ವಿಷಯಕ್ಕೆ ಹೋಗು

ಫರ್ಮಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫರ್ಮಿಯಮ್ ಒಂದು ಸಂಶ್ಲೇಷಿತ ವಿಕಿರಣಶೀಲ ಮೂಲಧಾತು, Fm. ಇದು ಆ್ಯಕ್ಟಿನೈಡ್ ಗುಂಪಿಗೆ ಸೇರಿದೆ. ಪರಮಾಣು ಸಂಖ್ಯೆ 100. ಇದರ ೧೮ ಸಮಸ್ಥಾನಿಗಳನ್ನು ಗುರುತಿಸಲಾಗಿದೆ. ಇದರ ಅತ್ಯಂತ ಸ್ಥಿರ ಸಮಸ್ಥಾನಿಯ ರಾಶಿಸಂಖ್ಯೆ(mass number)-257 ಆಗಿದ್ದು, ೧೦೦ ದಿನಗಳ ಅರ್ಧಾಯುಷ್ಯವನ್ನು ಹೊಂದಿದೆ. ನ್ಯೂಕ್ಲಿಯರ್ ಶಕ್ತಿಯ ಜನಕನೆಂದು ಹೆಸರಾಂತ ಇಟಲಿಯ ಪ್ರತಿಭಾನ್ವಿತ ಭೌತವಿಜ್ಞಾನಿ (ಅನಂತರ ಅಮೆರಿಕೆಯ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ವಾಸ್ತವ್ಯ ಹೊಂದಿದ್ದ) ಎನ್ರಿಕೊ ಫರ್ಮಿಯ ಗೌರವಾರ್ಥ ಈ ಧಾತುವಿಗೆ ಫರ್ಮಿಯಮ್ ಎಂಬ ಹೆಸರನ್ನು ಕೊಡಲಾಗಿದೆ. ಇದು ಪ್ರಯೋಗಶಾಲೆಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೃಷ್ಟಿಸಲ್ಪಡುತ್ತಿದ್ದು, ಹೆಚ್ಚಿನ ವೈಶಿಷ್ಟ್ಯಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಎನ್ರಿಕೊ ಫರ್ಮಿ ಕೃತಕ ಧಾತುಗಳ ಸಂಶ್ಲೇಷಣೆಯಲ್ಲಿ ಪ್ರಥಮತಃ ಬಳಸಿದ ನ್ಯೂಟ್ರಾನ್ ಬಂಬಾಯಿಸಿಕೆ ವಿಧಾನದಿಂದ ದೊರೆತ ಕ್ಯೂರಿಯಮ್ ತರುವಾಯದ ಧಾತುಗಳಲ್ಲಿ ಇದು ಮೊದಲನೆಯದು. (ಇತರ ಧಾತುಗಳೆಲ್ಲವನ್ನೂ ಸೈಕ್ಲೊಟ್ರಾನ್ ಬಂಬಾಯಿಸಿಕೆಯ ಮೂಲಕ ತಯಾರಿಸಲಾಯಿತು).

ಶೋಧನೆ

[ಬದಲಾಯಿಸಿ]

ಫರ್ಮಿಯಮ್ಮನ್ನು ಅಮೆರಿಕದ ಆರ್ಗಾನ್ ರಾಷ್ಟ್ರೀಯ ಲ್ಯಾಬೊರೇಟರಿಯ ಒಂದು ಸಂಶೋಧಕ ತಂಡವೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖ್ಯಾತ ಸಂಶೋಧಕ ಸೀಬೋರ್ಗ್ ಅವರ ಅನುಯಾಯಿಗಳ ಮತ್ತೊಂದು ತಂಡವೂ ಏಕಕಾಲದಲ್ಲಿ ಪ್ರಕಟಿಸಿದುವು. ಪ್ಲೂಟೋನಿಯಮ್ ಅಥವಾ ಕ್ಯಾಲಿಫೋರ್ನಿಯಮ್, ಐನ್‌ಸ್ಟೈನಿಯಮ್ಮುಗಳಂಥ ಇನ್ನೂ ಹೆಚ್ಚಿನ ಧಾತುಗಳನ್ನು ತೀವ್ರ ನ್ಯೂಟ್ರಾನ್ ಬಂಬಾಯಿಸಿಕೆಗೆ ಗುರಿಪಡಿಸಿದಾಗ ಫರ್ಮಿಯಮ್ಮಿನ ಸಮಸ್ಥಾನಿಗಳನ್ನು ಗುರುತಿಸಲಾಯಿತು. ಈ ಕ್ರಿಯೆಗಳನ್ನು ಕೆಳಗಿನಂತೆ ನಮೂದಿಸಬಹುದು:

