ವಿಷಯಕ್ಕೆ ಹೋಗು

ಆ. ನೇ. ಉಪಾಧ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ.ಅ.ನೇ ಉಪಾಧ್ಯೆ ಇಂದ ಪುನರ್ನಿರ್ದೇಶಿತ)
ಆ. ನೇ. ಉಪಾಧ್ಯೆ
ಜನನ೧೦ ಆಗಸ್ಟ್ ೧೯೦೬
ಮರಣ10 August 1975(1975-08-10) (aged 69)
ವಿದ್ಯಾಭ್ಯಾಸGilginchi Artal High School, Belgaum

ಆ ನೇ (ಆದಿನಾಥ ನೇಮಿರಾಜ) ಉಪಾಧ್ಯೆ 1906-75. ಸಂಸ್ಕೃತ, ಪ್ರಾಕೃತ, ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಅಂತಾರಾಷ್ಟ್ರೀಯಖ್ಯಾತ ವಿದ್ವಾಂಸರಾಗಿದ್ದರು.

ಜನನ ಮತ್ತು ಶಿಕ್ಷಣ

[ಬದಲಾಯಿಸಿ]

ಬೆಳಗಾಂವಿ ಜಿಲ್ಲೆಯ ಸದಲಗಿ ಗ್ರಾಮದಲ್ಲಿ 1906 ಫೆಬ್ರವರಿ 6ರಂದು ಜನಿಸಿದ ಇವರು ಬೆಳಗಾಂವಿಯಲ್ಲಿ ಆರಂಭದ ವ್ಯಾಸಂಗವನ್ನು ಮುಗಿಸಿದರು. ಅಲ್ಲಿನ ಒಂದು ಸಾಮಾನ್ಯ ಜೈನಪುರೋಹಿತ ಕುಟುಂಬದಲ್ಲಿ ಹುಟ್ಟಿದ ಮಗು ಈ ಆದಿನಾಥ. ತಂದೆಯ ಹೆಸರು ನೇಮಿನಾಥ. ತಾಯಿ ಚಂದ್ರಾಬಾಯಿಯವರು. ಜೀನರಲ್ಲಿ ಪೌರೋಹಿತ್ಯ ಮಾಡುವವರಿಗೆ-ಉಪಾಧ್ಯೆ, ಪಂಡಿತ, ಬಸ್ತಿ ಪಂಡಿತ- ಹೀಗೆ ಯಾವುದಾದರೊಂದು ಅಡ್ಡ ಹೆಸರು ಉತ್ತರ ಕರ್ನಾಟಕದಲ್ಲಿ ಇರುತ್ತದೆ. ಈಗಲೂ ಇದೇ ರೂಢಿ. ಈ ಕಾರಣದಿಂದ ಈ ಮನೆತನಕ್ಕೆ ‘ಉಪಾಧ್ಯೆ’ ಎಂಬುದು ವಂಶನಾಮವಾಗಿತ್ತು. ಆದಿನಾಥರ ಮೂಲ ಹೆಸರು ಕಲ್ಲಪ್ಪ. ಹಾಗೆ ಕರೆಯುವುದರ ಹಿಂದಿರುವ ಕಾರಣ ಮನೋವೇದಕವಾದದ್ದು. ಈ ಮಗುವುಗಿಂತ ಮೊದಲು ನೇಮಿನಾಥ ಚಂದ್ರಾಛಾಯಿ ದಂಪತಿಗಳಿಗೆ ನಾಲ್ವರು ಗಂಡು ಮಕ್ಕಳು ಹುಟ್ಟಿದ್ದರು. ಆದರೆ ಆ ನಾಲ್ಕು ಮಕ್ಕಳೂ ತೀರಾ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡು ತಾಯಿ ತಂದೆಗಳ ಒಡಲಲ್ಲಿ ಸಂಕಟದ ಕಿಚ್ಚು ಹಚ್ಚಿದ್ದವು. ಆನಂತರ ಹುಟ್ಟಿದ ಈ ಐದನೇಯ ಮಗುವಾದರೂ ಗಟ್ಟಿಮುಟ್ಟಾಗಿ ಕಲ್ಲಿನಂತೆ ಬಾಳಲಿ ಎಂಬ ಆಶಯದಿಂದ ಈ ಮಗುವಿಗೆ ಕಲ್ಲಪ್ಪ ಎಂದು ಹೆಸರಿಟ್ಟರು. ಕಲ್ಲಪ್ಪ ಹುಟ್ಟಿದ್ದು 1906 ಫೆಬ್ರವರಿ ಎರಡನೇ ದಿನದಂದು. ತಂದೆ ನೇಮಿನಾಥ ಉಪಾಧ್ಯೆಯವರು ಬೇಗನೇ ತೀರಿಕೊಂಡರು. ಮಗುವನ್ನು ಲಾಲಿಸಿ ಪೋಷಿಸುವ ಹೊಣೆ ತಾಯಿ ಚಂದ್ರಾಬಾಯಿ ಹಾಗೂ ಅಜ್ಜನ ಮೇಲೆ ಬಿದ್ದಿತು. ಸ್ವಲ್ಪ ಜಮೀನು ಸಹ ಇದ್ದು ಒಕ್ಕಲುತನವನ್ನು ಇವರು ನಡೆಸುತ್ತಿದ್ದರು.

