ಮಂಗಳ (ಗ್ರಹ)
ಹಬ್‌ಲ್ ಬಾಹ್ಯಾಕಾಶ ದೂರದರ್ಶಕಕ್ಕೆ ಕಾಣಿಸಿದಂತೆ ಮಂಗಳ ಗ್ರಹ | |
ಕಕ್ಷೆಯ ಗುಣಗಳು | |
---|---|
ದೀರ್ಘಾರ್ಧ ಅಕ್ಷ | ೨೨೭,೯೩೬,೬೩೭ ಕಿ.ಮೀ. (೧೪೧,೬೩೨,೯೭೬ ಮೈಲಿ) ೧.೫೨೩ ೬೬೨ ೩೧ ಖಗೋಳ ಮಾನ (AU) |
ಕಕ್ಷೆಯ ಪರಿಧಿ | ೧,೪೨೯,೦೦೦,೦೦೦ ಕಿ.ಮೀ. (೮೮೭,೯೦೦,೦೦೦ ಮೈಲಿ) ೯.೫೫೩ ಖಗೋಳ ಮಾನ (AU) |
ಕಕ್ಷೀಯ ಕೇಂದ್ರ ಚ್ಯುತಿ | ೦.೦೯೩ ೪೧೨ ೩೩ |
ಪುರರವಿ | ೨೦೬,೬೪೪,೫೪೫ ಕಿ.ಮೀ. (೧೨೮,೪೦೨,೯೬೭ ಮೈಲಿ) ೧.೩೮೧ ೩೩೩ ೪೬ AU |
ಅಪರವಿ | ೨೪೯,೨೨೮,೭೩೦ ಕಿ.ಮೀ. (೧೫೪,೮೬೩,೫೫೩ ಮೈಲಿ) ೧.೬೬೫ ೯೯೧ ೧೬ AU |
ಕಕ್ಷೀಯ ಪರಿಭ್ರಮಣ ಕಾಲ | ೬೮೬.೯೬೦೦ ದಿನ |
ಯುತಿ ಅವಧಿ | ೭೭೯.೯೬ d (೨.೧೩೫ a) |
ಸರಾಸರಿ ಕಕ್ಷಾ ವೇಗ | ೨೪.೦೭೭ ಕಿ.ಮೀ./ಪ್ರತಿ ಕ್ಷಣ (೫೩,೮೫೯ ಮೈಲಿ/ಪ್ರತಿ ಘಂಟೆ) |
ಗರಿಷ್ಠ ಕಕ್ಷಾ ವೇಗ | ೨೬.೪೯೯ ಕಿ.ಮೀ./ಪ್ರತಿ ಕ್ಷಣ (೫೯,೨೭೭ ಮೈಲಿ/ಪ್ರತಿ ಘಂಟೆ) |
ಕನಿಷ್ಠ ಕಕ್ಷಾ ವೇಗ | ೨೧.೯೭೨ ಕಿ.ಮೀ./ಪ್ರತಿ ಕ್ಷಣ (೪೯,೧೫೦ ಮೈಲಿ/ಪ್ರತಿ ಘಂಟೆ) |
ಓರೆ | ೧.೮೫೦ ೬೧° (ಸೂರ್ಯನ ಸಮಭಾಜಕ ರೇಖೆಗೆ ೫.೬೫°) |
ಆರೋಹಣ ಸಂಪಾತದ ರೇಖಾಂಶ | ೪೯.೫೭೮ ೫೪° |
ಪುರರವಿಯ ಕೋನಭಾಗ | ೨೮೬.೪೬೨ ೩೦° |
ನೈಸರ್ಗಿಕ ಉಪಗ್ರಹಗಳ ಸಂಖ್ಯೆ | ೨ |
ಭೌತಿಕ ಗುಣಲಕ್ಷಣಗಳು | |
ಸಮಭಾಜಕ ರೇಖೆಯ ವ್ಯಾಸ | ೬,೮೦೪.೯ ಕಿ.ಮೀ. (೪೨೨೮.೪ ಮೈಲಿ) (ಭೂಮಿಯ ೫೩.೩%) |
ಧ್ರುವಗಳ ಮೂಲಕ ವ್ಯಾಸ | ೬,೭೫೪.೮ ಕಿ.ಮೀ. (೪೧೯೭.೨ ಮೈಲಿ) (ಭೂಮಿಯ ೫೩.೧%) |
ಹ್ರಸ್ವಾಕ್ಷತೆ | ೦.೦೦೭ ೩೬ |
ಮೇಲ್ಮೈ ವಿಸ್ತೀರ್ಣ | ೧.೪೪೮ x ೧೦೮ ಚದರ. ಕಿ.ಮೀ., ೫೫,೯೦೭,೦೦೦ ಚದರ ಮೈಲಿ (೧೪೪ ೭೯೮ ೪೬೫ ಚದರ. ಕಿ.ಮೀ.) (ಭೂಮಿಯ ೨೮.೪%) |
ಗಾತ್ರ | ೧.೬೩೧೮ x ೧೦೧೧ ಘನ. ಕಿ.ಮೀ. (ಭೂಮಿಯ ೧೫.೧%) |
ದ್ರವ್ಯರಾಶಿ | ೬.೪೧೮೫ x ೧೦೨೩ ಕಿ.ಗ್ರಾಂ. (ಭೂಮಿಯ ೧೦.೭%) |
ಸರಾಸರಿ ಸಾಂದ್ರತೆ | ೩.೯೩೪ ಗ್ರಾಂ/ಪ್ರತಿ ಘನ ಸೆಂ.ಮೀ. |
ಸಮಭಾಜಕದ ಬಳಿ ಗುರುತ್ವ | ೩.೬೯ ಮೀ./ಸೆ೨ (ಭೂಮಿಯ ೩೭.೬%) |
ಮುಕ್ತಿ ವೇಗ | ೫.೦೨೭ ಕಿ.ಮೀ./ಸೆ (೧೧,೨೪೫ ಮೈ/ಘಂ) |
ಅಕ್ಷೀಯ ಪರಿಭ್ರಮಣ ಕಾಲ | ೧.೦೨೫ ೯೫೭ ದಿನ (೨೪.೬೨೨ ೯೬೨ ಘಂಟೆಗಳು) |
ಅಕ್ಷೀಯ ಪರಿಭ್ರಮಣ ವೇಗ | ೮೬೮.೨೨ ಕಿ.ಮೀ/ಘಂ (೫೩೯.೪೯ ಮೈ/ಘಂ) (ಸಮಭಾಜಕದಲ್ಲಿ) |
ಅಕ್ಷದ ಓರೆ | ೨೫.೧೯° |
ಉತ್ತರ ಧ್ರುವದ ವಿಷುವದಂಶ |
೩೧೭.೬೮೧ ೪೩° (೨೧ h ೧೦ min ೪೪ s) |
ಘಂಟಾವೃತ್ತಾಂಶ | ೫೨.೮೮೬ ೫೦° |
ಪ್ರತಿಫಲನಾಂಶ | ೦.೧೫ |
ಮೇಲ್ಮೈ ತಾಪಮಾನ - ಕನಿಷ್ಠ - ಸರಾಸರಿ - ಗರಿಷ್ಠ |
−೧೪೦ °ಸೆ. (೧೩೩ ಕೆಲ್ವಿನ್) −೬೩ °ಸೆ. (೨೧೦ ಕೆಲ್ವಿನ್) ೨೦ °C (೨೯೩ ಕೆಲ್ವಿನ್) |
Adjective | Martian |
ವಾಯುಮಂಡಲದ ಗುಣಗಳು | |
ವಾತಾವರಣದ ಒತ್ತಡ | ೦.೭–೦.೯ kPa |
ಇಂಗಾಲದ ಡೈ-ಆಕ್ಸೈಡ್ | ೯೫.೭೨% |
ಸಾರಜನಕ | ೨.೭% |
ಆರ್ಗಾನ್ | ೧.೬% |
ಆಮ್ಲಜನಕ | ೦.೧೩% |
ಇಂಗಾಲದ ಮಾನಾಕ್ಸೈದ್ | ೦.೦೭% |
ನೀರಾವಿ | ೦.೦೩% |
ನೈಟ್ರಿಕ್ ಆಕ್ಸೈಡ್ | ೦.೦೧% |
ನಿಯಾನ್ | ೨.೫ ಭಾಗಗಳು/ಪ್ರತಿ ದಶಲಕ್ಷದಲ್ಲಿ |
ಕ್ರಿಪ್ಟಾನ್ | ೩೦೦ ಭಾಗಗಳು/ಪ್ರತಿ ಶತಕೋಟಿಯಲ್ಲಿ |
ಜೆನಾನ್ | ೮೦ ಭಾಗಗಳು/ಪ್ರತಿ ಶತಕೋಟಿಯಲ್ಲಿ |
ಓಜೋನ್ | ೩೦ ಭಾಗಗಳು/ಪ್ರತಿ ಶತಕೋಟಿಯಲ್ಲಿ |
edit |
ಮಂಗಳ ಮಂಗಳ ಗ್ರಹವು ಸೊರ್ಯನಿಂದ ನಾಲ್ಕನೇ ಗ್ರಹವಾಗಿದ್ದು , ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ ಮರಕ್ಯೊರಿಯ ನಂತರ. ಇಂಗ್ಲೀಷ್ ನಲ್ಲಿ ಇದನ್ನು ಮಾರ್ಸ್ ಎಂದು ಕರೆಯಲಾಗುತ್ತದೆ. ಮಾರ್ಸ ಇದು ರೋಮನ್ನರ್ ದೇವರ ಯುಧದ್ದ ದೇವತೆ ಮಾಡಿದೆ.ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.ಭೂಮಿಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ 'ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೨ ವರ್ಷ(೬೮೬.೯೮ ದಿನ)ಗಳೇ ಬೇಕಾಗುತ್ತದೆ. ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ನಾಸಾ ಅಧಿಕೃತವಾಗಿ ಸೆಪ್ಟಂಬರ್ 28,2015 ರಂದು ಘೋಷಣೆ ಮಾಡಿದೆ.
ಪರಿಚಯ
[ಬದಲಾಯಿಸಿ]ಈ ಗ್ರಹದ ವ್ಯಾಸ ೬,೭೯೦ ಕಿ.ಮೀ.(೪,೨೨೦ ಮೈಲಿ). ಗಳು. ಸೂರ್ಯನಿಂದ ಸುಮಾರು ೨೨೮,೦೦೦,೦೦೦ ಕಿ.ಮೀ.(೧೪೨,೦೦೦,೦೦೦ ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು 'ಕೆಂಪು ಗ್ರಹ' ಅಥವಾ 'ಅಂಗಾರಕ' (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ (Phobos) ಮತ್ತು ಡೀಮೋಸ್ (Deimos) ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಸ್ಟೆರೊಯ್ಡ್ಗಳಾಗಿದ್ದಿರಬಹುದು (asteroid). ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು (apparent magnitude) −೨.೯ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರ, ಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.
೧೯೬೫ ರಲ್ಲಿ ಮ್ಯಾರಿನರ್ ೪ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.
ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.
ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕ, ಮಂಗಳ ಒಡಿಸ್ಸಿ, ಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.
