ರಕ್ತ ಸಂಬಂಧ
ರಕ್ತ ಸಂಬಂಧ ಎಂದರೆ ಪೂರ್ವಿಕರ (ಪೂರ್ವಜರು, ಮೂಲಪುರುಷರು) ವಂಶದಲ್ಲಿ ಹುಟ್ಟಿ, ಬೆಳೆದುಬಂದಿರುವ, ಆ ವಂಶದ ಕೆಲವೊಂದು ಮೂಲಭೂತ ಲಕ್ಷಣಗಳು ಎನಿಸಿಕೊಂಡಿರುವ ವಂಶವಾಹೀ ಗುಣಗಳನ್ನು ಪಡೆದುಕೊಂಡು, ಬೇರೆ ಬೇರೆ ಕುಟುಂಬಗಳಿಗೆ ಸೇರಿರುವ ಸದಸ್ಯರಲ್ಲಿ (ಬಂಧುಗಳು) ಕಂಡುಬರುವ ಸ್ವಭಾವ, ಗುಣ, ಇಲ್ಲವೆ ಸಂಬಂಧ (ಕಿನ್‍ಷಿಪ್). ಇದಕ್ಕೆ ಬಂಧುತ್ವ ಎಂಬ ಹೆಸರೂ ಇದೆ. ಹೀಗಾಗಿ ಈ ಪರಿಕಲ್ಪನೆ ಸಾಮಾಜಿಕ ಹಾಗು ಸಾಂಸ್ಕೃತಿಕ ಅಂಶಗಳನ್ನು ಆಧರಿಸಿರುವಂಥದ್ದಾಗಿದೆ. ಇಲ್ಲಿ ವಿವಾಹ ಎನ್ನುವುದು ರಕ್ತಸಂಬಂಧವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾನವ ಜೀವನದ ಮೂರು ಮೂಲಭೂತ ಸಂಗತಿಗಳು ಎಂದರೆ ಸಂಭೋಗ, ಜನನ ಮತ್ತು ಮರಣ. ಸಂಭೋಗ ಎನ್ನುವುದು ಗಂಡು - ಹೆಣ್ಣುಗಳ ನಡುವೆ ಜರುಗುವ ಲೈಂಗಿಕ ಕ್ರಿಯೆ. ಜನನ ಎನ್ನುವುದು ಈ ಕ್ರಿಯೆಯ ಉತ್ತರೋತ್ತರ ಪರಿಣಾಮ. ಮರಣ ಎನ್ನುವುದು ವ್ಯಕ್ತಿಯ ಅವಸಾನಘಟ್ಟ, ಈ ಮೂರು ಪ್ರಕ್ರಿಯೆಗಳ ನಡುವೆ ಏರ್ಪಡುವ ಅಮೂರ್ತಬಂಧನವೇ ರಕ್ತಸಂಬಂಧ. ವ್ಯಕ್ತಿಯೊಬ್ಬನ ಮರಣ ಅವನ ಜೀವನ ಪ್ರಕ್ರಿಯೆಯಲ್ಲಿ ಸಂಬಂಧಿಗಳ ನಡುವೆ ಅಂತರವನ್ನು ಏರ್ಪಡಿಸುವುದಾದರೂ ಆ ಸ್ಥಾನದ ಪೂರೈಕೆಯ ಆವಶ್ಯಕತೆಯನ್ನು ಸೂಚಿಸುತ್ತದೆ.
ಈ ಮೂಲಭೂತ ಪರಿಕಲ್ಪನೆಗಳ ವಿಚಾರವಾಗಿ ತಾರ್ಕಿಕ ವಿಶ್ಲೇಷಣೆ ಮಾಡುವ ಕೆಲಸ ರಕ್ತಸಂಬಂಧದ ಅಧ್ಯಯನದಲ್ಲಿ ಅಡಕವಾಗಿದೆ. ಮನುಷ್ಯನ ಹೊರತಾಗಿ ಇತರ ಪ್ರಾಣಿಗಳಿಗೆ ಈ ಸಂಬಂಧವನ್ನು ಕಲ್ಪಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಇದು ಎಲ್ಲ ಸಾಮಾಜಿಕ ಸಂಬಂಧಗಳಿಗಿಂತಲೂ ಪ್ರಬಲವೆನಿಸುವ ಸಂಬಂಧವೂ ಹೌದು. ಸರಳ ಸಮಾಜಗಳಲ್ಲಿ ರಕ್ತಸಂಬಂಧ ಅವುಗಳ ಎಲ್ಲ ಅಂಗಗಳಲ್ಲಿಯೂ ಪ್ರಾಧಾನ್ಯವನ್ನು ಪಡೆದುಕೊಂಡಿವೆ. ರಕ್ತಸಂಬಂಧದ ಆಧಾರದ ಮೇಲೆ ಏರ್ಪಟ್ಟ ಗುಂಪು ಗಾತ್ರದಲ್ಲಿ ಅತಿದೊಡ್ಡದಾಗಿದ್ದರೆ ಅದರಿಂದ ಅನಾನುಕೂಲಗಳೂ ಹೆಚ್ಚುತ್ತವೆ. ಆದ್ದರಿಂದ ಎಲ್ಲ ಸಮಾಜಗಳಲ್ಲಿಯೂ ಅದರ ಗಾತ್ರವನ್ನೂ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಂಶಾನುಕ್ರಮದ ನಿಯಮಗಳ ಮೂಲಕ ನಡೆಯುವಂಥದು.
ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕ ನಿಷೇಧದ ತತ್ತ್ವವನ್ನು ಆಧರಿಸಿ ಬಂಧುತ್ವ ವ್ಯವಸ್ಥೆಯ ಸೌಧವನ್ನು ನಿರ್ಮಿಸಲಾಗಿದೆ. ಪ್ರಾಥಮಿಕ ಬಂಧುಗಳೆಂದರೆ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ, ಮಗ ಮತ್ತು ಮಗಳು, ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕ ಸಂಬಂಧಕ್ಕೆ ಅಗಮ್ಯಗಮನ (ಇನ್‍ಸೆಸ್ಟ್) ಎಂದು ಹೆಸರು.[೧][೨][೩][೪][೫][೬][೭] ಈ ಸಂಬಂಧದ ನಿಷೇಧಕ್ಕೆ ಅಗಮ್ಯಗಮನ (ಇನ್‍ಸೆಸ್ಟ್ ಟ್ಯಾಬೂ) ಎಂದು ಹೆಸರು. ಈ ನಿಷೇಧವನ್ನು ಇತರ ದೂರದ ಕೆಲವು ಸಂಬಂಧಿಗಳಿಗೂ ವಿಸ್ತರಿಸಲಾಗುತ್ತದೆ. ಎಲ್ಲ ಸಮಾಜಗಳಲ್ಲಿಯೂ ಅಗಮ್ಯ ಗಮನದ ಕೆಲವು ಘಟನೆಗಳು ನಡೆದಿರುವ ಪ್ರಸಂಗಗಳೂ ಇವೆ. ಆದ್ದರಿಂದಲೇ ಈ ನಿಷೇಧದ ಅಗತ್ಯ ಕಂಡುಬಂದಿರುವುದು ಹಿಂದಿನ ಕಾಲದ ಕೇವಲ ಕೆಲವೇ ಸಮಾಜಗಳಲ್ಲಿ; ಆ ಸಮಾಜಗಳ ಕೆಲವು ವ್ಯಕ್ತಿಗಳಿಗೆ ಮಾತ್ರ. ವಿಶೇಷವಾಗಿ ರಾಜಕುಟುಂಬದವರಿಗೆ ಅಗಮ್ಯ ಗಮನಕ್ಕೆ ಅವಕಾಶ ದೊರೆಯುತ್ತಿತ್ತು. ಈಗಿನ ಯಾವುದೇ ಸಮಾಜದವರಲ್ಲಿ ಅಗಮ್ಯಗಮನ ಸಂಪ್ರದಾಯವಾಗಿ ಉಳಿದಿಲ್ಲ.
ಬಂಧುತ್ವದ ಅಧ್ಯಯನದಲ್ಲಿ ಅಹಂ (ಈಗೋ) ಎಂಬ ಪರಿಕಲ್ಪನೆ ಪ್ರಧಾನವಾಗಿ ಇರುವಂಥದು. ಯಾವ ವ್ಯಕ್ತಿಯ ಮೂಲಕ ಸಂಬಂಧಗಳನ್ನು ಗುರುತಿಸುತ್ತೇವೆಯೋ ಅವನನ್ನು ಇಲ್ಲವೆ ಅವಳನ್ನು ಅಹಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಇಬ್ಬರ ನಡುವಿನ ಕೆಲವು ಸಂಬಂಧಗಳ ಮಧ್ಯೆ ಕೊಂಡಿಯೆನಿಸುವ ಕೆಲವು ಬಂಧು ವರ್ಗದವರೂ ಇರುತ್ತಾರೆ.
