ವಿಷಯಕ್ಕೆ ಹೋಗು

ಕವಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shells of various species of cowries; all but one have their anterior ends pointing towards the top of the page in this image
Cowry (Cypraea chinensis) with fully extended mantle.
Dorsal view of two shells of Monetaria moneta

ಕವಡೆಗಳು ಉದರಪಾದಿಗಳಲ್ಲಿ (ಗ್ಯಾಸ್ಟ್ರೋಪೋಡ) ಒಂದಾದ ಸೈಪ್ರಿಡೀ ಕುಟುಂಬಕ್ಕೆ ಸೇರಿದ ಮನೋಹರವಾದ ಮೃದ್ವಂಗಿಗಳು. ಇವು ಉಷ್ಣವಲಯದ ಕಡಲವಾಸಿಗಳೆಂದು ಪ್ರಖ್ಯಾತಿಯಾಗಿದ್ದರೂ ಕೆಲವು ಅಪೂರ್ವ ಜಾತಿಯ ಕವಡೆಗಳು ಸಮಶೀತೋಷ್ಣವಲಯ ಹಾಗೂ ಶೀತವಲಯಗಳಲ್ಲೂ ಕಂಡುಬರುತ್ತವೆ. ಇವು ಶಾಂತಸಾಗರ ಮತ್ತು ಹಿಂದೂ ಮಹಾಸಾಗರಗಳಲ್ಲಿರುವ ಹವಳದ ದ್ವೀಪಗಳ ಆಳವಿಲ್ಲದ ನೀರಿನಲ್ಲಿ ವಿಪುಲವಾಗಿ ದೊರೆಯುತ್ತವೆ. ಆಸ್ಟ್ರೇಲಿಯದ ಗ್ರೇಟ್ ಬ್ಯಾರಿಯರ್ ರೀಫ್ ದೇಶ ಕವಡೆಗಳ ಅಚ್ಚುಮೆಚ್ಚಿನ ಬೀಡು. ಇವು ಸಾಮಾನ್ಯವಾಗಿ ಹವಳದ ದಿಣ್ಣೆಯಲ್ಲಿರುವ ಸ್ಥಳಗಳಲ್ಲಿ ಹೇರಳವಾಗಿಯೂ ಕಲ್ಲುಬಂಡೆಗಳುಳ್ಳ ಸಮುದ್ರ ತಳದಲ್ಲಿ ವಿರಳವಾಗಿಯೂ ವಾಸಿಸುತ್ತವೆ.

Umbilia hesitata, side view, anterior end towards the right
1742 drawing of shells of the money cowry, Cypraea moneta

ಇತಿವೃತ್ತ

[ಬದಲಾಯಿಸಿ]
  • ಕವಡೆಗಳಷ್ಟು ಲೋಕಪ್ರಸಿದ್ಧವಾದ ಮನಮೋಹಕ ಕಠಿಣ ಚಿಪ್ಪುಗಳು (ಷೆಲ್ಸ್‌) ಮತ್ತಾವುವೂ ಇಲ್ಲವೆಂದು ಹೇಳಬಹುದು. ತಮ್ಮ ವೈವಿಧ್ಯಮಯ ವರ್ಣವಿನ್ಯಾಸ, ರಮಣೀಯ ಸೌಂದರ್ಯ ಮತ್ತು ಮಿರುಗುವ ನಯವಾದ ಮೈರಚನೆಗಳಿಂದ ಕವಡೆಗಳ ಚಿಪ್ಪುಗಳು ರಸಿಕರಿಗೊಂದು ರಸದೌತಣವಾಗಿವೆ.
  • ೧ ಜೀವಂತ ಕವಡೆಪ್ರಾಣಿಗಳಂತೂ ತಮ್ಮ ಆಕರ್ಷಣೀಯ ವರ್ಣವೈಖರಿ, ರೂಪರೇಖೆಗಳು ಮತ್ತು ದಂತಪಂಕ್ತಿಗಳಿಂದ ಕಲಾಪ್ರಿಯರ ಕಣ್ಮನಗಳನ್ನು ತಣಿಸುತ್ತವೆ. ಆದ್ದರಿಂದಲೇ ಕವಡೆಗಳ ಚಿಪ್ಪುಗಳನ್ನು ಕೂಡಿಡುವ ಕಾರ್ಯ ಜನಪ್ರಿಯವಾಯಿತು. ಅವುಗಳ ಶೇಖರಣೆಯ ವಿನ್ಯಾಸ ನಾಣ್ಯ ಮತ್ತು ಸ್ಟಾಂಪುಗಳ ಸಂಗ್ರಹಣೆಗಳಷ್ಟೇ ಆಕರ್ಷಕವಾಗಿದೆ.
