ಭಾಷಾ ಸ್ವೀಕರಣ
ಮೂಲಭಾಷೆಯ ಲಕ್ಷಣಗಳಿಂದ ಭಿನ್ನವಾದ ಲಕ್ಷಣಗಳ ಅನ್ವಯ-ಅಂಗೀಕಾರ (ಲಿಂಗ್ವಿಸ್ಟಿಕ್ ಬಾರೋಯಿಂಗ್).
ಸ್ವೀಕರಣಕ್ಕೆ ಕಾರಣಗಳು
[ಬದಲಾಯಿಸಿ]ಸ್ವೀಕರಣ ನಡೆಯುವುದಕ್ಕೆ ಮುಖ್ಯ ಕಾರಣಗಳು ಎರಡು:
- ಪ್ರತಿಷ್ಠೆಯ ಪ್ರಶ್ನೆ - ಒಂದು ಭಾಷೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದ ಮೇಲ್ಮಟ್ಟದ ಭಾಷೆ ಎನಿಸಿಕೊಂಡಿದ್ದರೆ ಮತ್ತೊಂದು ಭಾಷೆಯವರಿಗೆ ಆ ಭಾಷೆಯ ಶಬ್ದಗಳನ್ನು ಸ್ವೀಕರಿಸುವುದು ಪ್ರತಿಷ್ಠೆಯ ವಿಷಯವಾಗುತ್ತದೆ. ಹೀಗೆ ಸ್ವೀಕರಿಸುವುದು ಗೌರವಾರ್ಹ ಎನಿಸಿಕೊಂಡದ್ದರಿಂದಲೇ ಸಂಸ್ಕೃತದ ಬಹಳಷ್ಟು ಪದಗಳನ್ನು ದ್ರಾವಿಡ ಭಾಷೆಗಳನ್ನಾಡುವವರು ಸ್ವೀಕರಿಸಿದುದಾಗಿದೆ.
- ಅವಶ್ಯಕತೆ ಕೆಲವೊಮ್ಮೆ ಅವಶ್ಯಕತೆ ಸ್ವೀಕರಣಕ್ಕೆ ಕಾರಣವಾಗುತ್ತದೆ. ಕೆಲವು ವಿಶಿಷ್ಟ ಸಂದರ್ಭಗಳನ್ನು ವ್ಯಕ್ತಪಡಿಸಲು ಒಂದು ಭಾಷೆಯಲ್ಲಿ ತಕ್ಕ ಪದಗಳಿಲ್ಲದೆ ಇರಬಹುದು ಅಥವಾ ಹೊಸ ವಸ್ತುಗಳನ್ನು ಆಮದು ಮಾಡಿಕೊಂಡಾಗ ಅದನ್ನು ಹೆಸರಿಸಲು ಪದಗಳಿಲ್ಲದೆ ಇರಬಹುದು. ಇಂಥ ಸಂದರ್ಭದಲ್ಲಿ ಇನ್ನೊಂದು ಭಾಷೆಯಿಂದ ಪದಗಳನ್ನು ಸ್ವೀಕರಿಸಬೇಕಾಗುತ್ತದೆ. ಕನ್ನಡದಲ್ಲಿಯ ಕಾಗದ, ಪೇಪರು, ಮೇಜು, ಕುರ್ಚಿ ಮುಂತಾದ ಪದಗಳು ಅವಶ್ಯಕತೆಯಿಂದ ಬಂದು ಸೇರಿದಂಥವು.
ಪದಗಳ ರೂಪ ಪರಿವರ್ತನೆಗೆ ಕಾರಣಗಳು
[ಬದಲಾಯಿಸಿ]ಭಾಷೆಯಿಂದ ಭಾಷೆಗೆ ಸ್ವೀಕರಣ ಕಾರ್ಯ ನಡೆದಾಗ, ಕೆಲವು ಮಾರ್ಪಾಡುಗಳು ಅನಿವಾರ್ಯವಾಗಿ ಉಂಟಾಗುತ್ತವೆ.[೧] ಅಧುನಿಕ ಕನ್ನಡದಲ್ಲಿ ವ್ಯಂಜನಾಂತ ಶಬ್ಧಗಳು ಇಲ್ಲದ್ದರಿಂದ ರೂಮ್, ಮೇಜ್ ಎಂಬ ಸ್ವೀಕೃತ ಪದಗಳು ರೂಮು, ಮೇಜು ಎಂಬ ರೂಪಗಳಾಗಿ ಪರಿವರ್ತನೆ ಹೊಂದಿದುವು. ಇವಲ್ಲದೆ ಬೇರೆ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ: ಅವನ್ನು ಈ ಕೆಳಗಿನಂತೆ ವಿಂಗಡಿಸಬಹುದು.
