ಆದಿಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದಿಪುರಾಣವು ೧೦ನೇ ಶತಮಾನದ (ಕ್ರಿ.ಶ. ೯೪೨) ಕನ್ನಡದ ಆದಿಕವಿ ಪಂಪನು ರಚಿಸಿರುವ ಕೃತಿ. ಇದು ಜೈನ ಧರ್ಮದ ಮೊದಲ ತೀರ್ಥಂಕರನಾದ ವೃಷಭನಾಥನ ಜೀವನದ ಕಥೆ. ಇದು ಚಂಪೂಕಾವ್ಯವಾಗಿದ್ದು, ಇದರಲ್ಲಿ ೧೬ ಆಶ್ವಾಸಗಳಿವೆ.

ವಿವರ[ಬದಲಾಯಿಸಿ]

ಸಂಸ್ಕೃತದಲ್ಲಿ ಜಿನಸೇನನು ಬರೆದ ಆದಿಪುರಾಣವನ್ನು ಪಂಪ ಕವಿಯು ಕನ್ನಡದಲ್ಲಿ ಬರೆದಿದ್ದಾನೆ. ಒಟ್ಟು ೧೬ ಅಶ್ವಾಸಗಳಲ್ಲಿ ಮೊದಲನೆಯ ೬ ಆಶ್ವಾಸಗಳು -ಪುರುದೇವನ ಹಿಂದಿನ ಒಂಬತ್ತು ಜನ್ಮಗಳ ಬಗ್ಗೆ ಹೇಳುತ್ತವೆ. ೭ರಿಂದ ೧೦ನೇ ಆಶ್ವಾಸಗಳು-ಪುರುದೇವನ ಜನನ, ಬಾಲ್ಯದ ಜೀವನದ ಬಗ್ಗೆ, ತಪಸ್ಸು, ಸಮವಸರಣದ ಬಗ್ಗೆ ಹೇಳುತ್ತವೆ. ೧೧ ರಿಂದ ೧೬ನೇ ಆಶ್ವಾಸವರೆಗೆ ಭರತ ಚಕ್ರವರ್ತಿಯ ಕಥೆಯನ್ನು ವಿವರಿಸುತ್ತದೆ. ಈ ಕಥೆಗಳಲ್ಲಿ ನೀಲಾಂಜನೆ ಎಂಬ ನರ್ತಕಿಯ ಕಥೆಯು ರೋಮಾಂಚನ ಮೂಡಿಸುತ್ತದೆ. ವೃಷಭನಾಥನ ಹಿರಿಯ ಮಗ ಭರತ ಚಕ್ರವರ್ತಿ ಮತ್ತು ಕಿರಿಯಮಗ ಬಾಹುಬಲಿಯ ನಡುವಿನ ಅಧಿಕಾರಕ್ಕಾಗಿ ನಡೆವ ಕದನದ ಪ್ರಸಂಗ ವಾಸ್ತವಿಕತೆಯಿಂದ ಕೂಡಿದೆ. ತನ್ನ ಅಣ್ಣನ ರಾಜ್ಯದ ಆಸೆಯನ್ನು ಕಂಡು ಬಾಹುಬಲಿಯ ಸಂನ್ಯಾಸತ್ವ ಪಡೆದು, ಭರತನಲ್ಲಿ ಪಶ್ಚ್ಯಾತಾಪ ಮೂಡಿಸುವುದು ಕಥೆಯ ಹಿರಿಮೆ.

ಪಂಪನಿಗೆ ಜಿನಧರ್ಮದ ಬಗ್ಗೆ ಇದ್ದ ಒತ್ತಾಸೆ[ಬದಲಾಯಿಸಿ]

ಪಂಪನ ತಂದೆ ಪೂರ್ವಿಕರಿಂದ ಬಂದ ವೈದಿಕ ಧರ್ಮವನ್ನು ಬಿಟ್ಟುಕೊಟ್ಟು ಜೈನಧರ್ಮಕ್ಕೆ ಮತಾಂತರ ಹೊಂದಿದವನು. ಜೈನ ಧರ್ಮಕ್ಕೆ ಸೇರಿದ ಪಂಪನಿಗೆ, ತಾನು ಆ ಧರ್ಮವನ್ನು ಕುರಿತು, ಆ ಧರ್ಮದ ಮಹಾವ್ಯಕ್ತಿಗಳನ್ನು ಕುರಿತು ಕಾವ್ಯ ಬರೆಯಬೇಕು ಎನ್ನಿಸಿತು. ಅದಕ್ಕಾಗಿ ಅವನು “ಆದಿಪುರಾಣ” ಎಂಬ ಕಾವ್ಯವನ್ನು ಬರೆದ. “ಆದಿಪುರಾಣ” ಜೈನರ ಮೊಟ್ಟಮೊದಲ ತೀರ್ಥಂಕರನಾದ ಆದಿದೇವ ಅಥವಾ ಪುರುದೇವನನ್ನು ಕುರಿತದ್ದು. ಜೈನರ ಪ್ರಕಾರ ಇಪ್ಪತ್ನಾಲ್ಕು ಜನ ತೀರ್ಥಂಕರರು. ತೀರ್ಥಂಕರರು ಎಂದರೆ ಮುಕ್ತಿಯನ್ನು ಪಡೆದು ಪವಿತ್ರರಾದವರು. ಅವರಲ್ಲಿ ಮೊದಲನೆಯ ತೀರ್ಥಂಕರ ಆದಿದೇವ ಅಥವಾ ಪುರುದೇವ. ಈ ಆದಿದೇವನ ಕತೆಯೇ “ಆದಿಪುರಾಣ”ದ ಕತೆ.

ಹೆಗ್ಗಳಿಕೆ[ಬದಲಾಯಿಸಿ]

ಮನುಷ್ಯನ ಮನಸ್ಸು, ಈ ಲೋಕದ ಸುಖ-ಸಂಪತ್ತುಗಳನ್ನು ಬಿಟ್ಟು ವೈರಾಗ್ಯದ ಹಾದಿಯನ್ನು ಹಿಡಿದರೆ ಯಾವ ನಲುವಿಗೆ ಏರುವುದೆಂಬುದನ್ನು ಪಂಪ “ಆದಿಪುರಾಣ”ದಲ್ಲಿ ಚಿತ್ರಿಸಿದ್ದಾನೆ. ಆದಿದೇವ ಅನೇಕ ಜನ್ಮಗಳಲ್ಲಿ ತೊಳಲಿ, ಪಾಪಗಳನ್ನು ಕಳೆದುಕೊಂಡು, ತೊಳಲಿಕೊಂಡು, ಗುರುವಿನ ಉಪದೇಶದಿಂದ ಸಾಧನೆ ಮಾಡುತ್ತಾ, ಕಡೆಗೆ ತೀರ್ಥಂಕರನಾಗುತ್ತಾನೆ.

ಪುರುದೇವನ ಹತ್ತು ಜನ್ಮಗಳು[ಬದಲಾಯಿಸಿ]

 • ಜಯವರ್ಮ
 • ಮಹಾಬಲ
 • ಲಲಿತಾಂಗ
 • ವಜ್ರಜಂಘ
 • ಆರ್ಯ
 • ಶ್ರೀಧರದೇವ
 • ಸುವಿಧಿ
 • ಅಚ್ಯುತೇಂದ್ರ
 • ವಜ್ರನಾಭಿ
 • ಅಹಮಿಂದ್ರ

[೧][೨]

ಉಲ್ಲೇಖ[ಬದಲಾಯಿಸಿ]

 1. "ಸಾಹಿತ್ಯ;ಆದಿಪುರಾಣಂ". Archived from the original on 2020-09-25. Retrieved 2021-02-26.
 2. ಆದಿಕವಿ ಪಂಪನ ನಾಡು