ರಜನಿ ಶೆಟ್ಟಿ
ಮೂಕ ಪ್ರಾಣಿಗಳ ಸಂರಕ್ಷಕಿ ಎಂದೇ ಹೆಸರುಮಾಡಿರುವ ಶ್ರೀಮತಿ ರಜನಿ ಶೆಟ್ಟಿಯವರಿಗೆ ಪ್ರಾಣಿ -ಪಕ್ಷಿಗಳ ಬಗ್ಗೆ ಅಪಾರ ಪ್ರೇಮ.ಅದರಲ್ಲೂ ಅಸಹಾಯಕ ಪ್ರಾಣಿ -ಪಕ್ಷಿಗಳ ಮೇಲೆ ಅತೀವ ಒಲವು.
ಜನನ
[ಬದಲಾಯಿಸಿ]ಮುಂಬೈಯಲ್ಲಿ ವಾಸವಾಗಿದ್ದ ರಘುರಾಮ ಹಾಗೂ ರತ್ನ ಎಂಬ ದಂಪತಿಯರ ಇಬ್ಬರು ಮಕ್ಕಳಲ್ಲಿ ಹಿರಿಯವರಾಗಿ ೧೯೭೯ ರಲ್ಲಿ ರಜನಿಯವರು ಜನಿಸಿದರು. ಹತ್ತನೆಯ ತರಗತಿಯ ತನಕ ಇವರು ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ. ಬಾಲ್ಯದಲ್ಲಿಯೇ ಪ್ರಾಣಿಗಳೆಂದರೆ ಪ್ರೇಮ. ಶ್ವಾನ- ಬೆಕ್ಕುಗಳಿಗೆ ಬಿಸ್ಕತ್ತು ನೀಡುತ್ತಿದ್ದರು. ೧೯೯೭ ರಲ್ಲಿ ಮಂಗಳೂರು ನಿವಾಸಿ ದಾಮೋದರ ಶೆಟ್ಟಿ ಎಂಬವರನ್ನು ವಿವಾಹವಾದ ಬಳಿಕ ಮಂಗಳೂರಿಗೆ ಬಂದು ನೆಲೆಸಿದರು.
ಪ್ರಾಣಿ ಪ್ರೇಮ
[ಬದಲಾಯಿಸಿ]ಮದುವೆಯಾಗಿ ಮಂಗಳೂರಿಗೆ ಬಂದ ನಂತರ ತಾನು ವಾಸಿಸುತ್ತಿದ್ದ ಮನೆಯ ಅಕ್ಕಪಕ್ಕಗಳಲ್ಲಿರುತ್ತಿದ್ದ ಬೀದಿನಾಯಿಗಳತ್ತ ಅವರ ದೃಷ್ಟಿ ಹರಿಯಿತು. ಮನೆಯ ಬಳಿ ಅಡ್ಡಾಡುತ್ತಿದ್ದ ನಾಯಿಗಳಿಗೆ ಆಹಾರ ನೀಡಲಾರಂಭಿಸಿದರು. ನಂತರ ಪಕ್ಕದ ಬೀದಿಗಳಲ್ಲಿರುತ್ತಿದ್ದ ನಾಯಿಗಳಿಗೂ ತಿನಿಸು ಕೊಡಲಾರಂಭಮಾಡಿದರು. ಹೀಗೆಯೇ ದಿನದಿಂದ ದಿನಕ್ಕೆ ಅವರು ಆಹಾರ ನೀಡುವ ಪ್ರಾಣಿಗಳ ಸಂಖ್ಯೆಯೂ, ಕಾರ್ಯಕ್ಷೇತ್ರವೂ ವೃದ್ಧಿಯಾಗತೊಡಗಿತು. ಹೀಗೆ ಆಹಾರ ನೀಡುವುದು ಮಾತ್ರವಲ್ಲದೆ,ಕಸದ ತೊಟ್ಟಿಯಲ್ಲಿಯೋ, ರಸ್ತೆ ಬದಿಯಲ್ಲಿಯೋ ಅನಾಥವಾಗಿ, ಅಪಘಾತದಿಂದಾಗಿ ಅಥವಾ ಇನ್ನಾವುದೋ ಕಾರಣದಿಂದಾಗಿ ಗಾಯಗೊಂಡ ಅಥವಾ ಅಂಗಾಂಗ ಊನಗೊಂಡ ಪ್ರಾಣಿಗಳನ್ನು ಮನೆಗೆ ತಂದು, ಅವುಗಳಿಗೆ ಚಿಕಿತ್ಸೆ ನೀಡಿ ಸಾಕತೊಡಗಿದರು. ದಿನ ನಿತ್ಯವೂ ಎನ್ನುವಂತೆ ಅವುಗಳಿಗೆ ಚಿಕಿತ್ಸೆ ನೀಡಿ ಚಾಕರಿ ಮಾಡಲಾರಂಭಿಸಿದರು.