ಭೌತಿಕ ಲಕ್ಷಣಗಳು
[ಬದಲಾಯಿಸಿ]ಮಂಗಳದ ಮೇಲ್ಮೈ ಕೆಂಪು/ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ-ಆಕ್ಸೈಡ್ (ತುಕ್ಕು). ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು, ಸಾಂದ್ರತೆ ಕಡಿಮೆಯಿರುವ ಕಾರಣ, ಭೂಮಿಯ ಹತ್ತನೇ ಒಂದು ಪಾಲು ದ್ರವ್ಯರಾಶಿಯನ್ನು ಹೊಂದಿದೆ. ಆದರೆ ಮಂಗಳದ ಮೇಲ್ಮೈ ವಿಸ್ತೀರ್ಣವು ಬಹುಮಟ್ಟಿಗೆ ಭೂಮಿಯ ಒಟ್ಟು ಒಣನೆಲದ ವಿಸ್ತೀರ್ಣದಷ್ಟೇ ಇದೆ. ಮಂಗಳವು ಗಾತ್ರದಲ್ಲಿ ಮತ್ತು ದ್ರವ್ಯರಾಶಿಯಲ್ಲಿ ಬುಧ ಗ್ರಹಕ್ಕಿಂತ ದೊಡ್ಡದಾಗಿದ್ದರೂ, ಬುಧವು ತನ್ನ ಮೇಲ್ಮೈನಲ್ಲಿ ಮಂಗಳಕ್ಕಿಂತ ಹೆಚ್ಚು ಗುರುತ್ವ ಬಲವನ್ನು ಹೊಂದಿದೆ. ಬುಧದ ಸಾಂದ್ರತೆ ಮಂಗಳದಕ್ಕಿಂತ ಬಹಳಷ್ಟು ಅಧಿಕವಾಗಿರುವುದೇ ಇದಕ್ಕೆ ಕಾರಣ.
ಭೂವೈಜ್ಞಾನಿಕ ವಿವರಣೆ
[ಬದಲಾಯಿಸಿ]ಮಂಗಳದಿಂದ ಭೂಮಿಗೆ ಬಂದ ಉಲ್ಕೆಗಳ ಪರಿಶೀಲನೆಯಿಂದ ಹಾಗೂ ಮಂಗಳದ ಪರಿಭ್ರಮಣವನ್ನು ಅಧ್ಯಯನ ಮಾಡಿದ ಆಧಾರದ ಮೇಲೆ, ಮಂಗಳದ ಮೇಲ್ಮೈ ಪದರವು ಮುಖ್ಯವಾಗಿ ಕಪ್ಪುಶಿಲೆಯಿಂದ ರಚಿತವಾಗಿರುವಂತೆ ಕಂಡುಬರುತ್ತದೆ. ಮಂಗಳದ ಮೇಲ್ಮೈನ ಸ್ವಲ್ಪ ಭಾಗವು ಸಾಮಾನ್ಯ ಕಪ್ಪುಶಿಲೆಗಿಂತ ಹೆಚ್ಚು ಸಿಲಿಕಾ ಸಮೃದ್ಧವಾಗಿದೆ ಎನ್ನುವುದಕ್ಕೆ ಕೆಲವು ಆಧಾರಗಳಿವೆ. ಈ ಭಾಗಗಳು ಭೂಮಿಯ ಮೇಲಿನ ಆಂಡೆಸೈಟಿಕ್ ಶಿಲೆಗಳಂತೆ ಕಂಡುಬರುತ್ತವೆ. ಆದರೆ ಇವು ಸಿಲಿಕಾ ಗಾಜಿನಿಂದಲೂ ರಚಿತವಾಗಿರಬಹುದು. ಮೇಲ್ಮೈನ ಬಹುಭಾಗವು ಬಹಳ ನುಣುಪಾದ ಕಬ್ಬಿಣದ (೩)ಡೈ-ಆಕ್ಸೈಡ್ (ತುಕ್ಕು) ಧೂಳಿನ ದಪ್ಪನಾದ ಪದರದಿಂದ ಹೊದಿಸಲ್ಪಟ್ಟಿದೆ.[೧]
ಮಂಗಳದ ಮೇಲೆ ಹೆಮಟೈಟ್, ಜಿಯೊತೈಟ್ ಮುಂತಾದ ಖನಿಜಗಳು ಕಂಡುಬಂದಿವೆ. ಸಾಮನ್ಯವಾಗಿ ಈ ಖನಿಜಗಳು ನೀರಿನ ಉಪಸ್ಥಿತಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಈ ಮೇಲಿನ ಮತ್ತು ಸಂಬಂಧಪಟ್ಟ ಇತರ ಸಂಶೋಧನೆಗಳ ಕಾರಣದಿಂದಾಗಿ, ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ಜಲರೂಪದಲ್ಲಿತ್ತೆಂಬುದಕ್ಕೆ ನಿರ್ಣಾಯಕ ಸಾಕ್ಷ್ಯಾಧಾರಗಳಿವೆ.[೨]
ಮಂಗಳಕ್ಕೆ ತನ್ನದೇ ಆದ ಕಾಂತಕ್ಷೇತ್ರ ಇಲ್ಲದಿದ್ದರೂ, ಮೇಲ್ಮೈನ ಕೆಲವು ಭಾಗಗಳು ಕಾಂತೀಯವಾಗಿರುವುದು ಬೆಳಕಿಗೆ ಬಂದಿದೆ. ಈ ಭಾಗಗಳನ್ನು ಭೂಮಿಯಲ್ಲಿ ಸಾಗರ ತಳಗಳ ಮೇಲೆ ಕಂಡುಬರುವ ಕಾಂತೀಯ ಪಟ್ಟಿಗಳಿಗೆ ಹೋಲಿಸಲಾಗಿದೆ. ೧೯೯೯ರಲ್ಲಿ ಪ್ರಕಾಶಿಸಲಾದ ಮತ್ತು ಮಂಗಳ ಗ್ಲೋಬಲ್ ಸಮೀಕ್ಷಕದ ನೆರವಿನಿಂದ ಅಕ್ಟೋಬರ್ ೨೦೦೫ ರಲ್ಲಿ ಮರುಪರಿಶೀಲಿಸಲಾದ ಒಂದು ಸಿದ್ಧಾಂತದ ಪ್ರಕಾರ, ಈ ಪಟ್ಟಿಗಳು ಮಂಗಳದ ಮೇಲೆ ಭೂಭಾಗಗಳ (plate tectonics) ಪ್ರಾಚೀನ ಚಟುವಟಿಕೆಗಳ ಸಾಕ್ಷಿ[೩]. ಈ ಪ್ರಾಚೀನ ಕಾಂತೀಯತೆಯು ಧ್ರುವಗಳ ಚಲನೆಯಿಂದಲೂ ಉಂಟಾಗಿರಬಹುದು.
ಮಂಗಳದ ಒಳಭಾಗದ ಪ್ರಸ್ತುತ ಮಾದರಿಗಳಿಂದ ತರ್ಕಿಸಬಹುದಾದ ವಿಷಯಗಳು: ಮಂಗಳದ ಒಳಭಾಗವು ಸುಮಾರು ೧,೪೮೦ ಕಿ.ಮೀ. ತ್ರಿಜ್ಯವುಳ್ಳ ಗೋಳಾಕಾರದ ಒಂದು ವಲಯ. ಮುಖ್ಯವಾಗಿ ಕಬ್ಬಿಣದಿಂದ ಕೂಡಿರುವ ಈ ವಲಯದಲ್ಲಿ ಸುಮಾರು ೧೫-೧೭% ರಷ್ಟು ಗಂಧಕವೂ ಸೇರಿದೆ. ಭಾಗಶಃ ದ್ರವೀಕೃತವಾಗಿರುವ ಕಬ್ಬಿಣದ-ಸಲ್ಫೈಡ್‍ನ ಈ ವಲಯದಲ್ಲಿ, ಭೂಮಿಯ ಒಳಭಾಗದಲ್ಲಿ ಸಿಗುವುದಕ್ಕಿಂತ ಎರಡುಪಟ್ಟು ಹಗುರ ಧಾತುಗಳು ಕಂಡುಬರುತ್ತವೆ. ಈ ಒಳಭಾಗವು ಸಿಲಿಕೇಟ್‍ನ ಒಂದು ಪದರದಿಂದ ಆವೃತವಾಗಿದೆ. ಪ್ರಸ್ತುತದಲ್ಲಿ ನಿಶ್ಚಲವಾಗಿರುವಂತೆ ಕಾಣುವ ಈ ಸಿಲಿಕೇಟ್ ಪದರವು, ಹಿಂದಿನ ಕಾಲದಲ್ಲಿ ಮಂಗಳದ ಮೇಲೆ ಭೂಭಾಗಗಳನ್ನು ಮತ್ತು ಅಗ್ನಿ ಪರ್ವತಗಳನ್ನು ರೂಪಿಸಿತು ಎನ್ನಲಾಗಿದೆ. ಮಂಗಳದ ಮೇಲ್ಮೈ ಸರಾಸರಿ ಸುಮಾರು ೫೦ ಕಿ.ಮೀ ದಪ್ಪನಾಗಿದೆ ಮತ್ತು ಇದರ ಗರಿಷ್ಟ ದಪ್ಪ ೧೨೫ ಕಿ.ಮೀ. ಗಳು.[೪]
ಮಂಗಳದ ಭೂವೈಜ್ಞಾನಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಲ್ಲಿ ವಿಂಗಡಣೆ ಮಾಡಬಹುದು:
- ನೊಏಕಿಯನ್ ಕಾಲ (ನೊಏಕಿಸ್ ವಲಯದ ಆಧಾರವಾಗಿ ಹೆಸರಿಡಲಾಗಿದೆ): ೩೮೦ ರಿಂದ ೩೫೦ ಕೋಟಿ ವರ್ಷಗಳ ಹಿಂದೆ ಮಂಗಳದ ಉದ್ಭವ ಮತ್ತು ರಚನೆ. ನೊಏಕಿಯನ್ ಕಾಲದ ಮೇಲ್ಮೈಗಳಲ್ಲಿ ಅಪ್ಪಳಿಕೆಯಿಂದ ಉಂಟಾದ ಹಲವಾರು ಕುಳಿಗಳು ಕಂಡುಬರುತ್ತವೆ. ಥಾರ್ಸಿಸ್ ಉಬ್ಬು ಈ ಕಾಲದಲ್ಲೇ ರೂಪುಗೊಂಡಿತೆಂದು ಅಂದಾಜು ಮಾಡಲಾಗಿದೆ. ಈ ಕಾಲದ ಕೊನೆಯ ಭಾಗದಲ್ಲಿ ನೀರು ದ್ರವ ರೂಪದಲ್ಲಿ ಲಭ್ಯವಿದ್ದ ಕಾರಣ ವ್ಯಾಪಕವಾಗಿ ಪ್ರವಾಹಗಳುಂಟಾಗುತ್ತಿದ್ದವು.
- ಹೆಸ್ಪೇರಿಯನ್ ಕಾಲ (ಹೆಸ್ಪೇರಿಯ ಸಮತಳದ ಆಧಾರವಾಗಿ ಹೆಸರಿಡಲಾಗಿದೆ): ೩೫೦ ರಿಂದ ೧೮೦ ಕೋಟಿ ವರ್ಷ ಹಿಂದಿನವರೆಗೆ. ಈ ಕಾಲದಲ್ಲಿ ವ್ಯಾಪಕವಾಗಿ ಲಾವಾ ಸಮತಳಗಳು ರೂಪುಗೊಂಡವು.
- ಅಮೆಜೋನಿಯನ್ ಕಾಲ (ಅಮೆಜೋನಿಸ್ ಸಮತಳದ ಆಧಾರದ ಮೇಲೆ ಹೆಸರಿಡಲಾಗಿದೆ): ೧೮೦ ಕೋಟಿ ವರ್ಷಗಳಿಂದ ಈಗಿನವರೆಗೆ. ಅಮೆಜೋನಿಯನ್ ವಲಯಗಳಲ್ಲಿ ಅಪ್ಪಳಿಕೆ ಕುಳಿಗಳು ಬಹಳಷ್ಟು ಮಟ್ಟಿಗೆ ಇಲ್ಲದಿದ್ದರೂ, ಈ ವಲಯಗಳಲ್ಲಿ ಹೆಚ್ಚಿನ ವೈವಿಧ್ಯಗಳು ಕಂಡುಬರುತ್ತವೆ. ಒಲಂಪಸ್ ಮಾನ್ಸ್ ಈ ಕಾಲದಲ್ಲಿ ರೂಪುಗೊಂಡಿತು. ಇದಲ್ಲದೆ ಅಮೆಜೋನಿಯನ್ ಕಾಲದಲ್ಲಿ ಮಂಗಳದ ಹಲವೆಡೆಗಳಲ್ಲಿ ಲಾವಾ ಪ್ರವಾಹಗಳು ಉಂಟಾದವು.
ಈ ಮೇಲಿನ ವಿಂಗಡಣೆಯಲ್ಲದೆ, ಮಂಗಳದ ಭೂಚಾರಿತ್ರಿಕ ಕಾಲಗಳ ಒಂದು ಪರ್ಯಾಯ ವಿಂಗಡಣೆಯೂ ಲಭ್ಯವಿದೆ. ಈ ವಿಂಗಡಣೆಯು ಮಾರ್ಸ್ ಎಕ್ಸ್‌ಪ್ರೆಸ್ ಪರಿಭ್ರಮಕದ ಒಮೇಗಾ ನಸುಗೆಂಪು ಕಿರಣ ಖನಿಜ ವರ್ಣಪಟಲಮಾಪಕದಿಂದ ಲಭ್ಯವಿರುವ ಫಲಿತಾಂಶಗಳ ಮೇಲೆ ಆಧಾರಿತವಾಗಿದೆ.
ಭೂವಿವರಣೆ
[ಬದಲಾಯಿಸಿ]೧೮೩೦ರಿಂದ ಚಂದ್ರನ ನಕ್ಷೆಯನ್ನು ತಯಾರಿಸಿ ಪ್ರಸಿದ್ಧಿಯನ್ನು ಪಡೆದ ಯೋಹಾನ್ ಹೈನ್ರಿಕ್ ಮೆಡ್ಲರ್ ಮತ್ತು ವಿಲ್ಹೆಮ್ ಬೀರ್ ಅವರುಗಳು ಮೊಟ್ಟಮೊದಲ ಮಂಗಳ ಗ್ರಹ ಶಾಸ್ತ್ರಜ್ಞರೂ ಆಗಿದ್ದರು. ಮಂಗಳದ ಮೇಲ್ಮೈ ಲಕ್ಷಣಗಳು ಶಾಶ್ವತವಾದುವೆಂದು ನಿರ್ಣಾಯಕವಾಗಿ ಸಾಬೀತು ಮಾಡುವುದರೊಂದಿಗೆ ಗ್ರಹದ ಅಧ್ಯಯನವನ್ನು ಶುರುಮಾಡಿದ ಇವರು, ಮಂಗಳದ ಅಕ್ಷೀಯ ಪರಿಭ್ರಮಣ ಕಾಲವನ್ನು ನಿಖರವಾಗಿ ಕಂಡುಹಿಡಿದರು. ೧೦ ವರ್ಷಗಳ ಅನುಭವವನ್ನಾಧರಿಸಿ ಮೆಡ್ಲರ್ನು ೧೮೪೦ ರಲ್ಲಿ ಮಂಗಳದ ಪ್ರಪ್ರಥಮ ನಕ್ಷೆಯನ್ನು ತಯಾರಿಸಿದನು. ಅವರು ಗುರುತಿಸಿದ ವಿವಿಧ ಮೇಲ್ಮೈ ಲಕ್ಷಣಗಳಿಗೆಲ್ಲವಕ್ಕೂ ಹೆಸರಿಡುವ ಬದಲು, ಬೀರ್ ಮತ್ತು ಮೆಡ್ಲರ್ರು ಇವುಗಳನ್ನು ಆಂಗ್ಲ ಅಕ್ಷರಗಳ ಹೆಸರಿಂದ ಕರೆದರು; ಮೆರಿಡಿಯನ್ ಕೊಲ್ಲಿಯು "a" ಎಂಬ ಹೆಸರನ್ನು ಹೊಂದಿತ್ತು.[೫]
ಆದರೆ ಈಗ, ಮಂಗಳದ ಲಕ್ಷಣಗಳಿಗೆ ವಿವಿಧ ಮೂಲಗಳಿಂದ ಹೆಸರಿಡಲಾಗುತ್ತದೆ. ಹಲವು ದೊಡ್ಡ ಪ್ರತಿಫಲಕ ಲಕ್ಷಣಗಳು ತಮ್ಮ ಹಳೆಯ ಹೆಸರುಗಳನ್ನೇ ಉಳಿಸಿಕೊಂಡಿವೆ. ಆದರೆ, ಕೆಲವು ಹೆಸರುಗಳನ್ನು ಪ್ರಸ್ತುತದ ಜ್ಞಾನದ ಪ್ರಕಾರ ಆಧುನಿಕಗೊಳಿಸಲಾಗಿದೆ. ಉದಾಹರಣೆಗೆ, ನಿಕ್ಸ್ ಒಲಿಂಪಿಕಾದ (ಒಲಂಪಸ್‌ನ ಹಿಮಗಳು) ಹೆಸರನ್ನು ಒಲಂಪಸ್ ಮಾನ್ಸ್ (ಒಲಂಪಸ್ ಪರ್ವತ) ಎಂದು ಬದಲಾಯಿಸಲಾಗಿದೆ.[೬]
ಮಂಗಳದ ಸಮಭಾಜಕವನ್ನು ಅದರ ಅಕ್ಷೀಯ ಪರಿಭ್ರಮಣದ ಆಧಾರದ ಮೇಲೆ ನಿರ್ಧರಿಸಲಾಯಿತಾದರೂ, ಭೂಮಿಯಂತೆಯೇ, ಮಂಗಳದ ಪ್ರಧಾನ ಮಧ್ಯಾಹ್ನ ರೇಖೆಯನ್ನು (Prime Meridian) ಯಾದೃಚ್ಛಿಕವಾಗಿ ನಿರ್ಧರಿಸಲಾಯಿತು. ಮೆಡ್ಲರ್ ಮತ್ತು ಬೀರ್ ಅವರು ೧೮೩೦ ರಲ್ಲಿ ಮಂಗಳದ ಮೊದಲ ನಕ್ಷೆಗಳಿಗಾಗಿ ಒಂದು ರೇಖೆಯನ್ನು ಆಯ್ಕೆ ಮಾಡಿದರು. ೧೯೭೨ ರಲ್ಲಿ ಮ್ಯಾರಿನರ್ ೯ ನೌಕೆಯು ಮಂಗಳದ ಹಲವು ಚಿತ್ರಗಳನ್ನು ಒದಗಿಸಿದ ನಂತರ, ಸೈನಸ್ ಮೆರಿಡಿಯಾನಿಯಲ್ಲಿ ಏರಿ-೦ ಎಂಬ ಹೆಸರಿನ ಸಣ್ಣದೊಂದು ಕುಳಿಯನ್ನು 0.0° ರೇಖಾಂಶದ ವ್ಯಾಖ್ಯಾನಕ್ಕೆ ಆಯ್ಕೆ ಮಾಡಲಾಯಿತು. ಈ ರೇಖೆಯು ಮೆಡ್ಲರ್ ಮತ್ತು ಬೀರ್ ಮೊದಲು ನಿರ್ಧರಿಸಿದ್ದ ಸ್ಥಳದಲ್ಲಿಯೇ ಇದೆ.[೭]
ಮಂಗಳದ ಮೇಲೆ ಸಾಗರಗಳಿಲ್ಲದಿರುವುದರಿಂದ, ಒಂದು "ಸೊನ್ನೆ ಎತ್ತರ"ದ ಮೇಲ್ಮೈ ಅಥವಾ ಸರಾಸರಿ ಗುರುತ್ವ ಮೇಲ್ಮೈಯನ್ನು ಕೃತಕವಾಗಿ ನಿಗದಿಪಡಿಸಲಾಗಿದೆ. ಈ ಎತ್ತರವು ೬೧೦.೫ Pa (೬.೧೦೫ mbar) ನಷ್ಟು (ಭೂಮಿಯ ಸುಮಾರು ೦.೬% ನಷ್ಟು) ವಾತಾವರಣದ ಒತ್ತಡವಿರುವ ಎತ್ತರವೆಂದು ವ್ಯಾಖ್ಯಾನಿಸಲಾಗಿದೆ. ಈ ಒತ್ತಡವು ನೀರಿನ ತ್ರಿರೂಪ ಬಿಂದುವಿಗೆ (triple point) ಸರಿಹೊಂದುತ್ತದೆ.[೮]
ಮಂಗಳದ ಮೇಲ್ಮೈ ಸ್ವರೂಪಗಳು ಗಮನಾರ್ಹವಾದ ವಿಭಿನ್ನತೆಗಳನ್ನು ಹೊಂದಿವೆ: ಲಾವಾ ಪ್ರವಾಹಗಳಿಂದ ಚಪ್ಪಟೆಯಾದ ಉತ್ತರದ ಸಮತಳಗಳು, ಪ್ರಾಚೀನವಾದ ಅಪ್ಪಳಿಕೆಗಳ ಕುಳಿಗಳಿಂದ ಕೂಡಿರುವ ದಕ್ಷಿಣದ ಪ್ರಸ್ಥಭೂಮಿಗಳಿಗಿಂತ ಬಹಳ ಭಿನ್ನವಾಗಿ ಕಾಣುತ್ತವೆ. ಭೂಮಿಯಿಂದ ನೋಡಿದಾಗ ಕಾಣುವ ಮಂಗಳದ ಮೇಲ್ಮೈಯನ್ನು, ಭಿನ್ನವಾದ ಪ್ರತಿಫಲನಾಂಶವುಳ್ಳ ಎರಡು ಬಗೆಯ ವಲಯಗಳನ್ನಾಗಿ ವಿಂಗಡಿಸಬಹುದು. ಧೂಳು ಮತ್ತು ತುಕ್ಕಿನಿಂದ ಸಮೃದ್ಧವಾದ ಮರಳಿನಿಂದ ಹೊದಿಸಲ್ಪಟ್ಟ ಮಂದವಾದ ಸಮತಳಗಳನ್ನು ಒಂದು ಕಾಲದಲ್ಲಿ ಮಂಗಳದ 'ಖಂಡ'ಗಳೆಂದೆಣಿಸಿ, ಅವುಗಳಿಗೆ ಅರೇಬಿಯಾ ಭೂಮಿ, ಅಮೆಜಾನ್ ಸಮತಳ, ಮುಂತಾದ ಹೆಸರುಗಳನ್ನು ಕೊಡಲಾಗಿತ್ತು. ಗಾಢವಾದ ವಲಯಗಳನ್ನು ಸಾಗರಗಳೆಂದೆಣಿಸಿ, ಅವುಗಳಿಗೆ ಎರಿಥ್ರೀಯಂ ಸಾಗರ, ಸಿರೇನಂ ಸಾಗರ, ಅರೋರೇ ಸೈನಸ್ ಮುಂತಾದ ಹೆಸರುಗಳನ್ನು ಕೊಡಲಾಗಿತ್ತು. ಭೂಮಿಯಿಂದ ಕಾಣಬರುವ ಅತಿ ದೊಡ್ಡ ಗಾಢವಲಯವು Syrtis Major.[೯]
ವಿಸ್ತಾರವಾದ ಅಗ್ನಿ ಪರ್ವತವಾದ (volcano) ಒಲಂಪಸ್ ಮಾನ್ಸ್ (ಒಲಂಪಸ್ ಪರ್ವತ)ವು, ೨೬ ಕಿ.ಮೀ. ಎತ್ತರವಿದ್ದು, ಸೌರಮಂಡಲದಲ್ಲೇ ಅತಿ ಎತ್ತರವಾದ ಪರ್ವತವಾಗಿದೆ. ಇನ್ನೂ ಹಲವು ಅಗ್ನಿಪರ್ವತಗಳನ್ನು ಹೊಂದಿರುವ ಥಾರ್ಸಿಸ್ ಪ್ರಸ್ಥಭೂಮಿಯಲ್ಲಿ ಈ ಪರ್ವತವು ಸ್ಥಿತವಾಗಿದೆ. ಹೋಲಿಕೆಯಲ್ಲಿ, ಒಲಂಪಸ್ ಮಾನ್ಸ್ ಪರ್ವತವು ೮೮೪೮ಮೀ. ಎತ್ತರವಿರುವ ಮೌಂಟ್ ಎವರೆಸ್ಟ್‌ನ ಮೂರಕ್ಕಿಂತಲೂ ಹೆಚ್ಚು ಪಟ್ಟು ದೊಡ್ಡದು.