ಬಂಧುತ್ವದ ಶ್ರೇಣಿ
[ಬದಲಾಯಿಸಿ]ಒಬ್ಬ ವ್ಯಕ್ತಿಗೆ ನೇರವಾಗಿ ಸಂಬಂಧಿಸಿದ ಬಂಧುವಿಗೆ ಪ್ರಾಥಮಿಕ ಬಂಧು ಎಂದು ಹೆಸರು. ಒಬ್ಬ ವ್ಯಕ್ತಿಗೆ ಇಂಥ ಆರು ರಕ್ತ ಸಂಬಂಧಿತ ಬಂಧುಗಳು ಒಬ್ಬ ವೈವಾಹಿಕ ಸಂಬಂಧಿತ ಬಂಧುವೂ ಇರುತ್ತಾರೆ. ಇವರೆಲ್ಲ ಆ ವ್ಯಕ್ತಿಯ ಮೂಲ ಕುಟುಂಬದ ಸದಸ್ಯರೂ ಆಗಿರುತ್ತಾರೆ. ಒಬ್ಬ ವ್ಯಕ್ತಿಯ ಪ್ರಾಥಮಿಕ ಸಂಬಂಧಿಯ ಪ್ರಾಥಮಿಕ ಬಂಧುಗಳು ಅವನ(ಳ) ದ್ವಿತೀಯ ಸಂಬಂಧಿಗಳೆನಿಸುತ್ತಾರೆ. ಹೀಗೆ ಈ ಬಂಧುಗಳನ್ನು ತೃತೀಯ, ಚತುರ್ಥ ಇತ್ಯಾದಿ ಶ್ರೇಣಿಗಳವರೆಗೆ ಬೆಳೆಸುತ್ತ ಹೋಗಬಹುದು. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಶ್ರೇಣಿಗಳಲ್ಲಿರುವ ಬಂಧುವರ್ಗಗಳ ಪರಮಾವಧಿ ಸಂಖ್ಯೆ ಅನುಕ್ರಮವಾಗಿ 8, 33 ಮತ್ತು 151 ಆಗಿರುತ್ತದೆ. ಬಂಧುವರ್ಗಗಳ ಸಂಖ್ಯೆಯ ಆಧಾರದ ಮೇಲೆ ಬಂಧುತ್ವದ ಗುಂಪುಗಳನ್ನು ಸಂಕುಚಿತವ್ಯಾಪ್ತಿಯದು ಇಲ್ಲವೆ ವಿಶಾಲವ್ಯಾಪ್ತಿಯದು ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಸಂಕುಚಿತವ್ಯಾಪ್ತಿಯ ಬಂಧುತ್ವದ ಗುಂಪುಗಳಲ್ಲಿ ಕೆಲವೇ ಬಂಧುಗಳು ಸಮೀಪದಲ್ಲಿರುತ್ತಾರೆ. ವಿಶಾಲವ್ಯಾಪ್ತಿಯ ಗುಂಪುಗಳಲ್ಲಿ ಅನೇಕ ಬಂಧುಗಳು ವಿಸ್ತೃತವಾದ ಪ್ರದೇಶದಲ್ಲಿ ಹಂಚಿಹೋಗಿರುತ್ತಾರೆ.
ವಂಶಾನುಕ್ರಮ
[ಬದಲಾಯಿಸಿ]ಪ್ರತಿಯೊಂದು ಸಮಾಜದಲ್ಲಿಯೂ ಬಂಧುವರ್ಗದಲ್ಲಿಯ ಸಂಖ್ಯೆಯನ್ನು ಮಿತಗೊಳಿಸುವ ನಿಯಮಗಳಿರುತ್ತವೆ. ಮುಖ್ಯವಾಗಿ ವಂಶಾನುಕ್ರಮದ ನಿಯಮಗಳು ಬಂಧುಗಳ ಸಂಖ್ಯೆಯನ್ನು ಮಿತಿಯಲ್ಲಿಡುತ್ತದೆ. ಜ್ಞಾತ ಇಲ್ಲವೆ ಕಲ್ಪಿತ ಹಿರಿಯ ಬಂಧುಗಳ ಮೂಲಕ ಬಂಧುವರ್ಗಗಳನ್ನು ಗುರುತಿಸುವುದು ಮತ್ತು ಬಂಧುಗುಂಪಿನ ನಿರ್ಮಾಣದಲ್ಲಿ ಅವರ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವ ಕ್ರಮಕ್ಕೆ ವಂಶಾನುಕ್ರಮ (ಡಿಸೆಂಟ್) ಎಂದು ಹೆಸರು. ಪಿತೃಪ್ರಧಾನ, ಮಾತೃಪ್ರಧಾನ, ಸಂದಿಗ್ಧ, ದ್ವಿಪಾರ್ಶಕ ಮತ್ತು ಉಭಯ ಎಂಬ ವಂಶಾನುಕ್ರಮಗಳು ಪ್ರಮುಖವಾಗಿವೆ.