ಪೊಟ್ಟಿ ಶ್ರೀರಾಮುಲು
ಪೊಟ್ಟಿ ಶ್ರೀರಾಮುಲು (೧೬ ಮಾರ್ಚ್ ೧೯೦೧ - ೧೫ ಡಿಸೆಂಬರ್ ೧೯೫೨) ಭಾರತದ ಕ್ರಾಂತಿಕಾರಿ. ಶ್ರೀರಾಮುಲು ಅವರ ಸಮರ್ಪಣಾ ಭಾವ ಮತ್ತು ಉಪವಾಸ ಮಾಡುವ ಶಕ್ತಿಯನ್ನು ಮನಗಂಡ ಮಹಾತ್ಮ ಗಾಂಧಿಯವರು, "ಶ್ರೀರಾಮುಲು ಅವರ ಹಾಗೆ ಕೇವಲ ೧೧ ಜನ ಹೆಚ್ಚು ಅನುಯಾಯಿಗಳಿದ್ದಿದ್ದರೆ, ಒಂದೇ ವರ್ಷದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸುತ್ತೇನೆ." ಎಂದು ಉದ್ಗರಿಸಿದ್ದರು [೧].
ಆಂಧ್ರ ಪ್ರದೇಶದ ಉದಯಕ್ಕೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಇವರನ್ನು "ಅಮರಜೀವಿ" ಎಂದೂ ಕರೆಯುತ್ತಾರೆ. ಅಂದಿನ ಮದ್ರಾಸ್ ಪ್ರಾಂತ್ಯದಿಂದ ತೆಲುಗು ಭಾಷಿಕರನ್ನೊಳಗೊಂಡ ಪ್ರದೇಶವನ್ನು ಪ್ರತ್ಯೇಕಗೊಳಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದ ಅವರು, ಉಪವಾಸ ಮಾಡುತ್ತಲೇ ಪ್ರಾಣ ತ್ಯಜಿಸಿದರು. ಅವರ ಮರಣ ಎಲ್ಲೆಡೆ ದಂಗೆಗೆ ಎಡೆ ಮಾಡಿಕೊಟ್ಟಿತು. ಅಂದಿನ ಪ್ರಧಾನಿ ನೆಹರೂ ಅವರು ಶ್ರೀ ರಾಮುಲು ಅವರು ಸತ್ತ ಮೂರೇ ದಿನಗಳಲ್ಲಿ ಆಂಧ್ರ ರಾಜ್ಯದ ಸ್ಥಾಪನೆ ಘೋಷಿಸಿದರು.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ನೆಲ್ಲೂರು ಜಿಲ್ಲೆಯ ಪಡಮಟಿಪಾಲೇಂ ಎಂಬ ಹಳ್ಳಿಯಲ್ಲಿ ಗುರವಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಗೆ ೧೯೦೧ ನೇ ಇಸವಿಯಲ್ಲಿ ಜನಿಸಿದರು. ಬರದ ಕರಾಳ ಛಾಯೆಯಿಂದ ತಪ್ಪಿಸಿಕೊಳ್ಳಲು ಇವರ ಕುಟುಂಬ ಮದ್ರಾಸ್ ಗೆ ಗುಳೆ ಹೊರಟಿತು. ಕೆಲವು ವರ್ಷಗಳ ಮದ್ರಾಸ್ ವಾಸದ ನಂತರ ಇವರು ನೆಲ್ಲೂರಿನಲ್ಲಿಯೇ ನೆಲೆಸಿದರು [೨]. ಮದ್ರಾಸಿನಲ್ಲಿಯೇ ಪ್ರೌಢಶಿಕ್ಷಣ ಮುಗಿಸಿದ ಇವರು ಬಾಂಬೆಯ ವಿಕ್ಟೊರಿಯ ಜುಬಿಲೀ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಸ್ಯಾನಿಟರಿ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ಕಾಲೇಜು ಶಿಕ್ಷಣದ ನಂತರ ಗ್ರೇಟ್ ಇಂಡಿಯನ್ ಪೆನಿನ್ಸ್ಯುಲಾರ್ ರೇಲ್ವೆ ಯಲ್ಲಿ ಕೆಲಸಕ್ಕೆ ಸೇರಿದರು. ೧೯೨೮ ರಲ್ಲಿ ತಮ್ಮ ಪತ್ನಿ ಮತ್ತು ಮಗುವನ್ನು ಕಳೆದುಕೊಂಡರು. ಎರಡು ವರ್ಷಗಳ ತರುವಾಯ ಕೆಲಸಕ್ಕೆ ರಾಜಿನಾಮೆ ಕೊಟ್ಟು ಗಾಂಧಿಯವರ ಸಬರಮತಿ ಆಶ್ರಮಕ್ಕೆ ಸೇರಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡರು.
