ಪಟ್ಟಾಭಿ ಸೀತಾರಾಮಯ್ಯ
ಭೋಗರಾಜು ಪಟ್ಟಾಭಿ ಸೀತಾರಾಮಯ್ಯ (೨೪ ನವೆಂಬರ್ ೧೮೮೦ - ೧೭ ಡಿಸೆಂಬರ್ ೧೯೫೯) [೧] ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಆಂಧ್ರ ಪ್ರದೇಶದ ರಾಜಕಾರಣಿ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗುಂಡುಗೊಲನು ಹಳ್ಳಿಯಲ್ಲಿ ಜನಿಸಿದ ಪಟ್ಟಾಭಿಯವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಇಂದ ಎಂ. ಬಿ. ಸಿ. ಎಂ. ಪದವಿ ಪಡೆದು ಮಚಿಲಿಪಟ್ಣಂ ಅಲ್ಲಿ ವೈದ್ಯ ವೃತ್ತಿ ಪ್ರಾರಂಭಿಸಿದರು. ಸಾಕಶ್ಟು ಆದಾಯ ತರುತ್ತಿದ್ದ ವೈದ್ಯ ವೃತ್ತಿಯನ್ನು ತ್ಯಜಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ೧೯೧೨-೧೯೧೩ ರಲ್ಲಿ ಪ್ರತ್ಯೇಕ ಆಂಧ್ರ ಪ್ರದೇಶಕ್ಕಾಗಿ ಚರ್ಚೆ ನಡೆಯುವಾಗ ದಿ ಹಿಂದೂ ಪತ್ರಿಕೆಯನ್ನೂ ಒಳಗೊಂಡಂತೆ ಹಲವಾರು ಪತ್ರಿಕೆಗಳಲ್ಲಿ ಭಾಷಾಧಾರಿತ ಪ್ರಾಂತ್ಯಗಳನ್ನು ರಚನೆಯನ್ನು ಪ್ರೋತ್ಸಾಹಿಸಿ ಬಹಳಷ್ಟು ಅಂಕಣಗಳನ್ನು ಬರೆದರು.
೧೯೧೬ ರ ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ, ಆಂಧ್ರ ಪ್ರದೇಶಕ್ಕಾಗಿಯೇ ಪ್ರತ್ಯೇಕ ಸಮಿತಿಯನ್ನು ಒತ್ತಾಯಿಸಿದರು. ಮಹಾತ್ಮ ಗಾಂಧಿಯವರು ಇದನ್ನು ವಿರೋಧಿಸಿದರಾದರೂ ತಿಲಕ್ ರ ಬೆಂಬಲದಿಂದ ೧೯೧೮ ರಲ್ಲಿ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್ ನ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ೧೯೩೭- ೧೯೪೦ ರ ಅವಧಿಗೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.
೧೯೩೯ ರ ತ್ರಿಪುರಿ ಕಾಂಗ್ರೆಸ್ ಅಧಿವೇಶನದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ವಿರುದ್ಧ ಸ್ಪರ್ಧಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರು. ನೇತಾಜಿಯವರ ಪ್ರಸಿದ್ಧಿ ಮತ್ತು ಪಟ್ಟಾಭಿಯವರ ಆಂಧ್ರ ರಾಜ್ಯಕ್ಕೆ ಒತ್ತಾಯವು ಸೋಲಿಗೆ ಕಾರಣಗಳು ಎಂದು ಹೇಳಲಾಗಿದೆ.
