಿಸಿ]

  • ಯುಗಾದಿ - ವರ್ಷಪ್ರತಿಪದ, ಚೈತ್ರ ಶುಕ್ಲ, ಪಾಡ್ಯ. ವರ್ಷದ ಆರಂಭವನ್ನು ಆಚರಿಸಲಾಗುತ್ತದೆ.
  • ಗುರು ಪೂರ್ಣಿಮೆ - ಆಷಾಢ ಹುಣ್ಣಿಮೆ - ವೇದವ್ಯಾಸರ ಜಯಂತಿ - ಈ ದಿನ ಸಮಿತಿಯ ಸದಸ್ಯರು ಭಗವಾ ಧ್ವಜವನ್ನು ಗುರುವೆಂದು ಪೂಜಿಸಿ (ಗುರು ಪೂಜೆ) ತಾವು ಕಾರ್ಯ ವಿಸ್ತಾರಕ್ಕಾಗಿ ಕೂಡಿಟ್ಟ ಹಣವನ್ನು ಅರ್ಪಣೆ ಮಾಡುತ್ತಾರೆ. ಇದನ್ನು ಗುರು ದಕ್ಷಿಣೆ ಎನ್ನುತ್ತಾರೆ.
  • ರಕ್ಷಾ ಬಂಧನ - ಶ್ರಾವಣ ಹುಣ್ಣಿಮೆ - ಈ ದಿನ ಸಮಿತಿಯ ಸದಸ್ಯರು ಒಬ್ಬರಿಗೊಬ್ಬರು ರಾಖಿಯನ್ನು (ರಕ್ಷೆ) ಕಟ್ಟುತ್ತಾರೆ. ಜೊತೆಗೆ ಸಮಾಜದಲ್ಲಿ ಸೈನಿಕರು, ಆರಕ್ಷಕರು, ಆರೋಗ್ಯಕರ್ಮಿಗಳು, ಸ್ವಚ್ಛತಾಕರ್ಮಿಗಳು ಸೇರಿ ಸಮಾಜದ ವಿವಿಧ ಜನರಲ್ಲಿ ಸಹೋದರತೆಯ ಭಾವ ಮೂಡಲು ರಾಖಿಯನ್ನು ಕಟ್ಟುತ್ತಾರೆ[೯].
  • ವಿಜಯ ದಶಮಿ - ಆಶ್ವಯುಜ ಶುದ್ಧ ದಶಮಿ - ಸಂಸ್ಥಾಪನಾ ದಿನ ಕೂಡ. ಈ ದಿನ ವಿವಿಧ ಊರುಗಳಲ್ಲಿ ಪಥಸಂಚಲನವನ್ನೂ (ಶಿಸ್ತುಬದ್ಧವಾಗಿ ಸಮಿತಿಯ ದಿರುಸಿನಲ್ಲಿ ಕೆಲ ದೂರ ಸಾಗುವುದು) ಆಚರಿಸಲಾಗುತ್ತದೆ[೧೦].
  • ಮಕರ ಸಂಕ್ರಾಂತಿ - ಸೌರ ಮಕರ ಮಾಸದ ಪ್ರಾರಂಭ.

ಶಿಬಿರ[ಬದಲಾಯಿಸಿ]

