ವಿಷಯಕ್ಕೆ ಹೋಗು

ಘಂಟಾಕರ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘಂಟಾಕರ್ಣನು ಶಿವ ಗಣದಲ್ಲೊಬ್ಬ.[]

ಈತನ ಬಗ್ಗೆ ಕಥೆಗಳು

[ಬದಲಾಯಿಸಿ]

ಈತನ ಬಗ್ಗೆ ಅನೇಕ ಕಥೆಗಳಿವೆ. ಶಾಪಗ್ರಸ್ತನಾದ ಈತ ಮಾನವ ಯೋನಿಯಲ್ಲಿ ಹುಟ್ಟಿ, ವಿಕ್ರಮನ ಆಸ್ಥಾನದಲ್ಲಿ ಪಂಡಿತರನ್ನು ಗೆಲ್ಲಲಿಕ್ಕಾಗಿ ವರ ಬೇಡಲು ಶಿವನನ್ನು ಆರಾಧಿಸಿದ. ಶಿವ ಪ್ರತ್ಯಕ್ಷನಾಗಿ, ಕಾಳಿದಾಸನ ವಿನಾ ಎಲ್ಲರನ್ನೂ ಗೆಲ್ಲುತ್ತೀಯೆ ಎಂದು ವರಕೊಟ್ಟ. ಅಷ್ಟಕ್ಕೇ ತೃಪ್ತನಾಗದೆ ಕೋಪಗೊಂಡ ಘಂಟಾಕರ್ಣ ತಾನಿನ್ನು ಶಿವ ಶಬ್ದವನ್ನು ಉಚ್ಚರಿಸುವುದಿಲ್ಲವೆಂದು ಪಣ ತೊಟ್ಟು ತನ್ನ ಜೊತೆ ವಾದ ಹೂಡಲು ಕಾಳಿದಾಸನನ್ನು ಆಹ್ವಾನಿಸಿದ. ಶಿವನ ಮೇಲೆ ಒಂದು ಸ್ತೋತ್ರವನ್ನು ಘಂಟಾಕರ್ಣ ರಚಿಸಿದರೆ ತಾನು ಪರಾಭವನಾದೆನೆಂದು ಒಪ್ಪಿಕೊಳ್ಳುವುದಾಗಿ ಕಾಳಿದಾಸ ತಿಳಿಸಿದ. ಹಾಗೆ ಮಾಡಿ ಘಂಟಾಕರ್ಣ ಕಾಳಿದಾಸನನ್ನು ಸೋಲಿಸಿದನಂತೆ. ಸ್ವಾರಸ್ಯವೇನೆಂದರೆ ಈತ ರಚಿಸಿದ ಶಿವ ಸ್ತೋತ್ರದಲ್ಲಿ ಎಲ್ಲಿಯೂ ಶಿವನ ಹೆಸರು ಬಂದಿರಲಿಲ್ಲ ಎಂಬುದು. ಆಗ ಶಿವ ಪ್ರಸನ್ನನಾಗಿ ಈತನನ್ನು ತನ್ನ ಪರಿವಾರದಲ್ಲಿ ಸೇರಿಸಿಕೊಂಡ.

ಈ ಕಥೆಯ ಮತ್ತೊಂದು ರೂಪಾಂತರ ಹರಿವಂಶದಲ್ಲಿ ಬಂದಿದೆ. ಘಂಟಾಕರ್ಣ ಪರಮ ಶಿವಭಕ್ತ. ಅನ್ಯದೈವದ ಹೆಸರೇ ತನ್ನ ಕಿವಿಗೆ ಬೀಳದಂತೆ ಕಿವಿಗೆ ಘಂಟೆ ಕಟ್ಟಿಕೊಂಡಿದ್ದ. ಒಮ್ಮೆ ಶಿವ ವೇಷಾಂತರದಿಂದ ಬಂದು ‘ಹರಿಯಿತು’ ಎಂಬ ಪದವನ್ನು ಈತನ ಎದುರಿಗೆ ಪ್ರಯೋಗಿಸಲಾಗಿ ಸಿಟ್ಟುಗೊಂಡು ಘಂಟಾಕರ್ಣ ಶಿವನನ್ನು ತಾಡಿಸಿ ಓಡಿಸಿದ. ಹರಮಹತ್ತ್ವವನ್ನು ಘಂಟಾಘೋಷವಾಗಿ ಸಾರಿದ ಈತನನ್ನು ಘಂಟಾಕರ್ಣನೆಂದು ಕರೆಯಲಾಗಿದೆ. ಈತ ಪೂಜಿಸಿದ ಪುಷ್ಪ ಬಾಡುತ್ತಿರಲಿಲ್ಲ. ಒಮ್ಮೆ ಸೂರ್ಯ ಅವನನ್ನು ಬಾಡಿಸಲು ಕೋಪಗೊಂಡ ಘಂಟಾಕರ್ಣ ಕುಷ್ಠರೋಗಿಯಾಗೆಂದು ಸೂರ್ಯನನ್ನು ಶಪಿಸಿದ. ಆಗ ಸೂರ್ಯ ಈತನನ್ನೇ ಶರಣು ಹೋಗಲು ಮನೋಹರನೆಂಬ ಗಣೇಶ್ವರನ ಪಾದೋದಕದಿಂದ ರೋಗ ವಾಸಿಯಾಗುವುದೆಂದು ಶಾಪವಿಮೋಚನ ಮಾರ್ಗವನ್ನು ತಿಳಿಸಿದ. ಆಗ ಸೂರ್ಯ ಕಾಶಿಯಲ್ಲಿ ಬಾಲಾರ್ಕೇಶ್ವರನನ್ನು ಸ್ಥಾಪಿಸಿ ಗಣೇಶ್ವರನ ಪಾದೋದಕವನ್ನು ಸ್ವೀಕರಿಸಿ ಕಷ್ಟವನ್ನು ಕಳೆದುಕೊಂಡ.

ಈಗಲೂ ಬಂಗಾಳದಲ್ಲಿ ಘಂಟಾಕರ್ಣನನ್ನು ದೇವರೆಂದು ಭಾವಿಸಿ ಅಧಿವ್ಯಾಧಿಗಳಿಂದ ತಮ್ಮನ್ನು ರಕ್ಷಿಸಲು ಈತನನ್ನು ಪೂಜಿಸುತ್ತಾರೆ. ಈ ಪೂಜೆಗೆ ಯಾರ ಅವಶ್ಯಕತೆಯೂ ಇಲ್ಲ. ಮನೆಯಲ್ಲಿನ ವೃದ್ಧಸ್ತ್ರೀಯೇ ಈ ಕೆಲಸವನ್ನು ಸಾಗಿಸಬಹುದು. ಘಂಟಾಕರ್ಣನ ಪೂಜೆಗೆ ಬೇಕಾಗುವ ಸರಂಜಾಮನ್ನು ಭಿಕ್ಷೆಯೆತ್ತಿ ಕೂಡಿಸುತ್ತಾರೆ. ಇನ್ನೂ ಹಲವು ಕಡೆ ಮಸಿಯಾದ ಒಂದು ಮಡಕೆಯನ್ನು ತೆಗೆದುಕೊಂಡು ಅದಕ್ಕೆ ಗೋಮಯವನ್ನು ಲೇಪಿಸಿ, ಕವಡೆಗಳನ್ನು ಅಂಟಿಸಿ ಶೃಂಗರಿಸಿ ಘಂಟಾಕರ್ಣನ ಹೆಸರಿನಲ್ಲಿ ಪೂಜಿಸುತ್ತಾರೆ.

ಇನ್ನೊಂದು ಹೇಳಿಕೆಯ ಪ್ರಕಾರ ಈತ ವಿಷ್ಣುಭಕ್ತನಾಗಿದ್ದ. ಒಮ್ಮೆ ಶಿವನೇ ಸರ್ವೋತ್ತಮನೆಂದು ವಿಷ್ಣುವಿನಿಂದಲೇ ಅರಿತು, ತಪಸ್ಸು ಮಾಡಿ ಶಿವನಿಗೆ ತನ್ನನ್ನೇ ಆರ್ಪಿಸಿಕೊಂಡ. ಆಗ ಈತನ ದೇಹವೇ ಶಿವಗುಡಿಯ ಹೊಸ್ತಿಲಾಯಿತು. ಕೈಕಾಲು ಬಾಗಿಲ ತೋಳಾದವು. ತಲೆ ಘಂಟೆಯಾಯಿತು. ಮೊದಲು ಈ ಘಂಟೆ ಬಾರಿಸಿ ಅನಂತರ ಪೂಜಿಸಿದರೆ ಶಿವ ಮೆಚ್ಚುವನೆಂಬ ನಂಬಿಕೆಯಿದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: