ವಿಷಯಕ್ಕೆ ಹೋಗು

ಜಾರ್ಜ್ ವಾಷಿಂಗ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ವಾಷಿಂಗ್ಟನ್
ಜಾರ್ಜ್ ವಾಷಿಂಗ್ಟನ್


ಅಧಿಕಾರದ ಅವಧಿ
ಏಪ್ರಿಲ್ ೩೦, ೧೭೮೯ – ಮಾರ್ಚ್ ೪, ೧೯೯೭
ಪೂರ್ವಾಧಿಕಾರಿ (ಇವರೇ ಮೊದಲು)
ಉತ್ತರಾಧಿಕಾರಿ ಜಾನ್ ಆಡಮ್ಸ್

ಜನನ ಫೆಬ್ರುವರಿ ೨೨, ೧೭೩೨
ವೆಸ್ಟ್‍ಮೋರ್‍ಲ್ಯಾಂಡ್ ಕೌಂಟಿ, ವರ್ಜೀನಿಯ
ಮರಣ ಡಿಸೆಂಬರ್ ೧೪, ೧೭೯೯ ೬೭ನೇ ವಯಸ್ಸಿನಲ್ಲಿ
ಮೌಂಟ್ ವೆರ್ನನ್, ವರ್ಜೀನಿಯ
ಜೀವನಸಂಗಾತಿ ಮಾರ್ಥ ವಾಷಿಂಗ್ಟನ್
ಹಸ್ತಾಕ್ಷರ

ಜಾರ್ಜ್ ವಾಷಿಂಗ್ಟನ್ (ಫೆಬ್ರುವರಿ ೨೨, ೧೭೩೨ಡಿಸೆಂಬರ್ ೧೪, ೧೭೯೯) ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಬ್ರಿಟನ್ನಿನ ವಿರುದ್ಧ ವಿಜಯಿಯಾದ ಖಂಡದ ಸೈನ್ಯದ ಸೇನಾಧಿಪತಿಯಾಗಿದ್ದು, ಯುದ್ಧದ ಪರಿಣಾಮವಾಗಿ ಸ್ಥಾಪಿತವಾದ ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ರಾಷ್ಟ್ರಪತಿಯಾಗಿ ಚುನಾಯಿತರಾದವರು. ಅಮೇರಿಕ ದೇಶದ ಸ್ಥಾಪನೆಯಲ್ಲಿ ಇವರ ಪ್ರಮುಖ ಪಾತ್ರವಿದ್ದಿದ್ದರಿಂದ ಇವರನ್ನು ಅಮೇರಿಕದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ.

ಬಾಲ್ಯ ಮತ್ತು ಯೌವನ[ಬದಲಾಯಿಸಿ]

ಜಾರ್ಜ ವಾಷಿಂಗ್ಟನ್ ಫೆಬ್ರುವರಿ ೨೨, ೧೭೩೨ರಂದು ಅಗಸ್ಟೀನ್ ವಾಷಿಂಗ್ಟನ್ ಮತ್ತು ಅವನ ಎರಡನೇ ಪತ್ನಿ ಮೇರಿ ಬಾಲ್ ವಾಷಿಂಗ್ಟನ್ ದಂಪತಿಗಳ ಮೊದಲ ಪುತ್ರನಾಗಿ ವರ್ಜೀನಿಯ ರಾಜ್ಯದ ವೆಸ್ಟ್‍ಮೋರ್‍ಲ್ಯಾಂಡ್ ಕೌಂಟಿಯಲ್ಲಿ ಜನಿಸಿದನು. ವಾಷಿಂಗ್ಟನ್ ಕುಟುಂಬವು ತೋಟಗಳ ಒಡೆತನವುಳ್ಳ ಧನವಂತ ಮನೆತನಕ್ಕೆ ಸೇರಿತ್ತು. ೧೭೪೮ರಲ್ಲಿ ಜಾರ್ಜ್ ತೋಟಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಹೊರಲಾರಂಭಿಸಿದ. ೧೯೪೯ರಲ್ಲಿ ಸುತ್ತಲಿನ ಕುಲ್ಪೆಪ್ಪರ್ ಕೌಂಟಿಯ ಸಮೀಕ್ಷಕ (surveyor)ಆಗಿ ತನ್ನ ಮೊದಲ ಸಾರ್ವಜನಿಕ ಹುದ್ದೆಗೆ ನೇಮಕಗೊಂಡ. ೧೭೫೨ರಲ್ಲಿ ತನ್ನ ಹಿರಿಯ ಮಲೆಸಹೋದರ ಲಾರೆನ್ಸ್‍ನ ಮೃತ್ಯುವಿನ ಬಳಿಕ ಅವನ ತೋಟಗಳ ಮತ್ತು ಅವನ ಹುದ್ದೆಯಾದ ಪ್ರದೇಶದ ಉಪ-ಉಸ್ತುವಾರಿತನದ ಉತ್ತರಾಧಿಕಾರಿಯಾದ. ಈ ಹುದ್ದೆಯ ಜವಾಬ್ದಾರಿಯಲ್ಲಿ ಸ್ಥಳೀಯ ಸೈನ್ಯೆಯ ತರಬೇತಿಯೂ ಸೇರಿತ್ತು. ಹೀಗಾಗಿ ತನ್ನ ೨೦ನೇ ವಯಸ್ಸಿನಲ್ಲಿಯೇ ಜಾರ್ಜ್ ಮೇಜರ್ ದರ್ಜೆಯನ್ನು ಪಡೆದ. ಅದೇ ವರ್ಷ ಸ್ಥಳೀಯ ಫ್ರೀಮೇಸನ್ಸ್ ಸಂಘವನ್ನೂ ಸೇರಿದ.

ಫ್ರೆಂಚ್ ಮತ್ತು ಇಂಡಿಯನ್ ಯುದ್ಧ[ಬದಲಾಯಿಸಿ]

ವಾಷಿಂಗ್ಟನ್‍ರವರ ಮೊದಲ ಚಿತ್ರ. ೧೭೭೨ರಲ್ಲಿ ವ್ರರ್ಜೀನಿಯ ಸೈನ್ಯದ ಕರ್ನಲ್‍ನ ಸಮವಸ್ತ್ರದಲ್ಲಿ ಚಾರ್ಲ್ಸ್ ಪೀಲ್‍ರವರಿಂದ ಚಿತ್ರಣ

೧೭೫೩ರಲ್ಲಿ ಫ್ರಾನ್ಸ್ನ ಸೈನ್ಯ ಒಹಾಯೊ ಪ್ರದೇಶದಲ್ಲಿ ಕೋಟೆಗಳನ್ನು ಕಟ್ಟಲು ಆರಂಭಿಸಿದರು. ಈ ಪ್ರದೇಶವನ್ನು ವರ್ಜೀನಿಯ ಕೂಡ ತನ್ನದೆಂದು ಹೇಳುತ್ತಿದ್ದರಿಂದ ವರ್ಜೀನಿಯದ ರಾಜ್ಯಪಾಲ ಡಿನ್ವಿಡ್ಡಿ, ಯುವ ಮೇಜರ್ ವಾಷಿಂಗ್‍ಟನ್‍ನನ್ನು ಫ್ರೆಂಚರ ಇಂಗಿತ ಮತ್ತು ಸೈನ್ಯ ಬಲವನ್ನು ಸಮೀಕ್ಷಿಸಲು ಕಳುಹಿಸಿದನು. ವಾಷಿಂಗ್ಟನ್‍ನ ವರದಿ ಉತ್ತಮವಾಗಿದ್ದಿದ್ದರಿಂದ ಅವನಿಗೆ ಲೆಫ್ಟನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ನೀಡಿ ೧೭೫೪ರಲ್ಲಿ ವರ್ಜೀನಿಯ ಸೈನ್ಯಯ ತುಕಡಿಯೊಂದಿಗೆ ಫ್ರೆಂಚರನ್ನು ಹಿಂದೋಡಿಸಲು ಕಳುಹಿಸಲಾಯಿತು. ಇದು ಫ್ರೆಂಚ್ ಮತ್ತು ಇಂಡಿಯನ್ ಯುದ್ಧದ (ಏಳು ವರ್ಷಗಳ ಯುದ್ಧ) ಮೊದಲ ಕದನಗಳಲ್ಲಿ ಒಂದು. ಮೊದಲು ಒಂದು ಪುಟ್ಟ ಸೈನಿಕ ಗುಂಪಿನ ಮೇಲೆ ವಿಜಯಿಯಾದರೂ, ಮುಂದೆ ದೊಡ್ಡ ಸೈನ್ಯದ ವಿರುದ್ಧ ಪರಾಜಯ ಹೊಂದಿ ವಾಷಿಂಗ್ಟನ್ ಶರಣಾಗಬೇಕಾಯಿತು. ವರ್ಜೀನಿಯಗೆ ಹಿಂದಿರುಗಿದ ಮೇಲೆ ಸೈನ್ಯದಿಂದ ರಾಜಿನಾಮೆ ನೀಡಿದರು.

೧೭೫೫ರಲ್ಲಿ ಬ್ರಿಟಿಷ್ ದಂಡನಾಯಕ ಎಡ್ವರ್ಡ್ ಬ್ರಾಡಾಕ್‍ನ ನೇತೃತ್ವದಲ್ಲಿ ಮತ್ತೊಂದು ಸೇನೆ ಒಹಾಯೊ ಪ್ರದೇಶವನ್ನು ಪಡೆಯಲು ಹೊರಟಾಗ ಅದನ್ನು ಸೇರಲು ವಾಷಿಂಗ್ಟನ್ ಸ್ವಯಂ ಮುಂದಾದರು. ಈ ಸೇನೆಯು ಹೀನಾಯ ಸೋಲು ಅನುಭವಿಸಿದರೂ, ವಾಷಿಂಗ್ಟನ್ ಅತ್ಯಂತ ಶೌರ್ಯವನ್ನು ಪ್ರದರ್ಶಿಸಿ ಉಳಿದ ಸಿಪಾಯಿಗಳನ್ನು ಹಿಂದೆ ತಂದರು. ಮುಂದಿನ ಮೂರು ವರ್ಷಗಳು ವರ್ಜೀನಿಯ ಸೇನೆಯ ಮುಂದಾಳತ್ವವನ್ನು ವಹಿಸಿಕೊಂಡು ವರ್ಜೀನಿಯವನ್ನು ಫ್ರೆಂಚರಿಂದ ಕಾಪಾಡಿದರು.

ವಾಷಿಂಗ್ಟನ್ ಮುಂಚಿನಿಂದಲೂ ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಯಾಗಬೇಕೆಂಬ ಹಂಬಲವಿತ್ತು. ಆದರೆ ಬ್ರಿಟಿಷ್ ಮೇಲಧಿಕಾರಿಗಳು ಅಮೇರಿಕದ ವಸಾಹತುವಿನ ಪ್ರಜೆಗಳನ್ನು ಕೇಳಾಗಿ ಕಾಣುತ್ತಿದ್ದರು. ಹೀಗಾಗಿ ಸೇನೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದರೂ, ವಾಷಿಂಗ್ಟನ್‍ಗೆ ಈ ಅಧಿಕಾರ ದೊರೆಯಲಿಲ್ಲ. ನಿರಾಷೆಗೊಂಡ ವಾಷಿಂಗ್ಟನ್, ೧೭೫೮ರಲ್ಲಿ ಸೈನ್ಯದಿಂದ ನಿವೃತ್ತಿ ಹೊಂದಿ ಮುಂದಿನ ಹದಿನಾರು ವರ್ಷ ತನ್ನ ತೋಟಗಳ ಪಾಲನೆಯಲ್ಲಿ ಮಗ್ನನಾದ.

ಯುದ್ಧಗಳ ಮಧ್ಯೆ[ಬದಲಾಯಿಸಿ]

೧೭೫೭ರಲ್ಲಿ ಮಾರ್ಥ ಕಸ್ಟಿಸ್

ಜನವರಿ ೬, ೧೭೫೯ರಲ್ಲಿ ವಾಷಿಂಗ್ಟನ್ ಮಾರ್ಥ ಕಸ್ಟಿಸ್ ಎಂಬ ವಿಧವೆಯನ್ನು ಮದುವೆಯಾದರು. ಮಾರ್ಥ ಅವರು ಮೊದಲ ಮದುವೆಯಿಂದ ಪಡೆದ ಮಕ್ಕಳಾದ ಜಾನ್ ಕಸ್ಟಿಸ್ ಮತ್ತು ಮಾರ್ಥ ಕಸ್ಟಿಸ್‍ರನ್ನು ಇಬ್ಬರೂ ಪಾಲನೆ ಮಾಡಿದರು. ವಾಷಿಂಗ್ಟನ್ ಮತ್ತು ಮಾರ್ಥರವರಿಗ ಸಂತತಿ ಜನಿಸಲಿಲ್ಲ. ವಾಷಿಂಗ್ಟನ್ ಮುಂಚೆ ಪಡೆದ ಸಿಡುಬು ಮತ್ತು ಕ್ಷಯ ರೋಗಗಳಿಂದ ಅವರು ಬರಡಾಗಿರಬಹುದೆಂದು ಸಂಶಯಿಸಲಾಗಿದೆ.[೧]

ಸೈನ್ಯ ಸೇವೆಯಿಂದ ಪಡೆದ ವರ್ಚಸ್ಸಿನಿಂದ ವಾಷಿಂಗ್ಟನ್ ಸ್ಥಳೀಯ ಸಮಾಜದ ಗಣ್ಯರಲ್ಲಿ ಒಬ್ಬನಾದ. ೧೯೫೮ರಲ್ಲಿ ವರ್ಜೀನಿಯದ ಪ್ರಾಂತೀಯ ಶಾಸನಸಭೆಗೆ ಆಯ್ಕೆಯಾದ. ಶ್ರೀಮಂತಳಾಗಿದ್ದ ಮಾರ್ಥಳನ್ನು ಮದುವೆಯಾದುದ್ದರಿಂದ ವಾಷಿಂಗ್ಟನ್‍ನ ಸಂಪತ್ತು ಕೂಡ ಬಹಳ ಹೆಚ್ಚಾಯಿತು. ಜಾಗರೂಕ ಪಾಲನೆಯಿಂದ ತನ್ನ ಭೂಹಿಡಿತವನ್ನು ಬಹಳಷ್ಟು ಹೆಚ್ಚಿಸಿಕೊಂಡ.

ಕ್ರಮೇಣ ಹೆಚ್ಚುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ಹೊರಲಾರಂಭಿಸಿದ. ೧೭೬೯ರಲ್ಲಿ ಅಮೇರಿಕ ವಸಾಹತಿಗೆ ಆಮದಾದ ಪದಾರ್ಥಗಳ ಮೇಲೆ ತೆರೆಯನ್ನು ಹೇರಿದ್ದ ಟೌನ್‍ಶೆಂಡ್ ಕಾಯ್ದೆಯನ್ನು ಹಿಂತೆಗೆದುಕೊಳ್ಳುವವರೆಗೆ ಆಂಗ್ಲ ಪದಾರ್ಥಗಳನ್ನು ಬಹಿಷ್ಕರಿಸಬೇಕೆಂಬ ಮಸೂದೆಯನ್ನು ಮಂಡಿಸಿದ. ಮುಂದೆ ೧೭೭೪ರಲ್ಲಿನ ವಿವಿಧ ಕಠಿಣ ಕಾನೂನುಗಳನ್ನು (ಅಬಾಧ್ಯ ಕಾನೂನುಗಳು - Intolerable Acts) ವಿರೋಧಿಸಲು ಅಮೇರಿಕ ವಸಾಹತಿನ ವಿವಿಧ ರಾಜ್ಯಗಳು ಸೇರಿದ ಖಂಡೀಯ ಕಾಂಗ್ರೆಸ್ಗೆ (Continental Congress) ವರ್ಜೀನಿಯದ ಪ್ರತಿನಿಧಿಯಾಗಿ ಆಯ್ಕೆಯಾದ.

ಅಮೇರಿಕದ ಕ್ರಾಂತಿಕಾರಿ ಯುದ್ಧ[ಬದಲಾಯಿಸಿ]

ಯಾರ್ಕ್‍ಟೌನ್ನಲ್ಲಿ ಲಾರ್ಡ್ ಕಾರ್ನ್‍ವಾಲಿಸ್ನ ಸೈನ್ಯೆಯ ಶರಣಾಗತಿಯ ಚಿತ್ರಣ

೧೭೭೫ರ ಏಪ್ರಿಲ್‍ನಲ್ಲಿ ಅಮೇರಿಕದ ಕ್ರಾಂತಿಕಾರಿ ಯುದ್ಧದ ಮೊದಲ ಕದನಗಳು ಉಂಟಾದವು. ನಂತರ ಮೇನಲ್ಲಿ ಎರಡನೇ ಖಂಡೀಯ ಕಾಂಗ್ರೆಸ್ ಸಮಾವೇಷದಲ್ಲಿ ವಾಷಿಂಗ್ಟನ್ ಪ್ರಮುಖ ಪಾತ್ರ ವಹಿಸಿದ. ಜೂನ್ ೧೪ರಂದು ಕಾಂಗ್ರೆಸ್ಸು ಖಂಡೀಯ ಸೈನ್ಯೆಯನ್ನು (Continental Army) ಸ್ಥಾಪಿಸಿತು. ಜಾನ್ ಆಡಮ್ಸ್ನ ಸಲಹೆಯಂತೆ ವಾಷಿಂಗ್ಟನ್‍ರನ್ನು ಸೈನ್ಯೆಯ ಮಹಾಸೇನಾಪತಿಯಾಗಿ ನೇಮಿಸಲಾಯಿತು. ಆಗಲೇ ನಡೆಯುತ್ತಿದ್ದ ಬಾಸ್ಟನ್ ನಗರದ ಮುತ್ತುಗೆಯನ್ನು ವಾಷಿಂಗ್ಟನ್ ವಹಿಸಿದನು. ನಗರದಿಂದ ಬ್ರಿಟೀಷರನ್ನು ಹೊರದಟ್ಟಿದ ನಂತರ ನ್ಯೂ ಯಾರ್ಕ್ ನಗರವನ್ನು ಆಕ್ರಮಿಸಿದನು.

ಆಗಸ್ಟ ೧೭೭೬ರಲ್ಲಿ ವಿಲಿಯಮ್ ಹೋವ್‍ನ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯೆಯ ಬೃಹತ್ ದಳವೊಂದು ನ್ಯೂ ಯಾರ್ಕ್ ನಗರವನ್ನು ವಾಪಸ್ಸು ಪಡೆಯಲು ಆಕ್ರಮಣ ಮಾಡಿತು. ಹಲವು ಕಾಳಗಗಳಲ್ಲಿ ಸೋಲನ್ನನುಬವಿಸಿದ ಖಂಡೀಯ ಸೈನ್ಯೆ ನ್ಯೂ ಯಾರ್ಕನ್ನು ಬಿಟ್ಟು ನ್ಯೂ ಜರ್ಸಿಯವರೆಗೆ ಹಿಂದಿರುಗಬೇಕಾಯಿತು. ವಾಷಿಂಗ್ಟನ್‍ನ ಮುಂದಿನ ದಾಳಿಗಳೂ ಸಫಲವಾಗಲಿಲ್ಲ. ಸೆಪ್ಟಂಬರ್ ೧೧, ೧೭೭೭ಬ್ರಾಂಡಿವೈನ್ ಕಾಳಗದಲ್ಲಿ ವಾಷಿಂಗ್ಟನ್‍ನ ಸೇನೆಯ ಮೇಲೆ ಹೋವ್ ವಿಜಯಿಯಾಗಿ ಕಾಂಗ್ರೆಸ್‍ನ ಆಡಳಿತ ಕೇಂದ್ರವಾದ ಫಿಲಡೆಲ್ಫಿಯವನ್ನೂ ಬ್ರಿಟೀಷರ ನಿಯಂತ್ರಣಕ್ಕೆ ತಂದ. ಕಾಂಗ್ರೆಸ್‍ನ ಕೆಲವರು ಈ ಸೋಲಿಗಾಗಿ ವಾಷಿಂಗ್ಟನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಆದರೆ ವಾಷಿಂಗ್ಟನ್‍ನ ಬೆಂಬಲಿಗರು ಇದನ್ನು ತಡೆದರು.

೧೭೭೭ರ ಚಳಿಗಾಲದಲ್ಲಿ ಕದನಗಳು ನಿಂತಾಗ ಪೆನ್ಸಿಲ್ವೇನಿಯದ ವ್ಯಾಲಿ ಫೋರ್ಜ್‍ನಲ್ಲಿ ಖಂಡೀಯ ಸೈನ್ಯೆ ಬೀಡು ಬಿಡಬೇಕಾಯಿತು. ಈ ಮಧ್ಯ ಈ ಯುದ್ಧದಲ್ಲಿ ಫ್ರಾನ್ಸ್ನ ಬೆಂಬಲ ಖಂಡೀಯ ಸೈನ್ಯೆಗೆ ದೊರೆಯಿತು. ಇವರ ಸಹಾಯದಿಂದ ಬಲಪಟ್ಟ ಸೈನ್ಯೆ ಮುಂದಿನ ವಸಂತದಲ್ಲಿ ಫಿಲಡೆಲ್ಫಿಯವನ್ನು ವಾಪಸ್ಸು ಪಡೆಯಿತು. ಚೆಸಪಿಯಾಕೆ ಕೊಲ್ಲಿಯ ಕಾಳಗದಲ್ಲಿ ಫ್ರೆಂಚರ ನೌಕಾಬಲ ಬ್ರಿಟೀಷರ ಮೇಲೆ ಬೃಹತ್ ವಿಜಯವನ್ನು ಹೊಂದಿತು. ಇದನಂತರ ವಾಷಿಂಗ್ಟನ್ ನ್ಯೂ ಯಾರ್ಕ ನಗರವನ್ನು ವಶಪಡಿಸಿಕೊಂಡ. ಅಕ್ಟೋಬರ್ ೧೭, ೧೭೮೧ಯಾರ್ಕ್‍ಟೌನ್ ಮುತ್ತಿಗೆಯಲ್ಲಿ ವಾಷಿಂಗ್ಟನ್ ಸಹಸೇನಾಪತಿಯಾಗಿದ್ದ ಫ್ರಾನ್ಸ್ ಮತ್ತು ಖಂಡೀಯ ಸೈನ್ಯೆಗಳು ವಿಜಯಿಯಾದಾಗ ಕ್ರಾಂತಿಕಾರಿ ಯುದ್ಧ ಕೊನೆಗೊಂಡಿತು. ೧೭೮೩ರ ಪ್ಯಾರಿಸ್ ಒಪ್ಪಂದದಂತೆ ಅಮೇರಿಕ ಸಂಯುಕ್ತ ಸಂಸ್ಥಾನ ಸ್ವಾತಂತ್ರ್ಯ ಹೊಂದಿತು.

ಸ್ವಾತಂತ್ರ್ಯದ ನಂತರ[ಬದಲಾಯಿಸಿ]

ವಾಷಿಂಗ್ಟನ್ ತನ್ನ ಮಹಾಸೇನಾಪತಿ ಹುದ್ದೆಯಿಂದ ರಾಜಿನಾಮೆ ನೀಡುತ್ತಿರುವುದರ ಚಿತ್ರಣ

ನವೆಂಬರ್ ೨೫, ೧೭೮೩ರಂದು ಬ್ರಿಟಿಷ್ ಸೇನೆಯ ಕೊನೆ ಸೈನಿಕರು ನ್ಯೂ ಯಾರ್ಕ್ ಅನ್ನು ತೊರೆದರು. ವಾಷಿಂಗ್ಟನ್ ಮತ್ತು ನ್ಯೂ ಯಾರ್ಕ್‍ನ ರಾಜ್ಯಪಾಲ ನಗರವನ್ನು ವಷಕ್ಕೆ ತಗೆದುಕೊಂಡರು. ಡಿಸೆಂಬರ್ ೨೩ರಂದು ತಮ್ಮ ಕೆಲಸವು ಪೂರ್ಣವಾದುದ್ದರಿಂದ ಕಾಂಗ್ರೆಸ್‍ನ ಮುಖ್ಯಸ್ಥನ ಹುದ್ದೆಗೆ ರಾಜಿನಾಮೆ ನೀಡಿದರು.

ತಮ್ಮ ಮೌಂಟ್ ವೆರ್ನನ್‍ಗೆ ನಿವೃತ್ತಿಗೆ ತೆರಳಿದರೂ, ಈ ನಿವೃತ್ತಿ ಬಹಳ ಕಾಲ ಉಳಿಯಲಿಲ್ಲ. ೧೭೮೭ರ ಬೇಸಿಗೆಯಲ್ಲಿ ಫಿಲಡೆಲ್ಫಿಯದಲ್ಲಿ ಸೇರಿದ ಸಂವಿಧಾನ ರಚನೆ ಸಭೆಯಲ್ಲಿ ಭಾಗವಹಿಸಲು ಒತ್ತಾಯಿಸಲಾಯಿತು. ಮುಂದೆ ಈ ಸಭೆಯ ಅಧ್ಯಕ್ಷನಾಗಿಯೂ ಆಯ್ಕೆಯಾದರು. ಸಂವಿಧಾನದ ರಚನೆಯಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸದಿದ್ದರೂ, ಸಭೆಯಲ್ಲಿನ ಎಲ್ಲರ ಮುಂದಾಳತ್ವವನ್ನು ಇವರು ನಿಭಾಯಿಸಿದರು. ಸಭೆಯ ಕೊನೆಯಲ್ಲಿ ತಯಾರಾದ ಸಂವಿಧಾನವನ್ನು ಎಲ್ಲ ೧೩ ರಾಜ್ಯಗಳು ಅಂಗೀಕರಿಸುವಲ್ಲಿಯೂ ವಾಷಿಂಗ್ಟನ್ ಪ್ರಮುಖ ಪಾತ್ರ ವಹಿಸಿದರು.

ರಾಷ್ಟ್ರಪತಿಯಾಗಿ (೧೭೮೯ - ೧೭೯೭)[ಬದಲಾಯಿಸಿ]

೧೭೯೬ರಲ್ಲಿ ಅಪೂರ್ಣವಾಗಿ ಚಿತ್ರಿತ ವಾಷಿಂಗ್ಟನ್. ಈ ಚಿತ್ರವು ಮುಂದೆ ಬಹಳೆಡೆ ಉಪಯುಕ್ತವಾಗಿದೆ. ಅಮೇರಿಕದ ಒಂದು ಡಾಲರ್ ನೋಟಿನ ಮೇಲಿರುವ ಚಿತ್ರ ಕೂಡ ಇದರಿಂದ ಪಡೆದಿರುವುದೆ.

೧೭೮೯ರಲ್ಲಿ ವಾಷಿಂಗ್ಟನ್‍ರವರನ್ನು ಅಮೇರಿಕದ ಚುನಾವಣೆ ಸಮಿತಿಯು (United States Electoral College) ರಾಷ್ಟ್ರಪತಿಯಾಗಿ ಐಕ್ಯಮತದಿಂದ ಆರಿಸಿತು. ಇಲ್ಲಿಯವರೆಗೆ ಹೀಗೆ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಇವರೇ. ಜಾನ್ ಆಡಮ್ಸ್ ಇವರ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ನ್ಯೂ ಯಾರ್ಕ ನಗರದ ಫೆಡರಲ್ ಹಾಲ್‍ನಲ್ಲಿ ಏಪ್ರಿಲ್ ೩೦, ೧೭೮೯ರಂದು ಅಮೇರಿಕದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಅಮೇರಿಕದ ರಾಜ್ಯಬಾರ ಯೂರೋಪಿನ ದರ್ಬಾರುಗಳಂತೆ ಆಗಬಾರದೆಂದು ಇವರ ಅಭಿಪ್ರಾಯವಿತ್ತು. ಹೀಗಾಗಿ ಅಧಿಕಾರವನ್ನು ಸರಳತೆಯಿಂದ ನಡೆಸಿದರು. ಇವರ ಹುದ್ದೆಗೆ ಮೊದಲ ಸಂಸತ್ತು ೨೫,೦೦೦ ಡಾಲರ್ ಮೊಬಲಗನ್ನು ವೇತನವನ್ನಾಗಿ ಗೊತ್ತು ಪಡಿಸಿತು. ಅಧಿಕಾರದ ಸರಳತೆಯಲ್ಲಿ ನಂಬಿಕೆಯಿಟ್ಟಿದ್ದ ವಾಷಿಂಗ್ಟನ್ ಇದನ್ನು ನಿರಾಕರಿಸಿದರು. ಆದರೆ ಮುಂದೆ ವೇತನವಿಲ್ಲದೆ ಕೆಲಸ ಮಾಡಬಲ್ಲ ಶ್ರೀಮಂತರಿಗೆ ಮಾತ್ರ ರಾಷ್ಟ್ರಪತಿ ಹುದ್ದೆ ಸೀಮಿತವೆಂಬ ಭಾವನೆ ಬೆಳೆಯಬಾರೆದೆಂದು ಎಲ್ಲರೂ ಅಭಿಪ್ರಾಯಿಸಿದಾಗ ಇದನ್ನು ಸ್ವೀಕರಿಸಬೇಕಾಯಿತು.

ಎರಡನೇ ಬಾರಿ ರಾಷ್ಟ್ರಪತಿಯಾಗಿ ೧೭೯೨ರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದಾಗ ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಯಿತು. ಇವರು ಮೂರನೇ ಬಾರಿ ಅಧಿಕಾರ ಸ್ವೀಕರಿಸಲು ನಿರಾಕರಿಸಿದರು. ಹೀಗಾಗಿ ಮುಂದೆ ರಾಷ್ಟ್ರಪತಿಗಳು ಗರಿಷ್ಠ ಎರಡು ಅವಧಿಗಳನ್ನು ಮಾತ್ರ ಪ್ರತಿನಿಧಿಸಬೇಕೆಂಬ ವಾಡಿಕೆ ಬೆಳೆಯಿತು.[೨]

ಆಡಳಿತ[ಬದಲಾಯಿಸಿ]

ವಾಷಿಂಗ್ಟನ್ ಯಾವ ಪಕ್ಷದ ಸದಸ್ಯರೂ ಆಗಿರಲಿಲ್ಲ. ಆದರೆ ಅವರ ಸಲಹೆಗಾರರು ಎರಡು ಪಕ್ಷಗಳಾಗಿ ವಿಂಗಡಿತರಾದರು. ಖಜಾನೆಯ ಕಾರ್ಯದರ್ಶಿ ಅಲೆಕ್ಸಾಂಡರ್ ಹ್ಯಾಮಿಲ್ಟನ್‍ರ ಫೆಡರಲಿಸ್ಟ್ ಪಕ್ಷ ಅಮೇರಿಕವನ್ನು ಪ್ರಬಲ ಹಣಕಾಸು ಆಧಾರಿತ ದೇಶವನ್ನಾಗಿ ಮಾಡಬೇಕೆಂದಿದ್ದರು. ಆದರೆ ಸರಕಾರದ ಕಾರ್ಯದರ್ಶಿ ಥಾಮಸ್ ಜೆಫರ್‍ಸನ್ಪಕ್ಷ ರಾಜ್ಯಗಳ ಕೈಯಲ್ಲಿ ಬಲವಿದ್ದು ಕೃಷಿಗೆ ಪ್ರಾಧಾನ್ಯ ನೀಡಬೇಕೆಂಬ ವಿಚಾರವನ್ನು ಹೊಂದಿತ್ತು.

ಹ್ಯಾಮಿಲ್ಟನ್‍ರ ಮುಂದಾಳತ್ವದಲ್ಲಿ ೧೭೯೧ರಲ್ಲಿ ಮದ್ಯದ ಮೇಲೆ ತೆರಿಗೆ ಹೇರಲಾಯಿತು. ಅನೇಕ ರಾಜ್ಯಗಳಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಿತು. ೧೭೯೪ರಲ್ಲಿ ಪೆನ್ಸಿಲ್ವೇನಿಯದಲ್ಲಿ ಇದರ ವಿರುದ್ಧ ದಂಗೆಯೆದ್ದಿತು. ವಾಷಿಂಗ್ಟನ್‍ರು ಸ್ವತಃ ಸೇನಾಪತಿಯಾಗಿ ಹಲವು ರಾಜ್ಯಗಳ ಸೇನೆಯನ್ನು ಪೆನ್ಸಿಲ್ವೇನಿಯಗೆ ತಂದು ಕದನವಿಲ್ಲದೇ ಈ ವಿಸ್ಕಿ ದಂಗೆಯನ್ನು ನಿಗ್ರಹಿಸಿದು. ಅಮೇರಿಕದ ಇತಿಹಾಸದಲ್ಲಿ ರಾಷ್ಟ್ರಪತಿಯೇ ಸೇನಾಪತಿಯಾಗಿ ಕಾರ್ಯ ನಿರ್ವಹಿಸಿದ ಎರಡು ಬಾರಿಗಳಲ್ಲಿ ಇದು ಮೊದಲನೆಯದು.

ವಿದೇಶ ವ್ಯವಹಾರಗಳು[ಬದಲಾಯಿಸಿ]

೧೭೯೩ರಲ್ಲಿ ಫ್ರಾನ್ಸನ ಪ್ರತಿನಿಧಿ ಎಡ್ಮಂಡ್-ಚಾಲ್ಸ್ ಗೆನೆ ಅಮೇರಿಕದಲ್ಲಿ ಬ್ರಿಟೀಷರ ವಿರುದ್ಧ ಫ್ರಾನ್ಸ್‍ಗೆ ಬೆಂಬಲ ನೀಡಲು ಹಲವು ಸಂಘಗಳಲ್ಲಿ ಪ್ರಚಾರ ಮಾಡಲಾರಂಬಿಸಿದನು. ವಾಷಿಂಗ್ಟನ್ ಪರದೇಶಗಳು ಅಮೇರಿಕದ ಅಂತರಿಕ ವಿಷಯಗಳಲ್ಲಿ ತಲೆಹಾಕಬಾರದೆಂದು ಫ್ರಾನ್ಸ್‍ಗೆ ತಿಳಿಸಿ ಗೆನೆಯನ್ನು ವಾಪಸ್ಸು ಕರೆಸಿಕೊಳ್ಳಲು ಆಗ್ರಹಿಸಿದರು.

ನವೆಂಬರ್ ೧೯, ೧೭೯೪ರಲ್ಲಿ ವಾಷಿಂಗ್ಟನ್ ಮತ್ತು ಹ್ಯಾಮಿಲ್ಟನ್‍ ರಚಿಸಿದ ಜೇ ಒಪ್ಪಂದಕ್ಕೆ ಬ್ರಿಟೀಷರು ಸಹಿ ಹಾಕಿದರು. ಇದರಂತೆ ಬ್ರಿಟೀಷರು ಸ್ವಾತಂತ್ರ್ಯ ಯುದ್ಧದ ಮುಂಚಿನ ಋಣಗಳನ್ನು ಮನ್ನಿಸಿ, ಮಹಾ ಸರೋವರಗಳ ಸುತ್ತಲಿನಿಂದ ತಮ್ಮ ಪಡೆಗಳನ್ನು ಹಿಂದೆ ತಗೆದುಕೊಂಡರು. ಇದಲ್ಲದೆ ತಮ್ಮ ವೆಸ್ಟ್ ಇಂಡೀಸ್ ವಸಾಹತುಗಳೊಂದಿಗೆ ವಾಣಿಜ್ಯವನ್ನೂ ಬ್ರಿಟೀಷರು ಅಂಗೀಕರಿಸಿದರು. ಇದರಿಂದ ಎರಡು ದೇಶಗಳ ಮಧ್ಯ ಸಂಭವವಾಗುವಂತಿದ್ದ ಯುದ್ಧವು ನಿವಾರಿತವಾಗಿ ಎರಡು ದೇಶಗಳ ಮಧ್ಯ ಮುಂದಿನ ದಶಕದಲ್ಲಿ ಲಾಭದಾಯಕ ವಾಣಿಜ್ಯ ನಡೆಯಿತು. ದೇಶದಲ್ಲಿ ಜೆಫರ್ಸನ್‍ರ ಪಕ್ಷದ ವಿರೋಧವಿದ್ದ ಈ ಒಪ್ಪಂದಕ್ಕೆ ವಾಷಿಂಗ್ಟನ್‍ರು ತಮ್ಮ ಸ್ವಂತ ವರ್ಚಸ್ಸಿನಿಂದ ಸಂಸತ್ತಿನ ಅಂಗೀಕಾರ ತಂದರು. ಈ ಬೆಳವಣಿಗೆಗಳಿಂದ ಫ್ರೆಂಚರೊಂದಿನ ಸಂಬಂಧ ಹದಗೆಟ್ಟಿತು.

ನಿವೃತ್ತಿ ಮತ್ತು ನಿಧನ[ಬದಲಾಯಿಸಿ]

ಮೌಂಟ್ ವೆರ್ನನ್

ರಾಷ್ಟ್ರಪತಿ ಸ್ಥಾನದಿಂದ ಮಾರ್ಚ್ ೧೭೯೭ರಲ್ಲಿ ನಿವೃತ್ತಿ ಹೊಂದಿದ ನಂತರ ಮೌಂಟ್ ವೆರ್ನನ್ಗೆ ಹಿಂದಿರುಗಿ ತಮ್ಮ ಕಾಲವನ್ನು ತಮ್ಮ ತೋಟಗಳ ಪಾಲನೆಯಲ್ಲಿ ತೊಡಗಿಸಿಕೊಂಡರು. ೧೭೯೮ರಲ್ಲಿ ರಾಷ್ಟ್ರಪತಿ ಜಾನ್ ಆಡಮ್ಸ್ ವಾಷಿಂಗ್ಟನ್‍ರನ್ನು ಸೇನೆಯ ಅತಿ ಶ್ರೇಷ್ಟ ಹುದ್ದೆಯಾದ ಲಫ್ಟೆನಂಟ್ ಜನರಲ್ ಆಗಿ ನೇಮಕ ಮಾಡಿದರು.

ಡಿಸೆಂಬರ್ ೧೨, ೧೭೯೯ರಂದು ತಮ್ಮ ತೋಟಗಳನ್ನು ನೋಡಿಕೊಂಡು ಹಿಂದಿರುಗುವಾಗ ಹಿಮಪಾತದಲ್ಲಿ ಸಿಕ್ಕಿಕೊಂಡು ನೆಂದರು. ಮುಂದಿನ ಮುಂಜಾನೆಯ ಹೊತ್ತಿಗೆ ಇದು ಗಂಟಲಿನ ರೋಗವಾಗಿ (quinsy) ಪರಿವರ್ತಿತವಾಗಿತ್ತು. ಡಿಸೆಂಬರ್ ೧೪, ೧೭೯೯ರ ಸಂಜೆ ಈ ರೋಗದಿಂದ ವಾಷಿಂಗ್ಟನ್‍ ಮೃತ ಪಟ್ಟರು.

ಟಿಪ್ಪಣಿಗಳು ಮತ್ತು ಮೂಲಗಳು[ಬದಲಾಯಿಸಿ]

  1. John K. Amory, M.D., "George Washington’s infertility: Why was the father of our country never a father?" Fertility and Sterility, Vol. 81, No. 3, March 2004. (online, PDF format) Archived 2009-03-04 ವೇಬ್ಯಾಕ್ ಮೆಷಿನ್ ನಲ್ಲಿ.
  2. ಫ್ರಾಂಕ್ಲಿನ್ ರೂಸ್ವೆಲ್ಟ್ ೪ನೇ ಬಾರಿ ಆಯ್ಕೆಯಾದ ಮೇಲೆ ಮುಂದೆ ರಾಷ್ಟ್ರಪತಿಗಳು ಕೇವಲ ಎರಡು ಬಾರಿ ಮಾತ್ರ ಅಧಿಕಾರ ವಹಿಸಬಹುದೆಂಬ ಕಾಯ್ದೆಯನ್ನು ಸಂವಿಧಾನದ ೨೨ನೇ ತಿದ್ದುಪಡಿಯಲ್ಲಿ ಸೇರಿಸಲಾಯಿತು.