ಸದಲಗಾ ಮತ್ತು ಶಮನೇವಾಡಿಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಅವರ ಪ್ರಾಥಮಿಕ ಶಿಕ್ಷಣ ನಡೆಯಿತು. ನಂತರ ಪ್ರೌಢಶಾಲೆಗೆ ಸೇರಲೆಂದು ಬೆಳಗಾವಿಗೆ ಹೋಗಬೇಕಾಯಿತು. ಅಲ್ಲಿತ ಮಾಣಿಕಭಾಗ ಎಂಬಲ್ಲಿ ಜೈನ್ ಬೋರ್ಡಿಂಗ್ ಇತ್ತು. ಇದೊಂದು ಉಚಿತ ವಿದ್ಯಾರ್ಥಿ ನಿಲಯ. ಆದಿನಾಥರು ಇಲ್ಲಿದ್ದುಕೊಂಡು ಸಮೀಪದಲ್ಲಿಯೇ ಇದ್ದ ‘ಕೋಟೆ ಜಿ.ಶಿ. ಸ್ಕೂಲ್’ ಎಂದು ಕರೆಯಲ್ಪಡುತ್ತಿದ್ದ ‘ಗಿಲಗಿಂಜಿ ಅರಟಾಳ ಸ್ಕೂಲ್‍ಗೆ ಸೇರಿದನು. ಹೈಸ್ಕೂಲಿನಲ್ಲಿ ವಿದ್ಯಾರ್ಥಿವೇತನವೂ ಸಿಕ್ಕಿತು. ಮಾಣಿಕಭಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರತಿದಿನವೂ ಧಾರ್ಮಿಕ ಶಿಕ್ಷಣವನ್ನು ಕ್ಲುಪ್ತಕಾಲದಲ್ಲಿ ನೀಡಲಾಗುತ್ತಿತ್ತು. ಪ್ರಖ್ಯಾತ ಜೈನ ವಿದ್ವಾಂಸರೂ ಮೈಸೂರು ಅರಮನೆಯ ಆಸ್ಥಾನ ಪಂಡಿತರೂ ಆದ ಪಂಡಿತ್ ಎ.ಶಾಂತಿರಾಜ ಶಾಸ್ತ್ರೀ ಅವರು ವರ್ಷಕ್ಕೊಂದು ಬಾರಿ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿಕೊಟ್ಟು ಕೆಲವು ದಿನಗಳ ಕಾಲ ತಂಗಿದ್ದು ವಿದ್ಯಾರ್ಥಿಗಳಿಗೂ ಅಲ್ಲಿಗೆ ಬರುತ್ತಿದ್ದ ಶ್ರಾವಕರಿಗೂ ಜೈನಧರ್ಮ, ಶಾಸ್ತ್ರ, ಸಾಹಿತ್ಯಗಳ ಬಗ್ಗೆ ಅಭಿರುಚಿ ಕೆರಳಿಸಿದ ಮೊಟ್ಟಮೊದಲ ಸಂಗತಿ. ಗ್ರಂಥ ಭಂಢಾರದಲ್ಲಿ ಪ್ರಾಕೃತ, ಅಪ್ರಭಂಶ ಕಾವ್ಯಗಳು, ಶಬ್ಧಮಣಿ ದರ್ಪಣ, ಹಳಗನ್ನಡ ಗ್ರಂಥಗಳು, ತೆಲುಗು- ಕನ್ನಡ ದೇವನಾಗರಿ ಲಿಪಿಯಲ್ಲಿನ ಗ್ರಂಥಗಳನ್ನು ರಜೆಗೆ ಮನೆಗೆ ಬಂದಾಗಲೆಲ್ಲಾ ಓದುವ ಅಭ್ಯಾಸ ಬೆಳೆಯಿತು.

ಆದಿನಾಥ 1923ರಲ್ಲಿ ಮೆಟ್ರಿಕ್ಯೂಲೇಷನ್ ಮುಗಿಸಿದರು. ಕಾಲೇಜು ಶಿಕ್ಷಣ ಪಡೆಯುವ ಆಸೆ, ಆದರೆ ಬಡತನ, ಇಂಥ ವೇಳೆಯಲ್ಲಿ ನೆರವಿಗೆ ಬಂದವರು ಅಂದು ಕೊಲ್ಲಾಪುರದ ದಿವಾನರಾಗಿದ್ದ ಅಣ್ಣಾಸಾಹೇಬ್ ಲಠ್ಠೆ ಅವರು. ಅವರು ಸಂಪನ್ನ ವ್ಯಕ್ತಿ. ಸಂಸ್ಥಾನಾಧೀಶರೊಡನೆಯೂ ಜೈನ ಸಮಾಜದಲ್ಲೂ, ಸಾರ್ವಜನಿಕರಿಂದಲೂ ಒಳ್ಳೆಯ ಸಂಬಂಧ, ಸದಾಭಿಪ್ರಾಯಗಳನ್ನು ಸಂಪಾದಿಸಿಕೊಂಡಿದ್ದ ವ್ಯಕ್ತಿ. ಇವರ ನೆರವಿನಿಂದ ಕೊಲ್ಲಾಪುರದ ರಾಜಾರಾಮ್ ಕಾಲೇಜು ಸೇರಿದರು. ಸ್ವಲ್ಪ ಕಾಲದ ನಂತರ ಅದನ್ನು ತೊರೆದು ಅದಕ್ಕಿಂತಲೂ ಚಿಕ್ಕ ಊರಾದ ಸಾಂಗ್ಲಿಯಲ್ಲಿದ್ದ, ರಾಜಾರಾಮ ಕಾಲೇಜಿಗಿಂತಲೂ ಹೆಚ್ಚು ಹೆರುವಾಸಿಯಾಗಿದ್ದ ವಿಲಿಂಗ್ಡನ್ ಕಾಲೇಜನ್ನು ಸೇರಿದರು. ಸಂಸ್ಕøತ ಮತ್ತು ಅರ್ಧಮಾಗಧಿ ವಿಷಯಗಳನ್ನು ಪ್ರಧಾನ ವಿಷಯಗಳನ್ನಾಗಿ ಆರಿಸಿಕೊಂಡು ಬಿ.ಎ ಪದವಿಯನ್ನು 1928ರಲ್ಲಿ ಪಡೆದರು. ಅಲ್ಲಿಂದ ಮುಂದೆ ಉಪಾಧ್ಯೆ ಪುಣೆಯ ಭಂಢಾರಕರ್ ಓರಿಯೆಂಟಲ್ ರಿಸರ್ಚ ಇನ್ಸಿಟಿಟ್ಯೂಟ್ ಸೇರಿದರು. ಉಪಾಧ್ಯೆ 1930ರಲ್ಲಿ ಮುಂಬಯಿ ವಿಶ್ವವಿದಾಲಯದ ಎಂ.ಎ ಪದವಿ ಪಡೆದರು.[]

ವೃತ್ತಿ ಜೀವನ

[ಬದಲಾಯಿಸಿ]

ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಅರ್ಧಮಾಗಧೀ ಪ್ರಾಕೃತ ವಿಭಾಗದ ಅಧ್ಯಾಪಕರಾಗಿ ನೇಮಕಗೊಂಡು (1930) ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಪಾಧ್ಯೆ ಅವರು ಮುಂದೆ ಮೂರೇ ವರ್ಷಕ್ಕೆ ಪ್ರಾಧ್ಯಾಪಕರಾದರು. 1939ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಡಿ.ಲಿಟ್. ಪದವಿಯನ್ನು ಪಡೆದರು. ಅದೇ ವಿಶ್ವವಿದ್ಯಾನಿಲಯದ ಸ್ಟ್ರಿಂಜರ್ ಸಂಶೋಧನ ಶಿಷ್ಯವೃತ್ತಿಯನ್ನು ಪಡೆದರು (1941-43). ರಾಜಾರಾಮ್ ಕಾಲೇಜಿನಲ್ಲಿ ಸುಮಾರು 33 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ನಿವೃತ್ತಿಯ ಅನಂತರ ಅದೇ ಕಾಲೇಜಿನಲ್ಲಿ ಯು.ಜಿ.ಸಿ. ಸಂಶೋಧನಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದರು. ಅನಂತರ ಇವರು ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಸಂಸ್ಥಾಪಕ ಪ್ರಾಧ್ಯಾಪಕರಾಗಿಯೂ ಮತ್ತು ಆ ವಿಭಾಗದ ಮುಖ್ಯಸ್ಥರೂ ಆಗಿದ್ದರು (1971-75). ಬೋಧನೆ, ಸಂಶೋಧನೆ ಮತ್ತು ಪ್ರಕಟಣೆ- ಇವು ಉಪಾಧ್ಯೆ ಅವರ ಕಾರ್ಯಕ್ಷೇತ್ರ. ಈ ಕ್ಷೇತ್ರದಲ್ಲಿ ಇವರು ಶ್ರದ್ಧಾಪೂರ್ವಕವಾದ ದುಡಿಮೆಯನ್ನು ಮಾಡಿದ್ದಾರೆ.

ಸಭಾಧ್ಯಕ್ಷರಾಗಿ .ಅ.ನೇ.ಉಪಾಧ್ಯೆ

[ಬದಲಾಯಿಸಿ]

ಡಾ.ಅ.ನೇ ಉಪಾಧ್ಯೆಯರು 1967ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಸಮ್ಮೇಳನಾಧ್ಯಕ್ಷ ಸ್ಥಾನ ಸ್ವೀಕರಿಸಲು ಉಪಾಧ್ಯೆ ಅವರು ನಿರಾಕರಿಸಿದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ಡಾ.ಹಂಪ ನಾಗರಾಜಯ್ಯ ಹೀಗೆ ಅನುಭವವನ್ನು ಬರೆದಿದ್ದಾರೆ. “ಆಗ ನಾನು ಪರಿಷತ್ತಿನ ಕಾರ್ಯದರ್ಶಿ, ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಪ್ರಯಾಸವಾಯಿತು. ಅದೊಂದು ಅಪರೂಪದ ಅನುಭವ. ಎರಡು ಕಾರಣಗಳಿಂದ ತಮಗೆ ಸಂಕೋಚವಾಗುತ್ತಿದೆ ಎಂದು ಅವರು ವಿವರಿಸಿದರು. ಒಂದು:ತಾವು ಕನ್ನಡದಲ್ಲಿ ಮಾಡಿರುವ ಬರವಣಿಗೆ ಕಡಿಮೆಯಾಗಿ, ಇಂಗ್ಲಿಷಿನಲ್ಲಿ ವಿಫುಲವಾಗಿ ಬಂದಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಒಪ್ಪಿಕೊಂಡರೆ ಔಚಿತ್ಯವಿರುತ್ತದೆಯೇ ಎಂಬುದು. ಎರಡು:ತಮಗಿಂತ ಹಿರಿಯರಿದ್ದಾರೆ. ಅವರಿಗೆ ಈ ಮರ್ಯಾದೆ ಸಲ್ಲುವ ಮೊದಲು ತಾವು ಒಪ್ಪಿಕೊಳ್ಳುವುದು ತಪ್ಪಾಗುವುದಿಲ್ಲವೆ ಎಂಬುದು. ಅವರ ಹುಟ್ಟು ಕನ್ನಡಿಗರಾಗಿ ಕನ್ನಡದಲ್ಲೂ ಬರವಣಿಗೆ ಮಾಡಿರುವುದನ್ನೂ, ಇಂಗ್ಲಿಷಿನಲ್ಲಿ ಬರೆದಿರುವುದರಿಂದ ಕನ್ನಡದ ಸಂಗತಿಗಳನ್ನು, ಸಾಹಿತ್ಯ ಕೃತಿಗಳನ್ನು ಜಗತ್ತಿಗೆ ಪರಿಚಯಿಸಿ ಮಹದುಪಕಾರವೆಸಗಿರುವುದನ್ನೂ, ಕನ್ನಡಕ್ಕೂ ಹೊರನಾಡಿಗೂ ಜೀವಂತ ಸಂಪರ್ಕವಾಗಿರುವುದರಿಂದ ಆಗಿರುವ ಪ್ರಯೋಜನಗಳನ್ನು ಮನದಟ್ಟು ಮಾಡಿದ ಮೇಲೇ ಅಧ್ಯಕ್ಷತೆಗೆ ಒಪ್ಪಿಗೆ ಕೊಟ್ಟಿದ್ದು. ಆಗಲೂ ಮೊದಲು ಆಜೀವ-ಸದಸ್ಯತ್ವದ ಹಣ ಕೊಟ್ಟು ರಶೀದಿ ಬರೆಸಿ ಆಮೇಲೆ ಆಗಲಿ ಎಂದರು. ಸಮ್ಮೇಳನದ ಕಾಲದಲ್ಲಿ ತೆಗೆದ ಭಾವ ಚಿತ್ರಗಳ ಸಂಪುಟವನ್ನು ತಾವೇ ಹಣ ತೆತ್ತು ಪಡೆದರು.

ಬರವಣಿಗೆ

[ಬದಲಾಯಿಸಿ]

ತಮ್ಮ 23ನೆಯ ವಯಸ್ಸಿನಲ್ಲಿಯೇ ಬರೆವಣಿಗೆಯನ್ನು ಆರಂಭಿಸಿದ ಇವರು ಸು.150 ವಿದ್ವತ್ಪೂರ್ಣವಾದ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಗ್ರಂಥಸಂಪಾದನಾ ಕಾರ್ಯವನ್ನು ಒಂದು ಕಾಯಕ ಎಂದು ನಂಬಿ ಬಂದಿದ್ದ ಉಪಾಧ್ಯೆ ಸುಮಾರು ಇಪ್ಪತ್ತೈದಕ್ಕೂ ಮೀರಿದ ಸಂಸ್ಕೃತ, ಪ್ರಾಕೃತ, ಅಪಭ್ರಂಶ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಪ್ರತಿಯೊಂದು ಸಂಪಾದಿತ ಗ್ರಂಥಕ್ಕೂ ಪಾಂಡಿತ್ಯಪೂರ್ಣವಾದ ದೀರ್ಘಪೀಠಿಕೆ ಬರೆಯುವುದು ಇವರ ವೈಶಿಷ್ಟ್ಯ. ಇವರು ಸಂಪಾದಿಸಿರುವ ಕೆಲವು ಮುಖ್ಯ ಗ್ರಂಥಗಳಿವು -ಪ್ರವಚನಸಾರ (1935), ಪರಮಾತ್ಮ ಪ್ರಕಾಶ (1936), ವರಾಂಗ ಚರಿತೆ (1936), ಕಂಸವಹೋ (1940), ಬೃಹತ್ ಕಥಾಕೋಶ (1943), ತಿಲೋಯಪಣ್ಣತ್ತಿ (1951), ಕುವಲಯಮಾಲಾ (1959-70), ಕಾರ್ತಿಕೇಯಾನುಪ್ರೇಕ್ಷಾ (1960), ಸಪ್ತಶತೀಸಾರ (1970), ಧರ್ಮ ರತ್ನಾಕರ (1974).ಕನ್ನಡದಲ್ಲೂ ಉಪಾಧ್ಯೆ ಅವರು ದೇಶಿಕೋಶಗಳಲ್ಲಿನ ಕನ್ನಡ ಪದಗಳು, ಕವಿಪರಮೇಶ್ವರ ಅಥವಾ ಪರಮೇಷ್ಠಿ ಮುಂತಾದ ಸಂಶೋಧನಾ ಲೇಖನ ಗಳನ್ನು ಬರೆದಿದ್ದಾರೆ. ಇವರ ಪಾಲಿ ಮತ್ತು ಪ್ರಾಕೃತ ಎಂಬ ಗ್ರಂಥ ಕನ್ನಡಕ್ಕಿರುವ ಪ್ರಾಕೃತದ ಗಾಢ ಹಿನ್ನೆಲೆಯನ್ನು ವಿವರಿಸುತ್ತದೆ. ವಡ್ಡಾರಾಧನೆಯ ಮೇಲಿನ ಇವರ ಸಂಶೋಧನೆ ಬಹು ಬೆಲೆಯುಳ್ಳದ್ದು.

ಡಾ. ಅ.ನೇ.ಉಪಾಧ್ಯೆಯವರು ಸಂಪಾದಿತ ಕೃತಿಗಳು

[ಬದಲಾಯಿಸಿ]
  • ಪ್ರೊ. ಕೆ.ಜಿ.ಕುಂದಣಗಾರರೊಡನೆ ಸೇರಿ ಎರಡು ಕನ್ನಡ ಕಾವ್ಯಗಳನ್ನು ಸಂಪಾದಿಸಿದ್ದಾರೆ. ಇವುಗಳೆಂದರೆ – ಚಿನ್ಮಯ ಚಿಂತಾಮಣಿ (1930) ಹಾಗೂ ಜ್ಞಾನಭಾಸ್ಕರ ಚರಿತೆ (1931), ಅಧ್ಯಾಪನ ವೃತ್ತಿಗೆ ಸೇರಿದ ಆರಂಭದಲ್ಲಿಯೇ ಈ ಕೃತಿಗಳು ಪ್ರಕಟವಾಗಿರುವುದನ್ನೂ ಗಮನಿಸಬೇಕು. ಇವೆರಡೂ ನಡುಗನ್ನಡದ ಸಣ್ಣ ಕಾವ್ಯಗಳು.
  • ಡಾ.ಉಪಾಧ್ಯೆಯವರು ಕನ್ನಡದಲ್ಲಿ ಇಪ್ಪತ್ತೊಂದು ಲೇಖನಗಳನ್ನೂ, ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಈ ಮೂರು ಪುಸ್ತಕಗಳಲ್ಲಿ ಎರಡು ಮೇಲೆ ಉಲ್ಲೇಖಿಸಿರುವ ಸಂಪಾದಿತ ಕಾವ್ಯಗಳು. ಇನ್ನೊಂದು ಮೂರು ಉಪನ್ಯಾಸಗಳ ಸಂಗ್ರಹ. ಅದೊಂದೇ – ಉಪಾಧ್ಯೆಯವರು ಕನ್ನಡದಲ್ಲಿ ಬರೆದಿರುವ ಸ್ವತಂತ್ರ ಕೃತಿ. ಆ ಕೃತಿಯ ಹೆಸರು – ‘ಪಾಲಿ ಮತ್ತು ಪ್ರಾಕೃತ’. ಇದು ಇವರು 1966ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಆಶ್ರಯದಲ್ಲಿ ಇದೇ ವಿಚಾರದಲ್ಲಿ ನೀಡಿದ ಮೂರು ಉಪನ್ಯಾಸಗಳ ಸಂಕಲನ. ಡಾ.ಉಪಾಧ್ಯೆ ಕೆಲವು ಮಹತ್ವಪೂರ್ಣ ಗ್ರಂಥಗಳನ್ನೂ ಡಾ. ಹೀರಾಲಾಲ್ ಜೊತೆ ಸೇರಿ ಸಂಪಾದಿಸಿದ್ದಾರೆ. ಡಾ. ಹೀರಾಲಾಲ್ ಜೈನ್, ಉಪಾಧ್ಯೆಯವರಿಗಿಂತ ಹಿರಿಯರು. ಭಾರತದ ಈ ಕಾಲದ ಪ್ರಕಾಂಡ ಪಂಡಿತರಲ್ಲೊಬ್ಬರು. ಇಬ್ಬರೂ ಸಮಾನ ಆಸಕ್ತಿಯುಳ್ಳವರು ಹಾಗೂ ಇಬ್ಬರ ಕಾರ್ಯಕ್ಷೇತ್ರವೂ ಒಂದೇ. ಉಪಾಧ್ಯೆಯವರಿಗೆ ಬಹುಕಾಲ ಬೆಂಬಲ ನೀಡಿದವರು ಇವರು. ಈ ಇಬ್ಬರ ಅಪೂರ್ವ ವಿದ್ವಜ್ಜೋಡಿ ಜೈನಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಸಂಪಾದಿಸಿತು. ಹೀಗೆ ಇವರಿಬ್ಬರೂ ಕೂಡಿ ಸಂಪಾದಿಸಿದ ಗ್ರಂಥಗಳ ಪೈಕಿ ಶಿಖರಪ್ರಾಯವಾದುದೆಂದರೆ ‘ಧವಲಾ’ ಗ್ರಂಥದ ಸಂಪಾದನೆ. ಜೈನಾಗಮಗಳ ಸಾರ ಸಂಗ್ರಹವನ್ನು ಒಳಗೊಂಡಿರುವ ಈ ಪ್ರಾಕೃತ ಮಹತ್ ಗ್ರಂಥದ ಏಕೈಕ ಹಸ್ತಪ್ರತಿ ಮೂಡಬಿದಿರೆಯಲ್ಲಿತ್ತು. ಬಹುಕಷ್ಟದಿಂದ ಈ ಪ್ರತಿಯ ಒಂದು ನಕಲನ್ನು ತಯಾರಿಸಿಕೊಳ್ಳಲಾಗಿತ್ತು. ಡಾ. ಉಪಾಧ್ಯೆ ಮತ್ತು ಡಾ. ಹೀರಾಲಾಲ್ ಜೈನ್ ಇಬ್ಬರೂ ಕೂಡಿ ವರ್ಷಗಟ್ಟಲೇ ಶ್ರಮದಿಂದ ಗ್ರಂಥಸಂಪಾದನೆಯ ಆಧುನಿಕ ಮತ್ತು ಶಾಸ್ತ್ರೀಯ ತತ್ವಗಳನ್ನೆಲ್ಲ ಅನ್ವಯಿಸಿ ಸಂಪಾದಿಸಿ ಭಾಷಾಂತರ ಸಮೇತ ಹದಿನಾರು ಸಂಪುಟಗಳಲ್ಲಿ ಭಾರತೀಯ ಜ್ಞಾನಪೀಠದ ಮೂಲಕ ಪ್ರಕಟಿಸಿದರು. ಪ್ರತಿ ಸಂಪುಟವೂ ಐನೂರು ಪುಟಗಳ ಪ್ರಮಾಣದ್ದು. ಅಂದರೆ –ಇಡೀ ‘ಧವಲಾ’ ಗ್ರಂಥ ಒಟ್ಟು ಎಂಟುಸಾವಿರ ಪಟ್ಟುಗಳಷ್ಟು ವಿಸ್ತಾರದ್ದು. ಇದೊಂದೇ ಕೆಲಸ ಮಾಡಿದ್ದರೂ ಅವರಿಗೆ ವಿಶ್ವವಿಖ್ಯಾತಿ ಖಾತ್ರಿಯಾದದ್ದಾಗಿತ್ತು. ಇದು ಹಿಮಾಲಯದುನ್ನತಿಗೆ ಸಾಟಿಯಾದ ಗ್ರಂಥ ಸಂಪಾದನಾ ಕಾರ್ಯ. ಜೈನ ಆಗಮತತ್ವವನ್ನು ಅಭ್ಯಾಸ ಮಾಡಬೇಕೆನ್ನುವ ಯಾರಿಗೇ ಆಗಲಿ, ಇದೊಂದು ಮೂಲಭೂತ ಅಧಿಕೃತ ಆಧಾರಗ್ರಂಥ.
  • ಆತ್ಮಾನುಶಾಸನ (ಸಂಸ್ಕೃತ ಗ್ರಂಥ) ‘ಪಂಚವಿಂಶತಿ'
  • ಆತ್ಮಾನುಶಾಸನ, (ಸಂಸ್ಕೃತ) ತಿಲೋಯ ಪಣ್ಣತ್ತಿ, ಭಾಗ 1 ಮತ್ತು 2 (ಪ್ರಾಕೃತ, ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಇದರ ಪ್ರಸ್ತಾವನೆ ಇದೆ)
  • ಬೃಹತ್ ಕಥಾಕೋಶ (ಸಂಸ್ಕೃತ ಸುಪ್ರಸಿದ್ಧ ಕಥಾಕೋಶ)

ಡಾ.ಅ.ನೇ.ಉಪಾಧ್ಯೆಯವರ ಸ್ವತಂತ್ರ ಕೃತಿಗಳು

[ಬದಲಾಯಿಸಿ]

ಆನಂದ ಸುಂದರಿ (ಪ್ರಾಕೃತ-ನಾಟಕ), ಉಷಾಣಿರುದ್ಧ (ಪ್ರಾಕೃತ ಕಾವ್ಯ) ಕಾರ್ತಿಕೇಯಾನು ಪ್ರೇಕ್ಷ್ಯಾ-ಪ್ರಾಕೃತ,- ಜೈನ ಸಿದ್ಧಾಂತ ಗ್ರಂಥ) ಕುವಲಯ ಮಾಲಾಕಹಾ (ಕುವಲಯಾಲಾ ಕಥಾ-ಪ್ರಾಕೃತ-ಶೃಂಗಾರ ಪ್ರಧಾನ ಕಾವ್ಯ-ಎಂಟನೇ ಶತಮಾನದ್ದು) ಕಥಾ ಕೋಶ( ಸಂಸ್ಕøತ-ಗದ್ಯಕೃತಿ) ಜಂಬೂದೀವ ಪಣ್ಣತ್ತಿ ಸಂಗ್ರಹ (ಪ್ರಾಕೃತ ಶಾಸ್ತ್ರ ಗ್ರಂಥ-ಹತ್ತನೇ ಶತಮಾನದ್ದು) ಧೂರ್ತಾಖ್ಯಾನ- ಎ ಕ್ರಿಟಿಕಲ್ ಸ್ಟಡಿ- ವಿಶಿಷ್ಟವಾದೊಂದು ವಿಡಂಬನ ಕಥಾಕೋಶ-ಅಸಂಬದ್ಧವಾದ ಕತೆಗಳ ಸಂಗ್ರಹ-ಸಂಸ್ಕøತದ್ದು), ಚಂದ್ರಲೇಖಾ(ಪ್ರಾಕೃತ ನಾಟಕ-ಸಟ್ಟಕ ಎಂಬ ಪ್ರಕಾರಕ್ಕೆ ಸೇರಿದ್ದು), ಪ್ರವಚನ ಸಾರ( ಆಚಾರ್ಯ ಕುಂದಕುಂದರ ಮಹತ್ಕøತಿಗಳಲ್ಲೊಂದು. ಪ್ರಾಕೃತ ಗ್ರಂಥ-ಜೈನಾಗಮಕ್ಕೆ ಸಂಬಂಧಿಸಿದ್ದು. ಅನ್ಯ ಟೀಕಾಕಾರರು ಸಂಸ್ಕøತ, ಹಿಂದಿಗಳಲ್ಲಿ ಬರೆದಿರುವ ಟೀಕೆಗಳನ್ನೂ ಅಳವಡಿಸಲಾಗಿದೆ. ಇಂಗ್ಲೀಷ್‍ನಲ್ಲಿ ವಿಸ್ತøತ ವಿಮರ್ಶೆ ಬರೆದಿದೆ. ಕನ್ನಡಭರತೇಶ ವೈಭವದ ಮೇಲೆ ಈ ಕೃತಿಯ ಪ್ರಭಾವವಿದೆ). ಪುಣ್ಯಾಸ್ರವ ಕಥಾಕೋಶ (ಸಂಸ್ಕೃತ). ಈ ಗ್ರಂಥಗಳಲ್ಲಿ ಪ್ರತಿಯೊಂದಕ್ಕೂ ವಿವರವಾದ ಉಪೋದ್ಘಾತವನ್ನು ಬರೆದು ಅದರಲ್ಲಿ ಹಸ್ತಪ್ರತಿಯ ವಿವರಗಳು, ಕವಿಯ ಕಾಲ, ದೇಶ ಜೀವನ ವಿವರಗಳು, ಪಡೆದ ಮತ್ತು ಬೀರಿದ ಪ್ರಭಾವಗಳು ಮತ್ತು ವಿಷಯ ವಿವೇಚನೆ, ಅಲ್ಲಿ ಉಲ್ಲಿಖಿತವಾಗಿರುವ ಗಾದೆಗಳು ಅನ್ಯಗ್ರಂಥದ ಪದ್ಯಗಳು ಇತ್ಯಾದಿಗಳಿಗೆ ಮೂಲ ಯಾವುದು ಎಂಬುದರ ವಿವರ- ಇಂಥ ಎಲ್ಲ ಮಾಹಿತಿಗಳ ಶೋಧಪೂರ್ಣ ವಿವರವಿದೆ. ‘ಪ್ರಾಕೃತ ಲಾಂಗ್ವೇಜಸ್ ಅಂಡ್ ಲಿಟರೇಚರ್’ ಎಂಬುದು ನಾಲ್ಕು ಉಪನ್ಯಾಸಗಳ ಸಂಗ್ರಹ. ಪುಣೆ, ವಿಶ್ವವಿದ್ಯಾಲಯದಿಂದ ಪ್ರಕಟವಾದದ್ದು (1971). ಇನ್ನೊಂದು ಗೋವಿಂದ ಪೈ-ಮ್ಯಾನ್ ಆಫ್ ಲಿಟರ್ಸ್ ಎಂಬುದು (1976). ಕನ್ನಡದಲ್ಲಿ ಅವರು – ವರಾಂಗಚರಿತೆ, ವಡ್ಡಾರಾಧನೆ, ಆದಿಪುರಾಣ, ಧರ್ಮಪರೀಕ್ಷೆ, ಜೀವಸಂಬೋಧನೆ – ಈ ಕಾವ್ಯಗಳನ್ನು ಕುರಿತು, ಪ್ರಾಕೃತ ಭಾಷೆ, ಕವಿ ರನ್ನ ಇತ್ಯಾದಿಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವುದಕ್ಕಿಂತ ಕನ್ನಡದಲ್ಲಿರುವುದನ್ನು ಕುರಿತು ಇಂಗ್ಲೀಷಿನಲ್ಲಿ ಬರೆದಿರುವುದೇ ಬಹಳ.

ಗೌರವಗಳು

[ಬದಲಾಯಿಸಿ]

ಉಪಾಧ್ಯೆ ಅವರು ಹಲವು ವಿದ್ವತ್ ಸಮ್ಮೇಳನಗಳಿಗೆ ಅಧ್ಯಕ್ಷರಾಗಿದ್ದರು. ಅಖಿಲ ಭಾರತ ಪ್ರಾಚ್ಯ ಸಮ್ಮೇಳನ 1940ರಲ್ಲಿ ಹೈದರಾಬಾದಿನಲ್ಲಿ ನೆರೆದಿದ್ದಾಗ, ಅದರ ಪ್ರಾಕೃತ, ಬೌದ್ಧ, ಜೈನ ವಿಭಾಗಗಳ ಅಧ್ಯಕ್ಷರಾಗಿ ಇವರು ಆಯ್ಕೆಯಾಗಿದ್ದರು. ಅನಂತರ ಅಲಿಗಡದಲ್ಲಿ 1966ರಲ್ಲಿ ನಡೆದ ಪ್ರಾಚ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಶ್ರವಣಬೆಳಗೊಳದಲ್ಲಿ 1967ರಲ್ಲಿ ನಡೆದ 46ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡಿಗರು ಗೌರವಿಸಿದ್ದಾರೆ[].ರಾಷ್ಟ್ರದ ಹಲವು ಪ್ರಮುಖ ಸಂಘ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಉಪಾಧ್ಯೆ ಅವರಿಗೆ ನಿಕಟವಾದ ಸಂಪರ್ಕವಿತ್ತು. ಸೊಲ್ಲಾಪುರದ ಜೀವರಾಜ ಜೈನಗ್ರಂಥಮಾಲೆ, ವಾರಾಣಸೀ ಜ್ಞಾನಪೀಠ ಮೂರ್ತಿದೇವಿ ಜೈನ ಗ್ರಂಥಮಾಲೆ ಮುಂತಾದ ಹಲವು ಗ್ರಂಥಮಾಲೆಗಳ ಪ್ರಧಾನ ಸಂಪಾದಕರಾಗಿದ್ದರು. ಭಾರತೀಯ ಜ್ಞಾನಪೀಠದೊಂದಿಗೆ ನಿಕಟ ಸಂಪರ್ಕ ಪಡೆದಿದ್ದ ಇವರು ಪೀಠದ ಕನ್ನಡ ಕಾವ್ಯಮಾಲೆಯ ಉದಯಕ್ಕೆ ಕಾರಣರಾಗಿದ್ದರು. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ 9 ವರ್ಷ ಕಲಾವಿಭಾಗದ ಡೀನರಾಗಿದ್ದ ಇವರು ಪುಣೆ, ಗಯಾ, ಮುಂಬಯಿ, ನಾಗಪುರ, ಬೆಂಗಳೂರು ಮುಂತಾದ ಹಲವು ವಿಶ್ವವಿದ್ಯಾಲಯಗಳ ವಿವಿಧ ಮಂಡಳಿಗಳ ಸದಸ್ಯರಾಗಿದ್ದರು. ಪುಣೆಯ ಸಂಸ್ಕೃತ ಕೋಶ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದಕೀಯ ಮಂಡಲಿಗಳಲ್ಲಿದ್ದರು. ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕ್ಯಾನ್ಬರದಲ್ಲಿ (1971) ಮತ್ತು ಪ್ಯಾರಿಸ್ನಲ್ಲಿ (1973) ನಡೆದ ಅಂತಾರಾಷ್ಟ್ರೀಯ ಪ್ರಾಚ್ಯಪರಿಷತ್ತಿನಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ಬೆಲ್ಜಿಯಂನಲ್ಲಿ 1974ರಲ್ಲಿ ನಡೆದ ಎರಡನೆಯ ಜಾಗತಿಕ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲೂ ಭಾಗವಹಿಸಿದ್ದರು. ಭಾರತ ಸರ್ಕಾರ 1975ರ ಸ್ವಾತಂತ್ರ್ಯ ದಿನದಂದು ಉಪಾಧ್ಯೆ ಅವರಿಗೆ ಸಂಸ್ಕೃತ ವಿದ್ವಾಂಸ ಪ್ರಶಸ್ತಿಪತ್ರ ಕೊಟ್ಟು ಗೌರವಿಸಿತು. ಇದೇ ವರ್ಷ ಇವರ ಸಿದ್ಧಸೇನ ದಿವಾಕರನ ನ್ಯಾಯಾವತಾರ ಎಂಬ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಬಹುಮಾನ ಲಭಿಸಿತು.

ಅವರು 1975 ಅಕ್ಟೋಬರ್ 8ರಂದು ಕೊಲ್ಲಾಪುರದ ತಮ್ಮ ಸ್ವಗೃಹದಲ್ಲಿ ನಿಧನರಾದರು. ‘ಭಾರತೀಯ ಜ್ಞಾನಪೀಠ’ ಎಲ್ಲೆಡೆಯ ತನ್ನ ಕಛೇರಿಗಳನ್ನು ಆ ದಿನ ಮುಚ್ಚಿ ತನ್ನ ಗೌರವ ಸಲ್ಲಿಸಿತು. ಇವರು ಸತ್ತ ದಿನವೇ (9-10-1975) ಬೆಂಗಳೂರು ಆಕಾಶವಾಣಿ ಇವರ ಸಂದರ್ಶನವನ್ನು ಪ್ರಸಾರಮಾಡಿತು. ಇವರ ಬಗ್ಗೆ ಅನೇಕ ಶ್ರದ್ಧಾಂಜಲಿ ಲೇಖನಗಳು, ಕವಿತೆಗಳು ಪ್ರಕಟವಾದವು.

ಉಲ್ಲೇಖಗಳು

[ಬದಲಾಯಿಸಿ]
  1. Dr. A.N. Upadhye - His Life And Accomplishments India, Accessed on November 11, 2014
  2. Kannada Sahitya Sammelana India, Accessed on November 11, 2014

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]