ವಿಷಯಕ್ಕೆ ಹೋಗು

ಖಾಜ಼ಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಾಜ಼ಾರ್ ಖಾಗನೇಟ್, ೬೫೦-೮೫೦

ಖಾಜ಼ಾರ್ ಎನ್ನುವುದು ಒಂದು ಜನಾಂಗ. ಈ ಜನಾಂಗದವರ ಭಾಷೆ ಬಹುಶಃ ಟರ್ಕಿಕ್. ಕ್ರಿ.ಶ. 500-1000ದ ಕಾಲದಲ್ಲಿ ಪ್ರಾಮುಖ್ಯ ತಳೆದಿದ್ದರು.

ಎಲ್ಲೆಗಳು: ಇವರ ಸಾಮ್ರಾಜ್ಯದ ಎಲ್ಲೆಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಅಸಾಧ್ಯ. ಅವು ಸ್ಥಿರವಾಗೇನೂ ಇರಲಿಲ್ಲ. ಆದರೆ 6ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಸ್ಥೂಲವಾಗಿ ಆಜ಼ಾವ್ ಸಮುದ್ರ, ಕ್ಯಾಸ್ಪಿಯನ್ ಸಮುದ್ರ, ವಾಲ್ಗ ನದಿ, ಡಾನ್ ನದಿ-ಇವು ಇದರ ಗಡಿಗಳಾಗಿದ್ದುವು. ದಕ್ಷಿಣದಲ್ಲಿ ಇವರ ಸಾಮ್ರಾಜ್ಯ ಕಾಕಸಸ್ ಪರ್ವತಗಳವರೆಗೂ ಹಬ್ಬಿತ್ತು.

ಉಗಮ: ಖಾಜ಼ಾರ್ ಎಂಬ ಹೆಸರು ಮೊದಲ ಬಾರಿಗೆ 6ನೆಯ ಶತಮಾನದಲ್ಲಿ ಬರುತ್ತದೆ. ಆದರೆ ಈ ಜನ ಇದಕ್ಕೂ ಹಿಂದೆ ಬೇರೊಂದು ಹೆಸರಿನಲ್ಲಿ ಇದ್ದಿರಲೇಬೇಕೆಂಬುದಂತೂ ನಿಸ್ಸಂದೇಹ. ಅಕಾಟ್‍ಜ಼ಿರ್ ಎಂದು ಕರೆಯಲ್ಪಡುತ್ತಿದ್ದ ಹೂಣರೇ ಖಾಜ಼ಾರರ ಮೂಲಪುರುಷರೆಂಬುದು ಕೆಲವು ವಿದ್ವಾಂಸರ ಅಭಿಮತ. ಇದು ನಿಜವಾಗಿದ್ದ ಪಕ್ಷದಲ್ಲಿ ಖಾಜ಼ಾರರ ಇತಿಹಾಸವನ್ನು ಇನ್ನೊಂದು ಶತಮಾನ ಕಾಲ ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಅಕಾಟ್ಸಿರರು 5ನೆಯ ಶತಮಾನದ ನಡುಗಾಲದಲ್ಲಿದ್ದರೆಂದು ತಿಳಿದುಬರುತ್ತದೆ.[][] ಆದರೆ ಅಕಾಟ್ಸಿರರ ವಿಚಾರವೂ ಇತಿಹಾಸಕಾರರಿಗೆ ಹೆಚ್ಚಾಗಿ ಗೊತ್ತಿಲ್ಲ. ಆದ್ದರಿಂದ ಖಾಜ಼ಾರರ ಬಗ್ಗೆ ಹೊಸ ಸಂಗತಿಯೇನೂ ದೊರಕುವುದಿಲ್ಲ. ರ‍್ಯಾವೆನಾ ಕಾಸ್ಮಾಗ್ರಫಿ ಎಂಬ ಗ್ರಂಥ ಬರೆದ ಅನಾಮಿಕ ಚರಿತ್ರಕಾರನ ಪ್ರಕಾರ ಅಕಾಟ್ಸಿರರೂ ಖಾಜ಼ಾರರೂ ಒಂದೇ. ಆದರೆ ತುರ್ಕದಿಂದ ಸಾಬಿರ್ ಎಂದು ಕರೆಯಲ್ಪಡುತ್ತಿದ್ದ ಜನರೇ ಪರ್ಷಿಯನ್‌ನಲ್ಲಿ ಖಾಜ಼ಾರ್ ಎನಿಸಿಕೊಂಡರೆಂಬುದು ಅರಬ್ ಚರಿತ್ರಕಾರ ಅಲ್-ಮಸೂದಿಯ ಮತ. ಈ ಎರಡೂ ಮತಗಳನ್ನು ಸಮನ್ವಯಗೊಳಿಸಬೇಕಾದರೆ ಅಕಾಟ್ಸಿರರೂ ಸಾಬಿರರೂ ಒಂದೇ ಎನ್ನಬೇಕಾಗುತ್ತದೆ. ಆದರೆ 5ನೆಯ ಶತಮಾನದ ಬಿಜ಼ಾಂಟಿನ್ ಚರಿತ್ರಕಾರ ಪ್ರಿಸ್ಕಸನ ಅಭಿಪ್ರಾಯ ಇದಕ್ಕೆ ವಿರುದ್ಧವಾಗಿದೆ. ಖಾಜ಼ಾರರೂ ಸಾಬಿರ್‌ಗಳೂ ಭಿನ್ನ ಜನರೆಂದು ಆತ ಹೇಳುತ್ತಾನೆ.