[೮] ಮಾತೃಪ್ರಧಾನವಾದ (ಮೆಟ್ರಿಲೀನಿಯಲ್) ವಂಶಾನುಕ್ರಮವೇ ಹೆಚ್ಚು ಪ್ರಸಿದ್ಧವಾದ್ದು. ತಂದೆಯ ಮೂಲಕ ಏರ್ಪಟ್ಟ ಬಂದುಗಳನ್ನು ಪಿತೃಪ್ರಧಾನ (ಪೆಟ್ರಲೀನಿಯಲ್) ವರ್ಗದಲ್ಲಿ ಗುರುತಿಸಲಾಗುತ್ತದೆ. ಮಾತೃಪ್ರಧಾನ ವಂಶಾನುಕ್ರಮದಲ್ಲಿ ತಾಯಿಯ ಮೂಲಕ ಏರ್ಪಟ್ಟ ಬಂಧುಗಳನ್ನು ಗುರುತಿಸಲಾಗುತ್ತದೆ. ಸಂದಿಗ್ಧ ವಂಶಾನುಕ್ರಮದಲ್ಲಿ ತಂದೆ ಇಲ್ಲವೆ ತಾಯಿಯ ಮೂಲಕ ಏರ್ಪಟ್ಟ ಬಂಧುಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೂ ಈ ಪ್ರಕ್ರಿಯೆ ಬದಲಾವಣೆಯಾಗುವಂಥದು. ಉಭಯ ವಂಶಾನುಕ್ರಮದವರನ್ನೂ ಇನ್ನಿತರ ಉದ್ದೇಶಗಳಿಗೆ ತಾಯಿಯ ಮೂಲಕದ ಬಂಧುವರ್ಗದವರನ್ನೂ ಸಮಾಜದಲ್ಲಿ ಒಬ್ಬ ಗಂಡಸಿನ ಸ್ವತ್ತು (ಭೂಮಿ ಮತ್ತು ಮನೆ) ಅವನ ಮಗನಿಗೂ ಅವನ ಚರಸ್ವತ್ತು, ಹಣ, ಪ್ರಾಣಿಗಳು ಇತ್ಯಾದಿ ಅವನ ಸಹೋದರಿಯ ಮಗನಿಗೂ ಸೇರುತ್ತವೆ.[೯]
ವಂಶಾನುಕ್ರಮದಿಂದ ಉದ್ಭವಿಸುವ ಬಂಧುಗಳ ಗುಂಪುಗಳಿಗೆ ನಿರ್ದಿಷ್ಟ ಹೆಸರುಗಳಿವೆ. ಪಿತೃಪ್ರಧಾನ ಮತ್ತು ಮಾತೃಪ್ರಧಾನವೆನಿಸುವ ವಂಶಾನುಕ್ರಮಗಳಿಂದ ಪೀಳಿಗೆ (ಲೀನಿಯೇಜ್), ಕುಲ (ಕ್ಲ್ಯಾನ್), ಸಂಬಂಧಿತ ಕುಲಗುಂಪು (ಪ್ರೇಟೀ), ಏಕಾಂಶ ಕುಲಗುಂಪು (ಮಾಯ್ಟಿ) ಇತ್ಯಾದಿ ಬಂಧುಗುಂಪುಗಳು ಉಂಟಾಗುತ್ತವೆ. ದ್ವಿಪಾರ್ಶ್ವಕ ವಂಶಾನುಕ್ರಮದಿಂದ ಬಂಧುಬಳಗವೆಂಬ ಗುಂಪು ಏರ್ಪಡುತ್ತದೆ. ದ್ವಿಪಾರ್ಶ್ವಕ ವಂಶಾನುಕ್ರಮದಲ್ಲಿ ತಂದೆ ಮತ್ತು ತಾಯಿಯರ ಬಳಗದ ನಿಯಮಿತ ಸಂಖ್ಯೆಯ ಬಂದುವರ್ಗದವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಬಂಧುತ್ವ ಪದಗಳು
[ಬದಲಾಯಿಸಿ]ಪ್ರತಿಯೊಂದು ಬಂಧುತ್ವದ ವ್ಯವಸ್ಥೆಯ ಬಂಧುವರ್ಗದವರನ್ನು ಗುರುತಿಸಲು ಕೆಲವೊಂದು ವಿಶಿಷ್ಟ ಪದಗಳನ್ನು ಬಳಸಲಾಗುತ್ತದೆ. ಇವಕ್ಕೆ ಬಂಧುತ್ವ ಪದಗಳೆಂದು ಹೆಸರು. ಇದು ಬಂಧುತ್ವದ ಶಾಬ್ದಿಕ ಅಂಶ. ಬಂಧುತ್ವ ಪದಗಳ ಆಧಾರದ ಮೇಲೆ ಕೆಲವೊಂದು ವಿದೇಶೀ ಸಮೂಹಗಳಿಗೆ ಸಂಬಂಧಿಸಿದಂತೆ ಆರು ಮುಖ್ಯವಾದ ಬಂಧುತ್ವ ವ್ಯವಸ್ಥೆಗಳನ್ನು ಗುರುತಿಸಲಾಗಿದೆ. ಅವು ಯಾವುವೆಂದರೆ ಒಮಾಹ, ಕ್ರೊ, ಇರೊಕ್ವೀಸ್, ಹವಾಯಿಯನ್, ಎಸ್ಕಿಮೋ ಮತ್ತು ಸೂಡಾನೀಸ್.