ಇವರ ಈ ಕೆಲಸ ತಿಳಿಯುತ್ತಿದ್ದಂತೆ ಪ್ರಾಣಿಗಳ ರಕ್ಷಣೆಗಾಗಿ ಬಹಳಷ್ಟು ದೂರವಾಣಿ ಕರೆಗಳು ಆಸುಪಾಸಿನಿಂದಲೂ, ದೂರದೂರುಗಳಿಂದಲೂ ಬರತೊಡಗಿದವು. ದೂರವಾಣಿ ಕರೆಗಳಿಗೆ ಸ್ಪಂದಿಸಿ, ಇವರು ಆಯಾಯ ಪ್ರದೇಶಗಳಿಗೆ ಹೋಗಿ ಅಸಹಾಯಕ ಸ್ಥಿತಿಯಲ್ಲಿರುತ್ತಿದ್ದ ಪ್ರಾಣಿಗಳನ್ನು ತರುವುದು, ಅವುಗಳ ಸೇವೆ ಮಾಡುವುದು ರೂಢಿಯಾಗತೊಡಗಿತು.[೧] ಶ್ವಾನಗಳು ಮಾತ್ರವಲ್ಲದೆ ಬೆಕ್ಕುಗಳು, ಹಾವುಗಳು, ಅಳಿಲುಗಳು, ಆಮೆಗಳು ಯಾವುದೇ ಮೂಕ ಪ್ರಾಣಿಗಳನ್ನು ರಕ್ಷಿಸುವುದು-ತಂದು ಸಾಕುವುದು ದಿನನಿತ್ಯದ ಕಾಯಕವಾಯಿತು.
ಸುಮಾರು ಹತ್ತು- ಹದಿನೈದು ವರ್ಷಗಳಷ್ಟು ಕಾಲ ತಮ್ಮ ಸ್ವಂತ ಹಣವನ್ನಷ್ಟೇ ಬಳಸುತ್ತಿದ್ದರು. ಮಾಧ್ಯಮಗಳಿಂದ-ಪ್ರಚಾರಗಳಿಂದ ದೂರವಿದ್ದರು. ೨೦೧೯ ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ Namma tv- Dance Mummy Dance-4 ರಲ್ಲಿ ಭಾಗವಹಿಸಿ, ನಾಲ್ಕೈದು ಸುತ್ತುಗಳನ್ನು ದಾಟಿ Quarter Final ತನಕ ಬಂದಿದ್ದರು. ಆಗ ಇವರು ಮಾಡುತ್ತಿದ್ದ ಈ ಸೇವೆ ಬೆಳಕಿಗೆ ಬಂದಿತು.ದಾನಿಗಳು ನೆರವು ನೀಡಲು ಮುಂದೆ ಬಂದರು. ಆ ಸಮಯದಲ್ಲಿ ಇವರು ಆಹಾರ ನೀಡುತ್ತಿದ್ದ ಶ್ವಾನಗಳ ಸಂಖ್ಯೆಯೂ ೫೦೦ ರ ಆಸುಪಾಸಿನಲ್ಲಿತ್ತು.