- ಶಬ್ದ ಸ್ವೀಕರಣ- ಮೋಟಾರ್, ಕಾರ್. ರೇಡಿಯೊ, ಪೇಪರ್ ಮುಂತಾದ ಪದಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಇಂಗ್ಲಿಷಿನಿಂದ ಕನ್ನಡಕ್ಕೆ ನೇರವಾಗಿ ಬಂದಿವೆ. ಇವು ಶಬ್ದಸ್ವೀಕರಣಕ್ಕೆ ಉದಾಹರಣೆ.
- ಸ್ಥಾನಾಂತರ ಸ್ವೀಕರಣ - ಕೆಲವೊಮ್ಮೆ ಹೀಗೆ ಅನ್ಯಭಾಷೆಯ ರೂಪಗಳನ್ನು ನೇರವಾಗಿ ಸ್ವೀಕರಿಸದೆ ಅವುಗಳ ಅರ್ಥವನ್ನು ಮಾತ್ರ ಅಮದು ಮಾಡಿಕೊಂಡಾಗ ಅದನ್ನು ಸೂಚಿಸಲು ಪ್ರಸ್ತುತ ಇರುವ ಪದವನ್ನೇ ಬಳಸಿಕೊಳ್ಳಲಾಗುತ್ತದೆ. ಉದಾರಣೆಗೆ, ಇಂಗ್ಲಿಷಿನ ಏರೊಪ್ಲೇನ್ ಎಂಬ ಪದಕ್ಕೆ ಬದಲಾಗಿ ವಿಮಾನ ಎಂಬ ಪದವನ್ನು ಕನ್ನಡದಲ್ಲಿ ಬಳಸಲಾಗುತ್ತಿದೆ. ಹಾಗೆಯೆ ಸ್ಯಾಟೆಲೈಟ್ ಎಂಬ ಪದ ಕನ್ನಡದಲ್ಲಿ ಉಪಗ್ರಹ ಎಂದಾಯಿತು. ವಿಮಾನ ಹಾಗೂ ಉಪಗ್ರಹ ಈ ಎರಡೂ ಪದಗಳೂ ಹಿಂದಿನಿಂದಲೂ ಇರುವಂಥವೇ. ಒಂದಕ್ಕಿಂತ ಹೆಚ್ಚು ಪದಗಳಿಂದ ಕೂಡಿದ ರೂಪಗಳನ್ನು ಸ್ವೀಕರಿಸುವಾಗ ಅವನ್ನು ಭಾಷಾಂತರಿಸಿ ತಂದುಕೊಳ್ಳುವ ರೂಢಿಯೂ ಇವೆ ಕ್ಷ-ಕಿರಣ, ಕೈಚೀಲ, ಶೀತಲಯುದ್ಧ ಮುಂತಾದ ಕನ್ನಡ ಪದಗಳು ಇಂಗ್ಲಿಷಿನ ಎಕ್ಸ್-ರೇ. ಹ್ಯಾಂಡ್-ಬ್ಯಾಗ್, ಕೋಲ್ಡ್-ವಾರ್ ಎಂಬ ಪದಗಳಿಂದ ಅನುಕ್ರಮವಾಗಿ ಭಾಷಾಂತರಗೊಂಡು ಬಂದ ಪದಗಳು.