ಸ್ವಾತಂತ್ರ್ಯ ಸಂಗ್ರಾಮ ಮತ್ತು ದಲಿತೋದ್ಧಾರ
[ಬದಲಾಯಿಸಿ]೧೯೩೦ ರ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲುಗೊಂಡಿದ್ದಕ್ಕಾಗಿ ಶ್ರೀ ರಾಮುಲು ಅವರು ಸೆರೆವಾಸ ಅನುಭವಿಸಿದರು [೩]. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿಯೂ ಭಾಗವಹಿಸಿದ್ದ ಇವರು ೧೯೪೧ - ೧೯೪೨ ರ ಸುಮಾರಿನಲ್ಲಿ ಮೂರು ಬಾರಿ ಜೈಲು ವಾಸ ಅನುಭವಿಸಿದರು. ಗುಜರಾತ್ ನ ರಾಜ್ ಕೋಟ್ ಮತ್ತು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಕೊಮರವೊಲುವಿನಲ್ಲಿ ಗ್ರಾಮೋದ್ಧಾರ ಕಾರ್ಯ ಕೈಗೊಂಡರು. ಕೊಮರವೊಲುವಿನಲ್ಲಿ ಯೆಮೆನಿ ಸುಬ್ರಹ್ಮಣ್ಯಂ ಸ್ಥಾಪಿಸಿದ್ದ ಗಾಂಧಿ ಆಶ್ರಮ ಸೇರಿದರು.
೧೯೪೩ - ೧೯೪೪ ರಲ್ಲಿ ನೆಲ್ಲೂರು ಜಿಲ್ಲೆಯಾದ್ಯಂತ ಚರಕ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸಿದರು. ಜಾತಿ ಮತ ಭೇದವಿಲ್ಲದೆ ಎಲ್ಲರಿಂದಲೂ ಆಹಾರ ಸ್ವೀಕರಿಸುತ್ತಿದ್ದರು. ೧೯೪೬-೪೮ ರಲ್ಲಿ ದಲಿತರಿಗೆ ದೇವಾಲಯ ಪ್ರವೇಶ ಒತ್ತಾಯಿಸಿ ಮೂರು ಬಾರಿ ಉಪವಾಸ ಕೈಗೊಂಡರು. ಈ ಕಾರ್ಯದಲ್ಲಿ ಅವರು ಸಫಲರಾದರು ಕೂಡ. ಮದ್ರಾಸ್ ಹೈಕೋರ್ಟ್ ಮುಖೇನ ದಲಿತೋದ್ಧಾರಕ್ಕೆ ಸಂಬಂಧಿಸಿದಂತೆ ಹಲವಾರು ಆದೇಶಗಳನ್ನು ಪಡೆಯುವಲ್ಲಿ ಸಫಲರಾದರು. ಇದರಿಂದಾಗಿ ವಾರದಲ್ಲಿ ಒಂದು ದಿನ ದಲಿತರ ಕ್ಷೇಮಾಭಿವೃದ್ಧಿಗೆ ಸಂಬಂಧ ಪಟ್ಟ ಕಾರ್ಯಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿತು.
ಶ್ರೀರಾಮುಲು ಅವರು ತಮ್ಮ ಕೊನೆಯ ದಿನಗಳನ್ನು ನೆಲ್ಲೂರಿನಲ್ಲಿಯೇ ಕಳೆದರು. ನೆಲ್ಲೂರಿನ ಬೀದಿಗಳಲ್ಲಿ ಬರಿಗಾಲಿನಲ್ಲಿ ನಡೆದಾಡಿ, ತಲೆಯ ಮೇಲೆ ಕೊಡೆಯೂ ಇಲ್ಲದೆ, ಘೋಷಣೆಗಳನ್ನು ಕೂಗುತ್ತಿದ್ದ ಇವರನ್ನು ಕಂಡು ಜನರು ಹುಚ್ಚ ಎಂದು ಭಾವಿಸಿದ್ದರು. ಅಷ್ಟೇ ಅಲ್ಲದೆ ಮೇಲ್ಜಾತಿಯವರ ಕೆಂಗಣ್ಣಿಗೂ ಗುರಿಯಾದರು.
ಆಂಧ್ರ ಪ್ರದೇಶದ ಉದಯ
[ಬದಲಾಯಿಸಿ]ಅಂದಿನ ಮದ್ರಾಸ್ ರಾಜ್ಯದಲ್ಲಿನ ತೆಲುಗು ಭಾಷಿಕರ ಸಂಸ್ಕೃತಿಯ ಉಳಿವಿಗಾಗಿ, ಅವರ ಹಿತಾಸಕ್ತಿಗಾಗಿ ಪ್ರತ್ಯೇಕ ಆಂಧ್ರ ರಾಜ್ಯಕ್ಕೆ ಒತ್ತಾಯಿಸಿದರು ಶ್ರೀ ರಾಮುಲು. ಇವರ ಮತ್ತೊಂದು ಬೇಡಿಕೆ ಏನಿತ್ತೆಂದರೆ ರೂಪುಗೊಳ್ಳುವ ಹೊಸ ಆಂಧ್ರ ರಾಜ್ಯಕ್ಕೆ ಮದ್ರಾಸ್ ನಗರವು ರಾಜಧಾನಿ ಆಗಬೇಕು ಎಂಬುದು. ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ ಅವರನ್ನೊಳಗೊಂಡ ಸಮಿತಿಯು ಇವರ ಬೇಡಿಕೆಯನ್ನು ತಿರಸ್ಕರಿಸಿತು. ತಿರಸ್ಕಾರಕ್ಕೆ ಬಲವಾದ ಕಾರಣವೆಂದರೆ ಹೊಸ ರಾಜ್ಯಕ್ಕೆ ಮದ್ರಾಸ್ ನಗರವನ್ನು ರಾಜಧಾನಿಯನ್ನಾಗಿ ಮಾಡಲಾಗುವುದಿಲ್ಲವೆಂಬುದು.
ಪ್ರತ್ಯೇಕ ರಾಜ್ಯದ ಹೋರಾಟ ತೀವ್ರಗೊಳಿಸುವುದಕ್ಕಾಗಿ ಶ್ರೀರಾಮುಲು ಅವರು ಮದ್ರಾಸ್ ನಲ್ಲಿನ ಬುಲುಸು ಸಾಂಬಮೂರ್ತಿಯವರ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಾಯಿತು. ಸತ್ಯಾಗ್ರಹ ಮಾಡುತ್ತಲೇ ೧೫ ಡಿಸೆಂಬರ್ ೧೯೫೨ ರಲ್ಲಿ ಶ್ರೀರಾಮುಲು ಅವರು ಅಸುನೀಗಿದರು. ಇದರಿಂದ ಪ್ರತ್ಯೇಕ ರಾಜ್ಯದ ಚಳುವಳಿ ತೀವ್ರಗೊಂಡು ಉಗ್ರ ಸ್ವರೂಪ ಪಡೆಯಿತು. ಈಗಿನ ಆಂಧ್ರಪ್ರದೇಶದಾದ್ಯಂತ ಪರಿಸ್ಥಿತಿ ಹತೋಟಿ ಮೀರಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅನಕಾಪಲ್ಲಿ ಮತ್ತು ವಿಜಯವಾಡದಲ್ಲಿ ಪೊಲೀಸ್ ಗುಂಡಿನ ದಾಳಿಗೆ ೭ ಜನರು ಬಲಿಯಾದರು. ೨೯ನೇ ಡಿಸೆಂಬರ್ ೧೯೫೨ ರಂದು ನೆಹರೂ ಅವರು ಹೊಸ ರಾಜ್ಯದ ಸ್ಥಾಪನೆಯನ್ನು ಘೋಷಣೆ ಮಾಡಿದರು.
೧ ಅಕ್ಟೋಬರ್ ೧೯೫೩ ರಂದು ಕರ್ನೂಲು ರಾಜಧಾನಿಯನ್ನಾಗಿಸಿ, ತೆಲುಗು ಭಾಷಿಕರನ್ನು ಒಳಗೊಂಡ ಆಂಧ್ರ ಪ್ರದೇಶ ಉದಯವಾಯಿತು.
ಸ್ಮಾರಕ
[ಬದಲಾಯಿಸಿ]ಶ್ರೀ ರಾಮುಲು ಅವರು ಪ್ರಾಣ ತ್ಯಜಿಸಿದ ಸ್ಥಳ- ೧೨೬, ರೋಯಪೇಟ್ಟಾ ರೋಡ್, ಮೈಲಾಪುರ್, ಚೆನ್ನೈ ಅನ್ನು ಆಂಧ್ರಪ್ರದೇಶ ಸರ್ಕಾರವು ಸ್ಮಾರಕವನ್ನಾಗಿಸಿದೆ.
- ↑ "ಆರ್ಕೈವ್ ನಕಲು". Archived from the original on 2007-09-30. Retrieved 2018-11-01.
- ↑ https://www.thehindu.com/mag/2003/03/30/stories/2003033000040300.htm
- ↑ https://www.ibtimes.co.in/remembering-indias-forgotten-heroes-70th-independence-day-7-freedom-fighters-that-you-need-know-689939