ಮಂಗಳವು ಹಲವಾರು ಅಪ್ಪಳಿಕೆ ಕುಳಿಗಳ (impact crater) ಗುರುತುಗಳನ್ನು ಹೊಂದಿದೆ. ಇವುಗಳಲ್ಲಿ ಅತಿ ದೊಡ್ಡದಾದ ಹೆಲಸ್ ಅಪ್ಪಳಿಕೆ ತಗ್ಗು ಪ್ರದೇಶವು ತಿಳಿ ಕೆಂಪು ಬಣ್ಣದ ಮರಳಿನಿಂದ ಹೊದಿಸಲ್ಪಟ್ಟಿದೆ.[೧೦] ಅದರ ವಾಯುಮಂಡಲವು ಒದಗಿಸುವ ರಕ್ಷಣೆಯ ಕಾರಣ, ಮಂಗಳವು ಆಕಾಶಕಾಯ ಪಟ್ಟಿಗೆ ಹತ್ತಿರದಲ್ಲಿದ್ದರೂ, ಮಂಗಳದ ಮೇಲೆ ಚಂದ್ರನ ಮೇಲಿರುವುದಕ್ಕಿಂತ ಬಹಳ ಕಡಿಮೆ ಕುಳಿಗಳಿವೆ. ಉಲ್ಕೆಗಳು ಅಪ್ಪಳಿಸಿದಾಗ ನೆಲದಲ್ಲಿ ತೇವಾಂಶವಿತ್ತೆಂದು ಕೆಲವು ಕುಳಿಗಳ ವಿನ್ಯಾಸಗಳು ಸೂಚಿಸುತ್ತವೆ.
ವ್ಯಾಲೆಸ್ ಮ್ಯಾರಿನೆರಿಸ್ ಎಂಬ ಹೆಸರಿನ ದೊಡ್ಡ ಕಂದರವು ೪೦೦೦ ಕಿ.ಮೀ. ಗಳ ಉದ್ದವನ್ನು ಮತ್ತು ೭ ಕಿ.ಮೀ. ಗಳವರೆಗಿನ ಆಳವನ್ನು ಹೊಂದಿದೆ. ಭೂಮಿಯ ಯೂರೋಪ್ ಖಂಡದಷ್ಟು ಉದ್ದವಿರುವ ವ್ಯಾಲೆಸ್ ಮ್ಯಾರಿನೆರಿಸ್ ಮಂಗಳದ ಪರಿಧಿಯ ಐದನೇ ಒಂದು ಭಾಗವನ್ನು ವ್ಯಾಪಿಸುತ್ತದೆ. ಹೋಲಿಕೆಯಲ್ಲಿ, ಭೂಮಿಯ ಮೇಲಿನ Grand Canyon ಕೇವಲ ೪೪೬ ಕಿ.ಮೀ. ಉದ್ದವಿದ್ದು ಸುಮಾರು ೨ ಕಿ.ಮೀ. ಆಳವಿದೆ. ಥಾರಿಸ್ ವಲಯವು ಹೊರ ಉಬ್ಬಿ ವ್ಯಾಲೆಸ್ ಮ್ಯಾರಿನೆರಿಸ್‌ನ ಬಳಿಯಿದ್ದ ಮೇಲ್ಮೈಯನ್ನು ಕುಸಿಯುವಂತೆ ಮಾಡಿದಾಗ ವ್ಯಾಲೆಸ್ ಮ್ಯಾರಿನೆರಿಸ್ ರೂಪುಗೊಂಡಿತು. Ma'adim Vallis (ಹೀಬ್ರೂ ಭಾಷೆಯಲ್ಲಿ ಮಂಗಳವನ್ನು Ma'adim ಎನ್ನುತ್ತಾರೆ) ಇನ್ನೊಂದು ದೊಡ್ಡ ಕಂದರ. ಇದು ಕೂಡ ೭೦೦ ಕಿ.ಮೀ. ಉದ್ದ ಮತ್ತು ೨೦ಕಿ.ಮೀ. ಆಳವಿದ್ದು Grand Canyonಗಿಂತ ದೊಡ್ಡದಾಗಿದೆ. ಈ ಕಂದರದಲ್ಲಿ ಹಿಂದೊಮ್ಮೆ ನೀರು ಪ್ರವಹಿಸಿದ್ದಿರಬಹುದು.
ಮಂಗಳದ ಎರಡು ಧ್ರುವಗಳಲ್ಲಿ ಶಾಶ್ವತವಾದ ಹಿಮವಲಯಗಳಿವೆ.
ಕಕ್ಷೆ ಮತ್ತು ಪರಿಭ್ರಮಣ
[ಬದಲಾಯಿಸಿ]ಮಂಗಳದ ಕಕ್ಷೆಗೆ ಎದ್ದು ಕಾಣುವಂಥ ಸುಮಾರು ೯% ಕೇಂದ್ರ ಚ್ಯುತಿ (eccentricity) ಇದೆ. ಸೌರ ಮಂಡಲದಲ್ಲಿ ಬುಧ ಗ್ರಹವನ್ನು ಬಿಟ್ಟರೆ ಇನ್ನಾವ ಗ್ರಹವೂ ಇಷ್ಟು ಹೆಚ್ಚ್ಚಿನ ಕೇಂದ್ರ ಚ್ಯುತಿಯನ್ನು ಹೊಂದಿಲ್ಲ. ಸೂರ್ಯನಿಂದ ಮಂಗಳದ ಸರಾಸರಿ ದೂರ ಸುಮಾರು ೨೩ ಕೋಟಿ ಕಿ.ಮೀ. (೧.೫ ಖಗೋಳ ಮಾನ) ಮತ್ತು ಸರಾಸರಿ ಪರಿಭ್ರಮಣ ಕಾಲ ೬೮೭ ಭೂಮಿ ದಿನಗಳು. ಮಂಗಳದ ಮೇಲೆ ದಿನವು ಭೂಮಿಯ ದಿನಕ್ಕಿಂತ ಸ್ವಲ್ಪವೇ ದೊಡ್ಡದಾಗಿದೆ: ೨೪ ಘಂಟೆ, ೩೯ ನಿಮಿಷ, ಮತ್ತು ೩೫.೨೪೪ ಕ್ಷಣಗಳು.
ಮಂಗಳದ ಅಕ್ಷಾ ವಾಲಿಕೆ ೨೫.೨೯ ಡಿಗ್ರಿಗಳು. ಇದು ಸುಮಾರು ಭೂಮಿಯ ಅಕ್ಷಾ ವಾಲಿಕೆಯಷ್ಟೇ ಇದೆ. ಈ ಕಾರಣದಿಂದಾಗಿ ಭೂಮಿಯಂತೆ ಮಂಗಳದ ಮೇಲೂ ಋತುಗಳು ಕಂಡುಬರುತ್ತವೆ. ಆದರೆ, ಮಂಗಳದ ವರ್ಷವು ಭೂಮಿಯ ವರ್ಷದ ಸುಮಾರು ಎರಡು ಪಟ್ಟು ಇರುವುದರಿಂದ ಮಂಗಳದ ಮೇಲೆ ಋತುಗಳೂ ಭೂಮಿಯ ಋತುಗಳಿಗಿಂತ ಹೆಚ್ಚು ಕಾಲ ಇರುತ್ತವೆ.
ಉಪಗ್ರಹಗಳು
[ಬದಲಾಯಿಸಿ]ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ಎರಡು ಸಣ್ಣ ನೈಸರ್ಗಿಕ ಉಪಗ್ರಹಗಳಿವೆ. ಮಂಗಳವನ್ನು ಅತಿ ಸಮೀಪದಲ್ಲಿ ಪರಿಭ್ರಮಿಸುವ ಈ ಎರಡು ಉಪಗ್ರಹಗಳು ಮುಂಚೆ ಅಲೆದಾಡುವ ಆಕಾಶಕಾಯಗಳಾಗಿದ್ದವೆಂದು (asteroid) ಊಹಿಸಲಾಗಿದೆ.
ಇವನ್ನು ಕ್ರಿ.ಶ.೧೮೮೭ ರಲ್ಲಿ ಆಸಫ್ ಹಾಲ್ ಕಂಡು ಹಿಡಿದರು. ಗ್ರೀಕ್ ಪುರಾಣದಲ್ಲಿ ಉಲ್ಲೇಖಿತವಾಗಿರುವ ಫೋಬೋಸ್ (ಅರ್ಥಾತ್: ಭಯ) ಮತ್ತು ಡೀಮೋಸ್ (ಅರ್ಥಾತ್: ಆತಂಕ) ಎಂಬ ಎರಡು ಪಾತ್ರಗಳ ಹೆಸರನ್ನು ಈ ಉಪಗ್ರಹಗಳಿಗೆ ಇಡಲಾಗಿದೆ. ಗ್ರೀಕ್ ಪುರಾಣದ ಪ್ರಕಾರ ಇವರಿಬ್ಬರೂ ತಮ್ಮ ತಂದೆ ಹಾಗೂ ಯುದ್ಧದ ದೇವತೆಯಾದ ಏರೆಸ್‌ನ ಜೊತೆ ಕದನಕ್ಕೆ ಹೋದರಂತೆ. ಏರೆಸ್ ದೇವತೆಯನ್ನು ರೋಮನ್ನರು "ಮಾರ್ಸ್" ಎಂದೂ ಕರೆಯುತ್ತಿದ್ದರು.