ಕೊರೋನ ಆರಂಭವಾದ ನಂತರ ಲಾಕ್ ಡೌನ್ ವೇಳೆಯಲ್ಲಿ ತನಗೂ ತನ್ನ ಪತಿಗೂ ಕೆಲಸಕ್ಕೂ ತೊಂದರೆಯಾಗಿತ್ತು. ಜನರ ಓಡಾಟವೂ ಕಮ್ಮಿಯಿರುತ್ತಿದ್ದ ಕಾರಣ ಬೀದಿನಾಯಿಗಳಿಗೆ ಸಾಮಾನ್ಯವಾಗಿ ಸಿಗುತ್ತಿದ್ದ ಆಹಾರವೂ ಸಿಗುತ್ತಿರಲಿಲ್ಲ. ಹಲವರ ಸಹಕಾರವನ್ನು ಯಾಚಿಸಿ, ಆ ಸಮಯದಲ್ಲಿಯೂ ಆಹಾರ ನೀಡಿದ್ದಾರೆ. ಯಾವುದೇ ಪ್ರಾಣಿಯಾಗಲಿ ಸಂಕಷ್ಟ ಪರಿಸ್ಥಿತಿಯಲ್ಲಿದ್ದರೆ ಸಹಾಯ ಮಾಡಲು ಅಲ್ಲಿಗೆ ಧಾವಿಸುತ್ತಾರೆ. ಅದೊಂದು ದಿನ ಮಂಗಳೂರಿನ ದೇರೇಬೈಲ್ ಕೊಂಚಾಡಿಯಲ್ಲಿರುವ ೩೦ ಅಡಿ ಆಳದ ಹಳೆಯ ಬಾವಿಯೊಂದಕ್ಕೆ ಬೆಕ್ಕೊಂದು ಬಿದ್ದು ದಿನವಿಡೀ ಬಾವಿಯೊಳಗೆ ಆಹಾರವಿಲ್ಲದೇ ಇದ್ದು ಯಾರಿಂದಲೂ ರಕ್ಷಿಸಲು ಸಾಧ್ಯವಾಗದಿದ್ದಾಗ ಸ್ಥಳೀಯರು ರಜನಿಯವರನ್ನು ಸಂಪರ್ಕಿಸಿದ್ದರು. ಇವರು ಸ್ಥಳೀಯರ ಸಹಕಾರದಿಂದ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ್ದರು.[೨]ಅಂತೆಯೇ ಮಂಗಳೂರಿನ ಬಿರುವೆರ್ ಕುಡ್ಲ ಮೈದಾನದ ಆವರಣವಿಲ್ಲದಿದ್ದ ಬಾವಿಯೊಂದಕ್ಕೆ ನಾಯಿಯೊಂದು ಬಿದ್ದಿದ್ದಾಗ ಅದನ್ನು ರಕ್ಷಿಸಿದ್ದರು.[೩] ಅದೇ ರೀತಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಂಗಳೂರಿನ ಬಿಜೈ ಯ ಬಳಿ ೫೦ ಅಡಿ ಆಳದ ಬಾವಿಗೆ ಶ್ವಾನವೊಂದು ಬಿದ್ದಿದ್ದಾಗ ಇವರಿಗೆ ದೂರವಾಣಿ ಕರೆಯೊಂದು ಬಂದಿತ್ತು. ತನ್ನ ಗಂಡ-ಮಗಳೊಡನೆ ಅಲ್ಲಿಗೆ ಧಾವಿಸಿದ್ದ ರಜನಿಯವರು ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗಿಳಿದು, ರಾತ್ರೆಯಿಡೀ ನೀರಿನಲ್ಲಿ ಈಜಾಡಿ ನಡುಗುತ್ತಿದ್ದ ನಾಯಿಯ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದರು.[೪] ಅದೆಷ್ಟೋ ಪ್ರಾಣಿಗಳನ್ನು ಈ ರೀತಿ ರಕ್ಷಿಸಿದ್ದರೂ ಇಷ್ಟು ಆಳದ ಬಾವಿಗಿಳಿದು ಪ್ರಾಣಿಯೊಂದಕ್ಕೆ ಪುನರ್ಜನ್ಮವಿತ್ತಿದ್ದು ಬಹಳ ನೆಮ್ಮದಿಯನ್ನು ತಂದುಕೊಟ್ಟಿತ್ತಂತೆ.