ಇತಿಹಾಸ

[ಬದಲಾಯಿಸಿ]

6ನೆಯ ಶತಮಾನದಲ್ಲಿದ್ದ ಮಿಟಲೀನಿನ ಜ಼ಕಾರಿಯನ ಸಿರಿಯಾಕ್ ಉದಂತಗಳಲ್ಲಿ (The Syriac Chronicle) ಖಾಜ಼ಾರರ ಬಗ್ಗೆ ಪ್ರಥಮವಾಗಿ ಖಚಿತವಾದ ಉಲ್ಲೇಖವಿದೆ.[] ಈ ಕಾಲದ ಪರ್ಷಿಯನ್ ದಾಖಲೆಗಳಲ್ಲಿ ಖಾಜ಼ಾರರ ಉಲ್ಲೇಖವಿಲ್ಲವಾದರೂ 1ನೆಯ ಖುಸ್ರೋ (531-579) ಕಾಲದಲ್ಲೇ ಪರ್ಷಿಯನರು ಖಾಜ಼ಾರರೊಂದಿಗೆ ಸಂಪರ್ಕ ಹೊಂದಿದ್ದರೆಂದು ಹೇಳಬಹುದು. ಈ ಕಾಲದಲ್ಲಿ ಅವರು ಪಶ್ಚಿಮ ಟರ್ಕಿಕ್ ಸಾಮ್ರಾಜ್ಯಕ್ಕೆ ಸೇರಿದ್ದಿರಬಹುದು. ಖಾಜ಼ಾರರು ಪಶ್ಚಿಮದ ರಾಜಕೀಯವನ್ನು ಪ್ರವೇಶಿಸಿದ್ದು ಹಿರಾಕ್ಲಿಯಸ್ ಚಕ್ರವರ್ತಿಯ (610-641) ಕಾಲದಲ್ಲಿ. ಹಿರಾಕ್ಲಿಯಸ್ ಷರ್ಷಿಯನ್ನರ ವಿರುದ್ಧ ನಡೆಸಿದ ಯುದ್ಧದಲ್ಲಿ ಖಾಜ಼ಾರರ ಸಹಾಯಕ ದಳದ ನೆರವು ಪಡೆದ. ಇದರಿಂದ ಹಿರಾಕ್ಲಿಯಸನಿಗೆ ಜಯ ಲಭಿಸಿತು. ಚಕ್ರವರ್ತಿಯ ಪುತ್ರಿಯರಲ್ಲೊಬ್ಬಳನ್ನು ಖಾಜ಼ಾರರ ಮುಖಂಡ ಮದುವೆಯಾದ.[]