ಮಂಗಳದ ಮೇಲ್ಮೈನಿಂದ ನೋಡಿದಾಗ, ಈ ಎರಡು ಉಪಗ್ರಹಗಳ ಚಲನೆಗಳು ನಮ್ಮ ಭೂಮಿಯ ಚಂದ್ರನ ಚಲನೆಗಿಂತ ಬಹಳ ಭಿನ್ನವಾಗಿ ಕಂಡುಬರುತ್ತವೆ. ಫೋಬೋಸ್ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಮುಳುಗುತ್ತದೆ. ಮುಳುಗಿ ೧೧ ಘಂಟೆಗಳ ತರುವಾಯ ಮತ್ತೆ ಉದಯಿಸುತ್ತದೆ. ಡೀಮೋಸ್ ನಿರೀಕ್ಷೆಯಂತೆ ಪೂರ್ವದಲ್ಲಿ ಉದಯಿಸಿದರೂ, ಬಹಳ ನಿಧಾನವಾಗಿ ಮೇಲೇರುತ್ತದೆ. ಇದರ ಪರಿಭ್ರಮಣ ಕಾಲ ಕೇವಲ ೩೦ ಘಂಟೆಗಳಾಗಿದ್ದರೂ, ಮಂಗಳದ ದೈನಂದಿಕ ಚಲನೆಯ ಕಾರಣದಿಂದಾಗಿ, ೨.೭ ದಿನಗಳ ಬಳಿಕ, ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತದೆ. ಡೀಮೋಸ್ ಮತ್ತೊಮ್ಮೆ ಉದಯಿಸಲು ಇನ್ನೂ ೨.೭ ದಿನಗಳೇ ಬೇಕಾಗುತ್ತವೆ.
ಫೋಬೋಸ್‌ನ ಕಕ್ಷೆಯು ಸಮಕಾಲಿಕ ಕಕ್ಷೆಯ (synchronous orbit) ಎತ್ತರಕ್ಕಿಂತ ಕೆಳಗಿರುವುದರಿಂದ, ಮಂಗಳದ ಗುರುತ್ವ ಬಲವು ಫೋಬೋಸ್‌ನನ್ನು ನಿಧಾನವಾಗಿ ತನ್ನೆಡೆಗೆ ಸೆಳೆಯುತ್ತಿದೆ. ಇದರಿಂದಾಗಿ ಇನ್ನು ಸುಮಾರು 5 ಕೋಟಿ ವರ್ಷಗಳಲ್ಲಿ ಫೋಬೋಸ್ ಮಂಗಳದ ಮೇಲೆ ಅಪ್ಪಳಿಸುತ್ತದೆ ಅಥವಾ ಮಂಗಳದ ಸುತ್ತ ಉಂಗುರಾಕಾರದಲ್ಲಿ ಪುಡಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ಜೀವರಾಶಿ
[ಬದಲಾಯಿಸಿ]ಹಿಂದೊಂದು ಕಾಲದಲ್ಲಿ ಮಂಗಳವು ಪ್ರಸ್ತುತಕ್ಕಿಂತ ಗಮನಾರ್ಹವಾಗಿ ಹೆಚ್ಚು ವಾಸಯೋಗ್ಯವಾಗಿತ್ತೆನ್ನುವುದಕ್ಕೆ ಕೆಲವು ಸಾಕ್ಷ್ಯಾಧಾರಗಳಿವೆ. ಆದರೆ ಯಾವುದೇ ಕಾಲದಲ್ಲಿ ಮಂಗಳದ ಮೇಲೆ ಜೀವಿಗಳು ಅಸ್ತಿತ್ವದಲ್ಲಿದ್ದವೆ? ಎಂಬುದು ಇನ್ನೂ ಉತ್ತರಿಸಲಾಗದ ಪ್ರಶ್ನೆ. ೭೦ರ ದಶಕದ ನಡುವೆ ಉಡಾಯಿಸಲಾದ ವೈಕಿಂಗ್ ಅನ್ವೇಷಕಗಳು ಮಂಗಳದ ಮೇಲಿಳಿದು ಅಲ್ಲಿ ಸೂಕ್ಷ್ಮ ಜೀವಿಗಳ ಇರುವಿಕೆಯನ್ನು ಕಂಡುಹಿಡಿಯಲು ಮಂಗಳದ ಮಣ್ಣಿನೊಂದಿಗೆ ಕೆಲವು ಪ್ರಯೋಗಗಳನ್ನು ನಡೆಸಿದವು. ಈ ಪ್ರಯೋಗಗಳ ಫಲಿತಾಂಶಗಳು ಆಶಾದಾಯಕವಾಗಿದ್ದವಾದರೂ, ತದನಂತರ ಹಲವು ವಿಜ್ಞಾನಿಗಳು ಈ ಫಲಿತಾಂಶಗಳನ್ನು ಅಲ್ಲಗಳೆದರು. ಇಂದಿಗೂ ಇವುಗಳ ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇವೆ.
ALH84001 ಎಂಬ ಹೆಸರಿನ ಉಲ್ಕೆಯಲ್ಲಿ (Meteor) ಸಾವಯವ ಸಂಯುಕ್ತ ವಸ್ತುಗಳು ಕಂಡುಬಂದಿವೆ. ಈ ಉಲ್ಕೆಯು ಮಂಗಳದಿಂದ ಭೂಮಿಗೆ ಬಂದಿತು ಎಂದು ನಂಬಲಾಗಿದೆ. ಸುಮಾರು ೧.೫ ಕೋಟಿ ವರ್ಷಗಳ ಹಿಂದೆ ಉಲ್ಕೆಯ ಸ್ಫೋಟದಿಂದ ಈ ALH84001 ಬಾಹ್ಯಾಕಾಶಕ್ಕೆ ಸಿಡಿಯಿತೆಂದೂ, ಉಲ್ಕಾ ಸ್ಫೋಟಕ್ಕೆ ಮುನ್ನ ಮಂಗಳದ ಮೇಲಿದ್ದ ಪ್ರಾಚೀನ ಸೂಕ್ಷ್ಮ ಜೀವಿಗಳೇ ಸಾವಯವ ವಸ್ತುಗಳನ್ನು ಶೇಖರ ಮಾಡಿದ್ದವೆಂದೂ ವಿಜ್ಞಾನಿಗಳು ನಿರ್ಧರಿಸಿದರು. ಸಣ್ಣ ಪ್ರಮಾಣದಲ್ಲಿ ಕಂಡುಬಂದ ಮೀಥೇನ್ ಮತ್ತು ಫಾರ್ಮಾಲ್ಡಿಹೈಡ್ ಸಂಯುಕ್ತಗಳು ಮಂಗಳದ ಮೇಲೆ ಜೀವಿಗಳಿರುವುದಕ್ಕೆ ಸಾಕ್ಷಿ ಎಂದೂ ಸೂಚಿಸಲಾಗಿದೆ. ಜೀವಿಗಳಿಲ್ಲದಿದ್ದರೆ ಈ ವಸ್ತುಗಳು ಮಂಗಳದ ವಾಯುಮಂಡಲದಲ್ಲಿ ಬಹುಬೇಗನೆ ಪತನವಾಗುತ್ತಿದ್ದವು. ಆದರೆ ಈ ವಸ್ತುಗಳು ಅಗ್ನಿಪರ್ವತಗಳ ಚಟುವಟಿಕೆಯಿಂದ ಅಥವಾ ಗ್ರಹದ ಒಳಗಿನಿಂದಲೂ ಮೇಲ್ಮೈಗೆ ಬಂದಿರಬಹುದು.
ಸಾಧಾರಣವಾಗಿ ಮಂಗಳವನ್ನು ವಾಸಯೋಗ್ಯವಾಗಿ ಪರಿಗಣಿಸಲು ಕೆಲವು ಕಾರಣಗಳಿದ್ದರೂ, ವಾಸದ ಮುನ್ನ ಎದುರಿಸಬೇಕಾದ ಹಲವಾರು ಸಮಸ್ಯೆಗಳೂ ಇವೆ. ಮಂಗಳವು ಸೂರ್ಯನ ವಾಸಯೋಗ್ಯ ವಲಯದ ಮಿತಿಯಿಂದ ೦.೫ ಖಗೋಳಮಾನ ಆಚೆಯಿರುವುದರಿಂದ ಇಲ್ಲಿ ನೀರು ಸದಾಕಾಲ ಹೆಪ್ಪುಗಟ್ಟಿ ಮಂಜಾಗಿರುತ್ತದೆ. ಹೀಗಿದ್ದರೂ, ಹಿಂದಿನ ಕಾಲದಲ್ಲಿ ಇಲ್ಲಿ ನೀರು ಜಲರೂಪದಲ್ಲಿ ಇತ್ತೆಂಬುದಕ್ಕೆ ಸಾಕ್ಷಿಗಳಿವೆ. ಹೀಗಾಗಿ ಇದು ಬಹಳ ದೊಡ್ಡ ಸಮಸ್ಯೆಯಲ್ಲವೆಂದು ಪರಿಗಣಿಸಬಹುದು. ಇದಕ್ಕಿಂತ ದೊಡ್ಡದಾದ ಗಂಭೀರ ಸಮಸ್ಯೆಗಳೆಂದರೆ: ಮಂಗಳದ ಮೇಲೆ ಕಾಂತಕ್ಷೇತ್ರ ಇಲ್ಲದಿರುವುದು ಹಾಗೂ ಅತಿ ವಿರಳವಾದ ವಾಯುಮಂಡಲ. ಇವುಗಳ ಪರಿಣಾಮ ಮೇಲ್ಮೈನ ಮೇಲೆ ಶಾಖದ ಸಂವಹನ ಉಂಟಾಗದಿರುವುದು, ಸೂರ್ಯನ ವಿಕಿರಣ ಮತ್ತು ಉಲ್ಕೆಗಳಿಂದ ರಕ್ಷಣೆ ಸಿಗದಿರುವುದು, ನೀರನ್ನು ಜಲರೂಪದಲ್ಲಿಟ್ಟುಕೊಳ್ಳಲು ಅಗತ್ಯವಾದಷ್ಟು ವಾಯು ಒತ್ತಡ ಇಲ್ಲದಿರುವುದು (ಬದಲಿಗೆ, ಸ್ವಲ್ಪ ಶಾಖ ಸಿಕ್ಕಾಕ್ಷಣ ಘನೀಕೃತ ಮಂಜು ನೇರವಾಗಿ ನೀರಾವಿಯಾಗಿ ಮಾರ್ಪಾಡಾಗುತ್ತದೆ), ಮುಂತಾದವು.
