ಮೆಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಕಾ
ನೀಲಿ ಮತ್ತು ಹಳದಿ ಮೆಕಾ
ನೀಲಿ ಮತ್ತು ಹಳದಿ ಮೆಕಾ
Scientific classification
Included groups

ಅನೊಡೊರಿಂಕಸ್
ಆರಾ
ಸಯಾನೊಸಿಟಾ
ಪ್ರೈಮೋಲಿಯಸ್
ಆರ್ಥೊಸಿಟಾಕಾ
ಡಯೊಸಿಟಾಕಾ

ಮೆಕಾ ಸಿಟಾಸಿಫಾರ್ಮಿಸ್ ಗಣಕ್ಕೆ ಸೇರಿದ ಹಲವಾರು ಬಗೆಯ ಹಕ್ಕಿಗಳಿಗೆ ಅನ್ವಯವಾಗುವ ಹೆಸರು.[೧][೨] ಗಿಳಿಗಳಿಗೆ ಹತ್ತಿರ ಸಂಬಂಧಿಗಳು. ಇವು ಕೇವಲ ಉಷ್ಣವಲಯಗಳಲ್ಲಿ ಮಾತ್ರ ಕಂಡುಬರುವ ಪಕ್ಷಿಗಳು.

ದೈಹಿಕ ಲಕ್ಷಣಗಳು[ಬದಲಾಯಿಸಿ]

ಉದ್ದವಾದ ಬಾಲ, ಮುಖದ ಭಾಗದಲ್ಲಿ ಪುಕ್ಕಗಳಿಲ್ಲದೆ ಬೋಳಾಗಿರುವುದು ಇವುಗಳ ಪ್ರಮುಖ ಲಕ್ಷಣಗಳು. ಇವು ಸುಂದರ ಪಕ್ಷಿಗಳು. ಕೆಲವು ಪ್ರಭೇದಗಳಲ್ಲಿ ತುಂಬ ಚೆಲುವಾದ ಗರಿಗಳುಂಟು. ಕೆಲವು ಪ್ರಭೇದಗಳ ಗರಿಗಳು ವರ್ಣಮಯವಾಗಿದ್ದರೆ ಇನ್ನು ಕೆಲವಲ್ಲಿ ಗರಿಗಳು ಹಸುರು.

ಆಹಾರ[ಬದಲಾಯಿಸಿ]