7ನೆಯ ಶತಮಾನದ ಮಧ್ಯಭಾಗದಲ್ಲಿ ಅರಬರು ಟ್ರಾನ್ಸ್‌ಕಾಕೇಷಿಯನ್ ಪ್ರದೇಶವನ್ನು ಗೆದ್ದರು. 661ರಲ್ಲಿ ಅವರ ಸೇನೆ ಉತ್ತರ ಕಾಕಸಸ್‌ಗೆ ನುಗ್ಗಿ ಡೆರ್ಬೆಂಟ್ ನಗರವನ್ನು ಖಾಜ಼ಾರರಿಂದ ವಶಪಡಿಸಿಕೊಂಡಿತು. ಇದರಿಂದಾಗಿ ಆಕ್ರಮಣಕಾರಿ ಅರಬರಿಗೂ ಖಾಜ಼ಾರರಿಗೂ ದೀರ್ಘಕಾಲದ ಯುದ್ಧ ಪ್ರಾರಂಭವಾಯಿತು. ಖಾಜ಼ಾರರು ಪಶ್ಚಿಮದ ಕಡೆಯಲ್ಲಿ ಹರಡಿಕೊಂಡರು. 681ರ ವೇಳೆಗೆ ಖಾಜ಼ಾರರು ಪ್ರಬಲರಾದರು. 685ರ ವೇಳೆಗೆ ಕಾಕಸಸಿನ ದಕ್ಷಿಣದ ಕಡೆ ದಾಳಿ ನಡೆಸಲಾರಂಭಿಸಿದರು. ಜಾರ್ಜಿಯ, ಆರ್ಮೀನಿಯ, ಕ್ಯಾಸ್ಟಿಯನ್ ಆಲ್ಟೇನಿಯ ಅವರ ಆಕ್ರಮಣಕ್ಕೆ ಒಳಗಾದುವು. 717ರಲ್ಲಿ ಅಜ಼ರ್‌ಬೈಜಾನನ್ನು ಕೂಡ ಆಕ್ರಮಿಸಿಕೊಂಡರು. 721-722ರಲ್ಲಿ ಅವರು ತಮ್ಮ ಆಕ್ರಮಣ ಮುಂದುವರಿಸಿದರು. ಈ ವಿಜಯಗಳಿಂದಾಗಿ ಖಾಜ಼ಾರರು ಅರಬರ ನೆರೆಗೆ ಬಂದಂತಾಯಿತು. 722ರಲ್ಲಿ ಅರಬರಿಗೂ ಖಾಜ಼ಾರರಿಗೂ ಘರ್ಷಣೆ ಸಂಭವಿಸಿತು. ಮೊದಲ ವಿಜಯ ಖಾಜ಼ಾರರದು. ಆದರೆ ಅನಂತರ ಅರಬರು ಪ್ರತಿದಾಳಿ ನಡೆಸಿ, ಡೇರಿಯಲ್ ಕಣಿವೆ ಉತ್ತರದಲ್ಲಿದ್ದ ಖಾಜ಼ಾರ್‌ರ ನಗರವಾದ ಬಲಾಂಜಾರನ್ನು ಹಿಡಿದುಕೊಂಡರು.[] ವಾಲ್ಗ ನದಿಯ ಮೇಲಿದ್ದ ಖಾಜ಼ಾರ್ ರಾಜಧಾನಿ ಆಟಿಲ್‌ಗೂ ಅಪಾಯವಿತ್ತು (729). ಆದರೆ 730ರಲ್ಲಿ ಖಾಜ಼ಾರರು ಮತ್ತೆ ಉಗ್ರವಾಗಿ ಮುನ್ನುಗ್ಗಿದರು. ಅವರ ವಿಜಯೀ ಸೇನೆ ಟೈಗ್ರಿಸ್ ನದಿಯ ದಂಡೆಯ ಮೇಲಿನ ಅರಬ್ ನಗರವಾದ ಮೊಸೂಲ್‌ವರೆಗೂ ಹೋಯಿತು. ಅನಂತರ ಅರಬರು ಖಾಜ಼ಾರರನ್ನು ಕಾಕಸಸಿನ ಉತ್ತರಕ್ಕೆ ಹಿಂತಳ್ಳಿದರಾದರೂ ಅರಬರ ವಿಸ್ತರಣ ಪ್ರಯತ್ನಕ್ಕೆ ಕಾಕಸಸ್ಸೇ ಉತ್ತರದ ಗಡಿಯಾಯಿತು.