ಬಂಧುತ್ವ ಪದಗಳನ್ನು ಉಪಯೋಗದ ರೀತಿ, ಅವುಗಳ ಭಾಷಿಕ ರಚನೆ ಮತ್ತು ಅವುಗಳ ಉಪಯೋಗದ ವ್ಯಾಪ್ತಿಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಉಪಯೋಗರೀತ್ಯದ ವರ್ಗೀಕರಣದಲ್ಲಿ ಉಲ್ಲೇಖಿತ ಪದಗಳು ಮತ್ತು ಸಂಬೋಧಿತ ಪದಗಳು ಎಂಬ ಎರಡು ವರ್ಗಗಳಿವೆ. ಭಾಷಿಕ ರಚನೆಯ ವರ್ಗೀಕರಣದಲ್ಲಿ ಅವಿಭಜಿತ, ಸಾಧಿತ ಮತ್ತು ವರ್ಣನಾತ್ಮಕವೆಂಬ ಮೂರು ವರ್ಗಗಳಿವೆ. ಉಪಯೋಗದ ವ್ಯಾಪ್ತಿ ಆಧಾರಿತ ವರ್ಗೀಕರಣದಲ್ಲಿ ಸೂಚಕ ಮತ್ತು ವಿಂಗಡಿಕೆಯ ವರ್ಗಗಳಿವೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಅಮೆರಿಕ ಮಾನವಶಾಸ್ತ್ರಜ್ಞ ಲೆವಿಸ್ ಹೆನ್ರಿ ಮಾರ್ಗನ್ ಎಂಬವ ಬಂಧುತ್ವ ಪದಗಳ ಬಗ್ಗೆ ಶಾಸ್ತ್ರೀಯ ಅಧ್ಯಯನವನ್ನು ಪ್ರಾರಂಭಿಸಿದ. ಬಳಿಕ ಅಮೆರಿಕದ ಮತ್ತೊಬ್ಬ ಮಾನವಶಾಸ್ತ್ರಜ್ಞ ಎ. ಎಲ್. ಕ್ರೋಬರ್ (1876 - 1960) ಕೆಲವಾರು ತಾರ್ಕಿಕ ರೂಪದ ತತ್ತ್ವಗಳನ್ನು ಮುಂದಿಟ್ಟ. ತಲೆಮಾರು, ತಾರತಮ್ಯದ ವಯಸ್ಸು, ಏಕರೇಖಾತ್ಮಕತೆ ಅಥವಾ ಅನುಷಂಗಿಕತೆ, ಸಂಬಂಧಿಯ ಲಿಂಗ, ರಕ್ತಸಂಬಂಧಿ ಅಥವಾ ವೈವಾಹಿಕ ಸಂಬಂಧಿ, ಸ್ಥಾನ ಅಥವಾ ಜೀವನಸ್ಥಿತಿ ಮತ್ತು ಸಂಬಂಧಿಯ ಜೀವನಸ್ಥಿತಿ - ಇವೇ ಆ ತತ್ತ್ವಗಳಾಗಿವೆ.