- ಮಿಶ್ರ ಸ್ವೀಕರಣ - ಕೆಲವೊಮ್ಮೆ ಪರಭಾಷೆಯಿಂದ ಸ್ವೀಕರಿಸುವ ರೂಪಗಳಲ್ಲಿ ಭಾಗಶಃ ಅಲ್ಲಿಯ ರೂಪವನ್ನೆ ಉಳಿಸಿಕೊಂಡು ಅದಕ್ಕೆ ಮಾತೃಭಾಷೆಯ ರೂಪವನ್ನು ಸೇರಿಸಿ ತಂದು ಕೊಳ್ಳಬಹುದು. ಇದನ್ನು ಮಿಶ್ರ ಸ್ವೀಕರಣ ಎನ್ನುತ್ತಾರೆ. ಉದಾಹರಣೆಗೆ. ಇಂಗ್ಲಿಷಿನ ಆಟಮ್ ಬಾಂಬ್ ಎಂಬ ಪದ ಕನ್ನಡಕ್ಕೆ ಬರುವಾಗ ಬಾಂಬ್ ಎಂಬ ರೂಪವನ್ನು ಹಾಗೆಯೇ ಉಳಿಸಿಕೊಂಡು ಆಟಮ್ ಅನ್ನುವುದಕ್ಕೆ ಪರಮಾಣು ಎಂಬ ಪದವನ್ನು ಸೇರಿಸಿ ಪರಮಾಣು ಬಾಂಬ್ ಎಂಬ ಪದವನ್ನು ಟಂಕಿಸಲಾಯಿತು.
ಸ್ವೀಕರಣ ಕಾರ್ಯ
[ಬದಲಾಯಿಸಿ]ಸ್ವೀಕರಣಕಾರ್ಯ ಮುಕ್ತರೂಪಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ನಡೆಯುತ್ತದೆ. ಬದ್ಧರೂಪಗಳನ್ನು ಒಳಗೊಂಡ ಮುಕ್ತರೂಪಗಳು ಮೊದಲು ಸ್ವೀಕೃತ ಉಳಿದ ಶಬ್ದಗಳಿಗೂ ಸೇರಬಹುದು. ಉದಾಹರಣೆಗೆ-ಇಕ,-ವಂತ ಎಂಬ ಸಂಸ್ಕೃತ ಪ್ರತ್ಯಯಗಳು ಕನ್ನಡದ ಗಾಣ, ಕನ್ನಡ, ಸಿರಿ, ಹಣ ಮುಂತಾದ ಕನ್ನಡ ಪದಗಳ ಜೊತೆ ಸೇರಿ ಗಾಣಿಗ, ಕನ್ನಡಿಗ, ಸಿರಿವಂತ ಹಣವಂತ ಎಂಬ ರೂಪಗಳು ಸಿದ್ಧವಾದುವು. ಸ್ವೀಕರಣ ಕಾರ್ಯಕ್ಕೆ ಕನಿಷ್ಠ ಎರಡು ಭಾಷೆ ಅಥವಾ ಉಪಭಾಷೆಗಳು ಇದ್ದು ಅವುಗಳ ನಡುವೆ ಸಂಪರ್ಕ ಇರಬೇಕಾದದ್ದು ಅವಶ್ಯ. ಅಧ್ಯಯನದ ದೃಷ್ಟಿಯಿಂದ ಈ ಸಂಪರ್ಕ ಉಂಟಾಗುವ ಸನ್ನಿವೇಶವನ್ನು ಎರಡು ರೀತಿಯಲ್ಲಿ ವಿಂಗಡಿಸಿ ಕೊಳ್ಳಬಹುದು.
- ಪ್ರತ್ಯಕ್ಷ ಸಂಪರ್ಕದಲ್ಲಿದ್ದ ಭಾಷೆ ಅಥವಾ ಉಪಭಾಷೆಗಳು : ಕನ್ನಡ-ತೆಲುಗು, ಕನ್ನಡ-ಮರಾಠಿ ಇವು ಪ್ರತ್ಯಕ್ಷ ಸಂಪರ್ಕದಲ್ಲಿದ್ದ ಭಾಷೆಗಳು. ಇವುಗಳಲ್ಲಿ ಒಂದು ಭಾಷೆಯನ್ನು ಮಾತಾಡುವ ಪ್ರದೇಶದೊಳಗೇ ಮತ್ತೊಂದು ಭಾಷೆ ಬಳಕೆಯಲ್ಲಿರಬಹುದು ಅಥವಾ ಆ ಪ್ರದೇಶದ ನೆರೆಹೊರೆಯಲ್ಲಿ ಬಳಕೆಯಲ್ಲಿರಬಹುದು. ಅದರೆ ಕನ್ನಡ ಇಂಗ್ಲಿಷ್ ಭಾಷೆಗಳು ಇಂಥ ನಿಕಟ ಸಂಪರ್ಕವಿರದ, ಲಿಪಿ ಮೂಲಕ ಮಾತ್ರ ಸಂಪರ್ಕವಿರುವ ಭಾಷೆಗಳು. ಕನ್ನಡ ಅಥವಾ ಇಂಗ್ಲಿಷ್ ಭಾಷಿಕರು ಪರಸ್ಪರ ಇನ್ನೊಂದು ಭಾಷೆಯ ಪ್ರದೇಶದಲ್ಲಿ ನೆಲಸಿದ್ದರೂ ಅವರ ಸಂಖ್ಯೆ ಹಾಗೂ ಅದರಿಂದಾಗುವ ಪ್ರಭಾವ ತೀರ ಕಡಿಮೆ. ಪ್ರತ್ಯಕ್ಷ ಸಂಪರ್ಕದಿಂದ ಅನ್ಯಭಾಷಿಕರ ಆಚಾರ-ವ್ಯವಹಾರ ಹಾಗೂ ಆಡುಮಾತಿನ ಪರಿಚಯ ಮತ್ತೆ ಮತ್ತೆ ಆಗಿರುತ್ತದೆ. ಈ ಕಾರಣ ಇಲ್ಲೇ ಸ್ವೀಕರಣಕಾರ್ಯ ನಡೆಯುವುದು ಹೆಚ್ಚು. ಅಲ್ಲದೇ ಉಚ್ಚಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದೆ ಸ್ವೀಕರಣಕಾರ್ಯ ನಡೆಯುತ್ತದೆ.
- ಅಪ್ರತ್ಯಕ್ಷ ಸಂಪರ್ಕದಲ್ಲಿದ್ದ ಭಾಷೆಗಳು ಅಥವಾ ಉಪಭಾಷೆಗಳು. ಉದಾಹರಣೆಗೆ, ಅಪ್ರತ್ಯಕ್ಷ ಸಂಪರ್ಕದಲ್ಲಿರುವ ಭಾಷೆಗಳಲ್ಲಿ ಸ್ವೀಕರಣ ನಡೆದಾಗ ಅನೇಕವೇಳೆ ಸ್ವೀಕೃತವಾದ ಪದದ ಅರ್ಥವ್ಯತ್ಯಾಸ ಪಡೆಯುವ ಸಂಭವ ಉಂಟು. ಇದಕ್ಕೆ ಮುಖ್ಯಕಾರಣ ಸಾಂಸ್ಕೃತಿಕ ಭಿನ್ನತೆ.
ಪ್ರತ್ಯಕ್ಷ - ಪರೋಕ್ಷ ಸಂಪರ್ಕದ ಬಗೆಗೆ ಚರ್ಚೆ
[ಬದಲಾಯಿಸಿ]- ಪ್ರತ್ಯಕ್ಷ ಸಂಪರ್ಕದಿಂದಾಗಿ ಸ್ವೀಕೃತವಾದ ಪದಗಳು ಅರ್ಥ ಬದಲಾಯಿಸುವ ಸಂಭವ ಕಡಿಮೆ. ದೂರದಲ್ಲಿರುವ ಭಾಷೆಗಳಿಂದ ಅಮೂರ್ತ ವಿಚಾರವನ್ನು ಬಿಂಬಿಸುವ ರೂಪಗಳನ್ನು ಸ್ವೀಕರಿಸುವ ಸಾಧ್ಯತೆ ಅಪ್ರತ್ಯಕ್ಷ ಸಂಪರ್ಕದಲ್ಲಿ ಕಡಿಮೆಯಾದರೆ ಪ್ರತ್ಯಕ್ಷ ಸಂಪರ್ಕದಲ್ಲಿ ಹೆಚ್ಚು.