ಇವು ಸಾಮಾನ್ಯವಾಗಿ ಸಸ್ಯಾಹಾರಿಗಳು, ಉಷ್ಣವಲಯದ ಕಾಡುಗಳಲ್ಲಿ ಮರಗಳ ಮೇಲೆ ವಾಸಿಸುತ್ತಿದ್ದು ಹಣ್ಣುಗಳನ್ನು ತಿಂದು ಬದುಕುತ್ತವೆ. ಇವುಗಳ ಕೊಕ್ಕು ತುಂಬ ಬಲಿಷ್ಠವಾದ್ದು, ಹಣ್ಣು, ಕಾಯಿ ಅಥವಾ ಬೀಜಗಳ ಚಿಪ್ಪನ್ನು ಒಡೆಯಲು ಅನುಕೂಲವಾಗಿದೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಸಾಮಾನ್ಯವಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಜೊತೆಗೂಡಿ ವಾಸ. ಕೆಲವು ಸಲ 3 ಅಥವಾ 4 ಪಕ್ಷಿಗಳ ಚಿಕ್ಕ ಕುಟುಂಬವಿರುತ್ತದೆ. ಒಂದು ಬಾರಿಗೆ ಹೆಣ್ಣು ಮೆಕಾ 2 ರಿಂದ 4 ಮೊಟ್ಟೆಯನ್ನು ಇಡುತ್ತದೆ. ಮೊಟ್ಟೆಗಳು ಗುಂಡು ಹಾಗೂ ಬಿಳಿಯ ಬಣ್ಣದವು. ಮೊಟ್ಟೆಗಳನ್ನು ಇಡುವುದು ಮರದ ಪೊಟರೆಗಳಲ್ಲಿ. ಮೊಟ್ಟೆಯೊಡೆದು ಹೊರಬರುವ ಮರಿಗಳ ಪಾಲನೆ ಸಾಮಾನ್ಯವಾಗಿ 2 ರಿಂದ 3 ತಿಂಗಳವರೆಗೆ ನಡೆಯುತ್ತದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಇವನ್ನು ಸಾಮಾನ್ಯವಾಗಿ ಪ್ರಾಣಿಸಂಗ್ರಹಾಲಯಗಳಲ್ಲಿ ಸಾಕುವುದುಂಟು. ಮನೆಗಳಲ್ಲಿ ಮುದ್ದಿಗಾಗಿ ಸಾಕುವುದಿದೆ. ಸಾಕಷ್ಟು ಲಕ್ಷ್ಯವಹಿಸದೆ ಇದ್ದರೆ ಇವುಗಳ ಸ್ವಭಾವ ಒರಟಾಗುತ್ತದೆ. ಹತ್ತಿರ ಹೋದರೆ ಪರಚಿ ಗಾಯಗೊಳಿಸುವುವು. ಮರಿಗಳು ಬೇಗ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಕೆಲವು ಗಿಣಿಗಳು ಕೆಲವು ಶಬ್ದಗಳನ್ನು ಅನುಕರಿಸಬಲ್ಲವು. ಇವನ್ನು ತುಂಬ ಚತುರಪಕ್ಷಿಗಳು ಎಂದು ಪರಿಗಣಿಸಲಾಗಿದೆ. ಇವುಗಳಿಗೆ ಜ್ಞಾಪಕಶಕ್ತಿಯೂ ಸಾಕಷ್ಟಿದೆ ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ.

ಕೆಲವು ಪ್ರಭೇದಗಳು[ಬದಲಾಯಿಸಿ]

ಆರಾ ಮೆಕಾ ಎಂಬ ಪ್ರಭೇದ ಕೆಂಪು ಮತ್ತು ನೀಲಿ ಬಣ್ಣದ ಸುಂದರ ಪಕ್ಷಿ. ಸು. 1 ಮೀ. ಉದ್ದದ ಈ ಪಕ್ಷಿ ಮೆಕ್ಸಿಕೋ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳಲ್ಲಿ ಕಾಣದೊರೆಯುತ್ತದೆ.

ಆರಾ ಆರಾರಾನಾ ಪ್ರಭೇದ ನೀಲಿ ಮತ್ತು ಹಸುರು ವರ್ಣದ ಗರಿಗಳನ್ನು ಹೊಂದಿರುವ ಸು. 90 ಸೆಂ.ಮೀ. ಇಂಚು ಉದ್ದದ ಪಕ್ಷಿ. ಇದು ಪನಾಮಾದಿಂದ ದಕ್ಷಿಣ ಅಮೆರಿಕದವರೆಗಿನ ಪ್ರದೇಶಗಳಲ್ಲಿ ದೊರೆಯುತ್ತದೆ.

ಆರಾ ಕ್ಲೊರೋಪ್ಟೆರ, ಆರಾ ಸ್ಪಿಕ್ಸಿ, ಅನಾಡೋರಿಂಕ್ಸ್ ಹೈಯೊಸಿಂಥಿಯೆಸ್ ಇವು ಇನ್ನಿತರ ಪ್ರಭೇದಗಳು.

ಉಲ್ಲೇಖಗಳು[ಬದಲಾಯಿಸಿ]

  1. "Macaw." New World Encyclopedia, . 9 Mar 2023, 10:43 UTC. 22 Nov 2023, 14:49 <https://www.newworldencyclopedia.org/p/index.php?title=Macaw&oldid=1103713>.
  2. Britannica, The Editors of Encyclopaedia. "macaw". Encyclopedia Britannica, 29 Sep. 2023, https://www.britannica.com/animal/macaw. Accessed 22 November 2023.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೆಕಾ&oldid=1196543" ಇಂದ ಪಡೆಯಲ್ಪಟ್ಟಿದೆ