ತನ್ನ ಸಮಿತಿಯ ಸದಸ್ಯರ ಕಾರ್ಯಕ್ಷಮತೆ ಹೆಚ್ಚಿಸಲು ಸಮಿತಿಯು ಪ್ರತಿ ವರ್ಷ ಶಿಬಿರಗಳನ್ನು ಆಯೋಜಿಸುತ್ತದೆ. ಇವು ಎಲ್ಲಾ ಪ್ರಾಂತಗಳಲ್ಲಿ ಬೇಸಿಗೆಯ ಏಪ್ರಿಲ್, ಮೇ ತಿಂಗಳಲ್ಲಿ ೧೫ ದಿನಗಳ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ಶಿಕ್ಷಾವರ್ಗಗಳು ನಡೆಯುತ್ತದೆ. ಈ ಶಿಬಿರಗಳಲ್ಲಿ ೧೪ ವರ್ಷ ಮೇಲ್ಪಟ್ಟ ಹುಡುಗಿಯರು, ಯುವತಿಯರು, ಪ್ರೌಡ ಮಹಿಳೆಯರು ಭಾಗವಹಿಸುತ್ತಾರೆ. ಇದನ್ನು ಮುಗಿಸಿದ ಸಮಿತಿಯ ಕಾರ್ಯಕರ್ತೆಯರು ನಾಗಪುರದಲ್ಲಿ ತೃತೀಯ ವರ್ಷದ ಶಿಕ್ಷಾವರ್ಗಕ್ಕೆ ಹೋಗಲು ಅರ್ಹತೆ ಗಳಿಸುತ್ತಾರೆ [೫]. ಈ ಶಿಬಿರಗಳಲ್ಲಿ ನಿತ್ಯ ಶಾಖೆಯ ಚಟುವಟಿಕೆಗಳಲ್ಲದೆ, ಸೇವಿಕೆಯರು ಇನ್ನೂ ಹೆಚ್ಚು ಪರಿಣಿತಿ ಪಡೆಯಲು ನುರಿತ ಶಿಕ್ಷಕಿಯರ ಮಾರ್ಗದರ್ಶನವಿರುತ್ತದೆ. ದಂಡ, ಲೆಜೀಮ್ನಿ, ನಿಯುದ್ಧ ಮುಂತಾದ ಶಾರೀರಿಕ ಚಟುವಟಿಕೆ ಮತ್ತು ವಿಶೇಷ ಭೌದ್ಧಿಕ ಚಟುವಟಿಕೆಗಳು ಇರುತ್ತವೆ. ಜೊತೆಗೆ ವಿವಿಧ ದೇಸೀ ಆಟಗಳು ಕೂಡ. ಈ ಶಿಬಿರಗಳ ಮೂಲಕ ಸಮಿತಿಯ ಧ್ಯೇಯೋದ್ಧೇಶಗಳನ್ನು, ಕಾರ್ಯವಿಸ್ತರಿಸುವ ಮಾರ್ಗೋಪಾಯಗಳನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡಲಾಗುತ್ತದೆ [೧೧]. ಈ ಮೂಲಕ ಸೇವಿಕೆಯರನ್ನು ಸಮಾಜದಲ್ಲಿ ಇನ್ನು ಹೆಚ್ಚು ಶಾಖೆಗಳನ್ನು ತೆರೆಯಲು ತಯಾರು ಮಾಡಲಾಗುತ್ತದೆ ತನ್ಮೂಲಕ ಸಮಾಜದ ಸಂಘಟನೆ ಬಲಗೊಳಿಸಲು ಪ್ರಯತ್ನಿಸಲಾಗುತ್ತದೆ. ಅವರಿಗೆ ವೈಯಕ್ತಿಕವಾಗಿ ಬೆಳೆಯಲು ಆಗುತ್ತದೆ ಎಂದು ಯುವ ಸೇವಿಕೆಯರ ನಿಲುವು[೧೨].

೧೯೪೫ರಲ್ಲಿ ಮೊದಲ ರಾಷ್ಟ್ರ ಮಟ್ಟದ ಶಿಬಿರ ನಡೆಯಿತು[೭].

ಪ್ರಚಾರಿಕಾ[ಬದಲಾಯಿಸಿ]