ಈ ಕಾಲದಲ್ಲೆಲ್ಲ ಖಾಜ಼ಾರರು ಬಿಜ಼ಂಟೀನ್ ಚಕ್ರವರ್ತಿಗಳೊಡನೆ ಸಂಪರ್ಕ ಹೊಂದಿದ್ದರು. 2ನೆಯ ಜಸ್ಟಿನಿಯನ್ ದೇಶಭ್ರಷ್ಟನಾಗಿದ್ದಾಗ ಅನೇಕ ವರ್ಷಗಳ ಕಾಲ ಖಾಜ಼ಾರರೊಂದಿಗಿದ್ದ.[] 704ರಲ್ಲಿ ಖಾಜ಼ಾರರ ಮುಖಂಡನ ಮಗಳನ್ನು ಲಗ್ನವಾದ. ಆದರೆ ಅವರ ಸ್ನೇಹ ಹೆಚ್ಚು ಕಾಲ ಉಳಿಯಲಿಲ್ಲ. ಖೆರ್ಸಾನ್ ಪಟ್ಟಣದಲ್ಲಿ ಜನ ದಂಗೆಯೆದ್ದಾಗ ಅವರಿಗೆ ಖಾಜ಼ಾರರು ಸಹಾಯ ನೀಡಿ ಜಸ್ಟಿನಿಯನನ ಪತನಕ್ಕೆ (711) ಮುಖ್ಯ ಕಾರಣರಾದರು. 732ರಲ್ಲಿ ಮತ್ತೊಬ್ಬ ಬಿಜ಼ಾಂಟಿನ್ ಚಕ್ರವರ್ತಿ 3ನೆಯ ಲೀಯೋ (685-741) ತನ್ನ ಮಗನಿಗೆ ಖಾಜ಼ಾರ್ ರಾಜಕುಮಾರಿಯೊಬ್ಬಳನ್ನು ಮದುವೆ ಮಾಡಿದ. ಆತನೇ ಮುಂದೆ 5ನೆಯ ಕಾನ್‍ಸ್ಟಂಟೀನ್ ಆದ. ಆ ಕಾಲದ ಬಿಜ಼ಾಂಟಿನ್ ಆಸ್ಥಾನದಲ್ಲಿ ಖಾಜ಼ಾರರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಕಾನ್‍ಸ್ಟಂಟೀನನ ಮಗ 4ನೆಯ ಲೀಯೋಗೆ ಖಾಜ಼ಾರ್ ಎಂಬುದು ಉಪನಾಮವಾಗಿತ್ತು.[]

ಒಟ್ಟಿನಲ್ಲಿ 8ನೆಯ ಶತಮಾನದ ಉತ್ತರಾರ್ಧದಲ್ಲಿ ಖಾಜ಼ಾರ್ ಚಕ್ರಾಧಿಪತ್ಯ ವೈಭವದ ಶಿಖರ ಮುಟ್ಟಿತ್ತು. ಖಾಜ಼ಾರರ ನೇರ ಪ್ರಭಾವ ಕಪ್ಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರಗಳ ಉತ್ತರ ತೀರದಿಂದ ಯೂರಲ್ಸ್ ಮತ್ತು ವಾಲ್ಗವರೆಗೂ ಹಬ್ಬಿತ್ತು. ಅಲಾನಿ ಮತ್ತು ಇತರ ಜನಾಂಗಗಳೂ, ಹಂಗರಿಯನರೂ, ಗಾಥರೂ, ಕ್ರಿಮಿಯನ್ ಪರ್ಯಾಯದ್ವೀಪದ ಗ್ರೀಕ್ ವಸಾಹತುಗಳ ಜನರೂ ಖಾಜ಼ಾರರನ್ನು ತಮ್ಮ ಮಹಾಪ್ರಭುಗಳೆಂದು ಒಪ್ಪಿಕೊಂಡಿದ್ದರು.

8ನೆಯ ಶತಮಾನದ ಉತ್ತರಾರ್ಧದಲ್ಲಿ ಖಾಜ಼ಾರರಿಗೂ ಅರಬರಿಗೂ ನಡುವೆ ಯುದ್ಧಗಳು ಮತ್ತೆ ಆರಂಭವಾದವು. 786 ಮತ್ತು 787ರಲ್ಲಿ ಖಾಜ಼ಾರರು ಕ್ರಿಮಿಯದ ಗಾಥರ ಮೇಲೆ ದಂಡೆತ್ತಿ ಹೋದರು. ಈ ಸಮಯದಲ್ಲೇ ಜಾರ್ಜಿಯದ ಮೇಲೂ ಖಾಜ಼ಾರರು ಆಕ್ರಮಣ ನಡೆಸಿದರು.

9ನೆಯ ಶತಮಾನದಲ್ಲಿ ರಷ್ಯನರು ಖಾಜ಼ಾರರ ಪ್ರಬಲ ವಿರೋಧಿಗಳಾದರು. 965ರಲ್ಲಿ ರಷ್ಯನರ ಸೇನೆ ಖಾಜ಼ಾರರನ್ನು ಮಣಿಸಿತು. 1016ರಲ್ಲಿ ಬಿಜ಼ಾಂಟಿನ್ ಚಕ್ರವರ್ತಿ 2ನೆಯ ಬ್ಯಾಸಲ್ ರಷ್ಯನರೊಡನೆ ಸೇರಿಕೊಂಡು ಖಾಜ಼ಾರರ ಮೇಲೆ ದಂಡೆತ್ತಿ ಹೋಗಿ ಇವರ ಕ್ರಿಮಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡ.[][] 1030ರ ವೇಳೆಗೆ ಕಪ್ಪು ಸಮುದ್ರದ ಉತ್ತರ ಕರಾವಳಿ ಪ್ರದೇಶದಲ್ಲಿ ಖಾಜ಼ಾರರ ರಾಜಕೀಯ ಪ್ರಭಾವ ಕೊನೆಗೊಂಡಿತು. ಅವರ ಪ್ರದೇಶಗಳೆಲ್ಲ ಬಿಜ಼ಾಂಟಿಯಂಗೆ ಸೇರಿಹೋದುವು. ಆದರೂ 12ನೆಯ ಶತಮಾನದವರೆಗೂ ಖಾಜ಼ಾರರ ಹೆಸರಿನ ಉಲ್ಲೇಖಗಳು ಕಂಡುಬರುತ್ತವೆ.

ನಾಗರಿಕತೆ

[ಬದಲಾಯಿಸಿ]

ಖಾಜ಼ಾರರ ನಾಗರಿಕತೆ ಸಂಕೀರ್ಣವಾದ್ದು. ಕ್ರೈಸ್ತಮತ, ಇಸ್ಲಾಂ, ಯೆಹೂದ್ಯಮತ ಮುಂತಾದವುಗಳ ಪ್ರಭಾವ ಖಾಜ಼ಾರರ ಮೇಲೆ ಬಿದ್ದಿತ್ತು. 740ರ ಸುಮಾರಿನಲ್ಲಿ ಖಾಜ಼ಾರ್ ದೊರೆಯೂ ಅವನ ಪರಿವಾರದ ಬಹು ಮಂದಿಯೂ ಯೆಹೂದ್ಯ ಮತಕ್ಕೆ ಪರಿವರ್ತನೆ ಹೊಂದಿದರೆಂದು ಹೇಳಲಾಗಿದೆ.[೧೦][೧೧]

ಖಾಜ಼ಾರರ ನಾಗರಿಕತೆ ಉನ್ನತಮಟ್ಟದ್ದಾಗಿತ್ತು. ಬಿಜ಼ಾಂಟಿನ್ ಮತ್ತು ಅರಬ್ ಮೂಲಗಳಿಂದ ಇದರ ಬಗ್ಗೆ ಅನೇಕ ವಿವರಗಳು ದೊರಕುತ್ತವೆ. ಆದರೆ ಖಾಜ಼ಾರ್ ಭಾಷೆಯ ಒಂದು ಸಾಲೂ ಲಭ್ಯವಿಲ್ಲ. ಖಾಜ಼ಾರರ ಶಾಸನಗಳು ಯಾವುವೂ ಇದುವರೆಗೂ ದೊರಕಿಲ್ಲ. ಗ್ರೀಕ್ ಗ್ರಂಥಗಳಲ್ಲಿ ಅಲ್ಲಲ್ಲಿ ಬರುವ ಪದಗಳನ್ನು-ಇವುಗಳಲ್ಲಿ ಹಲವು ವ್ಯಕ್ತಿನಾಮಗಳು-ನೋಡಿದಾಗ ಈ ಜನ ಟರ್ಕಿಕ್ ಭಾಷೆಯೊಂದನ್ನು ಆಡುತ್ತಿದ್ದರೆಂಬುದು ಗೊತ್ತಾಗುತ್ತದೆ.