- ಭಾಷೆಗಳು ಪ್ರತ್ಯಕ್ಷ ಸಂಪರ್ಕದಲ್ಲಿದ್ದಾಗ ಸ್ವೀಕರಣಕಾರ್ಯ ಎರಡೂ ದಿಕ್ಕಿನಲ್ಲಿ ನಡೆಯುತ್ತದೆ. ಇಲ್ಲಿ ರಾಜಕೀಯ ಅಥವಾ ಸಾಂಸ್ಕೃತಿಕವಾಗಿ ಯಾವ ಭಾಷೆ ಮೇಲು ಯಾವ ಭಾಷೆ ಕೀಳು ಎಂಬುದು ಮುಖ್ಯವಲ್ಲ. ಉದಾಹರಣೆಗೆ ಸಂಸ್ಕೃತ-ದ್ರಾವಿಡ ಭಾಷೆಗಳು, ಒಂದು ಮೇಲು ಇನ್ನೊಂದು ಕೀಳು ಎನಿಸಿಕೊಂಡರೂ ಪರಸ್ಪರ ಒಂದರಿಂದ ಇನ್ನೊಂದು ಭಾಷಾ ಸಾಮಾಗ್ರಿಯನ್ನು ಸ್ವೀಕರಿಸಿವೆ. ಆದರೆ ಈ ಮೇಲು-ಕೀಳು ಎಂಬ ಭೇದ ಹೆಚ್ಚಾಗಿ ಅನ್ವಯಿಸುವುದು ದೂರಸಂಪರ್ಕದಲ್ಲಿದ್ದಾಗಲೇ. ಇಂಗ್ಲಿಷಿನಿಂದ ಕನ್ನಡಕ್ಕೆ ಬಂದ ಪದಗಳಿಗೆ ಅನುಗುಣವಾಗಿ ಕನ್ನಡದಿಂದ ಇಂಗ್ಲಿಷಿಗೆ ಹೋಗಿರುವ ಪದಗಳನ್ನು ಹೋಲಿಸಿದಾಗ ಸ್ವೀಕರಣ ಏಕಮುಖವಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
- ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಸ್ವೀಕರಣದ ನಡುವೆ ಇನ್ನೊಂದು ವ್ಯತ್ಯಾಸವುಂಟು. ಪ್ರತ್ಯಕ್ಷವಾಗಿ ಸ್ವೀಕೃತವಾದ ಪದಗಳನ್ನು ಮಾತೃ ಭಾಷೆಯ ಪದಗಳಂತೆಯೇ ಸ್ವೀಕರಿಸಿ, ಅವುಗಳಿಗೂ ಪ್ರತ್ಯಯ ಸೇರಿಸಿ ಇತರ ರೂಪಗಳನ್ನು ಸಹಜವಾಗಿ ಸಾಧಿಸುವಂತೆ ಅಪ್ರತ್ಯಕ್ಷವಾಗಿ ಸ್ವೀಕರಿಸಿದ ಪದಗಳನ್ನು ಅನೇಕವೇಳೆ ಹೀಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ-ಇಸು ಎಂಬ ಕನ್ನಡ ಪ್ರತ್ಯಯ ಹಿಂದಿ, ಮರಾಠಿ, ಅರೇಬಿಕ್, ಸಂಸ್ಕೃತ ಮೊದಲಾದ ಭಾಷೆಗಳಿಂದ ಸ್ವೀಕೃತವಾದ ಪದಗಳಿಗೆ ಹತ್ತಿಸುವಂತೆ ಇಂಗ್ಲಿಷ್ ಪದಗಳಿಗೆ ಹತ್ತಿಸಲು ಸಾಧ್ಯವಿಲ್ಲ. ಈ ಭೇದಕ್ಕೆ ಸಾಂಸ್ಕೃತಿಕ ವಿನಿಮಯವಾಗದೆ ಕೇವಲ ಪದವಿನಿಯಮವಾದುದೆ ಕಾರಣವಿರಬಹುದು.