ಇದಲ್ಲದೆ, ಮಂಗಳದಲ್ಲಿ ಅಗ್ನಿಪರ್ವತಗಳ ಚಟುವಟಿಕೆಗಳು ಸಂಪೂರ್ಣವಾಗಿ ಅಥವಾ ಬಹುಮಟ್ಟಿಗೆ ನಿಂತುಹೋಗಿವೆ. ಇದರ ಕಾರಣದಿಂದಾಗಿ ಮೇಲ್ಮೈ ಮತ್ತು ಗ್ರಹದ ಒಳಭಾಗಗಳ ನಡುವೆ ಖನಿಜಗಳ ಚಲನೆ ನಡೆಯುತ್ತಿಲ್ಲ.
ಅನ್ವೇಷಣೆ
[ಬದಲಾಯಿಸಿ]ಗ್ರಹದ ಮೇಲ್ಮೈ, ಹವಾಮಾನ ಮತ್ತು ಒಳಭಾಗಗಳನ್ನು ಅಧ್ಯಯನ ಮಾಡಲು ಸೋವಿಯೆತ್ ರಷ್ಯಾ,ಅಮೆರಿಕಾ ಸಂಯುಕ್ತ ಸಂಸ್ಥಾನ, ಯೂರೋಪ್, ಮತ್ತು ಜಪಾನ್ನಿಂದ, ಅನ್ವೇಷಕಗಳು, ಪರ್ಯಟಕಗಳು, ಪರಿಭ್ರಮಕಗಳು ಸೇರಿದಂತೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಮಂಗಳದತ್ತ ಕಳುಹಿಸಲಾಗಿದೆ.
ಇವುಗಳಲ್ಲಿ ಸುಮಾರು ೩ನೇ ೨ರಷ್ಟು ನೌಕೆಗಳು ತಮ್ಮ ಉದ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಮುನ್ನ ಅಥವಾ ಆರಂಭಿಸುವುದಕ್ಕೆ ಮುನ್ನವೇ ವಿಫಲವಾಗಿಹೋಗಿವೆ. ಈ ವೈಫಲ್ಯತೆಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಉಂಟಾದುವು. ಆದರೆ, ಇನ್ನು ಹಲವು ನೌಕೆಗಳು ಅರ್ಥವಾಗದ ಯಾವುದೋ ಕಾರಣದಿಂದ ವಿಫಲವಾಗಿಯೋ,ಭೂಮಿಯ ಜೊತೆ ಸಂಪರ್ಕ ಕಡಿದುಕೊಂಡೋ ಬಾಹ್ಯಾಕಾಶದಲ್ಲಿ ಕಳೆದುಹೋಗಿವೆ. ಈ ರೀತಿ ಸಾಕಷ್ಟು ನೌಕೆಗಳು ಕಳೆದು ಹೋಗಿರುವುದರಿಂದ ಕೆಲವು ಸಂಶೋಧಕರು ತಮಾಷೆಯಾಗಿ ಭೂಮಿ-ಮಂಗಳದ ನಡುವೆ "ಬರ್ಮುಡಾ ತ್ರಿಕೋಣ", ಅಥವಾ ಅಂಗಾರಕ ಶಾಪದ ಬಗ್ಗೆ ಮಾತಾಡುತ್ತಾರೆ ಮತ್ತು ಮಂಗಳಕ್ಕೆ ಹೊರಟ ನೌಕೆಗಳನ್ನು ತಿನ್ನುವ ಒಂದು "ಬೃಹತ್ ಬ್ರಹ್ಮಾಂಡ ಪಿಶಾಚಿ"ಯನ್ನು ಉಲ್ಲೇಖಿಸುತ್ತಾರೆ.[೧೧]
ಹಿಂದಿನ ಅನ್ವೇಷಣಾ ಯಾತ್ರೆಗಳು
[ಬದಲಾಯಿಸಿ]ಮಂಗಳದ ಸಮೀಪದಲ್ಲಿ ಹಾದುಹೋದ ಮೊಟ್ಟಮೊದಲ ನೌಕೆಯೆಂದರೆ ೧೯೬೪ರಲ್ಲಿ ನಾಸಾ ಉಡಾಯಿಸಿದ ಮ್ಯಾರಿನರ್ 4. ಮಂಗಳದ ನೆಲವನ್ನು ಮುಟ್ಟಿದ ಮೊದಲ ಮಾನವ ನಿರ್ಮಿತ ವಸ್ತುಗಳೆಂದರೆ ರಷ್ಯಾ ಮಂಗಳ ಅನ್ವೇಷಣಾ ಕಾರ್ಯಕ್ರಮದ ಮೂಲಕ ೧೯೭೧ರಲ್ಲಿ ಉಡಾಯಿಸಲಾದ ಮಂಗಳ ೨ ಮತ್ತು ಮಂಗಳ ೩ ಎಂಬ ಹೆಸರಿನ ಎರಡು ಅನ್ವೇಷಕಗಳು. ಆದರೆ ಮಂಗಳದ ಮೇಲ್ಮೈ ತಲುಪಿದ ಕೆಲವೇ ಕ್ಷಣಗಳಲ್ಲಿ ಭೂಮಿಯ ಜೊತೆ ಈ ಎರಡೂ ಅನ್ವೇಷಕಗಳ ಸಂಪರ್ಕ ಕಡಿದುಹೋಯಿತು. ನಂತರ ೧೯೭೫ರಲ್ಲಿ ನಾಸಾ ವೈಕಿಂಗ್ ಕಾರ್ಯಕ್ರಮದ ಉಡಾವಣೆಗಳು ಶುರುವಾದವು.
ಈ ಉಡಾವಣೆಗಳಲ್ಲಿ ಇಳಿಯುವ ಭಾಗಗಳುಳ್ಳ ಎರಡು ಪರಿಭ್ರಮಕಗಳು ಸೇರಿದ್ದವು. ಈ ಎರಡು ಪರಿಭ್ರಮಕಗಳ ಇಳಿಯುವ ಭಾಗಗಳೂ ೧೯೭೬ರಲ್ಲಿ ಯಶಸ್ವಿಯಾಗಿ ಮಂಗಳದ ಮೇಲಿಳಿದು ೬ ವರ್ಷ (ವೈಕಿಂಗ್ ೧) ಮತ್ತು ೩ ವರ್ಷಗಳವರೆಗೆ (ವೈಕಿಂಗ್ ೨) ಕೆಲಸ ಮಾಡಿದವು. ಇದಲ್ಲದೆ ಮೊದಲನೇ ಬಾರಿಗೆ ಈ ವೈಕಿಂಗ್ ಇಳಿಭಾಗಗಳು ಮಂಗಳದ ಬಣ್ಣದ ಛಾಯಾಚಿತ್ರಗಳನ್ನು ಭೂಮಿಗೆ ಕಳಿಸಿದವು.[೧೨]
ಇವು ಮಂಗಳದ ಮೇಲ್ಮೈ ಸಮೀಕ್ಷೆ ಮಾಡಿ ಮೇಲ್ಮೈ ನಕ್ಷೆಯನ್ನು ತಯಾರು ಮಾಡಿದವು. ಈ ತಯಾರಿಕೆಗಳು ಎಷ್ಟು ಸ್ಫುಟವಾಗಿದ್ದವೆಂದರೆ, ಇಂದಿಗೂ ಈ ಚಿತ್ರ ಮತ್ತು ನಕ್ಷೆಗಳನ್ನು ಒಮ್ಮೊಮ್ಮೆ ಉಪಯೋಗಿಸಲಾಗುತ್ತಿದೆ. ಮಂಗಳ ಮತ್ತದರ ಎರಡು ಉಪಗ್ರಹಗಳನ್ನು ಅಧ್ಯಯನ ಮಾಡಲೆಂದು ೧೯೮೮ರಲ್ಲಿ ರಷ್ಯಾದಿಂದ ಫೋಬೋಸ್ ೧ ಮತ್ತು ೨ ಅನ್ವೇಷಕಗಳನ್ನು ಕಳಿಸಲಾಯಿತು. ದುರದೃಷ್ಟವಶಾತ್, ಫೋಬೋಸ್ ೧ರ ಮಾರ್ಗಮಧ್ಯದಲ್ಲೇ ಅದರ ಜೊತೆ ಸಂಪರ್ಕ ಕಡಿದುಹೋಯಿತು. ಫೋಬೋಸ್ ೨ ಯಶಸ್ವಿಯಾಗಿ ಮಂಗಳ ಮತ್ತು ಫೋಬೋಸ್ಗಳ ಛಾಯಾಚಿತ್ರಗಳನ್ನು ತೆಗೆಯಿತಾದರೂ, ಫೋಬೋಸ್‌ನ ಮೇಲೆ ತನ್ನ ಒಂದು ಭಾಗವನ್ನು ಇಳಿಸುವುದಕ್ಕೆ ಸ್ವಲ್ಪವೇ ಮುಂಚೆ ವಿಫಲವಾಯಿತು.