ಸಮಿತಿಯ ಕಾರ್ಯ ವಿಸ್ತರಿಸಲು ಸಮಿತಿ ಯೋಚಿಸಿದ ಮಾರ್ಗ ಪ್ರಚಾರಿಕಾ ಪದ್ದತಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲ ಸಮಿತಿ ಕಾರ್ಯರ್ಕತೆಯರು ತಮ್ಮ ಪೂರ್ಣ ಅವಧಿಯನ್ನು ಸಮಿತಿಯ ಕಾರ್ಯಯೋಜನೆಗಳಿಗೆ ಮೀಸಲಿಡಲು ತಮ್ಮ ಮನೆ, ಪರಿವಾರದಿಂದ ಸಂಪೂರ್ಣವಾಗಿ ದೂರವಿದ್ದು ಸಮಿತಿಯ ವಿವಿಧ ಕಾರ್ಯ ಮಾಡುವುದು[೧೨]. ಈ ಸಮಯದಲ್ಲಿ ಕಡಿಮೆ ಖರ್ಚುವೆಚ್ಚ ಮತ್ತು ಅತ್ಯಂತ ಸಾಧಾರಣ ಜೀವನಶೈಲಿಯನ್ನು ಅನುಸರಿಸಿ ಸಮಿತಿ ನಿಶ್ಚಯಿಸಿದ ಕಾರ್ಯಕ್ಷೇತ್ರ ಮತ್ತು ಸ್ಥಳಗಳಲ್ಲಿ ಕಾರ್ಯ ವಿಸ್ತರಿಸುವರು. ಕೆಲವರು ಜೀವನಪರ್ಯಂತ ಮದುವೆಯಾಗದೇ ಸಂಘಟನೆಯ ಕೆಲಸದಲ್ಲಿ ನಿರತರಾಗಿರುವರು. ಇತರರು ಕೆಲ ವರ್ಷಗಳು ಪ್ರಚಾರಿಕಾರಾಗಿದ್ದು ತದನಂತರ ಗೃಹಸ್ತರಾಗಿಯೂ ಸಮಿತಿಯ ಕಾರ್ಯದ ಜೊತೆಗೆ ಗುರುತಿಸಿಕೊಳ್ಳುವರು. ೨೦೧೦ರ ಸುಮಾರಿಗೆ ಸುಮಾರು ೫೦ ಪ್ರಚಾರಿಕಾರಿದ್ದರು[೫].

ಸೇವಾ ಕಾರ್ಯ[ಬದಲಾಯಿಸಿ]

ಪ್ರಾರಂಭದಿಂದಲೂ ಸಮಿತಿಯು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸದ್ಯದ ಸಂಖ್ಯೆಗಳ ಪ್ರಕಾರ ೪೭೫ ಸೇವಾ ಯೋಜನೆಗಳನ್ನು ನಡೆಸುತ್ತಿದೆ. ನಾಗಪುರ, ಗುಜರಾತ, ದಿಲ್ಲಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಆಯಾ ಕ್ಷೇತ್ರಕ್ಕೆ ಬೇಕಾದ ಸೇವಾ ಕಾರ್ಯ ನಡೆಯುತ್ತದೆ. ಶಿಶುವಿಹಾರ, ವಸತಿಗೃಹ, ವಾಚನಾಲಯ, ಆರೋಗ್ಯ ಕೇಂದ್ರ, ಉದ್ಯೋಗ ಕೇಂದ್ರ, ಹೊಲಿಗೆ, ಕಂಪ್ಯೂಟರ್ ಶಿಕ್ಷಣ ಇತ್ಯಾದಿ ಸೇವಾ ಚಡುವಟಿಕೆಗಳಲ್ಲಿ ತನ್ನ ಕಾರ್ಯಕರ್ತೆಯರ ಮೂಲಕ ನಡೆಸುತ್ತದೆ. ಇದಲ್ಲದೆ ಪ್ರಾಕೃತಿಕ ವಿಕೋಪಗಳು ಘಟಿಸಿದಾಗ ಸೂಕ್ತ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತದೆ[೫]. ಭೋಪಾಲ್ ಅನಿಲ ದುರಂತ, ಲಾತೂರ್ ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳು ಘಟಿಸಿದಾಗ ಸಮಿತಿಯ ಕಾರ್ಯಕರ್ತೆಯರು ಸೂಕ್ತ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು[೪][೭].