ಮನೆಯಲ್ಲಿ
[ಬದಲಾಯಿಸಿ]೧೯೯೭ ರಲ್ಲಿ ಮದುವೆಯಾಗಿ ಬಂದ ನಂತರ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ.ಪತಿ ಚಾಲಕ ವೃತ್ತಿಯವರು.ಮೂವರು ಮಕ್ಕಳು.ಗಂಡನ ಸಂಬಳವೇ ಜೀವನಾಧಾರ.ಒಂದೆರಡು ಮನೆಗಳಿಗೆ ತಾನೂ ಮನೆಕೆಲಸಕ್ಕೆ ಹೋಗುತ್ತಾರೆ. ಕೆಲವೊಮ್ಮೆ ಸಿರಿವಂತರ ಮನೆಯ ಶ್ವಾನಗಳ ಸ್ನಾನವನ್ನು ಮಾಡಿಸುತ್ತಾರೆ.
ತನ್ನ ಮನೆಯಲ್ಲಿ ೨೯ ಶ್ವಾನಗಳು, ೧೫ ಬೆಕ್ಕುಗಳು, ೪ ಹದ್ದುಗಳು ೧ ಆಮೆಯನ್ನು ಸಾಕುತ್ತಿದ್ದಾರೆ. ಎಲ್ಲವೂ ರಸ್ತೆ ಬದಿಯಲ್ಲಿಯೋ,ಇನ್ನೆಲ್ಲೋ ಯಾರ್ಯಾರೋ ಬಿಟ್ಟು ಹೋದವುಗಳೇ ಅನಾಥವಾಗಿದ್ದವುಗಳೇ . ಹೆಚ್ಚಿನವುಗಳು ವಿಕಲಾಂಗ ಪ್ರಾಣಿಗಳು.[೫] ಕಣ್ಣು ಕಾಣದ ನಾಯಿ- ಬೆಕ್ಕುಗಳಿವೆ,ಎದ್ದು ನಡೆದಾಡಲಾರದಂತಹ,ವಯಸ್ಸಾದಂತಹ, ಗಾಯಗೊಂಡಂತಹ ನಾಯಿಗಳಿವೆ. ಶ್ವಾನಗಳಿಗೆ ಸ್ನಾನವನ್ನು ಮಾಡಿಸುತ್ತಾರೆ.ಅವುಗಳು ಮಲಗುವ ಬಟ್ಟೆಗಳನ್ನು ತೊಳೆದಿಟ್ಟು ಶುಚಿಯಾಗಿಟ್ಟುಕೊಳ್ಳುತ್ತಾರೆ.ಕಾಲಕಾಲಕ್ಕೆ ಔಷಧಿಗಳು- ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಾರೆ. ತಾನು ಸಾಕುತ್ತಿರುವ ಎಲ್ಲ ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದಾರೆ. ಹಾರಲಸಾಧ್ಯವಾದಂತಹ ಈ ಹದ್ದುಗಳ ಆರೈಕೆ ಮಾಡುತ್ತಿದ್ದಾರೆ. ಅವುಗಳು ಸ್ವಸಾಮರ್ಥ್ಯದಿಂದ ಹಾರುವಂತಾದರೆ ಬಿಟ್ಟುಬಿಡುತ್ತಾರೆ. ಸಾಧ್ಯವಾಗದಿದ್ದರೆ ತಾನೇ ಸಲಹುತ್ತಾರೆ.ಶ್ವಾನಗಳು ತಮ್ಮ ತಮ್ಮೊಳಗಾಗಲೀ, ಶ್ವಾನ-ಬೆಕ್ಕುಗಳಾಗಲೀ ಒಂದಕ್ಕೊಂದು ಜಗಳವಾಡದೇ ಇಲ್ಲಿ ಜೊತೆ ಜೊತೆಯಾಗಿಯೇ ಜೀವಿಸುತ್ತವೆ.ಮಂಗಳೂರಿನ ಬಲ್ಲಾಳ್ ಭಾಗ್ ಸಮೀಪ, ತನ್ನ ಪುಟ್ಟ ಬಾಡಿಗೆ ಮನೆಯಲ್ಲಿ ತನ್ನ ಸಂಸಾರದ ಜೊತೆಗೇ ಮನೆಯೊಳಗಡೆಯೇ ಈ ಎಲ್ಲಾ ನಾಯಿ-ಬೆಕ್ಕುಗಳನ್ನು ತನ್ನ ಸಂಸಾರದಂತೆಯೇ ನೋಡಿಕೊಳ್ಳುತ್ತಿದ್ದಾರೆ. ತನ್ನ ಪತಿಯ ಹಾಗೂ ಮಕ್ಕಳ ಸಂಪೂರ್ಣ ಸಹಕಾರವಿರುವುದರಿಂದ ಇದು ಸಾಧ್ಯ ಎನ್ನುತ್ತಾರೆ.
ದಿನಚರಿ
[ಬದಲಾಯಿಸಿ]ತನ್ನ ಮನೆಯಲ್ಲಿರುವ ಪ್ರಾಣಿಗಳಿಗಲ್ಲದೆ ಸುಮಾರು ೫೦೦ ರಷ್ಟು ಬೀದಿನಾಯಿಗಳಿಗೆ ನಿತ್ಯವೂ ಊಟ ಹಾಕುತ್ತಾರೆ. ಬೆಳಗ್ಗಿನ ತನ್ನ ಕಾರ್ಯದ ನಂತರ ಪ್ರಾಣಿಗಳ ಊಟದ ತಯಾರಿಗೆ ತೊಡಗುತ್ತಾರೆ.
ದಿನ ನಿತ್ಯವೊಂದರ ಐವತ್ತು ಕಿಲೋವಿನಷ್ಟು ಅಕ್ಕಿಯ ಅನ್ನವನ್ನು ತಯಾರಿಸುತ್ತಾರೆ.ಇದಕ್ಕೆ ಮಾಂಸದಂಗಡಿಗಳಿಂದ ತಂದ ಅಳಿದುಳಿದ ಮಾಂಸದ ತುಂಡುಗಳನ್ನು, ಸ್ವಲ್ಪ ಅರಸಿನ ಪುಡಿ ಹಾಗೂ ಉಪ್ಪನ್ನು ಹಾಕಿ ದೊಡ್ಡ ಪಾತ್ರೆಯಲ್ಲಿ ಬೇಯಿಸುತ್ತಾರೆ.ಕತ್ತಲಾದ ನಂತರ ತನ್ನ ಪತಿ ಅಥವಾ ಮಗಳೊಂದಿಗೆ ಹಲವು ಕಡೆಗಳಿಗೆ ಹೋಗಿ ಶ್ವಾನಗಳಿಗೆ ಆಹಾರ ನೀಡಲು ಶುರು ಮಾಡುತ್ತಾರೆ. ಸ್ಟೇಟ್ ಬ್ಯಾಂಕ್, ಬಂದರು, ಡಿ.ಸಿ.ಆಫೀಸ್, ಬಿಜೈ, ಲಾಲ್ ಭಾಗ್,ಲೇಡಿಹಿಲ್, ಮಣ್ಣಗುಡ್ಡೆ, ಪಿ.ವಿ.ಎಸ್, ಚಿಲಿಂಬಿ ಹೀಗೆ ಹಲವು ಕಡೆಗಳಲ್ಲಿ ಆಹಾರ ನೀಡಿ ಮನೆ ತಲುಪುವಾಗ ನಡುರಾತ್ರೆ ಗಂಟೆ ಎರಡಾಗುತ್ತದೆ. ಬಂದ ನಂತರ ಮನೆಯ ನಾಯಿಗಳ ಉಪಚಾರ ಮಾಡಿ ತನ್ನ ಕೆಲಸಗಳನ್ನು ಪೂರೈಸಿ ಚಾಪೆ ಬಿಡಿಸಿ ಮಲಗಿದರೆ ತನ್ನ ಸುತ್ತಲೂ ಮನೆಯಲ್ಲಿರುವ ನಾಯಿ ಬೆಕ್ಕುಗಳೂ ಮಲಗಿ ನಿದ್ರಿಸುತ್ತವೆ. ಇದು ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳಿಂದ ಮಾಡುತ್ತಿರುವ ಇವರ ಕಾಯಕ.ಬೆಳಗ್ಗೆಯೂ ತನ್ನ ಮನೆ ಹತ್ತಿರದ ಕೆಲವು ಕಡೆಗಳಲ್ಲಿ ಊಟ ಹಾಕಿ ಬರುತ್ತಾರೆ.ನಿದ್ರಿಸುವುದು ಮೂರ್ನಾಲ್ಕು ಗಂಟೆಯಷ್ಟಾದರೂ ಪ್ರಾಣಿಗಳ ಹೊಟ್ಟೆ ತುಂಭಿಸಿ ಬಂದು ಮಾಡುವ ನೆಮ್ಮದಿಯ ನಿದ್ರೆ ತೃಪ್ತಿ ನೀಡುತ್ತದೆ ಎನ್ನುತ್ತಾರೆ.
ಇರುವುದು ಪುಟ್ಟ ಬಾಡಿಗೆ ಮನೆಯಲ್ಲಿ. ಆರ್ಥಿಕ ಪರಿಸ್ಥಿತಿಯೂ ಅಷ್ಟಕ್ಕಷ್ಟೆ.ಆದರೂ ಬೀದಿನಾಯಿಗಳ ಹಾಗೂ ಮನೆಯಲ್ಲಿರುವ ನಾಯಿ-ಬೆಕ್ಕು ಮುಂತಾದ ಪ್ರಾಣಿಗಳ ಹೊಟ್ಟೆಗೆ ಕಮ್ಮಿಯಾಗದಂತೆ ಕಷ್ಟಪಟ್ಟು ಆಹಾರ ಹೊಂದಿಸುತ್ತಾರೆ. ದಾನಿಗಳು,ಪ್ರಾಣಿಪ್ರಿಯರು, ಕೆಲವೊಂದು ಸಂಘ-ಸಂಸ್ಥೆಗಳು ಹಣ ಅಥವಾ ಅಕ್ಕಿಯನ್ನು ನೀಡಿ ಸಹಕರಿಸಿದರೂ ಒಮ್ಮೊಮ್ಮೆ ಏನೂ ಸಿಗದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.ಕಳೆದ ಲಾಕ್ ಡೌನ್ ಸಮಯದಲ್ಲಿಯೂ ಪ್ರಾಣಿಗಳಿಗೆ ಆಹಾರ ನೀಡಲು ಪರದಾಡಿರುತ್ತಾರೆ.
ಕನಸು
[ಬದಲಾಯಿಸಿ]ಅವರ ಈ ಪ್ರಾಣಿ ಪ್ರೇಮ- ರಕ್ಷಣೆ- ಸೇವೆಯನ್ನು ಗುರುತಿಸಿ, ಲಯನ್ಸ್ ಕ್ಲಬ್- ರೋಟರಿ ಕ್ಲಬ್ ಮಂಗಳೂರು,ಬಂಟರ ಸಂಘ ಜೆಪ್ಪುಮಂಗಳೂರು, ಫ್ರೆಂಡ್ಸ್ ಮೊಗವೀರ, ಹೀಗೆ ಮಂಗಳೂರಿನ ಕೆಲವು ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಸರಕಾರದಿಂದ ಏನಾದರೂ ಸಹಾಯವೋ ಸ್ವಲ್ಪ ಸ್ಥಳವೇನಾದರೋ ಸಿಕ್ಕಿದರೆ ಶ್ವಾನಗಳಿಗೆ ಆಶ್ರಯತಾಣವನ್ನು ನಿರ್ಮಿಸಿ,ಅವುಗಳಿಗೆ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವ ಇಚ್ಛೆ ಇವರಲ್ಲಿದೆ.
ಬಾಹ್ಯಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://www.prajavani.net/district/dakshina-kannada/rajani-rescued-a-cat-783657.html
- ↑ https://www.vijayavani.net/brave-lady-rescues-kitten-from-deep-well-in-mangalore/
- ↑ https://www.newindianexpress.com/states/karnataka/2020/feb/01/40-year-old-woman-wins-hearts-after-rescuing-dog-from-deep-well-in-mangaluru-2097416.html
- ↑ https://www.daijiworld.com/news/newsDisplay?newsID=823073
- ↑ "ಆರ್ಕೈವ್ ನಕಲು". Archived from the original on 2021-09-24. Retrieved 2021-09-25.