೧೯೪೨ ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರೊಂದಿಗೆ ಜೈಲುಪಾಲಾದರು. ಸುಮಾರು ಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಇವರು ಈ ಅವಧಿಯಲ್ಲಿ ಮಹಾರಾಷ್ತ್ರದ ಅಹ್ಮದ್ ನಗರದ ಕೋಟೆಯಲ್ಲಿ ಯಾವುದೇ ಬಾಹ್ಯ ಸಂಪರ್ಕವಿಲ್ಲದೆ ಕಾಲದೂಡಿದರು. ಸೆರೆವಾಸದ ದೈನಂದಿನ ಆಗು ಹೋಗುಗಳ ಬಗ್ಗೆ ದಿನಚರಿಯಲ್ಲಿ ಬರೆದಿಡುತ್ತಿದ್ದ ಇವರು ಆ ಅನುಭವಗಳನ್ನು ಫೆದರ್ಸ್ ಅಂಡ್ ಸ್ಟೋನ್ಸ್ ಎಂಬ ತಮ್ಮ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ. ೧೯೩೫ ರಲ್ಲಿ ದಿ ಹಿಸ್ಟರಿ ಆಫ್ ದಿ ಕಾಂಗ್ರೆಸ್ ಎಂಬ ಪುಸ್ತಕ ಬರೆದರು. ಈ ಪುಸ್ತಕಕ್ಕೆ ಮುನ್ನುಡಿ ಬರೆದವರು ರಾಜೇಂದ್ರ ಪ್ರಸಾದ್. ಇವರ ಮತ್ತೊಂದು ಪ್ರಖ್ಯಾತ ಪುಸ್ತಕ- ಗಾಂಧಿ ಆಂಡ್ ಗಾಂಧಿಸಮ್.
೧೯೪೮ ರಲ್ಲಿ ಜವಾಹರ್ ಲಾಲ್ ನೆಹರೂ ಅವರ ಬೆಂಬಲದೊಂದಿಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದರು. ಜೆ. ವಿ. ಪಿ. ಸಮಿತಿಯ ಸದಸ್ಯರಾಗಿದ್ದ ಇವರು ಭಾಷಾಧಾರಿತ ಪ್ರಾಂತ್ಯಗಳ ವಿಂಗಡಣೆಯನ್ನು ವಿರೋಧಿಸಿದರು. ಆದರೆ ಪೊಟ್ಟಿ ಶ್ರೀರಾಮುಲು ಅವರ ನಿಧನದಿಂದ ವಿಂಗಡಣೆಗೆ ಒಪ್ಪಿಕೊಳ್ಳಲೇಬೇಕಾಯಿತು. ಇದಕ್ಕೂ ಮುಂಚೆ, ಸಾಂವಿಧಾನಿಕ ಸಭೆಯ ಸದಸ್ಯರಾಗಿದ್ದರು. ೧೯೫೨ ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದರು. ೧೯೫೨ - ೧೯೫೭ ರ ಅವಧಿಗೆ ಮಧ್ಯ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು [೨]. ೨೮ ನವೆಂಬರ್ ೧೯೨೩ ರಲ್ಲಿ ಮಚಿಲಿಪಟ್ಣಂ ಅಲ್ಲಿ ಆಂಧ್ರ ಬ್ಯಾಂಕ್ ಸ್ಥಾಪಿಸಿದರು. ಈಗ ಇದರ ಮುಖ್ಯ ಕಛೇರಿ ಹೈದರಾಬಾದ್ ನಲ್ಲಿದೆ. ಆಂಧ್ರ ಇನ್ಶ್ಯೂರೆನ್ಸ್ ಕಂಪೆನಿ, ಕೃಷ್ನಾ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಜನ್ಮ ಭೂಮಿ ಎಂಬ ಪತ್ರಿಕೆಯನ್ನೂ ಪ್ರಾರಂಭಿಸಿದರು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಪಟ್ಟಾಭಿಯವರ ಜೀವನಚರಿತ್ರೆ
- ಬಿ. ಪಟ್ಟಾಭಿ ಸೀತಾರಾಮಯ್ಯರ ಜೀವನ ಚರಿತ್ರೆ Archived 2005-03-14 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಂಗ್ರೆಸ್ ಸಂದೇಶ್ - ಪಟ್ಟಾಭಿ ಸೀತಾರಾಮಯ್ಯರ ಜೀವನ ಚರಿತ್ರೆ
ಉಲ್ಲೇಖಗಳು
[ಬದಲಾಯಿಸಿ]- ↑ https://web.archive.org/web/20070301000033/http://www.congresssandesh.com/AICC/history/presidents/dr_pattabhi_sitaraimayya.htm
- ↑ "ಆರ್ಕೈವ್ ನಕಲು". Archived from the original on 2017-11-05. Retrieved 2018-11-02.