252Cf (n, γ) 253Cf253E (n, γ)254E254Fm

ಸಮಸ್ಥಾನಿಗಳ ತಯಾರಿಕೆ

[ಬದಲಾಯಿಸಿ]

ರಾಶಿ ಸಂಖ್ಯೆ 255 ಇರುವ ಮತ್ತೊಂದು ಸಮಸ್ಥಾನಿಯನ್ನು ನವೆಂಬರ್ 1952ರ ಶಾಖಬೈಜಿಕ ಸ್ಫೋಟನೆಯಿಂದ ದೊರೆತ ಭಾರತರ ಅಂಶಗಳಲ್ಲಿ ಪ್ರಥಮತಃ ಗುರುತಿಸಲಾಯಿತು.

ಸ್ಟಾಕ್‍ಹೋಮಿನಲ್ಲಿರುವ ನೊಬೆಲ್ ಭೌತವಿಜ್ಞಾನ ಸಂಸ್ಥೆಯಲ್ಲಿಯ ಒಂದು ಸ್ವೀಡಿಶ್ ತಂಡ 238Uವನ್ನು 180MeV ಆಕ್ಸಿಜನ್ ಕಣಗಳಿಂದ ಸೈಕ್ಲೊಟ್ರಾನಿನಲ್ಲಿ ಬಂಬಾಯಿಸಿಕೆಗೆ ಒಳಪಡಿಸಿ ಮತ್ತೊಂದು ಫರ್ಮಿಯಮ್ಮಿನ ಸಮಸ್ಥಾನಿಯನ್ನು ತಯಾರಿಸಿದೆ. ಇದರ ಆಯುಷ್ಯ ಸುಮಾರು 30 ಮಿನಿಟ್ ಮಾತ್ರ.

ಗುಣಗಳು

[ಬದಲಾಯಿಸಿ]

ರಾಸಾಯನಿಕ ಗುಣಧರ್ಮಗಳಲ್ಲಿ ಫರ್ಮಿಯಮ್ ಸ್ವಾಭಾವಿಕವಾಗಿಯೇ ಮೊದಲ ಆಂತರಿಕ ಸಂಕ್ರಮಣ ಧಾತುಗಳ ಗುಂಪಿನ ಎರ್ಬಿಯಮ್ಮನ್ನು ಹೋಲುತ್ತದೆ. ಇದರ ಯಾವ ಸಮಸ್ಥಾನಿಗಳ ಆಯುಷ್ಯವೂ ಒಂದು ದಿನಕ್ಕಿಂತ ಬಹಳ ಹೆಚ್ಚಿರುವುದಿಲ್ಲ.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Robert J. Silva: Fermium, Mendelevium, Nobelium, and Lawrencium, in: Lester R. Morss, Norman M. Edelstein, Jean Fuger (Hrsg.): The Chemistry of the Actinide and Transactinide Elements, Springer, Dordrecht 2006; ISBN 1-4020-3555-1, p. 1621–1651; doi:10.1007/1-4020-3598-5_13.
  • Seaborg, Glenn T. (ed.) (1978) Proceedings of the Symposium Commemorating the 25th Anniversary of Elements 99 and 100, 23 January 1978, Report LBL-7701
  • Gmelins Handbuch der anorganischen Chemie, System Nr. 71, Transurane: Teil A 1 II, p. 19–20; Teil A 2, p. 47; Teil B 1, p. 84.

ಹೊರಗಿನ ಕೊಂಡಿಗಳು

[ಬದಲಾಯಿಸಿ]