ಜಿಂಗ್ಕೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಗಿಂಕ್ಗೊ ಬಿಲೋಬ ಪುಟದಲ್ಲಿ ಈ ಮಾಹಿತಿ ಈಗಾಗಲೇ ಇದೆ
ಬೆಳೆದ ಮರ

ಜಿಂಗ್‍ಕೋ - ಜಿಂಕೋಯೇಲೀಸ್ ಗಣದ ಜಿಂಕೋಯೇಸೀ ಕುಟುಂಬಕ್ಕೆ ಸೇರಿದ ಒಂದು ನಗ್ನಬೀಜೀ ಸಸ್ಯ. ಪರ್ಮಿಯನ್ ಅವಧಿಯಲ್ಲಿ ಪ್ರಥಮತಃ ಕಾಣಿಸಿಕೊಂಡ ಈ ಮರ ಬಹುಪ್ರಾಚೀನಕಾಲದ ಸಸ್ಯಗಳ ಏಕೈಕ ಪ್ರತಿನಿಧಿಯಾಗಿ ಇಂದಿಗೂ ಮೂಲತಃ ಯಾವ ಬದಲಾವಣೆಯನ್ನೂ ತೋರಿಸದೆ ಉಳಿದಿರುವುದರಿಂದ ಇದನ್ನು ಜೀವಂತ ಫಾಸಿಲ್ ಎಂದು ಕರೆಯುವುದುಂಟು. ಟ್ರಯಾಸಿಕ್, ಜುರಾಸಿಕ್ ಮತ್ತು ಟರ್ಶಿಯರಿ ಕಾಲಗಳಲ್ಲಿ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದ ಜಿಂಕೋಕೋದಲ್ಲಿ ಈಗ ಬೈಲೋಬ ಎಂಬ ಒಂದೇ ಒಂದು ಪ್ರಭೇದ ಮಾತ್ರ ಉಳಿದಿದೆ. ಇದಾದರೂ ಪಶ್ಚಿಮ ಚೀನದ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣದೊರೆಯುತ್ತದೆ.

ಚೀನದಲ್ಲಿ ಇದನ್ನು ಪವಿತ್ರಮರವೆಂದು ಪರಿಗಣಿಸಲಾಗಿದ್ದು ಅಲ್ಲಿನ ದೇವಾಲಯಗಳ ಆವರಣಗಳಲ್ಲಿ ಬೆಳೆಸಲಾಗಿದೆ. ಜಪಾನಿನಲ್ಲೂ ಇದನ್ನು ಕಾಣಬಹುದು. ಭಾರತದಲ್ಲಿ ನೀಲಗಿರಿಯಲ್ಲಿನ ಸಸ್ಯಾರಾಮ, ಡೆಹ್ರಾಡೂನ್ ಮುಂತಾದೆಡೆಗಳಲ್ಲಿ ಕೆಲವು ಮರಗಳನ್ನು ನೋಡಬಹುದು.

ಸಸ್ಯದ ವಿವರಣೆ[ಬದಲಾಯಿಸಿ]

ಬೆಲ್ಜಿಯಮ್ ನಲ್ಲಿರುವ ಜಿಂಗ್ಕೋ ಬೈಲೋಬ ಮರ
ಮರದ ಎಲೆಗಳು

ಜಿಂಕೋ ಸುಮಾರು 120' ಎತ್ತರಕ್ಕೆ ಬೆಳೆಯುವ ಚೆಲುವಾದ ಮರ. ಇದರಲ್ಲಿ ಹೆಚ್ಚು ರೆಂಬೆಗಳು ಹುಟ್ಟುವುದಿಲ್ಲ. ರೆಂಬೆಗಳಲ್ಲಿ ಉದ್ದರೆಂಬೆ ಮತ್ತು ಮೋಟುರೆಂಬೆ ಎಂಬ ಎರಡು ಬಗೆಗಳಿವೆ. ಮೋಟುರೆಂಬೆಗಳ ಮೇಲೆಯೇ ಎಲೆಗಳು ರೂಪುಗೊಳ್ಳವುದು. ಗುಂಪುಗುಂಪಾಗಿ ಹುಟ್ಟುವ ಈ ಎಲೆಗಳು ತಮ್ಮ ಆಕಾರ, ನೋಟ ಮತ್ತು ನಾಳವಿನ್ಯಾಸದಲ್ಲಿ ತಾಮ್ರಶಿಖಿ ಎಂಬ (ಮೇಡನ್ ಹೇರ್ ಫರ್ನ್) ಜರೀಗಿಡದ ಎಲೆಗಳನ್ನು ಹೋಲುತ್ತವೆ. ಇದರಿಂದ ಜಿಂಕೋ ಮರಕ್ಕೆ ಮೇಡನ್ ಹೇರ್ ಟ್ರೀ ಎಂಬ ಹೆಸರಿದೆ. ಒಂದೊಂದು ಎಲೆಯೂ 2"-4" ಉದ್ದವೂ ಹೆಚ್ಚು ಕಡಿಮೆ ಅಷ್ಟೇ ಅಗಲವೂ ಇದ್ದು ಬೀಸಣಿಗೆಯಾಕಾರದಲ್ಲಿದೆ ಹಾಗೂ ದ್ವಿಭಜನ ರೀತಿಯ ನಾಳ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಎಲೆಗಳು ವರ್ಷಕ್ಕೊಮ್ಮೆ ಉದುರುತ್ತವೆ. ಜಿಂಕೋವಿನಲ್ಲಿ ಲಿಂಗಭೇದವಿದೆ. ಈ ಲಕ್ಷಣದಲ್ಲಿ ಇದು ಗೊಡ್ಡು ಈಚಲು ಜಾತಿಯ ಮರಗಳನ್ನು (ಸೈಕ್ಯಾಸ್) ಹೋಲುತ್ತದೆ. ಕಾಯಿ ಒಂದು ರೀತಿಯ ಅಷ್ಟಿಫಲ. ಇದರ ತಿರುಳಿಗೆ ಒಂದು ಬಗೆಯ ದುರ್ವಾಸನೆಯಿದೆ.

ಉಪಯೋಗಗಳು[ಬದಲಾಯಿಸಿ]

ಜಿಂಕೋ ಮರ ಆಕರ್ಷಕವಾಗಿರುವುದರಿಂದ ಇದನ್ನು ಅಲಂಕಾರಕ್ಕಾಗಿ ತೋಟಗಳಲ್ಲಿ ಅಲ್ಲಲ್ಲಿ ಬೆಳೆಸಲಾಗಿದೆ. ಇದನ್ನು ಬೀಜಗಳ ಮೂಲಕ ಇಲ್ಲವೆ ಕಾಂಡತುಂಡುಗಳಿಂದ ವೃದ್ಧಿಸಬಹುದು. ಆದರೆ ಬೆಳೆವಣಿಗೆ ಬಲು ನಿಧಾನ. ಕಾಂಡತುಂಡುಗಳಿಂದ ಬೇರುಮೂಡಲು ಕೊನೆಯಪಕ್ಷ ಎರಡು ವರ್ಷಗಳಾದರೂ ಬೇಕು. ಜಿಂಕೋ ಮರದಿಂದ ಹಲವಾರು ಉಪಯೋಗಗಳುಂಟು. ಚೀನ, ಜಪಾನುಗಳಲ್ಲಿ ಬೀಜದಲ್ಲಿನ ತಿರುಳಿನ ಭಾಗವನ್ನು ಹುರಿದು ಇಲ್ಲವೇ ಬೇಯಿಸಿ ತಿನ್ನುವುದಿದೆ. ಬಟ್ಟೆಗಳನ್ನು ಒಗೆಯುವುದಕ್ಕೂ ಬೀಜಗಳನ್ನು ಉಪಯೋಗಿಸುವುದುಂಟು. ಇದರ ಚೌಬೀನೆ ಹಳದಿವರ್ಣದಿಂದಿದ್ದು ಹಗುರವೂ ಬಿಧುರವೂ ಆಗಿದೆ. ಚೀನ, ಜಪಾನುಗಳಲ್ಲಿ ಆಟದ ಸಾಮಾನುಗಳನ್ನು ಮತ್ತು ಕೇರಂ ಬೋರ್ಡುಗಳನ್ನು ತಯಾರಿಸಲು ಇದನ್ನು ಉಪಯೋಗಿಸುತ್ತಾರೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಂಗ್ಕೋ&oldid=1082542" ಇಂದ ಪಡೆಯಲ್ಪಟ್ಟಿದೆ