ಕೋವಿಡ್-೧೯ ಕಾರಣ ಭಾರತವೂ ಹಲವು ದೇಶಗಳೂ ತೊಂದರೆಯಲ್ಲಿವೆ. ಈ ಸಮಯದಲ್ಲಿ ಸಮಿತಿಯು ಸೇವಾ ಚಟುವಟಿಕೆಗಳಲ್ಲಿ ತನ್ನ ಸದಸ್ಯರನ್ನು ಭಾರತದ ಹಲವು ನಗರ, ಗ್ರಾಮಗಳಲ್ಲಿಯೂ ತೊಡಗಿಸಿತು. ಊಟದ ಕಿಟ್, ಅಡುಗೆ, ಮಹಿಳೆಯರಿಗೆ ಅವರ ಅವಶ್ಯಕತೆಗಳಿಗೆ ಅನುಕೂಲಕರವಾದ ಕಿಟ್, ಗರ್ಭಿಣಿಯರಿಗೆ ಪ್ರತ್ಯೇಕ ಪೋಷಕಾಂಶಯುಕ್ತ ಆಹಾರದ ಕಿಟ್ ಮುಂತಾದವುಗಳು. ಜೊತೆಗೆ ಈ ಸಮಯದಲ್ಲಿ ಪರಿವಾರಗಳಲ್ಲಿ ಹಲವು ಮಾನಸಿಕ ತೊಂದರೆಗಳು ಉದ್ಭವಿಸುವ ಕಾರಣ, ಆಪ್ತ ಸಲಹೆ ಮತ್ತು ಸಮಾಲೋಚನೆ ಕೊಡುವ ಕಾರ್ಯಲ್ಲಿ ನಿರತವಾಗಿದೆ. ಇದಲ್ಲದೆ, ೧೦ ಲಕ್ಷ ಮಾಸ್ಕ ತಯ್ಯಾರಿಸಿ ಹಂಚುವುದು ಇತರೆ ಉಪಯುಕ್ತ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ೨೨ ಲಕ್ಷ ಹಣ ಸಂಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೋವಿಡ್-೧೯ ಸಮಯದಲ್ಲಿ ಶುರು ಮಾಡಿದ PM Cares Fund ಪರಿಹಾರ ನಿಧಿಗೆ ಕೂಡ ಅರ್ಪಿಸಿದೆ[೧೩].

ವಿದೇಶಗಳಲ್ಲಿ[ಬದಲಾಯಿಸಿ]

ಅಮೇರಿಕ, ಯುನೈಟೆಡ್ ಕಿಂಗ್‌ಡಂ ಸೇರಿ ೧೦ ದೇಶಗಳಲ್ಲಿ ಸಮಿತಿಯು ಕಾರ್ಯನಿರತವಾಗಿದೆ[೩].

ಪ್ರಮುಖ್ ಸಂಚಾಲಿಕಾರ ಪಟ್ಟಿ[೧೪][ಬದಲಾಯಿಸಿ]

ಕ್ರ.ಸಂ ಹೆಸರು ಹಿಂದಿ/ಮರಾಠಿಯಲ್ಲಿ ಹೆಸರು ಜವಾಬ್ದಾರಿ ವರ್ಷಗಳು ಟಿಪ್ಪಣಿಗಳು
ಲಕ್ಷ್ಮಿಬಾಯಿ ಕೇಳಕರ मावशी लक्ष्मीबाई केळकर ೧೯೩೬ - ೧೯೭೮ ಸೇವಿಕಾ ಸಮಿತಿ ಪ್ರಾರಂಭಿಸಿದವರು. ಆದ್ಯ ಪ್ರಮುಖ್ ಸಂಚಾಲಿಕಾ. ಮೌಸಿ ಕೇಳ್ಕರ್ (मावशी केळकर) ಎಂದೂ ಸಂಭೋದಿಸುತ್ತಾರೆ
ಸರಸ್ವತಿ ಆಪಟೆ सरस्वती आपटे ೧೯೭೮ - ೧೯೯೪ ತಾಯಿ ಆಪಟೆ (ताई आपटे) ಎಂದು ಕೂಡ ಸಂಭೋದಿಸುತ್ತಿದ್ದರು
ಉಶಾ-ತಾಯಿ ಚಾಟಿ उषाताई चाटी ೧೯೯೪ - ೨೦೦೬ ೧೯೨೭-೨೦೧೭.
ಪ್ರಮೀಳಾ-ತಾಯಿ ಮೇಡೆ प्रमिलाताई मेढे ೨೦೦೬ - ೨೦೧೨ ಪ್ರಸ್ತುತ ಸಲಹಾಗಾರರಾಗಿದ್ದಾರೆ
ವಿ. ಶಾಂತ ಕುಮಾರಿ शान्तक्का ೨೦೧೨ - ೧೯೫೨ರಲ್ಲಿ ಜನನ.

ಸಮಿತಿಯೊಂದಿಗೆ ಗುರುತಿಸಿಕೊಂಡ ರಾಜಕಾರಣಿಗಳು[ಬದಲಾಯಿಸಿ]

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸ್ವರ್ಗೀಯ ಸುಷ್ಮಾ ಸ್ವರಾಜ್[೧೫], ಲೋಕಸಭೆಯ ೧೬ನೇ ಸ್ಪೀಕರ್ ಸುಮಿತ್ರಾ ಮಹಾಜನ್ ಮುಂತಾದ ಮಹಿಳಾ ರಾಜಕಾರಣಿಗಳು ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು [೧೬]. ಈ ಕಾರಣ ಸಮಿತಿಯ ಮಹಿಳಾ ಪರ ನಿಲುವುಗಳು ಮತ್ತು ಆಶಯಗಳು ಸರ್ಕಾರದ ಆದ್ಯತಾ ಪಟ್ಟಿಯಲ್ಲಿ ತಮ್ಮ ಸ್ಥಾನ ಪಡೆದಿವೆ[೧೫].

ವಿವಾದಗಳು[ಬದಲಾಯಿಸಿ]

ಸಮಿತಿಯು ಪ್ರಚಾರದಿಂದ ವಿಮುಖವಾಗಿ ತನ್ನ ಕೆಲಸ ಮಾಡುತ್ತದೆ. ಆ ಕಾರಣಕ್ಕೆ ಸಾಮಾನ್ಯವಾಗಿ ವಿವಾದಗಳಿಂದ ದೂರವಾಗಿದೆ. ಆದರೂ ಕೆಲ ಸಲ ಮಾತೃತ್ವಕ್ಕೆ ಒತ್ತು ನೀಡುವ ಕಾರಣ ಆಧುನಿಕ ಸ್ತ್ರೀವಾದಿಗಳು ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವ ಗುಂಪುಗಳಿಂದ ಪುರೋಗಾಮಿ, ಆಧುನಿಕತೆಗೆ ದೂರ ಎಂಬಿತ್ಯಾದಿ ಟೀಕೆಗಳಿಗೆ ಆಹಾರವಾಗಿದ್ದಿದೆ [೧೨]. ಆದರೆ ಸಾಮಾನ್ಯವಾಗಿ ಸಮಿತಿಯು ಟೀಕೆಗಳಿಗೆ ಹೆಚ್ಚು ಪ್ರತಿಕ್ರಯಿಸಿ ಮಾತನ್ನು ಬೆಳೆಸುವುದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. "ಲಕ್ಷ್ಮೀಬಾಯಿ ಕೇಳ್ಕರ್ ಜೀವನ ಚರಿತ್ರೆ - लक्ष्मीबाई केलकर जीवनी". jivani.org (in Hindi). Archived from the original on 22 May 2020. Retrieved 22 May 2020.{{cite web}}: CS1 maint: unrecognized language (link)
  2. "೧೧೦ನೇ ಜನ್ಮದಿನದ ಪ್ರಯುಕ್ತ ಮೌಶೀಜಿಯವರ ಸಂಸ್ಮರಣೆ-Remembering Moushiji Kelkar, founder Pramukh Sanchalika of Rashtra Sevika Samiti on her 110th Birth Anniversary". samvada.org (in English). ವಿ.ಎಸ್.ಕೆ. 6 Jul 2015. Archived from the original on 17 Feb 2019. Retrieved 22 May 2020.{{cite web}}: CS1 maint: unrecognized language (link)
  3. ೩.೦ ೩.೧ ೩.೨ ೩.೩ ತನೇಜಾ, ರಾಕೇಶ (8 Oct 2019). "RSS यानी राष्ट्रीय स्वयंसेवक संघ को जानते हैं तो फिर राष्ट्र सेविका समिति को भी जानिए." (in Hindi). Zee news. Archived from the original on 8 ಡಿಸೆಂಬರ್ 2019. Retrieved 21 May 2020.{{cite news}}: CS1 maint: bot: original URL status unknown (link) CS1 maint: unrecognized language (link)
  4. ೪.೦ ೪.೧ ೪.೨ ಗಾಂಧಿ, ಪ್ರೀತಿ. "ಮಾತೃಶಕ್ತಿ ಮತ್ತು ಆರ್.ಎಸ್.ಎಸ್ - ರಾಷ್ಟ್ರ ಸೇವಿಕಾ ಸಮಿತಿಯ ಸ್ಪೂರ್ತಿದಾಯಕ ಕತೆ - Matrushakti and RSS: The Inspiring Saga of Rashtra Sevika Samiti ". organiser.org. ಭಾರತ ಪ್ರಕಾಶನ, ನವದೆಹಲಿ. Archived from the original on 19 Mar 2020. Retrieved 21 May 2020.
  5. ೫.೦ ೫.೧ ೫.೨ ೫.೩ ೫.೪ ೫.೫ "ರಾಷ್ಟ್ರಸೇವಿಕಾ ಸಮಿತಿ". samvada.org. ಸಂವಾದ. Archived from the original on 12 Sep 2017. Retrieved 21 May 2020.
  6. ಸಿನ್ಹಾ, ರಾಕೇಶ್. ಆಧುನಿಕ ಭಾರತದ ನಿರ್ಮಾತೃಗಳು ಡಾ ಕೇಶವ ಬಲಿರಾಮ್ ಹೆಡಗೆವಾರ್ (ಮೊದಲ ed.). ಸಾಮಾಜಿಕ ದರ್ಶನ: ಸಾಮಾಜಿಕ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. p. ೨೧೯. ISBN 9788123028149.
  7. ೭.೦ ೭.೧ ೭.೨ ೭.೩ "ಮಹಿಳಾ ಜಾಗರಣದ ಅಗ್ರ ಪ್ರತಿಪಾದಕಿ - नारी जागरण की अग्रदूत : लक्ष्मीबाई केलकर (27 नवम्बर पुण्यदिवस विशेष)". www.krantidoot.in (in Hindi). Archived from the original (html) on 11 Jun 2016. Retrieved 21 May 2020.{{cite web}}: CS1 maint: unrecognized language (link)
  8. ಶುಕ್ಲ, ವಿನೋದ್ ಕುಮಾರ್ (30 Nov 2018). "ರಾಷ್ಟ್ರ ಸೇವಿಕಾ ಸಮಿತಿಯು ಸದಸ್ಯೆಯರಿಗೆ ಸ್ವರಕ್ಷಣೆ ತರಭೇತಿ ಕೊಡುತ್ತಿದೆ-Rashtra Sevika Samiti providing self defence training to girls in Mumbai slums". oneindia (in English). Archived from the original (html) on 20 May 2019. Retrieved 22 May 2020. {{cite web}}: |archive-date= / |archive-url= timestamp mismatch; 20 ಸೆಪ್ಟೆಂಬರ್ 2019 suggested (help)CS1 maint: unrecognized language (link)
  9. "ಸೈನಿಕರೊಂದಿಗೆ ರಕ್ಷಾ ಬಂಧನ-Raksha Bandhan with Soldiers" (in English). organiser. 28 Aug 2019. Archived from the original (html) on 22 May 2020. Retrieved 22 May 2020.{{cite news}}: CS1 maint: unrecognized language (link)
  10. "ರಾಷ್ಟ್ರ ಸೇವಿಕಾ ಸಮಿತಿಗೆ 84: ಬೆಂಗಳೂರಿನಲ್ಲಿ ವಿಜಯದಶಮಿ ಉತ್ಸವ ಆಚರಣೆ". samvada.org. ವಿ.ಎಸ್.ಕೆ. 19 Oct 2019. Archived from the original on 17 May 2020. Retrieved 22 May 2020.
  11. "ಬೆಂಗಳೂರು: ರಾಷ್ಟ್ರ ಸೇವಿಕಾ ಸಮಿತಿ ಶಿಬಿರ ಮುಕ್ತಾಯ". kannada.oneindia.com. oneindia.com. 12 May 2014. Archived from the original on 21 May 2020. Retrieved 21 May 2020.