ರೂಪಸಾಮ್ಯ ಬದಲಾದರೂ ಅರ್ಥ ಬದಲಾಗದು
[ಬದಲಾಯಿಸಿ]ಭಾಷೆಯೊಂದರಲ್ಲಿ ಬಳಕೆಯಾಗುತ್ತಿದ್ದ ಪದವೊಂದು ಸೂಚಿಸುತ್ತದ್ದ ಅರ್ಥವನ್ನೇ ಸೂಚಿಸುವ ಮತ್ತೊಂದು ಪದದ ಸ್ವೀಕರಣ ನಡೆದಾಗ. ಬಳಕೆಯಲ್ಲಿದ್ದ ಪದ ಆ ಭಾಷೆಯಿಂದ ಕಣ್ಮರೆಯಾಗುವ ಸಂಭವ ಉಂಟು. ಹೀಗಾದಾಗ ಭಾಷೆಯ ಅರ್ಥರಚನೆಯಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ. ಭಾಷೆಯಲ್ಲಿ ಬಳಕೆಯಲ್ಲಿದ್ದ ಮೂಲಪದ ಕಣ್ಮರೆಯಾದರೂ ಅದರಿಂದ ನಿಷ್ಪನ್ನವಾದ ಇತರ ಅನೇಕ ರೂಪಗಳು ಆ ಭಾಷೆಯಲ್ಲಿ ಹಾಗೆಯೇ ಉಳಿದಿರುತ್ತವೆ. ಬಿಲ್ಲು ಎಂಬ ಪದದ ಬದಲು ಧನುಸ್ಸು ಎಂಬ ಪದ ಬಳಕೆಗೆ ಬಂದರೂ. ಮಳೆ ಬಿಲ್ಲು ಅಥವಾ ಬಿಲ್ಲುಗಾರಿಕೆ ಎಂಬ ಪದ ಹಾಗೆಯೇ ಉಳಿದು ಬಂದಿದೆ. ಆದ್ದರಿಂದ ಒಂದು ಭಾಷೆಯಲ್ಲಿ ಒಂದು ಪದ ಹಾಗೂ ಅರ್ಥದಲ್ಲಿ ಅದರಿಂದ ನಿಷ್ಪನ್ನವಾದ ಇತರ ರೂಪಗಳಿಗೆ ರೂಪಸಾಮ್ಯ ಇಲ್ಲದಿದ್ದರೆ ಮೊದಲನೆಯದು ಸ್ವೀಕೃತ ಪದ ಎಂದು ಊಹಿಸಬಹುದು.
ಸ್ವೀಕರಣದ ಅನ್ಯ ಸಂದರ್ಭಗಳು
[ಬದಲಾಯಿಸಿ]- ಸ್ವೀಕರಣಕಾರ್ಯ ಒಂದು ಭಾಷೆಯ ಉಪಭಾಷೆಗಳಲ್ಲೂ ನಡೆಯಬಹುದು. ಇದನ್ನು ಉಪಭಾಷಾಸ್ವೀಕರಣ ಎನ್ನುತ್ತಾರೆ. ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿತು ಅದನ್ನು ಎರವಲು ಪಡೆಯುವುದೂ ಸ್ವೀಕರಣ ಎನಿಸಿಕೊಳ್ಳುವುದಿಲ್ಲ.
- ಭಾಷಾಸ್ವೀಕರಣದಿಂದ ಮಾತೃಭಾಷೆಯ ಧ್ವನಿವ್ಯವಸ್ಥೆ, ವ್ಯಾಕರಣ ವ್ಯವಸ್ಥೆ, ಪದಕೋಶದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವಂತೆಯೇ ಆಚಾರ-ವ್ಯವಹಾರಗಳಲ್ಲಿಯೂ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಈ ಪೈಕಿ ಮೊದಲನೆಯ ರೀತಿಯ ವ್ಯತ್ಯಾಸ ವರ್ಣನಾತ್ಮಕ ಭಾಷಾವಿಜ್ಞಾನಿಗಳಿಗೆ ಅಧ್ಯಯನದ ವಿಷಯ. ಆದ್ದರಿಂದ ಅವರಿಗೆ ಇದು ಭಾಷಾಸ್ವೀಕರಣ. ಎರಡನೆಯ ರೀತಿಯ ವ್ಯತ್ಯಾಸ ಅಧ್ಯಯನದ ವಿಷಯ. ಅವರಿಗೆ ಇದು ಸಾಂಸ್ಕೃತಿಕ ಸ್ವೀಕರಣವಾಗಿ ತೋರುತ್ತದೆ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-10-21. Retrieved 2018-11-03.