ಈಗಿನ ಅನ್ವೇಷಣಾ ಯಾತ್ರೆಗಳು
[ಬದಲಾಯಿಸಿ]೧೯೯೨ರಲ್ಲಿ ಮಂಗಳ ವೀಕ್ಷಕ ಪರಿಭ್ರಮಕವು ವಿಫಲವಾದ ಬಳಿಕ, ೧೯೯೬ರಲ್ಲಿ ನಾಸಾ ಮಂಗಳ ಗ್ಲೋಬಲ್ ಸಮೀಕ್ಷಕವನ್ನು ಉಡಾಯಿಸಿತು. ತನ್ನ ಮುಖ್ಯ ಧ್ಯೇಯವಾದ ಸಮೀಕ್ಷಾಕಾರ್ಯವನ್ನು ೨೦೦೧ರ ಪ್ರಾರಂಭದ ಹೊತ್ತಿಗೆ ಮುಗಿಸಿದ ಈ ಯಾತ್ರೆಯು ಸಂಪೂರ್ಣವಾಗಿ ಯಶಸ್ವಿಯಾಯಿತು. ಸಮೀಕ್ಷಕದ ಉಡಾವಣೆಯ ಒಂದೇ ತಿಂಗಳ ತರುವಾಯ, ನಾಸಾ ಮಂಗಳ ಮಾರ್ಗಶೋಧಕವನ್ನು ಉಡಾಯಿಸಿತು. ಮಾರ್ಗಶೋಧಕ ಕೊಂಡೊಯ್ದಿದ್ದ ಯಂತ್ರಮಾನವಯುಕ್ತ ಅನ್ವೇಷಣಾ ವಾಹನವೊಂದು ಮಂಗಳದ ಏರೆಸ್ ವ್ಯಾಲಿಸ್ನಲ್ಲಿ ಇಳಿಯಿತು. ಅತ್ಯಂತ ಯಶಸ್ವಿಯಾದ ಈ ಯಾತ್ರೆಗೆ ಬಹಳ ಪ್ರಸಿದ್ಧಿ ಮತ್ತು ಪ್ರಚಾರಗಳು ಸಿಕ್ಕವು. ಈ ಅನ್ವೇಷಕವು ಭೂಮಿಗೆ ಕಳುಹಿಸಿದ ಹಲವು ಅದ್ಭುತ ಛಾಯಚಿತ್ರಗಳೂ ಈ ಪ್ರಸಿದ್ಧಿಗೆ ಒಂದು ಕಾರಣ.[೧೩]
೨೦೦೧ರಲ್ಲಿ ನಾಸಾ, ಯಶಸ್ವಿಯಾದ ಮಂಗಳ ಒಡಿಸ್ಸಿ ಪರಿಭ್ರಮಕವನ್ನು ಉಡಾಯಿಸಿತು. ಇದು ಆಗಸ್ಟ್ ೨೦೦೬ರಲ್ಲಿ ಸಿಕ್ಕಿದ ಮಾಹಿತಿಯ ಪ್ರಕಾರ ಇನ್ನೂ ಮಂಗಳವನ್ನು ಪರಿಭ್ರಮಿಸುತ್ತಿದೆ. ಒಡಿಸ್ಸಿಯ ಗಾಮಾ ಕಿರಣ ವರ್ಣಪಟಲಮಾಪಕವು ಮಂಗಳದ ಬಾಹ್ಯ ಶಿಲಾಪದರವಾದ ರೆಗೋಲಿಥ್ನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮೂಲರೂಪಿ ಜಲಜನಕವನ್ನು ಪತ್ತೆಹಚ್ಚಿದೆ. ಘನೀಕೃತ ನೀರಿನ ದೊಡ್ಡ ಶೇಖರಣೆಗಳು ಈ ಜಲಜನಕದ ಇರುವಿಕೆಗೆ ಕಾರಣ ಎಂದು ನಂಬಲಾಗಿದೆ.[೧೪] ೨೦೦೩ರಲ್ಲಿ ಮಂಗಳ ಎಕ್ಸ್‌ಪ್ರೆಸ್ ಪರಿಭ್ರಮಕ ಮತ್ತು ಬೀಗಲ್ ೨ ಎಂಬ ಹೆಸರಿನ ಇಳಿಯುವ ಭಾಗವನ್ನೊಳಗೊಂಡ ಮಂಗಳ ಎಕ್ಸ್‌ಪ್ರೆಸ್ ನೌಕೆಯನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಉಡಾಯಿಸಿತು. ಇಳಿಯುತ್ತಿರುವಾಗ ವಿಫಲವಾದಂತೆ ಕಂಡುಬಂದ ಬೀಗಲ್ ೨ ನ್ನು ೨೦೦೪ರ ಫೆಬ್ರವರಿಯಲ್ಲಿ ಕಳೆದುಹೋಯಿತೆಂದು ಘೋಷಿಸಲಾಯಿತು.[೧೫] ೨೦೦೪ರ ಪ್ರಾರಂಭದಲ್ಲಿ Planetary Fourier Spectrometer ತಂಡವು ಮಂಗಳದ ವಾಯುಮಂಡಲದಲ್ಲಿ ಮೀಥೇನ್ ವಾಯುವನ್ನು ಪತ್ತೆಹಚ್ಚಲಾಗಿರುವುದೆಂದು ಘೋಷಿಸಿತು. ಜೂನ್ ೨೦೦೬ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಮಂಗಳದಲ್ಲಿ ಧ್ರುವಾರುಣ ಜ್ಯೋತಿಯ (Aurora) ಅರಿವನ್ನು ಘೋಷಿಸಿತು.[೧೬]
ಇದಲ್ಲದೆ ೨೦೦೩ರಲ್ಲಿ ನಾಸಾ ಸ್ಪಿರಿಟ್ (MER-A) ಮತ್ತು ಆಪರ್ಚುನಿಟಿ (MER-B) ಎಂಬ ಹೆಸರಿನ ಅವಳಿ ಮಂಗಳಾನ್ವೇಷಣ ಪರ್ಯಟಕಗಳನ್ನು ಉಡಾಯಿಸಿತು. ಯಶಸ್ವಿಯಾಗಿ ಜನವರಿ ೨೦೦೪ರಲ್ಲಿ ಮಂಗಳವನ್ನು ತಲುಪಿದ ಈ ಎರಡೂ ತಮ್ಮ ಯಾತ್ರೆಯ ಎಲ್ಲ ನಿರೀಕ್ಷೆಗಳನ್ನೂ ಮುಟ್ಟಿವೆ ಅಥವಾ ನಿರೀಕ್ಷೆ ಮೀರಿ ಕಾರ್ಯ ನಿರ್ವಹಿಸಿವೆ.
ಈ ಅನ್ವೇಷಕಗಳಿಂದ ಹೊರಬಂದ ಪ್ರಮುಖ ವೈಜ್ಞಾನಿಕ ಫಲಿತಾಂಶಗಳಲ್ಲಿ ಒಂದೆಂದರೆ: ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ದ್ರವರೂಪದಲ್ಲಿತ್ತು ಎಂಬುದರ ಬಗ್ಗೆ ನಿರ್ಣಾಯಕವಾದ ಸಾಕ್ಷಿ. ಧೂಳಿನ ಮಾರುತಗಳು ಈ ಎರಡು ಅನ್ವೇಷಕಗಳ ಸೌರಫಲಕಗಳನ್ನು ಒಮ್ಮೊಮ್ಮೆ ಶುಚಿಗೊಳಿಸಿ ಫಲಕಗಳ ಆಯಸ್ಸನ್ನು ಹೆಚ್ಚಿಸಿವೆ.[೧೭] ಎರಡು ವರ್ಷಗಳ ಕಾಲ ವೈಜ್ಞಾನಿಕ ಸಮೀಕ್ಷೆಯೊಂದನ್ನು ನಿರ್ವಹಿಸಲು ಆಗಸ್ಟ್ ೧೨, ೨೦೦೫ರಂದು ನಾಸಾ ಮಂಗಳ ಬೇಹುಗಾರಿಕಾ ಪರಿಭ್ರಮಕವನ್ನು ಮಂಗಳದತ್ತ ಹಾರಿಸಲಾಯಿತು. ಮಂಗಳದ ಮೇಲ್ಮೈ ನಕ್ಷಾ ತಯಾರಿಕೆ ಮತ್ತು ಮುಂಬರುವ ಯಾತ್ರೆಗಳಿಗೆ ಸೂಕ್ತವಾದ ಇಳಿಯುವ ತಾಣಗಳನ್ನು ಕಂಡುಹಿಡಿಯುವುದು ಈ ಪರಿಭ್ರಮಕದ ಉದ್ದೇಶಗಳು. ಇದು ಮಾರ್ಚ್ ೧೦, ೨೦೦೬ರಂದು ತನ್ನ ಪರಿಭ್ರಮಣೆಯನ್ನು ಶುರುಮಾಡಿತು. ೨೦೦೭ರಲ್ಲಿ ಉಡಾವಣೆಯ ನಿರೀಕ್ಷೆಯಲ್ಲಿರುವ ನಾಸಾ ಫೀನಿಕ್ಸ್ನೌಕೆಯು ಮುಂದಿನ ನಿಗದಿತ ಮಂಗಳಯಾನ.[೧೮]
ಮುಂದಿನ ಅನ್ವೇಷಣಾ ಯೋಜನೆಗಳು
[ಬದಲಾಯಿಸಿ]ಭವಿಷ್ಯದಲ್ಲಿ ಮಾನವರಹಿತ ಮಂಗಳಯಾನದ ಯೋಜನೆಗಳಲ್ಲಿ ಈ ಕೆಳಗಿನವು ಸೇರಿವೆ: ೨೦೦೭ರಲ್ಲಿ ಫೀನಿಕ್ಸ್ ನೌಕೆ, ನಂತರ ೨೦೦೯ರಲ್ಲಿ ಮಂಗಳ ವಿಜ್ಞಾನ ಪ್ರಯೋಗಶಾಲೆ, ಫೋಬೋಸ್‌ನಿಂದ ಮಣ್ಣು-ಕಲ್ಲುಗಳ ಮಾದರಿಗಳನ್ನು ಭೂಮಿಗೆ ಮರಳಿ ತರುವ ಉದ್ದೇಶವಿರುವ Phobos-Grunt ಯಾನ. ಇವಲ್ಲದೆ ಇತರ ಯಾನಗಳನ್ನು ಪ್ರಸ್ತಾಪಿಸಲಾಗಿದ್ದರೂ, ಇವು ಯಾವುದನ್ನೂ ಇದುವರೆಗೆ ದೃಢಪಡಿಸಲಾಗಿಲ್ಲ. ಮಂಗಳ ಗ್ರಹಕ್ಕೆ ಇತ್ತೀಚಿನ ಮಿಷನ್ ಯುಎಇ ಕೈಗೆತ್ತಿಕೊಂಡಿತು.
೨೦೦೪ರಲ್ಲಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್‌ರವರು ಘೋಷಿಸಿದ ಬಾಹ್ಯಾಕಾಶ ಅನ್ವೇಷಣಾ ಆಕಾಂಕ್ಷೆಯಲ್ಲಿ ಮಾನವಸಹಿತ ಮಂಗಳಯಾನಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.[೧೯] ೨೦೩೦ ಮತ್ತು ೨೦೩೫ರ ನಡುವೆ ಮಂಗಳದ ಮೇಲೆ ಮಾನವರನ್ನು ತಲುಪಿಸಬಹುದೆಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಆಶಾದಾಯಕವಾಗಿದೆ. ಇದಕ್ಕಿಂತ ಮೊದಲು ಒಂದಕ್ಕಿಂತ ಒಂದು ದೊಡ್ಡ ಅನ್ವೇಷಕಗಳನ್ನು ಹಾರಿಸಲಾಗುತ್ತದೆ. ಇವುಗಳಲ್ಲಿ ಮೊದಲನೆಯದು ೨೦೧೩ರಲ್ಲಿ ಹಾರಿಸಲಾಗುವ ಎಕ್ಸೋ ಮಾರ್ಸ್ ಅನ್ವೇಷಕ.[೨೦][೨೧] ಇದರ ನಂತರ 'ಮಂಗಳ ಶಿಲಾಮಾದರಿ ಮರಳುವಿಕೆ ಯಾನ'ಗಳು ಶುರುವಾಗುತ್ತವೆ. ಇದೇರೀತಿಯಲ್ಲಿ, ಈ ಯಾನದ ಪೂರ್ವಸಿದ್ಧತೆಯ ಉದ್ದೇಶದಿಂದಾಗಿ ೨೦೨೦ ಮತ್ತು ೨೦೨೫ರ ನಡುವೆ ಗಗನಯಾತ್ರಿಗಳನ್ನು ಚಂದ್ರನತ್ತ ಕಳುಹಿಸಲಾಗುವುದು.