  12. ೧೨.೦ ೧೨.೧ ೧೨.೨ ಐಯ್ಯಂಗಾರ್, ರಾಧಿಕಾ (28 Jun 2020). "ಈ ಯುವತಿ ಸಮಿತಿಯ ಶಿಬಿರಕ್ಕೆ ಏಕೆ ಹೋದಳು-Why did a young woman join a RSS women's wing camp?" (in Engish). Indianexpress. Archived from the original on 28 Aug 2020. Retrieved 22 May 2020. {{cite news}}: |archive-date= / |archive-url= timestamp mismatch; 28 ಆಗಸ್ಟ್ 2019 suggested (help)CS1 maint: unrecognized language (link)
  13. "ರಾಷ್ಟ್ರ ಸೇವಿಕಾ ಸಮಿತಿಯ ಸದಸ್ಯರು ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾರೆ, ಕಾಡಿನೊಳಗೆ ಹೋಗಿ ಊಟದ ಸಾಮಗ್ರಿ ಕೊಡುತ್ತಿದ್ದಾರೆ - राष्ट्र सेविका समिति की बहनें महिलाओं की कर रहीं मदद, घोर जंगलों के बीच जाकर पहुंचा रहीं राशन" (in Hindi). news24x7.in. news24x7.in. 7 May 2020. Archived from the original (html) on 21 May 2020. Retrieved 21 May 2020.{{cite news}}: CS1 maint: unrecognized language (link)
  14. ಶರ್ಮಾ, ಪೂಜಾ (8 Dec 2016). "ಕೆಲಸವೋ, ಮನೆಯೋ - ಆಧುನಿಕ ನಾರಿಗಾಗಿ ಇಲ್ಲಿದೆ ಸಮಿತಿಯ ಉತ್ತರ - At home and work, RSS has a model for the new-age woman" (in English). Hindustan Times. Archived from the original (html) on 9 Aug 2017. Retrieved 22 May 2020.{{cite news}}: CS1 maint: unrecognized language (link)
  15. ೧೫.೦ ೧೫.೧ "ಮೌಶೀ ಕೇಳ್ಕರ್ ರವರ ಆಶಯಗಳ ಅನುಗುಣವಾಗಿ ಸರ್ಕಾರದ ಮಹಿಳಾ ಸಬಲೀಕರಣ - Women empowerment policies of govt reflect Mavshi Kelkar's vision: EAM Sushma Swaraj". newsbharati.com (in English). 28 Oct 2020. Archived from the original on 22 May 2020. Retrieved 22 May 2020.{{cite web}}: CS1 maint: unrecognized language (link)
  16. ಸಿಂಹ, ಸರೋಜ್ (13 Oct 2017). "ಆರ್.ಎಸ್.ಎಸ್ನಲ್ಲಿ ಮಹಿಳೆಯರು ಯಾವ ಉಡುಪು ಧರಿಸುತ್ತಾರೆ - आरएसएस में महिलाएं क्या पहनती हैं?" (in Hindi). ಬಿ.ಬಿ.ಸಿ. ಬಿ.ಬಿ.ಸಿ. Archived from the original (html) on 17 Jul 2019. Retrieved 21 May 2020.{{cite news}}: CS1 maint: unrecognized language (link)

ಹೊರಗಿನ ಸಂಪರ್ಕಗಳು[ಬದಲಾಯಿಸಿ]