ಮೂಲತಃ ಇವರ ಆಡಳಿತ ಟರ್ಕಿಕ್ ಮಾದರಿಯದಾದರೂ ಮಧ್ಯ ಯುರೇಷ್ಯದ ಇತರ ಟರ್ಕಿಕ್ ಸಾಮ್ರಾಜ್ಯಗಳಂತೆ ಇದು ಇರಲಿಲ್ಲ. ಇವರ ಸಾಮ್ರಾಜ್ಯ ವ್ಯವಸ್ಥೆ ಭಿನ್ನರೀತಿಯದು. ಇದರ ದೊರೆತನ ಅರೆ-ಧಾರ್ಮಿಕ ಸ್ವರೂಪದ್ದು. ದೊರೆಗೆ ವಾಸ್ತವವಾಗಿ ಅಧಿಕಾರವೇನೂ ಇರಲಿಲ್ಲ. ಟರ್ಕಿಕ್-ಮಂಗೋಲ್ ಅಲೆಮಾರಿಗಳ ಚಕ್ರಾಧಿಪತ್ಯಗಳಂತೆ ಇದು ಅತಿಯಾಗಿ ಆಕ್ರಮಣಶೀಲವಾಗಿರಲಿಲ್ಲ. ಈ ಜನಕ್ಕೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ವ್ಯಾಪಾರ ಮುಖ್ಯವಾಗಿತ್ತು. ರಷ್ಯನರು ಮಧ್ಯ ರಷ್ಯದ ಮುಖ್ಯ ವ್ಯಾಪಾರ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದರಿಂದಲೇ ಖಾಜ಼ಾರ್ ಸಾಮ್ರಾಜ್ಯದ ಪತನವಾಯಿತೆಂದು ಊಹಿಸಬಹುದಾಗಿದೆ.

ಡಾನ್ ನದಿಯ ಕೆಳದಂಡೆಯ ಮೇಲಣ ಸಾರ್ಕೆಲ್ ನೆಲೆಯಲ್ಲಿ 9ನೆಯ ಶತಮಾನದಲ್ಲಿ ಗ್ರೀಕ್ ಶಿಲ್ಪಿಗಳ ನೆರವಿನಿಂದ ಕಟ್ಟಲಾದ ಖಾಜ಼ಾರ್ ಕೋಟೆಯ ಅವಶೇಷಗಳ ಉತ್ಖನನಗಳಿಂದ ಖಾಜ಼ಾರ್ ನಾಗರಿಕತೆಯ ಮಿಶ್ರಲಕ್ಷಣಗಳು ವ್ಯಕ್ತಪಟ್ಟಿದ್ದುವು. ವಾಲ್ಗ-ಡಾನ್ ಕಾಲುವೆಯ ನಿರ್ಮಾಣದಿಂದಾಗಿ ಈ ನೆಲೆ ನೀರಿನಲ್ಲಿ ಮುಚ್ಚಿಹೋಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Blockley 1992, p. 73.
  2. Atwood 2012, p. 48.
  3. https://www.missionislam.com/nwo/tribe.htm
  4. Kaegi 2003, pp. 143–145.
  5. Brook 2010, pp. 126–127.
  6. Ostrogorsky 1956, pp. 124–126
  7. Bury 2015, p. 478.
  8. Holmes 2003.
  9. Mango 2002, p. 180.
  10. Korobkin 1998, p. 352, n.8.
  11. Dunlop 1954, p. 170.


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಾಜ಼ಾರ್&oldid=1243738" ಇಂದ ಪಡೆಯಲ್ಪಟ್ಟಿದೆ