ಮಂಗಳದಿಂದ ಖಗೋಳ ವೀಕ್ಷಣೆ
[ಬದಲಾಯಿಸಿ]ಮುಖ್ಯ ಲೇಖನ: ಮಂಗಳದ ಮೇಲೆ ಖಗೋಳಾಧ್ಯಯನ
ಇದನ್ನೂ ನೋಡಿ: ಮಂಗಳದ ಮೇಲೆ ಸಮಯ
ಪ್ರಸ್ತುತದಲ್ಲಿ ವಿವಿಧ ಪರಿಭ್ರಮಕಗಳು, ಪರ್ಯಟಕಗಳು, ಇತ್ಯಾದಿಗಳ ಅಸ್ತಿತ್ವದ ಕಾರಣದಿಂದ, ಮಂಗಳದ ಆಗಸದಿಂದಲೇ ಖಗೋಳಶಾಸ್ತ್ರವನ್ನು ಅಧ್ಯಯನ ಮಾಡಬಹುದು. ಮಂಗಳದಿಂದ, ಭೂಮಿ ಮತ್ತು ಚಂದ್ರ ಬರಿಗಣ್ಣಿಗೆ ಸುಲಭವಾಗಿ ಕಾಣುತ್ತವೆ. ಇದಲ್ಲದೆ, ಮಂಗಳದ ಎರಡು ನೈಸರ್ಗಿಕ ಉಪಗ್ರಹಗಳನ್ನೂ ನೋಡಬಹುದು. ಫೋಬೋಸ್ ಉಪಗ್ರಹವು ಭೂಮಿಯಿಂದ ಪೂರ್ಣಚಂದ್ರನು ಕಾಣುವ ಮೂರನೇ ಒಂದು ಭಾಗದಷ್ಟು ಕೋನ ವ್ಯಾಸದಲ್ಲಿ (angular diameter) ಕಂಡುಬರುತ್ತದೆ. ಫೋಬೋಸ್ ಪೂರ್ಣ ಪ್ರಕಾಶತೆಯಲ್ಲಿರುವಾಗ ಮಂಗಳದ ಮೇಲೆ ನೆರಳುಗಳುಂಟಾಗುವಷ್ಟು ಬೆಳಕಿರುತ್ತದೆ. ಆದರೆ, ಡೀಮೋಸ್ ಉಪಗ್ರಹವು ಭೂಮಿಯಿಂದ ಶುಕ್ರವು ಕಾಣುವುದಕ್ಕಿಂತ ಸ್ವಲ್ಪವೇ ಹೆಚ್ಚು ಪ್ರಕಾಶಮಾನವಾಗಿ ಕಂಡು, ನಕ್ಷತ್ರದಂತೆ ಕಂಡುಬರುತ್ತದೆ.[೨೨]
ಭೂಮಿಯ ಮೇಲೆ ಉಂಟಾಗುವ ಉಲ್ಕೆಗಳ ಧಾಳಿ, ಧ್ರುವಾರುಣ ಜ್ಯೋತಿ, ಮುಂತಾದ ಘಟನೆಗಳನ್ನು ಮಂಗಳದ ಮೇಲೂ ಕಾಣಲಾಗಿದೆ. ಸ್ಪಿರಿಟ್ ಪರ್ಯಟಕವು ಮಾರ್ಚ್ ೭, ೨೦೦೪ ರಂದು ಮೊದಲಬಾರಿಗೆ ಮಂಗಳದ ಮೇಲೆ ಉಲ್ಕೆಯ ಚಿತ್ರವನ್ನು ತೆಗೆಯಿತು. ಮಂಗಳದ ಮೇಲೂ ಧ್ರುವಾರುಣ ಜ್ಯೋತಿಗಳು ಉಂಟಾದರೂ, ಅಲ್ಲಿ ಕಾಂತಗೋಳವಿಲ್ಲದಿರುವುದರಿಂದ, ಈ ಜ್ಯೋತಿಗಳು ಮಂಗಳದ ಧ್ರುವಗಳ ಬಳಿ ಉಂಟಾಗುವುದಿಲ್ಲ. ಬದಲಿಗೆ, ಮಂಗಳದ ಹೊರಪದರದಲ್ಲಿ ಕಾಂತೀಯವಾಗಿರುವ ಭಾಗಗಳಲ್ಲಿ ಉಂಟಾಗುತ್ತವೆ. ಈ ಕಾಂತೀಯ ಭಾಗಗಳು ಮಂಗಳವು ಹಿಂದೆ ಹೊಂದಿದ್ದ ಕಾಂತಗೋಳದ ಅವಷೇಶಗಳು. ಮಂಗಳದ ಧ್ರುವಾರುಣ ಜ್ಯೋತಿಯು ಅತಿನೇರಳೆ (ultraviolet) ವರ್ಣದಲ್ಲುಂಟಾಗುವುದರಿಂದ ಇವು ಬಹುಶಃ ಬರಿಗಣ್ಣಿಗೆ ಕಾಣುವುದಿಲ್ಲ.[೨೩]
ಮಂಗಳದ ಮೇಲಿನಿಂದ ನೋಡಿದಂತೆ ಭೂಮಿಯ ಸಂಕ್ರಮಣವು ನವೆಂಬರ್ ೧೦, ೨೦೮೪ರಂದು ಆಗುತ್ತದೆ. ಆ ದಿನದಂದು ಸೂರ್ಯ, ಭೂಮಿ ಮತ್ತು ಮಂಗಳಗಳು ಒಂದೇ ಸರಳ ರೇಖೆಯಲ್ಲಿರುತ್ತವೆ. ಮಂಗಳದ ಮೇಲಿನಿಂದ ನೋಡಿದಂತೆ ಬುಧ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣಗಳೂ ಉಂಟಾಗುತ್ತವೆ. ಡೀಮೋಸ್ ಉಪಗ್ರಹವು ಬಹಳ ಸಣ್ಣದಾಗಿರುವುದರಿಂದ ಅದು ಸೃಷ್ಟಿಸುವ ಸೂರ್ಯನ ಖಂಡಗ್ರಹಣಗಳನ್ನು ಸಂಕ್ರಮಣಗಳೆಂದೇ ಪರಿಗಣಿಸಬಹುದು (ಮಂಗಳದ ಮೇಲಿನಿಂದ ನೋಡಿದಂತೆ ಡೀಮೋಸ್ ಸಂಕ್ರಮಣ ಲೇಖನವನ್ನು ನೋಡಿ).
ಬುಧವು ಮಂಗಳವನ್ನು ಮರೆಮಾಡಿದ ಘಟನೆಯನ್ನು ಅಕ್ಟೋಬರ್ ೩, ೧೫೯೦ರಂದು M. Möstlin ಅವರು ಹೈಡಲ್‌ಬರ್ಗ್ನಲ್ಲಿ ವೀಕ್ಷಿಸಿದರು.[೨೪]
ಉಲ್ಲೇಖಗಳು
[ಬದಲಾಯಿಸಿ]- ↑ ನಾಸಾ ಮಂಗಳ ಪುಟ
- ↑ "Mineral in Mars 'Berries' Adds to Water Story". Archived from the original on 2007-11-09. Retrieved 2006-12-06.
- ↑ "New Map Provides More Evidence Mars Once Like Earth" Archived 2011-09-15 ವೇಬ್ಯಾಕ್ ಮೆಷಿನ್ ನಲ್ಲಿ. - Oct. 12, 2005 [[:en:Goddard Space Flight Center|]] Press release. URL accessed March 17, 2006.
- ↑ APSನ ಕ್ಷ-ಕಿರಣದಿಂದ ಬಯಲಾದ ಮಂಗಳ ಗ್ರಹದ ಒಳಭಾಗದ ರಹಸ್ಯಗಳು
- ↑ "ಮಂಗಳ ಗ್ರಹದ ಶಾಸ್ತ್ರಜ್ಞರು". Archived from the original on 2017-07-01. Retrieved 2006-12-27.
- ↑ ಒಲಂಪಸ್ ಮಾನ್ಸ್ (ನಿಕ್ಸ್ ಒಲಿಂಪಿಕಾ)
- ↑ ಏರಿ-೦
- ↑ ಸ್ಥಳವರ್ಣನೆ
- ↑ Syrtis Major
- ↑ "ಮಂಗಳದ ಭೂವಿವರಣೆ". Archived from the original on 2006-06-15. Retrieved 2006-12-27.
- ↑ ಬೃಹತ್ ಬ್ರಹ್ಮಾಂಡ ಪಿಶಾಚಿಯ ಹಸಿವು ಕಡಿಮೆಯಾಯಿತೇ?
- ↑ "ಮಂಗಳಕ್ಕೆ ಇತರ ಯಾತ್ರೆಗಳು". Archived from the original on 2012-05-30. Retrieved 2006-12-07.
- ↑ ಮಂಗಳ ಗ್ಲೋಬಲ್ ಸಮೀಕ್ಷಕ
- ↑ ಮಂಗಳದ ಮೇಲೆ ಹೊಸ ರಹಸ್ಯಗಳನ್ನು ಸೃಷ್ಟಿಸಿದ ಒಡಿಸ್ಸಿ ಗಗನನೌಕೆ
- ↑ Europe's Beagle 2 Mars Probe Stays Ominously Silent
- ↑ http://www.esa.int/SPECIALS/Mars_Express/SEMLQ71DU8E_0.html
- ↑ Mars Exploration Rovers- Science
- ↑ MRO: Science
- ↑ ಮಂಗಳಕ್ಕೆ ನಾವು ಎಂದು ಹೋಗುವೆವು?
- ↑ "ಎಕ್ಸೋ ಮಾರ್ಸ್". Archived from the original on 2006-10-13. Retrieved 2006-12-07.
- ↑ ಯೂರೋಪ್‌ನ ಮಂಗಳ ಉಡಾವಣೆಯ ಮುಂದೂಡಿಕೆ
- ↑ ಡೀಮೋಸ್
- ↑ ಮಂಗಳದ ಮೇಲೆ ಧ್ರುವಾರುಣ ಜ್ಯೋತಿಯ ಆವಿಷ್ಕಾರ
- ↑ Mutual Occultation of Planets - Stephen Breyer, Sky and Telescope Journal, March 1979, 57#3 pp220
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಮಂಗಳ ಗ್ರಹದ ೩ ಆಯಾಮದ ನಕಾಶೆಗಳು Archived 2008-10-12 ವೇಬ್ಯಾಕ್ ಮೆಷಿನ್ ನಲ್ಲಿ.
- ಗೂಗಲ್ ಮಾರ್ಸ್ – ಮಂಗಳ ಗ್ರಹದ ಚಿತ್ರಗಳು
- ಗೈಡ್ ಟು ಮಾರ್ಸ್ Archived 2008-07-24 ವೇಬ್ಯಾಕ್ ಮೆಷಿನ್ ನಲ್ಲಿ. – ಮಂಗಳ ಗ್ರಹದ ಮಾಹಿತಿ ಕೋಶ
- ನೈನ್ ಪ್ಲಾನೆಟ್ಸ್ನಲ್ಲಿ ಮಂಗಳ ಗ್ರಹದ ಪುಟ
- ಮಂಗಳ ಗ್ರಹ ಭೂಮಿಯ ಸಮೀಪಕ್ಕೆ ದಿ ೩೧-೭-೨೦೧೮ ರಂದು ಭೂಮಿಯಿಂದ 57.6 ಮಿಲಿಯನ್ ಕಿ.ಮೀ ದೂರದಲ್ಲಿ ಮಂಗಳ ಗ್ರಹ
- ಆರು ತಿಂಗಳ ಪ್ರಯಾಣ; ಮಂಗಳನ ಅಂಗಳಕ್ಕೆ ಜಿಗಿದ ನಾಸಾದ ‘ಇನ್ಸೈಟ್’ ಶೋಧಕ;: 27 ನವೆಂಬರ್ 2018
ಇದನ್ನೂ ನೋಡಿ
[ಬದಲಾಯಿಸಿ]ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |