ಮೈಸೂರಿನ ಸ್ವರ್ಣ ಸಿಂಹಾಸನ
ಸ್ವರ್ಣ ಅಥವಾ ಚಿನ್ನದ ಸಿಂಹಾಸನ ಅಥವಾ ರತ್ನ ಸಿಂಹಾಸನ ಎಂದು ಕರೆಯಲ್ಪಡುವ ಮೈಸೂರಿನಲ್ಲಿರುವ ಸಿಂಹಾಸನವು ಮೈಸೂರಿನ ಮಹಾರಾಜರ ರಾಜಸಿಂಹಾಸನವಾಗಿದೆ.ಇದು ಮೈಸೂರು ಅರಮನೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಿಂಹಾಸನವನ್ನು ದಸರಾ ಹಬ್ಬದ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ, ಇತರೆ ದಿನಗಳಲ್ಲಿ ಇದನ್ನು ಅರಮನೆಯ ಸುರಕ್ಷಿತ ಲಾಕರ್ ಗಳಲ್ಲಿ ಇಟ್ಟು ಭದ್ರಪಡಿಸಲಾಗುತ್ತದೆ.[೧]
ಸಿಂಹಾಸನ
[ಬದಲಾಯಿಸಿ]ಸಿಂಹಾಸನವು ಮುಖ್ಯ ಆಸನ, ಮುಖ್ಯ ಆಸನಕ್ಕೆ ಹೋಗುಲು ಮೆಟ್ಟಿಲುಗಳು ಮತ್ತು ಮುಖ್ಯ ಆಸನದ ಮೇಲ್ಭಾಗದಲ್ಲಿ ಚಿನ್ನದ ಛತ್ರಿಯನ್ನು ಒಳಗೊಂಡಿದೆ. ಸಿಂಹಾಸನವನ್ನು ಅಂಜೂರದ ಮರದಿಂದ ಕೆತ್ತಲಾಗಿದೆ ಮತ್ತು ಇದನ್ನು ದಂತ ರೂಪಗಳಿಂದ ಅಲಂಕರಿಸಲಾಗಿದೆ. "ಸ್ವರ್ಣಕಲಾ ನಿಪುಣ" ಸಿಂಗಣ್ಣಾಚಾರ್ಯ ಈ ಸಿಂಹಾಸನವನ್ನು ಚಿನ್ನಾಭರಣಗಳು, ಬೆಲೆ ಬಾಳುವ ರತ್ನಗಳು ಮತ್ತು ಬೆಳ್ಳಿಯ ಪ್ರತಿಮೆಗಳಿಂದ ಶೃಂಗರಿಸಿದ್ದಾರೆ. ಸಿಂಹಾಸನದಲ್ಲಿ ಮುಖ್ಯಆಸನಕ್ಕೆ ಹೋಗುವ ಮೆಟ್ಟಿಲುಗಳ ಎರಡೂ ಭಾಗಗಳು ಸಾಲಭಂಜಿಕೆಯರೆಂದು ಕರೆಯಲ್ಪಡುವ ಸ್ತ್ರೀ ಆಕೃತಿಗಳಿಂದ ಅಲಂಕರಿಸಲ್ಪಟ್ಟಿವೆ. ಸಿಂಹಾಸನದ ನಾಲ್ಕು ಬದಿಗಳನ್ನು ಬಳ್ಳಿಯ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಸಿಂಹಾಸನದ ಪೂರ್ವದಲ್ಲಿ ಆನೆಗಳು, ದಕ್ಷಿಣದಲ್ಲಿ ಕುದುರೆಗಳು, ಪಶ್ಚಿಮದಲ್ಲಿ ಸೈನಿಕರು ಮತ್ತು ಉತ್ತರದಲ್ಲಿ ರಥಗಳ ಕೆತ್ತನೆಗಳಿಗೆ ಮತ್ತು ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಮಹೇಶ್ವರ ಮತ್ತು ಮಧ್ಯದಲ್ಲಿ ವಿಷ್ಣು ಎಂಬಂತೆ ತ್ರಿಮೂರ್ತಿಗಳ ಕೆತ್ತನೆಗಳಿವೆ. ಈ ಸಿಂಹಾಸನವನ್ನು ಕೂರ್ಮಾಸನ ಎಂದೂ ಕರೆಯಲಾಗುತ್ತದೆ, ಇದರ ಮುಖ್ಯ ಆಸನದ ಹೊದಿಕೆ ಮತ್ತು ದಿಂಬುಗಳನ್ನು ಅಮೂಲ್ಯವಾದ ರತ್ನಗಳಿಂದ ಅಲಂಕೃತವಾದ ಬಟ್ಟೆಯಿಂದ ತಯಾರಿಸಲಾಗಿದೆ. ಸಿಂಹಾಸನದ ಕೈ ಹಿಡಿಕೆಗಳು ಅರ್ಧ ಆನೆ ಮತ್ತು ಅರ್ಧ ಸಿಂಹದ ಆಕಾರದಲ್ಲಿ ಮಾಡಲ್ಪಟ್ಟಿದೆ. ಆಸನದ ಹಿಂಭಾಗದಲ್ಲಿ ಪಕ್ಷಿಗಳ, ಸಿಂಹಗಳ ಮತ್ತು ಹೂವುಗಳ ಕಲಾಕೃತಿಗಳಿವೆ. ಆಸನದ ಮಧ್ಯಭಾಗದಲ್ಲಿ ಚಾಮುಂಡೇಶ್ವರಿ ದೇವಿಯಿದ್ದು, ಎರಡೂ ಬದಿಗಳಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ರಚನೆಗಳು ಹಾಗೂ ಇವರ ಸುತ್ತಾ ಅಷ್ಟ ದಿಕ್ಪಾಲಕರ (8 ದಿಕ್ಕುಗಳ ದೇವರುಗಳು) ಕೆತ್ತನೆಗಳನ್ನು ಕಾಣಬಹುದು. ಸಿಂಹಾಸನದ ಕಾಲುಗಳು ನೆಗೆಯುತ್ತಿರುವ ಕುದುರೆಗಳ ಆಕಾರದಂತೆ ಕೆತ್ತಲಾಗಿದೆ. ಆಸನವನ್ನು ದಕ್ಷಿಣದಲ್ಲಿ ಬ್ರಹ್ಮ, ಉತ್ತರಕ್ಕೆ ಶಿವ ಮತ್ತು ಮಧ್ಯದಲ್ಲಿ ವಿಷ್ಣುವಿನ ರೂಪಗಳಿಂದ ಅಲಂಕರಿಸಲಾಗಿದೆ. ಸಿಂಹಗಳನ್ನು ವಿಜಯದ ಸಂಕೇತವಾಗಿ ಇರಿಸಲಾಗಿದೆ. ಆಸನದ 3 ಅಂಚುಗಳಲ್ಲಿ 2 ಕುದುರೆಗಳು, 2 ಹುಲಿಗಳು ಮತ್ತು 4 ಹಂಸಗಳ ಕೆತ್ತನೆಗಳನ್ನು ಕಾಣಬಹುದು. ಆಸನದ ಒದಗುವ ಮುಂಬದಿಯಲ್ಲಿ ಮೈಸೂರು ಅರಸರ ರಾಜ ಲಾಂಛನವಾದ ಗಂಡ ಬೇರುಂಡವನ್ನು ಕೆತ್ತಲಾಗಿದೆ ಮತ್ತು ಅದರ ಕೆಳಗೆ "ಸತ್ಯಮೇವೂದರಾಹಂ" ಎಂದರೆ "ನಾನು ಯಾವಾಗಲೂ ಸತ್ಯವನ್ನು ಎತ್ತಿಹಿಡಿಯುತ್ತೇನೆ" ಎಂಬ ನುಡಿ ಬರೆಹವಿದೆ. ರಾಜ ಆಸನವು 2.25 ಮೀ ಎತ್ತರದಲ್ಲಿದೆ ಮತ್ತು ಅದರ ಮೇಲೆ ರಾಜಮನೆತನದ ಛತ್ರಿ ಇಡೀ ರಾಜ ಆಸನಕ್ಕೆ ನೆರಳು ನೀಡುತ್ತದೆ. ರಾಜಮನೆತನದ ಛತ್ರಿಯ ಮೇಲೆ ಮೈಸೂರು ರಾಜನಿಗೆ ಆಶೀರ್ವಾದ ಎಂದು ಬರೆಯಲಾಗಿದೆ. ರಾಜ ಛತ್ರಿಯು ರತ್ನಗಳಿಂದ ಅಲಂಕೃತವಾಗಿದೆ. ರಾಜಮನೆತನದ ಛತ್ರಿಯ ಮೇಲ್ಭಾಗದಲ್ಲಿ 'ಹ್ಯೂಮಾ, ಎಂಬ ಆಕಾಶ ಪಕ್ಷಿ ಇದೆ, ಮತ್ತು ಕೊಕ್ಕಿನ ಮೇಲೆ ಪಚ್ಚೆ ರತ್ನವನ್ನು ಹೊಂದಿರುವ ಹಂಸವಿದೆ. ಹಕ್ಕಿಯ ನೆರಳು ಯಾರ ಮೇಲೆ ಬೀಳುತ್ತದೆ, ಅವರು ಯಾವಾಗಲೂ ರಾಜ ಕಿರೀಟವನ್ನು ಧರಿಸುತ್ತಾರೆ ಎಂಬ ನಂಬಕೆಯಿದೆ. [೨]
ಕೆತ್ತನೆಗಳು
[ಬದಲಾಯಿಸಿ]ಛತ್ರಿಯ ಅಂಚಿನಲ್ಲಿ ಕೆತ್ತಲಾದ "ಶ್ಲೋಕಗಳು" ಮೂರನೇ ಕೃಷ್ಣರಾಜ ಒಡೆಯರ್ ಅವರನ್ನು ಸಂಬೋಧಿಸಿ ಬರೆಯಲ್ಪಟ್ಟಿವೆ ಮತ್ತು ರಾಜವಂಶಸ್ಥರ ತಲೆಮಾರುಗಳಿಂದ ಸಿಂಹಾಸನವು ಹೇಗೆ ಒಬ್ಬ ರಾಜನಿಂದ ಇನ್ನೊಬ್ಬ ರಾಜನಿಗೆ ಹಸ್ತಾಂತರವಾಗುತ್ತದೆ ಬಂದಿದೆ ಎಂಬ ಬಗ್ಗೆ ಉಲ್ಲೇಖಿಸುತ್ತವೆ. "ಶ್ಲೋಕ"ದ ಸಂಕ್ಷಿಪ್ತ ಅನುವಾದವು ಕೃಷ್ಣರಾಜ ಒಡೆಯರ್ ಅವರನ್ನು ಈ ರೀತಿ ಸಂಭೋಧಿಸುತ್ತದೆ. "ಭೂಮಿಯ ಪ್ರಭು ಮತ್ತು ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಉಜ್ವಲವಾಗಿರುವ ಸುಪ್ರಸಿದ್ಧ ಚಾಮರಾಜನ ಮಗ, ನೀನೇ ಕರ್ನಾಟಕ ರತ್ನ ಸಿಂಹಾಸನದ ಪ್ರಭು... ಮತ್ತು ನಿನ್ನ ಪೂರ್ವಜರಿಂದ ಬಂದಿರುವ ಈ ಚಿನ್ನದ ಸಿಂಹಾಸನದ ಚಿನ್ನದ ಛತ್ರಿ ಇಡೀ ಜಗತ್ತನ್ನು ಬೆರಗುಗೊಳಿಸುತ್ತದೆ.
ಇತಿಹಾಸ
[ಬದಲಾಯಿಸಿ]ಐತಿಹಾಸಿಕ ಹಿನ್ನೆಲೆಯ ಪ್ರಕಾರ, ಸಿಂಹಾಸನವು ಮಹಾಭಾರತದ ಕಾಲದಲ್ಲಿ ಪಾಂಡವರಿಗೆ ಸೇರಿದ್ದಾಗಿದ್ದು, ಹಸ್ತಿನಾಪುರದಲ್ಲಿತ್ತು ಎನ್ನಲಾಗುತ್ತದೆ. .ಕಂಪಿಲರಾಯನು ಈ ಸಿಂಹಾಸನವನ್ನು ಹಸ್ತಿನಾಪುರದಿಂದ ಈಗಿನ ಆಂಧ್ರಪ್ರದೇಶದಲ್ಲಿರುವ ಪೆನುಗೊಂಡಕ್ಕೆ ತಂದು, ಅಲ್ಲಿ ಅದನ್ನು ಭೂಗತವಾಗಿ ಇಡುತ್ತಾನೆ. ನಂತರ ಕ್ರಿ.ಶ. 1336 ರಲ್ಲಿ, ವಿಜಯನಗರ ಸಾಮ್ರಾಜ್ಯ ರಾಜರ ರಾಜಪ್ರಭುತ್ವದ ಪ್ರಾಚಾರ್ಯರಾದ ವಿದ್ಯಾರಣ್ಯರು, ಸಿಂಹಾಸನವನ್ನು ಸಮಾಧಿ ಮಾಡಿದ ಸ್ಥಳವನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಲ್ಲಿ ಒಬ್ಬರಾದ ಒಂದನೇಹರಿಹರನಿಗೆ ತೋರಿಸುತ್ತಾರೆ, ಮತ್ತು ಸಿಂಹಾಸನವನ್ನು ಭೂಗರ್ಭದಿಂದ ಹೊರತರುತ್ತಾರೆ. ಈ ಸಿಂಹಾಸನವನ್ನು ವಿಜಯನಗರ ರಾಜರು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಆನೆಗೊಂದಿಯಲ್ಲಿ ಬಳಸುತ್ತಿದ್ದರು. ತದನಂತರ 17 ನೇ ಶತಮಾನದ ಆರಂಭದಲ್ಲಿ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ರಾಜ್ಯಪಾಲರು ಸಿಂಹಾಸನವನ್ನು ಪಡೆದುಕೊಳ್ಳುತ್ತಾರೆ. 1609 ರಲ್ಲಿ, ರಾಜ್ಯಪಾಲ ಶ್ರೀರಂಗರಾಯರು ರಾಜ ಒಡೆಯರ್ ಅವರಿಗೆ ಸಿಂಹಾಸನವನ್ನು ನೀಡುತ್ತಾರೆ. 1610 ರಲ್ಲಿ, ರಾಜ ಒಡೆಯರ್ ಸಿಂಹಾಸನವನ್ನು ಏರಿದರು. ಮತ್ತು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಈ ರಾಜ ಸಿಂಹಾಸನವು 1699 ರಲ್ಲಿ ಚಿಕ್ಕದೇವರಾಯ ಒಡೆಯರ್ ಅವರ ವಶದಲ್ಲಿತ್ತು ಎಂದು ಶಿಲಾಶಾಸನದ ಪುರಾವೆಗಳು ತೋರಿಸುತ್ತವೆ.
ಬಳಕೆ
[ಬದಲಾಯಿಸಿ]ಚಿನ್ನದ ಸಿಂಹಾಸನವನ್ನು ರಾಜಾಳ್ವಿಕೆಯ ಕಾಲದಲ್ಲಿ ರಾಜರ ಪಟ್ಟಾಭಿಷೇಕ ಮತ್ತು ದಸರಾ ದರ್ಬಾರ್ ನಡೆಸುವಂತಹ ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು . ಆದರೆ ಈಗ ಇದು ಕೇವಲ ನಾಡ ಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕಿಡಲಾಗುತ್ತದೆ ಮತ್ತು ದಸರಾ ಉತ್ಸವದಲ್ಲಿ ಮೈಸೂರಿನ ಮಹಾರಾಜರು ತಮ್ಮ ಖಾಸಗಿ ದರ್ಬಾರ್ ನಡೆಸುವಾಗ ಬಳಸುತ್ತಾರೆ. ಸಿಂಹಾಸನವು ಒಡೆಯರ್ ವಂಶಸ್ಥರ ಮತ್ತು ಮೈಸೂರು ಅರಮನೆ ಆಡಳಿತ ಮಂಡಳಿಯ ಜಂಟಿ ಪಾಲನೆಯಲ್ಲಿದೆ. ವರ್ಷದ ಉಳಿದ ಅವಧಿಯಲ್ಲಿ ಸಿಂಹಾಸನವನ್ನು ಹೆಚ್ಚಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ಮೈಸೂರು ದಸರಾದ ಸಮಯದಲ್ಲಿ, ಹಿಂದಿನ ಕಾಲದ ದಸರಾ ಉತ್ಸವದಲ್ಲಿ ರಾಜರನ್ನು ಸಿಂಹಾಸನದ ಮೇಲೆ ಕೂರಿಸಿ, ಅವರನ್ನು ಮೈಸೂರಿನ ಸುತ್ತಲೂ ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಪ್ರಸ್ತುತ ಕಾಲದಲ್ಲಿ, ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಸಿಂಹಾಸನದ ಮೇಲೆ ಇಟ್ಟು , ಆನೆಯ ಮೇಲೆ ಮೈಸೂರಿನ ಸುತ್ತಲೂ ಮೆರವಣಿಗೆ ಮಾಡಲಾಗುತ್ತದೆ.
ಉಲ್ಲೇಖ
[ಬದಲಾಯಿಸಿ]- ↑ https://kannada.oneindia.com/festivals/dasara/2010/1003-mysore-dasara-2010-golden-throne-darbar.html
- ↑ Book source — "Mysore Aramane" By Dr M P Manjappashetti Masagali