  • ೧೮-೧೯ನೆಯ ಶತಮಾನಗಳಲ್ಲಿ ಈ ಶೇಖರಣ ಕಾರ್ಯ ಇಂಗ್ಲೆಂಡಿನಲ್ಲಿ ವಿಪುಲವಾಗಿತ್ತಲ್ಲದೆ ಮೋಜುಗಾರರ ಹಾಗೂ ಸಿರಿವಂತರ ಹವ್ಯಾಸಗಳಲ್ಲಿ ಅಗ್ರಸ್ಥಾನ ಪಡೆದಿತ್ತು. ಹೊಸ ಹೊಸ ದ್ವೀಪಗಳ ಅನ್ವೇಷಣೆಯಾದಂತೆಲ್ಲ ಅಪೂರ್ವ ಹಾಗೂ ಆಕರ್ಷಣೀಯ ಕವಡೆಗಳು ಬೆಳಕಿಗೆ ಬಂದುವು. ಅವುಗಳಿಗೆ ಹೆಚ್ಚಿನ ಬೆಲೆಯೂ ದೊರೆಯುತ್ತಿತ್ತು.
  • ಆದರೆ ಕಾಲಕ್ರಮೇಣ ಈ ಲಾಭದಾಯಕ ವೃತ್ತಿಯಲ್ಲಿ ಬಹು ಜನರು ನಿರತರಾದ್ದರಿಂದ ಕವಡೆಗಳ ಮೌಲ್ಯ ಕುಗ್ಗುತ್ತ ಬಂದು ೧೯ನೆಯ ಶತಮಾನದ ಅಂತ್ಯದಲ್ಲಿ ಅವುಗಳ ಶೇಖರಣ ಕಾರ್ಯ ಹಿಂದೆ ಬೀಳುವಂತಾಯಿತು. ಆದಿಯಲ್ಲಿ ೩೦ ಪೌಂ. ಬೆಲೆ ಬಾಳುತ್ತಿದ್ದ ಆಸ್ಟ್ರೇಲಿಯದ ಅದ್ಭುತ ಕವಡೆ (ಅಂಬಿಲಿಯಾ ಹೆಸಿಟೇಟ) ಹೆಚ್ಚು ದೊರೆಯುವಂತಾದ ಮೇಲೆ ಅದರ ಬೆಲೆ ಇಳಿಮುಖವಾಗುತ್ತ ಬಂದು ಈಗ ಅದಕ್ಕೆ ೧ ಪೌಂಡಿಗಿಂತ ಕಡಿಮೆ ಹಣಕ್ಕೂ ಗಿರಾಕಿಗಳಿಲ್ಲದಂತಾಗಿದೆ.
  • ಆದರೆ ಕೌಮಾರ ಕವಡೆ (ಸೈಪ್ರಿಯ ವ್ಯಾಲೆಂಬಿಯ) ಈಗಲೂ ವಿರಳವಾದ್ದರಿಂದ ಅದು ತನ್ನ ಜನಪ್ರಿಯತೆಯನ್ನು ಇನ್ನೂ ಕಾಪಾಡಿಕೊಂಡು ಬಂದಿದೆ. ಸಾಮಾನ್ಯವಾಗಿ ಜೀವಂತ ಕವಡೆಗಳಲ್ಲಿ ವೈಭವದ ನೈಜಸ್ವರೂಪ ಅಷ್ಟಾಗಿ ಗೋಚರ ಆಗುವುದಿಲ್ಲ. ಇವುಗಳ ದೇಹ ರಚನೆಯೇ ಇದಕ್ಕೆ ಮುಖ್ಯ ಕಾರಣ.
  • ಊರ್ಧ್ವಮುಖವಾಗಿ ಉಬ್ಬಿದ ಕಠಿಣ ಚಿಪ್ಪು ಕವಡೆಯ ಮೆತು ದೇಹವನ್ನು ರಕ್ಷಿಸುತ್ತದೆ. ಈ ರಕ್ಷಾಕವಚಕ್ಕೆ ಅಂಟಿದಂತಿರುವ ಒಳಭಾಗದ ಆಚ್ಛಾದನ (ಮ್ಯಾಂಟಲ್) ಅಥವಾ ಕವಚ ನಯವಾದ ಶರೀರವನ್ನು ಆವರಿಸಿದೆ. ಆಚ್ಛಾದನದ ಬಹಿರ್ಜೀವ ಕಣಗಳು ಚಿಪ್ಪಿನ ಉತ್ಪಾದನೆಯನ್ನು ನಿರ್ವಹಿಸುತ್ತವೆ.
  • ಕವಡೆಯ ಮೂತಿಯ ಸನಿಹದಲ್ಲಿ ಎರಡು ಟೆಂಟಕಲ್ಸ್‌ಗಳು ಮತ್ತು ಒಂದು ನೀರ್ನಾಳವೂ (ಸೈಫನ್) ಇವೆ. ಈ ಟೆಂಟಕಲ್ಸ್‌ಗಳು ಸ್ಪರ್ಶೇಂದ್ರಿಯಗಳಂತೆ ಕಾರ್ಯ ನಿರ್ವಹಿಸಿದರೆ, ನೀರ್ನಾಳ ಜಲಾಭಿಸರಣೆಯಲ್ಲಿ ಪಾತ್ರ ವಹಿಸುತ್ತದೆ. ಆಚ್ಛಾದನದ ಅಂಚಿನಲ್ಲಿರುವ ಉಪಾಂಗಗಳೇ ಅಲ್ಲದೆ ವಿಶಾಲವಾಗಿ ಪ್ರಸರಿಸಬಲ್ಲ ಚಪ್ಪಟೆಯಾದ ಪಾದ ಕವಡೆಗಳ ಅಂಗರಚನೆಯ ವೈಶಿಷ್ಟ್ಯ.
  • ಇಬ್ಭಾಗವಾಗಿರುವ ಆಚ್ಛಾದನ ಕವಡೆಯ ಚಿಪ್ಪನ್ನು ಸಂಪೂರ್ಣವಾಗಿ ಮುಚ್ಚಬಲ್ಲುದು. ಆದ್ದರಿಂದಲೇ ಜೀವಂತ ಕವಡೆಯ ನಿಜಸ್ವರೂಪ ಸ್ಪಷ್ಟವಾಗಿ ಕಾಣುವುದಿಲ್ಲ. ಚಿಪ್ಪಿನ ಅಧೋಭಾಗದ ನೀಳದ್ವಾರದ ಮೂಲಕ ಹೊರಚಾಚಿದ ಇಡೀ ಶರೀರವನ್ನು ಒಳಕ್ಕೆಳೆದುಕೊಳ್ಳಬಹುದು.
  • ಆಚ್ಛಾದನದ ಎರಡೂ ಪಟಲಗಳು ಚಿಪ್ಪಿನ ಮೇಲ್ಮೈಯಲ್ಲಿ ಸಂಧಿಸುವ ಸ್ಥಳದಲ್ಲಿ ಒಂದು ನೀಳವಾದ ವರ್ಣರೇಖೆ ಇದೆ. ಇದು ಕೆಲವು ಕವಡೆಗಳಲ್ಲಿ ಚಿರಕಾಲ ಉಳಿಯಬಹುದು. ಕವಡೆ ಪ್ರಾಣಿ ಅತಿ ಪುಕ್ಕಲು ಜೀವಿ. ಅಕ್ಕಪಕ್ಕದಲ್ಲಿ ಅಲ್ಪ ಬದಲಾವಣೆಯಾದರೂ ತನ್ನ ಮೃದುವಾದ ಶರೀರವನ್ನು ಕೂಡಲೆ ರಕ್ಷಣಾಕವಚದೊಳಕ್ಕೆ ಎಳೆದುಕೊಳ್ಳತ್ತದೆ;
  • ಇರುಳಲ್ಲಿ ಚುರುಕಾಗಿದ್ದು ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಸಾಮನ್ಯವಾಗಿ ಹೆಡ್ರ ಮುಂತಾದ ಸಮುದ್ರವಾಸಿಗಳೇ ಕವಡೆಗಳ ಮುಖ್ಯ ಆಹಾರ. ಈ ಪ್ರಾಣಿಗಳ ಚಿಪ್ಪಿನ ಬೆಳೆವಣಿಗೆ ಇಡೀ ಮೃದ್ವಂಗಿಗಳಲ್ಲೇ ವಿಶಿಷ್ಟರೀತಿಯದೆನಿಸಿದೆ. ಎಳೆಯ ಕವಡೆ ಪ್ರೌಢ ಕವಡೆಯಂತಿರುವುದಿಲ್ಲ.
  • ಬೆಳೆವಣಿಗೆಯ ಅನೇಕ ಘಟ್ಟ ಗಳಲ್ಲಿ ವಿಶಿಷ್ಟ ಬದಲಾವಣೆಗಳು ಕಂಡುಬರುತ್ತವೆ. ಮರಿಕವಡೆಯ ರಕ್ಷಾಕವಚ ಒಂದು ನೀಳವಾದ ಅಕ್ಷದ ಸುತ್ತಲೂ ವಕ್ರವಾಗಿ ಸುರುಳಿ ಸುತ್ತಿರುತ್ತದೆ. ಚಿಪ್ಪಿನ ದ್ವಾರ ಗುಂಡಗೂ ಬಹು ಅಗಲವಾಗಿಯೂ ಇದೆ. ಕೇಂದ್ರದಲ್ಲಿನ ಅಕ್ಷವೂ ದ್ವಾರದ ಅಂಚಿನಲ್ಲಿರುವ ತುಟಿಯೂ ಸ್ಥೂಲವಾದಂತೆಲ್ಲ ಚಿಪ್ಪು ಒಳಮುಖನಾಗಿ ಬೆಳೆಯಲುಪಕ್ರಮಿಸುತ್ತದೆ.
  • ಆದ್ದರಿಂದ ಹಳ್ಳದಿಣ್ಣೆಗಳಿಂದ ಕೂಡಿದ್ದ ಚಿಪ್ಪಿನ ಹೊರಮೈ ನುಣುಪಾಗಿ ಮಾರ್ಪಾಟಾಗುವುದಲ್ಲದೆ ಗುಂಡಗಿದ್ದ ದ್ವಾರ ನೀಳವಾಗುತ್ತದೆ. ಕಾಲಕ್ರಮೇಣ ಚಿಪ್ಪಿನ ಸುರುಳಿಗಳು ಮಾಯವಾಗಿ, ವರ್ಣರಂಜಿತ ರೇಖೆಗಳನ್ನೂ ಚುಕ್ಕೆಗಳಿಂದ ಕೂಡಿದ ವಜ್ರಗಾರೆಯಂತೆ ಹೊಳೆಯುವ ಕಠಿಣ ಚಿಪ್ಪನ್ನೂ ಉಳ್ಳ ಆಕರ್ಷಣೀಯ ಪ್ರೌಢ ಕವಡೆ ಉದ್ಭವಿಸುತ್ತದೆ.
  • ಈ ಮಧ್ಯೆ ಚಿಪ್ಪಿನ ಅಂತಃಪಟಲಗಳು ಕಣ್ಮರೆಯಾಗುತ್ತಿದ್ದಂತೆ, ನೀಳದ್ವಾರದ ಇಕ್ಕೆಡೆಗಳೂ ದಂತಪಂಕ್ತಿಗಳು ಗೋಚರಿಸುತ್ತವೆ. ಕವಡೆಗಳು ತಮ್ಮ ಬೆಳೆವಣಿಗೆಯ ಕಾಲದಲ್ಲಿ ಸಮುದ್ರ ಶಿಲೆ ಮುಂತಾದ ಕಠಿಣ ಪದಾರ್ಥಗಳನ್ನು ಕರಗಿಸಿ, ಅತ್ಯಲ್ಪ ಕಾಲದಲ್ಲೇ ಸೂಕ್ತವಸ್ತುಗಳಿಂದ ಒಪ್ಪ ಮಾಡಿಕೊಳ್ಳಬಲ್ಲವೆಂದು ಪ್ರತೀತಿ.
  • ಇವುಗಳ ಈ ವಿಶಿಷ್ಟ ವರ್ತನೆಯಿಂದಲೇ ಪರಿಶುದ್ಧವಾದ ಅರಗು (ಷೆಲ್ಲಾಕ್) ಉತ್ಪತ್ತಿಯಾಗುತ್ತದೆಂದು ಹಲವರ ಅಭಿಮತ. ಪದಾರ್ಥಗಳನ್ನು ಶೇಖರಿಸುವ ಹವ್ಯಾಸಗಳಲ್ಲೆಲ್ಲ ಕವಡೆಗಳ ಶೇಖರಣೆ ಅಗ್ರಸ್ಥಾನ ಪಡೆಯಲು ಈ ಕೆಳಕಂಡ ಅಂಶಗಳೇ ಕಾರಣವೆನಿಸಿವೆ;
  1. ಖನಿಜಗಳಂತೆ ಇವು ಭಾರವಾಗಿಲ್ಲ. ಆದ್ದರಿಂದ ಇವನ್ನು ಸ್ಥಳದಿಂದ ಸ್ಥಳಕ್ಕೆ ಬಹು ಸುಲಭವಾಗಿ ಒಯ್ಯಬಹುದು.
  2. ಉಗ್ರಾಣಗಳಲ್ಲಿ ಶೇಖರಿಸಲು ಅಷ್ಟಾಗಿ ಮುನ್ನೆಚ್ಚೆರಿಕೆ ವಹಿಸಬೇಕಾದ್ದಿಲ್ಲ.
  3. ಕವಡೆಗಳು ಕ್ರಿಮಿಕೀಟಗಳಿಂದ ಒದಗಬಹುದಾದ ಬಾಧೆಗಳಿಂದ ವಿಮುಕ್ತವಾಗಿರುವುವಲ್ಲದೆ ಯಾವ ಶಿಲೀಂಧ್ರ ರೋಗಕ್ಕೂ (ಫಂಗಲ್ ಇನ್ಫೆಕ್ಷನ್) ತುತ್ತಾಗುವುದಿಲ್ಲ.
  4. ಕವಡೆಗಳ ಮೇಲೆ ಕೆತ್ತಿದ ನಕ್ಷೆ ಮುಂತಾದ ಇಚ್ಛಾಚಿತ್ರಗಳು ಪ್ರಕೃತಿಯ ಪ್ರಕೋಪಕ್ಕೆ ಮಣಿಯದೆ ಚಿರಕಾಲ ನಿಲ್ಲಬಲ್ಲವು.
  5. ವರ್ಗೀಕರಣ ಹಾಗೂ ವಿಕಾಸವಾದದ ಅಭ್ಯಾಸದಲ್ಲಿ ನಿರತರಾಗಿರುವ ಸಂಶೋಧಕರಿಗೆ ಕವಡೆಗಳ ಆಧ್ಯಯನ ಇಡೀ ಶಂಖಶಾಸ್ತ್ರದ (ಕಾಂಕಾಲಜಿ) ಯಥಾದರ್ಶನಕ್ಕೆ ನೆರವಾಗುತ್ತದೆ.
  6. ಮನರಂಜನೆಗೆ ಯೋಗ್ಯವಾದ ಆಕರ್ಷಣೀಯ ಕವಡೆಗಳನ್ನು ಸಂಗ್ರಹಿಸಲು ಅನುಸರಿಸುವ ಅತಿ ಖರ್ಚಿಲ್ಲದ ಸರಳ ವಿಧಾನ ಜನಪ್ರಿಯವಾಗಿದೆ. ಬಾಗ್ದಾದಿನ ಚರಿತ್ರಕಾರ ಮಸೂದಿ ಉಲ್ಲೇಖಿಸಿರುವಂತೆ ನಮ್ಮ ಪೂರ್ವಜರು ತೆಂಗಿನ ಗರಿಗಳನ್ನು ನೀರಿನ ಮೇಲೆ ನಿರ್ದಿಷ್ಟವಾದ ಜಾಗಗಳಲ್ಲಿ ಹರಡಿ, ಗರಿಗಳಿಗೆ ಅಂಟಿದ ಕವಡೆಗಳಲ್ಲಿ ಬೇಕಾದುದನ್ನು ಹೆಕ್ಕುತ್ತಿದ್ದರು. ಈಗಲೂ ಶೇಖರಣ ಕಾರ್ಯದಲ್ಲಿ ಕೇವಲ ಬುಟ್ಟಿ, ಚೀಲ, ಸಣ್ಣ ಪೆಟ್ಟಿಗೆ, ಸುತ್ತಿಗೆ, ಉಳಿ, ಜರಡಿ ಮುಂತಾದ ಅಲ್ಪ ಬೆಲೆ ಬಾಳುವ ಉಪಕರಣಗಳನ್ನು ಉಪಯೋಗಿಸುತ್ತಾರೆ.
  7. ಲೋಹ ನಾಣ್ಯಗಳ ಬಳಕೆಗೆ ಮುನ್ನ ಕವಡೆಗಳನ್ನೇ ನಾಣ್ಯರೂಪದಲ್ಲಿ ಬಳಸುತ್ತಿದ್ದರು. ೧೯ನೆಯ ಶತಮಾನದ ಮಧ್ಯಭಾಗದ ವರೆಗೂ ಅಮೆರಿಕ, ಏಷ್ಯ ಮತ್ತು ಆಫ್ರಿಕ ಖಂಡಗಳ ಅನೇಕ ಕಡೆಗಳಲ್ಲಿ ಪದಾರ್ಥಗಳನ್ನು ಕೊಳ್ಳುವುದಕ್ಕಾಗಿ ಕವಡೆಗಳನ್ನು ಉಪಯೋಗಿಸುತ್ತಿದ್ದರು.
  • ದೆಹಲಿ, ಕಾಶಿ ಮೊದಲಾದ ನಗರಗಳಲ್ಲೂ ಇವು ನಾಣ್ಯರೂಪದಲ್ಲಿ ಚಲಾವಣೆಯಲ್ಲಿದ್ದುವು. ವಿಶ್ವದ ನಾನಾ ಭಾಗಗಳಲ್ಲಿ ಬಿಡಿಬಿಡಿಯಾಗಿ ಬಳಸಿದರೂ ಆಫ್ರಿಕದ ಗುಡ್ಡಗಾಡು ಜನರು ಕವಡೆಗಳನ್ನು ೫, ೧೦, ೧೫, ೨೦, ೫೦ ಮತ್ತು ೧೦೦ರ ಸರಗಳ ರೂಪದಲ್ಲಿ ಬಳಸುತ್ತಿದ್ದರೆಂದು ತಿಳಿದುಬರುತ್ತದೆ.
  • ಅದರ ಮೌಲ್ಯ ದೇಶದಿಂದ ದೇಶಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜನಾಂಗದಿಂದ ಜನಾಂಗಕ್ಕೆ ಬೇರೆ ಬೇರೆಯಾಗಿತ್ತಲ್ಲದೆ ಅನೇಕ ಬಾರಿ ಅಪಮೌಲ್ಯದ ಅಪಕೀರ್ತಿಗೂ ತುತ್ತಾಗಿತ್ತೆಂದು ಕಂಡುಬರುತ್ತದೆ. ಉಗಾಂಡದಲ್ಲಿ ಕವಡೆ ನಾಣ್ಯರೂಪದಲ್ಲಿ ಚಲಾವಣೆಗೆ ಬಂದಾಗ, ಎರಡು ಕವಡೆಗಳಿಗೆ ಒಬ್ಬ ಗುಲಾಮ ದೊರೆಯುತ್ತಿದ್ದನಂತೆ!
  • ಆದರೆ ಒಂದು ಶತಮಾನದ ಅನಂತರ ಅವನ ಬೆಲೆ ೨,೦೦೦ ದಿಂದ ೩,೦೦೦ಕ್ಕೂ ಎರಡು ಶತಮಾನಗಳ ಅನಂತರ ೧೦,೦೦೦ ಕವಡೆಗಳಿಗೂ ಏರಿತ್ತೆಂದು ಪ್ರತೀತಿ. ಆಫ್ರಿಕದಲ್ಲಿ ಗುಲಾಮರನ್ನು ಕೊಳ್ಳಲು ಕವಡೆಗಳನ್ನು ಬಳಸುತ್ತಿದ್ದುದರಿಂದ ಕವಡೆ ವ್ಯಾಪಾರ ಬಹು ಲಾಭದಾಯಕವಾಗಿತ್ತು. ಮಾಲ್ಡೀವ್ ಮಫಿಯಾ ದ್ವೀಪಗಳು ಕವಡೆಗಳನ್ನು ಕಲೆ ಹಾಕುವ ಭಂಡಾರಗಳಾಗಿದ್ದುವು.
  • ಅರಬ್ಬೀಯರು, ಆಂಗ್ಲೇಯರು, ಫ್ರೆಂಚರು ಮತ್ತು ಡಚ್ಚರು ವಿಶ್ವದ ಅತಿ ದೊಡ್ಡ ಕವಡೆ ವಣಿಕರಾಗಿದ್ದರು. ಸಹಸ್ರಾರು ವರ್ಷಗಳ ಕಾಲ ನಾಣ್ಯರೂಪದಲ್ಲಿ ಮೆರೆದ ಕವಡೆಗಳನ್ನು ಬಂಗಾಳೀಯರು ದೀಪಾವಳಿಯಂದು ಧನಲಕ್ಷ್ಮಿಯ ಸಂಕೇತವಾಗಿ ಈಗಲೂ ಪುಜಿಸುತ್ತಾರೆ.
  • ಆಂಧ್ರದ ಏರುಕಾಲ ಗುಡ್ಡಗಾಡು ಪಂಗಡದವರಲ್ಲಿ ವರನ ಮನೆಯವರು ವಧುವಿಗೆ ಕವಡೆಗಳ ರೂಪದಲ್ಲಿ ತೆರಕೊಡುವ ಸಂಪ್ರದಾಯ ಇಂದಿಗೂ ಸಾಂಕೇತಿಕವಾಗಿ ಉಳಿದುಕೊಂಡಿರುವುದು ಕಂಡುಬರುತ್ತದೆ. ಒರಿಸ್ಸ ಮತ್ತು ಆಂಧ್ರ ಜನಾಂಗಗಳಲ್ಲಿ ಕವಡೆ ಮತ್ತು ನಿತ್ಯೋಪಯೋಗಿ ಸಾಮಾನುಗಳುಳ್ಳÀ್ಲ ಕವಡೆಪೆಟ್ಟಿಗೆಯನ್ನು ವಧುವಿಗೆ ಕೊಡುವುದು ವಾಡಿಕೆ.
  • ಬಂಗಾಳದ ಕೆಲವು ಬುಡಕಟ್ಟಿನವರು ಮಕ್ಕಳಿಗೆ ಕವಡೆ ಸಂಖ್ಯೆಯ ಹೆಸರನ್ನಿಟ್ಟರೆ ಶುಭಪ್ರದವೆಂದು ನಂಬಿ ಎಕ್ಕುಡಿ (ಒಂದು ಕವಡೆ), ದೊಕ್ಕುಡಿ (ಎರಡು ಕವಡೆ), ಪಾಂಚಕುಡಿ (ಐದು ಕವಡೆ), ಸಾತ್ಕುಡಿ (ಏಳು ಕವಡೆ) ಎಂದು ಮುಂತಾಗಿ ನಾಮಕರಣ ಮಾಡುವುದುಂಟು.
  • ಒರಿಸ್ಸದಲ್ಲಿ ಅರ್ಥ ಮಂತ್ರಿಯನ್ನು ಕವಡೆ ಸಚಿವರೆಂಬ ಅಡ್ಡ ಹೆಸರಿನಿಂದ ಕರೆಯುವುದು ವಾಡಿಕೆಯಲ್ಲಿತ್ತು. ಆಫ್ರಿಕದ ಆದಿ ಜನಾಂಗ ದೇಹಾಲಂಕಾರಕ್ಕಾಗಿ ಆಭರಣಗಳ ರೂಪದಲ್ಲಿ ಕವಡೆಗಳನ್ನು ಬಳಸುತ್ತಿತ್ತೆಂದು ಅನೇಕ ಪ್ರಾಚೀನ ಗ್ರಂಥಗಳು ಉಲ್ಲೇಖಿಸಿವೆ.
  • ಲಂಬಾಣಿ ಜನರು ಈಗಲೂ ಕವಡೆಗಳನ್ನು ಆಭರಣವಾಗಿ ಧರಿಸುವುದನ್ನು ನೋಡಬಹುದು. ಬಂಗಾರ ಕವಡೆಯನ್ನು (ಸೈಪ್ರಿಯ ಆರಾನ್ ಷಿಯ) ಕೊರಳಲ್ಲಿ ಧರಿಸಿದರೆ ಅಗ್ರನಾಯಕನ ಹೆಗ್ಗುರುತೆಂದು ಫಿಜಿ ಮತ್ತು ಟೊಂಗಾ ಬುಡಕಟ್ಟಿನವರ ಅಭಿಪ್ರಾಯ.
  • ಮಂತ್ರಿಸಲ್ಪಟ್ಟ ಕೆಲವು ಬಗೆಯ ಕವಡೆಗಳನ್ನು ತಾಯಿತದ ರೂಪದಲ್ಲಿ ಕೊರಳಲ್ಲಾಗಲಿ ನಡುವಿನಲ್ಲಾಗಲೀ ಕಟ್ಟಕೊಂಡರೆ ಬಾಲಾರಿಷ್ಟ, ಬಂಜೆತನ ಮುಂತಾದ ಅನಿಷ್ಟಗಳು ಕಣ್ಮರೆಯಾಗುವುವೆಂದು ಆದಿ ಜನಾಂಗದವರ ಅಭಿಮತ. ಶಕುನಗಳ ಫಲಾಫಲಗಳನ್ನು ನಿರ್ಧರಿಸಲು ಭಾರತೀಯ ಜ್ಯೋತಿಷಿಗಳು ಬಹುವಾಗಿ ಕವಡೆ ಶಾಸ್ತ್ರಕ್ಕೆ ಮಾರುಹೋಗುತ್ತಾರೆ.

ಕವಡೆಗಳ ಬಳಗ

[ಬದಲಾಯಿಸಿ]
  • ಸುಮಾರು ೧೬೫ಕ್ಕೂ ಮಿಗಿಲಾದ ಪ್ರಭೇದಗಳುಳ್ಳ ಕವಡೆಗಳ ಬಳಗವನ್ನು ಅವುಗಳ ಆಕೃತಿ ಮತ್ತು ವರ್ಣದೃಷ್ಟಿಯಿಂದ ವರ್ಗೀಕರಿಸುತ್ತಾರೆ. ಹಣಪ್ರಪಂಚದಲ್ಲಿ ನಾಣ್ಯ ಕವಡೆ (ಮಾನೆಟೇರಿಯ ಮೊನೇಟ), ಉಂಗುರ ಕವಡೆ (ಸೈಪ್ರಿಯ ಆನ್ಯುಲಸ್) ಮತ್ತು ಕಿತ್ತಳೆ ಕವಡೆ (ಸೈ. ಆಕಾರ್ಯ್‌ಷಿಯ) ಈ ಪ್ರಭೇದಗಳು ಚಲಾವಣೆಯಲ್ಲಿದ್ದುವು.
  • ಸುಮಾರು ಕಿತ್ತಳೆ ಕವಡೆ (ಸೈ. ಆಕಾರ್ಯ್‌ಷಿಯ) ಈ ಪ್ರಭೇದಗಳು ಚಲಾವಣೆಯಲ್ಲಿದ್ದುವು. ಸುಮಾರು ಒಂದಂಗುಲ ಉದ್ದದ ನಾಣ್ಯಕವಡೆಯನ್ನು ಪ್ರಪಂಚದ ಎಲ್ಲ ಭಾಗಗಳಲ್ಲೂ ನಾಣ್ಯರೂಪದಲ್ಲಿ ಬಳಸುತ್ತಿದ್ದರು. ಉಂಗುರ ಕವಡೆ ಗಾಜಿನಂತೆ ಹೊಳೆಯುತ್ತದೆ. ಇದು ನ್ಯೂಗಿನಿ ಮೊದಲಾದ ಕಡೆ ಹೆಚ್ಚಿಗೆ ಚಲಾವಣೆಯಲ್ಲಿತ್ತು.
  • ಕಿತ್ತಳೆ ಕವಡೆಗಳು ಅರುಣ ವರ್ಣದಿಂದ ಕೂಡಿರುವುದರಿಂದ ಇವನ್ನು ಬಂಗಾರದ ಕವಡೆ ಎಂದೂ ಕರೆಯುತ್ತಾರೆ. ಇವನ್ನು ಆಫ್ರಿಕದ ಗುಡ್ಡಗಾಡು ಜನರು ಬಳಸುತ್ತಿದ್ದರೆಂದು ತಿಳಿದುಬರುತ್ತದೆ. ಇಷ್ಟೇ ಅಲ್ಲದೆ ಮನರಂಜನೆಗೂ ಆಭರಣಗಳಿಗೂ ನಾನಾ ಬಗೆಯ ಕವಡೆಯನ್ನು ಉಪಯೋಗಿಸುತ್ತಿದ್ದರು.
  • ಈ ಕ್ಷೇತ್ರಗಳಲ್ಲಿ ಬಳಕೆಯಲ್ಲಿದ್ದ ಕವಡೆಗಳಲ್ಲಿ ಕೇಸರಿ ಕವಡೆ (ಸೈ. ಟೈಗ್ರಿಸ್), ಕುಬ್ಬ ಕವಡೆ (ಸೈ. ಡೆಸಿಪಿಯನ್ಸ್‌), ಅದ್ಭುತ ಕವಡೆ (ಅಂಬೀಲಿಯ ಹೆಸಿಟೇಟ), ಕೂರ್ಮ ಕವಡೆ (ಸೈ. ಟೆಸ್ಟೊಡಿನೇರಿಯ), ನಕ್ಷೆಕವಡೆ (ಸೈ. ಮ್ಯಾಪ್ಪಾ), ಅಕ್ಷಿ ಕವಡೆ (ಸೈ. ಆರ್ಗಸ್), ಬೂದು ಕವಡೆ (ಸೈ. ಇಸಾಬೆಲ), ವಕ್ರ ಕವಡೆ (ಸೈ. ಜಿಗ್ಬಾಗ್), ವಿದೂಷಕ ಕವಡೆ (ಸೈ. ಸ್ಕುದ್ರಾ)-ಇವು ಮುಖ್ಯವಾದವು.

<gallery widths="200px" heights="200px">

File:A print from 1845 shows cowry shells being used as money by an Arab trader.jpg| ಕವಡೆಗಳನ್ನು ಹಣವಾಗಿ ಬಳಸುತ್ತಿರುವ ಅರಬ್ ವರ್ತಕನ ೧೮೪೫ರ ಚಿತ್ರ.

File:Antiquities of the southern Indians, particularly of the Georgia tribes (1873) (14777393065).jpg| ದಕ್ಷಿಣ ಭಾರತೀಯರ ಮುಖ್ಯವಾಗಿ ಜಾರ್ಜಿಯಾ ಪಂಗಡಗಳ ಪ್ರಾಚೀನ ಭಂಡಾರ (1873)

File:Cowrie shells - sozhi roll of 3.jpg| ಮೂರರ ಗರವನ್ನು ಸೂಚಿಸುವ ದಾಳವಾಗಿ ಬಳಕೆಯಾದ ಕವಡೆಗಳು

</gallery>

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕವಡೆ&oldid=1172564" ಇಂದ ಪಡೆಯಲ್ಪಟ್ಟಿದೆ