ಬಂಧುತ್ವ ವರ್ತನೆ
[ಬದಲಾಯಿಸಿ]ಬಂಧುಗಳು ಪರಸ್ಪರ ಹೇಗ ವರ್ತಿಸಬೇಕೆಂಬುದನ್ನು ಪ್ರತಿಯೊಂದು ಸಮಾಜದಲ್ಲೂ ಸೂಚಿಸಲಾಗಿದೆ. ಪರಸ್ಪರ ಕ್ರಿಯೆಯ ಆಧಾರದ ಮೇಲೆ ಈ ವರ್ತನೆಗಳಿಗೆ ಬೇರೆ ಬೇರೆ ಹೆಸರುಗಳಿವೆ. ಇವುಗಳಲ್ಲಿ ಮುಖ್ಯವಾದುವೆಂದರೆ: ತಪ್ಪಿಸಿಕೊಳ್ಳುವಿಕೆ, ವಿನೋದಸಂಬಂಧ, ಸೋದರಮಾವನ ಪ್ರಭಾವೀ ಸಂಬಂಧ, ಸೋದರತ್ತೆಯ ಪ್ರಭಾವೀ ಸಂಬಂಧ, ಮಗುವಿನ ಮೂಲಕ ಜನ್ಮದಾದರನ್ನು ಕರೆಯುವುದು ಇತ್ಯಾದಿ.
ತಪ್ಪಿಸಿಕೊಳ್ಳುವಿಕೆ
[ಬದಲಾಯಿಸಿ]ಸೊಸೆ ಅತ್ತೆ - ಮಾವಂದಿರಿಂದ ತಪ್ಪಿಸಿಕೊಳ್ಳುವುದು ಎಲ್ಲ ಸಮಾಜಗಳಲ್ಲಿ ಸಾಮಾನ್ಯ. ಅಳಿಯ ಅತ್ತೆ - ಮಾವಂದಿರಿಂದ ತಪ್ಪಿಸಿಕೊಳ್ಳುವುದು ಕೆಲವು ಸಮಾಜಗಳಲ್ಲಿ ಕಂಡಬಂದಿದೆ. ಸಂಭಾವ್ಯ ಸಾಧ್ಯವಾದ ಉದ್ವೇಗವನ್ನು ಕಡಿಮೆಮಾಡುವುದೇ ಇದರ ಉದ್ದೇಶ. ಇನ್ನು ಕೆಲವು ಸಮಾಜಗಳಲ್ಲಿ ಸಹೋದರ - ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸುವುದಿಲ್ಲ; ಒಟ್ಟಿಗೆ ಆಹಾರವನ್ನು ಸೇವಿಸುವುದಿಲ್ಲ.
ವಿನೋದ ಸಂಬಂಧ
[ಬದಲಾಯಿಸಿ]ಸಂಬಂಧಿಗಳು ಅತಿ ನಿಕಟವಾದ ಸಂಪರ್ಕವನ್ನಿಟ್ಟುಕೊಂಡು ವಿನೋದ ಕ್ರಿಯೆಗಳಲ್ಲಿ (ಜೋಕಿಂಗ್ ಆಕ್ಟಿವಿಟೀಸ್) ತೊಡಗಿರುತ್ತಾರೆ. ವಿನೋದದ ಜೊತೆಗೆ ಬೈಯುವುದು, ಹೆದರಿಸುವುದು, ಆಸ್ತಿ ನಾಶಮಾಡುವುದು, ಲೈಂಗಿಕಾಸಕ್ತಿಯನ್ನು ಪ್ರದರ್ಶಿಸುವುದು, ಹಿಯ್ಯಾಳಿಸುವುದು - ಇತ್ಯಾದಿ ವರ್ತನೆಗಳೂ ಈ ಸಂಬಂಧಿಕರಲ್ಲಿ ಕಂಡುಬರುತ್ತದೆ. ಈ ಸಂಬಂಧವನ್ನು ಹೊಂದಿದ ಸಂಬಂಧಿಕರ ಸ್ಥಾನಮಾನಗಳು ಸಮಾನವಾಗಿರುತ್ತವೆ. ಅವರಲ್ಲಿ ಅನ್ಯೋನ್ಯ ಆರ್ಥಿಕ ಸಹಕಾರವನ್ನು ಕಾಣಬಹುದು. ಅಳಿಯ - ಅತ್ತೆ, ಹೆಂಗಸು - ಗಂಡನ ತಮ್ಮ, ಗಂಡಸು - ಆತನ ಹೆಂಡತಿಯ ತಂಗಿ, ಅಜ್ಜ / ಅಜ್ಜಿ - ಮೊಮ್ಮಕ್ಕಳು ಮುಂತಾದ ಸಂಬಂಧಿಕರಲ್ಲಿ ವಿನೋದಸಂಬಂಧ ಇರುವುದು ಕಂಡುಬರುತ್ತದೆ.
ಸೋದರಮಾವನ ಪ್ರಭಾವೀ ಸಂಬಂಧ
[ಬದಲಾಯಿಸಿ]ಕೆಲವು ಸಮಾಜಗಳಲ್ಲಿ ಸೋದರಮಾವನಿಗೂ ಮಹತ್ತರ ಸ್ಥಾನವನ್ನು ಕೊಡಲಾಗಿದೆ. ಈ ಸ್ಥಾನ ತಂದೆಗೆ ನೀಡುವ ಸ್ಥಾನಕ್ಕಿಂತಲೂ ಹೆಚ್ಚು ಮಹತ್ತ್ವದ್ದಾಗಿರುತ್ತದೆ. ಈ ಸಮಾಜದಲ್ಲಿ ಮಕ್ಕಳು ಹೆಚ್ಚಾಗಿ ತಮ್ಮ ಬಾಲ್ಯವನ್ನು ಸೋದರಮಾವನ ಮನೆಯಲ್ಲೇ ಕಳೆಯುವುದನ್ನು ಕಾಣಬಹುದು.
ಸೋದರತ್ತೆಯ ಪ್ರಭಾವೀ ಸಂಬಂಧ
[ಬದಲಾಯಿಸಿ]ಇಲ್ಲಿ ಸೋದರತ್ತೆಗೆ ಮಹತ್ತ್ವದ ಸ್ಥಾನಮಾನವಿದೆ.
ಮಗುವಿನ ಮೂಲಕ ಜನ್ಮದಾತರನ್ನು ಕರೆಯುವುದು (ಟೆಕ್ನೋನೆಮಿ)
[ಬದಲಾಯಿಸಿ]ಒಬ್ಬ ಗಂಡು ಅಥವಾ ಹೆಣ್ಣನ್ನು ಅವನ ಅಥವಾ ಅವಳ ಮಕ್ಕಳ ಹೆಸರಿನ ಮೂಲಕ ಕರೆಯುವ ಪದ್ಧತಿ ಕೆಲವು ಸಮಾಜಗಳಲ್ಲಿ ಪ್ರಚಲಿತವಾಗಿದೆ. ಹಿಂದಿನ ಕಾಲದಲ್ಲಿ ಹೆಂಗಸರಿಗಿದ್ದ ಪ್ರಮುಖ ಸ್ಥಾನಮಾನವನ್ನು ಇದು ತೋರಿಸುತ್ತದೆಂದು ಕೆಲವು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.
ಗಂಡನ ಬಾಣಂತಿತನ
[ಬದಲಾಯಿಸಿ]ಭಾರತದ ಮೇಘಾಲಯ ರಾಜ್ಯದ ಖಾಸಿ, ತಮಿಳುನಾಡಿನ ನೀಲಗಿರಿ ಪ್ರದೇಶದ ತೋಡ ಮುಂತಾದ ಆದಿವಾಸಿ ಜನಾಂಗಗಳಲ್ಲಿ ಮತ್ತು ಪ್ರಪಂಚದ ಹಲವಾರು ಆದಿವಾಸಿ ಜನಾಂಗಗಳಲ್ಲಿ ಕಂಡುಬರುವ ವಿಚಿತ್ರ ಪದ್ಧತಿ (ಕೂವಾಡ್). ಹೆಂಡತಿ ಬಸುರಿಯಾಗಿದ್ದ ಸಮಯದಲ್ಲಿ ಹಾಗೂ ಬಾಣಂತಿಯಾಗಿರುವಾಗಿನ ಸಮಯದಲ್ಲಿ ಆಕೆಯ ಸ್ಥಿತಿಯ ಅನುಕರಣೆಯನ್ನು ಗಂಡ ಮಾಡುವುದೇ ಈ ಪದ್ಧತಿ.[೧೦] ಗಂಡ ಈ ಅವಧಿಯಲ್ಲಿ ಹೆಂಡತಿ ಅನುಸರಿಸುವ ಎಲ್ಲ ಕಟ್ಟುಪಾಡುಗಳನ್ನೂ ಅನುಸರಿಸುತ್ತಾನೆ.[೧೧] ಉದಾಹರಣೆಗೆ ಖಾಸಿ ಸಮಾಜದಲ್ಲಿ ಹೆಂಗಸು ಮಗುವನ್ನು ಪ್ರಸವಿಸಿದ ಬಳಿಕ ಪ್ರಸವಕ್ಕೆ ಸಂಬಂಧಿಸಿದ ದೇವತೆಗಳನ್ನು ಪೂಜಿಸುವ ಮೊದಲು ಬಟ್ಟೆಗಳನ್ನು ತೊಳೆಯಬಾರದು, ಹಳ್ಳ ದಾಟಬಾರದು ಎಂಬ ರೂಢಿಗಳಿವೆ. ಇದರಂತೆಯೇ ಆಕೆಯ ಗಂಡನೂ ಈ ನಿಯಮಾವಳಿಗಳನ್ನು ಅನುಸರಿಸುತ್ತಾನೆ.
ಗಂಡನ ಬಾಣಂತಿತನವೆಂಬ ಈ ಪದ್ಧತಿ ಹಿಂದಿನ ಕಾಲದಲ್ಲಿದ್ದ ಮಾತೃ-ಪಿತೃ ಪ್ರಧಾನ ಸಮಾಜದ ಪಳೆಯುಳಿಕೆಯಾಗಿದೆಯೆಂದು ಕೆಲವು ಮಾನಶಾಸ್ತ್ರಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಂಡ-ಹೆಂಡತಿ ಸಂಬಂಧವನ್ನು ದೃಢೀಕರಿಸಲು ಮತ್ತು ಪ್ರೀತಿ, ವಾತ್ಸಲ್ಯಗಳನ್ನು ಹಂಚಲು ಈ ರೂಢಿ ಅಸ್ತಿತ್ವಕ್ಕೆ ಬಂತೆಂದು ಮತ್ತೆ ಕೆಲವು ಮಾನವಶಾಸ್ತ್ರಜ್ಞರು ಹೇಳಿದ್ದಾರೆ.[೧೨] ಗಂಡನ ಸಹಭಾಗಿತ್ವದಿಂದ ಹೆಂಡತಿಯ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುವುದೆಂದೂ ಅಭಿಪ್ರಾಯಪಡಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Strong, Anise (2006). "Incest Laws and Absent Taboos in Roman Egypt". Ancient History Bulletin. 20. Archived from the original on 2022-04-10. Retrieved 2017-11-01.
- ↑ Lewis, N. (1983). Life in Egypt under Roman Rule. Clarendon Press. ISBN 978-0-19-814848-7.
- ↑ Frier, Bruce W.; Bagnall, Roger S. (1994). The Demography of Roman Egypt. Cambridge, UK: Cambridge University Press. ISBN 978-0-521-46123-8.
- ↑ Shaw, B. D. (1992). "Explaining Incest: Brother-Sister Marriage in Graeco-Roman Egypt". Man. New Series. 27 (2): 267–299. doi:10.2307/2804054. JSTOR 2804054.
- ↑ Hopkins, Keith (1980). "Brother-Sister Marriage in Roman Egypt". Comparative Studies in Society and History. 22 (3): 303–354. doi:10.1017/S0010417500009385. S2CID 143698328.
- ↑ remijsen, sofie. "Incest or Adoption? Brother-Sister Marriage in Roman Egypt Revisited" (PDF). Archived (PDF) from the original on 2013-07-28. Retrieved 2013-09-22.
- ↑ Scheidel, W (1997). "Brother-sister marriage in Roman Egypt" (PDF). Journal of Biosocial Science. 29 (3): 361–71. doi:10.1017/s0021932097003611. PMID 9881142. S2CID 23732024. Archived (PDF) from the original on 2013-11-02. Retrieved 2013-09-22.
- ↑ Oke Wale, An Introduction to Social Anthropology Second Edition, Part 2, Kinship.
- ↑ Errington, Shelly (1989). Meaning and Power in a Southeast Asian Realm. Princeton NJ: Princeton University Press. p. 236.
- ↑ Mami Wata: Africa's Ancient Goddess Unveiled Vol. I p. 71
- ↑ Plutarch, Life of Theseus, xx.4: ἐν δὲ τῇ θυσίᾳ τοῦ Γορπιαίου μηνὸς ἱσταμένου δευτέρᾳ κατακλινόμενόν τινα τῶν νεανίσκων φθέγγεσθαι καὶ ποιεῖν ἅπερ ὠδίνουσαι γυναῖκες ("He says also that at the sacrifice in her honour on the second day of the month Gorpiaeus, one of their young men lies down and imitates the cries and gestures of women in travail", Loeb translation)
- ↑ Conflict, Order and Action (Chapter 33), Edward Ksenych & David Liu, 2001
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Introduction into the study of kinship AusAnthrop: research, resources and documentation
- The Nature of Kinship: An Introduction to Descent Systems and Family Organization Dennis O'Neil, Palomar College, San Marcos, CA.
- Kinship and Social Organization: An Interactive Tutorial Archived 2021-04-21 ವೇಬ್ಯಾಕ್ ಮೆಷಿನ್ ನಲ್ಲಿ. Brian Schwimmer, University of Manitoba.
- Degrees of Kinship According to Anglo-Saxon Civil Law – Useful Chart (Kurt R. Nilson, Esq. : heirbase.com)
- Catholic Encyclopedia "Duties of Relatives"